ಆಕಸ್ಮಿಕದಿಂದ ಅತ್ಯುನ್ನತಿಗೆ
ಡಾ. ರಾಧಾಕೃಷ್ಣ ಬೆಳ್ಳೂರು
' ಅದೊಂದು ಆಕಸ್ಮಿಕ. ನಾನು ದಿನಾ ಭತ್ತದ ಗದ್ದೆಯ ಬದಿಯ ದಾರಿಯಲ್ಲಿ ನಡೆದು ಹೋಗುತ್ತಿದ್ದಾಗ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಹತ್ತಾರು ಹೆಂಗಸರು ಒಟ್ಟಾಗಿ ಹಾಡುತ್ತಿದ್ದ ತುಳು ಹಾಡುಗಳನ್ನು ಕೇಳುತ್ತಿದ್ದೆ. ಕೆಲಸದೊಡನೆ ಆಯಾಸವನ್ನು ಮರೆಯುವುದಕ್ಕಾಗಿ ಅವರು ಹಾಡುತ್ತಿದ್ದ ಹಾಡು ಅಸ್ಪಷ್ಟವಾಗಿತ್ತು. ಏನೋ ಆ ಹಾಡುಗಳಲ್ಲಿ ನನಗೆ ವಿಶೇಷ ಕುತೂಹಲ ಉಂಟಾಗಿ ಅವರಿಂದ ಪುನಃ ಆ ಹಾಡನ್ನು ಹಾಡಿಸಿದೆ. ಅದು ಪುರಾಣ ಪುರುಷರನ್ನು ಹಾಡಿ ಹೊಗಳುವ ತುಳು ಪಾಡ್ದನವಾಗಿತ್ತು. ಹಾಡಿನಲ್ಲಿ ಬರುವ ಕೆಲವು ಶಬ್ದಗಳಿಗೆ ಅರ್ಥವನ್ನು ಅವರಿಂದಲೇ ಕೇಳಿ ತಿಳಿದುಕೊಂಡಿದ್ದೆ. ಹೀಗೆ, ಇಲ್ಲಿಂದ ಮುಂದೊತ್ತಿ ಸಾಗಿದ ನನ್ನ ಸಂಶೋಧನ ಕಾಯಕವು ಪ್ರಾಚೀನ ತುಳು ಮಹಾಕಾವ್ಯ 'ಶ್ರೀ ಭಾಗವತೋ'ದ ತನಕ ನನ್ನನ್ನು ತಲುಪಿಸಿದೆ.'
ವೆಂಕಟರಾಜ ಪುಣಿಂಚತ್ತಾಯರು ಸಂಶೋಧನೆಗಾಗಿ ಸಂಶೋಧಕರಾದವರಲ್ಲ. ಆಕಸ್ಮಿಕವಾಗಿ ಸತ್ಯದ ಅನಾವರಣಕ್ಕೆ ಧುಮುಕಿದವರು. ಅವರನ್ನು ಸಂಶೋಧಕರಾಗಿಸಿದ್ದು ಹೊರಗಿನ ಒತ್ತಡವಲ್ಲ, ಒಳಗಿನ ಒತ್ತಡ.
ಒಂದು ಭಾಷೆಗೆ ಸ್ವತಂತ್ರ ಲಿಪಿಗಿಂತ ಸ್ವತಂತ್ರ ಸಾಹಿತ್ಯದ ಅಗತ್ಯ ಹೆಚ್ಚು. ಪುರಾತನ ಲಿಖಿತ ಪಠ್ಯ ಭಾಷೆಯ ಚರಿತ್ರೆಯನ್ನು ಅಧಿಕೃತಗೊಳಿಸುತ್ತದೆ. ಅದು ಮಹಾಕಾವ್ಯವಾಗಿದ್ದರಂತೂ ಭಾಷಿಕ ಅಭಿವ್ಯಕ್ತಿ ಸಾಮಥ್ರ್ಯದ ಸಾಧ್ಯಾಸಾಧ್ಯತೆಗಳೆಲ್ಲ ಅದರ ಮೂಲಕ ವ್ಯಕ್ತವಾಗುತ್ತವೆ. ತುಳುವಿನ ಮಟ್ಟಿಗೆ ಪುಣಿಂಚತ್ತಾಯರ ಹೆಸರು ಶಾಶ್ವತವಾಗಿ ನಿಲ್ಲುವುದು ಇದೇ ಕಾರಣಕ್ಕೆ. ಅವರು ಮೂರು ತುಳುಕಾವ್ಯಗಳನ್ನೂ, ಒಂದು ಗದ್ಯ ಗ್ರಂಥವನ್ನೂ, ಒಂದು ವೈದ್ಯಗ್ರಂಥವನ್ನೂ ಪತ್ತೆಹಚ್ಚಿ ಸಂಪಾದಿಸುವ ಮೂಲಕ ತುಳುವಿನ ಸಾಹಿತ್ಯ ಚರಿತ್ರೆಯನ್ನು ಹದಿನೈದನೆ ಶತಮಾನಕ್ಕಿಂತ ಹಿಂದೆ ಸಾಗಿಸಿದ್ದಾರೆ.
ವೆಂಕಟರಾಜ ಪುಣಿಂಚತ್ತಾಯರು ಹುಟ್ಟಿದ್ದು 1936 ಅಕ್ಟೋಬರ್ 10ರಂದು, ಪುಂಡೂರಿನಲ್ಲಿ. ತಂದೆ ದಾಮೋದರ ಪುಣಿಂಚತ್ತಾಯ. ತಾಯಿ ಸರಸ್ವತಿ. ಮೂಲತಃ ವಿಶಾಲವೂ ಗೌರವಾನ್ವಿತವೂ ಆಗಿದ್ದ ಪುಂಡೂರು ಮನೆತನದಲ್ಲಿ ಈಗಾಗಲೇ ಲಕ್ಷ್ಮೀನಾರಾಯಣ ಪುಣಿಂಚತ್ತಾಯರು ಕವಿಯಾಗಿ ಕಿರ್ತಿ ಪಡೆದಿದ್ದರು. ಸ್ವಾತಂತ್ರ್ಯ ಹೋರಾಟದ ಕಿಚ್ಚೆಬ್ಬಿಸುವ ಸಶಕ್ತ ಕವನ ಸಂಕಲನಗಳಾದ 'ತಿಲಕ ಕಾವ್ಯಾಂಜಲಿ', 'ರಾಷ್ಟ್ರಗೀತಾ ರತ್ನಾಕರ', 'ಬಾಲಗಂಗಾಧರಸ್ತವ', 'ಹರಿಜನ ಸಂಧಾನ' ಎಂಬಿವು ಪ್ರಕಟವಾಗಿದ್ದುವು. ದಾಮೋದರ ಪುಣಿಂಚತ್ತಾಯರೂ ಸ್ವತಃ ಕವಿಗಳಾಗಿದ್ದು ಅನೇಕ ಹಾಡುಗಳನ್ನೂ ಸುವ್ವಾಲೆಗಳನ್ನೂ ರಚಿಸಿದ್ದರು. ಇದೇ ಕುಟುಂಬದಲ್ಲಿ ಹುಟ್ಟಿ ಗತಿಸಿಹೋಗಿದ್ದ ರಾಮಚಂದ್ರ ಪುಣಿಂಚತ್ತಾಯರೂ 'ಪೃಥು ವಿಜಯ' ಎಂಬ ನಾಟಕವನ್ನೂ 'ವಿಜಿತಾಶ್ವ ವಿಜಯ' ಎಂಬ ಯಕ್ಷಗಾನ ಪ್ರಸಂಗವನ್ನೂ ಬರೆದಿದ್ದರು. ಇವರಲ್ಲದೆ, ಜ್ಯೋತಿಷಿ ಶಿವಣ್ಣ ಪುಣಿಂಚಿತ್ತಾಯರೂ, ಚೆಂಡೆ ವಾದಕ ಈಶ್ವರ ಪುಣಿಂಚತ್ತಾಯರೂ, ವಾದ್ಯಶಿಲ್ಪಿ ಸುಬ್ರಾಯ ಪುಣಿಂಚತ್ತಾಯರೂ, ಮನೆತನದ ಪ್ರತಿಭಾವಿಕಾಸಕ್ಕೆ ವಿಶಿಷ್ಟ ಅಡಿಪಾಯ ಹಾಕಿದ್ದರು. ಇವರೆಲ್ಲರ ನಡುವೆ ಪುಂಡೂರಿನಲ್ಲಿ ಹುಟ್ಟಿದ ಕೂಸು ವೆಂಕಟರಾಜ.
ಅಗಲ್ಪಾಡಿಯ ಶ್ರೀ ಅನ್ನಪೂರ್ಣೇಶ್ವರೀ ಸಂಸ್ಕೃತ ಪಾಠಶಾಲೆಯಲ್ಲಿ ಆರಂಭದ ಶಿಕ್ಷಣ ಪಡೆದು, ನೀರ್ಚಾಲಿನ ಮಹಾಜನ ಸಂಸ್ಕೃತ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿದರು. ಸಂಸ್ಕೃತ ಸಾಹಿತ್ಯ ಶಿರೋಮಣಿ ಮತ್ತು ಕನ್ನಡ ವಿದ್ವಾನ್ ಪದವಿಗಳನ್ನು ಗಳಿಸಿದರು. ಅಧ್ಯಾಪನ ವೃತ್ತಿ ಕೈಗೊಂಡಮೇಲೆ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಎಂ.ಎ. ಪದವಿ ಪಡೆದರು. ಮದರಾಸಿನ ಆಯುರಾರೋಗ್ಯ ಐಶ್ವರ್ಯ ಆಶ್ರಮದಿಂದ 'ಪಂಡಿತರತ್ನಂ' ಬಿರುದೂ ಲಭಿಸಿತು. ಖಾಸಗಿಯಾಗಿ ಮಲಯಾಳಂ ಕಲಿಕೆಯೂ ನಡೆಯಿತು. ತಂದೆಯವರಿಂದ ಬಳುವಳಿಯಾಗಿ ಬಂದ ಆಯುರ್ವೇದ, ನಾಟೀ ವೈದ್ಯದಲ್ಲೂ ಅಧಿಕೃತ ಜ್ಞಾನ ಸಂಪಾದಿಸಿಕೊಂಡರು. 1957-58ರ ಅವಧಿಯಲ್ಲಿ ಮೈಸೂರಿನ ಯುವಜನ ಮಾಸಪತ್ರಿಕೆಯಾದ 'ವಿವೇಕ'ದಲ್ಲಿ ಉಪಸಂಪಾದಕ ಹುದ್ದೆಯಲ್ಲಿದ್ದರು. ಅನಂತರ ಕೊಡಗಿನ ಪಾರಾಣೆ ಹೈಸ್ಕೂಲಿನಲ್ಲಿ ಒಂದು ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿ 1961ರಲ್ಲಿ ಎಡನೀರಿನ ಸ್ವಾಮಿಜೀಸ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಸೇರ್ಪಡೆಗೊಂಡರು. ನಿವೃತ್ತಿಯ ತನಕವೂ ಆ ಸಂಸ್ಥೆಗೇ ಅವರ ಸೇವೆ ಮೀಸಲಾಗಿತ್ತು.
ಪುಂಡೂರಿನ ಇತಿಹಾಸವನ್ನು ಕೆದಕುತ್ತ ಹೋದರೆ 1513ರಲ್ಲಿ ಗಂಡುಸಂತಾನ ನಶಿಸಿಹೋದ ಪುಣಿಂಚತ್ತಾಯ ಮನೆತನಕ್ಕೆ ಬಾಯಾರಿನ ಸಮೀಪದ ಮಾಳ್ಳದಿಂದ ನಾರಾಯಣ ಪುಣಿಂಚತ್ತಾಯರನ್ನು ದತ್ತಕ್ಕೆ ತೆಗೆದುಕೊಂಡ ದಾಖಲೆ ಸಿಗುತ್ತದೆ. ಅಲ್ಲಿಂದ ಸರಿಯಾಗಿ ಎಂಟನೇ ತಲೆಮಾರಿನಲ್ಲಿ ಹುಟ್ಟಿದ ವೆಂಕಟರಾಜರಿಗೆ ಶ್ರೀಮಂತ ಮನೆತನದ ಮತ್ತು ಶ್ರೀಮಂತ ಸಂಸ್ಕೃತಿಯ ಹಿನ್ನೆಲೆಯಿದೆ. ಜ್ಯೋತಿಷ, ಯಕ್ಷಗಾನ, ವೈದ್ಯ, ಸಮಾಜ ಸುಧಾರಣೆ, ಸ್ವಾತಂತ್ರ್ಯ ಹೋರಾಟ, ಶಾನುಭೋಗತನ -ಹೀಗೆ ಹಲವಾರು ಕ್ಷೇತ್ರಗಳಲ್ಲಿ ಹಬ್ಬಿದ ಪ್ರತಿಭೆಗಳ ಮೊತ್ತ ಇವರ ಅಭಿರುಚಿಯ ಎಲ್ಲ ನೆಲೆಗಳ ಮೇಲೂ ಗಾಢವಾಗಿ ಪ್ರಭಾವ ಬೀರಿದ್ದು ಆಶ್ಚರ್ಯವಲ್ಲ. ಚಿಕ್ಕಂದಿನಲ್ಲಿ ಮನೆಯ ಅಂಗಳದಲ್ಲಿ ಗೋಪಾಲಕೃಷ್ಣ ಪುಣಿಂಚತ್ತಾಯರು ನಡೆಸುತ್ತಿದ್ದ ಯಕ್ಷಗಾನ ತರಬೇತಿ, ದಾಮೋದರ ಪುಣಿಂಚತ್ತಾಯರು ರಚಿಸುತ್ತಿದ್ದ ಸುವ್ವಾಲೆ ಹಾಡುಗಳು, ಮನೆಗೆ ಆಗಾಗ ಬಂದು ಹೋಗುತ್ತಿದ್ದ ಪಂಡಿತ ವರ್ಗ, ಜಗಲಿಯಿಂದ ಹೊರಗೆ ಕಾಲಿಟ್ಟರೆ ಸಿಗುವ ಮುಗ್ಧ ಗ್ರಾಮೀಣ ಬದುಕು -ಹೀಗೆ ಒಂದೊಂದೂ ಪುಣಿಂಚತ್ತಾಯರ ಬೆಳವಣಿಗೆಯನ್ನು ರೂಪಿಸಿದುವು.
ಪಂಚ ದ್ರಾವಿಡ ಭಾಷೆಗಳ ಪೈಕಿ, ತುಳುವನ್ನುಳಿದು ಮಿಕ್ಕ ನಾಲ್ಕಕ್ಕೂ ಲಿಪಿಯಿದೆ. ಮೂಲ ದಕ್ಷಿಣ ದ್ರಾವಿಡದಿಂದ ಮೊದಲಿಗೆ ಬೇರ್ಪಟ್ಟ ಭಾಷೆಗಳಲ್ಲಿ ತುಳುವೂ ಒಂದು. ಸಮೃದ್ಧ ಭಾಷೆಯಾದ ತುಳುವಿಗೆ ಲಿಪಿ ಇದ್ದಿರಲೇಬೇಕು. ಲಿಪಿ ಬರಬರುತ್ತ ಬಿದ್ದು ಹೋಗಿರಬಹುದಾದ ಸಂಭವವಿದೆ. ಆದರೆ ಪ್ರಸ್ತುತ ತುಳುವಿಗೆ ತನ್ನದೇ ಆದ ಲಿಪಿ ಇತ್ತೆಂದು ತರ್ಕಿಸಲು ಯಾವುದೇ ಪ್ರಬಲ ಆಧಾರವೂ ಇಲ್ಲ -ಹೀಗೆ ಖಿನ್ನರಾಗಿದ್ದ ಪುಣಿಂಚತ್ತಾಯರು ಒಮ್ಮೆ ಮಧೂರಿನ ಶಿವನಾರಾಯಣ ಶರಳಾಯರ ಮನೆಗೆ ಹೋಗಿ ಅವರೊಂದಿಗೆ ಏನೋ ಮಾತನಾಡುತ್ತಿದ್ದಂತೆಯೇ ಮಾತಿನ ನಡುವೆ ಪೂರ್ವಜರ ಕುರಿತಾದ ವಿವರಗಳು ಬಂದುವು. ಶರಳಾಯರು ಏನೋ ನೆನಪಾದವರಂತೆ ಒಳಹೋಗಿ ಒಂದು ತಡವಾಲೆಯ ಗ್ರಂಥವನ್ನು ತಂದು, ಅದನ್ನು ಓದುವಂತೆ ಪುಣಿಂಚತ್ತಾಯರಿಗೆ ಹೇಳಿದರು. ಅದು ಅವರ ಖಿನ್ನತೆಯನ್ನು ಹೋಗಲಾಡಿಸುವ ದಿವ್ಯೌಷಧವಾಗಿತ್ತು. ಅಲ್ಲಲ್ಲಿ ಮಾಸಿಹೋಗಿದ್ದ ಹಸ್ತಪ್ರತಿಯನ್ನು ಕುತೂಹಲದಿಂದ ಓದಿದ ಪುಣಿಂಚತ್ತಾಯರು ಮೂಕ ವಿಸ್ಮಿತರಾದರು. ಅದೇ ತುಳು ಮಹಾಕಾವ್ಯ 'ಶ್ರೀ ಭಾಗವತೋ'. ಕವಿ 'ವಿಷ್ಣುತುಂಗ'. ಆತನ ಕಾಲ ಸು. 16ನೇ ಶತಮಾನ.
ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಸಂಸ್ಕೃತ ಲೈಬ್ರರಿಯಲ್ಲಿ ಯಾವ ಭಾಷೆ, ಯಾವ ಲಿಪಿ ಎಂದು ತಿಳಿಯದೆ ಅನಾಥವಾಗಿ ಬಿದ್ದಿದ್ದ ಗ್ರಂಥವನ್ನು ಹೆಕ್ಕಿ ತೆಗೆದು ಓದಿನೋಡಿದ ಪುಣಿಂಚತ್ತಾಯರು ಅದು ತುಳು ಕಾವ್ಯ 'ಕಾವೇರಿ' ಎಂದು ಪತ್ತೆಹಚ್ಚಿದರು. ಇದು ಕಾವೇರಿ ನದಿಯ ಉಗಮ ಹಾಗೂ ಮಹತ್ವಕ್ಕೆ ಸಂಬಂಧಿಸಿದ ಕಥೆಯನ್ನು ಹೊತ್ತಿದ್ದು ಛಂದಸ್ಸಿನ ದೃಷ್ಟಿಯಲ್ಲಿ 'ಭಾಗವತೋ'ವನ್ನೇ ಹೋಲುತ್ತದೆ. ಇದರ ವಿವರಾಣಾತ್ಮಕ ಶೈಲಿ ಹಾಗೂ ವರ್ಣನೆಗಳು ಗಮನ ಸೆಳೆಯುತ್ತವೆ. ಆರಂಭದ ಮತ್ತು ಕೊನೆಯ ಕೆಲವು ಸ್ಕಂದಗಳು ನಾಶವಾಗಿರುವುದರಿಂದ ಕರ್ತೃವಿನ ಹೆಸರಾಗಲಿ, ಕಾಲ ದೇಶಾದಿಗಳಾಗಲಿ ತಿಳಿದು ಬರುವುದಿಲ್ಲ.
'ದೇವೀ ಮಹಾತ್ಮೆ' ಸುಮಾರು 16ನೇ ಶತಮಾನಕ್ಕೆ ಸೇರಿದ ತುಳು ಗದ್ಯಗ್ರಂಥ. ಇದನ್ನು ತೆಂಕಿಲ್ಲಾಯ ವಂಶಕ್ಕೆ ಸೇರಿದ ಕವಿಯೊಬ್ಬ ಬರೆದಿರಬೇಕೆಂದು ಶಂಕಿಸಲಾಗಿದೆ. ಕವಿಯ ಹೆಸರು ನಿರ್ದಿಷ್ಟವಾಗಿ ತಿಳಿದು ಬಂದಿಲ್ಲ. ಈತ ಕಾಸರಗೋಡಿನ ಬಾರಿಕ್ಕಾಡಿನಲ್ಲಿ ಜೀವಿಸಿದ್ದಿರಬಹುದು ಎಂದು ಸಂಪಾದಕರು ಊಹಿಸಿದ್ದಾರೆ.
ಇವರು ಪುತ್ತೂರು ಪರಿಸರದಿಂದ ಇನ್ನೊಂದು ತುಳು ಮಹಾಕಾವ್ಯವನ್ನು ಸಂಗ್ರಹಿಸಿ ಸಂಪಾದಿಸಿದ್ದಾರೆ. ಅದರ ಹೆಸರು 'ಶ್ರೀಮನ್ಮಹಾಭಾರತೊ'. ಕವಿ 'ಅರುಣಾಬ್ಜ'. ಆತನ ಕಾಲ 15ನೇ ಶತಮಾನ ಇರಬೇಕೆಂದು ಊಹಿಸಲಾಗಿದೆ. ಇದರೊಂದಿಗೇ ದೊರೆತ ತ್ರುಟಿತ ಕರ್ಣಪರ್ವ ಕೇರಳ ತುಳು ಅಕಾಡೆಮಿಯಿಂದ ಪ್ರಕಟವಾಗಿದೆ.
ಹಲವಾರು ವಿಧದ ನಾಟಿ ವೈದ್ಯಪದ್ಧತಿಯ ಬಗ್ಗೆ ಔಚಿತ್ಯಪೂರ್ಣ ಚರ್ಚೆಯನ್ನೊಳಗೊಂಡ ವೈದ್ಯ ವ್ಯಾಖ್ಯಾನ ಗ್ರಂಥವೊಂದನ್ನು ಪುಣಿಂಚತ್ತಾಯರು ಸಂಪಾದಿಸಿ ಸಿದ್ಧಪಡಿಸಿದ್ದಾರೆ.
ಗುಡ್ಡಗಾಡು ಜನರ ಬದುಕಿನ ಅಭ್ಯಾಸ, ನಾಗಾರಾಧನೆ, ಬಾಕುಡ ಜನಾಂಗದ ಅಧ್ಯಯನ, ನೆಟ್ಟಣಿಗೆ ಗ್ರಾಮದ ಜಾನಪದೀಯ ಅಧ್ಯಯನ -ಹೀಗೆ ಅವರ ಸಂಶೋಧನೆಯ ಹರಹು ವಿಸ್ತಾರವಾಗಿದೆ. ಕೇರಳದ ಚಿತ್ರಕಲೆಯ ಬಗ್ಗೆ ಬರೆದ ಪರಿಚಯಾತ್ಮಕ ಪುಸ್ತಕವೊಂದು ಲಲಿತಕಲಾ ಅಕಾಡೆಮಿಯಿಂದ ಪ್ರಕಟಿತವಾಗಿದೆ. 'ಜಾನಪದ ಕಾಸಾರ' ಎಂಬ ಮೌಲಿಕ ಗ್ರಂಥವನ್ನೂ ಇವರು ಸಂಪಾದಿಸಿದ್ದಾರೆ.
ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದ ತುಳು ನಿಘಂಟು ಯೋಜನೆಗೆ ಕಾಸರಗೋಡು ಪರಿಸರದಿಂದ ಸಾವಿರಾರು ಪದಗಳನ್ನು ಸಂಗ್ರಹಿಸಿಕೊಟ್ಟ ಪುಣಿಂಚತ್ತಾಯರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದರು. ಮುಂದೆ ಕೇರಳ ತುಳು ಅಕಾಡೆಮಿಯ ಸ್ಥಾಪಕ ಅಧ್ಯಕ್ಷರಾದರು.
1970 ಹಾಗೂ 1985ರಲ್ಲಿ ಕೇರಳ ಕನ್ನಡ ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ, ಕೇರಳ ಸ್ಟೇಟ್ ಆರ್ಕಿವ್ಸ್ ಡಿಪಾರ್ಟ್ಮೆಂಟಿನ ರೀಜನಲ್ ರೆಕಾರ್ಡ್ಸ್ ಸರ್ವೇ ಕಮಿಟಿಯ ಸದಸ್ಯರಾಗಿ, ಉಡುಪಿಯ ತುಳು ನಿಘಂಟು ಯೋಜನೆಯ ಸಂಪಾದಕೀಯ ಸಲಹಾ ಸಮಿತಿಯ ಸದಸ್ಯರಾಗಿ, ಉಡುಪಿಯ ಆಯುರ್ವೇದ ಕಾಲೇಜಿನ ಜನಪದ ವೈದ್ಯ ಸಂಶೋಧನ ಕೇಂದ್ರದ ಗೌರವ ಸದಸ್ಯರಾಗಿ, ಎಡನೀರಿನ ಕನ್ನಡ ಲೇಖಕರ ಸಂಘದ ಸ್ಥಾಪಕರಾಗಿ, ಸುರಭಾರತೀ ಸಭೆಯ ಅಧ್ಯಕ್ಷರಾಗಿ, ಕಾಸರಗೋಡು ತಾಲೂಕು ಕನ್ನಡ ಲೇಖಕರ ಸಂಘದ ಕಾರ್ಯದರ್ಶಿಯಾಗಿ, ನೂರಾರು ವಿಶೇಷಾಂಕಗಳ ಸಂಪಾದಕರಾಗಿ, ಸಲಹೆಗಾರರಾಗಿ ದುಡಿದ ಜೀವ ಪುಣಿಂಚತ್ತಾಯರದು. ಆದರೂ ಅವರು ದಣಿಯಲಿಲ್ಲ; ಪ್ರಶಸ್ತಿ ಸನ್ಮಾನಗಳಿಗಾಗಿ ಹಸಿಯಲಿಲ್ಲ.
ವೆಂಕಟರಾಜ ಪುಣಿಂಚತ್ತಾಯರು ಒಬ್ಬ ಉತ್ತಮ ರಂಗನಟ. ಪಾತ್ರದೊಂದಿಗೆ ಸಂಪೂರ್ಣ ತಾದಾತ್ಮ್ಯ ಪಡೆದು ನಟಿಸುವ ಕಲೆ ಅವರಿಗೆ ಪಾರಂಪರಿಕವಾಗಿ ಕರಗತವಾಗಿದೆ. ಆದ್ದರಿಂದ ನಾಟಕ ರಚನೆಯಲ್ಲೂ ಶ್ರೀಯುತರಿಗೆ ವಿಶೇಷ ಹಿಡಿತವಿದೆ. ಇವರ ಹೆಚ್ಚಿನ ನಾಟಕಗಳೂ ರಂಗ ಪ್ರಯೋಗದಲ್ಲಿ ಗೆದ್ದು ಬಂದಿವೆ. ಲಕ್ಷ್ಮೀನಾರಾಯಣ ಪುಣಿಂಚತ್ತಾಯರು ಅದ್ಭುತ ವಾಕ್ ಶಕ್ತಿಯ ಶ್ರೇಷ್ಠ ಭಾಷಣಕಾರರಾಗಿದ್ದರಂತೆ. ದಾಮೋದರ ಪುಣಿಂಚತ್ತಾಯರು ಉತ್ತಮ ಮಾತುಗಾರರಾಗಿದ್ದರೂ ಭಾಷಣಕಾರರಾಗಿರಲಿಲ್ಲವೆಂದು ತಿಳಿದು ಬರುತ್ತದೆ. ಆದರೆ ವೆಂಕಟರಾಜರು ಭಾಷಣವನ್ನೊಂದು ಕಲೆಯಾಗಿ ಸ್ವೀಕರಿಸಿಕೊಂಡು ಪರಂಪರೆಯ ವಾಕ್ಶಕ್ತಿಗೆ ವ್ಯಕ್ತಿತ್ವದ ಸಂಸ್ಕಾರಕೊಟ್ಟ ನಿರುದ್ವಿಗ್ನ, ಸರಳ ವಾಗ್ಮಿ. ಅವರದ್ದು ಹಿತಮಿತವಾದ ಮಾತುಗಾರಿಕೆ. ಸಂದರ್ಭಕ್ಕೆ ಸರಿಹೊಂದುವ ಒಂದೆರಡು ವಿಚಾರಗಳನ್ನಷ್ಟೇ ಆಯ್ದುಕೊಂಡು ಸೊಗಸಾಗಿ ನಿರೂಪಿಸುತ್ತಾ ಪಾಂಡಿತ್ಯಪೂರ್ಣವಾಗಿ ಮಾತನಾಡುವ ಇವರ ಭಾಷಣ ಒಪ್ಪ ಓರಣಗಳಿಂದ ಕೇಳುಗರನ್ನು ಹಿಡಿದಿಡುತ್ತದೆ.
ಯಕ್ಷಗಾನ ಕ್ಷೇತ್ರದಲ್ಲಿ ಪಳಗಿದವರು ಎನಿಸದೆ ಹೋದರೂ 'ಪ್ರತಿಭಾವಂತ ಅರ್ಥಧಾರಿ' ಎನ್ನಲು ಅಡ್ಡಿಯಿಲ್ಲದ ಪುಣಿಂಚತ್ತಾಯರು ಉದಾತ್ತ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಬಲ್ಲರು. ಚಿಕ್ಕಂದಿನಲ್ಲಿ 'ಯಕ್ಷಗಾನ ನಾಟಕ'ದ ಗೋಪಾಲಕೃಷ್ಣ ಪುಣಿಂಚತ್ತಾಯರೊಂದಿಗೆ ನಿಕಟ ಸಂಬಂಧವಿರಿಸಿಕೊಂಡಿದ್ದರಿಂದ ಪ್ರಯೋಗಶೀಲತೆ ಇವರಲ್ಲಿ ಸಹಜವಾಗಿಯೇ ಬೆಳೆದು ಬಂದಿದೆ. ಅನಗತ್ಯ ವಿಸ್ತಾರಕ್ಕೆ ಹೋಗದೆ, ಹೇಳಬೇಕಾದದ್ದು ಅಚ್ಚುಕಟ್ಟಾಗಿ ಹೇಳಿ ಮುಗಿಸುವ ಪ್ರಾಮಾಣಿಕತೆ ಇರುವುದರಿಂದ ಇವರು ಕುಳಿತ ಕೂಟಗಳು ಯಶಸ್ವಿಯಾಗುತ್ತವೆ.
ಕವನಗಳ ಭಾವಪೂರ್ಣ ತುಂಬುಕಂಠದ ವಾಚನ ಶೈಲಿ ಪುಣಿಂಚತ್ತಾಯರು ರೂಢಿಸಿಕೊಂಡ ಇನ್ನೊಂದು ಕಲೆ. ತುಳು, ಕನ್ನಡ, ಮಲಯಾಳ ಹಾಗೂ ಸಂಸ್ಕೃತ ಕಾವ್ಯಗಳನ್ನು ಸೊಗಸಾಗಿ, ನಿರರ್ಗಳವಾಗಿ ಓದುವ ಇವರು ಉತ್ತಮ ನಿರೀಕ್ಷಕ -ಪರೀಕ್ಷಕ ಮತ್ತು ವಾಚಕ. ಅಧ್ಯಾಪಕರಾಗಿ ಪಾಠ ಹೇಳುವಾಗಲೂ ಅಷ್ಟೆ. ತರಗತಿ ಎಷ್ಟೇ ದೊಡ್ಡದಿರಲಿ, ಎಷ್ಟೇ ಚಿಕ್ಕದಿರಲಿ, ಅದರ ಗಾತ್ರಕ್ಕೆ ಅವರ ಕಂಠ ಹೊಂದಿಕೊಳ್ಳುತ್ತದೆ. ಕೊಠಡಿಯ ಬಾಗಿಲು ದಾಟಿ ಅವರ ಸ್ವರ ಹರಿಯುವುದಿಲ್ಲ. ವಿದ್ಯಾರ್ಥಿಗಳ ಗಮನ ಅತ್ತಿತ್ತ ಹರಿದಾಡಲು ಎಡೆಗೊಡುವುದಿಲ್ಲ. ಹಾಗೆಂದು ಅವರ ವಿದ್ಯಾರ್ಥಿಗಳೇ ಹೇಳುತ್ತಾರೆ. ಕಾಲೇಜು ಯೂನಿಯನ್ ಕಾರ್ಯಕ್ರಮದಲ್ಲೊಮ್ಮೆ ಯಾರು ಮಾತನಾಡಿದರೂ ಬೊಬ್ಬೆ ಹೊಡೆಯುವ ಹುಡುಗರನ್ನು ಉಸಿರೆತ್ತದಂತೆ ಕುಳ್ಳಿರಿಸಿ ಪುಣಿಂಚತ್ತಾಯರು ಮಾಡಿದ ಭಾಷಣ ಅದ್ವಿತೀಯವಾಗಿತ್ತು. ಅವರ ಸಭಾನಿಯಂತ್ರಣ ಶಕ್ತಿಯನ್ನು ಕಂಡು ಎಲ್ಲರೂ ಬೆರಗಾಗಿದ್ದರು.
ಇನ್ನು ಕೆಲವೇ ವರ್ಷಗಳಲ್ಲಿ ಜನಪದದಿಂದ ತಾನೇ ತಾನಾಗಿ ಜಾರಿ ಹೋಗಲಿರುವ, ಈಗಾಗಲೇ ಅರ್ಧಕ್ಕರ್ಧ ನಷ್ಟವಾಗಿ ಹೋದ ತುಳು ಪಾಡ್ದನಗಳನ್ನು ದೊಡ್ಡ ಪ್ರಮಾಣದಲ್ಲಿ ಸಂಗ್ರಹಿಸಿರುವುದು ಪುಣಿಂಚತ್ತಾಯರ ಮಹತ್ವದ ಸಾಧನೆ. ಸಾಮಾನ್ಯವಾಗಿ ಹರಿಜನ ಹೆಂಗಸರು ಪಾಡ್ದನ ಹೇಳುವುದರಲ್ಲಿ ಚತುರರು. ಅವರ ಮನೆಗಳಿಗೆ ಭೇಟಿ ಕೊಟ್ಟು ಸಂಗ್ರಹ ಕಾರ್ಯದಲ್ಲಿ ತೊಡಗಿದ ಪುಣಿಂಚತ್ತಾಯರು ನೂರಾರು ಹೊಸ ಪದಗಳನ್ನೂ ಕಲೆಹಾಕಿದ್ದಾರೆ. ಒಗಟು, ಗಾದೆ, ಜನಪದ ಕತೆಗಳನ್ನೂ ಸಂಗ್ರಹಿಸಿದ್ದಾರೆ. ಮಾಣಿಕೊ, ದೈನಿ ಮುಂತಾದ ಹೆಂಗಸರು ಇವರಿಗೆ ಅಪೂರ್ವ ಮಾಹಿತಿಗಳನ್ನು ಕೊಟ್ಟಿದ್ದಾರೆ. ನೂರ ಹದಿನೈದರ ವೃದ್ಧ ಪಕ್ರಿ ಜನಪದ ರಾಮಾಯಣವನ್ನು ಕಂಠಪಾಠ ಒಪ್ಪಿಸಿದ್ದಾರೆ. ಹಲವು ಅಪರೂಪದ ತುಳು ಶಬ್ದಗಳನ್ನೂ ಅನೇಕ ಗಿಡಮೂಲಿಕೆಗಳ ವಿವರಗಳನ್ನೂ ಪುಣಿಂಚತ್ತಾಯರಿಗೆ ಧಾರೆ ಎರೆದ ಪಕ್ರಿ ಕಾಂತಕ ಎಂಬ ವಾದ್ಯ ನುಡಿಸುತ್ತಿದ್ದರಂತೆ. ತುಳು ನಿಘಂಟು ಯೋಜನೆಗೆ ಇವರು ಮಾಡಿದ ಉಪಕಾರ ಅದ್ವಿತೀಯವಾದದ್ದು.
ಇವರ ಸಂಗ್ರಹದಲ್ಲಿ ಅನೇಕ ಹಳೆಯ ಪುಸ್ತಕಗಳಿವೆ. ಪಂಚಾಂಗಗಳಿವೆ, ಶಿಲ್ಪ ಹಾಗೂ ವೈದ್ಯಕೀಯಕ್ಕೆ ಸಂಬಂಧಿಸಿದ ಗ್ರಂಥಗಳಿವೆ, ತಾಡವಾಲೆಯ ಹಸ್ತಪ್ರತಿಗಳಿವೆ, ಯಕ್ಷಗಾನ ಗ್ರಂಥಗಳಿವೆ. 19ನೇ ಶತಮಾನದಲ್ಲಿ ಮುದ್ರಣಗೊಂಡ ಅನೇಕ ಆಯುರ್ವೇದ, ಜ್ಯೋತಿಶ್ಶಾಸ್ತ್ರ ಗ್ರಂಥಗಳಿವೆ. ಯುದ್ಧದಲ್ಲಿ ಪರಾಕ್ರಮ ತೋರಿದ ಸಾಹಸಿಗಳಿಗೆ ಬ್ರಿಟಿಷರು ನೀಡುತ್ತಿದ್ದ ಉಬ್ಬುಶಿಲ್ಪದ ಸುಂದರವಾದ ಜಾಗಟೆಯಂತಹ ಪದಕವೂ, ವಾದ ಪ್ರತಿವಾದ ರೂಪದಲ್ಲಿ ಮಹಾಭಾರತದ ಕಥೆಯನ್ನು ನಿರೂಪಿಸುವ ಅಪೂರ್ವ ಪುಸ್ತಕದ ಪ್ರತಿಯೂ ಈ ಸಂಗ್ರಹದ ಇನ್ನೆರಡು ಅಮೂಲ್ಯ ವಸ್ತುಗಳು.
ಅಗಲವಾದ ಹಣೆ, ಗಂಭೀರವಾದ ಸಾತ್ವಿಕ ಮುಖಭಾವ, ತೆಳ್ಳಗಿನ ಮೀಸೆ, ದಪ್ಪ ಫ್ರೇಮಿನ ಕನ್ನಡಕ, ಮುಗುಳು ನಗು ಮಿಂಚುವ ತುಟಿಗಳು, ಎತ್ತರದ ನಿಲುವು, ಬಿಳಿ ಜುಬ್ಬಾ, ಬಿಳಿ ಷರಟು, ಬಿಳಿ ಮುಂಡು, ದಿನಕ್ಕೆ ಒಂದೆರಡು ಬಾರಿ ಕವಳ ಜಗಿಯುತ್ತಿದ್ದರೂ ಅದೊಂದು ಅಭ್ಯಾಸವಾಗಿ ಅಂಟಿಲ್ಲ. ಕನ್ನಡದ ಕಾರ್ಯಕ್ರಮಗಳಿಗೆಲ್ಲ ತಪ್ಪದೆ ಹೋಗುತ್ತಾರೆ. ಹಿರಿಯರಿರಲಿ, ಕಿರಿಯರಿರಲಿ ಒಂದೇ ತೆರನ ಗೌರವದಿಂದ ಮಾತನಾಡಿಸುತ್ತಾರೆ. ಮನೆಗೆ ಹೋದರೆ ಪ್ರೀತಿಯಿಂದ ಉಪಚರಿಸುತ್ತಾರೆ. ಕೆಲವೊಮ್ಮೆ ದೂರದೂರುಗಳಿಂದ ಬರುವ ರೋಗಿಗಳಿಗೆ ಕಷಾಯದ ಬಾಟಲಿಗಳನ್ನು ಕೊಟ್ಟು 'ಬೇಗ ಗುಣಮುಖರಾಗಲಿ' ಎಂದು ಆತ್ಮವಿಶ್ವಾಸ ತುಂಬಿ ಹಾರೈಸುವುದನ್ನೂ ಕಾಣಬಹುದು. ಪ್ರಬಂಧ ತಿದ್ದಿಸಲು ಬರುವ ವಿದ್ಯಾರ್ಥಿಗಳಿಂದ ಹಿಡಿದು ವಿದೇಶೀ ವಿಶ್ವವಿದ್ಯಾನಿಲಯಗಳಿಂದ ಬರುವ ಸಂಶೋಧಕರ ವರೆಗೆ ಇವರ ಅಗತ್ಯದ ವ್ಯಾಪ್ತಿ ಹಬ್ಬಿದೆ. ಅಮೇರಿಕಾದ ಜೂಲಿಯಾ ಡೀನ್ ಎನ್ನುವವರು 'ಭಾರತದ ಗ್ರಾಮ ಜೀವನ'ದ ಬಗ್ಗೆ ಸಂಶೋಧನೆ ಕೈಗೊಂಡು ಮಾರ್ಗದರ್ಶನಕ್ಕಾಗಿ ಪುಣಿಂಚತ್ತಾಯರಲ್ಲಿಗೆ ಬಂದರು. ಇಟೆಲಿಯ ಸಂಶೋಧಕಿ ಮೆರಿಯಾ ಬ್ರೂನಾಸಿರಬೆಲ್ಲಾ ಹಾಗೂ ಜರ್ಮನಿಯ ಹ್ರೀಪ್ರನ್ ಬ್ರೂಕ್ನರ್ ಪುಣಿಂಚತ್ತಾಯರನ್ನು ಸಂಪರ್ಕಿಸಿ ವಿಪುಲ ಮಾಹಿತಿ ಸಂಗ್ರಹಿಸಿದರು. ನಮ್ಮ ಹಿತ್ತಿಲ ಗಿಡದ ಔಷಧೀಯ ಗುಣವನ್ನು ವಿದೇಶೀಯರೂ ಉಪಯೋಗಿಸಿಕೊಂಡರು.
ಪುಣಿಂಚತ್ತಾಯ-ವನಿತಾ ದಂಪತಿಗಳಿಗೆ ಮೂವರು ಮಕ್ಕಳು. ಮೂವರೂ ವಿವಾಹಿತರು. ಹಿರಿಯ ಪುತ್ರಿ ಲಲಿತಾ ಸರಸ್ವತಿ. ಕಿರಿಯವಳು ವಸಂತಿ ಬೈಲ್. ಮಗ ವಿಜಯರಾಜ್. ಸೊಸೆ ಸುರೇಖಾ. ಮಕ್ಕಳಿಗೂ ಸಾಹಿತ್ಯದ ಆಸಕ್ತಿಯಿದೆ. ಕವಿತೆ-ಪ್ರಬಂಧ ಬರೆಯುತ್ತಾರೆ. ಅಣ್ಣ ರಾಜಗೋಪಾಲ ಪುಣಿಂಚತ್ತಾಯರು ಒಬ್ಬ ಸಮರ್ಥ ರಂಗನಟ. ಸೋದರಿ ನರ್ಮದಾ ಕಾಸರಗೋಡಿನ ಮೊದಲ ಯಕ್ಷಗಾನ ಮಹಿಳಾ ಭಾಗವತರು. ತಮ್ಮಂದಿರಾದ ಪುರುಷೋತ್ತಮ, ವಾಮದೇವ, ರಾಮಚಂದ್ರರು ಮೃದಂಗ ವಾದನ, ಭಾಗವತಿಕೆ, ಚೆಂಡೆವಾದನಗಳಲ್ಲಿ ಪಳಗಿದವರು. ಐದು ತಲೆಮಾರು ಹಿಂದಿನ ಸಂಬಂಧದಲ್ಲಿ ಅಣ್ಣನ ಮಗನಾದ ಪಿ.ಎಸ್. ಪುಣಿಂಚತ್ತಾಯರು ಖ್ಯಾತ ಚಿತ್ರ ಕಲಾವಿದರು.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿಯ ಸದಸ್ಯರಾಗಿದ್ದ ಇವರು ಕಾಸರಗೋಡು ಹಿಸ್ಟರಿ ಸೊಸೈಟಿಯ ಉಪಾಧ್ಯಕ್ಷರೂ ಆಗಿದ್ದರು. 1994 ರಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರೊಂದಿಗೆ ವಿದೇಶಕ್ಕೂ ಹೋಗಿ ಬಂದಿದ್ದರು.
'ಪ್ರತಿಯೊಬ್ಬ ಪುರುಷನ ಸಾಧನೆಯ ಹಿಂದೆಯೂ ಹೆಣ್ಣೊಬ್ಬಳು ಇದ್ದೇ ಇರುತ್ತಾಳೆ' ಎನ್ನುವ ಮಾತು ವೆಂಕಟರಾಜರ ಮಟ್ಟಿಗೂ ನಿಜ. ಸರಳ ಸ್ವಭಾವದ, ಹಿತಮಿತ ಮಾತಿನ ಶ್ರೀಮತಿ ವನಿತಾ, ಪುಣಿಂಚತ್ತಾಯರ ಸಂಶೋಧನ ಕಾಯಕಕ್ಕೆ ಸಹಾಯಕಿಯಾಗಿ ನಿಂತ ಸಹಧರ್ಮಿಣಿ. ಮನೆಯನ್ನು ಸುವ್ಯವಸ್ಥಿತವಾಗಿಡುವುದು, ಅತಿಥಿ ಸತ್ಕಾರ, ಬರಹಗಳನ್ನು ಪ್ರತಿಮಾಡುವುದು ಮುಂತಾಗಿ ಎಲ್ಲದರಲ್ಲೂ ಸಿಡುಕ್ಕಿಲ್ಲದೆ ದುಡಿದವರು. ಪುಣಿಂಚತ್ತಾಯರ ಎಲೆಯ ಮರೆಯ ಬದುಕಿನಲ್ಲಿ ಹೂವಾಗಿ ಅರಳಿದವರು. ತಾನು ಏನನ್ನೂ ಬಯಸದೆ ಸಂಶೋಧಕನೊಬ್ಬನಿಗೆ ಒತ್ತಾಸೆಯಾಗಿ ನಿಂತವರು.
ಪುಣಿಂಚತ್ತಾಯರ ಸಮಗ್ರ ಲೇಖನಗಳ ಸಂಗ್ರಹ 'ಮಹಾಜನಪದ' ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಪ್ರಕಟವಾಗಿದೆ.
ಸುದೀರ್ಘ ಕಾಲ ಎಡನೀರಿನ ಹೊಲಗಳ ಬದಿಯ ಪುಟ್ಟ ಮನೆಯಲ್ಲಿ ಬದುಕು ಹಸನುಗೊಳಿಸಿದ ಪುಣಿಚಿತ್ತಾಯರು ನಿವೃತ್ತಿಯ ನಂತರ ಬೆಳ್ಳೂರಿನ ಐತನಡ್ಕದ ಪಿತ್ರಾರ್ಜಿತ ಆಸ್ತಿಯ ಸ್ವಂತ ಮನೆ 'ಗಾಯತ್ರಿ'ಗೆ ನಿವಾಸವನ್ನು ವರ್ಗಾಯಿಸಿದರು. ಬದುಕಿನ ಕೊನೆಯವರೆಗೂ ಅಲ್ಲೇ ನೆಲೆನಿಂತರು.
ಸ್ಥಳೀಯ ಚರಿತ್ರೆಯನ್ನು ಹುಡುಕಿ ಕಟ್ಟುತ್ತ, ಮಾತೃಭಾಷೆಯ ಇತಿಹಾಸವನ್ನು ಹುಡುಕುತ್ತ, ಒಂಟಿಯಾಗಿ ಕೇವಲ ಕುತೂಹಲದಿಂದ ಸಂಶೋಧನೆಯ ಕಡಲಿಗೆ ಬಲೆಬೀಸಿದ ಈ ವ್ಯಕ್ತಿ ತುಳುವಿಗೆ ಮಾತ್ರವಲ್ಲ, ಇಡೀ ಕಾಸರಗೋಡಿಗೆ ಪ್ರಾತಸ್ಮರಣೀಯರು; ತಿಳುವಳಿಕೆಯ ವಲಯಕ್ಕೆ ಪರಮ ಪೂಜ್ಯರು.