ಯಕ್ಷಗಾನಕ್ಕೊಂದು ವಿಶಿಷ್ಟವಾದ ಪರಂಪರೆ ಇದೆಯೆಂದೂ, ಅದನ್ನು ನಾವು ಕೈಬಿಡಬಾರದೆಂದೂ ಬಹಳ ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ. ಆದರೆ ನಾಟಕಾದಿ ಕಲೆಗಳ ಬಗ್ಗೆ ಈ ಮಾತನ್ನು ನಾವು ಹೇಳುತ್ತಾ ಇಲ್ಲ. ಅಲ್ಲಿ ಹೊಸ ಹೊಸ ತಂತ್ರಗಳ ಆವಿಷ್ಕಾರವೇ ಕಲೆಯ ಬೆಳವಣಿಗೆಯ ಲಕ್ಷಣ ಎಂದು ನಿರ್ಭೀತಿಯಿಂದ ಹೇಳುತ್ತೇವೆ. ಅಲ್ಲಿ ನಿರ್ದೇಶಕನಿಂದ ನಿರ್ದೇಶಕನಿಗೆ ಪ್ರದರ್ಶನಗಳ ಸ್ವರೂಪ ವ್ಯತ್ಯಾಸಹೊಂದುತ್ತಾ ಹೋಗುತ್ತದೆ.
ಪರಂಪರೆಯನ್ನು ನಾವು ಒಂದು ಶಾಸ್ತ್ರ ಎನ್ನುವುದಾದರೆ, ಶಾಸ್ತ್ರವನ್ನು ಒಂದು ಪರಂಪರೆ ಎಂದು ಯಾಕೆ ಹೇಳಬಾರದು? ಆಗ ಭರತನ ನಾಟ್ಯಶಾಸ್ತ್ರವೂ ಒಂದು ಪರಂ ಪರೆಯಾಗುತ್ತದೆ. ನಾಟಕಕಾರರು ಆ ಪರಂಪರೆಯನ್ನು ಮೀರಬಹುದೇ? ರಂಗಭೂಮಿ ಯಲ್ಲಿ ಕೆಲವು ದೃಶ್ಯಗಳನ್ನು ಕಾಣಿಸಬಾರದು ಎಂದು ನಿಯಮವಿದೆ.
`ದೂರಾಧ್ವಾನಂ ವಧಂ ಯುದ್ಧಂ....' ಇತ್ಯಾದಿ ಕೆಲವು ದೃಶ್ಯಗಳನ್ನು `ಪ್ರತ್ಯಕ್ಷಾನಿ ನ ನಿರ್ದಿಶೇತ್' (ರಂಗದಲ್ಲಿ ಪ್ರತ್ಯಕ್ಷವಾಗಿ ಕಾಣಿಸಬಾರದು) ಎಂದು ನಾಟ್ಯಶಾಸ್ತ್ರ ಹೇಳುತ್ತದೆ.
ಆಶ್ಚರ್ಯವೆಂದರೆ ಯಕ್ಷಗಾನದಲ್ಲಿ `ದೂರಾಧ್ವಾನ'ವನ್ನು ರಂಗಭೂಮಿಗೆ ಒಂದು ಸುತ್ತು ಬರುವ ಮೂಲಕ ಸಣ್ಣ `ಅಧ್ವಾನ'ವನ್ನಾಗಿ ಮಾಡಲಾಗುತ್ತದೆ. ಅದು ಸಭಿಕರಿಗೆ ಅಸಹನೀಯವೆಂದು ಆಗುವುದಿಲ್ಲ. ವಧೆಯಂತೂ ಯಕ್ಷಗಾನದಲ್ಲಿ ಬೇಕೇ ಬೇಕು. `ಕಾಳಗ' ಎಂಬ ಪದವೇ ಯಕ್ಷಗಾನದ ಪರ್ಯಾಯಪದವಾಗಿರುವಾಗ ಅಂತಹ ಕಾಳಗದಲ್ಲಿ ವಧೆಯಾಗದಿರುತ್ತದೆಯೇ? ನಮ್ಮ ಯಕ್ಷಗಾನದ ಕೆಲವು ಪ್ರಸಂಗಗಳ ಹೆಸರೇ `ಕಾಳಗ' ಪದವನ್ನು ಒಳಗೊಂಡಿದೆ.
ಯಕ್ಷಗಾನಸಾಹಿತ್ಯವನ್ನು ಎರಡಾಗಿ ವಿಂಗಡಿಸಬಹುದು. ಲಿಖಿತ ಮತ್ತು ಅಲಿಖಿತ ಎಂದು. ಲಿಖಿತವೆಂದರೆ ಯಕ್ಷಗಾನ ಹಾಡುಗಾರಿಕೆಗೆ ಸಂಬಂಧಿಸಿದ ಪ್ರಸಂಗಸಾಹಿತ್ಯ. ಅಲಿಖಿತವೆಂದರೆ ಅದಕ್ಕೆ ಸಂಬಂಧಿಸಿ ನಾಟಕೀಯವಾಗಿ ಬಳಸಲ್ಪಡುವ ಸಂಭಾಷಣೆ. ಇವೆರಡೂ `ಯಕ್ಷಗಾನಸಾಹಿತ್ಯ' ಎಂಬ ಶೀರ್ಷಿಕೆಯ ಕೆಳಗೆ ನಿಲ್ಲುತ್ತವೆ. ಯಕ್ಷಗಾನಸಾಹಿತ್ಯ - ಲಿಖಿತವಾಗಿರಲಿ - ಅಲಿಖಿತವಾಗಿರಲಿ - ಅದಕ್ಕೆ ಅದರದ್ದೇ ಆದ ಒಂದು ಪರಂಪರೆ, ಲಕ್ಷಣ ಮತ್ತು ಸೌಂದರ್ಯವಿದೆ. ಅದರ ಸಂಭಾಷಣೆಯ ಶೈಲಿ ನಾಟಕೀಯವಾಗಿಯೇ ಇದ್ದರೂ, ಇತರ ನಾಟಕಗಳ ಶೈಲಿಗಿಂತ ಕೆಲವೆಡೆ ತುಸು ಭಿನ್ನ ವಾಗಿಯೇ ಇದೆ ಎಂಬಂಶವನ್ನು ನಾವು ಮರೆಯುವಂತಿಲ್ಲ. ಆ ಭಿನ್ನತೆ ಎಲ್ಲಿ ಎಂಬುದನ್ನು ಗಮನಿಸೋಣ.
ನೃತ್ಯ, ಗಾಯನ, ಚಿತ್ರ, ಶಿಲ್ಪ, ಸಾಹಿತ್ಯ, ಎಂಬೀ ಐದು ಸುಂದರಕಲಾರೂಪಗಳ ಸಮ್ಮಿಳನವೇ ಯಕ್ಷಗಾನ. ಇವುಗಳಲ್ಲಿ ಕೊನೆಯದಾದ ಸಾಹಿತ್ಯ ಅಥವಾ ಮಾತುಗಾರಿಕೆ ಯನ್ನು ಸಂಪೂರ್ಣವಾಗಿ ಉಪೇಕ್ಷಿಸಿ, ಮೊದಲನೆಯದಾದ ಕುಣಿತಕ್ಕೆ ಅಥವಾ ನಾಟ್ಯ ಕಲೆಯ ಅಂಶಕ್ಕೆ ಪ್ರಾಶಸ್ತ್ಯವನ್ನಿತ್ತು, ಖ್ಯಾತಿಯನ್ನು ಪಡೆದ ಕಲೆಯೇ ಕಥಕ್ಕಳಿ! ಕಥಕ್ಕಳಿ ಯಲ್ಲಿ ಮಾತುಗಾರಿಕೆ ಇಲ್ಲದಿದ್ದರೂ, ಸಮಗ್ರ ಕಥೆಯ ಶರೀರರೂಪವಾದ ಪ್ರಸಂಗಸಾಹಿತ್ಯ ವಂತೂ ಇದ್ದೇ ಇದೆ. ಹೀಗೆ ಮೇಲುನೋಟಕ್ಕೆ ಎರಡರಲ್ಲೂ ಈ ಐದು ಅಂಶಗಳಿದ್ದರೂ, ಇವೆರಡೂ ಬೇರೆ ಬೇರೆಯಾದ ಎರಡು ಸಮಷ್ಟಿ ಕಲೆಗಳು. ಆದರೂ ಇವುಗಳೊಳಗಿನ ಸಾಮ್ಯ-ವೈಷಮ್ಯಗಳನ್ನು ಒಂದಿಷ್ಟು ವಿಶ್ಲೇಷಣೆ ನಡೆಸುವ ಯತ್ನವೇ ಈ ಲೇಖನದ ಗುರಿ.
'Mahajanapada' book contains complete set of articles written by Dr. Venkataraja Puninchathaya. This book is edited by Dr. Padekallu Vishnu Bhat. To avail this book contact here.
ಯಕ್ಷಗಾನಸಾಹಿತ್ಯ : ಸ್ವರೂಪ, ವೈಶಿಷ್ಟ್ಯ
By Dr. Venkataraja Puninchathaya
By Dr. Venkataraja Puninchathaya
Tulu Lipi Yakshagana Puninchathaya Pundoor Janapada Kathakali ಯಕ್ಷಗಾನ ಸಾಹಿತ್ಯ Research Bhaagavata Shivalli ಕಲೆ Kannada
This site is dedicated to 'Tulu Mahatma' Venkataraja Puninchathaya. All rights reserved ©
"Gayatri", Ithanadka
Kakkebettu post, Mulleria
Kasaragod dist, Kerala
671543
Ph : 04994260430
Powered by AEVUM DEVELOPERS
ಯಕ್ಷಗಾನಕ್ಕೊಂದು ವಿಶಿಷ್ಟವಾದ ಪರಂಪರೆ ಇದೆಯೆಂದೂ, ಅದನ್ನು ನಾವು ಕೈಬಿಡಬಾರದೆಂದೂ ಬಹಳ ವರ್ಷಗಳಿಂದ ಹೇಳುತ್ತಾ ಬಂದಿದ್ದೇವೆ. ಆದರೆ ನಾಟಕಾದಿ ಕಲೆಗಳ ಬಗ್ಗೆ ಈ ಮಾತನ್ನು ನಾವು ಹೇಳುತ್ತಾ ಇಲ್ಲ. ಅಲ್ಲಿ ಹೊಸ ಹೊಸ ತಂತ್ರಗಳ ಆವಿಷ್ಕಾರವೇ ಕಲೆಯ ಬೆಳವಣಿಗೆಯ ಲಕ್ಷಣ ಎಂದು ನಿರ್ಭೀತಿಯಿಂದ ಹೇಳುತ್ತೇವೆ. ಅಲ್ಲಿ ನಿರ್ದೇಶಕನಿಂದ ನಿರ್ದೇಶಕನಿಗೆ ಪ್ರದರ್ಶನಗಳ ಸ್ವರೂಪ ವ್ಯತ್ಯಾಸಹೊಂದುತ್ತಾ ಹೋಗುತ್ತದೆ.
ಪರಂಪರೆಯನ್ನು ನಾವು ಒಂದು ಶಾಸ್ತ್ರ ಎನ್ನುವುದಾದರೆ, ಶಾಸ್ತ್ರವನ್ನು ಒಂದು ಪರಂಪರೆ ಎಂದು ಯಾಕೆ ಹೇಳಬಾರದು? ಆಗ ಭರತನ ನಾಟ್ಯಶಾಸ್ತ್ರವೂ ಒಂದು ಪರಂ ಪರೆಯಾಗುತ್ತದೆ. ನಾಟಕಕಾರರು ಆ ಪರಂಪರೆಯನ್ನು ಮೀರಬಹುದೇ? ರಂಗಭೂಮಿ ಯಲ್ಲಿ ಕೆಲವು ದೃಶ್ಯಗಳನ್ನು ಕಾಣಿಸಬಾರದು ಎಂದು ನಿಯಮವಿದೆ.
`ದೂರಾಧ್ವಾನಂ ವಧಂ ಯುದ್ಧಂ....' ಇತ್ಯಾದಿ ಕೆಲವು ದೃಶ್ಯಗಳನ್ನು `ಪ್ರತ್ಯಕ್ಷಾನಿ ನ ನಿರ್ದಿಶೇತ್' (ರಂಗದಲ್ಲಿ ಪ್ರತ್ಯಕ್ಷವಾಗಿ ಕಾಣಿಸಬಾರದು) ಎಂದು ನಾಟ್ಯಶಾಸ್ತ್ರ ಹೇಳುತ್ತದೆ.
ಆಶ್ಚರ್ಯವೆಂದರೆ ಯಕ್ಷಗಾನದಲ್ಲಿ `ದೂರಾಧ್ವಾನ'ವನ್ನು ರಂಗಭೂಮಿಗೆ ಒಂದು ಸುತ್ತು ಬರುವ ಮೂಲಕ ಸಣ್ಣ `ಅಧ್ವಾನ'ವನ್ನಾಗಿ ಮಾಡಲಾಗುತ್ತದೆ. ಅದು ಸಭಿಕರಿಗೆ ಅಸಹನೀಯವೆಂದು ಆಗುವುದಿಲ್ಲ. ವಧೆಯಂತೂ ಯಕ್ಷಗಾನದಲ್ಲಿ ಬೇಕೇ ಬೇಕು. `ಕಾಳಗ' ಎಂಬ ಪದವೇ ಯಕ್ಷಗಾನದ ಪರ್ಯಾಯಪದವಾಗಿರುವಾಗ ಅಂತಹ ಕಾಳಗದಲ್ಲಿ ವಧೆಯಾಗದಿರುತ್ತದೆಯೇ? ನಮ್ಮ ಯಕ್ಷಗಾನದ ಕೆಲವು ಪ್ರಸಂಗಗಳ ಹೆಸರೇ `ಕಾಳಗ' ಪದವನ್ನು ಒಳಗೊಂಡಿದೆ.
ಉದಾ: ವಾಲಿಸುಗ್ರೀವರ ಕಾಳಗ, ಕೃಷ್ಣಾರ್ಜುನರ ಕಾಳಗ, ಕುಂಭಕರ್ಣಕಾಳಗ, ಇಂದ್ರಜಿತುಕಾಳಗ, ಅತಿಕಾಯಕಾಳಗ ಇತ್ಯಾದಿ. ಕಾಳಗವೆಂಬ ಪದ ತಪ್ಪಿದರೆ ಮತ್ತೆ ವಧೆಯೇ ಗತಿ: ರಾವಣವಧೆ, ಕಂಸವಧೆ, ನರಕಾಸುರವಧೆ ಇತ್ಯಾದಿ.
ಆದರೆ ಯಕ್ಷಗಾನದ `ಕಾಳಗ' ಅದೊಂದು ದುರಂತವಾಗಿ ನಮಗೆ ಕಾಣಿಸುತ್ತಿಲ್ಲ. ಯಾಕೆಂದರೆ ಆ ಯುದ್ಧದ ಕ್ರಮವೇ ಕಲಾತ್ಮಕವಾದುದು. ಯುದ್ಧದಲ್ಲಿ ಹೊಡೆತದ ಸರಳ ಅಭಿನಯ ಮಾತ್ರ ಇರುತ್ತದೆ. ಗಂಭೀರ ಹೊಡೆತಗಳಿರುವುದಿಲ್ಲ. ಪೌರುಷದ ಮಾತು ಗಳನ್ನು ಹೇಳುತ್ತಾ ಹಾರುತ್ತಾ ಕೊನೆಗೆ ಹೊಡೆದುಕೊಳ್ಳುವ ಆ ಕ್ರಮವು ಪ್ರೇಕ್ಷಕನಲ್ಲಿ ವೀರರಸವನ್ನು ಹುಟ್ಟಿಸುತ್ತದೆ.
ಕಾಳಗದ ಮುಂದಿನ ದೃಶ್ಯ ಇನ್ನೂ ಸ್ವಾರಸ್ಯಕರವಾದುದು. ಇತ್ತಂಡದವರು ತಮ್ಮ ಶಸ್ತ್ರಾಸ್ತ್ರಗಳನ್ನು ಜೊತೆಮಾಡಿ ಅಡ್ಡಕ್ಕೆ ಹಿಡಿದು ರಂಗದ ಆ ಕಡೆಗೆ ಈ ಕಡೆಗೆ ಚಲಿಸುತ್ತಾ ಕುಣಿಯುತ್ತಾ ಕೊನೆಗೆ ಇಬ್ಬರೂ ಗರಗರನೆ ತಿರುಗುತ್ತಾ ಸೋಲುವವನ ಕೈಯಾ ಯುಧವನ್ನು ಗೆಲ್ಲುವವನು ಕಿತ್ತುಕೊಳ್ಳುತ್ತಾನೆ. ಇದು ಯಕ್ಷಗಾನದ ಒಂದು ಶೈಲಿ ಮಾತ್ರ. ಹೀಗೆ ಯಕ್ಷಗಾನದ ಕಾಳಗ ತನ್ನದೇ ಆದ ಒಂದು ಶೈಲಿಯಿಂದ ಅತ್ಯಂತ ಸಾಂಕೇತಿಕ ವಾಗಿ ಮತ್ತು ಅದೇ ಒಂದು ಪರಂಪರೆಯಾಗಿ ಸಹ ಬೆಳೆದುಕೊಂಡು ಬಂದಿದೆ.
ನಾಟಕಾದಿಕಲೆಗಳಿಗೂ ಯಕ್ಷಗಾನಕಲೆಗೂ ವ್ಯತ್ಯಾಸವಿದೆ. ಯಕ್ಷಗಾನವು ಜಾನಪದ ಕಲೆ. ನಾವು ನಾಟಕಾದಿಕಲೆಗಳನ್ನು ನೋಡುವ ದೃಷ್ಟಿಗೂ ಯಕ್ಷಗಾನಕಲೆಯನ್ನು ನೋಡುವ ದೃಷ್ಟಿಗೂ ವ್ಯತ್ಯಾಸವಿದೆ. ಜನಪದಸಂಗೀತಕ್ಕೆ ಅದರದ್ದೇ ಆದ ಒಂದು ಸೌಂದರ್ಯವಿರುವಂತೆ ಜಾನಪದಕಲೆಗಳಿಗೂ ಅವುಗಳದೇ ಆದ ಒಂದು ಸಂಸ್ಕೃತಿ ಸೌಂದರ್ಯವಿದೆ. ಅದು ಒಬ್ಬ ಪಾರ್ತಿಸುಬ್ಬನೋ, ಅಜಪುರದ ಸುಬ್ಬನೋ, ಸಂಕಯ್ಯ ಭಾಗವತರೋ, ಬೆನಕಯ್ಯ ಭಾಗವತರೋ ಅಥವಾ ಸುಬ್ರಾಯ ಶ್ಯಾನುಭಾಗರೋ ರೂಪಿಸಿದ ಸೌಂದರ್ಯವಲ್ಲ. ಅವರೆಲ್ಲರ ದುಡಿಮೆಯೂ ಪ್ರತಿಭೆಯೂ ಒಟ್ಟಾಗಿ ರೂಪು ಗೊಂಡ ಒಂದು `ಸಂಸ್ಕೃತಿಸಂಪ್ರದಾಯ' ಎನ್ನಬಹುದು. ಆ ಸಮಷ್ಟಿಕಲಾಸ್ವರೂಪದಲ್ಲಿ ಪಾರ್ತಿಸುಬ್ಬ, ಅಜಪುರದ ಸುಬ್ಬ, ದೇವಿದಾಸ, ಬೆನಕಯ್ಯ ಭಾಗವತ ಇವರೆಲ್ಲರ ಕೊಡುಗೆಯೂ ಇದೆ.
ನಮ್ಮ ಜನತೆ ಪರಂಪರೆಯೆಂದು ಗುರುತಿಸುವುದು ಯಾವುದನ್ನು? ನಾವು ಕೇಳಿದ್ದನ್ನು, ಕಂಡದ್ದನ್ನು ಮತ್ತು ಮೆಚ್ಚಿದ್ದನ್ನು! ಕೆಲವೊಮ್ಮೆ ಅದು ಬದಲಾಗುತ್ತಾ ಹೋಗುತ್ತದೆ. ಕಾಲಕ್ಕೆ ತಕ್ಕಂತೆ ಮಾರ್ಪಾಡಾಗುತ್ತದೆ. ಜಾನಪದದಲ್ಲಿ ಅದು ಸಹಜ. ಪ್ರಕೃತ ನಾವು ನೋಡುತ್ತಿರುವ ಯಕ್ಷಗಾನವು ಈ ರೂಪಕ್ಕೆ ಬರಬೇಕಾದರೆ ಎಷ್ಟೋ ಅವಸ್ಥಾಂತರಗಳನ್ನು ಅದು ಪಡೆದಿರಲೇಬೇಕು. ಅನೇಕ ಬದಲಾವಣೆಗಳಿಗೆ ಅದು ಒಗ್ಗಿರಬೇಕು - ಎಂಬ ಸತ್ಯಾಂಶವನ್ನು ನಾವು ಮರೆಯುವಂತಿಲ್ಲ. ಆದರೆ ಅದಕ್ಕೊಂದು ಮೂಲಸ್ವರೂಪವಿದೆ, ಅದು ಬದಲಾಗಬಾರದು. ಪ್ರಕೃತ ನಾವು ಗುರುತಿಸಬಹುದಾದ ಪರಂಪರೆಯೆಲ್ಲ ಹೆಚ್ಚೆಂದರೆ ಎರಡು ಮೂರು ತಲೆಮಾರುಗಳ ಅನುಭವಕ್ಕೆ ಸೀಮಿತ ವಾದುದು. ಎಂದರೆ ನಮ್ಮ ಕಣ್ಣಿನಲ್ಲಿ ನಾವು ಕಂಡದ್ದು - ನಮ್ಮ ಹಿರಿಯರು ಕಂಡದ್ದು ಮತ್ತು ಅವರ ಹಿರಿಯರು ಕಂಡದ್ದು! ಇದಕ್ಕಿಂತ ಆಚೆಗಿನ ಸತ್ಯಾಂಶ ನಮಗೆ ಲಭಿಸ ಲಾರದು. ಈಗ ಹಾಗಲ್ಲ. ಆಡಿಯೋ ಇದೆ; ವೀಡಿಯೋ ಇದೆ. ಇವುಗಳ ಮೂಲಕ ನಾವು ಕಂಡ, ಕೇಳಿದ ಪರಂಪರೆಯೆಲ್ಲವನ್ನೂ ಮುಂದಿನ ತಲೆಮಾರಿಗೆ ದಾಟಿಸಲು ಸಾಧ್ಯವಿದೆ. ಏನೇ ಇರಲಿ, ಕಲೆಯಲ್ಲಿ ಸುಧಾರಣೆಗಳನ್ನು ಮಾಡಿಕೊಳ್ಳಬೇಕಾದ ಸಂದರ್ಭ ಬಂದಾಗ ಅದರ ಮೂಲಸ್ವರೂಪ ತಳ್ಳಿಹೋಗದಂತೆ ಜಾಗ್ರತೆವಹಿಸಬೇಕಾದುದು ಕಲಾವಿದರ ಹೊಣೆಗಾರಿಕೆಯಾಗಿದೆ.
ಬಹಳ ವರ್ಷಗಳ ಹಿಂದೆ ಡಾ. ಶಿವರಾಮ ಕಾರಂತರು ಒಂದು ಮಾತು ಹೇಳಿದ್ದರು- ಏನೆಂದರೆ, ಯಕ್ಷಗಾನದಲ್ಲಿ ಸ್ತ್ರೀಪಾತ್ರಕ್ಕೆ ವೇಷವಿಲ್ಲ ಎಂದು. ರಾವಣ ಘನಗಂಭೀರವಾದ ವೇಷದಿಂದ ರಂಗಕ್ಕೆ ಬಂದರೆ ಮಂಡೋದರಿ ಸಾಮಾನ್ಯಳಾದ ಹೆಣ್ಣಿನಂತೆ ರಂಗಕ್ಕೆ ಬರುತ್ತಾಳೆ. ರಾವಣವೇಷದ ಸಾಂಕೇತಿಕತೆ ಆತನ ರಾಣಿಯಾದ ಮಂಡೋದರಿಗೆ ಯಾಕಿಲ್ಲ? ಎಂಬುದು ಒಂದು ಪ್ರಶ್ನೆ. ಇದನ್ನು ಹೌದೆಂದು ಒಪ್ಪಿದ ಆ ಕಾಲದ ಖ್ಯಾತ ಸ್ತ್ರೀಪಾತ್ರಧಾರಿಯಾದ ಶ್ರೀ ಪಾತಾಳ ವೆಂಕಟ್ರಮಣ ಭಟ್ಟರು ಸ್ತ್ರೀ ಪಾತ್ರಗಳಿಗೆ ತಮ್ಮದೇ ಆದ ಒಂದು ಶಿರೋಭೂಷಣವನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದರು.
ಡಿವಿಜಿಯವರ ಅಂತಃಪುರಗೀತೆಗಳಲ್ಲಿ ಬೇಲೂರಿನ ಶಿಲಾಬಾಲಿಕೆಯರ ಚಿತ್ರಗಳಿವೆ. ಅದನ್ನು ನೋಡಿ ಸ್ಫೂರ್ತಿಗೊಂಡ ಪಾತಾಳ ವೆಂಕಟ್ರಮಣ ಭಟ್ಟರು ನೇರವಾಗಿ ಬೇಲೂರಿಗೆ ಹೋದರು. ಅಲ್ಲಿಯ ಶಿಲಾಬಾಲಿಕೆಯರ ವೇಷಭೂಷಣಗಳನ್ನು ಗುರುತಿಸಿಕೊಂಡರು. ತಮ್ಮ ಮಿತ್ರರಾದ ಕಲ್ಮಡ್ಕ ಮಹಾಬಲ ಭಟ್ಟರನ್ನು ಕಂಡು ಶಿಲಾಬಾಲಿಕೆಯರು ಧರಿಸಿದಂತಹ ಅದೇ ಸ್ವರೂಪದ ಶಿರೋಭೂಷಣಗಳನ್ನು ತಯಾರಿಸಿಕೊಡಲು ಹೇಳಿದರು.
ಸುಮಾರು 1964-68ರ ಕಾಲಘಟ್ಟದಲ್ಲಿ ನಡೆದ ಸಂಗತಿ ಇದು. ಆ ಶಿರೋ ಭೂಷಣಗಳನ್ನು ಧರಿಸಿ ರಂಗದಲ್ಲಿ ಪಾತ್ರವಹಿಸಿದ ಪಾತಾಳ ವೆಂಕಟ್ರಮಣ ಭಟ್ಟರ ವೇಷಗಳನ್ನು ಜನತೆ ಪ್ರೋತ್ಸಾಹಿಸಿತು. ಹೀಗೆ ಯಕ್ಷಗಾನದ ಮೂಲಸೌಂದರ್ಯವು ಕೆಡದಂತೆ ಕೆಲವೊಂದು ಹೊಸ ಪ್ರಯೋಗಗಳನ್ನು ಮಾಡಿದ ಸಾಹಸಪ್ರವೃತ್ತಿಯವರು ಪಾತಾಳ ವೆಂಕಟ್ರಮಣ ಭಟ್ಟರು. ಒಮ್ಮೆ ಉಡುಪಿಗೆ ಹೋಗಿದ್ದಾಗ ಅಲ್ಲಿಯ ಕನಕನ ಕಿಂಡಿಯ ಮೇಲ್ಭಾಗದ ಗೋಡೆಯಲ್ಲಿದ್ದ ಗೋಪಿಕಾಸ್ತ್ರೀಯರ ರೇಖಾಚಿತ್ರಗಳನ್ನು ನೋಡಿ ಅದರಂತೆ ಸೀರೆಯುಟ್ಟು ರಂಗಕ್ಕೆ ಬಂದ ವೆಂಕಟ್ರಮಣ ಭಟ್ಟರ ಗೋಪಿಕಾಸ್ತ್ರೀಯ ಪಾತ್ರವನ್ನು ಇಂದಿಗೂ ಜ್ಞಾಪಿಸಿಕೊಳ್ಳುವವರಿದ್ದಾರೆ.
ನಮ್ಮ ಪುರಾಣಪಾತ್ರಗಳಿಗೆ ಒಂದು ನಿರ್ದಿಷ್ಟವಾದ ಸ್ವರೂಪವನ್ನು ಚಿತ್ರಿಸಿಕೊಟ್ಟ ಕಲಾವಿದರು ರಾಜಾ ರವಿವರ್ಮರು. ಅನಂತರದ ಎಲ್ಲ ಕಲಾವಿದರೂ ಅದನ್ನೇ ಆದರ್ಶವಾಗಿ ಇಟ್ಟುಕೊಂಡರು. ಪಾತಾಳ ವೆಂಕಟ್ರಮಣ ಭಟ್ಟರು ತಾವು ವಹಿಸುತ್ತಿದ್ದ ಅನೇಕ ಪುರಾಣಪಾತ್ರಗಳಿಗೆ ರವಿವರ್ಮನ ಕಲ್ಪನೆಗಳನ್ನು ಸ್ವೀಕರಿಸಿಕೊಂಡಿದ್ದಾರೆ.
ಹೀಗೆ ತಮ್ಮ ಕಲಾಜೀವನದುದ್ದಕ್ಕೂ ಹೊಸ ಹೊಸ ಪ್ರಯೋಗಗಳನ್ನು ಕಂಡು ಕೊಳ್ಳುವ ಮನಃಪ್ರವೃತ್ತಿಯ ಪಾತಾಳ ವೆಂಕಟ್ರಮಣ ಭಟ್ಟರು ಒಬ್ಬ ಸಹೃದಯ ಹಾಗೂ ಪ್ರಯೋಗಶೀಲ ಕಲಾವಿದರು ಎಂಬುದರಲ್ಲಿ ಸಂದೇಹವಿಲ್ಲ.
[`ಯಕ್ಷಶಾಂತಲಾ - ಪಾತಾಳ', ಪಾತಾಳ ವೆಂಕಟರಮಣ ಭಟ್ಟ ಅಭಿನಂದನ ಗ್ರಂಥ, ಸಂ.: ಮುಳಿಯ ಶಂಕರ ಭಟ್ಟ, ಪ್ರ.: ಪಾತಾಳ ಅಭಿನಂದನ ಕೃತಿ ಪ್ರಕಾಶನ ಸಮಿತಿ, ಪುತ್ತೂರು, 2005 - ಇದರಲ್ಲಿ ಪ್ರಕಟಿತ]
ಯಕ್ಷಗಾನಸಾಹಿತ್ಯವನ್ನು ಎರಡಾಗಿ ವಿಂಗಡಿಸಬಹುದು. ಲಿಖಿತ ಮತ್ತು ಅಲಿಖಿತ ಎಂದು. ಲಿಖಿತವೆಂದರೆ ಯಕ್ಷಗಾನ ಹಾಡುಗಾರಿಕೆಗೆ ಸಂಬಂಧಿಸಿದ ಪ್ರಸಂಗಸಾಹಿತ್ಯ. ಅಲಿಖಿತವೆಂದರೆ ಅದಕ್ಕೆ ಸಂಬಂಧಿಸಿ ನಾಟಕೀಯವಾಗಿ ಬಳಸಲ್ಪಡುವ ಸಂಭಾಷಣೆ. ಇವೆರಡೂ `ಯಕ್ಷಗಾನಸಾಹಿತ್ಯ' ಎಂಬ ಶೀರ್ಷಿಕೆಯ ಕೆಳಗೆ ನಿಲ್ಲುತ್ತವೆ.
ಯಕ್ಷಗಾನಸಾಹಿತ್ಯ - ಲಿಖಿತವಾಗಿರಲಿ - ಅಲಿಖಿತವಾಗಿರಲಿ - ಅದಕ್ಕೆ ಅದರದ್ದೇ ಆದ ಒಂದು ಪರಂಪರೆ, ಲಕ್ಷಣ ಮತ್ತು ಸೌಂದರ್ಯವಿದೆ. ಅದರ ಸಂಭಾಷಣೆಯ ಶೈಲಿ ನಾಟಕೀಯವಾಗಿಯೇ ಇದ್ದರೂ, ಇತರ ನಾಟಕಗಳ ಶೈಲಿಗಿಂತ ಕೆಲವೆಡೆ ತುಸು ಭಿನ್ನ ವಾಗಿಯೇ ಇದೆ ಎಂಬಂಶವನ್ನು ನಾವು ಮರೆಯುವಂತಿಲ್ಲ. ಆ ಭಿನ್ನತೆ ಎಲ್ಲಿ ಎಂಬುದನ್ನು ಗಮನಿಸೋಣ.
ನಾಟಕದಲ್ಲಿ ಕಥೆಯನ್ನು ಕೊಂಡೊಯ್ಯಲು ದೃಶ್ಯಗಳು ಸಹಾಯಕವಾಗುತ್ತವೆ ಮತ್ತು ಆ ದೃಶ್ಯಗಳಿಗೆ ಕಾಲಪರಿಧಿಯೂ ಇರುತ್ತದೆ. ಎರಡು ವಿಭಿನ್ನಕಾಲಘಟ್ಟಗಳಲ್ಲಿ ನಡೆಯುವ ಕಥೆ ನಾಟಕದ ಒಂದೇ ದೃಶ್ಯದಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ನಾಟಕ ಎಂದು ನಾನು ಹೇಳುವುದು - ಈಗಿನ ನಾಟಕಗಳನ್ನಲ್ಲ; ನಾಟ್ಯಶಾಸ್ತ್ರಗಳಲ್ಲಿ ನಿರೂಪಿಸಿದ ಲಕ್ಷಣಗಳ ಪ್ರಕಾರ ಬರೆಯಲ್ಪಟ್ಟ ನಾಟಕಗಳನ್ನು ಮಾತ್ರ. ಈಗಿನ ನಾಟಕಗಳಲ್ಲಿ ಬಯಲಾಟದಂತಹ ಜನಪದ ಕಲೆಗಳ ಪ್ರಭಾವವಾಗಿ ಅವು ತುಂಬ ಬದಲಾವಣೆಗಳನ್ನು ಪಡೆದಿವೆ. ಆ ಮಾತು ಬೇರೆ.
ಹಳೆಯ ನಾಟಕಪದ್ಧತಿ ಮತ್ತು ಯಕ್ಷಗಾನಪದ್ಧತಿಯನ್ನು ಅವಲೋಕಿಸಿದರೆ - ಯಕ್ಷಗಾನದ ಸಂಭಾಷಣಶೈಲಿ ನಾಟಕಪದ್ಧತಿಗಿಂತ ಭಿನ್ನವಾಗಿರುವುದು ಕಂಡುಬರುತ್ತದೆ. ಈ ಭಿನ್ನತೆಯನ್ನು `ಕಾಲಾತೀತತೆ' ಮತ್ತು `ದೇಶಾತೀತತೆ' ಎಂದು ಹೇಳಬಹುದು.
ಕಾಲಾತೀತತೆ ಎಂದರೆ ನಿಜಜೀವನದಲ್ಲಿ ಒಂದು ಕ್ರಿಯೆ ನಡೆಯಲು ಬೇಕಾಗುವ ಕಾಲಪರಿಧಿಗಿಂತ ವೇಗವಾಗಿ ಅದು ಮುಂದುವರಿಯುವುದು. ಉದಾಹರಣೆಗೆ - ಒಂದೇ ದೃಶ್ಯದಲ್ಲಿ ದಿನಗಟ್ಟಲೆ - ತಿಂಗಳುಗಟ್ಟಲೆ - ವರ್ಷಗಟ್ಟಲೆ ನಡೆಯುವ ಕ್ರಿಯೆಗಳು ಕ್ಷಣದಲ್ಲಿ ಮುಗಿದು ಹೋಗುವುದು. [ಈ ಕಾಲಾತೀತತೆ ನಾಟಕಗಳಲ್ಲಿಯೂ ತುಸುಮಟ್ಟಿಗೆ ಕಾಣಿಸಬಹುದು - ತಪಸ್ಸು ಮುಂತಾದ ಸಂದರ್ಭಗಳಲ್ಲಿ.] ಆದರೆ ಯಕ್ಷಗಾನದಲ್ಲಿ ಇದು ಸರ್ವೇಸಾಮಾನ್ಯ. ಕೇವಲ ವಾಚಿಕಾಭಿನಯದಿಂದ ಏನನ್ನೂ ಸಾಧಿಸಬಹುದು - ಎಂಬುದನ್ನು ಯಕ್ಷಗಾನ ಸಂಭಾಷ ಣಪದ್ಧತಿ ನಮಗೆ ಕಲಿಸಿಕೊಟ್ಟಿದೆ. ಭಾಗವತರ ಒಂದು ಹಾಡು ಮುಗಿದಾಗ ಕಥಾಪಾತ್ರಗಳು ಅಲ್ಲಲ್ಲೇ ಇರುತ್ತಿದ್ದ ಹಾಗೆ ಕಥೆ ವರ್ಷಗಟ್ಟಲೆ ಮುಂದೆ ಸಾಗಬಹುದು. ಒಂದು ಮಗು ಹುಟ್ಟಿ ಜಾತಕರ್ಮನಾಮಕರಣ ಅನ್ನಪ್ರಾಶನ ಗಳಾಗಿ ಆ ಮಗು ವಿದ್ಯಾಭ್ಯಾಸ ಮುಗಿಸಿ ಪ್ರೌಢನಾಗುವ ವರೆಗಿನ ಕಥೆ ಭಾಗವತರು ಹಾಡುವ ಒಂದೆರಡು ದ್ವಿಪದಿಗಳಲ್ಲಿ ಮುಗಿದು ಹೋಗುತ್ತದೆ. ರಂಗದಲ್ಲಿ ಕಾಣಿಸಿಕೊಳ್ಳುವ ಪಾತ್ರಧಾರಿಯೂ ಅಷ್ಟೇ ವೇಗವಾಗಿ ಆ ಕಥೆಯನ್ನು ಮುಂದೆ ಕೊಂಡುಹೋಗುತ್ತಾನೆ. (ಕ್ಯಾಸೆಟ್ಟು forward ಆಗುತ್ತದೆ. ಸಿನಿಮಾ ನಾಟಕಗಳಲ್ಲಿ flash back ತಂತ್ರದ ಮೂಲಕ ಕಥೆ rewind ಆಗುವುದಾದರೆ, ಇಲ್ಲಿ ಬಹಳ quick ಆಗಿ ಅದು forward ಆಗುತ್ತದೆ) ಇದನ್ನು ಕಾಲಾತೀತತೆ ಎನ್ನಬಹುದು.
ಯಕ್ಷಗಾನಪದ್ಧತಿಯಲ್ಲಿರುವ ಇನ್ನೊಂದು ವೈಶಿಷ್ಟ್ಯವೆಂದರೆ `ದೇಶಾತೀತತೆ'. ನಾಟಕ ಗಳಲ್ಲಿ ಒಂದು ಅರಮನೆಯ ಸನ್ನಿವೇಶದಿಂದ ಕಾಡಿನ ಸನ್ನಿವೇಶಕ್ಕೆ ನೆಗೆಯಬೇಕಾದರೆ, ಒಂದು ದೃಶ್ಯಾಂತರ ಅಗತ್ಯವೆನ್ನಿಸುತ್ತದೆ. ಒಮ್ಮೆ ಪರದೆ ಇಳಿದು ಮೇಲೆ ಏರಬೇಕಾಗುತ್ತದೆ. ಆದರೆ ಬಯಲಾಟದಲ್ಲಿ ಅದು ಅಗತ್ಯವಿಲ್ಲ. ಒಂದೇ ರಂಗದಲ್ಲಿ ಅರಮನೆಯನ್ನೂ ಕಾಡನ್ನೂ ವಾಚಿಕಾಭಿನಯದಿಂದ ಸೃಷ್ಟಿಸಿಕೊಳ್ಳಬಹುದು. ಕವಿಗೆ ಒಂದು ಕಂದಪದ್ಯವೋ, ಭಾಮಿನಿಯೋ ತುಂಡೋ ಖರ್ಚಾಗಬಹುದು. ಹಳೆಯ ಪ್ರಸಂಗಗಳಲ್ಲಾದರೆ ಅದೂ ಇಲ್ಲ - ಒಂದು ವಚನವನ್ನು ಹೇಳುವ ಮೂಲಕ ದೃಶ್ಯಾಂತರ ನಡೆಯಬಹುದು. ಪಾತ್ರಧಾರಿ ರಂಗಕ್ಕೆ ಒಂದು ಸುತ್ತು ಅಥವಾ ಅರ್ಧಸುತ್ತು ಬಂದು ಮಾತಿನಲ್ಲಿ ದೃಶ್ಯಾಂತರವನ್ನು ತಿಳಿಸಿಬಿಡುತ್ತಾನೆ.
ಪಾರ್ಥಿವಾಗ್ರಣಿ ಕೇಳು ಬಳಿಕ ಅಲ್ಲಲ್ಲಿರುವ
ತೀರ್ಥತೀರ್ಥಂಗಳೆಲ್ಲರಲಿ |
ಅರ್ಥಿಯಲಿ ಮಿಂದು ತಾನೈತಂದು ನೋಡಿದನು
ಪಾರ್ಥನುರೆ ಸೇತುಬಂಧನವ || (ಸುಭದ್ರಾಕಲ್ಯಾಣ)
ಇಲ್ಲಿ ಒಂದೇ ಪದ್ಯದಲ್ಲಿ ಅರ್ಜುನನು ತೀರ್ಥಯಾತ್ರೆಗೆ ಹೊರಟು ಭಾರತದ ಎಲ್ಲ ಪುಣ್ಯತೀರ್ಥಗಳನ್ನು ಸಂಚರಿಸಿ, ಕೊನೆಗೆ ರಾಮೇಶ್ವರಕ್ಕೆ ಬಂದು ತಲುಪುತ್ತಾನೆ. ಒಂದೇ ನಿಮಿಷದಲ್ಲಿ ಅಖಿಲಭಾರತ ಸಂಚಾರ ನಡೆದುಹೋಗುತ್ತದೆ. ಈ ಸಾಧ್ಯತೆ ಧಾರಾಳವಾಗಿ ಕಾಣಸಿಗುವುದು ಯಕ್ಷಗಾನಸಾಹಿತ್ಯದಲ್ಲಿ ಮಾತ್ರ. ಇದನ್ನು ದೇಶಾತೀತತೆ ಎನ್ನಬಹುದು. ಈ ದೇಶಾತೀತತೆ ಮತ್ತು ಕಾಲಾತೀತತೆಗಳು ಯಕ್ಷಗಾನ ಪ್ರಸಂಗಸಾಹಿತ್ಯದ ಹಾಗೂ ಸಂಭಾಷಣಸಾಹಿತ್ಯದ ಮುಖ್ಯವೈಶಿಷ್ಟ್ಯಗಳಾಗಿವೆ.
`ಪ್ರಸಂಗ' ಎಂಬುದು ಯಕ್ಷಗಾನಕ್ಕೆ ಸಂಬಂಧಿಸಿಯೇ ಹುಟ್ಟಿಕೊಂಡ ಒಂದು ಪಾರಿಭಾಷಿಕಪದ. `ಕಥಾವಸ್ತು' ಎಂದು ಈ ಪದದ ಅರ್ಥ. ಈ ಪದವನ್ನು ಮೊತ್ತ ಮೊದಲಾಗಿ ಬಳಸಿದವನು ಪಾರ್ತಿಸುಬ್ಬ. ಕಾಳಿದಾಸಾದಿ ಕವಿಗಳ ಕಾವ್ಯಗಳಲ್ಲಿ ದಿಗ್ವಿಜಯ ಪ್ರಸಂಗ, ಯಾತ್ರಾಪ್ರಸಂಗ, ಸುರತಪ್ರಸಂಗ, ದ್ಯೂತಪ್ರಸಂಗ ಇತ್ಯಾದಿಗಳ ಪ್ರಸ್ತಾವ ಬರುತ್ತದೆ. ಮಲೆಯಾಳದಲ್ಲಿ `ಪ್ರಸಂಗ' ಎಂದರೆ ಭಾಷಣ ಎಂದರ್ಥ, `ಕಥಾಪ್ರಸಂಗ' ಎಂದರೆ ಹರಿಕತೆ ಅಥವಾ ಕಥಾಕಾಲಕ್ಷೇಪ ಎಂದು ಅರ್ಥ, `ಪ್ರಾಸಂಗಿಕನ್' - ಎಂದರೆ ಭಾಷಣ ಕಾರ ಎಂದರ್ಥ. ಮಾತಾಡುವುದಕ್ಕೆ `ಪ್ರಾಸಂಗಿಕ' ಎಂಬ ಅರ್ಥ ಕನ್ನಡದಲ್ಲೂ ಇದೆ. ಪಾರ್ತಿಸುಬ್ಬನ ಯಕ್ಷಗಾನ ಪ್ರಸಂಗದಲ್ಲಿಯೇ (ಉಂಗುರಸಂಧಿಯಲ್ಲಿ) ಒಂದೆಡೆ ಈ ಮಾತು ಇದೆ - `ಇಂತೆಂದು ಒಬ್ಬರೊಬ್ಬರು ಪ್ರಸಂಗಿಸಲಾಗಿ ಜಾಂಬವರು ತಮ್ಮೊಳಗೆ ಆಲೋಚನೆಯ ಮಾಡಿ ಹನುಮಂತನಂ ಕರೆದು ಏನೆಂದರು ಎಂದರೆ' ಎಂಬುದಾಗಿ. ಯಾರಾದರೂ ಅನಗತ್ಯವಾಗಿ ಮಾತಾಡಿದರೆ ಅಥವಾ ಸಂದರ್ಭಮೀರಿ ಮಾತಾಡಿದರೆ ಆತನನ್ನು ಅಧಿಕಪ್ರಸಂಗಿ ಎಂದು ಸಂಬೋಧಿಸುವುದು ನಮ್ಮಲ್ಲಿ ರೂಢಿಯಲ್ಲಿದೆ.
ಏನಿದ್ದರೂ ಸಂಸ್ಕೃತ, ಕನ್ನಡ, ಮಲೆಯಾಳ ಭಾಷೆಗಳ ಈಯೆಲ್ಲ ಅರ್ಥ ವ್ಯಾಪ್ತಿಯನ್ನು ಮೀರಿ ಯಕ್ಷಗಾನದ `ಪ್ರಸಂಗ'ವು ಒಂದು ವಿಶಿಷ್ಟ ಸಾಹಿತ್ಯಪ್ರಕಾರದ ಪಾರಿಭಾಷಿಕಪದವಾಗಿ ಪ್ರಚಾರದಲ್ಲಿದೆಯೆಂಬುದಂತೂ ಸತ್ಯ.
ಪಾರ್ತಿಸುಬ್ಬನು ತನ್ನ ರಾಮಾಯಣಪ್ರಸಂಗದ ಪ್ರಾರಂಭದಲ್ಲಾಗಲಿ, ಮಧ್ಯದಲ್ಲಾ ಗಲಿ - ತಾನು ಬರೆಯುತ್ತಿರುವ ಸಾಹಿತ್ಯಪ್ರಕಾರವನ್ನು `ಪ್ರಸಂಗ' ಎಂದು ಎಲ್ಲೂ ಹೆಸರಿಸಿಲ್ಲ. ಆದರೆ ಕುಶಲವರ ಕಾಳಗದ ಕೊನೆಯಲ್ಲಿ - ಎಂದರೆ ತನ್ನ ರಾಮಾಯಣ ಕತೆಯ ಕೊನೆಯಲ್ಲಿ –
``ಹೇಳುವೆನು ಮುಂದಾದ ಕಥನಮಂ ವಿಸ್ತರಿಸಿ
ನಾಳೆ ನಿನಗೆಂದು ಮುನಿಯೊರೆದೀ ಪ್ರಸಂಗವನು
ಹೇಳಿ ಕೇಳ್ವರ ಕಣ್ವಪುರದೊಡೆಯ ಗೋಪಾಲಕೃಷ್ಣ ರಕ್ಷಿಸುವ ಬಿಡದೆ''
- ಎಂಬುದಾಗಿ `ಪ್ರಸಂಗ' ಎಂಬ ಪದವನ್ನೇ ಬಳಸಿದ್ದಾನೆ.
ಇತರ ಕಡೆಗಳಲ್ಲೆಲ್ಲ `ಎಂಬಲ್ಲಿಗಾಯಿತು ಸಂಧಿ' ಎಂದು ಹೇಳುತ್ತಾ `ಸಂಧಿ' ಪದವನ್ನು ಬಳಸಿದ್ದಾನೆ. ನಮ್ಮಲ್ಲಿ ಹಳಬರು ಯಕ್ಷಗಾನ ಪ್ರಸಂಗವನ್ನು `ಸಂಧಿ' ಎಂದೂ ಕರೆಯುತ್ತಿದ್ದರಂತೆ. ಪಾರ್ತಿಸುಬ್ಬನ ರಾಮಾಯಣದ ಹಸ್ತಪ್ರತಿಯೊಂದರ ಪ್ರಾರಂಭದಲ್ಲಿ - 'ರಾಮಾಯಣಸಂಧಿ ಬರೆವುದಕ್ಕೆ ಶುಭಮಸ್ತು' ಎಂದು ಉಲ್ಲೇಖಿಸಿದ ಹಸ್ತಪ್ರತಿಯನ್ನು ನಾನು ನೋಡಿದ್ದೇನೆ. ನಮ್ಮಲ್ಲಿ ದೀರ್ಘಕಥಾನಕಗಳಿಗೆಲ್ಲಾ `ಸಂಧಿ'ಯೆಂದು ಹೇಳುವ ಪದ್ಧತಿ ಮೊದಲಿನಿಂದಲೂ ರೂಢಿಯಲ್ಲಿತ್ತು. ಪಾಡ್ದನ ಹಾಡುವುದಕ್ಕೆ ತುಳುವಿನಲ್ಲಿ `ಸಂಧಿ ಪಣ್ಪುಣೆ' ಎನ್ನುತ್ತಾರೆ. ಸುಬ್ಬನ ಚೂಡಾಮಣಿ ಪ್ರಸಂಗಕ್ಕೆ ರೂಢಿಯಲ್ಲಿರುವ ಹೆಸರೇ `ಉಂಗುರಸಂಧಿ' ಎಂದು. ಹೀಗೆ ಯಕ್ಷಗಾನದ ಲಿಖಿತಸಾಹಿತ್ಯಪ್ರಕಾರಕ್ಕೆ, ಎಂದರೆ ಹಾಡು ಗಳಿಗೆ ಸಂಧಿಯೆಂದೂ ಪ್ರಸಂಗವೆಂದೂ ಪ್ರತ್ಯೇಕ ಹೆಸರಿರುವುದನ್ನು ನಾವು ಗಮನಿಸ ಬಹುದು.
ಪ್ರಸಂಗದ ಸಾಹಿತ್ಯವು ದೃಶ್ಯಕಾವ್ಯವೂ ಹೌದು; ಶ್ರವ್ಯಕಾವ್ಯವೂ ಹೌದು. ಎರಡರ ಗುಣವೂ ಅದರಲ್ಲಿ ಅಡಕವಾಗಿರಬೇಕಾಗುತ್ತದೆ. ಆದರೂ ಅದು ದೃಶ್ಯಕಾವ್ಯಕ್ಕೇ ಹೆಚ್ಚು ಸಮೀಪವಾಗಿರುವಂತೆ ನೋಡಿಕೊಳ್ಳಬೇಕಾದುದು ಕವಿಗಳ ಕರ್ತವ್ಯ. ಕೆಲವು ಕವಿಗಳು ಅದರಲ್ಲಿ ಶ್ರವ್ಯಕಾವ್ಯದ ಗುಣಗಳನ್ನು ತುಂಬಿಸಲು ಹೋಗಿ ಪಾಂಡಿತ್ಯಪ್ರದರ್ಶನಕ್ಕೆ ಯತ್ನಿ ಸಿದ್ದೂ ಇದೆ. ಅಂಥವರಲ್ಲಿ ಮುದ್ದಣನೂ ಒಬ್ಬ. ಅವನ ಪ್ರಸಂಗಗಳಲ್ಲಿ ಕೆಲವೆಡೆ ಮಿತಿಮೀರಿದ ಶಬ್ದಾಲಂಕಾರ - ಶ್ಲೇಷೆಗಳು ತುಂಬಿವೆ. ಯಕ್ಷಗಾನಪ್ರಸಂಗಗಳು ಪ್ರೌಢ ಕಾವ್ಯಗಳಾಗಿರಬಾರದು. ಅವು ಸರಳವಾಗಿದ್ದಷ್ಟೂ ಸಹೃದಯಸ್ಪಂದನೆಗೆ ಅವಕಾಶ ಹೆಚ್ಚು. ಹಾಡು ಪ್ರೌಢವಾಗಿದ್ದರೆ, ಕ್ಲಿಷ್ಟವಾಗಿದ್ದರೆ - ಹಾಡನ್ನು ಕೇಳಿದಾಗ, ಅರ್ಥಗ್ರಹಣದ ಆನಂದ ಅಥವಾ ಆಸ್ವಾದನೆ ಲಭಿಸುವುದಿಲ್ಲ. ಮುದ್ದಣನ ಯಕ್ಷಗಾನದ ಕೆಲವು ಪದ್ಯ ಗಳಂತೂ ವಿದ್ವಾಂಸರಿಗೆ ಮಾತ್ರ ಆಪ್ಯಾಯಮಾನವಾಗಿದ್ದು ಜನಸಾಮಾನ್ಯರ ಹೃದಯಕ್ಕೆ ಅದು ಎಟಕುವಂತಿಲ್ಲ.
ಈ ನಿಟ್ಟಿನಿಂದ ಸುಬ್ಬನ ರಾಮಾಯಣ ಪದ್ಯಗಳೇ ತುಂಬ ಸರಳ. ಅವನ ಅನೇಕ ಹಾಡುಗಳು ನಮ್ಮ ನಿಜಜೀವನದ ಆಡುಮಾತುಗಳಿಗೆ ಸಮೀಪವಾಗಿದ್ದು, ತುಂಬ ರಸ ಸ್ಯಂದಿಯಾಗಿವೆ. ಉದಾಹರಣೆಗೆ - ರಾಮನ ವನವಾಸದ ಸುದ್ದಿಯನ್ನು ತಿಳಿದ ಲಕ್ಷ್ಮಣನು `ಪೊಡವಿ ಕೈಕೆಗೆ ಮಾರಿಹೋಯಿತೇ' ಎಂದು ಕೋಪದಿಂದ ಕಿಡಿಕಿಡಿಯಾದಾಗ ರಾಮ ಹೇಳುತ್ತಾನೆ :
`ತಮ್ಮ ಇನಿತ್ಯಾಕೊ ಕೋಪ - ಸುಮ್ಮನೆ ಇರಪ್ಪ
ಸಮ್ಮತವಲ್ಲ ಸತ್ಯ-ಧರ್ಮವ ಮೀರುವುದು'
ಉಂಗುರಸಂಧಿಯಲ್ಲಿ ಹನುಮಂತ ಸೀತೆಯೊಡನೆ ಹೇಳುತ್ತಾನೆ: ತಾಯಿ, ನಿನ್ನ ಸುದ್ದಿಯನ್ನು ನಾಳೆ ಸಂಜೆಗೆ ಹೋಗಿ ಹೇಳದಿದ್ದರೆ ಕಡೆಗೆ - ನಾಲಿಗೆ ಕೊಯ್ಸುವುದೇ ನಮ್ಮ ಒಡೆಯನ ಆಜ್ಞೆ.
ಇದು ಒಂದು ಸಂಭಾಷಣೆಯ ಮಾತು ಎಂದಿಟ್ಟುಕೊಳ್ಳೋಣ. ಸುಬ್ಬನ ಪ್ರಸಂಗದಲ್ಲಿ ಇದೇ ಮಾತು ಒಂದು ಹಾಡಾಗಿ ಹೇಗೆ ಮೂಡಿಬಂದಿದೆ ನೋಡಿ - (ಭೈರವಿ ಝಂಪೆತಾಳ)
ನಾಳೆ ಸಂಜೆಗೆ ಹೋಗಿ
ಹೇಳದಿದ್ದರೆ ಕಡೆಗೆ |
ನಾಲಿಗೆಯ ಕೊಯಿಸುವುದೆ
ನಮ್ಮೊಡೆಯನಾಜ್ಞೆ ||
ಇಲ್ಲಿ ಹಾಡಿಗಾಗಿ ವಿಷಯವಲ್ಲ; ವಿಷಯಕ್ಕಾಗಿ ಹಾಡು. ವಿಷಯವೇ ಹಾಡಾಗಿ ಬಂದಿದೆಯೆಂದರೂ ತಪ್ಪಲ್ಲ. ಒಬ್ಬ ಸಹಜಕವಿಗೆ ಮಾತ್ರ ಇದೆಲ್ಲ ಸಾಧ್ಯ.
ಸೇತುಬಂಧನದ ಕೆಲವು ಹಾಡುಗಳಂತೂ - ನಾವು ನಿಜಜೀವನದಲ್ಲಿ ಮಾತಾಡಿದ ಹಾಗೆ - ಅಷ್ಟೂ ಸರಳವಾಗಿ ಒಡಮೂಡಿವೆ. ಅವು ಗದ್ಯಕ್ಕಿಂತ ಬೇರೆಯಲ್ಲ ಎಂಬ ಹಾಗೆಯೇ ಇವೆ. ಉದಾ:
ದಂಡು ಬಂತಯ್ಯ ರಾಘವನ - ನಾವು
ಕಂಡೆವು ದಳವಾಯಿ ಸುಗ್ರೀವನ |
-ಎಂಬ ದೂತರ ಮಾತು,
ಕೇಳಿದೆಯಾ ಅಣ್ಣ ಕೇಳಿದೆಯಾ |
ರಾಮ ಪಾಳ್ಯಂಗೂಡಿ ನಮ್ಮೊಡನೆ
ಕಾಳಗಕ್ಕೆ ಬಂದ ಪರಿಯ ಕೇಳಿದೆಯಾ |
ಇನ್ನಾದರೂ ಬಿಡು ಬಿಡು ನಿನ್ನ ಛಲವ
ಮೊನ್ನೆ ಹೇಳಿದ ಮಾತು ನಿಜವಾಯಿತಲ್ಲ |
ನೀನೇಕೆ ಮರುಳಪ್ಪುದಣ್ಣ - ಇನ್ನು
ಜಾನಕಿಯನು ಬಿಟ್ಟು ಕೊಡುವುದೆ ಬಣ್ಣ |
- ಎಂಬ ವಿಭೀಷಣನ ಮಾತುಗಳು,
ತಮ್ಮನ ಸ್ವರೂಪಕ್ಕೆ ತಕ್ಕ ಮಾತಾಡಿದನು |
ಅಮ್ಮ ಕೈಕಸೆಗಾಗಿ ಒಮ್ಮೆ ಸೈರಿಸಿದೆ
- ಎಂಬ ರಾವಣನ ಮಾತು
-ಇಲ್ಲೆಲ್ಲ ಹಾಡನ್ನಾರಂಭಿಸುವುದಕ್ಕೆ ಒಂದು ಸಂಬೋಧನೆಯೋ ಒಂದು ಪೀಠಿಕೆಯೋ - ಏನೂ ಕಾಣಿಸುವುದಿಲ್ಲ. ನೇರ ಸಂಭಾಷಣೆಯ ಮೊದಲ ಮಾತೇ ಇಲ್ಲಿ ಪಲ್ಲವಿಯಾಗಿ ಬಿಡುತ್ತದೆ. ಮೊದಲು ಮಾತು, ಅದಕ್ಕೆ ಬೇಕಾದ ರಾಗವೋ ತಾಳವೋ ಮೇಳೈಸಿಕೊಳ್ಳುವುದು ಮತ್ತೆ. ಇದು ಪ್ರಸಂಗಸಾಹಿತ್ಯದ ಮೊದಲನೆಯ ವೈಶಿಷ್ಟ್ಯ.
ಅಂಗದಸಂಧಾನದಲ್ಲಿ ಅಂಗದ ರಾವಣನೊಡನೆ ಬುದ್ಧಿಯ ಮಾತು ಹೇಳುತ್ತಾನೆ-
ಏನಪ್ಪ ರಾವಣೇಂದ್ರ ! ನೀನಾ ಜಾನಕಿಯನ್ನು ಕಾಣದಂತೆ ತರಬಹುದೇನ್ಮ್ಯಾ?
- ಇದು ಹೇಳಬೇಕಾದ ಮುಖ್ಯವಿಷಯ. ಈ ವಿಷಯವೇ ಸವಾಯಿ ರಾಗದಲ್ಲಿ ಏಕತಾಳದ ಪದ್ಯವಾಗಿ ಮೂಡಿಬಂದಿದೆ:
ಏನಪ್ಪ ರಾವಣೇಂದ್ರ | ನೀನಾ ಜಾನಕಿಯನ್ನು |
ಕಾಣದಂತೆ ತರಬಹುದೇನ್ಮ್ಯಾ ||
ತಾನಾಗಿ ರಾಮಚಂದ್ರ | ಸೇನೆಯ ಕೂಡಿಕೊಂಡು |
ನೀನಿದ್ದ ಬಳಿಗೆ ಬಂದೆ ಕಾಣ್ಮ್ಯಾ || 1 ||
ಅಂಗದನ ಬುದ್ಧಿಯ ಮಾತು ಕೇಳಿದ ರಾವಣನು - `ಆಯಿತೇ ನಿನ್ನ ಮಾತು ಹೇಳಿ - ಏ ಮರ್ಕಟ ನಿವಾಳಿ' ಎಂದು ಬಯ್ಯುವ ರೀತಿ - ಇವೆಲ್ಲ ಇನ್ನೆಲ್ಲೂ ಸಿಗಲಾರದ ಒಂದು ಸಾಹಿತ್ಯದ ಸೊಗಸನ್ನು ನಮಗೆ ಪರಿಚಯಮಾಡಿಕೊಡುತ್ತವೆ.
ಪಾರ್ತಿಸುಬ್ಬನ `ಕುಂಭಕರ್ಣಕಾಳಗ' ಪ್ರಸಂಗವು ಒಳ್ಳೆಯ ಒಂದು ಸಾಹಿತ್ಯ ರೂಪಕ. (ಈಗ ಕುಂಭಕರ್ಣಕಾಳಗದ ಪ್ರಸಂಗ ಬಯಲಾಟವಾಗುವ ಸಂಭವವೇ ತೀರ ವಿರಳವಾಗಿದೆ.) ಇಲ್ಲಿ ವಿಶೇಷವೆಂದರೆ ಅದ್ಭುತ ಮತ್ತು ಹಾಸ್ಯರಸಗಳು ಒಂದರೊಡ ನೊಂದು ಮಿಶ್ರವಾಗಿ - ಹಾಲು ಜೇನು ಮಿಶ್ರಣದಂತೆ - ಏಕಕಾಲದಲ್ಲಿ ನಮ್ಮ ಮೇಲೆ ಸಮಾನಪರಿಣಾಮವನ್ನುಂಟುಮಾಡುತ್ತವೆ. ಆ ಭಾಗದ ಬಯಲಾಟ ಬೇಡ - ಹಾಗೆಯೇ ಒಮ್ಮೆ ಓದಿ ನೋಡಿದರೆ ಸಾಕು, ಕಾವ್ಯಸೌಂದರ್ಯ ನಮ್ಮನ್ನು ಸೆರೆಹಿಡಿಯುತ್ತದೆ.
ರಾವಣನಿಗೆ ಸೋಲು ಬಂತು. ಇನ್ನು ಕುಂಭಕರ್ಣನನ್ನು ಎಬ್ಬಿಸದೆ ಸಾಧ್ಯವಿಲ್ಲ ಎಂಬ ಸ್ಥಿತಿಯಾಯಿತು. ಹೇಗೆ ಎಬ್ಬಿಸುವುದು? ಸುಬ್ಬನ ಕಾವ್ಯ ಹೀಗೆ ಆರಂಭವಾಗುತ್ತದೆ:
ಏನುಪಾಯದಿ ನಿದ್ರೆಯನು ಸು-
ಜ್ಞಾನಗೊಳಿಸುವುದೆನಲು ದನುಜ ಪ್ರ
ಧಾನಿಗಳು ನಡೆತಂದರಾಗ ಸಮುದ್ರಘೋಷದಲಿ
ಜೇನುನೊಣಗಳು ಮುತ್ತುವಂದದಿ
ದಾನವರು ಕೂಗಿದರು ಕಿವಿಯಲಿ
ಬಾನು ಬಿರಿಯುವ ಹಾಗೆ ಹೊಯ್ದರು ವಾದ್ಯಭೇರಿಗಳ
ಏಳದಿರಲು ನಿದ್ರೆಯು ತಿಳಿಯದೆ | ಏಳದಿರಲು ಉಸುರ
ಗಾಳಿ ತಡೆದು ಹೇ | ರಾಳ ಸೇರ್ಮೆಣಸಿನ
ಧೂಳನು ಖಾರದ | ಬಾಳ್ ಸಾಸಿವೆ ಮೂಗಿ
ನಾಳದಿ ಪೊಗಿಸಿ ಕ | ರಾಳ ರಕ್ಕಸರು ಬಂದು
ಆಳಿ ಬೊಬ್ಬಿರಿಯೆ || ಏಳದಿರಲು
ಆನೆಕುದುರೆ ಕಾ | ಡ್ಗೋಣ ಕರಡಿ ಕಪಿ
ಶ್ವಾನಗಳೆನ್ನುವ | ನಾನಾ ಮೃಗಗಳ |
ಮೂಗಿಲಿ ಪೊಗಿಸುತ | ಗೋಣೊತ್ತುತಲಾ |
ದಾನವತತಿಯಂ | ದೇನೆಸಗಿದರೂ | ಏಳದಿರಲು ||
ಮೂಗಿನೊಳಗೆ ಪೊ | ಕ್ಕಾಗಲೆ ಮೃಗಗಳು
ಸಾಗುವ ಬಾಯಲಿ | ಬೇಗ ಇಳಿದಯ್ತರೆ |
ಯೋಗವನೆಬ್ಬಿಸು | ವಾಗಮ ಕಾಣದೆ
ಪೋಗಿ ದಶಾಸ್ಯನಿ | ಗಾಗ ಪೇಳಿದರು ||
ಆಗ ರಾವಣನಿಗೆ ಬ್ರಹ್ಮನ ಮೇಲೆಯೇ ಸಿಟ್ಟು ಬರುತ್ತದೆ. ತಮ್ಮಗೆ ನಿದ್ದೆಯ ಕೊಟ್ಟಾ | ಬೊಮ್ಮನ ಕರೆ ಎನ್ನುತ್ತಾನೆ. ಬ್ರಹ್ಮ ಬಂದು ಕಮಂಡಲುವಿನ ನೀರೆರೆಚಿದಾಗ ಕುಂಭಕರ್ಣನ ನಿದ್ದೆ ಎಚ್ಚರವಾಗುತ್ತದೆ. ಈಗ ಹಸಿವಿನ ಕಾಟ ತಡೆಯಲಾಗುವುದಿಲ್ಲ. ಕುಂಭಕರ್ಣ ಕೇಳುತ್ತಾನೆ:
ಆರೆಲೋ ದಾನವರೆನ್ನ | ಆರು ತಿಂಗಳ ನಿದ್ರೆಯನು |
ಗಾರುಮಾಡ್ಯೆಬ್ಬಿಸಿದಂತ ಧೀರನಾರಯ್ಯ ||
ತೋರಿ ಭೋಜನಕ್ಕೆ ಸೋಪ | ಸ್ಕಾರಗಳ ತಂದು ಒಂದೊಂದ
ಭೂರಿಬೇಗ ಬರಲಿ ಜಠರಪಾರಣೆಗಿಂದು ||
ತಿಂಬೆನೀರೇಳುಲೋಕದ | ಕುಂಭಿನಿಯೊಳಿದ್ದಂಥವರ |
ಕುಂಭಕರ್ಣ ದೈತ್ಯ ತಾನು | ಯಾರೆಂಬುದರಿಯಿರೆ ||
ಉಣ್ಣುವ ಮೊದಲೆ ಮಾತಲ್ಲ | ಅಣ್ಣ ರಾವಣೇಂದ್ರ ಬಲ್ಲ
ಸನ್ನಾಹವ ಮಾಡಿರೀಗ | ತನ್ನಿರೋ ಬೇಗ |
- ಎಂದು ಕುಂಭಕರ್ಣ ಹಸಿವಿನಿಂದ ಬೊಬ್ಬಿಡುತ್ತಾನೆ. ರಾವಣ ಅವನಿಗೆ ಬೇಕಾದ ಭಕ್ಷ್ಯಭೋಜ್ಯಗಳನ್ನು ಕಳುಹಿಸಿಕೊಡುತ್ತಾನೆ.
ಹೆಂಡಮಾಂಸದ ಗಡಿಗೆ ಹೆಡಿಗೆಯ |
ಮಂಡೆಗಳ ಹೊರಿಸುವ ತಂಡ
ತಂಡದಿ ಕಳುಹಿದನು ಬಹು | ಭಂಡಿಗಳಲಿ ||......
ಸಣ್ಣಕ್ಕಿಯನ್ನ ಶಾವಿಗೆ ಕಡುಬುಘೃತವು |
ಎಣ್ಣೋರಿಗೆಯು ಹೋಳಿಗೆಯು ಅತಿರಸವ ||
ಸುಕ್ಕಿನುಂಡೆ ಸಕ್ಕರೆಯು ಪೆರಡಿ ಪಾಯಸವ.......
ತುಪ್ಪದಲಿ ಹುರಿದ ತಾಳಿಲವ ತಂಬುಳಿಯ |
ಅಪ್ಪಕಜ್ಜಾಯ ಬಾಳುಕವ ಸೆಂಡಿಗೆಯ ||
ಅದರಿಂದ ತೃಪ್ತಿಯಾಗದೆ ಕುಂಭಕರ್ಣ |
ಮುದಿಯಾನೆ ಕುರಿಕೋಣಗಳ ತಿಂದ ಪೂರ್ಣ ||
ಕದನಕೊದಗದ ಹೇಡಿ ಕುದುರೆಗಳ ತಿಂದ |
ಬದಲು ಸತ್ತೆಮ್ಮೆ ಸಾವಿರದ ನೂರೊಂದ ||
ಕತ್ತೆಗಳ ಕೊಂದು ತಂದಿತ್ತರೈನೂರು |
ಮತ್ತು ಹಸುವಡಗದಿರೆ ಹೇಳಿದರು ದೂರು ||
ಏನು ಕೊಟ್ಟರೂ ಕುಂಭಕರ್ಣನ ಹಸಿವು ಅಡಗುವುದಿಲ್ಲ. ಕೊನೆಗೆ ಶುಕ್ರಾ ಚಾರ್ಯರು ಒಂದಿಷ್ಟು ಮೊಸರನ್ನವನ್ನು ಜಪಮಾಡಿ ಮಂತ್ರಿಸಿ ಕೊಡುತ್ತಾರೆ. ಅದನ್ನು ತಿಂದಾಗ ಅವನ ಹಸಿವೆಯಡಗುತ್ತದೆ. ಇಲ್ಲಿ ಕುಂಭಕರ್ಣನ ಒಂದು ಅದ್ಭುತಚಿತ್ರಣ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ.
ಯಕ್ಷಗಾನ ದೇಸಿಯೂ ಹೌದು; ಮಾರ್ಗವೂ ಹೌದು. ದೇಸಿಮಾರ್ಗಗಳೆರಡರ ಮಿಶ್ರಣವೇ ಯಕ್ಷಗಾನದ ಸೊಬಗು. ಅದು ಶಾಸ್ತ್ರೀಯತೆಯ ಲೇಪವನ್ನು ಪಡೆದ ಜಾನ ಪದ ಕಲೆ. ಇಲ್ಲಿ ವೃತ್ತಗಳೂ ಇವೆ; ಜನಪದ ಹಾಡುಗಳೂ ಇವೆ. ಸುಬ್ಬನ ರಾಮಾಯಣ ಆರಂಭವಾಗುವುದೇ ಮಾಲಿನೀವೃತ್ತದಿಂದ. ಮುಂದೆ ಅಲ್ಲಲ್ಲಿ ಶಾರ್ದೂಲ ಮತ್ತೇಭ ವಿಕ್ರೀಡಿತಗಳೂ ಬರುತ್ತವೆ.
ದೇವದೇವ ದಯಾಸಾಂದ್ರ;
ಪಾಹಿ ಸಾರಸಭವ ದೇವದೇವ;
ತ್ರಾಹಿ ಋಷಿತಿಲಕಾಗ್ರಣಿ ವಂದನಂ;
ಅಜಕುಮಾರ ಧೀರವೀರ ಬಾಹು ವಿಕ್ರಮ;
ರಾಘವ ನರಪತೇ ಶೃಣು ಮಮ ವಚನಂ
-ಮುಂತಾದ ಸಂಸ್ಕೃತದ ವಾಕ್ಯಗಳೂ ಇಲ್ಲಿವೆ.
`ಏನ್ಮ್ಯಾ ರಾವಣ ನೀನ್ಮ್ಯಾ ಸೀತೆಯ
ಕಾಣದ ಹಾಂಗೆ ಕದ್ದು ತಂದೆಯೇನ್ಮ್ಯಾ.....'
-ಮುಂತಾದ ಜನಪದಶೈಲಿಯ ಹಾಡುಗಳೂ ಇಲ್ಲಿವೆ. ಚೌಕಿಯಲ್ಲಿ ಸ್ವಸ್ತಿಕವನ್ನು ಬರೆದು ಆರತಿ ಮಾಡುವ ಆರ್ಯಪದ್ಧತಿಯೂ ಇಲ್ಲಿದೆ; ದೇವರ ಪ್ರಸಾದ ಸಿಕ್ಕಿದೊಡನೆ ಸಿರಿಮುಡಿ ಗಂಧಪ್ರಸಾದ ದಕ್ಕಿತ್ತೋ ದಕ್ಕಿತ್ತು ಎನ್ನುವ ಜಾನಪದ ಉದ್ಗಾರವೂ ಇಲ್ಲಿದೆ.
ಸೇತುಬಂಧದಲ್ಲಿ ವಿಭೀಷಣ ರಾವಣನಿಗೆ ನೀತಿ ಹೇಳುವಾಗ -
`ನೀನೇಕೆ ಮರುಳಪ್ಪುದಣ್ಣ | ಇನ್ನು |
ಜಾನಕಿಯನ್ನು ಬಿಟ್ಟು ಕೊಡುವುದೆ ಬಣ್ಣ |'
- ಎಂಬ ಹಾಡಿನ ಮುಂದಿನ ಸಾಲುಗಳಲ್ಲಿ
ಕೊಬ್ಬಿದುಮ್ಮದವೆಲ್ಲ ಬಿಡುಗು | ಕಪಿ |
ಮಾರ್ಬಲ ಬಂದೆಲ್ಲ ಮಂಡೆಯ ಬಡಿಗು |
ಪರ್ಬಿ ಪಟ್ಟಣವೆಲ್ಲ ಸುಡುಗು | ಜಗ -
ದಬ್ಬೆ ಜಾನಕಿಯಿಂದ ಸೌಭಾಗ್ಯ ಕೆಡುಗು ||
- ಎಂಬಲ್ಲಿ `ಬಿಡುಗು, ಬಡಿಗು, ಸುಡುಗು, ಕೆಡುಗು' ಎಂದು ಮುಂತಾಗಿ ನಮ್ಮೂರ ಹವ್ಯಕಭಾಷೆಯ ಸೊಗಸನ್ನು ಕಾಣುತ್ತೇವೆ. ಅದೇ ಹಾಡಿನ ಎರಡನೇ ಪದ್ಯದಲ್ಲಿ ತುಳುಭಾಷೆಯ ಸೊಗಡೂ ಇದೆ :
ಸೀತಾದೇವಿಯ ಕರಕೊಣುಕು | ಒಳ್ಳೆ
ಜಾತಿ ಮಾಣಿಕ್ಯ ಮುತ್ತುಗಳ ತೆಕ್ಕೊಣುಕು |
ಈ ತಪ್ಪ ಪಾಲಿಸೆಂದೆನಕು | ರಘು
ನಾಥ ಸ್ವಾಮಿಯ ಪಾದಗಳ ಕಟ್ಟಿಕೊಣುಕು ||
ಇಲ್ಲಿ ಕರಕೊಣುಕು, ತೆಕ್ಕೊಣುಕು, ಕಟ್ಟಿಕೊಣುಕು - ಮುಂತಾದ ಪದಗಳು ಲೆತ್ತೊಣುಕೊ, ದೆತ್ತೊಣುಕೊ, ಕಟ್ಟೊಣುಕೊ ಮುಂತಾದ ತುಳುಭಾಷಾಶೈಲಿಯ ಸಾಮ್ಯ ವನ್ನು ಹೊಂದಿರುವಂತೆ ಕಾಣುತ್ತದೆ. ಹಳೆಗನ್ನಡದಲ್ಲಿ ಈ ಪ್ರಯೋಗಗಳು ಇವೆಯೋ ನನಗೆ ನೆನಪಿಲ್ಲ. ಇದ್ದರೆ ಬಲ್ಲವರು ತಿಳಿಸಬೇಕು.
ಯಕ್ಷಗಾನಸಾಹಿತ್ಯದಲ್ಲಿ ಕಂಡುಬರುವ ವಿವಿಧ ಛಂದಸ್ಸುಗಳ ಬಳಕೆಯ ಕ್ರಮ, ಚತ್ತಾಣ, ಬೆದಂಡೆಗಬ್ಬ ಮುಂತಾದ ಕನ್ನಡದ ಪ್ರಾಚೀನಕಾವ್ಯಪ್ರಕಾರಗಳ ಪ್ರಭಾವದಿಂದ ಬಂದುದಾಗಿರಬೇಕು.
ಪಾಡುಗಳಿಂದಂ ತರಿಸಲೆ |
ಮಾಡಿದುದಂ ಪಾಡುಗಬ್ಬಮೆಂದು ಬುರ್ಧ ಕೊಂ |
ಡಾಡುವರದರಿಂ ಮೇಲ್ |
ವಾಡುಂ ರೂಢಿಯ ಬೆದಂಡೆಗಬ್ಬಮುಮಕ್ಕುಂ ||
ಯಕ್ಷಗಾನ ಪ್ರಸಂಗಸಾಹಿತ್ಯಕ್ಕಿರುವ ಈ ಪರಂಪರೆ - ಕೇರಳದ ಕಥಕ್ಕಳಿಯ ಪೂರ್ವರೂಪವಾದ ರಾಮನಾಟ್ಟದ ಸಾಹಿತ್ಯಪ್ರಕಾರಕ್ಕೆ ಇಲ್ಲ. ಆದರೂ ರಾಮನಾಟ್ಟದ ಕೆಲವು ಹಾಡುಗಳೂ - ಯಕ್ಷಗಾನ ರಾಮನಾಟ್ಟದ ಕೆಲವು ಹಾಡುಗಳೂ ಒಂದೇ ರೀತಿಯಾಗಿವೆ ಏಕೆ? ಯಾರಿಂದ ಯಾರು ಎರವಲು ಪಡೆದುದು - ಎಂಬುದು ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಮಲೆಯಾಳ ರಾಮನಾಟ್ಟದ ಕಾಲವೂ, ಯಕ್ಷಗಾನ ರಾಮಾಯಣ ಪ್ರಸಂಗಗಳ ಕಾಲವೂ - ಹೆಚ್ಚು ಕಡಮೆ ಸಮಕಾಲೀನವಾಗಿಯೇ ಇವೆ, ಅಲ್ಲಿ ರಾಮನಾಟ್ಟದ ಕಾಲದ ಬಗ್ಗೆಯೂ ಕವಿಚರಿತ್ರೆಕಾರರಲ್ಲಿ ಗೊಂದಲವಿದೆ. ಇಲ್ಲಿ ಸುಬ್ಬನ ಕಾಲದ ಬಗ್ಗೆಯೂ ಭಿನ್ನಾಭಿಪ್ರಾಯಗಳಿವೆ. ಈ ಬಗ್ಗೆ ಸರಿಯಾದ ಅಧ್ಯಯನ ಇನ್ನೊಮ್ಮೆ ನಡೆಯಲೇಬೇಕಾಗಿದೆ.
ಈಗ ನಿರ್ಧಾರವಾಗಿರುವುದು - ಮಲೆಯಾಳದ ರಾಮನಾಟ್ಟದಿಂದ ಸುಬ್ಬನು ಸ್ಫೂರ್ತಿಪಡೆದು ರಾಮಾಯಣಪ್ರಸಂಗವನ್ನು ಬರೆದದ್ದು - ಎಂದೇ ಆಗಿದ್ದರೂ, ನನ್ನ ಅನಿಸಿಕೆ ಇನ್ನೂ ಆ ವಿಷಯದಲ್ಲಿ ಡೋಲಾಯಮಾನವಾಗಿಯೇ ಇದೆ. ಯಾಕೆಂದರೆ ಈ ನಿರ್ಧಾರದ ಪ್ರಕಾರ ಯಕ್ಷಗಾನ ಪ್ರಸಂಗಸಾಹಿತ್ಯದ ಸ್ವರೂಪ ಮಲಯಾಳದಿಂದ ಕನ್ನಡಕ್ಕೆ ಬಂದದ್ದು ಎಂದು ನಾವು ಒಪ್ಪಿಕೊಳ್ಳದೆ ನಿರ್ವಾಹವಿಲ್ಲ. ಆದರೆ ಕನ್ನಡದಲ್ಲಿ ನಮಗೆ ಚತ್ತಾಣ, ಬೆದಂಡೆಗಬ್ಬ, ಬಾಜನೆಗಬ್ಬಗಳ ಪರಂಪರೆಯಿದೆ. ಮಲಯಾಳ ಸಾಹಿತ್ಯದಲ್ಲಿ ಅಂಥಾ ಪರಂಪರೆಯನ್ನೇ ನಾವು ಕಾಣುವುದಿಲ್ಲ. ಅಲ್ಲಿ ಕ್ರಿ. ಶ. ಐದನೇ ಶತಮಾನದಲ್ಲಿ `ಪಾಟ್ಟು' ಎಂಬ ಸಾಹಿತ್ಯಪ್ರಕಾರವೂ ಎಂಟನೇ ಶತಮಾನದಲ್ಲಿ `ಮಣಿಪ್ರವಾಳ' ವೆಂಬ ಸಾಹಿತ್ಯಪ್ರಕಾರವೂ, ಹದಿನೈದನೇ ಶತಮಾನದಲ್ಲಿ ಸಂದೇಶಕಾವ್ಯಗಳ ರಚನೆಯೂ ಅಲ್ಲದೆ, ಬೇರೆ ಈ ಶೈಲಿಯ ಸಾಹಿತ್ಯಪ್ರಕಾರವೇ ಅಲ್ಲಿಲ್ಲ. ಮಲೆಯಾಳ ವಿದ್ವಾಂಸರ ಆಶಯದಂತೆ `ಕ್ರಿಯೆಗಳನ್ನು ವೃತ್ತಗಳ ಮೂಲಕವೂ, ಸಂಭಾಷಣೆಯನ್ನು ಹಾಡುಗಳ ಮೂಲಕವೂ ಹೇಳುವ ಈ ಶೈಲಿ ತಮಗೆ ಗೀತಗೋವಿಂದದಿಂದ ಬಂದುದು' ಎಂದು ಅವರು ಹೇಳುತ್ತಾರೆ. ಸೂಕ್ಷ್ಮವಾಗಿ ನಾವು ಇದನ್ನು ಪರಿಶೀಲಿಸಿದರೆ ಈ ಎರಡು ಪದ್ಧತಿಗಳಲ್ಲೂ 'ಕೊಳ್ಕೊಡುಗೆ' ನಡೆದದ್ದು ಸತ್ಯವೆ. ಅಂತೂ ಸದ್ಯಕ್ಕೆ ಒಂದೇ ಕಾಲಘಟ್ಟದಲ್ಲಿ ಈ ಎರಡು ಸಾಹಿತ್ಯಪ್ರಕಾರಗಳ ಸೃಷ್ಟಿಯೂ ಆಗಿದೆಯೆಂಬುದನ್ನು ನಾವು ಒಪ್ಪಿಕೊಳ್ಳಬೇಕಾಗಿದೆ.1
[ಪೂರ್ವಪ್ರಕಟಿತ - `ಪೊಂಗದಿರು', ಪುಣಿಂಚತ್ತಾಯ ಷಷ್ಟ್ಯಬ್ದ ಅಭಿನಂದನಗ್ರಂಥ, 1998 - ಇದರಲ್ಲಿ ಪುನರ್ಮುದ್ರಿತ]
ನೃತ್ಯ, ಗಾಯನ, ಚಿತ್ರ, ಶಿಲ್ಪ, ಸಾಹಿತ್ಯ, ಎಂಬೀ ಐದು ಸುಂದರಕಲಾರೂಪಗಳ ಸಮ್ಮಿಳನವೇ ಯಕ್ಷಗಾನ. ಇವುಗಳಲ್ಲಿ ಕೊನೆಯದಾದ ಸಾಹಿತ್ಯ ಅಥವಾ ಮಾತುಗಾರಿಕೆ ಯನ್ನು ಸಂಪೂರ್ಣವಾಗಿ ಉಪೇಕ್ಷಿಸಿ, ಮೊದಲನೆಯದಾದ ಕುಣಿತಕ್ಕೆ ಅಥವಾ ನಾಟ್ಯ ಕಲೆಯ ಅಂಶಕ್ಕೆ ಪ್ರಾಶಸ್ತ್ಯವನ್ನಿತ್ತು, ಖ್ಯಾತಿಯನ್ನು ಪಡೆದ ಕಲೆಯೇ ಕಥಕ್ಕಳಿ!1 ಕಥಕ್ಕಳಿ ಯಲ್ಲಿ ಮಾತುಗಾರಿಕೆ ಇಲ್ಲದಿದ್ದರೂ, ಸಮಗ್ರ ಕಥೆಯ ಶರೀರರೂಪವಾದ ಪ್ರಸಂಗಸಾಹಿತ್ಯ ವಂತೂ ಇದ್ದೇ ಇದೆ. ಹೀಗೆ ಮೇಲುನೋಟಕ್ಕೆ ಎರಡರಲ್ಲೂ ಈ ಐದು ಅಂಶಗಳಿದ್ದರೂ, ಇವೆರಡೂ ಬೇರೆ ಬೇರೆಯಾದ ಎರಡು ಸಮಷ್ಟಿ ಕಲೆಗಳು. ಆದರೂ ಇವುಗಳೊಳಗಿನ ಸಾಮ್ಯ-ವೈಷಮ್ಯಗಳನ್ನು ಒಂದಿಷ್ಟು ವಿಶ್ಲೇಷಣೆ ನಡೆಸುವ ಯತ್ನವೇ ಈ ಲೇಖನದ ಗುರಿ.
ಕಥಕ್ಕಳಿಯ ಕುರಿತು ವಿಮರ್ಶಿಸುವಾಗ, ಕೇರಳದ ಅತಿಪ್ರಾಚೀನ ಕಲೆಯಾದ 'ಮೋಹಿನಿಯಾಟ್ಟ'ದ ಕುರಿತು ಪ್ರಸ್ತಾವಿಸದಿರಲು ಸಾಧ್ಯವಿಲ್ಲ. ಏಕೆಂದರೆ ಪುರಾತನ ಕಥಕ್ಕಳಿ ಯಲ್ಲಿ ಮೋಹಿನಿಯಾಟ್ಟದ ಕೆಲವು ಅಂಶಗಳ ಅನುಕರಣೆಯಿದ್ದುದಾಗಿ ಕಂಡು ಬಂದಿದೆ ಯೆಂದು ವಿಮರ್ಶಕರ ಅಭಿಪ್ರಾಯ. ಕಥಕ್ಕಳಿಯು ಮೋಹಿನಿಯಾಟ್ಟದಿಂದ ಪ್ರಭಾವಿತ ವಾದಂತೆ 'ಚಾಕ್ಯಾರಕೂತ್ತಿ'ನಿಂದಲೂ ಪ್ರಭಾವಿತವಾಗಿತ್ತೆನ್ನಬಹುದು. ಚಾಕ್ಯಾರಕೂತ್ತು ಎಂದರೆ ನಮ್ಮೂರಿನಲ್ಲಿ ಕಥಾಕಾಲಕ್ಷೇಪಗಳಿದ್ದ ಹಾಗೆ. ಎರಡಕ್ಕೂ ಪುರಾಣಕಥೆಗಳೇ ಜೀವಾಳ. ಆದರೆ ವ್ಯತ್ಯಾಸವಿಷ್ಟೆ: ಚಾಕ್ಯಾರಕೂತ್ತಿನಲ್ಲಿ ಅಭಿನಯಕ್ಕೆ ಹೆಚ್ಚಿನ ಪ್ರಾಧಾನ್ಯವಿದೆ. ಪದ್ಯಗಳ ಅಥವಾ ಶ್ಲೋಕಗಳ ಅರ್ಥವನ್ನು ಮುಖಭಾವದ ಮೂಲಕವೂ, ಹಸ್ತಮುದ್ರೆಯ ಮೂಲಕವೂ ವ್ಯಕ್ತಪಡಿಸುವ ಪದ್ಧತಿಯು ಪುರಾತನ ಚಾಕ್ಯಾರಕೂತ್ತಿನಲ್ಲಿತ್ತು.
ಕಥಕ್ಕಳಿಯ ಅಭಿನಯಗಳಿಗೂ, ಚಾಕ್ಯಾರಕೂತ್ತಿನ ಅಭಿನಯಗಳಿಗೂ ಬಹಳಷ್ಟು ಸಾಮ್ಯ ವಿತ್ತೆಂಬುದು ವಿದ್ವಾಂಸರ ಅಭಿಪ್ರಾಯ.(ಈ ಮಾತನ್ನು ಇಲ್ಲಿ ಪ್ರಸ್ತಾವಿಸುವುದಕ್ಕೆ ಒಂದು ವಿಶೇಷಕಾರಣವಿದೆ. ಕ್ರಿ.ಶ. 1904ನೆಯ ಇಸವಿಯಲ್ಲಿ ಬೆಂಗಳೂರಿನ ಶ್ರೀ ವಿಜಯಲಕ್ಷ್ಮೀ ಮುದ್ರಾಕ್ಷರಶಾಲೆಯಲ್ಲಿ ಮುದ್ರಿತವಾದ 'ಯಕ್ಷಗಾನ ಹರಿಗೋಲು ಕಥೆ - ಗರುಡ ದರ್ಪಭಂಗ ಮತ್ತು ಪ್ರದ್ಯುಮ್ನ ಸ್ವಯಂವರ' ಎಂಬ ಪ್ರಸಂಗಪುಸ್ತಕದ ಒಂದು ಹಳೆಯ ಪ್ರತಿ ಇತ್ತೀಚೆಗೆ ನನಗೆ ಲಭ್ಯ ವಾಯಿತು. ಅದರ ಮುಖಪುಟದಲ್ಲಿ ಹೀಗೆ ಮುದ್ರಿಸಲಾಗಿದೆ :
ಯಕ್ಷಗಾನ ಹರಿಗೋಲು ಕಥೆಯೆಂಬ ಜಲಕ್ರೀಡೆ ಮತ್ತು ಗರುಡ ದರ್ಪಭಂಗವು ಮತ್ತು ಪ್ರದ್ಯುಮ್ನಸ್ವಯಂವರವು ಸಹ ಈ ಮೂರು ಕಥೆಗಳು ಸಕಲ ಭಕ್ತಜನೋಪಕಾರಾರ್ಥವಾಗಿ ಹರಿಕಥೆ ಮಾಡುವವರಿಗೆ ಸುಲಭವಾಗಿ ಯಿರುವಂತೆ - ಬ್ರಂಹ್ಮಶ್ರೀ ಹೆಬ್ಬೂರು ಹನುಮಂತದಾಸರಿಂದ ರಚಿಸಲ್ಪಟ್ಟು - ಈ ಪುಸ್ತಕದ ಯಾವತ್ತು ಹಕ್ಕು ಬೆಂಗಳೂರು ಜಾದೌ ನರಸಿಂಗರಾಯರ ಕುಮಾರರಾದ ಬುಕ್ ಸೆಲರ್ ಹೇಮಾಜೀರಾಯರಿಗೆ ಕೊಡಲ್ಪಟ್ಟಿದೆ. ಪಂಡಿತ ರಿಂದ ಪರಿಶೋಧಿಸಲ್ಪಟ್ಟು - 1ನೇ ಛಾಪಾ 1000 ಪ್ರತಿಗಳು.......
ಹರಿಕಥೆಗೂ ಯಕ್ಷಗಾನಕ್ಕೂ ಇಲ್ಲಿ ಒಂದು ರೀತಿಯ ಸಂಬಧವನ್ನು ಕಲ್ಪಿಸಿದ್ದು ದಾಗಿ ಕಂಡುಬರುತ್ತದೆ. ಚಾಕ್ಯಾರಕೂತ್ತಿನಿಂದ ಕಥಕ್ಕಳಿ ಪ್ರಭಾವಿತವಾದಂತೆ, ಹರಿಕಥಾ ಸಾಹಿತ್ಯದಿಂದ ಯಕ್ಷಗಾನಸಾಹಿತ್ಯವೂ ಪ್ರಭಾವಿತವಾಗಿರಬಹುದೇ - ಎಂಬ ಸಂಶಯ ಮೂಡಲು ಇದೊಂದು ಆಸ್ಪದವಾಗುತ್ತದೆ.
ಕಥಕ್ಕಳಿಯೆಂಬ ಕಲಾಸಂಪ್ರದಾಯದ ಪುರಾತನವಾದ ಹೆಸರು 'ರಾಮನಾಟ್ಟಂ' ಎಂದಾಗಿತ್ತು. ಆ ಕಾಲದಲ್ಲಿ ಇದು ಅಷ್ಟೊಂದು ಶಾಸ್ತ್ರೀಯವಾದ ರೂಪವನ್ನು ತಾಳಿರಲಿಲ್ಲ. ಅಲ್ಲದೆ ಆಗ ಹಿಮ್ಮೇಳದಲ್ಲಿ ಚೆಂಡೆಯ ಬಳಕೆಯೂ ಇದ್ದಿರಲಿಲ್ಲ. ಕಾಲಕ್ರಮೇಣ ಈ ನೂತನಕಲೆಯು ವಿದ್ವಜ್ಜನರನ್ನು ಆಕರ್ಷಿಸಿ, ಅನೇಕ ಸುಧಾರಣೆಗಳನ್ನು ಹೊಂದಿ ಈಗಿನ ರೂಪವನ್ನು ಪಡೆಯಿತೆನ್ನಬಹುದು.
ನಮ್ಮ ಯಕ್ಷಗಾನಕಲಾಪದ್ಧತಿಗೂ 'ಯಕ್ಷಗಾನ'ವೆಂಬ ಹೆಸರು ಇತ್ತೀಚೆಗೆ ಬಂದು ದೆಂದು ಊಹಿಸಬೇಕಾಗುತ್ತದೆ. ಆಟ, ಬಯಲಾಟ, ದೊಡ್ಡಾಟ, ಭಾಗವತರಾಟ, ಮುಂತಾದ ಹೆಸರುಗಳು ಅದರ ಜಾನಪದ ಹೆಸರುಗಳಾಗಿವೆ. ಬಹಳ ಹಿಂದೆ ಆ ಕಲಾಸ್ವರೂಪದ ಸಂಕುಚಿತವಾದ ರೂಪಕ್ಕೆ 'ದಾನಾವರ್ತ' ಎಂಬೊಂದು ಹೆಸರೂ ಇದ್ದಿತು. (ದಾನಾವರ್ತವು ಒಂದು ಪುಟ್ಟಮೇಳದಂತೆ ಎನ್ನಬಹುದು. ದಾನಾವರ್ತದಲ್ಲಿ ಒಂದು ಸ್ತ್ರೀವೇಷ, ಒಂದು ಪುರುಷವೇಷ, ಒಬ್ಬ ಭಾಗವತ, ಒಬ್ಬ ಮದ್ದಳೆಗಾರ, ಒಬ್ಬ ಶ್ರುತಿಗಾರ, ಹೀಗೆ ಐದು ಜನರು ಇರುತ್ತಾರೆ. ಚೆಂಡೆಯ ಬಳಕೆ ಇದ್ದಿರಲಿಲ್ಲ. ಸಣ್ಣ ಸಣ್ಣ ಕಥಾಪ್ರಸಂಗಗಳನ್ನು ಮಾತ್ರ ಈ ತಂಡಕ್ಕೆ ಪ್ರದರ್ಶಿಸಲು ಸಾಧ್ಯವಾದೀತಷ್ಟೆ - ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ರಾತ್ರಿಯಿಡೀ ಮನೆಯಿಂದ ಮನೆಗೆ ಸಂಚರಿಸುತ್ತಾ, ನಿದ್ರೆ ಮಾಡಿದ ಮಂದಿಯನ್ನೆಬ್ಬಿಸಿ, ಒಂದಿಷ್ಟು ಕಲಾರಸವನ್ನು ಉಣ್ಣಿಸಿ, ತಕ್ಕ ಸಂಭಾವನೆಗಳನ್ನು ಪಡೆದುಕೊಂಡು ಹೋಗುವುದು ದಾನಾವರ್ತ ಕಲಾವಿದರ ಕಸುಬು.)
'ಆಟ' ಎಂಬ ಪದವು 'ಆಟ್ಟ' ಎಂಬ ರೂಪದಲ್ಲಿ ಮಲೆಯಾಳದಲ್ಲೂ, ರೂಢಿ ಯಲ್ಲಿದೆ. ರಾಮನಾಟ್ಟ, ಕೃಷ್ಣಾಟ್ಟ, ಕೂಡಿಯಾಟ್ಟ, ಮೋಹಿನಿಯಾಟ್ಟಗಳು ಕೇರಳದ ಪ್ರಸಿದ್ಧ ಪುರಾತನಕಲೆಗಳು. ಅಂತೂ ಕನ್ನಡನಾಡಿನ ಆಟವೆಂಬ ಕಲೆ ಅಥವಾ ಬಯಲಾಟವೆಂಬ ಕಲೆಯು 'ಯಕ್ಷಗಾನಕಲೆ'ಯೆಂಬ ಸುಸಂಸ್ಕೃತವಾದ ಹೆಸರನ್ನು ಪಡೆದದ್ದು ಇತ್ತೀಚೆಯ ಶತಮಾನಗಳಲ್ಲಿ ಎನ್ನಬಹುದು.
ಯಕ್ಷಗಾನವೆಂಬ ಶಬ್ದವನ್ನು ತೆಲುಗುಸಾಹಿತ್ಯದಲ್ಲಿಯೂ ನಾವು ಕಾಣುತ್ತೇವೆ. ತೆಲುಗುಸಾಹಿತ್ಯದಲ್ಲಿ ಕನ್ನಡ ಯಕ್ಷಗಾನಪ್ರಸಂಗಗಳನ್ನೇ ಬಹುತೇಕವಾಗಿ ಹೋಲುವ ಅನೇಕ ಪ್ರಸಂಗಗಳಿವೆ. ಅದನ್ನು ಅವರು ನಾಟಕವೆಂಬುದಾಗಿಯೂ ಸುಸಂಸ್ಕೃತವಾದ ಇನ್ನೊಂದು ಹೆಸರಿನಿಂದ ಕರೆಯುವುದಿದೆ. ಉದಾ: ಉಷಾಪರಿಣಯಮು ನಾಟಕಮು - ಯಕ್ಷಗಾನ ಪ್ರಬಂಧಮು, ಚಿತ್ರಾಂಗಿ ಸಾರಂಗಧರ ನಾಟಕಮು ಯಕ್ಷಗಾನಮು, ಗರುಡಾಚಲ ನಾಟಕಮು ಯಕ್ಷಗಾನಮು ಇತ್ಯಾದಿ ಕೃತಿಗಳನ್ನು ನಾವು ಪರಿಶೀಲಿಸ ಬಹುದು. ಹಾಗೆಂದು ಅವು ಗದ್ಯನಾಟಕಗಳೇನೂ ಅಲ್ಲ. ನಮ್ಮ ಕನ್ನಡದ ಯಕ್ಷಗಾನ ಪ್ರಸಂಗಗಳ ಹಾಗೆಯೇ ಇರುವ ಪ್ರಸಂಗಗಳು. ಯಕ್ಷಗಾನಪ್ರಸಂಗಗಳ ಸರ್ವಸಾಮಾನ್ಯ ವಾದ ಎಲ್ಲ ಲಕ್ಷಣಗಳನ್ನೂ ನಾವು ಈ ಕೃತಿಗಳಲ್ಲಿ ಗುರುತಿಸಬಹುದು.
ಮಲೆಯಾಳದಲ್ಲಿ 'ರಾಮನಾಟ್ಟ'ವಿದ್ದಂತೆ ತೆಲುಗಿನಲ್ಲಿ 'ರಾಮನಾಟಕಮು' ಇದೆ. `ರಾಮನಾಟಕಮು' ಪ್ರಬಂಧದ ಆರಂಭ ಹೀಗಿದೆ. ಮೊದಲು ಕಲ್ಯಾಣಿ ಅಟತಾಳದಲ್ಲಿ (ಉಡುಪುರಿಯ) ಗಣಪತಿಸ್ತುತಿ, ಅನಂತರ ಶ್ರೀರಾಗ ಆದಿತಾಳದಲ್ಲಿ (ತಾರಾನಿವಾಸಿನಿ ಯಾದ) ಸರಸ್ವತೀಸ್ತುತಿ, ಇವಿಷ್ಟು ಆದ ಮೇಲೆ ಇವ್ವಿಧಂಬುನನಿಷ್ಟದೇವತಾ ನಮಸ್ಕೃತಿ ಯುನು, ಸುಕವಿಜನಪುರಸ್ಕೃತಿಯುನು, ಕುಕವಿಜನತಿರಸ್ಕೃತಿಯುನು, ಶ್ರೀ ರಾಮಕಥಾ ಭಿವರ್ಣನಂಬುನು ಗಲಪಿಂಚಿ ಎಂದು ಕಥಾರಂಭದ ಪ್ರಸ್ತಾವ ಬರುತ್ತದೆ.
ಸಾವಿತ್ರೀಪರಿಣಯ ನಾಟಕಮು - ಯಕ್ಷಗಾನದಲ್ಲಿ, ವಿಷ್ಣು - ಬ್ರಹ್ಮ - ಲಕ್ಷ್ಮಿ - ಪಾರ್ವತಿ, ಸರಸ್ವತಿ ದೇವತೆಗಳ ಸ್ತುತಿಯಾದ ಅನಂತರ ಗಣಪತಿಸ್ತುತಿ - ಗುರುಸ್ತುತಿಗಳಿ ರುವುದನ್ನು ಕಾಣಬಹುದು. ತೆಲುಗು ಯಕ್ಷಗಾನಪ್ರಬಂಧದಲ್ಲಿರುವ ಒಂದು ವೈಶಿಷ್ಟ್ಯ ವೆಂದರೆ, ಸ್ತುತಿಪದ್ಯಗಳೆಲ್ಲ ಆದನಂತರ ಸಭಾವರ್ಣನೆ ಮತ್ತು ಕವಿವಂಶಾನುಕ್ರಮವರ್ಣನೆ ಎಂಬೊಂದು ಭಾಗವಿದೆ. ಇದಾದನಂತರ ಕಥಾಪರಿಚಯ. ಇದು ಕನ್ನಡದಲ್ಲಿದ್ದಂತೆ ತೆಲುಗಿನಲ್ಲೂ 'ದ್ವಿಪದಿ'ಯಲ್ಲೇ ನಿರೂಪಿತವಾಗಿರುತ್ತದೆ. ತೆಲುಗಿನಲ್ಲಿ ಪ್ರಸಂಗಸಾಹಿತ್ಯದ ಉದ್ದಕ್ಕೂ ಅಲ್ಲಲ್ಲಿ ವಚನಗಳ ಬಳಕೆ ಧಾರಾಳವಾಗಿದೆ.
ಮಗು ಹುಟ್ಟಿದ ಸಂದರ್ಭದಲ್ಲಿ ಕನ್ನಡ ಯಕ್ಷಗಾನಪ್ರಸಂಗಗಳಲ್ಲಿ ಬರುವ ಜೋಗುಳ ಹಾಡುಗಳು ತೆಲುಗಿನಲ್ಲೂ ಇವೆ. ಅಲ್ಲಿ 'ಲಾಲಿಪಾಟ' ಮತ್ತು 'ಜೋಲಪಾಟ'4 ಎಂಬ ಎರಡು ವಿಧದ ಹಾಡುಗಳು ಇರುತ್ತವೆ. ಜೋಲಪಾಟದ ಒಂದು ಮಾದರಿ ಹೀಗಿದೆ:
ಜೋ ಜೋ ಪಲ್ಲವಪಾಣಿ - ಜೋ ಕೀರವಾಣಿ |
ಜೋ ಜೋ ಅಲಿಕುಲವೇಣಿ - ಜೋ ವುವ್ವುಬೋಣಿ |
ನಿಕ್ಕಾಮು ವರಪುತ್ರಿ ನೀರಾಜ ನೇತ್ರಿ
ಚಕ್ಕಾನಿ ಸಾವಿತ್ರಿ ಸಂದರ್ಯಗಾತ್ರಿ || ಜೋ ಜೋ ||
ಕನ್ನಡ ಯಕ್ಷಗಾನ ನಳಚರಿತ್ರೆಯಲ್ಲಿ ಬರುವ ಜೋಗುಳಹಾಡಿನ ರಚನೆಯೊಂದು ಇದಕ್ಕೆ ಸಂವಾದಿಯಾಗಿದೆ:
ಜೋ ಜೋ ನಳರಾಜ ಜೋ ಪುಣ್ಯಚರಿತಾ |
ಜೋ ಜೋ ದಮಯಂತೀ ಮೋಹದ ಪುತ್ರ || ಜೋ ಜೋ ||
ಕುಡಿತೆಗಣ್ಣಿನ ಬಾಲೆಯರು ಬೆಡಗಿನಿಂದ
ಕೊಂಕುಗುರಳಿನ ತೋರಮುಡಿಗಳೊಪ್ಪುತಲಿ
ಬಡನಡು ಬಳುಕುತ್ತ ಕಡಗ ಕಂಕಣದ
ಕರದಿಂದ ತೂಗಿದರು ಕಡು ಚೆಲ್ವ ಮಗನಾ || ಜೋ ಜೋ ||
ಕನ್ನಡ ಯಕ್ಷಗಾನಪ್ರಸಂಗಗಳಲ್ಲಿ ಕಂಡುಬರುವ ಮಧುಮಾಧವಿ - ಏಕತಾಳದ ಪದ್ಯಗಳೆಲ್ಲ ಮೇಲಿನ ರಚನೆಯನ್ನೇ ಹೋಲುತ್ತದೆ.
'ಚಿತ್ರಾಂಗಿ ನಾಟಕಮು ಯಕ್ಷಗಾನಮು' ಪ್ರಬಂಧದಲ್ಲಿ ಬರುವ ರೇಗುಪ್ತಿ ಆದಿತಾಳದ ಒಂದು ಪದ್ಯ ಹೀಗಿದೆ:
ದಂಡಮು ದಂಡಮು ಸ್ವಾಮಿ - ಅಡವುಲ -
ನುಂಡಗಲೇಮಿಂಕ ಸ್ವಾಮಿ || ದಂಡಮು ||
ಗಂಡುಮೇಕಂಬುಲು ಮೆಂಡಯ್ಯೆನುದಿನ
ಗಂಡಮು ಮಾಬ್ರತು ಕಂಡಲೇದುವಿನು || ದಂಡಮು ||
ಕನ್ನಡ ಯಕ್ಷಗಾನಪ್ರಸಂಗಗಳ ದೂತರ ಪದ್ಯ, ಬೇಟೆಯ ಪದ್ಯಗಳು ಈ ಧಾಟಿಯನ್ನೇ ಹೋಲುತ್ತವೆಯೆಂಬ ಅಂಶವನ್ನು ನಾವಿಲ್ಲಿ ಗಮನಿಸಬಹುದು. ನನಗೆ ದೊರೆತಿರುವ 'ಯಕ್ಷಗಾನ ನಳಚರಿತ್ರೆ'ಯೆಂಬ ಹಳೆಯ ಪ್ರಸಂಗಪುಸ್ತಕವೊಂದರಲ್ಲಿ ತೆಲುಗು ಯಕ್ಷಗಾನದ ಹಾಡುಗಳ ಧಾಟಿಯನ್ನೇ ಹೋಲುವ ಅನೇಕ ಪದ್ಯಗಳಿವೆ.5 ಅಲ್ಲದೆ ಯಾಲಪದ, ಸೊಬಗಿನ ಸೋನೆ, ವರ್ನ - ಸಾಂಗತ್ಯ, ಸೀಸಪದ್ಯ, ಶೋಭಾನೆಪದ - ಮುಂತಾದ ಛಂದೋವೈವಿಧ್ಯಗಳ ಬಳಕೆಯೂ ಅಲ್ಲಲ್ಲಿ ಕಾಣುತ್ತದೆ. ತ್ರಿಪುಡೆ, ಜಂಪೆ, ಕುರುಚು ಜಂಪೆ, ರೂಪಕ, ಅಟತಾಳ ಅರ್ಧರೇಖು, ಏಕತಾಳ ಅರ್ಧರೇಖು ಎಂಬ ತಾಳಗಳನ್ನೂ, ಮುಖಾರಿ, ಭೈರವಿ, ಕಾಂಬೋಧಿ, ದರುವು, ಕಲ್ಯಾಣಿ, ರೇಗುಪ್ತಿ, ನಾಟಿ - ಎಂಬೀ ರಾಗಗಳನ್ನು ಅದರಲ್ಲಿ ಹೆಸರಿಸಲಾಗಿದೆ. ಒಟ್ಟಂದವಾಗಿ ತೂಗಿ ನೋಡಿದರೆ ಈ ಪ್ರಸಂಗದ ಶೈಲಿಯು ತೆಲುಗು ಯಕ್ಷಗಾನಪ್ರಬಂಧಗಳನ್ನೇ ಹೋಲುವಂತಿದೆ.
ತೆಲುಗಿನಲ್ಲಿ ಯಕ್ಷಗಾನ ಬಯಲಾಟವನ್ನು `ಕೇಳಿಕೆ'ಯೆಂದು ಕರೆಯುತ್ತಾರೆ. ನಮ್ಮ ಊರಿನ ಯಕ್ಷಗಾನ ಬಯಲಾಟ ಸಂಪ್ರದಾಯದಲ್ಲಿ 'ಕೇಳಿ' ಎಂಬ ಹೆಸರಿನ ಚೆಂಡೆ ಬಾರಿಸುವ ಪದ್ಧತಿಯುಂಟು. ಅದು ಯಕ್ಷಗಾನ ಬಯಲಾಟದ ಒಂದು ಪ್ರಚಾರ ಸಾಧನ ವೆನ್ನಬಹುದು. ಅದನ್ನು ಬಯಲಾಟ ನಡೆಯುವ ಜಾಗದಲ್ಲಿ ಮುಸ್ಸಂಜೆಯ ಹೊತ್ತಿಗೆ ಬಾರಿಸುತ್ತಾರೆ.
ಕೇರಳದ ಕಥಕ್ಕಳಿಯಲ್ಲಿಯೂ 'ಕೇಳಿಕ್ಕೊಟ್ಟು' ಎಂಬ ಚೆಂಡೆ ಬಾರಿಸುವ ಪದ್ಧತಿಯಿದೆ. ಅದರೆ ಕಥಕ್ಕಳಿಯ ಕೇಳಿಕ್ಕೊಟ್ಟು ಬಾರಿಸುವ ಕ್ರಮಕ್ಕೂ, ಯಕ್ಷಗಾನದ 'ಕೇಳಿ' ಬಾರಿಸುವ ಕ್ರಮಕ್ಕೂ ತುಂಬಾ ವ್ಯತ್ಯಾಸವಿದೆ.
ತೆಲುಗು 'ಕೇಳಿಕೆ' (ಯಕ್ಷಗಾನ ಬಯಲಾಟ)6 ಪ್ರಯೋಗದ ಆರಂಭದಲ್ಲಿ ಆ ದಿನದ ಕಥಾಭಾಗದ ಮುಖ್ಯಪಾತ್ರದ ಪರಿಚಯವನ್ನು ಮಂತ್ರಿಯು (ಸೂತ್ರಧಾರ ?) ಪ್ರವೇಶಿಸಿ, ಸಭಾಸದರಿಗೆ ತಿಳಿಯಪಡಿಸುತ್ತಾನೆ. ಕನ್ನಡದ ಯಕ್ಷಗಾನಪದ್ಧತಿಯಲ್ಲಿ ಪಾತ್ರದ ಪರಿಚಯವು, ಭಾಗವತರೂ ಪಾತ್ರಧಾರಿಯೂ ನಡೆಸುವ ಸಂಭಾಷಣೆಯ ಮೂಲಕ ಸಭಾಸದರಿಗೆ ವೇದ್ಯವಾಗುವಂತೆ ಮಾಡಲಾಗುತ್ತದೆ. ಹೀಗೆ ತೆಲುಗು ಕೇಳಿಕೆ ಮತ್ತು ಕನ್ನಡ ಯಕ್ಷಗಾನಗಳಲ್ಲಿ ಪಾತ್ರಪರಿಚಯದ ಕ್ರಮವು ವ್ಯತ್ಯಸ್ತವಾಗಿ ರೂಢಿಯಲ್ಲಿದೆ.
ಕೇಳಿಕೆಯ ಕಾರ್ಯಕ್ರಮಕ್ಕೆ ಶ್ರುತಿ ಮತ್ತು ಮದ್ದಳೆ ಬೇಕು. ಮದ್ದಳೆಗೆ ಕರ್ಣ ಹಾಕುವ ಬದಲು ಬೂದಿ ಮತ್ತು ಹಿಟ್ಟನ್ನು ಮಿಶ್ರ ಮಾಡಿ ಎಡಭಾಗಕ್ಕೆ ಹಚ್ಚುತ್ತಿದ್ದುದು ಹಿಂದಿನ ಸಂಪ್ರದಾಯವಾಗಿದ್ದರೆ, ಈಗೀಗ ಸರಿಯಾಗಿ ಕರ್ಣ ಹಾಕಿದ ಮದ್ದಳೆ ಅಥವಾ ತಬಲೆಗಳನ್ನೇ ಉಪಯೋಗಿಸುತ್ತಾರೆ. ಶ್ರುತಿಯ ಸ್ಥಾನದಲ್ಲಿ ಈಗ ಹಾರ್ಮೋನಿಯಂ ಬಳಸುತ್ತಿದ್ದರೆ, ಹಿಂದಿನ ಕಾಲದಲ್ಲಿ ಹಾಗಲ್ಲ; ಒಂದು ಡಬ್ಬಿಯ ಮೇಲೆ ಮೇಣವನ್ನಿಟ್ಟು, ಆ ಮೇಣದ ಮೇಲೆ [ಕೆಸರು ನೀರಿನಲ್ಲಿ ಬೆಳೆಯುವ ಒಂದು ಜಾತಿಯ ಗಿಡದಿಂದ ತಯಾರಿಸಿದ] ಕಡ್ಡಿಯನ್ನಿಟ್ಟು, ಅದನ್ನು ಬೆರಳುಗಳಿಂದ ಉದ್ದಕ್ಕೆ ಮೀಟುತ್ತಿದ್ದರು. ಹಾಗೆ ಎರಡು ಕೈಗಳಿಂದಲೂ ಉದ್ದಕ್ಕೆ ಮೀಟುವಾಗ ಎಡೆಬಿಡದೆ ಒಂದು ರೀತಿಯ ಸ್ವರವು ಕೇಳಿಬರುತ್ತದೆ. ಅದನ್ನೇ ಶ್ರುತಿಯನ್ನಾಗಿ ಮಾಡಿಕೊಂಡು ಭಾಗವತರು ಹಾಡುತ್ತಿದ್ದರು. ಭಾಗವತರೊಂದಿಗೆ ಹಿಂದುಗಡೆಯಿಂದ ಇತರರೂ ಸೇರಿಕೊಂಡು ಹಾಡುವ ಪದ್ಧತಿಯಿದೆ.
ತೆಲುಗು 'ಕೇಳಿಕೆ' ಅಥವಾ ಯಕ್ಷಗಾನದ ಪ್ರಬಂಧಗಳಲ್ಲಿ ಸುಮಾರು ಮೂವತ್ತೆ ರಡು ರಾಗಗಳನ್ನು ಬಳಸಿರುವುದು ಕಂಡುಬರುತ್ತದೆ. ಆನಂದಭೈರವಿ, ಕಮಾಚು, ಕಲ್ಯಾಣಿ, ಕಾಫಿ, ಕಾಂಬೋಧಿ, ಕೇದಾರಗೌಳ, ಜಂಜೂಟಿ, ತೋಡಿ, ದರ್ಬಾರು, ದರುವು, ದೇವ ಗಾಂಧಾರಿ, ಧನ್ಯಾಸಿ, ನಾಟಿ, ನಾಟಿಕುರಂಜಿ, ನಾದನಾಮಕ್ರಿಯೆ, ನೀಲಾಂಬರಿ, ಪುನ್ನಾಗ, ಬಿಲಹರಿ, ಭೈರವಿ, ಮಧ್ಯಮಾವತಿ, ಮುಖಾರಿ, ಮೋಹನ, ವರಾಳಿ, ಶಂಕರಾಭರಣ, ಶುದ್ಧಸಾವೇರಿ, ಶ್ರೀರಾಗ, ಸಾವೇರಿ, ಸುರುಟಿ, ಸೌರಾಷ್ಟ್ರ, ಹಿಂದುಸ್ತಾನಿ ಕಾಫಿ ಹಾಗೂ ರೇಗುಪ್ತಿ - ಇವೇ ಆ ರಾಗಗಳು. ತಾಳಗಳಲ್ಲಿ ಆದಿತಾಳ, ಆಟತಾಳ, ಏಕತಾಳ, ಮತ್ತು ರೂಪಕತಾಳಗಳು ಮಾತ್ರ ಹೆಚ್ಚು ರೂಢಿಯಲ್ಲಿವೆ. ಆದರೆ ಕನ್ನಡ ಯಕ್ಷಗಾನಪ್ರಸಂಗಗಳಲ್ಲಿ ಈ ಮೇಲಿನ ರಾಗಗಳಲ್ಲದೆ, ಮಾರವಿ, ಪಹಡಿ, ಘಂಟಾರವ, ವಸಂತ ತೋಡಿ, ಮಧುಮಾಧವಿ, ತುಜಾವಂತು, ಬೇಹಾಗ್, ಬೇಗಡೆ, ವಸಂತಭೈರವಿ, ದೇಶೀ, ಪೂರ್ವೀ, ಯರಕಲ ಕಾಂಭೋಜಿ, ಪಂತುವರಾಳಿ, ಫರಜು, ಗೌಳ, ಆರಭಿ, ಸಾರಂಗ, ಆಹೇರಿ, ಮೆಚ್ಚುಗೌಳ - ಮುಂತಾದ ಇನ್ನೂ ಅಧಿಕ ರಾಗಗಳ ಹೆಸರುಗಳನ್ನು ನಾವು ಕಾಣುತ್ತೇವೆ.
ಆಟ್ಟಕಥಾಸಾಹಿತ್ಯವೆಂದು ಕರೆಯಲ್ಪಡುವ ಕಥಕ್ಕಳಿಯ ಪ್ರಸಂಗದ ಹಾಡುಗಳು ಹಾಗೂ ಯಕ್ಷಗಾನಪ್ರಸಂಗಗಳಲ್ಲಿ ಬಳಕೆಯಲ್ಲಿರುವ ಹಾಡುಗಳು - ಇವುಗಳ ನಡುವೆಯೂ ಅನೇಕಶಃ ಸಾಮ್ಯವಿರುವುದನ್ನು ಗಮನಿಸಬಹುದು. ಆಟ್ಟಕಥಾಸಾಹಿತ್ಯದಲ್ಲಿ ಬರುವ ಸುಮಾರು ಐವತ್ತಕ್ಕೂ ಮಿಕ್ಕಿದ ರಾಗಗಳು ಕರ್ಣಾಟಕ ಸಂಗೀತದಲ್ಲಿ ಬರುವ ರಾಗಗಳೆಂದೇ ತಿಳಿಯಲಾಗಿದೆ. ಕೆಲವೆಡೆ ಹೆಸರಿನಲ್ಲಿ ಮಾತ್ರ ಅಲ್ಪ ಸ್ವಲ್ಪ ವ್ಯತ್ಯಾಸವನ್ನು ಕಾಣಬಹುದು.
ಕರ್ಣಾಟಕ ಸಂಗೀತ ಆಟ್ಟಕಥಾ ಹಾಡುಗಳು
ಧನ್ಯಾಸಿ ಧನಾಶಿ
ನಾದನಾಮಕ್ರಿಯೆ ನಾಥನಾಮಗ್ರಿ
ಯದುಕುಲ ಕಾಂಭೋಜಿ ಎರಿಕ್ಕಲ ಕಾಮೋದರಿ
ಕಾಂಭೋಜಿ ಕಾಮೋದರಿ
ನವರೋಜು ನವರಸ
ಕೇದಾರಗೌಳ ಕೇದಾರಗೌಡ
ಯದುಕುಲ ಕಾಂಭೋಜಿಯನ್ನು 'ಯರಕಲ' ಕಾಂಭೋಧಿಯೆಂದು ಯಕ್ಷಗಾನ ಪ್ರಸಂಗಗಳಲ್ಲಿಯೂ ಕೆಲವೆಡೆ ಹೆಸರಿಸಿರುವುದುಂಟು. ಇವಲ್ಲದೆ ಆಟ್ಟಕಥೆಗಳಲ್ಲೇ ವಿಶಿಷ್ಟವಾಗಿ ಕಂಡುಬರುವ ಕೆಲವು ರಾಗಗಳು ಇವೆ. ಘಂಡಾರಂ (ಕಂಡಾರಂ), ಪಾಡಿ, ಪುರನೀರ, ಕಾನಕುರಿಞಿ, ಸಾಮಂತಲಹರಿ - ಎಂಬೀ ರಾಗಸ್ವರೂಪಗಳ ಸೂಕ್ಷ್ಮವಾದ ಲಕ್ಷಣವಿವೇಚನಗಳು ಕರ್ಣಾಟಕಸಂಗೀತದಲ್ಲೂ ಕಾಣಿಸುವುದಿಲ್ಲವೆಂದು ತಿಳಿಯಲಾಗಿದೆ. 'ಘಂಡಾರ' ಎಂಬ ರಾಗದ ಹೆಸರನ್ನು ಹೋಲುವ 'ಘಂಟಾರವ' ಎಂಬ ರಾಗದ ಹೆಸರು ಯಕ್ಷಗಾನಪ್ರಸಂಗಗಳಲ್ಲೂ ಬರುತ್ತದೆ. ತೆಲುಗು ಯಕ್ಷಗಾನ ಪ್ರಬಂಧಗಳಲ್ಲಿ 'ಡೈಲಾಗು' ಗಳನ್ನು 'ಕೀರ್ತನವಾದಮು' ಎಂದು ಕರೆಯಲಾಗುತ್ತದೆ.9 ಪದ್ಯರೂಪವಾದ ಈ ರೀತಿಯ 'ಡೈಲಾಗು'ಗಳನ್ನು ಯಕ್ಷಗಾನ ಪ್ರಸಂಗಗಳಲ್ಲಿಯೂ ಆಟ್ಟಕಥಾಸಾಹಿತ್ಯದಲ್ಲಿಯೂ ಧಾರಾಳ ಕಾಣುತ್ತೇವೆ. ಈ ರೀತಿಯ 'ಡೈಲಾಗು'ಗಳೇ ಈ ಕಲೆಗಳ ಜೀವಾಳವೆನ್ನ ಬಹುದು.
ಯಕ್ಷಗಾನದಲ್ಲಿ ಮಟ್ಟೆ, ತ್ರಿವುಡೆ, ಆದಿ, ಏಕ, ಅಷ್ಟ, ಝಂಪೆ, ಧ್ರುವ, ರೂಪಕ - ಎಂಬೀ ಸಪ್ತತಾಳಗಳು ಪ್ರಸಿದ್ಧವಾಗಿವೆ. ಕಥಕ್ಕಳಿಯಲ್ಲಿ ಪಂಚಾರಿ (6 ಮಾತ್ರೆ), ತ್ರಿಪುಟ (7 ಮಾತ್ರೆ)10 ಚೆಂಬಟ (8 ಮಾತ್ರೆ), ಚಂಬ (10 ಮಾತ್ರೆ), ಅಟಂತ (14 ಮಾತ್ರೆ) - ಎಂಬೀ ಆರು ತಾಳಗಳ ಹೆಸರನ್ನು ಮಾತ್ರ ಕಾಣುತ್ತೇವೆ. ಇವುಗಳಲ್ಲಿ ಚೆಂಬಟ (ಚತು ರಶ್ರಜಾತಿ ತ್ರಿಪುಟ), ಚಂಬ (ಮಿಶ್ರಜಾತಿ ಝಂಪೆ), ಅಟಂತ (ಖಂಡಜಾತಿ ಅಟತಾಳ), ಪಂಚಾರಿ (ಚತುರಶ್ರಜಾತಿ ರೂಪಕ) - ಎಂಬೀ ನಾಲ್ಕು ತಾಳಗಳೇ ಅತ್ಯಂತ ಪ್ರಧಾನವಾದವುಗಳು.
ಒಂದು ಯಕ್ಷಗಾನಮೇಳದಲ್ಲಿ ಇಬ್ಬರು ಭಾಗವತರು ಇರುತ್ತಾರೆ. ಒಬ್ಬನಿಗೆ ಸಂಗೀತಭಾಗವತನೆಂದೂ, ಇನ್ನೊಬ್ಬನಿಗೆ ಪ್ರಧಾನಭಾಗವತನೆಂದೂ ಹೆಸರು. ಪ್ರಾರಂಭದ ಕೋಡಂಗಿ - ನಿತ್ಯವೇಷಗಳ ಕುಣಿತಗಳೆಲ್ಲ ಸಂಗೀತಭಾಗವತನ ಅಧಿಕಾರಕ್ಕೊಳಪಟ್ಟದ್ದು. ಸ್ತ್ರೀವೇಷದ ಕುಣಿತಕ್ಕಾಗುವಾಗಲೇ ಪ್ರಧಾನಭಾಗವತರು ಬಂದಾರಷ್ಟೆ. ಅಲ್ಲಿಂದ ಮುಂದೆ ಸಂಪೂರ್ಣ ಕಾರ್ಯಕ್ರಮದ ನಿರ್ವಹಣೆ ಪ್ರಧಾನಭಾಗವತರ ಪಾಲಿಗೆ ಸೇರಿದ್ದು.
ಕಥಕ್ಕಳಿಯಲ್ಲಿಯೂ ಇದೇ ರೀತಿ ಇಬ್ಬರು ಭಾಗವತರು ಬೇಕಾಗುತ್ತದೆ. ಆದರೆ ಅಲ್ಲಿ ಅವರ ಕಾರ್ಯನಿರ್ವಹಣೆಯ ವಿಧಾನ ಮಾತ್ರ ಇದಕ್ಕಿಂತ ಭಿನ್ನವಾದುದು. ಅಲ್ಲಿ ಇಬ್ಬರು ಭಾಗವತರಿರುವ ಉದ್ದೇಶವೇ ಬೇರೆ. ಕಥಕ್ಕಳಿಯ ಪ್ರಾರಂಭದಿಂದ ಮಂಗಳದ ತನಕವೂ ಅಲ್ಲಿ ಇಬ್ಬರು ಭಾಗವತರು ಬೇಕಾಗುತ್ತದೆ. ಪ್ರಧಾನಭಾಗವತನಿಗೆ 'ಪೊನ್ನಾನಿ' ಯೆಂದೂ ಉಪಭಾಗವತನಿಗೆ 'ಶಂಗಿಡಿ' ಎಂದೂ ಬೇರೆ ಬೇರೆ ಹೆಸರುಗಳಿವೆ. ಪ್ರಧಾನ ಭಾಗವತ ಅಥವಾ ಪೊನ್ನಾನಿ ಹಾಡಿದ ಸಾಲುಗಳನ್ನು ಪುನರಾವರ್ತಿಸಿ ಹಾಡುವುದು ಉಪ ಭಾಗವತನ ಅಥವಾ ಶಂಗಿಡಿಯ ಕೆಲಸ. ಈ ದೃಷ್ಟಿಯಿಂದ ಕಥಕ್ಕಳಿಯ ಶಂಗಿಡಿ ಭಾಗವತನ ಹಾಗೂ ಯಕ್ಷಗಾನದ ಸಂಗೀತಭಾಗವತನ ಕರ್ತವ್ಯಗಳು ವಿಭಿನ್ನವಾಗಿಯೇ ಕಾಣಿಸುತ್ತವೆ. ಯಕ್ಷಗಾನದ ಸಭಾಲಕ್ಷಣಕ್ಕೆ ತುಲ್ಯವಾಗಿ ಕಥಕ್ಕಳಿಯಲ್ಲಿ 'ಪೂರ್ವರಂಗ'ವೆಂಬ ಒಂದು ಸಂಪ್ರದಾಯವಿರುವುದನ್ನು ಕಾಣಬಹುದು. ಆದರೆ ಈ ಸಂಪ್ರದಾಯಗಳಲ್ಲಿ ವಿಶೇಷ ಸಾಮ್ಯವೇನೂ ಇದ್ದಂತೆ ಕಾಣುವುದಿಲ್ಲ. ಕಥಕ್ಕಳಿಯ ಬೆಳವಣಿಗೆಯ ಆದಿಯ ಹಂತಗಳಲ್ಲಿ ಈ ಪದ್ಧತಿಯಿರಲಿಲ್ಲ. ಸುಮಾರು 1625-1665ರಲ್ಲಿ ಕೋಟ್ಟಯಂ ತಂಬುರಾನರ ಕಾಲದಲ್ಲಿ ಈ ಹೊಸ ಸುಧಾರಣೆ ಪ್ರಾರಂಭವಾಯಿತೆಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.
ಯಕ್ಷಗಾನ ಮತ್ತು ಕಥಕ್ಕಳಿ ವೇಷಗಳ ಸಂಪ್ರದಾಯದಲ್ಲಿ ಒಂದೆರಡು ಕಡೆ ಸ್ವಲ್ಪ ಮಟ್ಟಿನ ಸಾಮ್ಯವಿರುವುದನ್ನು ನಾವು ಗುರುತಿಸಬಹುದಾದರೂ, ಅವು ಸಾಕಷ್ಟು ವಿಭಿನ್ನ ಸ್ವರೂಪಗಳಿಂದಲೇ ಬೆಳೆದು ಬಂದಿವೆಯೆಂದು ಹೇಳಬೇಕಾಗುತ್ತದೆ. ಕಥಕ್ಕಳಿಯ ವೇಷ ವಿಧಾನಗಳನ್ನು ವಿವೇಚಿಸುವುದರ ಮೂಲಕ ಈ ವ್ಯತ್ಯಾಸವನ್ನು ನಾವು ಕಂಡುಕೊಳ್ಳ ಬಹುದು.
ಕಥಕ್ಕಳಿಯ ವೇಷಗಳನ್ನು ಪಚ್ಚೆ, ಕತ್ತಿ, ಕರಿ, ತಾಡಿ, ಮಿನುಕ್ಕು - ಎಂದು ಹೀಗೆ ಐದು ವಿಧವಾಗಿ ವಿಂಗಡಿಸುತ್ತಾರೆ. ಸಾತ್ತ್ವಿಕ ಗುಣವುಳ್ಳ ಧೀರೋದಾತ್ತ ಪಾತ್ರಗಳು 'ಪಚ್ಚೆ'ವೇಷದ ಗುಂಪಿಗೆ ಸೇರುತ್ತವೆ. ಉದಾ: - ಶ್ರೀಕೃಷ್ಣ, ಶ್ರೀರಾಮ, ಅಕ್ರೂರ, ಕುಬೇರ, ಧರ್ಮರಾಯ, ಅರ್ಜುನ ಇತ್ಯಾದಿ. ಪಚ್ಚೆವೇಷಗಳ ಮುಖಕ್ಕೆ ಕಡುಹಸುರುಬಣ್ಣವನ್ನು ಬಳಿಯಲಾಗುತ್ತದೆ. ಬ್ರಹ್ಮ, ಶಿವ, ಬಲರಾಮ ಮುಂತಾದ ವೇಷಗಳೂ ಸಹ ಪಚ್ಚೆ ವೇಷದ ಸಾಲಿಗೇ ಸೇರಿದವುಗಳಾದರೂ, ಅವುಗಳಿಗೆ ಕಡುಹಸುರುಬಣ್ಣವನ್ನು ಬಳಿಯದೆ, ಸಾಧಾರಣವಾದ ಹಸುರುಬಣ್ಣವನ್ನೇ ಬಳಿಯುವುದು ರೂಢಿಯಾಗಿದೆ. ಇಬ್ಬದಿಯ ಕಪೋಲಗಳ ಅಂಚಿನಲ್ಲಿಯೂ, ಅರ್ಧಚಂದ್ರಾಕೃತಿಯಲ್ಲಿ ಚುಟ್ಟಿಯನ್ನು ಅಂಟಿಸುತ್ತಾರೆ. ಮುಖವು ಸ್ಪಷ್ಟವಾಗಿ ಎದ್ದು ಕಾಣುವುದಕ್ಕೆ ಹಾಗೂ ಮುಖದ ಭಾವಸ್ಫುರಣೆಗೆ ಈ ರೀತಿಯ ಚುಟ್ಟಿವಿಧಾನವು ಸಹಕಾರಿಯಾಗಿದೆ. ಅಭಿನಯಪ್ರಧಾನವಾದ ಕಥಕ್ಕಳಿ ಸಂಪ್ರದಾಯಕ್ಕೆ ಇದು ಅತಿಮುಖ್ಯವಾದುದು. ಇತ್ತೀಚೆಗೆ ಈ ಚುಟ್ಟಿಯ ಮೇಲೆ ಅರ್ಧಚಂದ್ರಾಕಾರವಾಗಿ ಕತ್ತರಿಸಿದ ಬಿಳಿಯ ಕಾಗದದ ತುಂಡನ್ನು ಅಂಟಿಸುತ್ತಿದ್ದಾರೆ. ಪಚ್ಚೆವೇಷಗಳು ಭಾವಾಭಿ ವ್ಯಕ್ತಿಗಾಗಿ ಯಾವುದೇ ಉದ್ಗಾರವನ್ನೆತ್ತುವುದಾಗಲೀ, ಹಲ್ಲು ಕಾಣಿಸುವುದಾಗಲಿ ಮಾಡ ಬಾರದು. ಅದು ಪಾತ್ರದ ಗೌರವಕ್ಕೆ ವಿರೋಧವೆಂಬ ನಂಬಿಕೆಯಿದೆ.
ರಾವಣ, ನರಕಾಸುರ, ಕೌರವ, ಕೀಚಕರಂಥ ಪಾತ್ರಗಳು 'ಕತ್ತಿ'ವೇಷದ ಸಾಲಿಗೆ ಸೇರುತ್ತವೆ. ಮೂಗಿನ ಇಬ್ಬದಿಗಳಲ್ಲೂ ಕತ್ತಿಯ ಆಕಾರದಲ್ಲಿ ಬಿಳಿಯುವ ಒಂದು ರೀತಿಯ ಬಣ್ಣಗಾರಿಕೆಯೇ ಈ ವೇಷಗಳ ಪ್ರಧಾನವೈಶಿಷ್ಟ್ಯವೆನ್ನಬಹುದು. ಹಾಗೆಯೇ ತುದಿ ಮೂಗಿನ ಮೇಲೆ ಹಾಗೂ ಹುಬ್ಬುಗಳ ನಡುವೆ, ಒಂದು ಜಾತಿಯ ಗಿಡದಿಂದ ತಯಾ ರಿಸಿದ 'ಚುಟ್ಟಿಪ್ಪೂವು' ಎಂಬ ಸಾಧನವನ್ನು ಅಂಟಿಸುವುದಿದೆ. ಬಣ್ಣದ ವೇಷಗಳ ಮೂಗು ಹಣೆಗಳಿಗೆ ಹತ್ತಿಯ ಉಂಡೆಯನ್ನು ಅಂಟಿಸಿಡುವ ಪದ್ಧತಿಯು ಯಕ್ಷಗಾನ ಬಯಲಾಟ ಗಳಲ್ಲಿಯೂ ಇದೆ. ಈ ರೀತಿಯ ಕತ್ತಿವೇಷಗಳು ಸಂದರ್ಭೋಚಿತವಾಗಿ ಉದ್ಗಾರವೆತ್ತ ಬಹುದು ಅಥವಾ ಆರ್ಭಟಿಸಬಹುದು.
ಕಥಕ್ಕಳಿಯ ವೇಷವಿಧಾನಗಳಲ್ಲಿ ಮೂರನೆಯದು 'ತಾಡಿ' ವೇಷಗಳು. ಅದರಲ್ಲೂ 'ಚುವನ್ನತಾಡಿ'ಯೆಂಬ ಹೆಸರಿನಲ್ಲಿರುವ ವೇಷಗಳು ಅತಿಪ್ರಧಾನವಾದವುಗಳು. ವಾಲಿ, ಸುಗ್ರೀವ, ತ್ರಿಗರ್ತ, ಇರಾವಂತ, ವೀರಭದ್ರ, ಮುಂತಾದ ಪಾತ್ರಗಳು ಈ ವರ್ಗಕ್ಕೆ ಸೇರುತ್ತವೆ. ತಾಡಿವೇಷವೆಂದರೆ ಕೃತ್ರಿಮವಾದ ಗಡ್ಡವನ್ನು ಅಂಟಿಸಿ, ರೂಪಿಸುವ ವೇಷ. ಚುವನ್ನತಾಡಿ ವೇಷಗಳ ಕಣ್ಣಿನ ಸುತ್ತಲೂ ಕಪ್ಪುಬಣ್ಣವನ್ನು ಹಾಗು ಅದರ ಕೆಳಗಡೆ ಕೆಂಬಣ್ಣವನ್ನೂ ಹಚ್ಚಬೇಕು. ಈ ಕಪ್ಪು ಕೆಂಪು ಬಣ್ಣಗಳ ನಡುವೆ ಚುಟ್ಟಿಯನ್ನಿಟ್ಟು, ಅದರ ಮೇಲೆ ಅದೇ ಪ್ರಕಾರ ಕತ್ತರಿಸಿದ ಕಾಗದದ ತುಂಡನ್ನು ಅಂಟಿಸುವುದಿದೆ. ಕತ್ತಿವೇಷಗಳಂತೆ ತಾಡಿವೇಷಗಳಿಗೂ ಮೂಗು ಹಣೆಗಳಲ್ಲಿ 'ಚುಟ್ಟಿಪ್ಪೂವ'ನ್ನು ಇಡುವುದುಂಟು. ಈ ವೇಷಗಳೂ ಸಂದರ್ಭಾನುಸಾರವಾಗಿ ಭಾವಸ್ಫುರಣೆಗೋಸ್ಕರ ಆರ್ಭಟಿಸಬಹುದು. ಕಲಿ, ಶಕುನಿ, ಮುಂತಾದ ವೇಷಗಳು `ಕರುತ್ತ ತಾಡಿ'(ಕಪ್ಪುಗಡ್ಡ)ಯ ಗುಂಪಿಗೆ ಸೇರಿದವು ಗಳು. ಇದೇ ರೀತಿ `ವೆಳ್ಳತಾಡಿ'(ಬಿಳಿಗಡ್ಡ)ಯೆಂಬ ಇನ್ನೊಂದು ಗುಂಪಿನ ವೇಷಗಳೂ ಇವೆ. ವನಪಾಲಕರು, ಹನುಮಂತ ಮುಂತಾದ ಪಾತ್ರಗಳು ಈ ಗುಂಪಿನವು. ಇವುಗಳ ಕಿರೀಟರಚನೆ ಉರುಟಾಗಿರುತ್ತದೆ. ಯಕ್ಷಗಾನದಲ್ಲಿ ಬರುವ ಹನುಮಂತನ ಕಿರೀಟವನ್ನು ಇದಕ್ಕೆ ಹೋಲಿಸಬಹುದು. ಇದಕ್ಕೆ 'ವಟ್ಟಮುಡಿ'ಯೆಂದು ಕಥಕ್ಕಳಿಯ ಪಾರಿಭಾಷಿಕವಾದ ಹೆಸರು. ಈ ವೇಷಗಳು ಕೆಲವು ವಿಕೃತಸ್ವರಗಳನ್ನು ಪ್ರಕಟಿಸಬಹುದು.
ಅತ್ಯಂತ ತಮೋಗುಣಪ್ರಧಾನವಾದ ಸ್ತ್ರೀವೇಷಗಳನ್ನು ಕಥಕ್ಕಳಿಯಲ್ಲಿ 'ಕರಿವೇಷ' ಗಳೆಂದು ಹೆಸರಿಸುತ್ತಾರೆ. ಉದಾ: - ಪೂತನಿ, ಶೂರ್ಪನಖಿ, ನಕ್ರತುಂಡಿ, ಸಿಂಹಿಕೆ ಇತ್ಯಾದಿ. ಈ ಪಾತ್ರಗಳ ಮುಖವರ್ಣ ಕಪ್ಪು. ಇತರ ಪೋಷಾಕುಗಳೂ ಕಪ್ಪಾಗಿಯೇ ಇರಬೇಕೆಂದು ನಿಯಮವಿದೆ. ಇವುಗಳ ಕುಚಗಾತ್ರವೂ ತುಂಬ ದೊಡ್ಡದಿರುತ್ತದೆ. ಆರ್ಭಟೆಯು ಅತ್ಯಂತ ಕರ್ಕಶವಾಗಿರುತ್ತದೆ. ಹೆಚ್ಚಾಗಿ ಸ್ತ್ರೀವೇಷಗಳಿಗೆ ಚೆಂಡೆಯನ್ನು ಬಾರಿಸುವ ಕ್ರಮವಿಲ್ಲದಿದ್ದರೂ ಈ ರೀತಿಯ ಕರಿವೇಷಗಳಿಗೆ ಚೆಂಡೆ ಬೇಕೇ ಬೇಕು.
ನಸುಗೆಂಪು ಮತ್ತು ಹಳದಿ ಮಿಶ್ರಿತ ಅರದಾಳವನ್ನು ಮುಖಕ್ಕೆ ಹಚ್ಚಿದ ವೇಷ ಗಳನ್ನು `ಮಿನುಕ್ಕು' ವೇಷಗಳೆನ್ನುತ್ತಾರೆ. ಹಾಗು ಸಾಮಾನ್ಯ ಸ್ತ್ರೀಪಾತ್ರಗಳು ಈ ವಿಭಾಗಕ್ಕೆ ಸೇರುತ್ತವೆ. ಆದರೆ ವಸಿಷ್ಠ, ನಾರದ ಮುಂತಾದ ಕೆಲವು ವೇಷಗಳಿಗೆ ಮಾತ್ರ ಬಿಳಿಯ ಗಡ್ಡವೂ ಇರುತ್ತದೆ. ಈ ಪಾತ್ರಗಳ ಶಿರೋಲಂಕಾರಪದ್ಧತಿಯೇ ಬೇರೆ. ತಲೆಯ ಜುಟ್ಟನ್ನು ಬಿಗಿದು ಕಟ್ಟಿದಂತಿರುವ ಒಂದು ವಿಶಿಷ್ಟ ಶಿರೋಲಂಕಾರವನ್ನು ಈ ಪಾತ್ರಗಳು ಧರಿಸುತ್ತವೆ. ಇವುಗಳಲ್ಲಿ ದೂತ ಮತ್ತು ಬ್ರಾಹ್ಮಣ ಪಾತ್ರಗಳಿಗೆ ಶಿರೋಲಂಕಾರವಿಲ್ಲ. 'ಮಿನುಕ್ಕು' ವೇಷವರ್ಗಕ್ಕೆ ಸೇರಿದ ಪಾತ್ರಗಳ ಮುಖಕ್ಕೆ 'ಜಿಗ್ ಜಿಗ್ ಪುಡಿ'ಯನ್ನು ಚೆಲ್ಲಿ ಮುಖವು ಪಳಪಳನೆ ಹೊಳೆಯುವಂತೆ ಮಾಡುತ್ತಾರೆ. ಆದ್ದರಿಂದಲೇ ಈ ವೇಷಗಳಿಗೆ ಮಿನುಕ್ಕು (ಮಿನುಗುವ) ವೇಷಗಳೆಂಬ ಹೆಸರು ಸಾರ್ಥಕವಾಗಿದೆ. ಸ್ತ್ರೀವೇಷಗಳಿಗೆ ಕಪೋಲಗಳಲ್ಲಿ ಪತ್ರರೇಖೆ, ಮಕರರೇಖೆಗಳನ್ನು ಬರೆಯುವ ಪದ್ಧತಿಯಿದೆ. ಹಾಗೆಯೇ ತಲೆಗೆ ಪಟ್ಟಿ ವಸ್ತ್ರದ ಘೋಷಾವನ್ನು ಮುಸುಕುವ ಸಂಪ್ರದಾಯವೂ ಸರ್ವತ್ರ ರೂಢಿಯಲ್ಲಿದೆ.
ಹೀಗೆ ಕಥಕ್ಕಳಿಯ ವೇಷಗಳನ್ನೂ ಯಕ್ಷಗಾನವೇಷಗಳನ್ನೂ ತುಲನೆ ಮಾಡಿದಾಗ, ಅವು ಎಷ್ಟೋ ಭಿನ್ನರೀತಿಯಲ್ಲಿ ಹಾಗೂ ಪ್ರತ್ಯೇಕ ಸಂಪ್ರದಾಯದಲ್ಲಿ ಬೆಳೆದು ಬಂದಂತೆ ಕಾಣಿಸಿಕೊಳ್ಳುತ್ತದೆ. ಬಣ್ಣಗಾರಿಕೆಯಲ್ಲಂತೂ ಅವು ತುಂಬಾ ವ್ಯತ್ಯಸ್ತವಾಗಿವೆ. ಆದರೆ ಕಿರೀಟಗಳಲ್ಲಿ ಮಾತ್ರ ಒಂದೆರಡರಲ್ಲಿ ಸ್ವಲ್ಪ ಸಾಮ್ಯವಿರುವುದನ್ನು ಕಾಣಬಹುದು. ಕಥಕ್ಕಳಿಯ ಕಿರೀಟಗಳ ಹಿಂದುಗಡೆ ಕೃತಕ ಇಳಿಗೂದಲು ಇರುವುದು ಅತಿಮುಖ್ಯ. ಪಚ್ಚೆ-ಕತ್ತಿ-ಕರಿ-ಮಿನುಕ್ಕು ವೇಷಗಳಿಗೆ ಕಪ್ಪುಕೂದಲೂ 'ಚುವನ್ನ ತಾಡಿ' ವೇಷಗಳಿಗೆ ಕೆಂಪುಕೂದಲೂ, ಋಷಿಗಳಿಗೆ ಹಾಗು ಉರುಟು ಕಿರೀಟದ ವೇಷಗಳಿಗೆ ಬಿಳಿಕೂದಲೂ ಇರುತ್ತದೆ. ಕಥಕ್ಕಳಿ ಯಲ್ಲಿ ಕೇಶಭಾರ ಕಿರೀಟ, ಪೊಡಿಪ್ಪು ಕಿರೀಟ, ಕೃಷ್ಣಮುಡಿ, ಕರಿಮುಡಿ, ಭೀರುವಿನ ಮುಡಿ, ನಾರದನ ಮುಡಿ, ವಟ್ಟಮುಡಿ, ಎಂಬುದಾಗಿ ಏಳು ವಿಧದ ಶಿರೋಲಂಕಾರಗಳಿವೆ.
ಪಚ್ಚೆ ಹಾಗೂ ಕತ್ತಿ ವೇಷಗಳಿಗೆ ಕೇಶಭಾರ ಕಿರೀಟಗಳನ್ನಿಡುತ್ತಾರೆ. ಯಕ್ಷಗಾನದಲ್ಲಿ ರಾಕ್ಷಸಪಾತ್ರಗಳಿಗೆ ಕೇಶಭಾರ ಕಿರೀಟವನ್ನಿಡುವುದು ಪದ್ಧತಿ. ಇದನ್ನು ಕೇಶವಾರಿ ಕಿರೀಟ, ಕೇಸರಿತಟ್ಟಿ, ತಡ್ಪೆಕಿರೀಟ ಮುಂತಾದ ಪರಿಭಾಷೆಗಳಿಂದ ಕರೆಯುತ್ತಾರೆ. ಕಥಕ್ಕಳಿಯಲ್ಲಿ ರೂಢಿಯಲ್ಲಿರುವ ಕೃಷ್ಣಮುಡಿಯು ಕೃಷ್ಣನಿಗೆ ಮಾತ್ರವಲ್ಲದೆ, ರಾಮ - ಲಕ್ಷ್ಮಣ - ಭರತ, ಶತ್ರುಘ್ನರಿಗೂ, ಲವಕುಶರು, ಅನಿರುದ್ಧ ಮುಂತಾದ ಪಾತ್ರಗಳಿಗೂ ಸಲ್ಲುತ್ತದೆ. ಚುವನ್ನ ತಾಡಿ ವೇಷಗಳಿಗೆ ಪೊಡಿಪ್ಪುಕಿರೀಟವೂ ಕರಿವೇಷಗಳಿಗೆ ಕರಿಮುಡಿಯೂ ಹನುಮಂತ - ವಜ್ರದಂಷ್ಟ್ರಾದಿ ವೇಷಗಳಿಗೆ ವಟ್ಟಮುಡಿ ಅಥವಾ ಉರುಟು ಕಿರೀಟವೂ ಬಳಸಲ್ಪಡುತ್ತದೆ.
ರಾಮನಾಟ್ಟವೇ ಅನುಕ್ರಮವಾಗಿ ಸುಧಾರಣೆ ಹೊಂದಿ ಈಗಿನ ಕಥಕ್ಕಳಿಯ ರೂಪ ವನ್ನು ತಾಳಿತೆಂಬುದು ವಿದ್ವಾಂಸರ ಅಭಿಪ್ರಾಯವಷ್ಟೆ. ಪ್ರಾಚೀನಕಾಲದಲ್ಲಿ ಅದು ಇಷ್ಟು ಶಾಸ್ತ್ರೀಯವಾಗಿ ಇದ್ದಿರಲಿಲ್ಲ. ವೆಟ್ಟತ್ತು ರಾಜನೂ, ಕಪ್ಲಿಂಗಾಡು ನಂಬೂದಿರಿಯೂ, ಕಲ್ಲಡಿ ಕೋಟ್ಟು ನಂಬೂದಿರಿಯೂ ಈ ಕಲೆಗೆ ಪರಿಷ್ಕೃತರೂಪವನ್ನು ಕೊಟ್ಟವರೆಂಬುದು ಚಾರಿತ್ರಿಕಸತ್ಯವಾಗಿದೆ. ಅದರಲ್ಲೂ ಈಗಿರುವ ಕಿರೀಟಗಳು, ಬಣ್ಣಗಾರಿಕೆ ಹಾಗೂ ವೇಷ ಭೂಷಣಗಳೆಲ್ಲ ವೆಟ್ಟತ್ತು ರಾಜನು ಮಾಡಿದ ಸುಧಾರಣೆಗಳೆಂದು ನಂಬಲಾಗಿದೆ.13
ಪ್ರಾರಂಭಘಟ್ಟದಲ್ಲಿ ಕಥಕ್ಕಳಿಯಲ್ಲಿ ಮದ್ದಳೆ ಮಾತ್ರ ಬಳಕೆಯಲ್ಲಿತ್ತು. ಮದ್ದಳೆ ಯೊಂದಿಗೆ ಚೆಂಡೆಯನ್ನು ಜೊತೆಗೊಳಿಸಿದವನೂ ಸಹ ವೆಟ್ಟತ್ತು ರಾಜನೆ! ವೆಟ್ಟತ್ತು ರಾಜನು ಉತ್ತರ ಕೇರಳದವನಷ್ಟೆ. ಆದ್ದರಿಂದ ಕಥಕ್ಕಳಿಯಲ್ಲಿ ಕಾಣುವ ಈ ವೈಲಕ್ಷಣ್ಯಗಳು ಉತ್ತರ ದಿಂದ ದಕ್ಷಿಣಕ್ಕೆ ಸಾಗಿದ ಸುಧಾರಣೆಗಳು ಎನ್ನಬೇಕಾಗುತ್ತದೆ. ಈ ದೃಷ್ಟಿಯಲ್ಲಿ ಕಥಕ್ಕಳಿ ಯಕ್ಷಗಾನಗಳೊಳಗಿನ ಕೊಳ್ಕೊಡುಗೆಗಳ ವಿಚಾರವಾಗಿ ಬಹಳ ಅಂಶ ವಿಮರ್ಶಿಸ ಬೇಕಾದ್ದಿದೆಯೆಂದು ನನ್ನ ಅಭಿಪ್ರಾಯ. ಮಾತ್ರವಲ್ಲದೆ, ಕಥಕ್ಕಳಿಯ ಆಭರಣಗಳಲ್ಲಿ 'ಕೊರಲಾರ-ಕೊಲ್ಲಾರ' ಎಂಬೊಂದು ಹೆಸರಿನ ಆಭರಣವಿದೆ. ಇದು ಕನ್ನಡದ ಕೊರಳ ಹಾರ ಎಂಬ ಪದಕ್ಕೆ ಸಂವಾದಿಯಾಗಿರುವಂತಿದೆ. ಹಾಗೆಯೇ 'ಕೆಚ್ಚಮಣಿ' ಎಂಬ ಪದವು ನಮ್ಮ ಕನ್ನಡ ತುಳುಭಾಷೆಗಳ 'ಗೆಜ್ಜೆಮಣಿ' ಎಂಬ ಪದವನ್ನು ಜ್ಞಾಪಿಸಿಕೊಡುತ್ತದೆ. ಚೆಂಡೆ ಎಂಬ ಪದಕ್ಕೆ ತಮಿಳಿನಲ್ಲಿ ಯುದ್ಧ-ಜಗಳ ಎಂಬ ಅರ್ಥವಿದೆ. ಕಾಳಗದ ಕತೆಗಳೇ ಅಧಿಕವಾಗಿರುವ ಯಕ್ಷಗಾನಕಲಾಪರಂಪರೆಗಳಿಗೆ ಕೆಲವೆಡೆ 'ಕಾಳಗ' ಎಂಬ ಹೆಸರೇ ರೂಢಿಯಲ್ಲಿರುವುದನ್ನು ಇಲ್ಲಿ ಜ್ಞಾಪಿಸಬಹುದು.
ಕಥಕ್ಕಳಿಯ ವೇಷಶಿಲ್ಪದಲ್ಲಿ ಚುಟ್ಟಿ, ಕಿರೀಟಗಳ ಹಿಂದಿನ ಇಳಿಗೂದಲ ಸಂಪ್ರ ದಾಯ ಹಾಗೂ ಹಸ್ತಮುದ್ರೆಗಳು ಪ್ರಾಚೀನ ಕೊಚ್ಚಿ ಸಂಸ್ಥಾನದಲ್ಲಿದ್ದ ಕಪ್ಲಿಂಗಾಡು ನಂಬೂದಿರಿಯು ಮಾಡಿದ ಸುಧಾರಣೆಗಳೆಂದು ತಿಳಿಯಲಾಗಿದೆ. ಇದೇ ರೀತಿ ಅಭಿನಯ ಪದ್ಧತಿಗೆ ಒಂದು ಸರಿಯಾದ ಅಸ್ತಿಭಾರವನ್ನು ಹಾಕಿಕೊಟ್ಟವನು ಕಲ್ಲಡಿಕೋಟ್ಟು ನಂಬೂದಿರಿ. ಕಲ್ಲಡಿಕೋಟ್ಟು ನಂಬೂದಿರಿಯ ಇನ್ನೊಂದು ವಿಶಿಷ್ಟಕೊಡುಗೆಯೆಂದರೆ ಕುಣಿತ ಮತ್ತು ಕಲಾಶಗಳ ಶಾಸ್ತ್ರೀಯ ರೂಪೀಕರಣ.
`ಕಲಾಶ'ಗಳ ಪದ್ಧತಿ ಕಥಕ್ಕಳಿಯ ಒಂದು ವಿಶಿಷ್ಟಲಕ್ಷಣ. `ಕಲಾಶ'ವೆಂದರೆ ಸರ್ವಸಾಮಾನ್ಯವಾಗಿ ಮುಕ್ತಾಯವೆಂದು ಅರ್ಥ. ನೃತ್ಯವೂ ವಾದ್ಯವೂ ನಿಯಮಬದ್ಧವಾಗಿ ಒಟ್ಟಿಗೇ ಮುಕ್ತಾಯಗೊಳ್ಳುವುದು ಕಲಾಶದ ಒಂದು ವೈಶಿಷ್ಟ್ಯ. ಪ್ರತಿಯೊಂದು ಹಾಡಿನ ಖಂಡಗಳನ್ನೂ ಹಾಡಿ ಮುಗಿದಾದೊಡನೆ ಪಾತ್ರಧಾರಿಯು 'ಕಲಾಶ' ಸಂಪ್ರದಾಯದಂತೆ ತಾಳವಾದ್ಯಗಳ ಮೇಳಕ್ಕೆ ಮಿಳಿತವಾಗಿ ಸ್ವಲ್ಪ ಹೊತ್ತು ಕುಣಿದು, ತಾಳದ ಮುಕ್ತಾಯವನ್ನು ಒಪ್ಪಿಸಬೇಕಾದುದು ಇಲ್ಲಿಯ ನಿಯಮ.
ಯಕ್ಷಗಾನದಲ್ಲಿಯೂ ಈ ಕಲಾಶಪದ್ಧತಿಯ ಒಂದು ಲಘುರೂಪವನ್ನು ನಾವು ಕಾಣಬಹುದು. ಇದನ್ನು 'ಸಭಾಕಲಾಸು' ಕುಣಿತ ಎನ್ನುತ್ತಾರೆ. ಕಥಕ್ಕಳಿಯಲ್ಲಿ ಪಾತ್ರಗಳ ಆಗಮನ, ನಿರ್ಗಮನಗಳಿಗೆ ವಿವಿಧ ಕಲಾಶಕುಣಿತಗಳನ್ನು ನಿಗದಿಗೊಳಿಸಲಾಗಿದೆ. ಕಲಾಶ ವೆಂದು ಹೆಸರಿಸದಿದ್ದರೂ, ಯಕ್ಷಗಾನದಲ್ಲೂ ಪಾತ್ರಗಳ ಈ ರೀತಿಯ ಆಗಮನ, ನಿರ್ಗ ಮನ, ಸನ್ನಿವೇಶದಲ್ಲಿ ಕೆಲವೊಂದು ನಿಯಮಗಳಿರುವುದನ್ನು ಕಾಣಬಹುದು. ಕಥಕ್ಕಳಿ ಯಲ್ಲಿ ಕೆಲವು ವಿಶಿಷ್ಟಪಾತ್ರಗಳು ರಂಗಭೂಮಿಗೆ ಬರುವ ಸಂಪ್ರದಾಯಕ್ಕೆ 'ಕಿಟತಕಿತಾಂ ವೆಚ್ಚು ಕಯರುಕ' ಎಂದು ಹೇಳುವುದಿದೆ. ಇದರಂತೆ ಯಕ್ಷಗಾನದಲ್ಲೂ `ಧೀಂಙಣದಲ್ಲಿ ಪ್ರವೇಶಿಸುವುದು' ಎಂಬೊಂದು ಪದ್ಧತಿ ಇದೆ. ಆದರೆ ಪ್ರವೇಶವಿಧಾನ ಮಾತ್ರ ಎರಡರಲ್ಲೂ ವ್ಯತ್ಯಸ್ತವಾಗಿದೆ. ಕಥಕ್ಕಳಿಯಲ್ಲಿ ಸುಮಾರು ಒಂಬತ್ತು ಕಲಾಶಗಳನ್ನು ಹೆಸರಿಸಬಹುದು.
1. ವೆಟ್ಟಂ ವೆಚ್ಚ ಕಲಾಶಂ = (- ಚೆಂಬಟ, ಅಟಂತ ತಾಳಗಳಲ್ಲಿ ಬರುತ್ತದೆ) = ಆ
2. ಮುರಿಕ್ಕಲಾಶಂ = ಂ
3. ಎಡಕ್ಕಲಾಶಂ = ಟ ಆ ಟ
4. ಅಡಕ್ಕಂ = (-ಹಾಡುಗಳ ಚರಣಾರಂಭದಲ್ಲಿ ಬಲಕ್ಕೆ ತಿರುಗಿ ಇಡುವ ಹೆಜ್ಜೆ)
5. ತೋಂಕಾರಂ = (-ಹಾಡುಗಳ ಚರಣಾವಸಾನದಲ್ಲಿ ಬರುತ್ತದೆ)
6. ಚೊಲ್ಲಿ ವಟ್ಟಂ ತಟ್ಟುಕ = ಜಿ
7. ಇರಟ್ಟಿಕಲಾಶಂ = (- ಚೆಂಬಟ, ಅಟಂತ, ಇತ್ಯಾದಿ ತಾಳಗಳಲ್ಲಿ ಬರುತ್ತದೆ)
8. ಎಡುತ್ತುಕಲಾಶಂ = (ವೀರ-ರೌದ್ರರಸಗಳಲ್ಲಿ ಓಡಿ ಬಂದು ಪ್ರವೇಶಿಸುವ ಪದ್ಧತಿಯೂ ಇದರಲ್ಲಿ ಬರುತ್ತದೆ. ಪ್ರವೇಶಿಸುವಾಗ ಪಾತ್ರಧಾರಿ ಆಯುಧಸಹಿತವಾಗಿ ಬರಬಹುದು; ನಿರಾಯುಧನಾಗಿಯೂ ಬರಬಹುದು.)
9. ಅಷ್ಟಕಲಾಶಂ = ('ತತಕಿಟತಿಕಿತ' ಎಂಬ ಕಲಾಶವನ್ನು ಒಂದೊಂದು ಮಾತ್ರೆ ಕಡಮೆ ಮಾಡುತ್ತಾ ನಾಲ್ಕು ಸಲ ಕುಣಿದು ಆದನಂತರ `ತೋಂತತ್ತೀಂ ತಕತೋಂ' ಎಂಬಿತ್ಯಾದಿ ಹೆಜ್ಜೆಗಳು - ಐದು ಕಲಾಶಗಳು. ಕೊನೆಗೆ 'ತ. ತ. ಕಿಟತಿಕಿತ' ಎಂಬ ಕಲಾಶ. ಇದಾದ ಅನಂತರವೇ ಮುಂದಿನ ಹಾಡು)
ಈಗ ಕಥಕ್ಕಳಿಯ ಪೂರ್ವರಂಗದ ಪದ್ಧತಿಯನ್ನು ವಿಮರ್ಶಿಸೋಣ. ಯಕ್ಷಗಾನದ ಸಭಾಲಕ್ಷಣಕ್ಕೂ ಇದಕ್ಕೂ ಇರುವ ಸಾಮ್ಯ - ವ್ಯತ್ಯಾಸಗಳು ಆಗ ಸ್ಪಷ್ಟವಾಗಬಹುದು. ಪೂರ್ವರಂಗದಲ್ಲಿ `ಆರಂಙ ಕೇಳಿ' ಅಥವಾ ಶುದ್ಧಮದ್ದಳೆ, ತೋಡಯಂ, ಮಂಗಳ ಶ್ಲೋಕಂ, ಪುರಪ್ಪಾಡು, ಮೇಳಪ್ಪದಂ - ಎಂಬ ಐದು ಅಂಗಗಳಿವೆ.
ಶುದ್ಧಮದ್ದಳೆ : ಕಥಕ್ಕಳಿಯಲ್ಲಿ ಈ ಕಾರ್ಯಕ್ರಮವು ರಾತ್ರೆ ಸುಮಾರು ಎಂಟು ಗಂಟೆಯ ಹೊತ್ತಿಗೆ ಪ್ರಾರಂಭವಾಗುತ್ತದೆ. ಮೊದಲು ರಂಗಭೂಮಿಯಲ್ಲಿ ದೊಡ್ಡದಾದ ಒಂದು ಎಣ್ಣೆಯ ದೀಪವನ್ನು ಉರಿಸುತ್ತಾರೆ. ಆ ದೀಪಕ್ಕೆ 'ಆಟ್ಟವಿಳಕ್ಕು' ಎಂದು ಹೆಸರು. ಆ ಬೆಳಕು ಹಚ್ಚಿದರೆ ಕಾರ್ಯಕ್ರಮ ಆರಂಭವಾಯಿತೆಂದೇ ಅರ್ಥ. ಶುದ್ಧಮದ್ದಳೆಯ ಕಾರ್ಯಕ್ರಮದಲ್ಲಿ ಮದ್ದಳೆ, ಜಾಗಟೆ, ಚಕ್ರತಾಳಗಳನ್ನು ಮಾತ್ರ ಬಳಸುತ್ತಾರೆ. ಆಗ ಚೆಂಡೆಗೆ ಅವಕಾಶವಿಲ್ಲ. ಆದ್ದರಿಂದಲೇ ಇದಕ್ಕೆ ಶುದ್ಧಮದ್ದಳೆಯೆಂಬ ಹೆಸರು ರೂಢಿ ಯಾಗಿದೆ. ಅಪೂರ್ವವಾಗಿ ಕೆಲವು ಊರುಗಳಲ್ಲಿ ಇದನ್ನು 'ಕೇಳಿಕ್ಕೈ' ಅಥವಾ 'ಗಣಪತಿಕ್ಕೈ' ಎಂದೂ ಕರೆಯುವುದಿದೆ.17 ಮದ್ದಳೆಗಾರನ ಕಲಾಪರಿಣತಿ ಹಾಗೂ ಆತನ ಮನೋಧರ್ಮದ ಪ್ರಕಾಶನಕ್ಕೆ ಮೀಸಲಾಗಿಟ್ಟ ಒಂದು ಅವಕಾಶವಿದು ಎನ್ನಲೂಬಹುದು.
ಯಕ್ಷಗಾನದಲ್ಲಿ ನಮ್ಮ ಮದ್ದಳೆಗಾರರಿಗೆ ಇಂಥ ವಿಶಿಷ್ಟ ಅವಕಾಶ ಸಿಗುವ ಸನ್ನಿವೇಶಗಳಿಲ್ಲ. 'ಒತ್ತುಮದ್ದಳೆಗಾರ'ನಿಗಂತೂ ವಿಶೇಷ ಹೊಣೆಗಾರಿಕೆಯೇ ಇಲ್ಲ. ಚೆಂಡೆಯ ರೌದ್ರನಾದದ ಮುಂದೆ ಧೀಂಕಾರ ಕೊಟ್ಟು ತಾಳ ಹಿಡಿಯುವುದಷ್ಟೇ ಅವನ ಕಸುಬು. ಪ್ರಧಾನಮದ್ದಳೆಗಾರನಿಗಾದರೆ ಭಾಗವತರು ಸೌಮ್ಯಪದಗಳನ್ನು ಹಾಡುವಾಗ ಒಂದಿಷ್ಟು ತನ್ನ ಚಾಕಚಕ್ಯತೆಯನ್ನು ಪ್ರದರ್ಶಿಸುವ ಅವಕಾಶ ಒದಗಲೂಬಹುದು, - ಅದೂ ಕೂಡ ಒಂದು ನಿರ್ದಿಷ್ಟಪರಿಧಿಯೊಳಗೆ ಮಾತ್ರ. ಆ ದೃಷ್ಟಿಯಿಂದ ಕಥಕ್ಕಳಿಯ 'ಶುದ್ಧಮದ್ದಳೆ'ಯ ಕಾರ್ಯಕ್ರಮ ನಿಜಕ್ಕೂ ವಿಶಿಷ್ಟವಾದುದೇ ಸರಿ.
ತೋಡಯಂ : ಶುದ್ಧಮದ್ದಳೆಯ ಅನಂತರದ ಕಾರ್ಯಕ್ರಮ ತೋಡಯಂ. ಇದು 'ತೋಷಕಂ' ಎಂಬ ಪದದಿಂದ ಹುಟ್ಟಿದ್ದಾಗಿರಬಹುದೆಂದು ಕೆಲವರ ಅಭಿಪ್ರಾಯ. ಇದು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿ ನಡೆಸುವ 'ನಾಂದಿ'ಯೆನ್ನಬಹುದು. ಗಣಪತಿ, ಕೃಷ್ಣ, ಶಿವ, ದುರ್ಗೆ, ಮುಂತಾದ ದೇವರ ಸ್ತುತಿ ಇಲ್ಲಿ ಪ್ರಧಾನವಾದ ಅಂಶ. ತೋಡಯಗಾನ ಆರಂಭವಾದೊಡನೆ ಇಬ್ಬರು ಬಾಲಕರು ಬಂದು ತೆರೆಯ ಅಡ್ಡದಲ್ಲಿ ನಿಂತು ಕುಣಿಯು ತ್ತಾರೆ. ಯಕ್ಷಗಾನದಲ್ಲಿ ಬರುವ 'ಕಟ್ಟುವೇಷ' ಅಥವಾ ಬಾಲಗೋಪಾಲವೇಷಗಳ ಕುಣಿತವು ರಂಗಭೂಮಿಯಲ್ಲಿ ಪ್ರತ್ಯಕ್ಷವಾಗಿ ಜರಗುವಂತಿದ್ದರೆ, ಕಥಕ್ಕಳಿಯ ಈ ಕುಣಿತವು ತೆರೆಯ ಅಡ್ಡದಲ್ಲಿ ಜರಗುತ್ತದೆ. ಇಲ್ಲಿ ಇನ್ನೊಂದು ವೈಶಿಷ್ಟ್ಯವೆಂದರೆ, ಈ ಸಂದರ್ಭದಲ್ಲಿ ಬಳಸ ಲಾಗುವ ನಾಲ್ಕು ಸ್ತುತಿಪದ್ಯಗಳೂ ಕಥಕ್ಕಳಿಯ ನಾಲ್ಕು ಪ್ರಧಾನತಾಳಗಳನ್ನು ಪ್ರತಿನಿಧೀ ಕರಿಸುತ್ತವೆ.
ಮಂಗಳಶ್ಲೋಕ : ಇದು ಕೇದಾರಗೌಳರಾಗದ ಆಲಾಪನೆಯೊಂದಿಗೆ ಆರಂಭವಾಗುತ್ತದೆ. ಕೋಟ್ಟಯಂ ತಂಬುರಾನರು ಬರೆದ `ಮಾತಂಗಾನನ'ವೆಂಬ ಶಾರ್ದೂಲವಿಕ್ರೀಡಿತ ವೃತ್ತವನ್ನು ಈ ಸಂದರ್ಭದಲ್ಲಿ ಹಾಡುವುದು ಪದ್ಧತಿ. ಈ ಶ್ಲೋಕದಲ್ಲಿ ವಿವಿಧ ದೇವರ ಹಾಗೂ ಕವಿಗಳ ಹೆಸರುಗಳು ಬರುತ್ತವೆ.
ಮಾತಂಗಾನನಮಬ್ಜವಾಸರಮಣೀಂ ಗೋವಿಂದಮಾದ್ಯಂ ಗುರುಮ್
ವ್ಯಾಸಂ ಪಾಣಿನಿಗರ್ಗನಾರದಕಣಾದಾದ್ಯಾನ್ ಮುನೀಂದ್ರಾನ್ ಬುಧಾನ್ |
ದುರ್ಗಾಂ ಚಾಪಿ ಮೃದಂಗಶೈಲನಿಲಯಾಂ ಶ್ರೀ ಪೋರ್ಕಲೀಮಿಷ್ಟದಾಮ್
ಭಕ್ತ್ಯಾಂ ನಿತ್ಯಮುಪಾಸ್ಮಹೇ ಸಪದಿ ನಃ ಕುರ್ವಂತ್ವಮೀ ಮಂಗಳಮ್ ||
ಯಕ್ಷಗಾನದಲ್ಲೂ ಇದೇ ರೀತಿ ಅನೇಕ ದೇವರನ್ನು ಒಟ್ಟಾಗಿ ಸ್ತುತಿಸುವ ಒಂದು ಭಾಮಿನಿ ಪದ್ಯವಿದೆ, ಕಥಾರಂಭದಲ್ಲಿ ಈ ಪದ್ಯವನ್ನು ಹಾಡುವುದು ರೂಢಿ.
ಅಂಬುರುಹದಳನೇತ್ರೆ ಶ್ರೀದು
ರ್ಗಾಂಬಿಕೆಯ ಬಲಗೊಂಡು ಭಕ್ತಿಯೊ
ಳಂಬಿಕಾಸುತ ವಿಘ್ನರಾಜನ ಪಿರಿದು ಸಂಸ್ತುತಿಸಿ |
ಅಂಬುನಿಧಿಯಾತ್ಮಜೆಗೆ ಕೈಮುಗಿ -
ದುಂಬುಜಾಸನ ವಾಣಿಯರ ಪಾ
ದಾಂಬುಜಕೆ ಪೊಡಮಡುತ ವರ್ಣಿಪೆನೀ ಕಥಾಮೃತವ ||
ಕಥಕ್ಕಳಿಯ 'ಮಂಗಳಶ್ಲೋಕ'ದ ಕೊನೆಯಲ್ಲಿ ಮದ್ದಳೆಗಾರನು ಸ್ವಲ್ಪ ಹೊತ್ತು ನಿಯಮಿತವಾಗಿ ಬಾರಿಸುವ ಪದ್ಧತಿಯಿದೆ. ಯಕ್ಷಗಾನದಲ್ಲಿ ಮೇಲೆ ಸೂಚಿಸಲಾದ ಪದ್ಯದ ಕೊನೆಯಲ್ಲಿ ಚೆಂಡೆಯವನು ನಿಯಮಿತವಾದ ಉರುಳಿಕೆ-ಮುಕ್ತಾಯಗಳನ್ನು ಬಾರಿಸುವ ಕ್ರಮವಿದೆ.
ಪುರಪ್ಪಾಡು : ಕಥಕ್ಕಳಿಯಲ್ಲಿ ಮಂಗಳಶ್ಲೋಕಾನಂತರ ಪುರಪ್ಪಾಡು ಶ್ಲೋಕವನ್ನು ಹಾಡು ತ್ತಾರೆ. ಪುರಪ್ಪಾಡು ಎಂಬುದು ಕಥಕ್ಕಳಿನೃತ್ಯದ ಆರಂಭವನ್ನು ಸೂಚಿಸುವ ಒಂದು ಘಟ್ಟ. ಆಗ ರಂಗಭೂಮಿಗೆ ಚೆಂಡೆಯವನೂ ಬರುತ್ತಾನೆ. ಶ್ಲೋಕವನ್ನು ಹಾಡಿದ ಬಳಿಕ ಆದಿ ತಾಳದಲ್ಲಿರುವ `ರಾಮ ರವಿಕುಲಸೋಮ ಜಗದಭಿರಾಮ ನೀರದಶ್ಯಾಮ' ಎಂಬ ಪುರಪ್ಪಾಡಿನ ಹಾಡನ್ನು ಭಾಗವತರು ಹಾಡುತ್ತಾರೆ. ಆಗ ಕಥೆಯ ನಾಯಕಪಾತ್ರ ಹಾಗೂ ಇತರ ಸಂಬಂಧಪಟ್ಟ ಪಾತ್ರಗಳು ರಂಗಭೂಮಿಗೆ ಬರುತ್ತವೆ. ಪುರಪ್ಪಾಡು ಪದ್ಯದಲ್ಲಿ ಒಟ್ಟು ನಾಲ್ಕು ಖಂಡಗಳಿವೆ.
ಒಂದನೆಯ ಖಂಡ ಹಾಡಿಯಾದೊಡನೆ ತೆರೆಯನ್ನೊಮ್ಮೆ ತಗ್ಗಿಸಿ, ಪಾತ್ರಗಳ ಮುಖ ಸಭೆಗೆ ಕಾಣುವಂತೆ ಮಾಡುತ್ತಾರೆ. ಆಗ ಪಾತ್ರಧಾರಿಗಳು ತಾಳಕ್ಕನುಸಾರವಾಗಿ ಕಣ್ಣಿನ ಗೊಂಬೆಗಳನ್ನು ಅತ್ತಿತ್ತ ಚಲಿಸುತ್ತಾರೆ. ನೃತ್ಯದ ಭಂಗಿ ಕಣ್ಣಿನಿಂದಲೇ ಪ್ರಾರಂಭ ವಾಗುತ್ತದೆ. ಅನಂತರ ತೆರೆಯನ್ನು ಮೊದಲಿನಂತೆ ಮೇಲಕ್ಕೆತ್ತಿ ಅಡ್ಡ ಹಿಡಿಯುತ್ತಾರೆ. ಈ ಅಭಿನಯದ ಭಂಗಿಗೆ 'ಒಂದನೆಯ ನೋಟ'ವೆಂದು ಹೆಸರು. ಹೀಗೆ ಒಟ್ಟು ನಾಲ್ಕು 'ನೋಟ' ಗಳಿವೆ. ಪ್ರತಿ 'ನೋಟ'ದ ಕೊನೆಯಲ್ಲಿಯೂ ವೇಷಧಾರಿಗಳು ಹಸ್ತ, ಶರೀರ ಹಾಗೂ ನೇತ್ರಗಳನ್ನು ಸಂಯೋಜಿಸಿ ಏಕಪ್ರಕಾರವಾಗಿ ತಾಳಕ್ಕೆ ಅನುಗುಣವಾಗಿ ನೃತ್ಯ ಮಾಡುತ್ತಾರೆ. ಇಲ್ಲಿ ನೃತ್ಯವೇ ಪ್ರಧಾನ. ರಸಾಭಿನಯವಾಗಲಿ ಹಸ್ತಮುದ್ರೆಗಳಾಗಲಿ ಇಲ್ಲಿ ಅಗತ್ಯವಿಲ್ಲ.19 ಇದಾದ ಅನಂತರ 'ನಿಲಪ್ಪದಂ' ಎಂಬ ಇನ್ನೊಂದು ಹಾಡನ್ನು ಹಾಡುತ್ತಾರೆ.
ರಾಗ ಭೈರವಿ, ತಾಳ - ಮುರಿಯಟಂತ
ದೇವ ದೇವ ಹರೇ ಕೃಪಾಲಯ
ದೇವ ದೇವ ಹರೇ |
ದೇವ ರಿಪುವನದಾವ ಜಯ ವಸು -
ದೇವನಂದನ ಪಾಹಿ ಸತತಂ || || ದೇವ ||
ವಾರಿಜದಳನಿಭಲೋಚನ ಶೌರೇ |
ವಾರಣತಾಪವಿಮೋಚನ ರಣ -
ದಾರಿತ ಘೋರದಶಾನನ ಪರಿ -
ಪೂರಿತ ಭಕ್ತಮನೋರಥ || || ದೇವ ||
ಈ ಹಾಡಿನ ನಡುವೆ ಹಾಗೂ ಮುಕ್ತಾಯದ ಅನಂತರದಲ್ಲಿ ಪಾತ್ರಧಾರಿಗಳು ಕೈ-ಕಾಲು-ಕಣ್ಣುಗಳು ಚಲನೆಯೊಂದಿಗೆ ಅಟಂತ ತಾಳದ ಎಲ್ಲ 'ಕಾಲ'ಗಳಲ್ಲಿಯೂ 'ಕಲಾಶ'ದ ಹೆಜ್ಜೆಗಳನ್ನಿಟ್ಟು ಕುಣಿಯುವ ಸಂಪ್ರದಾಯವಿದೆ. ಯಕ್ಷಗಾನಕಥಾರಂಭದಲ್ಲೂ ಭಾಗವತರು ಇದೇ ರೀತಿಯ `ಓ ದೇವ ದೇವ ...' ಎಂಬ ಒಂದು ಪದ್ಯವನ್ನು ಹಾಡುವುದಿದೆ.
ಮೇಳಪ್ಪದ : ಕಥಕ್ಕಳಿ ಪೂರ್ವರಂಗದ ಕೊನೆಯ ಘಟ್ಟವೇ ಮೇಳಪ್ಪದವಾಗಿದೆ. ಜಯ ದೇವಕವಿಯ ಗೀತಗೋವಿಂದದ21 `ಮಂಜುತರ ಕುಂಜತಲ ಕೇಳಿಸದನೇ' ಎಂಬ ಗೀತ ವನ್ನು ಈ ಸಂದರ್ಭದಲ್ಲಿ ಹಾಡುವ ಕಾರಣದಿಂದಾಗಿ ಈ ಕಾರ್ಯಕ್ರಮಕ್ಕೆ 'ಮಂಜು ತರ' ಕಾರ್ಯಕ್ರಮವೆಂಬ ಇನ್ನೊಂದು ಹೆಸರೂ ಇದೆ. ಯಕ್ಷಗಾನದಲ್ಲಿ 'ಮುದದಿಂದ' 'ಗಜಮುಖದವಗೆ' 'ಕರದೊಳು' ಮುಂತಾದ ಹೆಸರುಗಳಿರುವ ಹಾಗೆ ! ಈ ಗೀತದ ಪಲ್ಲವಿ ಕಳೆದೊಡನೆ ಪುರಪ್ಪಾಡು ವೇಷಗಳು ಮರೆಯಾಗುವುವು. ಮುಂದೆ ಚೆಂಡೆ-ಮದ್ದಳೆ-ಜಾಗಟೆ-ಚಕ್ರತಾಳಗಳ ವಾದಕರ ಪಾಂಡಿತ್ಯದ ಪ್ರದರ್ಶನದ ಸನ್ನಿವೇಶ. ಮೇಳಪ್ಪದದ ಪ್ರತಿಚರಣದ ಅಂತ್ಯದಲ್ಲಿ ಹಾಗು ಮುಕ್ತಾಯದ ಘಟ್ಟದಲ್ಲಿ ತಮ್ಮ ಅಮೋಘ ಕಲಾಪ್ರೌಢಿಮೆಯನ್ನು ಪ್ರದರ್ಶಿಸಲು ಹಿಮ್ಮೇಳವಾದಕರಿಗೆ ಅವಕಾಶದೊರೆಯುತ್ತದೆ. ಯಕ್ಷಗಾನದಲ್ಲಿ ಇಂಥಾದ್ದೇ ಸಂದರ್ಭಕ್ಕೆ ನಾವು 'ಪೀಠಿಕೆ'ಯೆಂದು ಕರೆಯುತ್ತೇವೆ. ಎರಡೂ ಸಂಪ್ರದಾಯಗಳ ಉದ್ದೇಶ ಒಂದೇ ಆದರೂ ಪದ್ಧತಿಗಳಲ್ಲಿ ಸಾಕಷ್ಟು ವ್ಯತ್ಯಾಸವಿದೆ.
ಕಥಕ್ಕಳಿಯಲ್ಲಿರುವ ಹೆಚ್ಚಿನ ಪದ್ಯಗಳಲ್ಲೂ ಪಲ್ಲವಿ, ಅನುಪಲ್ಲವಿ, ಚರಣಗಳೆಂಬ ಮೂರು ಅಂಶಗಳನ್ನು ಕಾಣಬಹುದು. ಕೆಲವೆಡೆ ಮಾತ್ರ ಅಪೂರ್ವವಾಗಿ ಅನುಪಲ್ಲವಿಯ ಲೋಪವನ್ನು ಕಾಣುತ್ತೇವೆ. ಇನ್ನು ಕೆಲವೆಡೆ ಚರಣಗಳಿಂದಲೇ ಪದ್ಯಗಳು ರಚಿತವಾದ ಸಂದರ್ಭಗಳೂ ಇವೆ. ಕಥಕ್ಕಳಿಯ ಪ್ರಯೋಗಗಳಿಗೆ ಹಿನ್ನೆಲೆಯಾಗಿರುವ ಕೃತಿಗಳನ್ನು ಆಟ್ಟಕಥಾಸಾಹಿತ್ಯವೆನ್ನುವುದು ಪದ್ಧತಿ. ಯಕ್ಷಗಾನದಲ್ಲಿ ನಾವು ಇಂತಹ ಹಾಡುಗಬ್ಬಗಳನ್ನು `ಪ್ರಸಂಗ'ಗಳೆಂದು ಕರೆಯುತ್ತೇವೆ. `ಪ್ರಸಂಗ' ಎಂಬ ಪದದ ಅರ್ಥ - ಸಂದರ್ಭ ಅಥವಾ ಸನ್ನಿವೇಶ. ಮಲೆಯಾಳದಲ್ಲಿ ಪ್ರಸಂಗಶಬ್ದಕ್ಕೆ `ಭಾಷಣ'ವೆಂಬ ಅರ್ಥವಿದೆ. ಹಾಗೆಯೇ 'ಕಥಾಕಾಲಕ್ಷೇಪ' ಎಂಬ ಅರ್ಥದಲ್ಲಿ 'ಕಥಾಪ್ರಸಂಗಂ' ಎಂಬ ಪದವನ್ನು ಬಳಸುವುದಿದೆ. ಆಟ್ಟಕಥಾಸಾಹಿತ್ಯವು ಸಂಸ್ಕೃತ ಹಾಗೂ ಮಲೆಯಾಳ ಮಿಶ್ರವಾದ ಹಾಡುಗಳಿಂದಲೂ, ಕೆಲವೆಡೆ ಶುದ್ಧಸಂಸ್ಕೃತಶ್ಲೋಕಗಳಿಂದಲೂ ಅಡಕವಾಗಿದ್ದು, ಅತ್ಯುತ್ತಮ ಕಾವ್ಯಗುಣ ಗಳಿಂದೊಡಗೂಡಿ ಹೃದ್ಯವಾಗಿದೆ. ಯಕ್ಷಗಾನರಾಮಾಯಣದಲ್ಲಿ ಕೊಟ್ಟಾರಕ ಮಹಾರಾಜರ ರಾಮನಾಟ್ಟ ಪ್ರಬಂಧದ ಛಾಯೆ ಇದೆ. ಒಂದೆರಡು ಉದಾಹರಣೆಗಳನ್ನು ನೋಡೋಣ.
ರಾಗ - ಕೇದಾರಗೌಳ, ಆದಿತಾಳ
ಮಾರೀಚ ನಿಶಾಚರ ಸಂತತ | ವೀರ ಮನೋಹರ ವಿಕ್ರಮಶೌರ್ಯ |
ಮಾರಾಂಗ ಶರೀರ ಮನೋಹರ | ಕಾರುಣ್ಯ ಸಮುದ್ರಗಂಭೀರ ||
(ಯಕ್ಷಗಾನ - ಪಂಚವಟಿ)
ಮಾರೀಚ ನಿಶಾಚರ ಪುಂಗವ ಮಾತುಲ ಮಮ ಮಾನಸತಾರಿಲ |
ಪಾರಂ ವಳರುನ್ನೊರು ಖೇದಂ ಅಧುನಾ ನೀಯಿದು ಕೇಳ್ಕಣಂ ||
(ರಾಮನಾಟ್ಟಪ್ರಬಂಧ)
ಶಾರ್ದೂಲವಿಕ್ರೀಡಿತ ವೃತ್ತ
ಮಾರೀಚಂ ಮಿಗಮಾಗಿ ಪಂಚವಟಿಗಂ ಬಂದಾಗಲೋಡಾಡಲುಂ |
ಸೌರಮ್ಯಾತಿಶಯ ಪ್ರಧಾನಕರದಿಂ ಕಂಡಾಗಲಾ ಜಾನಕೀ ||
ಚೋರತ್ವಂಗಳ ಮಾಯದಾಕೃತಿಯನೆಂದಾ ಕಾಂತೆ ತಾ ಕಾಣದೇ |
ಭೂರೀ ವಿಸ್ಮಿತೆಯಾಗಿ ಕಾಂತನೊಡನಂ ತಾ ದೈನ್ಯದಿಂದೆಂದಳು ||
(ಯಕ್ಷಗಾನ - ಪಂಚವಟಿ)
(ಈ ರೀತಿಯ ಶಾರ್ದೂಲವಿಕ್ರೀಡಿತ ವೃತ್ತಗಳನ್ನು ರಾಮನಾಟ್ಟಪ್ರಬಂಧದಲ್ಲಿ ರಾಗತಾಳಬದ್ಧವಾದ ಪದ್ಯಗಳಂತೆ ನಮೂದಿಸಿರುವುದು ಕಂಡುಬರುತ್ತದೆ.)
ಇತ್ಥಂ ಚೊಲ್ಲಿ ನಿಶಾಚರೇಂದ್ರನುಡನೇ | ಮಾರೀಚನೋಡಂಜಸಾ |
ತಸ್ಥೌ ಪಂಚವಟೀಕ್ಕಡುತ್ತೊರು ರಥೇ | ಮಾಯಾವಿ ಮಾಯಾ ಬಲಾಲ್ |
ಶುದ್ಧಂ ಪೊನ್ಮೃಗಮಾಯ್ ಕಳಿಚ್ಚು ವಿಪಿನೇ | ಮಾಯಾವಿ ಮಾರೀಚನುಂ |
ಬದ್ಧಾನಂದಮುವಾಚ ಕಂಡು ದಯಿತಾಂ | ಶ್ರೀರಾಮಚಂದ್ರನ್ ಮುದಾ ||
(ರಾಮನಾಟ್ಟಪ್ರಬಂಧ)
ಬಾಲಕಾ ಗಜ | ಪುಷ್ಪದಾ ನಿಜ | ಮಾಲೆಯಿಟ್ಟರೆ | ಇವನ ಕೊರಳಿಗೆ
(ಯಕ್ಷಗಾನ - ವಾಲಿಸಂಹಾರ)
ಬಾಲ ನೀರಜ ಪುಷ್ಪಿಯಾಂ ಲತಾ | ಮಾಲಯಾಕ್ಕಿಯ ಚೆಡುಕವನ್ಗಳೇ |
(ರಾಮನಾಟ್ಟಪ್ರಬಂಧ)
ರಾಮನಾಟ್ಟಪ್ರಬಂಧದಲ್ಲಿ 'ನೀರಜಪುಷ್ಪ'ದ ಮಾಲೆಯನ್ನು ಶ್ರೀರಾಮನು ಸುಗ್ರೀವ ನಿಗೆ ಹಾಕಿದ ಪ್ರಸ್ತಾಪವಿದ್ದರೆ ಯಕ್ಷಗಾನ ರಾಮಾಯಣದಲ್ಲಿ ಗಜಪುಷ್ಪಮಾಲೆಯನ್ನು ಹಾಕಿದ ವಿಷಯವಿದೆ. ಈ ಗಜಪುಷ್ಪದ ವಿವರಣೆಯನ್ನು ಕವಿಯು ತೊರವೆ ರಾಮಾ ಯಣದಿಂದ ಆಯ್ದುದಿರಬೇಕು.
ಕರೆದು ರಘುಪತಿ ತಮ್ಮನನು ಸಂ |
ಗರಕೆ ಕುರುಹಿಗೆ ಕೊರತೆ ಬಾರದ
ತೆರನ ಮಾಡೆನೆ ನಳನಳಿಪ ಗಜಪುಷ್ಪಮಾಲಿಕೆಯ....
(ತೊರವೆ ರಾಮಾಯಣ)
ಸೌಂದರ್ಯಾನ್ವೇಷಕನಾದ ಕವಿಯಾಗಲಿ ಕಲಾವಿದನಾಗಲಿ ಸುಂದರವಾದ ವಸ್ತುಗಳನ್ನು, ವಿಷಯಗಳನ್ನು ಅಲ್ಲಿಂದ - ಇಲ್ಲಿಂದ ಆಯ್ದುಕೊಳ್ಳುವುದು ಸಹಜ. ಅವನಲ್ಲಿ ತನ್ನ ಕಾವ್ಯರೂಪ ಅಥವಾ ಕಲಾರೂಪವು ಸರ್ವಾಂಗಸುಂದರವಾಗಿರಬೇಕೆಂಬ ಒಂದೇ ದೃಷ್ಟಿ ಮಾತ್ರ ಅಡಕವಾಗಿರುತ್ತದೆ. ಸಹೃದಯರ ಪ್ರೀತಿಯೇ ಅವನ ಚರಮ ಲಕ್ಷ್ಯ. ಕಲೆಯ ಸಮೃದ್ಧಿಯೇ ಅವನ ಸರ್ವೊನ್ನತಧ್ಯೇಯ.22
ಗ್ರಂಥಋಣ:
1. ಕಥಕಳಿಪ್ರಸ್ಥಾನಂ (ಮಲೆಯಾಳ)
2. ಕಥಕಳಿಯಾಟ್ಟಪ್ರಕಾರಂ (ಮಲೆಯಾಳ)
3. ಗರುಡಾಚಲ ಯಕ್ಷಗಾನಮು (ತೆಲುಗು)
4. ಚಿತ್ರಾಂಗಿ ಸಾರಂಗಧರ ನಾಟಕಮು ಯಕ್ಷಗಾನಮು (ತೆಲುಗು)
[`ಯಕ್ಷಗಾನಮಕರಂದ', ಪೊಳಲಿ ಶಂಕರನಾರಾಯಣ ಶಾಸ್ತ್ರಿ ಸಂಸ್ಮರಣಗ್ರಂಥ, 1980 - ಇದರಲ್ಲಿ ಪ್ರಕಟಿತ, `ಪೊಂಗದಿರು', ಪುಣಿಂಚತ್ತಾಯ ಷಷ್ಟ್ಯಬ್ದ ಅಭಿನಂದನಗ್ರಂಥ, 1998 -ಇದರಲ್ಲಿ ಪುನರ್ಮುದ್ರಿತ]