ಬಹುಭಾಷಾಜ್ಞಾನ, ಉನ್ನತಮೇಧಾವಿತ್ವ, ವಿಶಾಲಪುಸ್ತಕಭಂಡಾರ ಹಾಗೂ ನೂತನ ವಿಚಾರಗಳ ಬಗೆಗಿನ ಕುತೂಹಲ - ಇವು ದಿ. ಗೋವಿಂದ ಪೈಯವರನ್ನು ಉನ್ನತಮಟ್ಟದ ಒಬ್ಬ ಸಂಶೋಧಕನನ್ನಾಗಿ ಮಾಡಿದುವು ಎನ್ನಬಹುದು. ಕಾವ್ಯರಚನೆಗೆ ಕಲ್ಪನಾಶಕ್ತಿ ಹೇಗೆ ಮುಖ್ಯವೋ ಹಾಗೆಯೇ ಸಂಶೋಧಕನಿಗೆ ಕುತೂಹಲಪ್ರವೃತ್ತಿ ಅತಿ ಮುಖ್ಯವಾದುದು. ಜೊತೆಗೆ ಸತತಾಭ್ಯಾಸವೂ ಬೇಕು. ಈ ಎರಡು ಗುಣಗಳಂತೂ ಪೈಗಳಲ್ಲಿ ಧಾರಾಳವಾಗಿತ್ತು.
ಅವರು ಸಂಶೋಧನೆಯನ್ನು ಪ್ರಾರಂಭಮಾಡಿದ್ದು 1926ರಲ್ಲಿ. ಸಂಶೋಧನೆಯ ವಿಷಯ ಅವರೇ. ಅವರೇ -ಎಂದರೆ, ಅವರ ಸಮಾಜ - ಸಾರಸ್ವತಸಮಾಜ. ಸಾರಸ್ವತ ಸಮಾಜದವರು ಎಲ್ಲಿಂದ ಬಂದರು? ಅವರ ಮೂಲ ಎಲ್ಲಿ? -ಎಂಬಿತ್ಯಾದಿ ವಿಚಾರ ಗಳನ್ನು ಅವರು ಗಾಢವಾಗಿ ಅಧ್ಯಯನಮಾಡಿದರು.
`ಕಾಸರಗೋಡು' ಎಂದಾಗ ಸಮಗ್ರ ಕನ್ನಡಿಗರಿಗೆ ನೆನಪಾಗುವ ಒಂದು ಅಕ್ಷರ `ಪೈ'; ಪೈ ಎಂದರೆ ಮಂಜೇಶ್ವರ ಗೋವಿಂದ ಪೈ ಎಂದು ಅರ್ಥ. ಅದೇ ಸಾಲಿನಲ್ಲಿ ಮತ್ತೆ ನಮಗೆ ನೆನಪಾಗುವ ಇನ್ನೊಂದು ಅಕ್ಷರ `ರೈ'. ರೈ ಎಂದರೆ ಸಂಸ್ಕೃತದಲ್ಲಿ `ಸಂಪತ್ತು' ಎಂದರ್ಥ. ಅದು ವೇದಕಾಲದ ಅರ್ಥ. ಆ ಅರ್ಥ ಈಗ ನಮ್ಮ ಜನರಿಗೆ ಮರೆತುಹೋಗಿದೆ. ಈಗ ನಮಗೆ ನೆನಪಾಗುವ ಅರ್ಥ `ರೈ ಎಂದರೆ ಕಿಞ್ಞಣ್ಣ ರೈ' ಎಂದು ಮಾತ್ರ. ಒಂದನೆಯ ತರಗತಿಯ ಮಕ್ಕಳಿಂದ ತೊಡಗಿ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳ ವರೆಗೂ ಈ ಪದ ಸುಪರಿಚಿತವಾದದ್ದು. ಆದರೆ, ಶ್ರೀ ರೈಯವರು ತಮ್ಮ ಹೆಸರಿನ ಮೂಲಕ ಆ ಹಳೆಯ ಅರ್ಥವನ್ನೂ ಪ್ರತಿಬಿಂಬಿಸುತ್ತಿದ್ದಾರೆ ಎನ್ನಲೂ ಬಹುದು. ಯಾಕೆಂದರೆ, ಕಾಸರಗೋಡಿನ ಅಥವಾ ಕನ್ನಡನಾಡಿನ ಸಾಮಾಜಿಕ ಸಾಹಿತ್ಯಕ ಹಾಗೂ ಸಾಂಸ್ಕೃತಿಕರಂಗಕ್ಕೆ ರೈಯವರ ಕೊಡುಗೆ ಸಂಪದ್ಭರಿತವಾದದ್ದು.
ಡಿ.ವಿ.ಜಿ.- ಈ ಶತಮಾನದ ಒಂದು ಹಿರಿಯ ಶಕಪುರುಷ. ಅವರ ಪ್ರತಿಭೆ ಮತ್ತು ಪಾಂಡಿತ್ಯ ಎರಡೂ ಅಗಾಧ. ಅವರ ವ್ಯಕ್ತಿತ್ವವನ್ನು ಏಕಕೋನದಲ್ಲಿ ನಿಂತು ಅಳೆಯಲು ಸಾಧ್ಯವಿಲ್ಲ. ಅವರು ಕವಿಗಳೂ ಹೌದು - ದಾರ್ಶನಿಕರೂ ಹೌದು; ಪತ್ರಿಕೋದ್ಯಮಿಗಳೂ ಹೌದು, ಸಮಾಜಸೇವಕರೂ ಹೌದು. ಈ ಎಲ್ಲ ಕಾರ್ಯಕ್ಷೇತ್ರಗಳ ಅನುಭವಗಳೂ ಅವರ ಮಟ್ಟಿಗೆ ಪರಸ್ಪರ ಪೂರಕವಾಗಿವೆ. ಡಿ.ವಿ.ಜಿ., ಎಂಥ ಕವಿ? ದಾರ್ಶನಿಕಕವಿಯೋ? ಸೌಂದರ್ಯೋಪಾಸಕ ಕವಿಯೋ? ಹೊಸ ವಿಚಾರಕ್ರಾಂತಿಯನ್ನು ಬಯಸುವ ಕವಿಯೋ? ಎಂದು ಪ್ರಶ್ನಿಸುವು ದಾದರೆ, ಅವರು ಎಲ್ಲವೂ ಹೌದು. ಅವರ ಕಗ್ಗಗಳಲ್ಲಿ ಒಂದು ರೀತಿಯ ದಾರ್ಶನಿಕ ಪಂಥವಿದ್ದರೆ, ಅಂತಃಪುರಗೀತಗಳಲ್ಲಿ ಸೌಂದರ್ಯೋಪಾಸನೆಯ ಮೆರುಗು ಕಾಣುತ್ತದೆ. ಯಾವುದೇ ಹೊಸ ವೈಚಾರಿಕ ಅಂಶವನ್ನು ಅವರ ಹೃದಯವು ಮುಕ್ತವಾಗಿ ಸ್ವಾಗತಿಸುತ್ತದೆ - ಎಂಬುದಕ್ಕೆ ಅವರು ಅನುವಾದಿಸಿದ `ಉಮರನ ಒಸಗೆ' ಸಾಕ್ಷಿ.
ಶಿವಳ್ಳಿ ಎನ್ನುವ ಗ್ರಾಮಕ್ಕೆ ಮೊದಲು ಬಂದು ನೆಲೆಯಾದವರು ಶಿವಳ್ಳಿ ಬ್ರಾಹ್ಮಣರೆಂದು ಚರಿತ್ರೆ ಹೇಳುತ್ತದೆ. ಆಗಿನ ಶಿವಳ್ಳಿ ಗ್ರಾಮ, ಈಗಿನ ಶಿವಳ್ಳಿ ಗ್ರಾಮದಷ್ಟು ಸಣ್ಣದೇನಲ್ಲ. ಈಗಿನ ಕಡಿಯಾಳಿ, ಇಂದ್ರಾಳಿ, ಪೆರಂಪಳ್ಳಿ, ಮಣಿಪಾಲ ಎಲ್ಲಿ ಊರುಗಳು ಸೇರಿದ ಒಂದು ದೊಡ್ಡ ಗ್ರಾಮ ಆಗಿನ ಶಿವಳ್ಳಿ ಗ್ರಾಮ. ಈಗ ಉಡುಪಿಯಲ್ಲಿ ಬುದ್ಧಿ ಜೀವಿಗಳಿರುವ ಒಂದು ಪ್ರದೇಶವಾಗಿದೆ ಈ ಸ್ಥಳಗಳು. ಪೆರಂಪಳ್ಳಿ, ಪಾರ್ವಂಪಳ್ಳಿ, ಬ್ರಾಹ್ಮಣರ ಹಳ್ಳಿ (ಬ್ರಾಹ್ಮಣರು ಇರುವ ಹಳ್ಳಿ) ಎಂದರ್ಥ. `ಪಲ್ಲಿ' ದನಕರುಗಳು ಸಾಕಲು ಅನುಕೂಲವಾಗುವ ಜಾಗ - ಶಿವಪಲ್ಲಿ - ಶಿವಳ್ಳಿ ಎಂದರೆ ಶಿವಾರಾಧನೆ ನಡೆಯುವಂಥ ಜಾಗ ಎಂದರ್ಥ. ಶಿವಳ್ಳಿ ಗ್ರಾಮದಲ್ಲಿ ಆಗಿನ ಮಹಾಲಿಂಗೇಶ್ವರ ದೇವಸ್ಥಾನ ಈಗಲೂ ಇದೆ.
ಮಯೂರವರ್ಮನು ಅಹಿಚ್ಛತ್ರದಿಂದ ಕರೆಸಿದ ಬ್ರಾಹ್ಮಣರು ತುಳುನಾಡಿನ ವಿವಿಧ ಗ್ರಾಮಗಳಲ್ಲಿ ಬಂದು ನೆಲೆಸಿದರು. ಆ ಗ್ರಾಮಗಳು ಒಟ್ಟು ಮೂವತ್ತೆರಡು ಎಂದು `ಗ್ರಾಮಪದ್ಧತಿ'ಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅವನ ನಾಡಿನಲ್ಲಿ ಶ್ರೌತಸ್ಮಾರ್ತಾದಿ ಕರ್ಮಾನು ಷ್ಠಾನವು ನಿರಂತರವಾಗಿ ನಡೆಯುತ್ತಿರಬೇಕು ಎಂಬ ಉದ್ದೇಶದಿಂದ, ಪ್ರತಿಯೊಂದು ವಿಪ್ರ ಕುಟುಂಬಕ್ಕೂ ಒಂದೊಂದು ವೃತ್ತಿಯನ್ನು ಕಲ್ಪಿಸಲಾಯಿತು. ಹೀಗೆ ವೃತ್ತಿನಿರತರಾದವರಿಗೆ ಭಟ್ಟರು, ತಂತ್ರಿಗಳು, ಪಂಡಿತರು, ಪಕ್ಷನಾಥರು, ಸಭಾಪತಿಗಳು, ಬಲ್ಲಾಳರು, ಅಣ್ಣ ಗ್ರಾಮಣಿಗಳು, ಗ್ರಾಮಣಿಗಳು -ಇತ್ಯಾದಿ ಹೆಸರುಗಳನ್ನು ನೀಡಲಾಯಿತು. ಮೂಡ ಹದಿನಾರು ಗ್ರಾಮಕ್ಕೆ ಚಿಟ್ಟುಪಾಡಿ ಬಲ್ಲಾಳರು ಪಕ್ಷನಾಥರೆಂದೂ ಪಡು ಹದಿನಾರು ಗ್ರಾಮಕ್ಕೆ ನಿಡಂಬೂರು ಬಲ್ಲಾಳರು ಪಕ್ಷನಾಥರೆಂದೂ ಅಂದಿನ ತೀರ್ಮಾನವಾಗಿತ್ತು. ಚಿಟ್ಟುಪಾಡಿ ಬಲ್ಲಾಳರು, ನಿಡಂಬೂರು ಬಲ್ಲಾಳರು ಅರಸಾಡಳಿತೆಯಲ್ಲಿ ಸಹಭಾಗಿಗಳಾಗಿದ್ದರು ಎಂಬ ಸೂಚನೆ ತುಳುಮಹಾಭಾರತದ ಪೀಠಿಕಾಭಾಗದಿಂದ ತಿಳಿದುಬರುತ್ತದೆ. ತುಳು ಮಹಾ ಭಾರತದಲ್ಲಿ ಅರಸ ಎಂಬ ಅರ್ಥದಲ್ಲಿಯೇ 'ಬಲ್ಲಾಳ' ಎಂಬ ಪದವನ್ನು ಬಳಸಿದ ಉದಾಹರಣೆಯಿದೆ.
ಕಾಸರಗೋಡು ಒಂದು ಅಪೂರ್ವಗುಣವುಳ್ಳ ನೆಲ ಎನ್ನಬಹುದು. ಇಲ್ಲಿ ಪರಸ್ಪರ ಪ್ರಭಾವಿತವಾಗುತ್ತಿರುವ ಎರಡು ವಿಭಿನ್ನಸಂಸ್ಕೃತಿಗಳ ಛಾಯೆಯಿದ್ದು ಅವು ಈ ನೆಲದ ಗುಣವನ್ನು ಹೆಚ್ಚಿಸಿವೆ. `ಪಯಸ್ವಿನೀಂ ಕೇರಳಭೂಷಣಾಯಿತಾಮ್' ಎಂದು ಕಾವುಗೋಳಿಯ ಶ್ರೀ ನಾರಾಯಣ ಪಂಡಿತಾಚಾರ್ಯನು ಮಧ್ವವಿಜಯದಲ್ಲಿ ಹೇಳಿದ್ದಾನೆ. ಎಂದರೆ ಪಯ ಸ್ವಿನಿಯು ಕೇರಳದ ಗಡಿ ಎಂಬ ವಿಚಾರ ಸುಮಾರು ಕ್ರಿ.ಶ. ಹನ್ನೆರಡನೆಯ ಶತಮಾನ ದಲ್ಲೇ ಇತ್ಯರ್ಥವಾದಹಾಗಾಯಿತು. ಹಾಗಾಗಿ ಪಯಸ್ವಿನಿಯಿಂದೀಚೆಗಿನ ನೆಲ ಶುದ್ಧ ಕನ್ನಡನಾಡು ಎಂಬುದರಲ್ಲಿ ಸಂದೇಹವಿಲ್ಲ.
ರಾಮಾಯಣವನ್ನು ರಚಿಸಿದ ಕವಿ ವಾಲ್ಮೀಕಿ. ಪೂರ್ವಾಶ್ರಮದಲ್ಲಿ ವ್ಯಾಧನಾಗಿದ್ದು, ಸುಲಿಗೆ-ದರೋಡೆಗಳನ್ನು ನಡೆಸುತ್ತಿದ್ದವನು ಅನಂತರ ಸಪ್ತರ್ಷಿಗಳ ಸಂಸರ್ಗದಿಂದ, ಅವರ ಮಾತಿನಿಂದ, ತಾನು ಮಾಡುತ್ತಿದ್ದ ಕೆಲಸ ತಪ್ಪು ಎಂಬ ಅರಿವಾಗಿ, ಪಶ್ಚಾತ್ತಾಪ ಹೊಂದಿ, ತಪಸ್ಸು ಮಾಡಿ, ಹೊಸ ವ್ಯಕ್ತಿಯಾಗಿ ಮೂಡಿಬಂದವನು. `ವಲ್ಮೀಕ' ಎಂದರೆ ಹುತ್ತ. ವ್ಯಾಧನು ತಪಸ್ಸಿಗೆ ಕುಳಿತ ಸ್ಥಳದಲ್ಲಿ ಕಾಲಾಂತರದಲ್ಲಿ ಹುತ್ತವು ಬೆಳೆಯಿತು. ವಲ್ಮೀಕದಿಂದ ಅಥವಾ ಹುತ್ತದಿಂದ ಹುಟ್ಟಿಬಂದವನೇ `ವಾಲ್ಮೀಕಿ'. ಹುತ್ತದ ಮಗ ಎಂದರೆ ಮಣ್ಣಿನ ಮಗ ಎಂದರ್ಥ. ವ್ಯಾಧನು ನಿಜವಾದ ಈ ಮಣ್ಣಿನ ಮಗ ಅಲ್ಲ.
'Mahajanapada' book contains complete set of articles written by Dr. Venkataraja Puninchathaya. This book is edited by Dr. Padekallu Vishnu Bhat. To avail this book contact here.
By Dr. Radhakrishna Bellur
ಶಿವಳ್ಳಿ ಬ್ರಾಹ್ಮಣರ ಕುಲನಾಮಗಳು ಮತ್ತು ಸ್ಥಳನಾಮಗಳು
By Dr. Venkataraja Puninchathaya
By Dr. Venkataraja Puninchathaya
ರಾಮಾಯಣದಲ್ಲಿ ಪ್ರತಿಪಾದಿತವಾದ ಭಾರತೀಯ ಸಂಸ್ಕೃತಿ
By Dr. Venkataraja Puninchathaya
Shivalli Brahmins Tulu Kavya Puninchathaya ಶಿವಳ್ಳಿ Mahajanapada DVG ತುಳು Research Kayyara Govinda Pai Kasaragod Pongadiru Kannada ಸಾಹಿತ್ಯ
This site is dedicated to 'Tulu Mahatma' Venkataraja Puninchathaya. All rights reserved ©
"Gayatri", Ithanadka
Kakkebettu post, Mulleria
Kasaragod dist, Kerala
671543
Ph : 04994260430
Powered by AEVUM DEVELOPERS
ಬಹುಭಾಷಾಜ್ಞಾನ, ಉನ್ನತಮೇಧಾವಿತ್ವ, ವಿಶಾಲಪುಸ್ತಕಭಂಡಾರ ಹಾಗೂ ನೂತನ ವಿಚಾರಗಳ ಬಗೆಗಿನ ಕುತೂಹಲ - ಇವು ದಿ. ಗೋವಿಂದ ಪೈಯವರನ್ನು ಉನ್ನತಮಟ್ಟದ ಒಬ್ಬ ಸಂಶೋಧಕನನ್ನಾಗಿ ಮಾಡಿದುವು ಎನ್ನಬಹುದು. ಕಾವ್ಯರಚನೆಗೆ ಕಲ್ಪನಾಶಕ್ತಿ ಹೇಗೆ ಮುಖ್ಯವೋ ಹಾಗೆಯೇ ಸಂಶೋಧಕನಿಗೆ ಕುತೂಹಲಪ್ರವೃತ್ತಿ ಅತಿ ಮುಖ್ಯವಾದುದು. ಜೊತೆಗೆ ಸತತಾಭ್ಯಾಸವೂ ಬೇಕು. ಈ ಎರಡು ಗುಣಗಳಂತೂ ಪೈಗಳಲ್ಲಿ ಧಾರಾಳವಾಗಿತ್ತು.
ಅವರು ಸಂಶೋಧನೆಯನ್ನು ಪ್ರಾರಂಭಮಾಡಿದ್ದು 1926ರಲ್ಲಿ. ಸಂಶೋಧನೆಯ ವಿಷಯ ಅವರೇ. ಅವರೇ -ಎಂದರೆ, ಅವರ ಸಮಾಜ - ಸಾರಸ್ವತಸಮಾಜ. ಸಾರಸ್ವತ ಸಮಾಜದವರು ಎಲ್ಲಿಂದ ಬಂದರು? ಅವರ ಮೂಲ ಎಲ್ಲಿ? -ಎಂಬಿತ್ಯಾದಿ ವಿಚಾರ ಗಳನ್ನು ಅವರು ಗಾಢವಾಗಿ ಅಧ್ಯಯನಮಾಡಿದರು.
ಪಂಜಾಬಿನ ಸರಸ್ವತೀನದೀತೀರ ಸಾರಸ್ವತರ ಮೂಲಸ್ಥಾನ. ಅಲ್ಲಿಂದ ಅವರು ಬಿಹಾರದ ತಿರ್ಹೂತ್ ಎಂಬಲ್ಲಿಗೆ ಬಂದರು. ತಿಹೂರ್ತಿನಿಂದ ಗೋವೆ. 1560ರಲ್ಲಿ ಗೋವೆಯಲ್ಲಿ ಪೋರ್ಚುಗೀಸರ ಮತಾಂತರದ ತಂತ್ರಗಳಿಗೆ ಅಂಜಿ, ಅಲ್ಲಿಂದ ಕರ್ನಾಟಕದ ಕರಾವಳಿ ಹಾಗೂ ಕೇರಳದ ಕೆಲವು ಭಾಗಗಳಿಗೆ ವಲಸೆ ಹೋದರು - ಎನ್ನುತ್ತಾರೆ ಪೈಗಳು. ಆದರೂ ಗೋವೆಯ ಬಗ್ಗೆ ಅವರಿಗೆ ಮಾತೃಭೂಮಿಯ ಗೌರವವಿದೆಯೆಂದೂ, ಪ್ರತಿಯೊಬ್ಬ ಸಾರಸ್ವತನು ತನ್ನ ಬದುಕಿನಲ್ಲಿ ಒಮ್ಮೆಯಾದರೂ ಗೋವೆಗೆ ಹೋಗಬೇಕೆಂಬ ಸಂಕಲ್ಪ ಹೊಂದಿರುತ್ತಾನೆಂದೂ ಅವರ ತಿಳಿಸಿದರು.
ಗೋವೆಯ ಬಗೆಗಿನ ಸಂಶೋಧನೆಗಾಗಿ ಅವರು ಪೋರ್ಚುಗೀಸ್ ಭಾಷೆಯನ್ನು ಅಧ್ಯಯನಮಾಡಿದರು. Flashes from the Past ಎಂಬ ಲೇಖನ ಬರೆದರು. ಕೊಂಕಣಿ ಭಾಷೆ ಒಂದು ಸ್ವತಂತ್ರಭಾಷೆಯೆಂದರು. ಅದು ಬಂಗಾಳಿ, ಒಡಿಯ, ಮಾಗಧಿ, ಬಿಹಾರಿ, ಮೈಥಿಲೀ ಭಾಷೆಗೆ ಹತ್ತಿರವಾಗಿದೆ ಹೊರತು - ಮರಾಠಿಗೆ ಹತ್ತಿರವಲ್ಲ ಎಂದು ದೃಢವಾಗಿ ಹೇಳಿದರು. ಈ ಸಿದ್ಧಾಂತವನ್ನು ಮಂಡಿಸಲು ಉತ್ತರ ಭಾರತದ ವಿವಿಧಭಾಷೆಗಳ ಅಧ್ಯಯನ ಅವರಿಗೆ ಅನಿವಾರ್ಯವಾಯಿತು.
ಮರುವರ್ಷ ಅವರು ಇನ್ನೊಂದು ಸಂಶೋಧನೆಯನ್ನು ಕೈಗೆತ್ತಿಕೊಂಡರು. ಅದು ತುಳುನಾಡಿನ ವಿಷಯ. `ಇತಿಹಾಸದ ಇರುಳಲ್ಲಿ ತುಳುನಾಡು' ಎಂದು ಆ ಲೇಖನದ ಹೆಸರು. ಮುಂದೆ ಸುಮಾರು ಇಪ್ಪತ್ತು ವರ್ಷಗಳ ಕಾಲ ತುಳುನಾಡಿನ ಕುರಿತು ಅಧ್ಯಯನಮಾಡುತ್ತಾ ಬಂದ ಪೈಗಳು 1947ರಲ್ಲಿ ಬರೆದ ಲೇಖನ - `ತುಳುನಾಡು ಪೂರ್ವಸ್ಮೃತಿ'. ಇದರಲ್ಲಿ ತುಳುಶಬ್ದದ ವ್ಯುತ್ಪತ್ತಿ, ಮೊಗವೀರರ ಪ್ರಾಚೀನತೆ ಮುಂತಾದ ವಿಚಾರಗಳನ್ನು ಸಾಧಾರವಾಗಿ ಪ್ರತಿಪಾದಿಸಿದ್ದಾರೆ. ಹರಿವಂಶಪುರಾಣದಲ್ಲಿ ಬರುವ ಮುದ್ಗರರೇ ಮೊಗೇರರು ಎಂದಿದ್ದಾರೆ. ``ತಸ್ಯ ದಾಶಾ ಜಲೇ ಮಗ್ನಾಃ ಸಮದ್ರೋದರ ಚಾರಿಣಃ'' ಮುಂತಾದ ಶ್ಲೋಕಗಳನ್ನು ಅದಕ್ಕೆ ಪ್ರಮಾಣವಾಗಿ ಆಯ್ದುಕೊಂಡಿದ್ದಾರೆ. ತುಳುನಾಡಿನ ಬಗೆಗಿನ ಇತರ ಉಲ್ಲೇಖಗಳಿಗೆ ಉಪೋದ್ಬಲಕವಾಗಿ ಮಾರ್ಕಂಡೇಯ ಪುರಾಣ, ಬೃಹತ್ಸಂಹಿತೆಗಳನ್ನೂ ಆಧಾರವಾಗಿ ಎತ್ತಿಕೊಂಡಿದ್ದಾರೆ. ಈ ಪುರಾಣಗಳಲ್ಲಿ ಹೇಳಿರುವ `ಶಾಂತಿಕದೇಶ'ವೇ ತುಳುನಾಡು ಎಂದಿದ್ದಾರೆ. ತುಳುನಾಡಿನ ಅಳಿಯಸಂತಾನ ಪದ್ಧತಿಯ ಕುರಿತು ವಿವೇಚಿಸಿದ್ದಾರೆ. ಇಲ್ಲಿ ನಾಥಪಂಥ - ಜೈನಪಂಥ - ದ್ವೈತಪಂಥ ಹಾಗೂ ಅದ್ವೈತವೆಂಬ ನಾಲ್ಕು ಪಂಥಗಳು ಪ್ರಧಾನವಾಗಿ ರೂಢಿಯಲ್ಲಿವೆ ಎಂದಿದ್ದಾರೆ. ನಾಥಪಂಥದ ಬಗ್ಗೆ ಇನ್ನಷ್ಟು ವಿವೇಚಿಸುತ್ತಾ ಇದು ಬೌದ್ಧಶೈವಮತಗಳ ಮಿಶ್ರಣ ಎಂದಿದ್ದಾರೆ. ಎಲ್ಲ ಸಂಶಯಗಳಿಗೂ ಅವರಲ್ಲಿ ಉತ್ತರವಿದೆ. ಉದಾ: ತುಳುನಾಡಿನಲ್ಲಿ ಎರಡು ಮಂಜುನಾಥ ದೇವಾಲಯಗಳಿವೆ. ಒಂದು ಧರ್ಮಸ್ಥಳ, ಒಂದು ಕದ್ರಿ. ಕದ್ರಿಯಿಂದ ಮಂಜುನಾಥನು ಧರ್ಮಸ್ಥಳಕ್ಕೆ ಹೋದುದೆಂದು ಪ್ರತೀತಿ. ಮಂಜುನಾಥ ಎಂದರೇನು? ಯಾವ ಪುರಾಣದಲ್ಲಿಯೂ ಮಂಜುನಾಥ ದೇವರ ಹೆಸರಿಲ್ಲ. ಅದಕ್ಕೆ ಪೈಗಳ ಉತ್ತರ - ಕದ್ರಿಯಲ್ಲಿ ಹಿಂದೆ ಮಂಜುಘೋಷನೆಂಬ ಬೋಧಿಸತ್ವನ ವಿಹಾರವಿತ್ತು. ಕ್ರಮೇಣ ನಾಥಪಂಥದ ಮತ್ಸ್ಯೇಂದ್ರನು ಕದ್ರಿಯಲ್ಲಿ ಶಿವಲಿಂಗವೊಂದನ್ನು ಸ್ಥಾಪಿಸಿದನು. ಮಂಜುಘೋಷನ ವಿಹಾರದಲ್ಲಿ ಸ್ಥಾಪಿತವಾದ ಲಿಂಗರೂಪೀ ಶಿವನೇ ಮಂಜುನಾಥ.
ಪೈ ಅವರ ಸಂಶೋಧನೆಗಳನ್ನು ಹೀಗೆ ವಿಭಾಗಿಸಬಹುದು:
1. ನಾಡುನುಡಿಗಳ ವಿಚಾರ (ಎಂದರೆ ದೇಶವಿಚಾರ ಮತ್ತು ಭಾಷಾವಿಜ್ಞಾನ)
2. ಭೌಗೋಳಿಕ ಸಮೀಕ್ಷೆ
3. ಕವಿಕಾವ್ಯ ವಿಚಾರ
4. ಚಾರಿತ್ರಿಕ ಕಾಲನಿರ್ಣಯಗಳು
ಪೈಗಳ ವಿಚಾರಧಾರೆ ಎಷ್ಟು ಅದ್ಭುತವಾದುದೆಂದರೆ - ಅವರ ಸಂಗ್ರಹದಲ್ಲಿ ಭಾರತೀಯ ಕಾಲಾನುಕ್ರಮಣಿ (Indian Chronology) ಮಾತ್ರವಲ್ಲ, ವಿಶ್ವ ಕಾಲಾನುಕ್ರಮಣಿ (World Chronology) ಕೂಡಾ ಇದೆ. ಒಬ್ಬ ಸಂಶೋಧಕ ಮೊದಲು ಮಾಡಬೇಕಾದ ಕೆಲಸವೇನೆಂದರೆ ಕಾಲಾನುಕ್ರಮಣಿಯ ಅಧ್ಯಯನ. ತಾನು ಸಂಶೋಧನೆಗೆ ಎತ್ತಿಕೊಂಡ ವಿಷಯ ಯಾವ ಕಾಲದಲ್ಲಿ ಜರಗಿತು. ಆ ಕಾಲದಲ್ಲಿ ದೇಶದ ರಾಜಕೀಯಸ್ಥಿತಿ - ಸಾಮಾಜಿಕಸ್ಥಿತಿಗಳೇನು? ಆ ಕಾಲದ ಭಾಷೆ ಹೇಗಿತ್ತು? -ಇತ್ಯಾದಿಗಳ ವಿವೇಚನೆಯಿಲ್ಲದೆ ಮಾಡಿದ ಸಂಶೋಧನೆ ಎಂದಿಗೂ ಪರಿಪೂರ್ಣವಲ್ಲ. ಪೈಗಳು ಗ್ರೀಸ್ ದೇಶದ ಭೌಗೋಳ ತಜ್ಞ ಪ್ತೊಲೆಮಿ ಕ್ರಿ. ಶ. ಎರಡನೆಯ ಶತಮಾನದವನೆಂದೂ, ಆತ ಭಾರತದ ಅನೇಕ ಸ್ಥಳಗಳ ಹೆಸರುಗಳನ್ನು - ಅದರಲ್ಲೂ ಮುಖ್ಯವಾಗಿ ಕರ್ನಾಟಕದ ಸ್ಥಳನಾಮಗಳನ್ನು ಪ್ರಸ್ತಾವಿಸಿದ್ದಾನೆಂದೂ ಉಲ್ಲೇಖಿಸಿದ್ದಾರೆ. ಆ ಲೇಖನದ ಹೆಸರು Ptolemy's Hippokura ಎಂದು. ಲೇಖನ ಇಂಗ್ಲೀಷ್ - ಕನ್ನಡ ಎರಡು ಭಾಷೆಗಳಲ್ಲಿಯೂ ಪ್ರಕಟವಾಗಿದೆ.
ಪ್ತೊಲೆಮಿ ಹೆಸರಿಸಿದ ಪುನ್ನಾಟ ಅರಸರು ದಕ್ಷಿಣ ಭಾರತದವರೆಂದು ಪ್ರಸ್ತಾವಿಸುತ್ತಾ ಅವರ ದೇಶಕಾಲ - ವಂಶಾವಳಿ ಇತ್ಯಾದಿ ಎಲ್ಲ ವಿಚಾರಗಳನ್ನೂ ಕೂಲಂಕಷವಾಗಿ ಹೇಳಿದ್ದಾರೆ. ಕ್ರಿ. ಶ. ಎರಡನೆಯ ಶತಮಾನದ `ಮಿಕ' ಎಂಬವನಿಂದ ಐದನೇ ಶತಮಾನದ `ರವಿದತ್ತ' ಎಂಬ ಅರಸನ ವರೆಗಿನ ಎಲ್ಲ ವಿವರಗಳೂ ಆ ಲೇಖನದಲ್ಲಿವೆ. ಇದು ಅತ್ಯಂತಮೌಲಿಕವಾದ ಒಂದು ಸಂಶೋಧನೆ. ಹಾಗೆಯೇ ಗಂಗ ಅರಸರ ಆರುನೂರು ವರ್ಷಗಳ ಆಳ್ವಿಕೆಯನ್ನು ಸುಮಾರು 40 ಶಾಸನಗಳ ಆಧಾರದಿಂದ ಎಣಿಕೆ ಹಾಕಿದ್ದಾರೆ. ಅವರ ಈ ಲೇಖನಗಳು Journal of Indian History ಪತ್ರಿಕೆಗಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಪ್ರಕಟವಾಗಿವೆ.
ಪ್ರವಾದಿ ಮಹಮ್ಮದ್ ಪೈಗಂಬರರು ರಬ್ಬಿಉಲ್ ಅವಲ್ ತಿಂಗಳಿನ 12ನೇ ದಿನ ಸೋಮವಾರವೇ ಹುಟ್ಟಿದ್ದೆಂದೂ, ಅವರ ನಿಧನದ ವಾರ ಮತ್ತು ದಿನಗಳು ಸಹ ಅದೇ ತಿಂಗಳಿನ ಅದೇ ದಿನದ ಅದೇ ವಾರವಾಗಿದೆಯೆಂದೂ ಅವರು ಬರೆದಿರುವರು.
ಭಾರತದ `ಬಸನಾಗರ' ಎಂಬಲ್ಲಿರುವ ಗರುಡಗಂಬದಲ್ಲಿ ಕೆತ್ತಿರುವ ಶಾಸನ ಗ್ರೀಕ್ ರಾಯಭಾರಿಯಾದ `ಹೆಲಿಯೋಡೊರಸ್'ನದೆಂದು (ಕ್ರಿ.ಪೂ. 105) ನಿರ್ಣಯಿಸಿದ್ದಾರೆ.
`ಮುದ್ರಾರಾಕ್ಷಸ' ನಾಟಕದಲ್ಲಿ ಚಾಣಕ್ಯನು ಚಂದ್ರಗುಪ್ತನನ್ನು `ವೃಷಲ' ಎಂದು ಸಂಭೋಧಿಸುತ್ತಾನೆ. ಮಂತ್ರಿಯ ಸ್ಥಾನದಲ್ಲಿರುವ ಒಬ್ಬಾತ ಅರಸನನ್ನು `ವೃಷಲ' ಎನ್ನುವುದು ನಮಗೆಲ್ಲ ಆಶ್ಚರ್ಯವೆನಿಸುತ್ತದೆ. `ವೃಷಲ' ಎಂದರೆ ಸಂಸ್ಕೃತದಲ್ಲಿ ಶೂದ್ರ ಎಂದರ್ಥ. ಒಬ್ಬ ಅರಸನನ್ನು ಜಾತಿಯ ಹೆಸರು ಹೇಳಿ ಸಂಬೋಧಿಸಬಹುದೆ! ವೃಷಲ ಎಂಬುದಕ್ಕೆ ಇನ್ನೂ ಎರಡು ಅರ್ಥಗಳಿವೆ. ಜಾತಿಯಿಲ್ಲದವನು ಎಂದು. ಚಾಣಕ್ಯನಂಥ ಮಹಾಮೇಧಾವಿ ಚಂದ್ರಗುಪ್ತನಂತಹ ಅರಸನನ್ನು ಈ ಅರ್ಥಗಳಲ್ಲಿ ಸಂಬೋಧಿಸುವುದು ಸರಿಯೆಂದು ಯಾರಿಗೂ ತೋಚುವುದಿಲ್ಲ. ಆದರೆ ಪೈಗಳು ಹೇಳುವ ವಿಚಾರವೇ ಬೇರೆ. ಗ್ರೀಕ್ ದೇಶದ ಸೆಲ್ಯುಕಸನನ್ನು ಚಂದ್ರಗುಪ್ತ ಸೋಲಿಸಿದ. ಸೆಲ್ಯುಕಸನು ಆತನಿಗೆ `ಬಸಿಲೆಸ್' ಎಂಬ ಬಿರುದನ್ನಿತ್ತ. ಗ್ರೀಕ್ ಭಾಷೆಯಲ್ಲಿ `ಬಸಿಲೆಸ್' ಎಂದರೆ `ಚಕ್ರವರ್ತಿ' ಎಂದರ್ಥ. ಬಸಿಲೆಸ್ ಪದಕ್ಕೂ `ವೃಷಲ' ಪದಕ್ಕೂ ಸಂಬಂಧವಿದೆ ಎನ್ನುತ್ತಾರೆ ಪೈಗಳು. ಹೀಗೆ ಪೈಗಳ ಸಂಶೋಧನೆ ನಮ್ಮ ಕೋಶಗಳ ವ್ಯಾಪ್ತಿಯನ್ನೂ ಮೀರಿ ಮುಂದೆ ಹೋಗುತ್ತದೆ.
ರಾವ್ ಬಹದೂರ್ ಆರ್. ನರಸಿಂಹಾಚಾರ್ಯರು ಕರ್ಣಾಟಕ ಕವಿಚರಿತೆಯ ವಿಚಾರದಲ್ಲಿ ಸಾಕಷ್ಟು ಕೆಲಸಮಾಡಿದವರು. ಅವರು ಹೇಳಿದ ಅನೇಕ ವಿಚಾರಗಳನ್ನು ಪೈಗಳು ಪುನರ್ವಿಮರ್ಶೆ ಮಾಡಿದ್ದಾರೆ. ನಾಗಚಂದ್ರ, ಜಯಕೀರ್ತಿ, ದುರ್ಗಸಿಂಹ, ಲಕ್ಷ್ಮೀಶ, ಹರಿಹರ, ದೇವರ ದಾಸಿಮಯ್ಯ, ಬಸವಣ್ಣ ಮುಂತಾದವರ ಕಾಲ ವಿಚಾರವನ್ನು ಪೈಗಳು ವಿಮರ್ಶಿಸಿ ತಮ್ಮದೇ ಆಶಯವನ್ನು ಮಂಡಿಸಿದ್ದಾರೆ.
ರನ್ನ ಎಂಬ ಹೆಸರಿನ ಕವಿಗಳು ಇಬ್ಬರಿಲ್ಲ - ಒಬ್ಬನೇ ಎಂದು ಸಾಧಿಸಿದ್ದಾರೆ. ಆದರೆ ನಾಗವರ್ಮರು ಮಾತ್ರ ಮೂರು ಜನ ಇದ್ದಾರೆ ಎಂದು ಹೇಳಿದ್ದಾರೆ:
ಛಂದೋಂಬುಧಿ, ಕರ್ನಾಟಕ ಕಾದಂಬರಿಯ ನಾಗವರ್ಮ ಒಬ್ಬ;
ಚಂದ್ರಚೂಡಾಮಣಿಶತಕದ ನಾಗವರ್ಮ ಇನ್ನೊಬ್ಬ;
ವಸ್ತುಕೋಶ, ಕಾವ್ಯಾವಲೋಕನ, ಭಾಷಾಭೂಷಣಗಳ ಕರ್ತೃ ನಾಗವರ್ಮ ಮತ್ತೊಬ್ಬ, - ಹೀಗೆ.
ಇದಕ್ಕಿಂತೆಲ್ಲ ವಿಶೇಷವಾದ ಸಂಶೋಧನೆಯೆಂದರೆ - ಕ್ರಿ.ಶ. ಎರಡನೇ ಶತಮಾನ ದಲ್ಲಿ ರಚಿತವಾದ ಗ್ರೀಕ್ ಪ್ರಹಸನದಲ್ಲಿ ಕನ್ನಡ ಪದಗಳಿವೆ ಹಾಗೂ ಕರ್ನಾಟಕದ ಊರಿನ ಹೆಸರು ಇದೆ - ಎಂದು ಅವರು ಹೇಳಿದ್ದು. ಆ ಪ್ರಹಸನದಲ್ಲಿ ಉಲ್ಲೇಖಿಸಿದ ಸ್ಥಳ ನಮ್ಮೂರಿನ ಉದ್ಯಾವರ ಎನ್ನುತ್ತಾರೆ ಪೈಗಳು. ಅದೇನು ಹಾಗೆ ಬರಲು ಕಾರಣ ಎಂದರೆ ಪೈಗಳು ಕೊಡುವ ಆಧಾರ ಆ ಪ್ರಹಸನದ ಕಥೆಯೇ ಹಾಗಿದೆಯೆಂದು. ಕಥೆ ಹೀಗಿದೆ - ಗ್ರೀಕ್ ಕನ್ನಿಕೆಯೊಬ್ಬಳು ಅನೇಕರೊಂದಿಗೆ ನೌಕೆಯಲ್ಲಿ ಕುಳಿತು ಹಿಂದೂಮಹಾಸಾಗರದಲ್ಲಿ ಬರುತ್ತಿದ್ದಾಗ ಮಾರ್ಗಮಧ್ಯೆ ನೌಕಾಘಾತ ಸಂಭವಿಸಿತು. ಆಕೆ ಹೇಗೋ ಬದುಕಿ ಉಳಿದು ಕರಾವಳಿಗೆ ಬರುತ್ತಾಳೆ. ಅದೇ ತುಳುನಾಡಿನ ಸೋಮೇಶ್ವರ. ಆಗ ಅಲ್ಲಿ ತುಳುನಾಡಿನ `ಆಳುಪ' ಅರಸರು ರಾಜ್ಯವಾಳುತ್ತಿದ್ದರು. ಆ ಅರಸರ ಆಶ್ರಯದಲ್ಲಿ ಕೆಲಕಾಲ ಆಕೆ ಸೋಮೇಶ್ವರದಲ್ಲಿ ಇದ್ದಳು. ಮುಂದೆ ಗ್ರೀಕ್ ನಾವಿಕರು ಆಕೆಯನ್ನು ಹುಡುಕಿಕೊಂಡು ಬರುತ್ತಾರೆ. ಅವರು ಸೋಮೇಶ್ವರಕ್ಕೆ ಬಂದು ಆಳುಪ ಅರಸರ ಅನುಮತಿ ಪಡೆದು ಆಕೆಯನ್ನು ತಮ್ಮ ಊರಿಗೆ ಕೊಂಡೊಯ್ಯುತ್ತಾರೆ. ಇದು ಕಥೆ. ಈ ಪ್ರಹಸನದ ವರ್ಣನೆಯಂತೆ - ಈ ಕಥೆ ತುಳುನಾಡಿನಲ್ಲಿ ನಡೆದುದು ಎಂದು ಪೈಗಳು ಹೇಳುತ್ತಾರೆ.
ಅಂತೂ ಪೈಗಳ ವಿಶಾಲಮತಿಗೆ ನಾವು ಬೆರಗಾಗಬೇಕು.
ಅವರಿಗೆ ಲ್ಯಾಟಿನ್, ಪರ್ಶಿಯನ್, ಗ್ರೀಕ್, ಇಂಗ್ಲೀಷ್, ಪಾಲಿ ಮುಂತಾದ 22 ಭಾಷೆಗಳ ಜ್ಞಾನವಿತ್ತು. ಬೈಬಲ್, ಕುರಾನ್, ಬೌದ್ಧ, ಜೈನ ಮುಂತಾದ ಗ್ರಂಥಗಳ ಅಪಾರ ಜ್ಞಾನವಿತ್ತು. ಪೈಗಳಿಗೆ ತಿಳಿದಿರದ ವಿಚಾರವಿಲ್ಲ. ಅವರೊಂದು ವಿಶ್ವಕೋಶ, ಬಹುಭಾಷಾ ಜ್ಞಾನಿ ಎಂಬುದರಲ್ಲಿ ಸಂದೇಹವಿಲ್ಲ.
[ಪ್ರಕಟಿತ ಲೇಖನ]
`ಕಾಸರಗೋಡು' ಎಂದಾಗ ಸಮಗ್ರ ಕನ್ನಡಿಗರಿಗೆ ನೆನಪಾಗುವ ಒಂದು ಅಕ್ಷರ `ಪೈ'; ಪೈ ಎಂದರೆ ಮಂಜೇಶ್ವರ ಗೋವಿಂದ ಪೈ ಎಂದು ಅರ್ಥ. ಅದೇ ಸಾಲಿನಲ್ಲಿ ಮತ್ತೆ ನಮಗೆ ನೆನಪಾಗುವ ಇನ್ನೊಂದು ಅಕ್ಷರ `ರೈ'. ರೈ ಎಂದರೆ ಸಂಸ್ಕೃತದಲ್ಲಿ `ಸಂಪತ್ತು' ಎಂದರ್ಥ. ಅದು ವೇದಕಾಲದ ಅರ್ಥ. ಆ ಅರ್ಥ ಈಗ ನಮ್ಮ ಜನರಿಗೆ ಮರೆತುಹೋಗಿದೆ. ಈಗ ನಮಗೆ ನೆನಪಾಗುವ ಅರ್ಥ `ರೈ ಎಂದರೆ ಕಿಞ್ಞಣ್ಣ ರೈ' ಎಂದು ಮಾತ್ರ.
ಒಂದನೆಯ ತರಗತಿಯ ಮಕ್ಕಳಿಂದ ತೊಡಗಿ ಸ್ನಾತಕೋತ್ತರ ಪದವಿಯ ವಿದ್ಯಾರ್ಥಿಗಳ ವರೆಗೂ ಈ ಪದ ಸುಪರಿಚಿತವಾದದ್ದು. ಆದರೆ, ಶ್ರೀ ರೈಯವರು ತಮ್ಮ ಹೆಸರಿನ ಮೂಲಕ ಆ ಹಳೆಯ ಅರ್ಥವನ್ನೂ ಪ್ರತಿಬಿಂಬಿಸುತ್ತಿದ್ದಾರೆ ಎನ್ನಲೂ ಬಹುದು. ಯಾಕೆಂದರೆ, ಕಾಸರಗೋಡಿನ ಅಥವಾ ಕನ್ನಡನಾಡಿನ ಸಾಮಾಜಿಕ ಸಾಹಿತ್ಯಕ ಹಾಗೂ ಸಾಂಸ್ಕೃತಿಕರಂಗಕ್ಕೆ ರೈಯವರ ಕೊಡುಗೆ ಸಂಪದ್ಭರಿತವಾದದ್ದು.
ಬಹುಶಃ ರೈಯವರು ತಮ್ಮ ಸ್ವಂತ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ದವರಲ್ಲ. ಅವರ ಬದುಕನ್ನು ಅಧ್ಯಯನಮಾಡಿದರೆ ಈ ವಿಚಾರ ನಮಗೆ ಮನದಟ್ಟಾಗು ತ್ತದೆ. ಅವರು ಮನೆಯಲ್ಲಿರುವುದಕ್ಕಿಂತ ಹೆಚ್ಚು ಸಮಯವನ್ನು ಮನೆಯ ಹೊರಗೆ, ತಮ್ಮ ಇತರ ಸಾಮಾಜಿಕಕಾರ್ಯಗಳ ಸಲುವಾಗಿ ವ್ಯಯಿಸುತ್ತಿದ್ದಾರೆ - ಎಂದರೂ ಸಲ್ಲುವುದು.
ನಮ್ಮ ಸಮಾಜದ ಬಗೆಗೆ, ನಮ್ಮ ಪರಿಸರದ ಜನರ ಬಗೆಗೆ, ಬಡವರ ಬಗೆಗೆ, ದಲಿತರ ಬಗೆಗೆ, ಯಾವುದೋ ಒಂದು ತುಡಿತ, ಯಾವುದೋ ಒಂದು ಚಿಂತನ, ಅವರ ಅಂತರಾಳದಲ್ಲಿ ನಿತ್ಯಜಾಗೃತವಾಗಿದ್ದಂತೆ ಕಂಡುಬರುತ್ತದೆ.
ರೈಯವರ ಸಮಾಜಸೇವೆಯ ಪ್ರಧಾನಕ್ಷೇತ್ರಗಳು ಎರಡು. ಒಂದು ಕಾಸರ ಗೋಡು, ಒಂದು ಕರ್ನಾಟಕ. ಭಾಷಾವಾರು ಪ್ರಾಂತ್ಯರಚನೆಯಾಗುವ ವರೆಗೆ ರೈಯವರ ಸಮಾಜಸೇವೆಯ ವ್ಯಾಪ್ತಿ ಅಖಿಲಕರ್ನಾಟಕವನ್ನು ವ್ಯಾಪಿಸಿತ್ತು. ಭಾಷಾವಾರು ಪ್ರಾಂತ್ಯ ರಚನೆಯಾಗಿ, ಕಾಸರಗೋಡು ಕೇರಳಕ್ಕೆ ತಳ್ಳಲ್ಪಟ್ಟಾಗ, ಅವರ ಮುಖ್ಯಗಮನ ಕಾಸರಗೋಡಿಗೆ ಹೆಚ್ಚು ಒತ್ತುಕೊಟ್ಟುದನ್ನು ಕಾಣುತ್ತೇವೆ.
ಸ್ವಾತಂತ್ರ್ಯಪೂರ್ವದಲ್ಲಿ, ಎಂದರೆ ಸುಮಾರು ಕ್ರಿ.ಶ. 1940-41ರಲ್ಲಿ ದೇಶದಾದ್ಯಂತ ಸ್ವಾತಂತ್ರ್ಯ ಚಳುವಳಿ ವ್ಯಾಪಿಸಿದ್ದ ಕಾಲದಲ್ಲಿ ಶ್ರೀ ರೈಯವರೂ ಅದರಲ್ಲಿ ಭಾಗವಹಿಸಿದರು. ಅದೇ ವರ್ಷ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉಂಟಾದ ಭೀಕರ ನೆರೆಯ ಹಾವಳಿಯಿಂದ ಸಂತ್ರಸ್ತರಾದ ಜನರಿಗೆ ಪರಿಹಾರವನ್ನೊದಗಿಸುವ ಕಾರ್ಯದಲ್ಲೂ ಶ್ರೀ ರೈಯವರು ಸ್ವಯಂಸ್ಪೂರ್ತಿಯಿಂದ ಸೇವೆ ಸಲ್ಲಿಸಿದ್ದರು. 1942ರಲ್ಲಿ ಜರಗಿದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಒಬ್ಬ ಭೂಗತ ಹೋರಾಟಗಾರರಾಗಿ ಅವರು ದುಡಿದರು.
1943ರಲ್ಲಿ ಮಂಗಳೂರು ಪರಿಸರದಲ್ಲಿ ಕಾಲರಾರೋಗವು ಹಬ್ಬಿದಾಗ, ತಮ್ಮ ಸಮವಯಸ್ಕರಾದ ಯುವಕರನ್ನೂ, ಕಾಲೇಜು ವಿದ್ಯಾರ್ಥಿಗಳನ್ನೂ, ಸಂಘಟಿಸಿ, ಆ ಕಾಲದ ಕೊಳಚೆ ಪ್ರದೇಶಗಳಾಗಿದ್ದ ಬೋಳೂರು, ಬೊಕ್ಕಪಟ್ಣ ಮುಂತಾದ ಹಳ್ಳಿಗಳಿಗೆ ಸಾಗಿ, ಕಾಲರಾ ಹರಡದಂತೆ ಮಾಡಲು, ಜನರನ್ನು ಎಚ್ಚರಿಸಿ, ಅವರಿಗೆ ಮುಂಜಾಗ್ರತೆಯ ಕ್ರಮ ವನ್ನು ಬೋಧಿಸುವಲ್ಲಿ ಹಾಗೂ ಕೊಳಚೆ ನಿರ್ಮೂಲನ ಕಾರ್ಯದಲ್ಲಿ ಕೂಡ, ಒಬ್ಬ ಚುರುಕಿನ ಸ್ವಯಂಸೇವಕನಾಗಿ ಭಾಗವಹಿಸಿದ ಯುವಕ ರೈಯವರ ಸಾಮಾಜಿಕ ಪ್ರೀತಿ ಶ್ಲಾಘನೀಯವಾದುದು.
ಹಿಂದೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಾತೀಯ ಪೆಡಂಭೂತವು ನರ್ತನವಾಡುತ್ತಿದ್ದ ಕಾಲದಲ್ಲಿ, ಎಂದರೆ ಸುಮಾರು 1941ನೆಯ ಇಸವಿಯಲ್ಲಿ, ಆಗಿನ ಜನತೆಯಲ್ಲಿ ಭಾವೈಕ್ಯವನ್ನು ಸಾಧಿಸುವ ಉದ್ದೇಶದಿಂದ `ಸೌಹಾರ್ದಸಮಿತಿ' ಎಂಬೊಂದು ಸಂಘಟನೆಯು ರೂಪು ಗೊಂಡಿತು. ಶ್ರೀ ರೈಯವರು ಅದರ ಸದಸ್ಯರಾಗಿ ದುಡಿದುದು ಮಾತ್ರವಲ್ಲ; ಸ್ವರಚಿತವಾದ ಸುಶ್ರಾವ್ಯಕವನಗಳನ್ನು ಆಕಾಶವಾಣಿಯ ಕಾರ್ಯಕ್ರಮಗಳಲ್ಲೂ ಸಾರ್ವಜನಿಕ ಸಭೆಗಳಲ್ಲೂ ಹಾಡಿ, ಜನರಲ್ಲಿ ಭಾವೈಕ್ಯವು ಮೂಡುವಂತೆ ಪ್ರಯತ್ನಿಸಿದರು. ಕಾಸರಗೋಡಿನ ಉಭಯ ಭಾಷಾಕವಿಯೆಂಬ ಬಿರುದು ಪಡೆದ ರಾಜ್ಯಪ್ರಶಸ್ತಿ ವಿಜೇತ ಶಿಕ್ಷಕರಾದ ಜನಾಬ್ ಟಿ. ಉಬೈದ್ ಅವರು ಕಯ್ಯಾರರ ಈ ಗೀತಗಳನ್ನು ಮಲೆಯಾಳಕ್ಕೂ ಅನುವಾದಿಸಿದ್ದನ್ನು ಈ ಸಂದರ್ಭದಲ್ಲಿ ಜ್ಞಾಪಿಸಬಹುದು.
ಬಹುಮುಖಪ್ರತಿಭಾಶಾಲಿಗಳಾದ ಶ್ರೀ ರೈಯವರು ಒಂದು ಕಾಲದಲ್ಲಿ ಪತ್ರಿಕೋದ್ಯಮಿಯಾಗಿಯೂ ದುಡಿದ ಅನುಭವವುಳ್ಳವರು. ಅವರು ಪತ್ರಿಕೋದ್ಯಮಿಯಾಗಿ ದುಡಿದ ಕಾಲವು ದೇಶದ ದೃಷ್ಟಿಯಲ್ಲಿ ಒಂದು ಸಕಾಲವೇ ಆಗಿತ್ತು ಎಂದರೂ ತಪ್ಪಲ್ಲ. ಪಾರತಂತ್ರ್ಯದ ಕುಣಿಕೆಯಲ್ಲಿ ಸಿಕ್ಕು ಒದ್ದಾಡುತ್ತಿದ್ದ ನಮ್ಮ ಜನರಿಗೆ ಸ್ವಾತಂತ್ರ್ಯದ ಸಂದೇಶ ವನ್ನು ತಿಳಿಸಬೇಕಾಗಿದ್ದ ಕಾಲವದು. `ಯಾವ ರಾಯನ ಕಾಲ ಬಂದರೂ ರಾಗಿ ಬೀಸೋದು ತಪ್ಪಿಲ್ಲ' ಎಂಬ ಗಾದೆಯ ಮಾತನ್ನು ವೇದವಾಕ್ಯವಾಗಿ ನಂಬಿದ್ದ ನಮ್ಮ ಜನರಿಗೆ, ಬ್ರಿಟಿಷರ ಆಳ್ವಿಕೆಯಾದರೂ ಸರಿ, ತುಂಡರಸರ ಆಳ್ವಿಕೆಯಾದರೂ ಸರಿ; ಅವರು ಆ ಬಗ್ಗೆ ಯೋಚಿಸಿದವರಲ್ಲ. ಇಂಥ ಸಂದರ್ಭದಲ್ಲಿ ನಮ್ಮ ದೇಶದ ಕರ್ತವ್ಯವನ್ನು ನಮ್ಮ ಜನರಿಗೆ ಬೋಧಿಸಲು ಪತ್ರಿಕೆಗಳು ಮಾತ್ರ ಸಹಾಯಕಾರಿಯಲ್ಲದೆ, ಬೇರಾವ ಮಾಧ್ಯಮ ಗಳೂ ಆ ಕಾಲದಲ್ಲಿ ಸುಶಕ್ತವಾಗಿ ಇರಲಿಲ್ಲ. ಶ್ರೀ ರೈಯವರು 1938ರಿಂದ 1944ರ ವರೆಗೆ ಒಬ್ಬ ಸಮರ್ಥ ಪತ್ರಿಕೋದ್ಯಮಿಯಾಗಿ ಸಮಾಜಸೇವೆ ಮಾಡಿದ್ದರು. `ಪ್ರಭಾತ' ಮತ್ತು `ದೇಶಾಭಿಮಾನಿ' ಎಂಬ ದೈನಿಕ ಹಾಗೂ ವಾರಪತ್ರಿಕೆಗಳಲ್ಲಿ ಅವರು ಉಪಸಂಪಾದಕರಾಗಿ ದುಡಿದುದು ಮಾತ್ರವಲ್ಲ, ತಮ್ಮ ಪ್ರೌಢವಾದ ಲೇಖನಗಳಿಂದ ಜನರಲ್ಲಿ ದೇಶಪ್ರಜ್ಞೆ ಮತ್ತು ಸಾಮಾಜಿಕಪ್ರಜ್ಞೆಗಳು ಹುಟ್ಟುವಂತೆ ಪ್ರಯತ್ನಿಸಿದ್ದರು. ಕನ್ನಡನಾಡಿನ ಇತರ ಪತ್ರಿಕೆಗಳಲ್ಲೂ ಅವರ ಲೇಖನ ಕವನಗಳು ಆ ಕಾಲದಲ್ಲಿ ಧಾರಾಳವಾಗಿ ಬೆಳಕು ಕಂಡಿದ್ದವು.
`ಐಕ್ಯವೊಂದೇ ಮಂತ್ರ - ಐಕ್ಯದಿಂದೆ ಸ್ವತಂತ್ರ
ಐಕ್ಯಗಾನದಿ ರಾಷ್ಟ್ರ ತೇಲುತಿರಲಿ'
- ಎಂದು ಹಾಡಿ ಜನರನ್ನು ಏಕಸೂತ್ರದಲ್ಲಿ ಬಂಧಿಸಲು, ದೇಶದ ಒಳಿತಿಗಾಗಿ ಒಂದಾಗಿ ಹೋರಾಡಲು ಅವರು ತಮ್ಮ ಕಾವ್ಯವಾಣಿಯನ್ನು ಬಳಸಿದರು. 1943ರಲ್ಲಿ `South Canara Journalists’ ಕಾರ್ಯದರ್ಶಿ ಯಾಗಿಯೂ, ಆ ವರ್ಷ ಮಂಗಳೂರಲ್ಲಿ ಜರಗಿದ The Fourth All Karnataka Journalists Conference ಪ್ರಧಾನ ಕಾರ್ಯದರ್ಶಿಯಾಗಿಯೂ ಅವರು ಆಯ್ಕೆ ಯಾದರು. ಪತ್ರಿಕೋದ್ಯಮಿಯಾಗಿ ರೈ ಎಷ್ಟು ಸಮರ್ಥರು ಎಂಬುದನ್ನು ಇದು ಸೂಚಿಸು ತ್ತದೆ.
ರೈಯವರಿಗೆ ಪ್ರಿಯವಾದ ಇನ್ನೊಂದು ಕ್ಷೇತ್ರ - ಶಿಕ್ಷಣ. ದೇಶದ ನಿರಕ್ಷರತೆಯನ್ನು ಹೋಗಲಾಡಿಸಿ, ಜನರನ್ನು ವಿದ್ಯಾವಂತರನ್ನಾಗಿ ಮಾಡಬೇಕೆಂಬ ಹಂಬಲ ಮೊದ ಲಿಂದಲೇ ಅವರಲ್ಲಿ ಬೇರೂರಿತ್ತು. ಈ ಉದ್ದೇಶದಿಂದ 1939ರಲ್ಲಿ ಬದಿಯಡ್ಕದಲ್ಲೂ 1941ರಲ್ಲಿ ಮಂಗಳೂರಿನಲ್ಲೂ, ವಯಸ್ಕರ ಶಿಕ್ಷಣಯೋಜನೆಯ ಪ್ರಕಾರ ರಾತ್ರ್ರಿಶಾಲೆಗಳನ್ನು ತೆರೆದು, ನಮ್ಮ ಸಮಾಜದ ನೂರಾರು ಅನಕ್ಷರಸ್ಥ ವಯಸ್ಕರು ಓದುಬರೆಹವನ್ನು ಕಲಿಯುವ ಹಾಗೆ ಅವರು ವ್ಯವಸ್ಥೆಮಾಡಿದ್ದರು.
ಆಗ ಗಾಂಧೀಜಿಯವರು ಬುನಾದಿ ಶಿಕ್ಷಣ ಯೋಜನೆಗೆ ಹೆಚ್ಚು ಒತ್ತುಕೊಟ್ಟಿದ್ದ ಕಾಲ. ಭಾರತದಾದ್ಯಂತ Basic Education ಬಹಳ ಜನಪ್ರಿಯವಾಗಿದ್ದ ಕಾಲ. ಗಾಂಧೀಜಿ ಶಿಕ್ಷಣಪದ್ಧತಿಯಲ್ಲಿ ಅಪಾರವಾದ ನಂಬುಗೆಯಿದ್ದ ಶ್ರೀ ರೈಗಳು ಆ ಪದ್ಧತಿಗೆ ಅನುಸಾರ ವಾಗಿ ಕನ್ನಡ ಪಠ್ಯಪುಸ್ತಕಗಳನ್ನು ರಚಿಸುವ ಪ್ರಯತ್ನ ಮಾಡಿದರು. ಒಂದನೆಯ ತರಗತಿ ಯಿಂದ ಎಂಟನೆಯ ತರಗತಿಯವರೆಗೆ ಅವರು ರಚಿಸಿದ `ನವೋದಯ ವಾಚನಮಾಲೆ' ಗಳು ಆ ಕಾಲದ ಜನಪ್ರಿಯ ಪಠ್ಯಪುಸ್ತಕಗಳಾಗಿ ಹೆಸರುಗಳಿಸಿದ್ದುವು; ಹಾಗೆಯೇ ಮನ್ನಣೆ ಯನ್ನೂ ಪಡೆದಿದ್ದುವು. ರೈಯವರ ಪಠ್ಯಪುಸ್ತಕಗಳನ್ನು ಓದಿದ ವಿದ್ಯಾರ್ಥಿಗಳು ಇಂದಿಗೂ ಅವನ್ನು ಕೊಂಡಾಡುತ್ತಿದ್ದಾರೆ.
ಆಗ ಬದಿಯಡ್ಕದಲ್ಲಿ ಒಂದು ಪ್ರೈಮರಿ ಶಾಲೆಯಿತ್ತು. ಅದನ್ನು ಸೀನಿಯರ್ ಬೇಸಿಕ್ ಶಾಲೆಯಾಗಿ ಮೇಲ್ದರ್ಜೆಗೇರಿಸುವ ವಿಷಯದಲ್ಲೂ ಅವರು ಸಾಕಷ್ಟು ಪ್ರಯತ್ನಿಸಿ ದ್ದರು. ಅವರ ಪ್ರಯತ್ನದ ಫಲವಾಗಿ ಇಡೀ ಜಿಲ್ಲೆಯಲ್ಲೇ ಅದು ಪ್ರಥಮ ಬೇಸಿಕ್ ಶಾಲೆಯಾಗಿ ದಾಖಲೆಯನ್ನು ನಿರ್ಮಿಸಿತು.
ಸಭೆ-ಸಮ್ಮೇಳನಗಳ ಸಂಘಟಕರಾಗಿಯೂ ರೈಗಳು ಪ್ರಸಿದ್ಧರು. ಕಾಸರಗೋಡು ಮಂಗಳೂರುಗಳಲ್ಲಿ ಬೃಹತ್ ಸಮ್ಮೇಳನಗಳನ್ನು ಅವರು ಸಂಘಟಿಸಿದ್ದರು. ಅವುಗಳಲ್ಲಿ ಪ್ರಮುಖವಾದುವು - ಒಂದು : ಮಂಗಳೂರಲ್ಲಿ ಜರಗಿದ ಅಖಿಲಕರ್ನಾಟಕ ಪತ್ರಿಕೋ ದ್ಯಮಿಗಳ ಸಮ್ಮೇಳನ (1943); ಎರಡು: ಕಾಸರಗೋಡಿನಲ್ಲಿ ಜರಗಿದ ಅಖಿಲಕರ್ನಾಟಕ ಸಾಹಿತ್ಯ ಸಮ್ಮೇಳನ (1947) ಹಾಗೂ 1972, 1979 ಮತ್ತು 1981, 1990ರಲ್ಲಿ ಕಾಸರ ಗೋಡಲ್ಲಿ ಜರಗಿದ ಬೃಹತ್ ಕನ್ನಡಿಗರ ಸಮ್ಮೇಳನಗಳು. ಕೊನೆಯ ಎಲ್ಲಾ ಸಮ್ಮೇಳನ ಗಳು ಕಾಸರಗೋಡಿನ ಕನ್ನಡಿಗರ ಸಮಸ್ಯೆಗಳನ್ನು ಸಮಗ್ರ ಕರ್ನಾಟಕದ ಜನರಿಗೆ ತಿಳಿಯ ಪಡಿಸುವಲ್ಲಿ ಹಾಗೂ ಕಾಸರಗೋಡು ಕರ್ನಾಟಕದ ಭಾಗ - ಎಂಬುದನ್ನು ಖಚಿತ ಪಡಿಸುವಲ್ಲಿ ಮತ್ತು ಅಲ್ಲಿಯ ಕನ್ನಡಿಗರ ತುಡಿತಗಳನ್ನೂ ಎದೆಯಾಸೆಗಳನ್ನೂ ಪರಸ್ಪರ ಅರಿತುಕೊಳ್ಳುವಲ್ಲಿ ಪ್ರಮುಖಪಾತ್ರವನ್ನು ವಹಿಸಿವೆ - ಎಂಬುದರಲ್ಲಿ ಸಂದೇಹವಿಲ್ಲ. ಆ ದಿನಗಳು ಕಾಸರಗೋಡಿನ ಕನ್ನಡಿಗರ ಮರೆಯಲಾಗದ ದಿನಗಳಾಗಿ, ವೈಭವ ಕನಸಿನ ದಿನಗಳಾಗಿ, ಇಂದಿಗೂ ಯಾವುದೋ ಆಸೆಯ ಬೆಳಕನ್ನು, ಸಿಹಿಯ ನೆನಪನ್ನು ನಮ್ಮ ಜನರಲ್ಲಿ ಹುಟ್ಟಿಸುತ್ತಿವೆ. ಆ ಸಮ್ಮೇಳನಗಳಲ್ಲಿ ಕನ್ನಡದ ಹಿರಿಯಣ್ಣನಾಗಿ, ಕಾಸರಗೋಡಿನ ಕನ್ನಡಿಗರ ಸಂಕಷ್ಟಗಳನ್ನೂ, ಮಹಿಳೆಯರ ಸಮಸ್ಯೆಗಳನ್ನೂ, ಮಕ್ಕಳ ಭವಿಷ್ಯವನ್ನೂ, ಕಲೆ ಸಂಸ್ಕೃತಿಗಳ ದುಃಸ್ಥಿತಿಯನ್ನೂ, ಕನ್ನಡತನದ ಅಳಿವು ಉಳಿವುಗಳನ್ನೂ, ಕೂಡಿದ ಬೃಹತ್ ಜನಸ್ತೋಮದ ಮುಂದೆೆ, ಗದ್ಗದಿಸುವ ಕಂಠದಿಂದ ಮಿಡಿಯುವ ಕಂಬನಿಯೊಂದಿಗೆ ನುಡಿಯುವ ರೈಯವರ ಚಿತ್ರ - ಅದು ಅವಿಸ್ಮರಣೀಯವಾದ ಒಂದು ಚಿತ್ರ, ಮರೆಯಲಾಗದ ಒಂದು ಸನ್ನಿವೇಶ.
ರೈಯವರಿಗೆ ನಮ್ಮ ಸಮಾಜದ ಬಗ್ಗೆ, ನಮ್ಮ ಜನರ ಒಳಿತಿನ ಬಗ್ಗೆ ಇರುವ ತುಡಿತ - ನಾನು ಆಗಲೇ ಹೇಳಿದಂತೆ - ಅವರ ಸಾಂಸಾರಿಕ ಕೌಟುಂಬಿಕ ತುಡಿತಗಳಿ ಗಿಂತ ಮಿಗಿಲಾಗಿ ಇದ್ದಂತೆ ಕಾಣುತ್ತದೆ. ನಾನು ಮತ್ತು ರೈಯವರು ಆತ್ಮೀಯವಾಗಿ ಎಷ್ಟೋ ಬಾರಿ ಮಾತಾಡಿದ್ದಿದೆ. ಅವರ ಮನೆಯಲ್ಲಿ, ಒಂದೋ ಎರಡೋ ಬಾರಿ ನಮ್ಮ ಮನೆಯಲ್ಲಿ, ಹಾಗೆಯೇ ಸಭೆ ಸಮಾರಂಭಗಳಿಗೆ ಹೋದಲ್ಲಿ ಮತ್ತು ಊರಲ್ಲಿ ಆಗೊಮ್ಮೆ ಈಗೊಮ್ಮೆ ಭೇಟಿಯಾದಾಗ ಈಯೆಲ್ಲ ಸಂದರ್ಭಗಳಲ್ಲೂ ಶ್ರೀ ರೈಯವರು ತಮ್ಮ ಸ್ವಂತ ವಿಷಯವಾಗಲಿ - ಮನೆ ಸಂಸಾರದ ವಿಷಯವಾಗಲಿ ನನ್ನಲ್ಲಿ ಮಾತಾಡಿದ್ದಿಲ್ಲ. ಅವರು ಮಾತೆತ್ತಿದರೆ ಕನ್ನಡದ ವಿಚಾರ, ಸಾಹಿತ್ಯವಿಚಾರ, ನಮ್ಮ ಸಮಾಜದ ಸಂಸ್ಕೃತಿಗಳ ವಿಚಾರ, ಹಾಗೂ ಕಾಸರಗೋಡಿನ ಕನ್ನಡಿಗರ ಭವಿಷ್ಯದ ವಿಚಾರ! ಇದು ರೈಯವರ ನಿತ್ಯಚಿಂತನದ ವಸ್ತು.
ಭಾಷಾವಾರು ಪ್ರಾಂತರಚನೆಗೆ ಮೊದಲು ರೈಯವರ ಚಿಂತನೆ ಸಮಗ್ರ ಕರ್ನಾಟಕದ ಅಥವಾ ದೇಶದ ವಿಚಾರವಾಗಿ ಹೆಚ್ಚು ವ್ಯಾಪ್ತವಾಗಿದ್ದರೆ ಕಾಸರಗೋಡು ಕೇರಳಕ್ಕೆ ಸೇರಿದ ಬಳಿಕ, ಅವರ ತ್ರಿಕರಣಗಳಲ್ಲಿಯೂ ಅದೊಂದೇ ಚಿಂತೆ ಬಹಳವಾಗಿ ವ್ಯಕ್ತವಾಗುತ್ತಿದ್ದುದನ್ನು ಕಾಣುತ್ತೇವೆ.
ಗೋವಿಂದ ಪೈ ಕಾಸರಗೋಡಿನ ದುಃಸ್ಥಿತಿಗಾಗಿ ಎಷ್ಟು ನೊಂದಿದ್ದರೋ - ಕೊರಗಿದ್ದರೋ - ಕರಗಿದ್ದರೋ ಅಷ್ಟೇ ನೋವು ಸಂಕಟಗಳನ್ನು ಶ್ರೀ ರೈಯವರೂ ಅನು ಭವಿಸುತ್ತಿದ್ದಾರೆ ಎಂಬುದು ಅವರ ಮಾತಿನಿಂದಲೂ ಕೃತಿಗಳಿಂದಲೂ ವೇದ್ಯವಾಗುತ್ತದೆ.
ಕಾಸರಗೋಡಿನಲ್ಲಿ ಜರಗಿದ ಒಂದು ಕನ್ನಡಿಗರ ಸಮ್ಮೇಳನದ ಬಹಿರಂಗ ಸಭೆಯಲ್ಲಿ - ಆ ದಿನ ಕರ್ನಾಟಕದ (ಆಗಿನ) ಮುಖ್ಯಮಂತ್ರಿ ಶ್ರೀಮಾನ್ ಆರ್. ಗುಂಡೂರಾಯರು ಸಭೆಯಲ್ಲಿ ಉಪಸ್ಥಿತರಿದ್ದರು - ಶ್ರೀ ರೈಯವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ ``ಸ್ವಾಮೀ, ನಾವು ಇಲ್ಲಿ ಎರಡು ಲಕ್ಷ ಕನ್ನಡಿಗರು ಹೇಗೆ ಬದುಕುತ್ತಿದ್ದೇವೆ ಎಂದು ನಿಮಗೆಲ್ಲ ತಿಳಿದಿರಲಾರದು. ಕೇರಳ ಸರಕಾರಕ್ಕೆ ನಾವು ಇಲ್ಲಿ ಇಷ್ಟು ಮಂದಿ ಕನ್ನಡಿಗರಿದ್ದೇವೆಂದು ಇನ್ನೂ ಗೊತ್ತಿಲ್ಲ. ಇಲ್ಲಿ ನಮ್ಮ ಭಾಷೆ ಸಂಸ್ಕೃತಿಗಳು ದಿನೇ ದಿನೇ ಅಳಿಯುತ್ತಾ ಹೋಗುತ್ತಿವೆ. ನಾವು ಅನಾಥರಾಗಿದ್ದೇವೆ. ಇಲ್ಲಿ ಹರಿಯುತ್ತಿರುವುದು ಪಯಸ್ವಿನೀನದಿಯಲ್ಲ ಸ್ವಾಮೀ, ಇದು ಕಣ್ಣೀರು - ಕಾಸರಗೋಡಿನ ಕನ್ನಡಿಗರ ನಿರಂತರವಾದ ಕಣ್ಣೀರು'' - ಎಂದು ಹೇಳುತ್ತಾ, ಆ ಬೃಹತ್ಸಭೆಯ ಮುಂದೆ ದುಃಖ ಕಂಪಿತ ಸ್ವರದಿಂದ ನುಡಿದು ಕಣ್ಣೀರಿಳಿಸುವ ರೈಯವರನ್ನು ನಾವು ಕಂಡಿದ್ದೇವೆ. ರೈಯವರ ಭಾವೋದ್ವೇಗದ ಆ ಮಾತುಗಳನ್ನು ಕೇಳುತ್ತಾ ಸಭೆಯ ಅನೇಕ ಮಂದಿ ಕಣ್ಣೀರು ಒರೆಸುತ್ತಿದ್ದುದನ್ನೂ ನಾನು ಕಂಡಿದ್ದೇನೆ.
ಕಾಸರಗೋಡು ಕೇರಳಕ್ಕೆ ಸಂದ ಬಳಿಕ ಅಖಿಲಕರ್ನಾಟಕ ಮಟ್ಟದಲ್ಲಿ ಎಷ್ಟು ಸಾಹಿತ್ಯ ಸಮ್ಮೇಳನಗಳು ನಡೆದಿವೆಯೋ ಅಷ್ಟರಲ್ಲೂ ಶ್ರೀ ರೈಗಳು ಭಾಗವಹಿಸಿದ್ದಾರೆ - ಕಾಸರಗೋಡಿನ ಬಗ್ಗೆ ಮಾತಾಡಿದ್ದಾರೆ. ಕಾಸರಗೋಡಿನ ಬಗ್ಗೆ ಠರಾವುಗಳ ಮಂಡನೆ ಯಾಗುವ ಹಾಗೂ ಮಾಡಿದ್ದಾರೆ. ಈ ಕಾರ್ಯವನ್ನು ಒಂದು ವ್ರತದಂತೆ - ಒಂದು ದೀಕ್ಷೆಯಂತೆ ಅವರು ಪಾಲಿಸುತ್ತಾ ಬಂದಿದ್ದಾರೆ.
ಹಿಂದೆ ಉಡುಪಿಯಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ, ಒಂದು ರೋಮಾಂಚ ಕಾರೀ ಘಟನೆ ನಡೆಯಿತು. ಸಮ್ಮೇಳನದ ಮೊದಲದಿನ ಕನ್ನಡಿಗರ ಬೃಹತ್ ಮೆರವಣಿಗೆ ಸಾಗುತ್ತಿತ್ತು. ಕನ್ನಡ ಜಯಘೋಷದ ಸದ್ದು ಬಾನೆತ್ತರಕ್ಕೆ ಕೇಳುತ್ತಿತ್ತು. ಈ ಮಧ್ಯೆ, ಆಗ ತಾನೇ ಬಸ್ಸಿಳಿದು ಬಂದ ರೈಯವರು ಮೆರವಣಿಗೆಯ ಸಾಲಿನೊಂದಿಗೆ ಸೇರಲು ಬಂದರು. ಅವರನ್ನು ಕಂಡದ್ದೇ ತಡ, ಜನಸ್ತೋಮವು ಬೇರೆಲ್ಲವನ್ನೂ ಮರೆತು, ಏಕಕಂಠ ದಿಂದ `ಕಾಸರಗೋಡು ಕನ್ನಡ ನಾಡು' ಎಂದು ಭಾವೋದ್ವೇಗದಿಂದ ಘೋಷಿಸಿತು. ಉಡುಪಿಯ ಜನರಿಗೆ ಕಾಸರಗೋಡಿನ ಕನ್ನಡಿಗರ ಬಗ್ಗೆ ಇದ್ದ ಈ ಸಹಾನುಭೂತಿಯನ್ನು _ ಈ ಪ್ರೀತಿಯನ್ನು ನಮ್ಮ ಜನ ಈಗಲೂ ಸ್ಮರಿಸಿಕೊಳ್ಳುತ್ತಿದ್ದಾರೆ.
ಕಾಸರಗೋಡು ಸಮಸ್ಯೆಯನ್ನು ಒಬ್ಬ ಕವಿಯಾಗಿ ರೈಗಳು ಹೇಗೆ ಕಂಡಿದ್ದಾರೆ ಎಂಬುದು ಅವರ `ಬೆಂಕಿ ಬಿದ್ದಿದೆ ಮನೆಗೆ ಓ ಬೇಗ ಬನ್ನಿ' ಎಂಬ ಖ್ಯಾತಕವನದಿಂದ ವೇದ್ಯವಾಗುತ್ತದೆ. ಬೆಂಕಿ ಬಿದ್ದಾಗ ಪರಿಹಾರಕಾರ್ಯಕ್ಕೆ ತತ್ಕ್ಷಣ ತೊಡಗಬೇಕು. ಅಲ್ಲಿ ಯಾವುದೇ ಆಲೋಚನೆಗೆ ಎಡೆಯಿಲ್ಲ. ಹಾಗೆಯೇ ಕಾಸರಗೋಡು ಸಮಸ್ಯೆ ಒಂದು `ಬೆಂಕಿ'ಯಂತೆ ಇಲ್ಲಿನ ಜನರನ್ನು ಕಾಡುತ್ತಿದೆ - ಸುಡುತ್ತಿದೆ. `ಓ ಕನ್ನಡಿಗರೆ, ನಮ್ಮನ್ನು ಈ ಬೆಂಕಿಯಿಂದ ಪಾರುಮಾಡಲು ಬೇಗ ಬನ್ನಿ' ಎಂದು ಕರೆಯುವ ಕವಿಹೃದಯದಲ್ಲಿ ತ್ವರೆಯ ಭಾವವಿದೆ; ಅವಸರದ ಕಳಕಳಿಯಿದೆ. ತಾವು ಬದುಕಿ ಇರುವಾಗಲೇ ಕಾಸರ ಗೋಡು ಕರ್ನಾಟಕಕ್ಕೆ ಸೇರಬೇಕು - ಆ ಶುಭದಿನವನ್ನು ತಾವೊಮ್ಮೆ ಕಣ್ಣಾರೆ ಕಾಣಬೇಕು ಎಂಬ ಹಂಬಲ ರೈಯವರ ಅಂತರಾಳದಲ್ಲಿ ಹುದುಗಿ ಇದ್ದಂತೆ, ಈ ಕವನ ವನ್ನೋದುವಾಗ ಭಾಸವಾಗುತ್ತದೆ. ಈ ಕನ್ನಡದ ಪ್ರೀತಿ, ಈ ಹುಟ್ಟುನೆಲದ ಪ್ರೀತಿ, ಕನ್ನಡಿಗರ ಅವ್ಯಾಜ ಪ್ರೀತಿ - ಇವೇ ರೈಯವರ ಹೃದಯಸಂಪತ್ತು.
ರೈಯವರ ಒಂದೊಂದು ಸಮಾಜಸೇವಾಕಾರ್ಯವೂ ಒಂದೊಂದು ದಾಖಲೆ! ಅವರು ಬದಿಯಡ್ಕ ಪಂಚಾಯತು ಅಧ್ಯಕ್ಷರಾಗಿದ್ದಾಗ, ಎರಡು ಹೊಸ ವಿದ್ಯಾಸಂಸ್ಥೆ ಗಳನ್ನು ತೆರೆದರು. ಒಂದು ಉದಯಗಿರಿ ಲೋವರ್ ಪ್ರೈಮರಿ ಶಾಲೆ, ಇನ್ನೊಂದು ವಿದ್ಯಾಗಿರಿ ಅಪ್ಪರ್ ಪ್ರೈಮರಿ ಶಾಲೆ. ವಿದ್ಯಾಗಿರಿ ಅಪ್ಪರ್ ಪ್ರೈಮರಿ ಶಾಲೆಯ ಅವರ ಪ್ರೀತಿಯ ಗುರುಗಳಾದ ಶ್ರೀ ಪಂಜಿರ್ಕೆ ಅನಂತ ಭಟ್ಟರ ಸ್ಮಾರಕವಾಗಿ ಸ್ಥಾಪಿಸಿದ್ದು. ಒಬ್ಬ ಶಿಷ್ಯ ತನ್ನ ಗುರುವಿಗೆ ಸಲ್ಲಿಸಬಹುದಾದ ಇದಕ್ಕಿಂತ ದೊಡ್ಡ ಕಾಣಿಕೆೆ - ಇದಕ್ಕಿಂತ ದೊಡ್ಡ ಚಿರಸ್ಮರಣೆ ಬೇರೆ ಇರಲಾರದು. ಒಂದು ಪಂಚಾಯತು ಸಂಸ್ಥೆಯು ಎರಡು ಶಾಲೆಗಳನ್ನು ತೆರೆದ ದಾಖಲೆ ಬಹುಶಃ ಕಾಸರಗೋಡಿನ ಚರಿತ್ರೆಯಲ್ಲೇ ಬೇರೆ ಇರಲಾರದು.
ಅವರು ಗ್ರಾಮ ಪಂಚಾಯತು ಅಧ್ಯಕ್ಷರಾಗಿ 15 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅವರ ಪಂಚಾಯತು ಒಂದು ಮಾದರಿ ಪಂಚಾಯತು ಎಂದು ರಾಜ್ಯ ಸರಕಾರದಿಂದ ಮನ್ನಣೆ ಪಡೆಯಿತು. ರೈಯವರ ಅವಿಶ್ರಾಂತ ದುಡಿಮೆ, ಹಮ್ಮಿಕೊಂಡ ವಿವಿಧ ಯೋಜನೆಗಳು, ನಿಸ್ವಾರ್ಥಸೇವೆ, ತ್ಯಾಗ ಮತ್ತು ಕಾರ್ಯತತ್ಪರತೆ - ಇವು ಇಲ್ಲದೇ ಹೋಗುತ್ತಿದ್ದರೆ, ಅವರ ಪಂಚಾಯತಿಗೆ ಆ ಗೌರವ ಖಂಡಿತ ಸಿಗುತ್ತಿರಲಿಲ್ಲ. ಅವರ ಆಡಳಿತೆಯ ಕಾಲದಲ್ಲಿ ಪಂಚಾಯತು ವತಿಯಿಂದ ನೀರಾವರಿ, ವಿದ್ಯುಚ್ಛಕ್ತಿ, ಆರೋಗ್ಯಸೇವೆಗಳಲ್ಲದೆ, ಅನ್ನದಾನ, ವಿದ್ಯಾದಾನ, ಸಾಹಿತ್ಯಸೇವೆ, ವರ್ಧಂತ್ಯುತ್ಸವಗಳು, ಕವಿಗೋಷ್ಠಿಗಳು ಮುಂತಾದ ಅಪೂರ್ವಕಾರ್ಯಕ್ರಮಗಳು - ಎಂದರೆ, ಬೇರೆ ಯಾವ ಪಂಚಾಯತೂ ನಡೆಸಿರದಂತಹ ಕಾರ್ಯಕ್ರಮಗಳು ಜರಗಿವೆಯೆಂಬುದು ಅವರ ಕಾರ್ಯದಕ್ಷತೆಯನ್ನು ಸೂಚಿಸುತ್ತದೆ.
ರೈಯವರ ಸಮಾಜಸೇವೆ ಬಹುಮುಖವಾದದ್ದು. ಅವರ ಕಾರ್ಯಕ್ಷೇತ್ರ ತುಂಬ ವಿಶಾಲವಾದದ್ದು. ಕವಿಯಾಗಿ, ಲೇಖಕನಾಗಿ, ಪತ್ರಿಕೋದ್ಯಮಿಯಾಗಿ, ಸ್ವಾತಂತ್ರ್ಯಹೋರಾಟ ಗಾರನಾಗಿ, ರಾಷ್ಟ್ರಪ್ರಶಸ್ತಿವಿಜೇತ ಶಿಕ್ಷಕನಾಗಿ, ಬ್ಲಾಕು ಡೆವೆಲಪ್ಮೆಂಟ್ ಕಮಿಟಿಯ ಚೆಯರ್ಮೇನಾಗಿ, `ಪ್ರೇಮಕೂಟ'ವೆಂಬ ಸಾಹಿತ್ಯಕ-ಸಾಂಸ್ಕೃತಿಕ ಸಂಸ್ಥೆಯ ನೇತಾರನಾಗಿ, (ಸ್ಥಳೀಯ) ಮಾಧ್ಯಮಿಕಶಾಲಾ ಶಿಕ್ಷಕಸಂಘಟನೆಯ ಅಧ್ಯಕ್ಷನಾಗಿ, ಉತ್ತರ ಕೇರಳದ ಪ್ರೌಢ ಶಾಲಾ ಶಿಕ್ಷಕಸಂಘದ ಉಪಾಧ್ಯಾಕ್ಷನಾಗಿ, `ಖಠಿಟಿಟಿಟಿರ & ಘಜಚಿತಟಿರ ಅಠ-ಠಠಿಜಡಿಚಿಣತಜ ಖಠಛಿಜಣಥಿ'ಯ ಮತ್ತು `ಖಚಿಣಣಚಿಟಿ ಘಠಡಿಞ ಅಠ-ಠಠಿಜಡಿಚಿಣತಜ ಖಠಛಿಜಣಥಿ'ಯ ಡೈರೆಕ್ಟರ್ ಆಗಿ, `ಅಠ-ಠಠಿಜಡಿಚಿಣತಜ ಖಣಠಡಿಜ'ನ ಅಧ್ಯಕ್ಷನಾಗಿ, ಕೇರಳ ಸ್ಟೇಟ್ ಸಿಲೆಬಸ್ ಕಮಿಟಿ, ಕೊರಗ ಸಮಾಜ ಅಭಿವೃದ್ಧಿ ಕಮಿಟಿ, ಅಸ್ಪೃಶ್ಯತಾ ನಿವಾರಣಾ ಸಮಿತಿ, ಭಾಷಾ ಅಲ್ಪ ಸಂಖ್ಯಾತರ ಸಮಿತಿ, ಗೋವಿಂದ ಪೈ ಮೆಮೊರಿಯಲ್ ಕಮಿಟಿ, ಕಾಸರಗೋಡು ಕರ್ನಾಟಕ ಪ್ರಾಂತೀ ಕರಣ ಸಮಿತಿ, ಹರಿಜನಸೇವಕ ಸಂಘ, ಮೈಸೂರು ಸರಕಾರದ `ಖಣಚಿಣಜ ಅಟಜಡಿಜಟಿ' ಖಠಟಿರ ಅಠಟಟಣಣಜಜ', ತುಳುನಿಘಂಟು ಯೋಜನೆಯ ಸಲಹೆಗಾರ ಸಮಿತಿ, ಕರ್ನಾಟಕ ಸರಕಾರದ ಸಾಹಿತ್ಯ ಅಕಾಡೆಮಿ, ಪ್ರಥಮ ವಿಶ್ವ ಕನ್ನಡ ಸಮ್ಮೇಳನದ ಪುಸ್ತಕ ಆಯ್ಕೆ ಸಮಿತಿ - ಮುಂತಾದ ವಿವಿಧ ಸಂಘಸಂಸ್ಥೆಗಳ ಸದಸ್ಯನಾಗಿ, ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಅವರು ಅವಿಶ್ರಾಂತವಾಗಿ ದುಡಿದಿದ್ದಾರೆ - ದುಡಿಯುತ್ತಿದ್ದಾರೆ.
ರೈಯವರ ವ್ಯಕ್ತಿತ್ವದಲ್ಲಿ ನಾನು ಕಾಣುವುದು ಅವರ ಪ್ರೀತಿಯನ್ನು-ಅಪಾರವಾದ ಪ್ರೀತಿಯನ್ನು!
ಅವರು ಕೆಲವೊಮ್ಮೆ ಹೇಳುವುದಿದೆ - ``ನೋಡಿ, ಈ ಪ್ರಾಯದಲ್ಲಿ ನಾನು ಎಲ್ಲವನ್ನೂ ಬಿಟ್ಟು ಆರಾಮವಾಗಿ ಮನೆಯಲ್ಲಿ ಕುಳಿತು ವಿಶ್ರಾಂತಿಜೀವನ ನಡೆಸಬಹುದು. ನನಗೆ ಯಾಕೆ ಇದೆಲ್ಲ? ಎಂದು ಯಾರಾದರೂ ಕೇಳಬಹುದು. ಆದರೆ ನಾವು ಈ ಕೆಲಸ ಮಾಡದಿದ್ದರೆ, ನಾವು ನಮ್ಮ ಹಿರಿಯರಿಂದ ಪಡಕೊಂಡ ಋಣದಿಂದ ಮುಕ್ತರಾಗುವುದು ಹೇಗೆ? ನಮ್ಮಲ್ಲಿ ದೊಡ್ಡ ಋಣವುಂಟು ಸ್ವಾಮೀ, ಸಾಹಿತ್ಯಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಅನೇಕ ರೀತಿಯ ಋಣಗಳನ್ನು ನಮ್ಮ ಹಿರಿಯರು ನಮ್ಮಲ್ಲಿ ಬಿಟ್ಟು ಹೋಗಿದ್ದಾರೆ. ನಮ್ಮ ಮೇಲೆ ಹೊರಿಸಿ ಹೋಗಿದ್ದಾರೆ. ನಾವು ಅದನ್ನು ಕೈ ಬಿಟ್ಟರೆ, ಮುಂದಿನ ಜನಾಂಗಕ್ಕೆ ಅವು ಸಿಕ್ಕುವುದಿಲ್ಲ. ಅವನ್ನು ನಾಶಮಾಡಿದ ಮಹಾದ್ರೋಹ ನಮಗೆ ಬರುತ್ತದೆ. ಅದಕ್ಕೋಸ್ಕರ ನಾವು ದುಡಿಯಬೇಕು. ಅದಕ್ಕಾಗಿ ನನಗೆ ಕೂಡದಿದ್ದರೂ ನಾನು ದುಡಿಯುತ್ತಿದ್ದೇನೆ''. ಹೀಗೆನ್ನುವ ರೈಯವರನ್ನು ಕಂಡಾಗ, ಅವರಿಂದ ನಮ್ಮ ಜನಾಂಗ - ನಮ್ಮ ಯುವಸಮಾಜ ಎಷ್ಟೋ ಕಲಿಯುವುದಕ್ಕಿದೆ ಎಂದು ನನಗೆ ಅನಿಸಿದೆ.
ಇಂಥ ಕನ್ನಡ ಹೋರಾಟಗಾರನಿಗೆ ಹೆಸರಿನಿಂದ ಕಿಞ್ಞ(ಸಣ್ಣ) - ಅಣ್ಣನಾಗಿ ದುಡಿಮೆಯಿಂದ ಹಿರಿಯಣ್ಣನಾಗಿರುವ ಈ ಕವಿಗೆ - ಸಮಾಜಸೇವಕನಿಗೆ ಶತವತ್ಸರಗಳ ದೀರ್ಘಾಯುಸ್ಸನ್ನು - ಪೂರ್ಣಾಯುಷ್ಯವನ್ನು - ಶ್ರೀದೇವರು ಕೊಡಲಿ ಎಂದು ಪ್ರಾರ್ಥಿಸುತ್ತೇನೆ.
['ಗಡಿನಾಡಿನ ಕಿಡಿ', ಲಲಿತಕಲಾಸದನ ಕಾಸರಗೋಡು, 1990 - ಇದರಲ್ಲಿ ಪ್ರಕಟಿತ]
ಡಿ.ವಿ.ಜಿ.- ಈ ಶತಮಾನದ ಒಂದು ಹಿರಿಯ ಶಕಪುರುಷ. ಅವರ ಪ್ರತಿಭೆ ಮತ್ತು ಪಾಂಡಿತ್ಯ ಎರಡೂ ಅಗಾಧ. ಅವರ ವ್ಯಕ್ತಿತ್ವವನ್ನು ಏಕಕೋನದಲ್ಲಿ ನಿಂತು ಅಳೆಯಲು ಸಾಧ್ಯವಿಲ್ಲ. ಅವರು ಕವಿಗಳೂ ಹೌದು - ದಾರ್ಶನಿಕರೂ ಹೌದು; ಪತ್ರಿಕೋದ್ಯಮಿಗಳೂ ಹೌದು, ಸಮಾಜಸೇವಕರೂ ಹೌದು. ಈ ಎಲ್ಲ ಕಾರ್ಯಕ್ಷೇತ್ರಗಳ ಅನುಭವಗಳೂ ಅವರ ಮಟ್ಟಿಗೆ ಪರಸ್ಪರ ಪೂರಕವಾಗಿವೆ.
ಡಿ.ವಿ.ಜಿ., ಎಂಥ ಕವಿ? ದಾರ್ಶನಿಕಕವಿಯೋ? ಸೌಂದರ್ಯೋಪಾಸಕ ಕವಿಯೋ? ಹೊಸ ವಿಚಾರಕ್ರಾಂತಿಯನ್ನು ಬಯಸುವ ಕವಿಯೋ? ಎಂದು ಪ್ರಶ್ನಿಸುವು ದಾದರೆ, ಅವರು ಎಲ್ಲವೂ ಹೌದು. ಅವರ ಕಗ್ಗಗಳಲ್ಲಿ ಒಂದು ರೀತಿಯ ದಾರ್ಶನಿಕ ಪಂಥವಿದ್ದರೆ, ಅಂತಃಪುರಗೀತಗಳಲ್ಲಿ ಸೌಂದರ್ಯೋಪಾಸನೆಯ ಮೆರುಗು ಕಾಣುತ್ತದೆ. ಯಾವುದೇ ಹೊಸ ವೈಚಾರಿಕ ಅಂಶವನ್ನು ಅವರ ಹೃದಯವು ಮುಕ್ತವಾಗಿ ಸ್ವಾಗತಿಸುತ್ತದೆ - ಎಂಬುದಕ್ಕೆ ಅವರು ಅನುವಾದಿಸಿದ `ಉಮರನ ಒಸಗೆ' ಸಾಕ್ಷಿ.
ಒಂದು ಕಾವ್ಯವಿಮರ್ಶೆಯನ್ನು ಹೇಗೆ ಮಾಡಬೇಕು - ಎಂಬ ಬಗ್ಗೆ ಡಿ.ವಿ.ಜಿ.ಯವರೇ ಒಂದೆಡೆ ನಮಗೆ ಸಲಹೆಕೊಟ್ಟಿದ್ದಾರೆ. ಅವರ ದೃಷ್ಟಿಯಿಂದಲೇ ಅವರ ಕಾವ್ಯಗಳನ್ನು ವಿವೇಚಿಸಿದರೆ, ಅದು ಹೆಚ್ಚು ಅರ್ಥವತ್ತಾಗಬಹುದೆಂದು ನನ್ನ ಅನಿಸಿಕೆ. ಅವರ `ಗೀತಶಾಕುಂತಲ'ದ ಪೀಠಿಕೆಯಲ್ಲಿ ಅವರು ಹೇಳಿದ ಮಾತು ಹೀಗಿದೆ :
``ಶಾಸ್ತ್ರಜ್ಞತೆ ಮತ್ತು ರಸಿಕತೆ ಇವೆರಡನ್ನೂ ಕಲೆಹಾಕಬೇಕೆಂದು ಹೊರಟಾಗ, ಶಾಸ್ತ್ರ ಆರ್ಭಟವೆತ್ತಿ, ಅನುಭವವು ಉಸಿರೆತ್ತದಂತೆ ಮಾಡುವುದುಂಟು. ರಸಿಕನು ಇದಕ್ಕೆ ಅವಕಾಶಕೊಡದೆ, ಜಾಗರೂಕನಾಗಿದ್ದಲ್ಲಿ ಅವನು ಮಾಡುವ ಕಲಾವಿಮರ್ಶನೆ ಚೆನ್ನಾಗು ತ್ತದೆ. ತಾನು ಕಲಿತ ಶಾಸ್ತ್ರವನ್ನು ಈತ ಮರೆತುಕೊಂಡಿದ್ದಾನೋ ಎನ್ನಿಸುವಷ್ಟರ ಮಟ್ಟಿಗೆ ಇರಬೇಕು ಅವನ ಮನಸ್ಸಿನ ಸರಳತೆ ಮತ್ತು ಉದಾರತೆ. ಆಗ ಅವನು ಕಲಾಕೃತಿಯ ಅಂತರ್ಭಾವದಲ್ಲಿ ತಲ್ಲೀನನಾಗುವುದು ಸಾಧ್ಯವಾಗುತ್ತದೆ. ತಲ್ಲೀನತೆಯಿಂದಲೇ ರಸದ ಪೂರ್ಣಾನುಭವ. ಕಲೆ ಯಾವುದೇ ಆಗಲಿ, ಕಲೋಪಾಸಕನು ತನ್ನ ವಿದ್ವತ್ಪ್ರತಿಷ್ಠೆ, ತನ್ನ ವಾದಚಮತ್ಕಾರ, ತನ್ನ ಪಂಥದ ಜಯ - ಇವುಗಳನ್ನು ಬದಿಗಿರಿಸಿ ತನ್ನ ಆತ್ಮಸರ್ವಸ್ವ ವನ್ನೂ ಕಲಾಕೃತಿಗೆ ಸಮರ್ಪಿಸಿಬಿಡಬೇಕು. ಅರೆಯರೆ ಮನಸ್ಸಿನಿಂದಾಗಲಿ, ದೋಷವನ್ನು ಎತ್ತಿಹಾಕದೆ ಬಿಡಬಾರದೆಂಬ ವೀರಪ್ರತಿಜ್ಞೆಯಿಂದಲಾಗಲಿ ಕಾವ್ಯವನ್ನೋ ಶಿಲ್ಪವನ್ನೋ ನೋಡಹೊರಟವನಿಗೆ ದೊರಕುವುದು ಅರ್ಧಮರ್ಧಮಾತ್ರದ ರುಚಿ. ಸಿಹಿಯೊಡನೆ ಕಹಿ. ಬಹುಶಃ ಸಿಹಿಯನ್ನು ಮರಸುವಷ್ಟು ಕಹಿ. ಕೇವಲ ವಿಮರ್ಶೆಯ ದೃಷ್ಟಿಯಿಂದ ಈ ಕಟುಪಟುತೆಗೆ ಉಪಯೋಗವುಂಟೋ ಏನೋ! ಆದರೆ ಸೌಂದರ್ಯಾಭಿಮಾನದ ದೃಷ್ಟಿಯಿಂದ ಅದು ಅನುಕೂಲವಲ್ಲ.''
(ಡಿ.ವಿ.ಜಿ.- `ಗೀತಶಾಕುಂತಲ' ಭೂಮಿಕೆ)
ಡಿ.ವಿ.ಜಿ.ಯವರ ಈ ಮಾತು ಬಹಳ ಅರ್ಥಪೂರ್ಣವಾದುದು. ತಮ್ಮ ಕಾವ್ಯದ ಬಗ್ಗೆ ಬರಬಹುದಾದ ಯಾವುದೇ ಕಟುವಿಮರ್ಶೆಗೆ ಹೆದರಿ ಅವರು ಈ ಮಾತನ್ನು ಬರೆದಿರಲಾರರು. ಇದು ಅವರ ಅಂತರಂಗದ ನುಡಿ; ನಿಷ್ಪಕ್ಷಪಾತವಾದ ನುಡಿ. ಈ ಮಾತುಗಳ ಸಮರ್ಥನೆಗೆ `ಗೀತಶಾಕುಂತಲ'ದ ಪೀಠಿಕೆಯಲ್ಲಿ ಇನ್ನೂ ಅನೇಕ ವಿಷಯ ಗಳನ್ನು ಅವರು ಪ್ರಸ್ತಾವಿಸಿದ್ದಾರೆ. ಹಾಗೆಂದು ಅವರ ಗೀತಶಾಕುಂತಲ ಅಂತಹ ಒಂದು ಸೃಜನಾತ್ಮಕ ರಚನೆಯೇನೂ ಅಲ್ಲ. ಅವರೇ ಹೇಳಿಕೊಂಡಂತೆ ಕಾಲಿದಾಸಕವಿಯ ಪ್ರಸಿದ್ಧ ಸಂಸ್ಕೃತನಾಟಕದ ಕೆಲವು ಸರಸಸಂದರ್ಭಗಳ ಸಂಗೀತಾನುವಾದ ಅದು. ಅಲ್ಲಿ ಅನುವಾದ ಭಾಗಕ್ಕಿಂತಲೂ ಅತ್ಯಂತ ಗ್ರಹಣೀಯವಾದ ಭಾಗ ಅದರ ಪ್ರಾರಂಭದ ಸುಮಾರು ಹತ್ತು ಪುಟಗಳಷ್ಟು ವಿಸ್ತಾರವಾದ ಭೂಮಿಕೆ ಮತ್ತು 21 ಪುಟಗಳಷ್ಟು ವಿಸ್ತಾರವಾದ `ಕಾಲಿದಾಸ ಹೃದಯ'ವೆಂಬ ವಿಮರ್ಶೆ. ಆದರೂ ಡಿ.ವಿ.ಜಿ.ಯವರ ಅನುವಾದಶೈಲಿಯನ್ನು ತಿಳಿಯು ವುದಕ್ಕಾಗಿ ಒಂದು ಉದಾಹರಣೆಯನ್ನು ಇಲ್ಲಿ ಕೊಡುತ್ತೇನೆ. ಮಾರೀಚಾಶ್ರಮಕ್ಕೆ ಬಂದ ದುಷ್ಯಂತನು ಮಹಾತಪಸ್ವಿಗಳ ವೈಭವವಿರಕ್ತಿಯನ್ನು ಕಂಡು ಆಶ್ಚರ್ಯದಿಂದ ಹೀಗೆ ಹೇಳುತ್ತಾನೆ :
ಪ್ರಾಣಾನಾಮನಿಲೇನ ವೃತ್ತಿರುಚಿತಾ ಸತ್ಕಲ್ಪವೃಕ್ಷೇ ವನೇ
ತೋಯೇ ಕಾಂಚನಪದ್ಮರೇಣುಕಪಿಶೇ ಧರ್ಮಾಭಿಷೇಕಕ್ರಿಯಾ |
ಧ್ಯಾನಂ ರತ್ನಶಿಲಾತಲೇಷು ವಿಬುಧಸ್ತ್ರೀಸಂನಿಧೌ ಸಂಯಮೋ
ಯತ್ಕಾಂಕ್ಷಂತಿ ತಪೋಭಿರನ್ಯಮುನಯಃ ತಸ್ಮಿನ್ ತಪಸ್ಯಂತ್ಯಮೀ ||
ಈ ಶ್ಲೋಕದ ಡಿ.ವಿ.ಜಿ. ಅನುವಾದ ಹೀಗಿದೆ:
ತಪಸಿದು ಜಗಕದ್ಭುತ - ಮಹಾವ್ರತ
ಪರಮರ್ಷಿಸಮನುಷ್ಠಿತಾ - ನಿರ್ಮೋಹಿತ
ತಪಸಿಂದನ್ಯರು ಬೇಳ್ಪ ವಿಭವಂಗಳಿರಲದನು
ಉಪಭೋಗಿಸದೆ ತಪಕದು ತಾನೆ ಫಲವೆಂಬ ||
ಕಲ್ಪೋದ್ಯಾನದೊಳಿವರು - ಪ್ರಾಣಾಧಾರ
ಶ್ವಾಸಮಾತ್ರವನುಂಬರು - ನಿಷ್ಕಾಮರು
ಕಲ್ಹಾರಸರಸಿಯೊಳ್ ಕ್ರೀಡೆಯ ಮಾಣ್ದು
ಸ್ನಾನಾಘ್ರ್ಯ ಸಾಕೆಂಬರು - ಈ ಧನ್ಯರು || 1 ||
ಮಣಿಶೈಲಾಸನದಿ ಕಣ್ ಬಿಗಿವರ್ ಸಮಾಧಿಗೆ
ಕೆಣಕುವಪ್ಸರೆಯರ್ಗೆ ಸಂಯಮವ ಕಲಿಪರು
ಮೃಷ್ಟಭೋಜನವಿರಲು ಜಗಕದ -
ನಿಟ್ಟು ತಾಮುಪವಾಸವಿರುತಲೆ
ಪುಷ್ಟರಂದದಿ ಚರಿಪ ಋಷಿವರ
ರೆಷ್ಟು ಧನ್ಯರದೆಷ್ಟು ಪುಣ್ಯರೊ || 2 ||
ಡಿ.ವಿ.ಜಿ. ವಿಚಾರಕ್ರಾಂತಿಯುಳ್ಳವರು ಎಂದು ಮೊದಲೇ ಹೇಳಿ ಆಗಿದೆ. `ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ' (ಐಜಣ ಟಿಠಛಟಜ ಣಠಣರಣ ಛಿಠಟಜ ಣಠ ಣ ಜಿಡಿಠಟ ಜತಜಡಿಥಿಜಜ) ಎಂಬಂತೆ ಒಳ್ಳೆಯ ವಿಚಾರಗಳು ಎಲ್ಲಿದ್ದರೂ ಡಿ.ವಿ.ಜಿ.ಯವರಿಗೆ ಅದು ಬೇಕು. ಅವರ `ಮಂಕುತಿಮ್ಮನ ಕಗ್ಗ'ದಲ್ಲಿ ಮ್ಯಾಕ್ಬೆತ್, ಡಯೋಜೆನಿಸ್, ಸಿಸಿಫಸ್, ಕ್ಲಿಯೋಪಾತ್ರ, ಸೀಸರ್, ಆಂಟನಿ ಎಲ್ಲರೂ ಬರುತ್ತಾರೆ. ಹಾಗೆಯೇ ದಶರಥ, ಕೈಕೇಯಿ, ಅಹಲ್ಯೆ, ಅರ್ಜುನ, ಭೀಮ, ರಾಮ, ಮಾರೀಚ -ಇವರ ಪ್ರಸ್ತಾವವೂ ಬರುತ್ತದೆ. ಅವರಿಗೆ ಕಾಳಿದಾಸ ಹೇಗೆ ಪ್ರಿಯನೋ, ಶೇಕ್ಸ್ಪಿಯರ್ ಹೇಗೆ ಪ್ರಿಯನೋ, ಹಾಗೆಯೇ ಉಮರ್ ಖಯ್ಯಾಮನೂ ಪ್ರೀತಿಯವನೆ. ಉಮರ್ ಖಯ್ಯಾಮನ ವಿಚಾರಧಾರೆಗಳು ಅವರಿಗೆ ಪ್ರಿಯವೆನಿಸದಿದ್ದರೆ, ಅವರು ಅದನ್ನು ಅನುವಾದಿಸುವ ಪ್ರಯತ್ನಮಾಡುತ್ತಿರಲಿಲ್ಲ. ನಿಜವಾಗಿ ನೋಡಿದರೆ, ಉಮರನ ಧೋರಣೆಗಳ ಬಗ್ಗೆ ಅವನ ಮತೀಯರಿಗೇ ಸಹಮತವಿರಲಿಲ್ಲ. ಅವರ ಪಾಲಿಗೆ ಉಮರನು ಒಬ್ಬ ಬಂಡಾಯ ಕವಿಯಾಗಿದ್ದ. ಆದರೆ ಅವನ ಮಾತುಗಳು ಮುಕ್ತಹೃದಯದ ಮಾತುಗಳಾಗಿದ್ದವು. ಯಾರಿಗೋ ಹೆದರಿ ಯಾವುದಕ್ಕೋ ಹೆದರಿ ನಾವೆಲ್ಲ ಬಚ್ಚಿಡುತ್ತಿರುವ ಭಾವಗಳನ್ನು ಆತ ಮುಕ್ತವಾಗಿ ಹೇಳಿಬಿಡುತ್ತಿದ್ದ. ಉಮರನ ಈ ಸ್ವಭಾವ ಡಿ.ವಿ.ಜಿ.ಯವರಿಗೆ ತುಂಬ ಪ್ರಿಯವಾಗಿದ್ದಿರಬೇಕು.
ಫಿಟ್ಸ್ ಜೆರಾಲ್ಡನ ಆಂಗ್ಲಮೂಲದಿಂದ ಕನ್ನಡಕ್ಕೆ ಅನುವಾದ ಮಾಡಲು ಹೊರಟ ಡಿ.ವಿ.ಜಿ., ಉಮರನಿಂದ ಎಷ್ಟು ಪ್ರಭಾವಿತರಾದರೆನ್ನುವುದಕ್ಕೆ, ಉಮರನ ಒಸಗೆಯ ಎರಡನೆಯ ಆವೃತ್ತಿಯಲ್ಲಿ ಪ್ರಕಟವಾದ ಪರಿಶಿಷ್ಟಭಾಗವೇ ಸಾಕ್ಷಿ. ಈ ಪರಿಶಿಷ್ಟಭಾಗವನ್ನು ಫಿಟ್ಸ್ ಜೆರಾಲ್ಡನು ಕೈಬಿಟ್ಟಿದ್ದ. ಆದರೆ ಡಿ.ವಿ.ಜಿ. ಅದನ್ನು ಪರ್ಶಿಯನ್ ಮೂಲದಿಂದಲೂ, ಇನ್ನೊಂದು ಆಂಗ್ಲ ಭಾಷಾಂತರದಿಂದಲೂ ಸಂಗ್ರಹಿಸಿ ಅನುವಾದಿಸಿದ್ದಾರೆ.
ಉಮರ್ ಖಯ್ಯಾಮನ ಪೂರ್ಣ ಹೆಸರು ಹೀಗಿದೆ - `ಘಿಯಾತ್ ಉದ್ದೀನ್ ಅಬುಲ್ಫಾತ್ ಉಮರ್ ಬಿನ್ ಇಬ್ರಾಹಿಂ ಅಲ್ ಖಯ್ಯಾಮಿ' ಎಂದು. ಉಮರ್ ಖಯ್ಯಾಮನು ತನ್ನ ಆಶಯಗಳನ್ನು `ರುಬಾಯಿ' ಎಂಬ ನಾಲ್ಕು ಪಾದಗಳುಳ್ಳ ಛಂದಸ್ಸಿ ನಲ್ಲಿ ಬರೆದಿರುವನು. ಡಿ.ವಿ.ಜಿ.ಯವರು ಅದನ್ನು ಕನ್ನಡದ ಚೌಪದಿಗೆ ಭಟ್ಟಿಯಿಳಿಸಲು ಯತ್ನಿಸಿದ್ದಾರೆ.
ಮಂಕುತಿಮ್ಮ ಮತ್ತು ಮರುಳಮುನಿಯರ ಈ ಎರಡು ಕಗ್ಗಗಳಲ್ಲಿ ಒಟ್ಟಿಗೆ 1769 ಪದ್ಯಗಳಿವೆ. ಇವೆಲ್ಲವೂ ಆಯಾ ಮುಕ್ತಕಕ್ಕೇ ಸೀಮಿತವಾದುದು. ಯಾಕೆಂದರೆ ಅವೆಲ್ಲವೂ ಒಟ್ಟಾಗಿ ಯಾವುದೇ ಒಂದು ಏಕಸಿದ್ಧಾಂತವನ್ನು ನಮಗೆ ತಿಳಿಯಹೇಳುವುದಿಲ್ಲ, ನಮ್ಮ ಸುಭಾಷಿತಗಳ ಹಾಗೆ. ಸುಭಾಷಿತಗಳ ಉದ್ದೇಶ - ಈ ಬದುಕಿನ ಎಲ್ಲವನ್ನೂ ಯುಕ್ತಿ ಯುಕ್ತವಾಗಿ ಸುಂದರವಾಗಿ ವರ್ಣಿಸುವುದು. ಭರ್ತೃಹರಿ ಒಂದೆಡೆ `ವಿದ್ಯಾಧನಂ ಸರ್ವಧನಾತ್ ಪ್ರಧಾನಂ' (ವಿದ್ಯೆಯೇ ಎಲ್ಲ ಸಂಪತ್ತಿಗಿಂತಲೂ ಮೇಲಾದುದು) ಎಂದು ಪ್ರತಿಪಾದಿಸಿದರೆ, ಮುಂದಿನ ಒಂದು ಅಧ್ಯಾಯದಲ್ಲಿ `ಸರ್ವೇ ಗುಣಾಃ ಕಾಂಚನ ಮಾಶ್ರಯಂತೇ' (ಈ ಪ್ರಪಂಚದ ಎಲ್ಲವೂ ಸಂಪತ್ತನ್ನೇ ಅವಲಂಬಿಸಿದೆ) ಎಂದು ಪ್ರತಿಪಾದಿಸುತ್ತಾನೆ. ಹಾಗೆಯೇ ಮುಂದಿನ ಶೃಂಗಾರಶತಕದಲ್ಲಿ ಶೃಂಗಾರದ ಪರಾಕಾಷ್ಠೆ ಯನ್ನು ವರ್ಣಿಸಿದರೆ, ವೈರಾಗ್ಯಶತಕದಲ್ಲಿ ಶೃಂಗಾರವನ್ನು ತಳ್ಳಿಹಾಕಿ ಅಧ್ಯಾತ್ಮಕ್ಕೆ ಪೂರ್ತಿ ಒತ್ತನ್ನು ಕೊಟ್ಟುಬಿಡುತ್ತಾನೆ.
ಡಿ.ವಿ.ಜಿ.ಯವರ ಕಗ್ಗಗಳೂ ಇದೇ ಜಾಡಿನಲ್ಲಿ ಹೆಣೆದ ಕೃತಿಗಳು. ಮಂಕುತಿಮ್ಮನ ಕಗ್ಗದ ಆರಂಭದಲ್ಲಿ ಡಿ.ವಿ.ಜಿ. ಒಂದೆರಡು ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತಾರೆ:
ಏನು ಜೀವನದರ್ಥ? ಏನು ಪ್ರಪಂಚಾರ್ಥ?
ಏನು ಜೀವಪ್ರಪಂಚಗಳ ಸಂಬಂಧ?
ಕಾಣದಿಲ್ಲಿರ್ಪುದೇನಾನುಮುಂಟೆ? ಅದೇನು?
ಜ್ಞಾನಪ್ರಮಾಣವೇಂ? ಮಂಕುತಿಮ್ಮ ||
- ಎಂದು ನಮ್ಮ ಕುತೂಹಲವನ್ನು ಕೆರಳಿಸುತ್ತಾರೆ. ಈ ಪ್ರಶ್ನೆಗಳ ಸರಮಾಲೆ ಮತ್ತೂ ಮುಂದುವರಿಯುತ್ತದೆ :
ದೇವರೆಂಬುದದೇನು? ಕಗ್ಗತ್ತಲೆಯ ಗವಿಯೆ?
ನಾವರಿಯಲಾರದ ಎಲ್ಲದರ ಒಟ್ಟು ಹೆಸರೆ?
ಕಾವನೊರ್ವನಿರಲ್ಕೆ ಜಗದ ಕಥೆ ಏಕಿಂತು?
ಸಾವು ಹುಟ್ಟುಗಳೇನು? ಮಂಕುತಿಮ್ಮ ||
ಇವು ಪ್ರತಿಯೊಬ್ಬ ಬುದ್ಧಿಜೀವಿಯನ್ನೂ ಕಾಡುವ ಮೂಲಭೂತಪ್ರಶ್ನೆಗಳು. ದೇವರು ಇರುವನೆಂದಾದರೆ ಈ ಜಗತ್ತಿನ ಸ್ಥಿತಿ ಹೀಗೆ ಯಾಕೆ? ಬಹುಶಃ ಡಿ.ವಿ.ಜಿ.-ಯವರಿಗೂ ಇದಕ್ಕೆ ಉತ್ತರ ಸಿಗಲಿಲ್ಲವೇ - ಎಂಬ ಸಂಶಯ ಮುಂದಿನ ಪದ್ಯ-ವನ್ನೋದುವಾಗ ನಮ್ಮಲ್ಲಿ ಮೂಡದಿರುವುದಿಲ್ಲ.
ಒಗಟೆಯೇನೀ ಸೃಷ್ಟಿ ಬಾಳಿನರ್ಥವದೇನು?
ಬಗೆದು ಬಿಡಿಸುವರಾರು ಸೋಜಿಗವನು?
ಜಗವ ನಿರವಿಸಿದ ಕೈಯೊಂದಾದಡೆ ಏಕಿಂತು
ಬಗೆಬಗೆಯ ಜೀವಗತಿ? ಮಂಕುತಿಮ್ಮ ||
- ಎನ್ನುತ್ತಾರೆ ಡಿ.ವಿ.ಜಿ.
ದೇವರು ಎಲ್ಲರಿಗೂ ತಂದೆಯಾದರೆ, ದೇವರು ಎಲ್ಲರನ್ನೂ ಸಮಾನಪ್ರೀತಿಯಲ್ಲಿ ಕಾಣುವ ಗುಣನಿಧಿಯಾದರೆ ನಮ್ಮೊಳಗೆ ಈ ರೀತಿಯ ವಿಭಿನ್ನಜೀವಗತಿಗಳು ಯಾಕೆ ಉಂಟಾದುವು? - ಎಂದು ಯಾರಿಗಾದರೂ ಅನ್ನಿಸುವುದು ಸ್ವಾಭಾವಿಕ. ಹಾಗೆಯೇ -
ಬದುಕಿಗಾರ್ ನಾಯಕರು? ಏಕನೊ ಅನೇಕನೋ ?
ವಿಧಿಯೊ? ಪೌರುಷವೊ? ಧರುಮವೊ? ಅಂಧಬಲವೋ?
ಕುದುರುವುದದೆಂತು ಈ ಅವ್ಯವಸ್ಥೆಯ ಪಾಡು?
ಅದಿಗುದಿಯೆ ಗತಿಯೇನೊ ಮಂಕುತಿಮ್ಮ ||
- ಎಂದು ಇನ್ನೊಂದು ಪ್ರಶ್ನೆಯನ್ನೂ ನಮ್ಮ ಮುಂದಿಡುತ್ತಾರೆ. ಹೀಗೆ ಅವರು ಪ್ರಶ್ನಿಸಿದರೂ, ವಿಧಿ-ಪೌರುಷ-ಧರ್ಮ-ಅಂಧಬಲ ಎಂಬ ಈ ನಾಲ್ಕರಲ್ಲಿ `ಬದುಕಿನ ನಾಯಕನೆನಿಸಿದವನು ವಿಧಿಯೇ ಸರಿ' ಎಂದು ಮುಂದೊಂದು ಪದ್ಯದಲ್ಲಿ ತೀರ್ಮಾನಿಸಿ ದಂತೆ ಕಂಡುಬರುತ್ತದೆ.
ಬದುಕು ಜಟಕಾಬಂಡಿ ವಿಧಿಯದರ ಸಾಹೇಬ
ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು
ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು
ಪದ ಕುಸಿಯೆ ನೆಲವಿಹುದು ಮಂಕುತಿಮ್ಮ ||
ಇದೇ ಆಶಯವನ್ನು ವ್ಯಕ್ತಪಡಿಸುವ ಇನ್ನೂ ಒಂದು ಪದ್ಯವಿದೆ:
ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು
ಬೆದರಿಕೆಯನದರಿಂದ ನೀಗಿಪನು ಸಖನು
ಎದೆಯನುಕ್ಕಾಗಿ ಸಾನಿಸು ಚೆನ್ನ, ತುಟಿಯ ಬಿಗಿ,
ವಿಧಿಯಗಸ, ನೀಂ ಕತ್ತೆ ಮಂಕುತಿಮ್ಮ ||
- ಎಂದು ಮುಂತಾದ ಪದ್ಯಗಳಲ್ಲಿ ಡಿ.ವಿ.ಜಿ. ವಿಧಿವಾದವನ್ನೇ ಎತ್ತಿ ಹಿಡಿಯುತ್ತಾರೆ. ಮುಂದಿನ ಇನ್ನೊಂದು ಪದ್ಯದಲ್ಲಿಯೂ `ನಾಯಕ ಬ್ರಹ್ಮನ್, ಅನುಯಾಯಿಗಳು ನಾವೆಲ್ಲ, ಹೇಯವದರೊಳಗೇನೊ' ಎಂದು ಅದನ್ನೇ ಮತ್ತೆ ಪುಷ್ಟೀಕರಿಸಿದ್ದಾರೆ. ಹಾಗಾದರೆ ಮನುಷ್ಯನ ಕರ್ತವ್ಯವೇನು? ಪಾಲಿಗೆ ಬಂದದ್ದನ್ನು ಅನುಭವಿಸುವುದೊಂದೇ ದಾರಿ! `ತಿರುಗಿಸಲು ವಿಧಿರಾಯನು ಇಚ್ಛೆಯಿಂ ಯಂತ್ರವನು, ಪರಿಹಾಸದಿಂದ ಕರ್ಮದೈವ ಕೇಕೆಗಳಿಡಲಿ, ಆದರೆ `ಸ್ಥಿರಚಿತ್ತ ನಿನಗಿರಲಿ' ಎಂಬ ಸಾವಧಾನವನ್ನೂ ಹೇಳಿದ್ದಾರೆ.
ಇರುವ ಕೆಲಸವ ಮಾಡು, ಕಿರಿದೆನದೆ ಮನವಿಟ್ಟು
ದೊರೆತುದ ಹಸಾದಮೆಂದುಣ್ಣು ಗೊಣಗಿಡದೆ
ಧರಿಸು ಲೋಕದ ಭರವ ಪರಮಾರ್ಥನು ಬಿಡದೆ
ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ ||
- ಎಂದು ಬುದ್ಧಿವಾದವನ್ನೂ ಹೇಳಿದ್ದಾರೆ. ಆದರೆ ಅವರ ಈ ವಿಧಿವಾದ ಕಗ್ಗದ ಕೊನೆಯವರೆಗೂ ಸಾಗುವುದಿಲ್ಲ. ಮುಂದೆ ಒಂದು ಕಡೆ ಅವರು ಹೇಳುತ್ತಾರೆ - `ಅರಸೊಬ್ಬನಲ್ಲ ಮೂವರು ಬಾಳನಾಳುವರು' ಎಂದು. ಯಾರೆಲ್ಲ ಎಂದರೆ ನರ, ಕರುಮ, ದೈವಗಳು. ಹೀಗೆ ಮೂವರು ಒಡೆಯರಾದರೆ ಅದಕ್ಕೆ ತೊಡಕು ಬರುವುದೂ ಸಹಜವೇ! `ಗುರಿಯಿಡದ ಮೊದಲು ಕೊನೆಯಿರದ, ದರಬಾರಿನಲಿ ಸರಿಯೇನೋ? ತಪ್ಪೇನೊ?' ಎಂದು ಅಂಥ ಮೂವರ ಆಳಿಕೆಯನ್ನು ಟೀಕಿಸಿದ್ದಾರೆ. ಹಾಗೆಯೇ ಕರ್ಮವಾದ, ವಿಧಿ ವಾದ ಮತ್ತು ಪೌರುಷವಾದ - ಈ ಮೂರು ವಾದಗಳನ್ನೂ ಒಪ್ಪಿಕೊಂಡು, ಇವು ಮೂರೂ ಪರಮಾತ್ಮಶಕ್ತಿಯದೇ ಮೂರು ಬಗೆಗಳು `ಪರಸತ್ತ್ವ ತ್ರೈವಿಧದೊಳಿಹುದು' ಎಂದು ಕೂಡಾ ಹೇಳಿ ನಮ್ಮನ್ನು ಇನ್ನಷ್ಟು ಗೊಂದಲಕ್ಕೆ ಸಿಕ್ಕಿಸಿಬಿಡುತ್ತಾರೆ.
ಮುಂದೆ ಒಂದು ಕಡೆ ಪೌರುಷಕ್ಕಿಂತ ಕರ್ಮವೇ ಬಲವಾದದ್ದು ಎಂದೂ ಹೇಳುತ್ತಾರೆ. `ಆನುಪೂವ್ರ್ಯದ ಕರ್ಮಋಣಶೇಷವಿನಿತು. ತಾನಿರಲೆಬೇಕಲ್ತೆ ಪೌರುಷ ಸ್ಪರ್ಧನೆಗೆ ಆನೆಗಂಕುಶದಂತೆ' ಎಂದು ಕರ್ಮವೇ ಮೇಲು ಎಂದು ಸಮರ್ಥಿಸಿದ್ದಾರೆ. ಪೌರುಷವೆಂಬ ಆನೆಯನ್ನು ಅವನವನ ಪೂರ್ವಾರ್ಜಿತ ಕರ್ಮವು ಅಂಕುಶದಂತೆ ನಿಯಂತ್ರಿಸುತ್ತದೆ - ಎಂದಿದ್ದಾರೆ.
ಹಾಗೆಂದು ಆ ಕರ್ಮ ಎಲ್ಲಿಂದ ಬರುತ್ತದೆ - ಹೇಗೆ ಅಂಟಿಕೊಳ್ಳುತ್ತದೆ ಎಂಬ ಬಗ್ಗೆ ಡಿ.ವಿ.ಜಿ.ಯವರು ಖಚಿತವಾಗಿ ಏನೂ ಹೇಳುವುದಿಲ್ಲ. ಒಂದು ಪದ್ಯ ನೋಡಿ:
ಸುರಪ ಸಭೆಯಲಿ ಗಾಧಿಸುತ-ವಸಿಷ್ಠಸ್ಪರ್ಧೆ,
ಧರೆಯೊಳದರಿಂ ಹರಿಶ್ಚಂದ್ರಂಗೆ ತಪಸೆ,
ಬರುವುದಿಂತೆತ್ತಣಿನೊ ಬೇಡದ ಪ್ರಾರಬ್ಧ
ಕರ್ಮಗತಿ ಕೃತ್ರಿಮವೊ ಮಂಕುತಿಮ್ಮ ||
ಇಲ್ಲಿ ನಮ್ಮ ಕರ್ಮವೇ ನಮಗೆ ಬಾಧಿಸುವುದಲ್ಲ. ಯಾರ್ಯಾರ ಕರ್ಮಗಳಿಂದಲೂ ನಾವು ಬಾಧೆಪಡಬೇಕಾಗುತ್ತದೆ - ಎಂದು ಸಮರ್ಥಿಸಿದ ಡಿ.ವಿ.ಜಿ.ಯವರ ಕರ್ಮ ಸಿದ್ಧಾಂತವು ಕೊಂಚ ಎಡವಿದಂತೆ ಕಾಣುತ್ತದೆ. ಆದರೂ ಡಿ.ವಿ.ಜಿ.ಯವರ ಒಲವು ಕರ್ಮಸಿದ್ಧಾಂತದ ಕಡೆಗೇ ಏನೋ ಎಂಬಂತೆ - ಕಗ್ಗದಲ್ಲಿ ಸುಮಾರು 50 ಪದ್ಯಗಳಲ್ಲಿ ಮತ್ತೆ ಇದನ್ನೇ ಮಥನಮಾಡಿದ್ದಾರೆ.
ಕೆಲವು ಉದಾಹರಣೆ ನೋಡೋಣ.
ಪ್ರಾರಬ್ದಕರ್ಮಮುಂ ದೈವಿಕದ ಲೀಲೆಯುಂ
ತೋರುವುವು ಅದೃಷ್ಟ ವಿಧಿ ಎಂಬ ಪೆಸರುಗಳಿಂ |
ಆರುಮಲೆವವರಿಲ್ಲ ಅವುಗಳಾ ವೇಗಗಳ
- ಎಂದು, ಈ ಪದ್ಯದಲ್ಲಿ ಪ್ರಾರಬ್ದಕರ್ಮವೇ ಅದೃಷ್ಟ. ದೈವಿಕದ ಲೀಲೆಯೇ ವಿಧಿ - ಎಂಬ ಕರ್ಮವನ್ನೂ ವಿಧಿಯನ್ನೂ ಪ್ರತ್ಯೇಕಿಸಿ ಹೇಳಿದ್ದಾರೆ. ಅದೃಷ್ಟವನ್ನು ಅಥವಾ ಹಣೆಬರಹವನ್ನು ಬದಲಾಯಿಸಲು ಸಾಧ್ಯವೇ ಇಲ್ಲ - ಎಂದು ಮುಂದೆ ಒಂದು ಪದ್ಯದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ?
ವಿಹಿತವಾಗಿಹುದದರ ಗತಿ - ಸೃಷ್ಟಿವಿಧಿಯಿಂ
ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ
ಸಹನೆ ವಜ್ರದ ಕವಚ ಮಂಕುತಿಮ್ಮ ||
- ಎಂದು ತಮಗೆ ಕಷ್ಟಬಂದಾಗಲೆಲ್ಲ ಜೋಯಿಸರ ಬಳಿಗೆ ಹೋಗಿ ಪರಿಹಾರ ಕೇಳುವವರಿಗೆ ಇಲ್ಲೊಂದು ಕಿವಿಮಾತು ಹೇಳಿದ್ದಾರೆ - ಡಿ.ವಿ.ಜಿ.ಯವರು. ನಿಮ್ಮ ಗ್ರಹಗತಿ ಯನ್ನು ಜೋಯಿಸರಿಂದ ತಿದ್ದಲು ಸಾಧ್ಯವಿಲ್ಲ. ಎಂದರೆ `ನೀವು ಜೋಯಿಸರ ಬಳಿಗೆ ಹೋಗಬೇಕಾದ ಅಗತ್ಯವಿಲ್ಲ. ನಿಮಗಿರುವ ದಾರಿ ಒಂದೇ - ಆವ ದಶೆ ಬಂದೊಡಂ ಸಹನೆ ವಜ್ರದ ಕವಚ, ಸಹಿಸುವುದೊಂದೇ ದಾರಿ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಡಿ.ವಿ.ಜಿ.ಯವರ ಕೆಲವು ಬಂಡಾಯ ಧೋರಣೆಗಳನ್ನೂ ಮಂಕುತಿಮ್ಮನ ಕಗ್ಗದಲ್ಲಿ ಕಾಣಬಹುದು. ದೇವರ ಬಗ್ಗೆ ಡಿ.ವಿ.ಜಿ.ಯವರು ಹೇಳಿದ ಕೆಲವು ಪದ್ಯಗಳು ನಮಗೆ ಆಶ್ಚರ್ಯವನ್ನುಂಟುಮಾಡುತ್ತವೆ. ಅವುಗಳಲ್ಲಿ ನಾಸ್ತಿಕವಾದದ ಸೊಗಡು ಇದೆಯೇ ಎಂಬ ಸಂಶಯ ನಮಗೆ ಬಾರದೆ ಇರುವುದಿಲ್ಲ. ದೈವಭಕ್ತಿಯ ಬಗ್ಗೆ ಅವರು ಹೇಳುವ ಮಾತು ಕೇಳಿ :
ಕತ್ತಲೆಯೊಳೇನನೋ ಕಂಡು ಬೆದರಿದ ನಾಯಿ
ಎತ್ತಲೋ ಸಖನೊರ್ವನಿಹನೆಂದು ನಂಬಿ
ಕತ್ತೆತ್ತಿ ಮೋಳಿಡುತ ಬೊಗಳಿ ಹಾರಾಡುವುದು
ಭಕ್ತಿಯಂತೆಯೆ ನಮದು ಮಂಕುತಿಮ್ಮ ||
ಮುಂದಿನ ಪದ್ಯದಲ್ಲಿ ಒಂದು ಪುರಾಣದ ಉದಾಹರಣೆಯನ್ನೇ ಎತ್ತಿಕೊಂಡು, ಡಿ.ವಿ.ಜಿ. ಹೀಗೆ ಹೇಳುತ್ತಾರೆ :
ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ
ನಂಬಿಯುಂ ನಂಬದಿಹ ಇಬ್ಬಂದಿ ನೀನು
ಕಂಬದಿನೊ, ಬಿಂಬದಿನೊ ಮೋಕ್ಷ ಅವರಿಂಗಾಯ್ತು
ಸಿಂಬಳದಿ ನೊಣ ನೀನು ಮಂಕುತಿಮ್ಮ ||
ಈ ಪದ್ಯದ ಅರ್ಥವೇನು? ಹಿರಣ್ಯಕಶಿಪುವಿನ ಹಾಗೆ ದೇವರನ್ನು ನಂಬದಿದ್ದರೂ ಆದೀತು; ಪ್ರಹ್ಲಾದನಂತೆ ನಂಬಿದರೂ ಆದೀತು. ಈ ಎರಡು ಪಂಥದವರಿಗೂ ನಮ್ಮ ಪುರಾಣ ಮೋಕ್ಷವನ್ನು ಕೊಟ್ಟಿದೆ. ನೀನು ಎಂಥ ಮನುಷ್ಯ? ನಿನಗೆ ದೇವರನ್ನು ನಂಬಲಿಕ್ಕೂ ಗೊತ್ತಿಲ್ಲ; ಹಿರಣ್ಯಕಶಿಪುವಿನಂತೆ ಧೈರ್ಯದಿಂದ ನಂಬದೆ ಇರಲಿಕ್ಕೂ ಗೊತ್ತಿಲ್ಲ. ಹಾಗಾಗಿ ನೀನು ಇಬ್ಬಂದಿ, ಎರಡು ಭಾವನೆಗಳಿಂದಲೂ ಬಂಧಿತನಾಗಿದ್ದಿ. ನೀನು ಸಿಂಬಳದ ನೊಣ - ಎನ್ನುತ್ತಾರೆ ಡಿ.ವಿ.ಜಿ.
ದೈವದ ಬಗ್ಗೆ ಸಾಕಷ್ಟು ವಿವರಿಸಿದ ಬಳಿದ ಡಿ.ವಿ.ಜಿ.ಯವರು ಎಡೆಯಲ್ಲಿ ಒಂದು ಪದ್ಯದಲ್ಲಿ ಹೀಗೆ ಹೇಳುತ್ತಾರೆ.
ಆಶೆ ಬಲೆಯನು ಬೀಸಿ, ನಿನ್ನ ತನ್ನೆಡೆಗೆಳೆದು
ಘಾಸಿ ನೀಂ ಬಡುತ ಬಾಯ್ಬಿಡೆ ಮೋರೆ ನೋಡಿ
ಮೈಸವರಿ ಕಾಲನೆಡವಿಸಿ, ಗುಟ್ಟಿನಲಿ ನಗುವ
ಮೋಸದಾಟವೊ ದೈವ ಮಂಕುತಿಮ್ಮ ||
- ಎಂದು ಪ್ರಶ್ನಿಸುತ್ತಾರೆ. ಇನ್ನೊಂದು ಪದ್ಯದಲ್ಲಿ -
ಸೃಷ್ಟಿಕತೆ ಕಟ್ಟುಕತೆ, ವಿಲಯಕತೆ ಬರಿಯ ಕತೆ
ಹುಟ್ಟುಸಾವುಗಳೊಂದು ಪುರುಳಿನ ಎರಡು ದಶೆ
ನಿತ್ಯ ಪರಿವರ್ತನೆಯೆ ಚೈತನ್ಯ ನರ್ತನೆಯೆ
ಸತ್ಯ ಜಗದಲಿ ಕಾಣೊ ಮಂಕುತಿಮ್ಮ ||
- ಎನ್ನುತ್ತಾರೆ. ಹಾಗೆಯೇ `ವಿಧಿಯೇ ಮೇಲು' ಎಂದು ವಿಧಿವಾದವನ್ನು ಮುಂದಿಡುವ ಡಿ.ವಿ.ಜಿ. ಒಂದು ಪದ್ಯದಲ್ಲಿ ವಿಧಿಯನ್ನು ಹಂಗಿಸಿ ನುಡಿಯುತ್ತಾರೆ:
ತೋಯಿಸುತ, ಬೇಯಿಸುತ, ಹೆಚ್ಚುತ್ತ ಕೊಚ್ಚುತ್ತ
ಕಾಯಿಸುತ, ಕರಿಯುತ್ತ, ಹುರಿಯುತ್ತ ಸುಡುತ
ಈ ಅವನಿಯೊಲೆಯೊಳು ಎಮ್ಮಯ ಬಾಳನಟ್ಟು ವಿಧಿ
ಬಾಯ ಚಪ್ಪರಿಸುವನು ಮಂಕುತಿಮ್ಮ ||
- ಎನ್ನುತ್ತಾರೆ. ಇಂಥದೇ ಧಾಟಿಯ ಇನ್ನು ಕೆಲವು ಪದ್ಯಗಳನ್ನು ಕೇಳಿ :
ಕೃತ್ರಿಮವೊ ಜಗವೆಲ್ಲ ಸತ್ಯತೆ ಅದೆಲ್ಲಿಹುದೊ
ಕರ್ತೃವೆನಿಸಿದನೆ ತಾಂ ಗುಪ್ತನಾಗಿಹನು
ಚಿತ್ರವೀ ಜಗವು ಇದರೊಳಾರ ಗುಣವೆಂತಹುದೊ
ಯಾತ್ರಿಕನೆ ಜಾಗರಿರೊ - ಮಂಕುತಿಮ್ಮ ||
ಬೇರಯಿಸಿ ನಿಮಿಷ ನಿಮಿಷಕಂ ಒಡಲ ಬಣ್ಣಗಳ
ತೋರಿಪ ಊಸರವಳ್ಳಿಯಂತೇನು ಬೊಮ್ಮಂ ?
ಪೂರ ಮೆಯ್ದೋರೆನೆಂಬ ಆ ಕಪಟಿಯ ಅಂಶಾವ
ತಾರದಿಂದಾರ್ಗೇನು? ಮಂಕುತಿಮ್ಮ ||
ಪರಲೋಕಕಲ್ಪನೆಯ ಬಗ್ಗೆ ಡಿ.ವಿ.ಜಿ.ಯವರ ಆಶಯ ಹೀಗಿದೆ :
ಮರಣದಿಂ ಮುಂದೇನು ಪ್ರೇತವೋ ಭೂತವೋ
ಪರಲೋಕವೋ ಪುನರ್ಜನ್ಮವೊ ಅದೇನೋ
ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ
ಧರೆಯ ಬಾಳ್ಗೆ ಅದರಿನೇಂ? ಮಂಕುತಿಮ್ಮ ||
ಈ ಪದ್ಯವು ಚಾರ್ವಾಕಸಿದ್ಧಾಂತದ `ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ' ಎಂಬ ಮಾತನ್ನು ಜ್ಞಾಪಿಸಿಕೊಡುತ್ತದೆ. `ಸಾಲಮಾಡಿ ತುಪ್ಪ ತಿನ್ನು' ಎಂಬ ಉತ್ತರಾರ್ಧ ಮಾತ್ರ ಈ ಪದ್ಯದಲ್ಲಿಲ್ಲವೆಂದಲ್ಲದೆ ಮತ್ತೆಲ್ಲ ಅದೇ ಆಶಯವನ್ನು ಹೊತ್ತಿದೆ.
ಮಾನವನ ಈ ಸಂಶಯಗಳಿಗೆಲ್ಲ ಯಾರೂ ಸರಿಯಾದ ಸಮಾಧಾನ ಹೇಳಲಿಲ್ಲ ಎಂದು ಒಂದು ಪದ್ಯದಲ್ಲಿ ಅವರು ಹೇಳಿದ್ದಾರೆ :
ಎಷ್ಟು ಚಿಂತಿಸಿದೊಡಂ ಶಂಕೆಯನು ಬೆಳೆಸುವೀ
ಸೃಷ್ಟಿಯಲಿ ತತ್ತ್ವವೆಲ್ಲಿಯೊ ಬೆದರೆ ನರನು
ಕಷ್ಟಪಡುತಿರಲೆನುವುದೇ ಬ್ರಹ್ಮವಿಧಿಯೇನೊ?
ಅಷ್ಟೆ ನಮ್ಮಯ ಪಾಡು? ಮಂಕುತಿಮ್ಮ ||
- ಎನ್ನುತ್ತಾರೆ. ನಮ್ಮ ದಾರ್ಶನಿಕರ ಎಲ್ಲ ಸಿದ್ಧಾಂತಗಳೂ ಗೋಜಲು ಗೋಜಲು ಗಳಾಗಿವೆ. ಯಾವುದೂ ನಮ್ಮ ಪೂರ್ಣವಾಗಿ ಸಂಶಯಪರಿಹಾರ ಮಾಡುವುದಿಲ್ಲ. ಅಂತಹವರನ್ನು ಏಕೆ ನಂಬಬೇಕು - ಎಂದು ಇನ್ನೊಂದೆಡೆ ಹೇಳಿದ್ದಾರೆ.
ನರಪರೀಕ್ಷೆಯೆ ಬೊಮ್ಮನಾಶಯವೆ? ನಮ್ಮ ಬಾಳ್
ಬರಿ ಸಮಸ್ಯೆಯೆ? ಅದರ ಪೂರಣವದೆಲ್ಲಿ?
ಸುರಿದು ಪ್ರಶ್ನೆಗಳನು ಉತ್ತರವ ಕುಡೆ ಬಾರದನ
ಗುರುವೆಂದು ಕರೆಯುವೆಯ? ಮಂಕುತಿಮ್ಮ ||
- ಎಂದು ಕಟುವಾಗಿ ಪ್ರಶ್ನಿಸುತ್ತಾರೆ. ಈ ಪದ್ಯಗಳನ್ನು ಓದಿದಾಗ ಡಿ.ವಿ.ಜಿ.ಯವರ ಕಾವ್ಯಧೋರಣೆ - ಏಕಮುಖವಾಗಿ ಈ ಕಗ್ಗದಲ್ಲಿ ಹರಿದಂತೆ ಕಾಣುವುದಿಲ್ಲ.
ಮುಂದೆ ಕೆಲವು ಪದ್ಯಗಳಲ್ಲಿ `ಮಾಯಾವಾದ'ವನ್ನೇ ಎತ್ತಿಕೊಂಡು ಕವಿತಾರಚನೆ ಮಾಡಿದ್ದಾರೆ:
ಮಾಯೆಯೆಂಬಳ ಸೃಜಿಸಿ, ತಾಯನಾಗಿಸಿ ಜಗಕೆ
ಆಯಸಂಗೊಳುತ ಸಂಸಾರಿಯಾಗಿರುವ
ನಾಯಕ ಬ್ರಹ್ಮನ್ ಅನುಯಾಯಿಗಳು ನಾವೆಲ್ಲ
ಹೇಯವದರೊಳಗೇನೊ? ಮಂಕುತಿಮ್ಮ ||
ಮುಂದೊಂದು ಪದ್ಯದಲ್ಲಿ ಬ್ರಹ್ಮನಿಗಿಂತಲೂ ಮಾಯೆಯೇ ದೊಡ್ಡವಳು ಎನ್ನುತ್ತಾರೆ.
ಕೈಕೇಯಿಯರು ಮುದಿ ದಶರಥನನ್ನಾಡಿಸಿ, ಕೋಸಲವನಾಳಿದಂತೆ
ಮಾಯೆ ಬೊಮ್ಮನ ಬಿನದವಡಿಸಿ, ನಮ್ಮೀ ಜಗವ ಕಾಯುವಳು
ಅಂತಹ ಮಾಯೆಗೆ ಮರುಳಾಗಬೇಡ. `ಮೆಯ್ಯ ನೀಂ ಮರೆಯೆ ನೂಕುವಳಾಗ ಪಾತಳಕೆ, ಪ್ರೇಮಪೂತನಿಯವಳು - ಎಂಬ ಕಿವಿಮಾತನ್ನೂ ಹೇಳಿದ್ದಾರೆ.
ಅಜ್ಞಾತವಾದುದನು ಅಭಾವವೆನೆ ನಾಸ್ತಿಕನು
ಅಜ್ಞೇಯವೆಂದದಕೆ ಕೈಮುಗಿಯೆ ಭಕ್ತ
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ
ಸ್ವಜ್ಞಪ್ತಿಶೋಧಿ ಮುನಿ ಮಂಕುತಿಮ್ಮ ||
- ಎಂಬೊಂದು ಪದ್ಯದಲ್ಲಿ ನಾಸ್ತಿಕ, ಭಕ್ತ, ವಿಜ್ಞಾನಿ, ಮುನಿ - ಈ ನಾಲ್ವರ ಲಕ್ಷಣವನ್ನೂ ಬಹಳ ಸರಳವಾಗಿ ತಿಳಿಯಪಡಿಸಿದ್ದಾರೆ.
ಇಷ್ಟು ತಾತ್ತ್ವಿಕ ವಿಚಾರಗಳನ್ನು ತಿಳಿಸುವ ಡಿ.ವಿ.ಜಿ.ಯವರು ಕೆಲವು ಪದ್ಯಗಳಲ್ಲಿ ಅನೇಕ ಲೌಕಿಕವಿಚಾರಗಳನ್ನು ಅತ್ಯಂತ ರಸವತ್ತಾಗಿ ಹೇಳಿ - ಕಗ್ಗವನ್ನು ಆಪ್ಯಾಯಮಾನವಾಗಿ ಮಾಡುತ್ತಾರೆ. ಈ ಪ್ರಪಂಚವೆಲ್ಲಾ ಒಂದು ಕಲಬೆರಕೆ ಎನ್ನುವ ಒಂದು ಪದ್ಯ ಹೀಗಿದೆ :
ಪುಲಿಸಿಂಗದ ಉಚ್ಛ್ವಾಸ, ಹಸು ಹುಲ್ಲೆ ಹಯದ ಉಸಿರು,
ಹುಳು ಹಾವು ಇಲಿಯ ಸುಯ್ಲು, ಹಕ್ಕಿ ಹದ್ದು ಹುಯಿಲು
ಕಲೆತಿರ್ಪುವು ಈಯೆಲ್ಲ ನಾಮುಸಿರ್ವ ಎಲರಿನಲಿ
ಕಲಬೆರಕೆ ಜಗದುಸಿರು ಮಂಕುತಿಮ್ಮ ||
ವಾತಾವರಣದ ಮಾಲಿನ್ಯದ ಬಗ್ಗೆ ಇನ್ನೊಂದು ಪದ್ಯದಲ್ಲಿ ಇನ್ನಷ್ಟು ರಸಿಕರಾಗಿ ಡಿ.ವಿ.ಜಿ. ಹೇಳುತ್ತಾರೆ :
ರಾಮನುಚ್ಛ್ವಾಸವು ಅಲೆದಿರದೆ ರಾವಣನೆಡೆಗೆ
ರಾಮನುಂ ದಶಕಂಠನ ಎಲರನು ಉಸಿರದಿರನೆ
ರಾಮ ರಾವಣರ ಉಸಿರ್ಗಳು ಇಂದು ನಮ್ಮೊಳಗೆ ಇರವೆ?
ಭೂಮಿಯಲಿ ಪೊಸತೇನೊ ಮಂಕುತಿಮ್ಮ ||
ಇನ್ನೊಂದು ಪದ್ಯದಲ್ಲಿ `ಈ ಲೋಕ ನಿನಗಾಗಿದೆ. ಅದರಲ್ಲಿ ಸಿಗುವ ಸುಖವನ್ನೆಲ್ಲ ನೀನು ಅನುಭವಿಸು' - ಎಂದು ಮಾನವನ ಸುಖೀಜೀವನಕ್ಕೆ ಶುಭಾಶಯವನ್ನು ಕೋರಿದ್ದಾರೆ ಡಿ.ವಿ.ಜಿ. ಆ ಪದ್ಯ ಹೀಗಿದೆ :
ನಾಚಿಕೆಯದೇಕೆ ನೀಂ ಬದುಕಿನಲಿ ಸೊಗವಡಲು
ಚಾಚುತಿಹುದಾತ್ಮ ನಾಲಗೆಯ ದೆಸೆದೆಸೆಗೆ
ಬಾಚಿಕೊಳಲು ಅಮೃತಕಣಗಳನೆಲ್ಲ ತನ್ನೆಡೆಗೆ
ಸಾಜ ಸೊಗವಾತ್ಮಂಗೆ ಮಂಕುತಿಮ್ಮ ||
-ಎಂದಿದ್ದಾರೆ.
ಆಟವೋ ಮಾಟವೋ ಕಾಟವೋ ಲೋಕವಿದು
ಊಟಉಪಚಾರಗಳ ಬೇಡವೆನ್ನದಿರು
ಪಾಟವವು ಮೆಯ್ಗಿರಲಿ - ನೋಟ ತತ್ತ್ವದೊಳಿರಲಿ
ಪಾಠಿಸು ಸಮನ್ವಯವ ಮಂಕುತಿಮ್ಮ ||
-ಇದು ಡಿ.ವಿ.ಜಿ.ಯವರ ವಿವಿಧ ಧೋರಣೆಗೆ ಒಂದು ಮುಕ್ತಾಯ (ಅಠಟಿಛಿಟಣಠಟಿ) ಹೇಳುವ ಹಾಗಿದೆ. ಬದುಕಿನಲ್ಲಿ ಎಲ್ಲ್ಲವೂ ಬೇಕು. ತಪ್ಪೂ ಬೇಕು ಸರಿಯೂ ಬೇಕು - ಅದೇ ನಿಜವಾದ ಬದುಕು -ಎನ್ನುತ್ತಾರೆ ಡಿ.ವಿ.ಜಿ.
ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿ ಅಷ್ಟಿಷ್ಟು
ಒಪ್ಪಿರ್ದೊಡದು ಭೋಜ್ಯವಂತು ಜೀವಿತಮುಂ
ತಪ್ಪು ಸರಿ ಬೆಪ್ಪು ಜಾಣ್ ಅಂದ-ಕುಂದುಗಳ ಬಗೆ
ಇಪ್ಪತ್ತು ಸೇರೆ ರುಚಿ ಮಂಕುತಿಮ್ಮ ||
-ಎಂಬ ಈ ಪದ್ಯದ ಮೂಲಕ ಡಿ.ವಿ.ಜಿ.ಯವರು ಜಟಿಲವಾದ ಮಾನವನ ಬದುಕನ್ನು ಅತ್ಯಂತ ಸರಳಗೊಳಿಸಿ, ಎಲ್ಲರೂ ಆಶಾವಾದಿಗಳಾಗಿ ಬದುಕುವಂತೆ ಹಾರೈಸಿದ್ದಾರೆ.
ಇದು ಮಂಕುತಿಮ್ಮನ ವಿಮರ್ಶೆಯಾದರೆ ಈಗ ಮರುಳ ಮುನಿಯನ ಕುರಿತು ವಿಚಾರಮಾಡೋಣ. ಮುನಿಯನ ಕಗ್ಗದ ಪ್ರಾರಂಭದಲ್ಲಿ ಅವನ ಪರಿಚಯ ಮಾಡಿಸುತ್ತಾ
`ಮರುಳ ಮುನಿಯನು ನಾನು ಮಂಕುತಿಮ್ಮನ ತಮ್ಮ' ಎಂದು ಹೇಳಿದ್ದಾರೆ. `ನನ್ನ ಎದೆಯ ತಿದಿಯೊಳಗೆ ತುಂಬಿರುವ ಚಿಂತೆಯನ್ನು ನಾನು ಇಲ್ಲಿ ಸುರಿಯುತ್ತಿದ್ದೇನೆ. ಯಾರಾದರೂ ಸಾಧುಗಳು ಇದಕ್ಕೆ ಸಮಾಧಾನ ಹೇಳಿಯಾರು. ಯಾಕೆಂದರೆ ನಮಗೆ ಜಗತ್ತೇ ಗುರು ವಲ್ಲವೆ?' ಎಂದಿದ್ದಾರೆ. ಇನ್ನೊಂದು ಪದ್ಯದಲ್ಲಿ `ನನ್ನ ಎದೆಯ ಚೀಲದಲ್ಲಿರುವ ಸಾರವಾದ ಅರ್ಥವನ್ನು ಅಥವಾ ಅಭಿಪ್ರಾಯವನ್ನು ಈ ಕಗ್ಗದಲ್ಲಿ ಸುರಿಯುತ್ತಿದ್ದೇನೆ. ಸರಿಯಾಗಿ ನೋಡಿಕೊಡುವ ಸಜ್ಜನರು ಲೋಕದಲ್ಲಿದ್ದರೆ, ಅಂಥವರಿಗೆ ನಾನು ಶರಣು' ಎಂದೂ ಹೇಳಿದ್ದಾರೆ. ಕಗ್ಗದ ಬಗೆಗೆ ಅವರು ಹೇಳಿದ ಇನ್ನೊಂದು ಮಾತು ಅತ್ಯಂತ ಗಮನಾರ್ಹವಾದುದು:
ಕಗ್ಗವಿದು ಬೆಳೆಯುತಿದೆ ಲಂಕೆಯಲಿ ಹನುಮಂತ
ಹಿಗ್ಗಿ ಬೆಳೆಸಿದ ಬಾಲದಂತೆ ಸಿಗ್ಗುಳಿದು
ನುಗ್ಗಿ ಬರುತಿದೆ ಲೋಕದ ಪ್ರಶ್ನೆಗಳ ಧಾಳಿ,
ಉಗ್ಗು ಬಾಯ್ ಚಪಲವಿದು - ಮರುಳಮುನಿಯ ||
ಇಲ್ಲಿ `ಕಗ್ಗ ಹನುಮಂತನ ಬಾಲದಂತೆ ಬೆಳೆಯುತಿದೆ' ಎಂಬ ಮಾತಿನಲ್ಲಿ ಕಗ್ಗದ ವ್ಯಾಪ್ತಿ ಎಷ್ಟೆಂದು ನಾವು ಊಹಿಸಬಹುದು. ಈ ಪ್ರಪಂಚದ ಆಗುಹೋಗುಗಳೆಲ್ಲ ಕಗ್ಗದ ವಿಷಯವಾಗುತ್ತವೆ. `ನುಗ್ಗಿ ಬರುತಿದೆ ಲೋಕದ ಪ್ರಶ್ನೆಗಳ ದಾಳಿ' ಎಂಬ ಸಾಲಿನಲ್ಲಿ `ಬದುಕಿನ ನಮ್ಮ ಸಮಸ್ಯೆಗಳಿಗೆ ಕೊನೆಯಿಲ್ಲ. ಅವೆಲ್ಲದರ ಮಂಡನೆಯೇ ಕಗ್ಗ' ಎಂಬ ಅರ್ಥವಿದ್ದಂತೆ ಕಾಣುತ್ತದೆ. ಕೊನೆಯಲ್ಲಿ ಇದೆಲ್ಲ `ಉಗ್ಗು ಬಾಯ್ ಚಪಲ' ಎಂದು ಹೇಳಿ ತಮ್ಮ ವಿಧೇಯತೆಯನ್ನು ತೋರ್ಪಡಿಸಿದ್ದಾರೆ.
ಇದನ್ನು ತಾವು ಬರೆದ ಉದ್ದೇಶವೇನು? ಇದನ್ನು ಕಗ್ಗವೆಂದು ಏಕೆ ಕರೆದರು - ಇದಕ್ಕೆಲ್ಲ ಸಮಾಧಾನ ಮುನಿಯನ ಕಗ್ಗದ 10ನೆಯ ಪದ್ಯದಲ್ಲಿ ದೊರೆಯುತ್ತದೆ.
ಬಿನದ ಕಥೆಯಲ್ಲ ಹೃದ್ರಸದ ನಿರ್ಝರಿಯಲ್ಲ
ಮನನಾನುಸಂಧಾನಕಾದುದೀ ಕಗ್ಗ
ನೆನೆನೆನೆಯುತ ಒಂದೊಂದು ಪದ್ಯವನು ಅದೊಮ್ಮೊಮ್ಮೆ
ಅನುಭವಿಸಿ ಚಪ್ಪರಿಸೊ - ಮರುಳಮುನಿಯ ||
ತಿಮ್ಮನ ಕಗ್ಗಕ್ಕಿಂತಲೂ ಈ ಕಗ್ಗವು ಆಧ್ಯಾತ್ಮಿಕವಿಚಾರಕ್ಕೆ ಹೆಚ್ಚು ಒತ್ತುಕೊಡುತ್ತದೆ. ಅನೇಕ ವೇದಾಂತತ್ತ್ವಗಳ ಮಂಡನೆ ಇಲ್ಲಿದೆ. ಆದರೂ ಕೆಲವೊಂದು ಲೌಕಿಕವಿಚಾರ ಗಳನ್ನೂ ಅಲ್ಲಲ್ಲಿ ಹೇಳಿದ್ದಾರೆ. ಆ ಹೇಳಿದ್ದೆಲ್ಲವೂ -ಅಷ್ಟೂ ನಮ್ಮ ಗಮನಸೆಳೆಯುತ್ತವೆ. ಲೌಕಿಕ ಜೀವನದ ಬಗೆಗಿನ, ಡಿ.ವಿ.ಜಿ. ಧೋರಣೆ ಇಲ್ಲಿಯ ಕೆಲವು ಸಾಲುಗಳಲ್ಲಿ ಮುದ್ರಿತ ವಾಗಿವೆ :
ಬಡವನಾರ್? ಮಡದಿಯೊಲವಿನ ಸವಿಯನರಿಯದವನು
ಹುಡುಗರಾಟದಿ ಬೆರೆತು ನಗಲರಿಯದವನು
ಉಡುರಾಜನೋಲಗದಿ ಕುಳಿತು ಮೆಯ್ಮರೆಯದವನು
ಹಾಗಾದರೆ ಬಡತನವೆಂದರೇನು? `ಬಡಮನಸೆ ಬಡತನವೊ' ಎಂದು ಬಹಳ ಸೊಗಸಾಗಿ ಹೇಳಿದ್ದಾರೆ. ಮತ್ತೆ ವಿಧಿವಾದ ಕರ್ಮವಾದಗಳೂ ಇಲ್ಲಿ ಕಾಣಿಸಿಕೊಂಡಿವೆ.
`ಅಯ್ಯಾ ಮಾನವ, ನೀನೊಬ್ಬ ರೋಗಿಯ ಹಾಗೆ. ನಿನಗೆ ಯೋಗ್ಯವಾದ ಔಷಧವನ್ನು ವಿಧಿಯೇ ನಿಷ್ಕರ್ಷಿಸುತ್ತಾನೆ. `ಗ್ರಹಿಸು ವಿಧಿಯೌಷಧವ' ಎನ್ನುತ್ತಾರೆ. ಹುಟ್ಟುವ ಸಾಯುವ ಅಧಿಕಾರ ನಿನಗಿಲ್ಲ. ಅದನ್ನು ನೀನು ದೇವರಲ್ಲಿ ಬೇಡಬೇಕಾಗಿಲ್ಲ. `ತರುವುದೆಲ್ಲವ ಸಕಾಲಕೆ ಕರ್ಮಚಕ್ರಂ' ಎಂದು ಕರ್ಮಸಿದ್ಧಾಂತವನ್ನು ಇಲ್ಲಿಯೂ ಪ್ರತಿಪಾದಿಸಿದ್ದಾರೆ. ಈ ಲೋಕವನ್ನು ತಿದ್ದಿ ಸರಿಪಡಿಸಲು ಯಾರಿಂದಲೂ ಆಗಿಲ್ಲ -
ಲೋಕವನು ತಿದ್ದಲಿಕೆ ಹೊರಟು ಗೆದ್ದವನಾರು?
ಕಾಕುತ್ಸ್ಥನೇ? ಕೃಷ್ಣನೇ? ಬುದ್ಧಜಿನರೆ?
ಸಾಕ್ರೆಟಿಸ್ ಏಸರೇ? ಮೋಸೆಸ್ ಮಹಮ್ಮದರೆ?
ಸ್ವೀಕರಿಸಿತಾರನದು? ಮರುಳಮುನಿಯ ||
- ಎಂದಿದ್ದಾರೆ. ಇಲ್ಲಿ ದೈವದ ಕಲ್ಪನೆ ತುಂಬ ಸೊಗಸಾಗಿದೆ :
ಒಬ್ಬಂಟಿ ದೈವವದು ಹಬ್ಬದೂಟವನೆಳಸಿ
ಇಬ್ಬರಾಟಕ್ಕಿಳಿದು ಹಲವಾಗಿ ಮತ್ತೆ
ದಿಬ್ಬಣವ ನಡಸುತಿಹುದು - ಉಬ್ಬಿದೀ ಲೋಕದಲಿ
(ಆ) ಅದ್ಭುತಕೆ ನಮಿಸೆಲವೊ ಮರುಳಮುನಿಯ ||
- ಎನ್ನುತ್ತಾರೆ. ಇವತ್ತಿನ ವಿಜ್ಞಾನಗಳು ಮನುಷ್ಯನಿಗೆ ಮಾರಕವಾಗುತ್ತಾ ಇವೆ ಎಂದು ಒಂದು ಪದ್ಯದಲ್ಲಿ ಹೇಳಿದ್ದಾರೆ:
ಏನೇನೊ ನಡೆದಿಹುದು ವಿಜ್ಞಾನ ಸಂಧಾನ
ಮಾನುಷ್ಯಬಾಂಧವ್ಯವೊಂದು ಮುರಿದಿಹುದು
ತಾನೊಡರ್ಚಿದ ಹೊನ್ನ ಸರವೆ ನರನ ಕೊರಳ್ಗೆ
ನೇಣಾಗಿಹುದು ನೋಡು ಮರುಳಮುನಿಯ ||
ಈ ಕಗ್ಗದಲ್ಲಿ `ಮಂಕುತಿಮ್ಮ' ಎಂದರೆ ಯಾರು? ಎಂದು ವಿವೇಚಿಸಿದ್ದಾರೆ.
ಮಂಕುತಿಮ್ಮನದಾರು? ಅವನಲ್ಲದವನಾರು?
ಡೊಂಕುಬಾಲವೆ ಕುಲಧ್ವಜವಲ್ತೆ ನಮಗೆ
ಮಂಗನ ಮನಸ್ಸು, ಮಂಜಾದ ಕಣ್ಣು ನನಗೂ, ನಿನಗೂ ಎಲ್ಲರಿಗೂ, ಹಾಗಾಗಿ ನಾವೆಲ್ಲ ಮಂಕುತಿಮ್ಮರೆ. ಅದರಲ್ಲಿ ನಾಚಿಕೆಯೆಂತಹದು? ಎಂದು ಕೇಳುತ್ತಾರೆ ಡಿ.ವಿ.ಜಿ.
ತಿಮ್ಮನ ಕಗ್ಗದಲ್ಲಿ ಪ್ರತಿಪದ್ಯದ ಕೊನೆಯಲ್ಲಿ ಬರುವ ಮಂಕುತಿಮ್ಮ ಎಂಬುದು ಸಂಬೋಧನೆಯಲ್ಲ, ಅದು ತಿಮ್ಮಮೇಷ್ಟ್ರನ್ನು ಸೂಚಿಸುವ ಪದ ಎಂದು ನಮಗೆ ಅನಿಸಿ ಹೋಗುವುದು ಸಹಜ. ಯಾಕೆಂದರೆ ಕಗ್ಗದ ಕತೆಯನ್ನು ನಮಗೆ `ಹೇಳುವವನು' `ಸೋಮಿ' ಎಂದು ಪ್ರಾರಂಭದಲ್ಲೇ ಡಿ.ವಿ.ಜಿ. ಸೂಚಿಸಿರುತ್ತಾರೆ. ತಿಮ್ಮಗುರು - ಸೋಮಿ ಶಿಷ್ಯ. ತಿಮ್ಮಗುರುವಿನ ಅನುಭವಸಾರ ಸೋಮಿಯ ಮೂಲಕ ಕಗ್ಗವಾಗಿ ನಮಗೆ ಸಿಗುತ್ತದೆ - ಎಂಬುದು ನಾವೆಲ್ಲ ಸಾಧಾರವಾಗಿ ಉಳಿಸಿಕೊಳ್ಳುವ ವಿಷಯ. ಆದರೆ ಮುನಿಯನ 478ನೆ ಪದ್ಯ ನಮ್ಮ ಈ ಕಲ್ಪನೆಯನ್ನು ಅಲುಗಾಡಿಸುತ್ತದೆ. ಅಲ್ಲಿ ಈ ಪದವು ನಮ್ಮನಿಮ್ಮನ್ನು ಅಥವಾ ಪ್ರಾಪಂಚಿಕರನ್ನೆಲ್ಲ ಒಂದು ರೀತಿಯ ಮಂಕುತಿಮ್ಮಗಳು ಎಂದು ಹೇಳಿದಂತಿದೆ. ನಿಜವಾಗಿ ನೋಡಿದರೆ ಈ ಎರಡು ಕಗ್ಗಗಳೂ ಡಿ.ವಿ.ಜಿ.ಯವರ ಅನುಭವಸಾರ. ಅದನ್ನು ತಿಮ್ಮನ ಮೂಲಕ/ಮುನಿಯನ ಮೂಲಕ ಸೋಮಿಗೆ ಕೊಡಿಸಿ, ಅವನ ಬಾಯಿಯಿಂದ ನಮಗೆ ಹೇಳಿಸಿದ ಡಿ.ವಿ.ಜಿ.ಯವರ ಜಾಣ್ಮೆ, ಶ್ಲಾಘನೀಯ. `ಕಗ್ಗ' ಓದಿದ ಬಳಿಕ, ಕಗ್ಗದಲ್ಲಿರುವ ವಿಷಯಗಳು ನೆನಪಿನಲ್ಲಿ ಉಳಿಯುವಷ್ಟೇ ಈ ತಿಮ್ಮ ಮುನಿಯರೆಂಬ ಅಣ್ಣ ತಮ್ಮಂದಿರು ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ.
[ಹಸ್ತಪ್ರತಿ]
ಶಿವಳ್ಳಿ ಎನ್ನುವ ಗ್ರಾಮಕ್ಕೆ ಮೊದಲು ಬಂದು ನೆಲೆಯಾದವರು ಶಿವಳ್ಳಿ ಬ್ರಾಹ್ಮಣರೆಂದು ಚರಿತ್ರೆ ಹೇಳುತ್ತದೆ. ಆಗಿನ ಶಿವಳ್ಳಿ ಗ್ರಾಮ, ಈಗಿನ ಶಿವಳ್ಳಿ ಗ್ರಾಮದಷ್ಟು ಸಣ್ಣದೇನಲ್ಲ. ಈಗಿನ ಕಡಿಯಾಳಿ, ಇಂದ್ರಾಳಿ, ಪೆರಂಪಳ್ಳಿ, ಮಣಿಪಾಲ ಎಲ್ಲಿ ಊರುಗಳು ಸೇರಿದ ಒಂದು ದೊಡ್ಡ ಗ್ರಾಮ ಆಗಿನ ಶಿವಳ್ಳಿ ಗ್ರಾಮ. ಈಗ ಉಡುಪಿಯಲ್ಲಿ ಬುದ್ಧಿ ಜೀವಿಗಳಿರುವ ಒಂದು ಪ್ರದೇಶವಾಗಿದೆ ಈ ಸ್ಥಳಗಳು. ಪೆರಂಪಳ್ಳಿ, ಪಾರ್ವಂಪಳ್ಳಿ, ಬ್ರಾಹ್ಮಣರ ಹಳ್ಳಿ (ಬ್ರಾಹ್ಮಣರು ಇರುವ ಹಳ್ಳಿ) ಎಂದರ್ಥ.
`ಪಲ್ಲಿ' ದನಕರುಗಳು ಸಾಕಲು ಅನುಕೂಲವಾಗುವ ಜಾಗ - ಶಿವಪಲ್ಲಿ - ಶಿವಳ್ಳಿ ಎಂದರೆ ಶಿವಾರಾಧನೆ ನಡೆಯುವಂಥ ಜಾಗ ಎಂದರ್ಥ. ಶಿವಳ್ಳಿ ಗ್ರಾಮದಲ್ಲಿ ಆಗಿನ ಮಹಾಲಿಂಗೇಶ್ವರ ದೇವಸ್ಥಾನ ಈಗಲೂ ಇದೆ.
ಕೆಲವು ಚರಿತ್ರೆಕಾರರು ಹೇಳುವ ಪ್ರಕಾರ, ಶಿವಳ್ಳಿ ಬ್ರಾಹ್ಮಣರು ಬಂಗಾಳ ದೇಶ ದಿಂದ ಬಂದವರು ಎನ್ನುವ ಅಭಿಪ್ರಾಯ ಕೂಡ ಉಂಟು. ಬಂಗಾಲದಿಂದ ಬಂದವರು ಎಂದು ಹೇಳುವುದನ್ನು ಒಪ್ಪಬೇಕಾದರೆ ಇನ್ನು ಕೂಡಾ ಕೆಲವು ಸಂಶೋಧನೆಗಳು ಅಗತ್ಯ ವಿದೆ. ಅಲ್ಲಿಯ ಬ್ರಾಹ್ಮಣರ ಆಚಾರ ವಿಚಾರವನ್ನು ಮತ್ತು ನಮ್ಮ ಆಚಾರ ವಿಚಾರವನ್ನು ಒಂದು ತುಲನಾತ್ಮಕ ಅಧ್ಯಯನ ಮಾಡಿದರೆ ಅದರ ಸಂಪೂರ್ಣ ಯಥಾರ್ಥ ಗೊತ್ತಾದೀತು.
ಭಾರತೀಯ ಸಂಸ್ಕೃತಿಗೆ ಶಿವಳ್ಳಿ ಬ್ರಾಹ್ಮಣರ ಕೊಡುಗೆ ಎಂತಹದು ಎನ್ನುವ ವಿಚಾರವನ್ನು ಗ್ರಹಿಸಿದರೆ ನಮಗೆ ಆಶ್ಚರ್ಯವಾಗುತ್ತದೆ. ಶಂಕರಾಚಾರ್ಯರರ ನಾಲ್ಕು ಶಿಷ್ಯರ ಪರಂಪರೆಯಲ್ಲಿ ಎರಡು ಕೂಡ ಶಿವಳ್ಳಿ ಬ್ರಾಹ್ಮಣರ ಪರಂಪರೆಯೇ ಆಗಿದೆ. ಒಂದು ತೋಟಕಾಚಾರ್ಯರು, ತೋಟಂತಿಲ್ಲಾಯ ಕುಟುಂಬದಿಂದ ಬಂದವರೆಂದೂ, ಹಸ್ತಾಮಲಕಾಚಾರ್ಯಯರು ಎಂದರೆ ನೆಲ್ಲಿತ್ತಾಯ ಕುಟುಂಬದಿಂದ ಬಂದವರೆಂದೂ ಹೇಳುವುದಕ್ಕೆ ಶಂಕರವಿಜಯದಲ್ಲಿ ಬೇಕಾದ ಆಧಾರಗಳು ಇವೆ. ಆಗಿನ ಕಾಲದಲ್ಲಿ ತೌಳವದೇಶದ ಬ್ರಾಹ್ಮಣರು ಎಂದರೆ ತುಳು ಮಾತನಾಡುವ ಬ್ರಾಹ್ಮಣರು ಎಂದರ್ಥ.
ಕೇರಳದಲ್ಲಿ ಶಂಕರಾಚಾರ್ಯರು ಸಂಚಾರಮಾಡುವಾಗ ಅವರ ಶಿಷ್ಯರಾದ ತೋಟಕಾಚಾರ್ಯರ ಕೈಯಲ್ಲಿ ಶಿಷ್ಯತ್ವವನ್ನು ಪಡೆದ ತುಳು ನಂಬಿಗಳು ಶಿವಳ್ಳಿ ಬ್ರಾಹ್ಮಣರು. ಅದೇ ಪರಂಪರೆ, ಈಗ ಎಡನೀರು ಮಠದಲ್ಲಿ ಇರುವುದು. ಅದಕ್ಕೆ ಬೇರೆ ಪುರಾವೆ ಬೇಡ. ಎಡನೀರು ಮಠದ ಬಿರುದಾವಳಿಯಲ್ಲಿ `ಶಿವಳ್ಳಿದೇಶೀಯ ವಿಪ್ರಾಚಾರವಿಚಾರಕ' ಎನ್ನುವ ಬಿರುದೇ ಅವರಿಗೆ ಉಂಟು. ಹೀಗೆ ಅದ್ವೈತವೇದಾಂತಪ್ರಚಾರಕರು ನಡುವಂತಿ ಲ್ಲಾಯರೇ ಆಗಿದ್ದರೋ ಎಂಬೀ ವಿಚಾರಗಳು ಎಲ್ಲ ಕತ್ತಲೆಯಲ್ಲೇ ಇವೆ ಅಷ್ಟೆ. (ಬೆಳಕಿಗೆ ಬರಲಿಲ್ಲ) ಇದನ್ನೆಲ್ಲಾ ಕಂಡುಹಿಡಿಯಬೇಕಾದರೆ ದೊಡ್ಡ ಒಂದು ಸಂಶೋಧನೆಯೇ ಬೇಕಾದೀತು. ಅದಕ್ಕೆ ಸಮಯವೂ ಬೇಕು. ಅಷ್ಟೇ ಖಚರ್ು ಮಾಡಬೇಕು. ತುಳುನಾಡಿನ ಕೆಲವು ಶಿವಳ್ಳಿಯ ಮನೆಗಳ ಸಂದರ್ಶನ, ತ್ರಿಶೂರಿನ ನಾಲ್ಕು ಮಠಗಳ ಸಂದರ್ಶನ - ಹೀಗೆ ಒಂದು ದೀರ್ಘಯಾತ್ರೆಯೇ ಮಾಡಬೇಕಾದೀತು. ಶಿವಳ್ಳಿಯವರ ಸಾಧನೆ ಹೇಗಿದೆ! ಇಲ್ಲಿ ಪ್ರಾತಃಸ್ಮರಣೀಯರಾದಂತಹ ಹಿರಿಯರು ಇದ್ದರು. ಅದಕ್ಕೆ ಉದಾಹರಣೆಯಾಗಿ ನನಗೆ ಕಾಣುವವರ ಕೊಕ್ಕಡದ ಪೆರ್ಲತ್ತಾಯರು. (ಆ ಪೆರ್ಲತ್ತಾಯರ ವಿಷಯದಲ್ಲಿ ನನಗೆ ಒಂದು ನಾಟಕವೇ ಬರೆದು ಹೋಯಿತು. ಅಷ್ಟು ಮಹತ್ತ್ವವಿರುವ ಕಥೆ ಅವರದ್ದು.)
[ಅಪೂರ್ಣ – ಹಸ್ತಪ್ರತಿ]
ಮಯೂರವರ್ಮನು ಅಹಿಚ್ಛತ್ರದಿಂದ ಕರೆಸಿದ ಬ್ರಾಹ್ಮಣರು ತುಳುನಾಡಿನ ವಿವಿಧ ಗ್ರಾಮಗಳಲ್ಲಿ ಬಂದು ನೆಲೆಸಿದರು. ಆ ಗ್ರಾಮಗಳು ಒಟ್ಟು ಮೂವತ್ತೆರಡು ಎಂದು `ಗ್ರಾಮಪದ್ಧತಿ'ಯಲ್ಲಿ ಉಲ್ಲೇಖಿಸಲ್ಪಟ್ಟಿದೆ. ಅವನ ನಾಡಿನಲ್ಲಿ ಶ್ರೌತಸ್ಮಾರ್ತಾದಿ ಕರ್ಮಾನು ಷ್ಠಾನವು ನಿರಂತರವಾಗಿ ನಡೆಯುತ್ತಿರಬೇಕು ಎಂಬ ಉದ್ದೇಶದಿಂದ, ಪ್ರತಿಯೊಂದು ವಿಪ್ರ ಕುಟುಂಬಕ್ಕೂ ಒಂದೊಂದು ವೃತ್ತಿಯನ್ನು ಕಲ್ಪಿಸಲಾಯಿತು. ಹೀಗೆ ವೃತ್ತಿನಿರತರಾದವರಿಗೆ ಭಟ್ಟರು, ತಂತ್ರಿಗಳು, ಪಂಡಿತರು, ಪಕ್ಷನಾಥರು, ಸಭಾಪತಿಗಳು, ಬಲ್ಲಾಳರು, ಅಣ್ಣ ಗ್ರಾಮಣಿಗಳು, ಗ್ರಾಮಣಿಗಳು -ಇತ್ಯಾದಿ ಹೆಸರುಗಳನ್ನು ನೀಡಲಾಯಿತು. ಮೂಡ ಹದಿನಾರು ಗ್ರಾಮಕ್ಕೆ ಚಿಟ್ಟುಪಾಡಿ ಬಲ್ಲಾಳರು ಪಕ್ಷನಾಥರೆಂದೂ ಪಡು ಹದಿನಾರು ಗ್ರಾಮಕ್ಕೆ ನಿಡಂಬೂರು ಬಲ್ಲಾಳರು ಪಕ್ಷನಾಥರೆಂದೂ ಅಂದಿನ ತೀರ್ಮಾನವಾಗಿತ್ತು. ಚಿಟ್ಟುಪಾಡಿ ಬಲ್ಲಾಳರು, ನಿಡಂಬೂರು ಬಲ್ಲಾಳರು ಅರಸಾಡಳಿತೆಯಲ್ಲಿ ಸಹಭಾಗಿಗಳಾಗಿದ್ದರು ಎಂಬ ಸೂಚನೆ ತುಳುಮಹಾಭಾರತದ ಪೀಠಿಕಾಭಾಗದಿಂದ ತಿಳಿದುಬರುತ್ತದೆ. ತುಳು ಮಹಾ ಭಾರತದಲ್ಲಿ ಅರಸ ಎಂಬ ಅರ್ಥದಲ್ಲಿಯೇ 'ಬಲ್ಲಾಳ' ಎಂಬ ಪದವನ್ನು ಬಳಸಿದ ಉದಾಹರಣೆಯಿದೆ.
ಮೇಲಿನ ವೃತ್ತಿನಾಮಗಳಲ್ಲಿ ಭಟ್ಟರು, ತಂತ್ರಿಗಳು ಎಂಬೀ ಹೆಸರುಗಳು ಈಗಲೂ ರೂಢಿಯಲ್ಲಿವೆ. ಪಕ್ಷನಾಥರು, ಸಭಾಪತಿಗಳು, ಜನ್ನಿಗಳು, ಅಧಿವಾಸಿಗಳು, ಎಂಬ ಹಸೆರು ಮತ್ತು ಅದರ ಅರ್ಥ ಶಿವಳ್ಳಿಯವರಿಗೇ ಈಗ ಮರೆತುಹೋಗಿವೆ. ಆದರೆ ಕಳೆದ ತಲೆಮಾರಿನ ವರೆಗೆ 'ಗ್ರಾಮಣಿ' ಎಂಬ ಪದ ಸಾಕಷ್ಟು ರೂಢಿಯಲ್ಲಿತ್ತು. ಉಪನಯನ ವಿವಾಹಾದಿ ಸಮಾರಂಭಗಳಲ್ಲಿ ವೈದಿಕಸಂಭಾವನೆ ಕೊಡುವ ಸಂದರ್ಭದಲ್ಲಿ ಆಯಾ ಗ್ರಾಮದ ಗ್ರಾಮಣಿಗಳನ್ನು ಗುರುತಿಸಿ, ಅವರಿಗೆ ವಿಶೇಷ ದಕ್ಷಿಣೆಗಳನ್ನು ನೀಡುತ್ತಿದ್ದರು.
ಅಂತೂ ಶ್ರೌತಸ್ಮಾರ್ತಕರ್ಮಸಂಪ್ರದಾಯಗಳ ರಕ್ಷಣೆಗಾಗಿ ಒಂದು ವಿಶಿಷ್ಟ ಸಂವಿಧಾನವು ಪುರಾತನ ಶಿವಳ್ಳಿಸಮಾಜದಲ್ಲಿ ರೂಢಿಯಲ್ಲಿತ್ತು ಎಂಬುದನ್ನು ಒಪ್ಪಲೇ ಬೇಕಾಗಿದೆ. ತುಳುನಾಡಿನ ವಿವಿಧ ಗ್ರಾಮಗಳಲ್ಲಿ ಹಂಚಿ ಹೋದ ಈ ಶಿವಳ್ಳಿ ಬ್ರಾಹ್ಮಣರು ಯಾರು ಮತ್ತು ಅವರ ವೃತ್ತಿಗಳು ಯಾವುವು ಎಂಬುದನ್ನು ವಿವರವಾಗಿ ತಿಳಿಸುವ ಗ್ರಂಥವನ್ನು 'ಗ್ರಾಮಪದ್ಧತಿ' ಎಂದು ಹೆಸರಿಸಲಾಗಿದೆ. ಆ ಕಾಲದ ಗ್ರಾಮಗಳ ಹೆಸರು ಹೀಗಿದೆ; ಶ್ರೀಪಾಡಿ, ಓಡಿಲ, ನಾಳ, ಕರೆಯ, ಉಜಿರೆ, ಕಾರಂದೂರು, ಕಾವಳ, ಕುಂಞಿಮಾರ್ಗ, ಕೊಕ್ಕಡ, ರಾಮಂಜೂರು (ರಾಮಕುಂಜ + ಊರು), ಪುದೆ, ಬಳಪ, ಇಡೆಕ್ಕಿದು, ಪಾಲಿಂಜ, ಕೆಮ್ಮಿಂಜೆ, ಅಯರ್ನಾಡು, ಕಾರೂರು, ವೊರ್ಕಾಡಿ, ಕೂಡಲು, ಮರಣೆ, ಕೊಳವಿನಾಡು, ಪಾಡಿ, ಮೊಗೆರು, ಮಿತ್ತನಾಡು, ನೀರುಮಾರ್ಗ, ಶಿಮಂತೂರು, ತೆನಕಳ, ಶಿವಳ್ಳಿ, ಕಂದಾವರ, ಕೋಟ, ಬ್ರಹ್ಮಾವರ, ಸೀಮಂತೂರು.
ಆದರೆ ಶಿವಳ್ಳಿಯವರು ಈ ಗ್ರಾಮಗಳಲ್ಲಿ ನೆಲೆಸುವ ಮೊದಲೇ ಕೆಲವರಾದರೂ ಬೇರೆ ಬೇರೆ ಊರುಗಳಲ್ಲಿ ನೆಲೆಸಿದ್ದರು ಎಂಬುದನ್ನು ಅವರ ಕುಲನಾಮಗಳು ಸಾರುತ್ತವೆ. ಹೆಚ್ಚಿನ ಕುಲನಾಮಗಳಿಗೆ ಸ್ಥಳನಾಮಗಳೊಡನೆ ಸಂಬಂಧವಿರುವುದನ್ನು ಕಾಣಬಹುದು. ಸಹಸ್ರಸಂಖ್ಯೆಯಲ್ಲಿ ಬಂದು ನೆಲಸಿದ ಶಿವಳ್ಳಿಯ ಕುಟುಂಬಗಳನ್ನು ಗುರುತಿಸಲು ಸ್ಥಳನಾಮಗಳು ಬಹಳಷ್ಟು ನೆರವಾದವು ಎನ್ನಬಹುದು. ಉದಾ: ಕೋಟೆ ಕುಂಜತ + ಆಯೆ (ಕೋಟೆಕುಂಜದವನು ಎಂದರ್ಥ), ಮುನ್ನೂರ್ತ + ಆಯೆ = ಮುನ್ನೂರಾಯೆ, (ಮುನ್ನೂರಿನವನು ಎಂದರ್ಥ), ಅತ್ರಾಡಿತ + ಆಯೆ (ಅತ್ರಾಡಿಯವನು ಎಂದರ್ಥ). ಆದರೆ ಕಾಲಾಂತರದಲ್ಲಿ ಅವರು ಬೇರೆ ಬೇರೆ ಊರುಗಳಿಗೆ ಹೋದಾಗಲೆಲ್ಲ ಅವರ ಕುಲನಾಮಗಳು ಬದಲಾಗುತ್ತಾ ಹೋಗಲಿಲ್ಲ. ಇದಕ್ಕೆ ಒಂದೆರಡು ಅಪವಾದಗಳಿದ್ದಿರಲೂ ಬಹುದು. ಅಂತೂ ಹೆಚ್ಚಿನವರು ಅವರ ಕುಲನಾಮಕ್ಕೆ ಸಂಬಂಧಿಸಿದ ಊರುಗಳಲ್ಲಿ ಈಗ ಇಲ್ಲ. ಉದಾ: ಕಬೆಕ್ಕೋಡಿನ್ನಾಯರು ಈಗ ಕಬೆಕ್ಕೋಡಿಯಲ್ಲಿ ಇಲ್ಲ; ಕಡಂಬಳಿತ್ತಾಯರು ಈಗ ಕಡಂಬಳಿಕೆಯಲ್ಲಿ ಇಲ್ಲ; ತೆರೆಕುಂಜತ್ತಾಯರು ಈಗ ತೆರ್ಕುಂಜೆ (ತೆಕ್ಕುಂಜೆ)ಯಲ್ಲಿ ಇಲ್ಲ. ಆದರೆ ಕುಬಣೂರಾಯರು ಈಗಲೂ ಕುಬಣೂರಿನಲ್ಲೇ ಇದ್ದಾರೆ. ಪುತ್ತೂರಾಯರು (ಪುತ್ರಾಯರು) ಈಗಲೂ ಪುತ್ತೂರಿನಲ್ಲೇ ನೆಲೆಸಿದ್ದಾರೆ. ಶಿವಳ್ಳಿಯವರಿಗೆ ಹೆಸರು ತಂದ ಸ್ಥಳಗಳಲ್ಲಿ ಕೆಲವನ್ನು ಈ ಕೆಳಗೆ ಕೊಡಲಾಗಿದೆ.
ಅಲೆವೂರು, ಆರ್ಯಾಪು, ಆರಿಕ್ಕಾಡಿ, ಅಮೈ, ಅತ್ರಾಡಿ, ಅಡೂರು, ಅಗ್ಗಿತ್ಲ, ಅಡ್ಕ, ಆಲಂಪಾಡಿ, ಇಚ್ಲಂಪಾಡಿ, ಇಚ್ಚಿಲ (ಉಚ್ಚಿಲ), ಉಪಾರ್ (ಉಬಾರ್), ಉಪ್ಪಂಗಳ, ಉಳಿಯ, ಎರೆಪ್ಪಾಡಿ, ಕಕ್ಯ, ಕಕ್ಯೋಡಿ, ಕಜೆ, ಕಡಂಬಳಿಕೆ, ಕಣಿಯಾರ್, ಕಬಕ, ಕರಾಯ, ಕಾರ್ಕಡ, ಕಂಡೆತ್ತೋಡಿ, ಕಾನ, ಕಿದೆವೂರು (ಕಿದೂರು), ಕುಂಜತ್ತೂರ್, ಕಿಲ್ಪಾಡಿ, ಕುತ್ಯಾರ್, ಕುಂಜೂರ್, ಕುಂಟಾರ್, ಕೂರ್ಕಪಾಡಿ, ಕೊಕ್ಕಡ, ಕೊಡಿಪ್ಪಾಡಿ, ಕಡೇಶ್ವಾಲ್ಯ (ಕೊಡಿಶಿಲ್ಲ), ಕೊಳಂಬೆ, ಕೋಟೆಕುಂಜ, ಚಾಪಾಡಿ, ತಲೆಪ್ಪಾಡಿ, ನಾಣಿಲ, ಮಾಣಿಲ, ನಾರಳ, ನಿಡಂಬೂರ್, ಪಡುವೆಟ್ಟು, ಪರೀಕ, ಪರ್ಕಳ, ಪೆರ್ಲ, ಪಾಡಿ, ಪುತ್ಯೆ, ಪುತ್ತೂರು, ಪಾವಂಜೆ, ಪಾದೂರು, ಪಾವೂರು, ಪಾಂಗಾಳ, ಪುಣ್ಯಕಳ (ಇದು ಈಗ ಪುತ್ರಕಳ ಎಂದಾಗಿದೆ), ಪುದೆ, ಪೆರ್ವೊಡಿ, ಪುಣಿಂಚ, (ಪುಣಿಂಚಾಡಿ), ಪೆರ್ಮುದೆ, ಬಾಜ, ಬಾಣೆ, ಬಾರೆ, ಬಾರಿಕ್ಕಾಡಿ, ಬಲೆಕ್ಕಳ, ಬಜೆ, ಬಜಪ್ಪಿಲ, ಬಳ್ಪ, ಬಂಬ್ರಾಣ, ಬಿಜೈ, ಮಂಜನಾಡಿ, ಮಜಿ, ಮಟ್ಟಿ, ಮಣ್ಣಂಗಳ, ಮದವೂರು, ಮಾಳ್ಳ, ಮಂಚಿ, ಮಂಕುಡೆ, ಅರ್ಕಮೆ, ಅದೂರು, ಇಂದ್ರಾಳಿ, ಕಕ್ಕಾಡ್, ಮಾವೂರು, ಮಿತ್ತನಡ್ಕ, ಮಿತ್ತಿಲ, ಮಿತ್ತನಾಡು (ಈಗ ಉಬ್ರಂಗಳ ಎಂದು ಹೆಸರು), ಮುಗೆರ, ಪೆರುವ (ಮೊಗರಾಲು), ಮುನ್ನೂರ್, ಮುನಿವೂರು (ಮುನಿಯೂರು), ಶಿಮಂತೂರು, ಶಿಬರೂರು, ಮೈಪಾಡಿ (ಮಾಯಿಪ್ಪಾಡಿ), ಸಂಪಿಗೆ (ಸಂಪ್ಯ) ಸುಳ್ಯ, ಹೆಬ್ರಿ - ಇತ್ಯಾದಿ.
ಹೀಗೆ ಬೇರೆ ಬೇರೆ ಊರುಗಳಲ್ಲಿ ನೆಲೆಸಿ, ಆಯಾ ಊರಿನ ಸ್ಥಳನಾಮ ಗಳೊಂದಿಗೆ ಸಂಬಂಧ ಹೊಂದಿರುವವರು, ಗ್ರಾಮಪದ್ಧತಿ ಬಳಕೆಗೆ ಬಂದಾಗ, ಬೇರೆ ಬೇರೆ ಗ್ರಾಮಗಳಲ್ಲಿ ಬಂದು ನೆಲೆಸಬೇಕಾಯಿತು. ಗ್ರಾಮಪದ್ಧತಿ ಬಳಕೆಯಲ್ಲಿದ್ದ ಕಾಲದಲ್ಲಿ ಆಯಾ ಗ್ರಾಮದಲ್ಲಿ ನೆಲೆಸಿದ ಶಿವಳ್ಳಿಯವರು ಈಗ ಆಯಾ ಗ್ರಾಮಗಳಲ್ಲಿ ಇಲ್ಲ. ಕೆಲವರು ಬೇರೆ ಕಡೆಗೆ ವಲಸೆ ಹೋಗಿದ್ದರೆ, ಕೆಲವು ಕುಲನಾಮಗಳೇ ಈಗ ಅಳಿದು ಹೋಗಿವೆ. ಮಾತ್ರವಲ್ಲ, ಗ್ರಾಮಪದ್ಧತಿಯ ಕಾಲದಲ್ಲಿ ಇದ್ದ ಕುಲನಾಮಗಳಲ್ಲದೆ ಇನ್ನೂ ಹಲವಾರು ಕುಲನಾಮಗಳು ಶಿವಳ್ಳಿಸಮಾಜದಲ್ಲಿ ಸೇರ್ಪಡೆಯಾಗಿವೆ. ಹಾಗೆಂದು ಎಲ್ಲ ಕುಲನಾಮ ಗಳೂ ಸ್ಥಳನಾಮಗಳ ಸಂಬಂಧವನ್ನು ಪಡೆದಿಲ್ಲ. ಅನೇಕ ಕುಲನಾಮಗಳ ಹುಟ್ಟು ಹೇಗಾಯಿತೆಂಬುದು ಇನ್ನೂ ಒಗಟಾಗಿಯೇ ಇದೆ. ಉದಾ: ಅಪ್ಪುಂತಾಯ, ಅರಬಿತ್ತಾಯ, ಕ್ರಮಧಾರೆತ್ತಾಯ, ಪೊದುಂಕುಳುತ್ತಾಯ, ಅಕ್ಯಪೊಕ್ಕಿನಾಯ (ಅಕ್ಕೆಪೊಕ್ಕಿನ್ನಾಯ) -ಇತ್ಯಾದಿ.
ಶಿವಳ್ಳಿಯವರ ಹೆಚ್ಚಿನ ಕುಲನಾಮಗಳಿಗೂ 'ಆಯ' ಇರುತ್ತದೆ. ಅವು ಐದು ರೂಪಗಳಲ್ಲಿ ಪ್ರಕಟವಾಗುತ್ತವೆ.
ಅರಿಮಣಿತ್ತಾಯ (ಅರಿಮಣಿತ + ಆಯ)
ಕಂಬಾರಣ್ಣಾಯ (ಕಂಬಾರ್ + ಅಣ್ಣ + ಆಯ)
ಕಲ್ಲೂರಾಯ (ಕಲ್ಲೂರ್ + ಆಯ)
ಕಕ್ಕಿಲ್ಲಾಯ (ಕಕ್ಯ + ಇಲ್ಲ್ + ಆಯ)
ಕೊಕ್ಕಡನ್ನಾಯ (ಕೊಕ್ಕಡ + ಅಣ್ಣ + ಆಯ)
ಇಲ್ಲಿ ಕೊನೆಯ ಪದದ ವ್ಯುತ್ಪತ್ತಿ ಅಸ್ಪಷ್ಟವಾಗಿದೆ. ಕಲ್ಲೂರಾಯ - ಎಂಬಲ್ಲಿ ಸ್ಥಳದ ಹೆಸರಿಗೆ ನೇರವಾಗಿ 'ಆಯ' ಸೇರಿಕೊಂಡಿದೆ. ಅರಿಮಣಿತ್ತಾಯ ಎಂಬಲ್ಲಿ ಅರಿಮಣಿತ + ಆಯ ಎಂದು ನಡುವೆ ಷಷ್ಠೀವಿಭಕ್ತಿ ಪ್ರತ್ಯಯವು ಸೇರಿಕೊಂಡಿದೆ. ಕಕ್ಕಿಲ್ಲಾಯ (ಕಕ್ಯ + ಇಲ್ಲ + ಆಯ) ಎಂಬಲ್ಲಿ ಮನೆ ಎಂಬ ಅರ್ಥವನ್ನು ಸೂಚಿಸುವ ಇಲ್ಲ್ ಎಂಬ ಪದ ಸೇರಿಕೊಂಡಿದೆ. ಕಂಬಾರಣ್ಣಾಯ (ಕಂಬಾರ್ + ಅಣ್ಣ + ಆಯ) ಎಂಬಲ್ಲಿ 'ಅಣ್ಣ' ಎಂಬ ಗೌರವಾರ್ಥಪದ ಸೇರಿಕೊಂಡಿದೆ.
ಶಿವಳ್ಳಿ ಸಮಾಜದಂತಹ ಒಂದು ಪುಟ್ಟ ಸಮಾಜದಲ್ಲಿ, ತುಳುನಾಡಿನಂತಹ ಒಂದು ಪುಟ್ಟ ಭೂಭಾಗದೊಳಗೆ ಇಷ್ಟೊಂದು ಅಧಿಕ ಸಂಖ್ಯೆಯ ಕುಲನಾಮಗಳಿರುವುದು ಜಗತ್ತಿಗೆ ಒಂದು ಆಶ್ಚರ್ಯದ ಸಂಗತಿಯಾಗಿದೆ. ಇಂತಹ ಒಂದು ದಾಖಲೆ ವಿಶ್ವದಲ್ಲೇ ಇಲ್ಲ ಎನ್ನಬಹುದು.
ಶಿವಳ್ಳಿ ಬ್ರಾಹ್ಮಣರ ಕುಲನಾಮಗಳ ವಿವರ
1. ಅಂಕಿಲ್ಲಾಯ (ಅಂತಿಲ್ಲಾಯ, ಅಂತಿಲತ್ತಾಯ ?)
2. ಅಂಙಿಂತಾಯ (ಅಂಗಿತ್ತಾಯ)
3. ಅಂಜನಂತೋಡಿತ್ತಾಯ (ಅಂಜನಂತೋಡಿ)
4. ಅಂಬಲಣ್ಣಾಯ (ಅಂಬಾಣಾಯ) [ಅಂಬಲಡ್ಕ]
5. ಅಂಬಿತ್ತಾಯ
6. ಅಕ್ಕೆಪೊಕ್ಕಿನ್ನಾಯ
7. ಅಗಳಿತ್ತಾಯ
8. ಅಗ್ಗಿತ್ತಾಯ [ಅಗ್ಗಿತ್ಲ್ತ+ಆಯ]
9. ಅಡಪುನ್ನಾಯ
10. ಅಡರಾಯ [ಅಡೂರ್ + ಆಯ]
11. ಅಡಿಗ [ದೇವಸ್ಥಾನದಲ್ಲಿ ಪೂಜೆಮಾಡುವ ವೃತ್ತಿಯವನು; ಈ ವೃತ್ತಿನಾಮವು ಕಾಲಾಂತರದಲ್ಲಿ ಕುಲನಾಮವಾಗಿ ರೂಪಾಂತರಗೊಂಡಿತು.]
12. ಅಡ್ಕತ್ತಾಯ (ಅಡ್ಕಂತಾಯ)
13. ಅಣಲತ್ತಾಯ (ಅನಲತ್ತಾಯ, ಅಣೋಳಿತ್ತಾಯ) [ಅಣೊಲಿ]
14. ಅಣ್ಣಕುಂಜತ್ತಾಯ [ಆನಿಂಜ]
15. ಅಣ್ಣಾಯ
16. ಅತಿಕಾರಿ
17. ಅತ್ರಾಡಿತ್ತಾಯ (ಆತ್ರಾಡಿತ್ತಾಯ)
18. ಅನಂತೋಡಿತ್ತಾಯ [ಅನಂತೋಡಿತ + ಆಯ]
19. ಅನಿಂಜತ್ತಾಯ (ಅಣ್ಣಕುಂಜತ್ತಾಯ) [ಆನಿಂಜ]
20. ಅಪ್ಪುಂತಾಯ
21. ಅಮೆತ್ತಾಯ [ಅಮೈ - ಕಾಸರಗೋಡು ಬಳಿಯ ಒಂದು ಊರು.]
22. ಅಮತ್ತೋಡಿತ್ತಾಯ (ಅಮೆತ್ತೋಡಿತ್ತಾಯ) [ಅಮೆತ್ತೋಡಿ]
23. ಅಮ್ಮಣ್ಣಾಯ
24. ಅಮ್ಮಣ್ಣಿತ್ತಾಯ [ಅಣ್ಣಿತ್ತಾಯ?]
25. ಅಮ್ಮಿಣ್ಣಾಯ
26. ಆಯಕೊಳತ್ತಾಯ
27. ಅಯ್ಯ (ಕಡಂಬಾರಿನಲ್ಲಿದ್ದಾರೆ)
28. ಅರಬಿತ್ತಾಯ (ಅರ್ಬಿತ್ತಾಯ, ಅಬ್ಬಿತ್ತಾಯ) [ಅರಬಿ - ಸ್ಥಳನಾಮ]
29. ಅರಳಿತ್ತಾಯ (ಅರ್ವಳಿತ್ತಾಯ, ಆರ್ಲತ್ತಾಯ)
30. ಅರಿಕ್ಕೊಡಿನ್ನಾಯ [ಆರಿಕ್ಕಾಡಿ ಎಂಬ ಸ್ಥಳನಾಮ ಇಲ್ಲಿ 'ಅರಿಕ್ಕೋಡಿ' ಆಗಿದೆ.]
31. ಅರಿತ್ತೋಡಿತ್ತಾಯ
32. ಅರಿನ್ನಾಯ [ಅರಿಬೈಲು]
33. ಅರಿಪ್ಪಾಡಿತ್ತಾಯ
34. ಅರಿಮಣಿತ್ತಾಯ (ಅರಿಮನೆತ್ತಾಯ; ಅರಮನೆತ್ತಾಯ)
35. ಅರಿಮೆತ್ತಾಯ
36. ಅರಿಯಪ್ಪಿನಾಯ (ಆರ್ಯಪಿನಾಯ) [ಪುತ್ತೂರು ತಾಲೂಕಿನಲ್ಲಿ `ಆರ್ಯಾಪು' ಸ್ಥಳವಿದೆ.]
37. ಅರುಂಬುಡತ್ತಾಯ
38. ಅರ್ಕೆಂತಾಯ [ಬಂಟ್ವಾಳದಲ್ಲಿ `ಅರ್ಕಮೆ' ಎಂಬ ಸ್ಥಳವಿದೆ. ಅರ್ಕಮೆ>ಅರ್ಕೆಂ]
39. ಅಲಮೂಡಿತ್ತಾಯ
40. ಅಲವುತ್ತಾಯ
41. ಅಲೆವೂರಾಯ [ಅಲೆವೂರು + ಆಯ]
42. ಅಸುರಣ್ಣಾಯ [ಆಸ್ರಣ್ಣಾಯ ?]
43. ಅಳ್ಳಮಣ್ಣಾಯ (ಅಳುಮಣ್ಣಾಯ)
44. ಅಳ್ಳಿತ್ತಾಯ
45. ಆಚಾರ್ಯ (ಆಚಾರ್)
46. ಆದೂರಾಯ [ಆದೂರು + ಆಯ]
47. ಆದೂಂಡತ್ತಾಯ
48. ಆನೆತ್ತಾಯ
49. ಆಯಪ್ಪಿನ್ನಾಯ (ಆರ್ಯಾಪಿನ್ನಾಯ?)
50. ಆರಪಾಡಿತ್ತಾಯ (ಆಲಂಪಾಡಿತ್ತಾಯ?)
51. ಆಲಂಪಾಡಿತ್ತಾಯ [ಆಲಂಪಾಡಿತ + ಆಯ]
52. ಆಸೂರಾಯ
53. ಆಸ್ರ
54. ಆಸ್ರಣ್ಣ (ಆಸ್ರಣ್ಣಾಯ)
55. ಇಂದ್ರವಳ್ಳಿತ್ತಾಯ (ಇಂದ್ರಾಳಿತ್ತಾಯ) [ಇಂದ್ರಾಳಿತ + ಆಯ]
56. ಇಚ್ಚಲಂಪಾಡಿತ್ತಾಯ [ಇಚ್ಚಲಂಪಾಡಿತ + ಆಯ]
57. ಇಚ್ಚಿಲ್ತಾಯ (ಈಚಿಲ್ತಾಯ, ಇಚ್ಚಿಲರಾಯ) [ಇಚ್ಚಿಲ(ಉಚ್ಚಿಲ)ತ+ಆಯ]
58. ಇಜ್ಜಾಡಿತಾಯ [ಇಜ್ಜಾಡಿತ + ಆಯ]
59. ಇಡೆಕೆದೆನಾಯ (ಇಡೆಕೆದುನಾಯ) [ಇಡ್ಕಿದು]
60. ಇಡೆಪಾಡಿತಾಯ (ಎಡಪಾಡಿತ್ತಾಯ)
61. ಇಡೆವೆಟ್ನಾಯ (ಇಡೆವೆಡನಾಯ, ಎಡಬಡಿನಾಯ, ಎಡವೆಟ್ನಾಯ)
62. ಇನ್ನೊಂತಾಯ (ಇನ್ನಂತಾಯ)
63. ಇಬ್ಬಡಿತ್ತಾಯ (ಇಬ್ಬಳಿತ್ತಾಯ)
64. ಇರಿತ್ತಾಯ
65. ಇರುವಂತೂರಾಯ [ಇರುವಂತೂರು + ಆಯ]
66. ಇರುವತ್ತಾಯ
67. ಇರುವತ್ತೂರಾಯ [ಇರುವತ್ತೂರು]
68. ಇರೆಕಟ್ಟತ್ತಾಯ
69. ಇರ್ನಿರಾಯ (ಇರ್ನೂರಾಯ)[ಇನ್ನೂರು]
70. ಇಲ್ಯಡಿತ್ತಾಯ [ನೆಲ್ಯಾಡಿಯ ಹಾಗೆ ಇಲ್ಯಾಡಿ]
71. ಉಂಗ್ರುಪುಳಿತ್ತಾಯ (ಉಗ್ರಂಪಳ್ಳಿತ್ತಾಯ)
72. ಉಕ್ಕುರಾಯ (ಉಳ್ಕೂರಾಯ) [ಉಳ್ಳೂರ್ + ಆಯ]
73. ಉಗ್ರವಳ್ಳಿತಾಯ [ಉಗ್ರವಳ್ಳಿತ + ಆಯ]
74. ಉಚ್ಚಿಲತ್ತಾಯ [ಉಚ್ಚಿಲತ + ಆಯ]
75. ಉಚ್ಚಿಲಣ್ಣಾಯ (ಚಿಲಣ್ಣಾಯ, ಶಿಲಣ್ಣಾಯ) [ಉಚ್ಚಿಲ + ಅಣ್ಣ + ಆಯ]
76. ಉಜಿರೆನಾಯ (ಉಜಿರೆ)
77. ಉಡುಪ (ಒಡಿಪ್ಪೆ) [ಉಡುಪಿಯವನು]
78. ಉಡುವಣ್ಣಾಯ (?)
79. ಉಪರಣ್ಣಾಯ (ಉಪ್ಪಾರ್ಣ, ಉಪ್ಪಾಂಡ್ರ್) [ಉಪಾರ್ (= ಉಬಾರ್) + ಅಣ್ಣ +ಆಯ]
80 ಉಪಾದ್ರ್ (ಉಪಾಧ್ಯ, ಉಪಾಧ್ಯಾಯ)
81. ಉಪ್ಪಂಗಳತ್ತಾಯ [ಉಪ್ಪಂಗಳ]
82. ಉಬೆವುತ್ತಾಯ [ಉಬೆವೂರು, ಉಬರಡ್ಕ]
83. ಉಬ್ಬಳಿತ್ತಾಯ (ಉಬ್ಬೆಳಿತ್ತಾಯ)
84. ಉಮ್ಮಣಿತ್ತಾಯ
85. ಉರತ್ತಾಯ
86. ಉರಾಳಂಗೋಡಿತ್ತಾಯ [ಉರ್ಲಂಗೋಡ್]
87. ಉರಿವುಳ್ಳ ಬೈಪಾಡಿತ್ತಾಯ
88. ಉರುಳಪಾಡಿತ್ತಾಯ (ಉರ್ಲಪಾಡಿ)
89. ಉರ್ಮಣ್ಣಾಯ [ಉರ್ಮಿ + ಅಣ್ಣ + ಆಯ]
90 ಉರ್ಲಂಗೋಡಿತ್ತಾಯ [ಉರ್ಲಂಗೋಡಿತ + ಆಯ]
91. ಉಲಪಾಡಿತಾಯ [ಉರುಳಪಾಡಿತ್ತಾಯ ?]
92. ಉಳಿತ್ತಾಯ (ಉಳಿರಾಯ)
93. ಉಳಿಯತ್ತಾಯ [ಉಳಿಯತ + ಆಯ]
94. ಉಳ್ಕೂರಾಯ (ಉಲ್ಲೂರಾಯ, ಉಳ್ಳಿರಾಯ) [ಉಳ್ಕೂರು + ಆಯ; (ಬಳ್ಕೂರಿನ ಹಾಗೆ)]
95. ಊಜಿರಾಯ (ಉಜಿರೆ + ಆಯ)
96. ಊರಂಗಳತ್ತಾಯ [ಊರಂಗಳತ (ಉಬರಂಗಳ) + ಆಯ] ಓರಂಗಳ
97. ಊರಾಳ
98. ಎಡಂಬಡಿತ್ತಾಯ
99. ಎಡೆಯಿಲ್ಲಾಯ
100. ಎರಕಡತ್ತಾಯ [ಎರಕಡ ಎಂಬ ಸ್ಥಳಕ್ಕೆ ಈಗ ಎರಕಡುವು/ಎರ್ದಕಡಪ್ಪು ಎಂದು ಹೆಸರಾಗಿದೆ.]
101. ಎರಚಲತ್ತಾಯ
102. ಎರೆಪ್ಪಾಡಿತ್ತಾಯ [ಎರೆಪ್ಪಾಡಿ ಎಂಬ ಸ್ಥಳ ಚೆಂಗಳ ಗ್ರಾಮದಲ್ಲಿದೆ]
103. ಒಪ್ಪಂತಾಯ (ವಪ್ಪಂತಾಯ)
104. ಓಕುಡ (ಓಕುಡೆ)
105. ಓಕುಣ್ಣಾಯ
106. ಕಂಗಿನ್ನಾಯ [ಕಂಗಿಲ, ಕಂಗಣಾರ್, ಕಾನಂಗಿ ಎಂಬ ಸ್ಥಳನಾಮಗಳಿರುವಂತೆ ಕಂಗಿ ಎಂಬುದು ಒಂದು ಸ್ಥಳನಾಮವಿರಬೇಕು.]
107. ಕಂಡಿಪಾಡಿತ್ತಾಯ [ಕಂಡಿಪಾಡಿತ + ಆಯ]
108. ಕಂಡೆತ್ತೋಡಿತ್ತಾಯ [ಕಂಡೆತ್ತೋಡಿ]
109. ಕಂಡೊಡಿನಾಯ
110. ಕಣ್ಣಾರಾಯ (ಕಣ್ಣಾರಣ್ಣಾಯ)
111. ಕಂಬಳಿಕೋಡುತ್ತಾಯ [ಕಂಬಳಿಬೆಟ್ಟು ಇದ್ದ ಹಾಗೆ ಕಂಬಳಿಕೋಡಿ ಎಂಬುದು ಸ್ಥಳ ನಾಮವಿರಬಹುದು.]
112. ಕಡಂಬಳಿತ್ತಾಯ [ಕಡಂಬಳಿತ+ಆಯ - ಕಡಂಬಳಿ ಊರಿನ ಹೆಸರು, ಕಡಂಬಳಿಕೆ ಮತ್ತು ಕಡಂಬಳಿ ಊರುಗಳು ಒಂದೇ ಅಥವಾ ಬೇರೆ ಬೇರೆಯೇ ಎಂಬುದು ತಿಳಿದುಬಂದಿಲ್ಲ.]
113. ಕಂಬಾರ್ಣ್ಣಾಯ [ಕಂಬಾರ್ + ಅಣ್ಣ + ಆಯ; 'ಕಂಬಾರ್' ಕಾಸರಗೋಡು ಜಿಲ್ಲೆಯಲ್ಲಿರುವ ಒಂದು ಊರು.]
114. ಕಂಬೂರನ್ನಾಯ [ಕಂಬಾರು]
115. ಕಕ್ಕಿಲಪಾಡಿತ್ತಾಯ (ಕಕ್ಕೆಪ್ಪಾಡಿತ್ತಾಯ?)
116. ಕಕ್ಕೋತಾಯ (ಕಕ್ಯ)
117. ಕಬೆಕಡಿತ್ತಾಯ/ಕಬೆಕೆಡಿನಾಯ
118. ಕರೆಕುಂಜತ್ತಾಯ (ಕರ್ಕುಂಜ)
119. ಕರೆವೂರುತ್ತಾಯ [ಕರೆವೂರುತ +ಆಯ]
120. ಕರ್ಕಡತ್ತಾಯ [ಕರ್ಕಟತ್ತಾಯ - ಇವರು ಕಾರ್ಕಡ ಎಂಬ ಊರಲ್ಲಿ ಇದ್ದವರು. ಹಳೆಯ ಕರ್ಕಡ ಎಂಬ ಹೆಸರೇ ಮುಂದೆ 'ಕಾರ್ಕಡ' ಆಯಿತು]
121. ಕರ್ತಾಯ [ಕರ್ತ ಎಂಬುದು ಸ್ಥಳನಾಮ, ಕರ್ತಡ್ಕ ಎಂಬ ಹೆಸರಿನ ಒಂದು ಸ್ಥಳವೂ ಇದೆ; ಕರ್ತ + ಆಯ]
122. ಕರ್ನಮಂಗಲತ್ತಾಯ [ಕರ್ನಮಂಗಲ]
123. ಕಲರಾಯ [ಕಲೇರಿ, ಕಳೇರಿ]
124. ಕಲಶಂತಾಯ [ಕಲಶಂತ + ಆಯ]
125. ಕಲೆಂಬಿತ್ತಾಯ [ಕಲೆಂಬಿತ + ಆಯ]
126. ಕಲ್ಲಂಜಿನ್ನಾಯ [ಕಲ್ಲಂಜಿ]
127. ಕಲ್ಲಕಾರತ್ತಾಯ [ಕಲ್ಕಾರ್ತ + ಆಯ]
128. ಕಲ್ಯಾಣಿತ್ತಾಯ (ಕಲ್ಯಾಣಂತಾಯ) [ಕಲ್ಯಾಣಿ]
129. ಕಲ್ಕೂರಾಯ (ಕಲ್ಕೂರ್) [ಕಲ್ಕೂರ್ +ಆಯ]
130. ಕಲ್ಲೂರಾಯ [ಕಲ್ಲೂರ್ + ಆಯ]
131. ಕವುಡಂಪಾಡಿತ್ತಾಯ [ಕವುಡಂಪಾಡಿತ + ಆಯ]
132. ಕಳತ್ತಾಯ
133. ಕಳ್ಳಿಕಳತ್ತಾಯ (ಕಳವಳತ್ತಾಯ)
134. ಕಾಂಚೋಳಾಡಿತ್ತಾಯ [ಕಾಂಚೋಡು ಮತ್ತು ಕಾಂಚೋಳಾಡಿ ಊರುಗಳು ಒಂದೇ ಆಗಿರಬಹುದೇ ಕಾಂಚೋಳು + ಪಾಡಿ = ಕಾಂಚೋಳಾಡಿ (?)]
135. ಕಾಂತಾರಂತಾಯ [ಕಾಂತಾವರ ಕಾರ್ಕಳ ತಾಲೂಕಿನ ಒಂದು ಊರು.]
136. ಕಾಚಿಂತಾಯ
137. ಕಾಡಂತಾಯ
138. ಕಾನಂತಾಯ (ಕಾನತ್ತಾಯ) [ಕೇರಳದಲ್ಲಿ ಇವರ ಕುಲನಾಮ 'ಕಾನಂ' ಎಂದು]
139. ಕಾನಕ್ಕೋಡಿತ್ತಾಯ [ಕಾನಕ್ಕೋಡು]
140. ಕಾಮಟತ್ತಾಯ [ಈ ಕುಲದವರನ್ನು ಈಗ ಕಾಮಡ ಎಂದು ಕರೆಯುತ್ತಾರೆ]
141. ಕಾಮೋಚ ['ಮಂಡೇಚ' ಎನ್ನುವ ಹಾಗೆ ಕಾಮೋಚ ಎನ್ನುವುದೂ ಒಂದು ಅಪೂರ್ವ ಕುಲನಾಮವಾಗಿದೆ. ಮಂಡೇಚ ಎನ್ನುವ ಹೆಸರು ಕ್ರಿ. ಶ. 14ನೇ ಶತಮಾನದ ಶಾಸನಗಳಲ್ಲಿ ಉಲ್ಲೇಖಗೊಂಡಿವೆ.]
142. ಕಾಯರ್ತಾಯ
143. ಕಾಯರ್ತೋಡಿತ್ತಾಯ [ಕಾಯರ್ತೋಡಿತ + ಆಯ]
144. ಕಾರಂತ [ಶಿವಳ್ಳಿಯವರಲ್ಲೂ ಈ ಕುಲನಾಮದವರು ಇದ್ದಾರೆ.]
145. ಕಾರೂರಾಯ [ಕಾರೂರು]
146. ಕಾವು ಭಟ್ಟ [ಇವರು 'ಪೆಜತ್ತಾಯ' ಕುಲದವರು. ಕ್ರಿ. ಶ. ಹನ್ನೆರಡನೆಯ ಶತ ಮಾನದಲ್ಲಿ ರಚಿತವಾದ 'ಮಧ್ವವಿಜಯ'ದಲ್ಲಿ ಪೆಜತ್ತಾಯ ಕುಲದ ಉಲ್ಲೇಖವಿದೆ.]
147. ಕಿದೆಕಾನತ್ತಾಯ [ಕಿದೆಕ್ಕಾನ]
148. ಕಿದೆಕಿದೆನಾಯ (ಕಿದೆಕಿದೆಲ್ಲಾಯ, ಕಿದೆಕೆದಮನ್ನಾಯ)
149. ಕಿದೆವೂರಾಯ [ಕಿದೆವೂರು, ಕಿದೂರ - ಕಾಸರಗೋಡು ಜಿಲ್ಲೆಯ ಒಂದು ಪ್ರಸಿದ್ಧ ಸ್ಥಳ]
150. ಕಿದೆವೂರುತ್ತಾಯ [ಕಿದೆವೂರುತ + ಆಯ = ಕಿದೆವೂರಾಯ ಮತ್ತು ಕಿದೆವೂರು ತ್ತಾಯ ಮೂಲತಃ ಒಂದೇ ಇರಬೇಕು.]
151. ಕಿನ್ನಿ
152. ಕೀಲ್ಪಾಡಿತ್ತಾಯ [ಕಿಲ್ಪಾಡಿತ + ಆಯ]
153. ಕುಂಜತ್ತಾಯ (ಕುಂಜಿತ್ತಾಯ)
154. ಕುಂಜತ್ತೂರಾಯ [ಕುಂಜತ್ತೂರು]
155. ಕುಕ್ಕಿಲ್ಲಾಯ [ಕುಕ್ಕೆ + ಇಲ್ಲ್ + ಆಯ]
156. ಕುಕ್ಕೋಡಿತ್ತಾಯ [ಕುಕ್ಕೋಡಿ]
157. ಕುಜಿಮಣ್ಣಾಯ [ಪಜಿಮಣ್ಣ್ ಎಂಬ ಹಾಗೆ ಕುಜಿಮಣ್ಣ್ ಎಂಬುದೂ ಒಂದು ಊರಿನ ಹೆಸರು ಇರಬೇಕು]
158. ಕುಡಲತ್ತಾಯ [ಕುಡಲತ + ಆಯ]
159. ಕುಡವಣ್ಣಾಯ (ಕುಡೆಮಣ್ಣಾಯ)
160. ಕುಣಿಕುಡಲಾಯ
161. ಕುಣಿಕುಳ್ಳಾಯ
162. ಕುಣಿಲಾಯ [ಕುಣಿಲ ಒಂದು ಸ್ಥಳನಾಮ]
163. ಕುತ್ಯಾರಾಯ [ಕುತ್ಯಾರ್ + ಆಯ]
164. ಕುತ್ತುಬುಳಿತ್ತಾಯ [ಇದು 'ಕುಕ್ಕುಪುಳಿ' ಎಂದಿರಬೇಕು. ಕುಕ್ಕುಪುಳಿ - ಎಂಬ ಸ್ಥಳನಾಮವಿದೆ.]
165. ಕುದಿಪುತ್ತೂರಾಯ
166. ಕುದ್ರೆತ್ತಾಯ
167. ಕುದ್ವಣ್ಣಾಯ [ಕುಡವಣ್ಣಾಯ ಮತ್ತು ಕುದ್ವಣ್ಣಾಯ ಹೆಸರುಗಳು ಮೂಲತಃ ಒಂದೇ ಕುಲನಾಮವಿರಬೇಕು. ಕುದ್ವ - ಕಾಸರಗೋಡು ಜಿಲ್ಲೆಯಲ್ಲಿರುವ ಒಂದು ಸ್ಥಳನಾಮ]
168. ಕುಪ್ಪಣ್ಣಾಯ [ಕುಪ್ಪ, ಕೊಪ್ಪ ಸ್ಥಳನಾಮಗಳು]
169. ಕುರ್ಕುಪಾಡಿನ್ನಾಯ [ಎಡನೀರ ಬಳಿ ಕೊರ್ಕಪ್ಪಾಡಿ ಎಂಬ ಸ್ಥಳವಿದೆ.]
170. ಕುಳಿತಾಯ
171. ಕುಂಡಂತಾಯ
172. ಕುಂಡಾಯ
173. ಕೂಡಂತಾಯ
174. ಕೆದಿಲಾಯ [ಕೆದಿಲ+ಆಯ]
175. ಕೆರ್ಮುಣ್ಣಾಯ
176. ಕೇಕುಡೆ
177. ಕೇಕುಣ್ಣಾಯ
178. ಕೊಂಕ್ರಣ್ಣಾಯ (ಕಕ್ರಣ್ಣಾಯ)
179. ಕೊಂರ್ಗಿನ್ನಾಯ (ಕೊರಿಂಗನ್ನಾಯ) [ಕೊಂರ್ಗಿ ಸ್ಥಳನಾಮವಿದೆ. ಕೊರಡಿನ್ನಾಯ ಎಂದು ಹೇಳುವ ಪದ್ಧತಿಯೂ ಇದೆ. ಕುರಾಡಿ - ಸ್ಥಳನಾಮ]
180. ಕೊಕ್ರಾಳಿತ್ತಾಯ
181. ಕೊಡಲಾಯ (ಕೊಡಿಲ್ಲಾಯ) [ಕೊಡವಲ - ಸ್ಥಳನಾಮ]
182. ಕೊಡಿತ್ತಿಲ್ಲಾಯ
183. ಕೊಡಿಪ್ಪಾಡಿತ್ತಾಯ [ಕೊಡಿಪ್ಪಾಡಿತ + ಆಯ]
184. ಕೊಡಿಶಿಲ್ಲಾಯ [ಕಡೇಶ್ವಾಲ್ಯ - ಎಂಬ ಊರಿನ ಹೆಸರು ಇಲ್ಲಿ 'ಕೊಡಿಶಿಲ್ಲ' ಎಂದಾಗಿದೆ. (ಕಡೇಶಿವಾಲಯ > ಕಡೇಶ್ವಾಲ್ಯ >ಕಡಿಶಲ್ಯ > ಕೊಡಿಶಿಲ್ಲ]
185. ಕೊಡೆತ್ತಾಯ [ಕಾಸರಗೋಡು ಜಿಲ್ಲೆಯ ಉಬ್ರಂಗಳ ಗ್ರಾಮದಲ್ಲಿ 'ಕೊಡೆ' ಎಂಬ ಸ್ಥಳವಿದೆ. 'ಕೊಡೆ' ಎಂಬ ಊರಿನ ಊರು ಬೇರೆಯೂ ಇರಬಹುದು. ಒಂದೇ ಹೆಸರು ಎರಡುಮೂರು ಕಡೆ ಬಳಕೆಯಲ್ಲಿರುತ್ತದೆ]
186. ಕೊಡೆಂಚಿರ್
187. ಕೊಡಂಚ
188. ಕೊಡೆಬಳ್ಳಿತ್ತಾಯ
189. ಕೊದ್ವಟೆರಾಯ (ಕೊದ್ವಟೂರಾಯ, ಕೊದಟಿರಾಯ).
190. ಕೊಯಿಕೊಡಿತ್ತಾಯ (ಕೊಯ್ಕುಡೆ; ಕೇಕುಡೆ ಎಂಬ ಹಾಗೆ ಕೊಯ್ಕುಡೆ ಎಂದಷ್ಟೇ ಹೇಳುವ ಪದ್ಧತಿಯೂ ಇದೆ.)
191. ಕೊರ್ಗಿನ್ನಾಯ
192. ಕೊರ್ನಾಯ (ಕೊರೆನಾಯ)
193. ಕೊಳಂತಿಲ್ಲಾಯ [ಕೊಳಂತಿಲ - ಇಳಂತಿಲದಂತೆ ಸ್ಥಳನಾಮ]
194. ಕೊಳಂಬೆತ್ತಾಯ [ಕೊಳಂಬೆ - ಸುಳ್ಯ ಸಮೀಪದ ಒಂದು ಊರು]
195. ಕೊಳಕಳತ್ತಾಯ [ಕೋಳಕ್ಕೊಳು - ಎಂಬ ಸ್ಥಳ ಪಾಡಿ ಗ್ರಾಮದಲ್ಲಿದೆ.]
196. ಕೊಳತ್ತಾಯ [ಕುಳ - ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದಲ್ಲಿರುವ ಒಂದು ಊರು. ಕುಳದ ಪಾರೆ ಎಂದೂ ಹೇಳುತ್ತಾರೆ. 'ಕುಳ'ವೇ ಕೊಳವಾಗಿ ರೂಪಾಂತರಗೊಂಡಿದೆ.]
197. ಕೊಳಕೆತ್ತಾಯ [ಕೊಳಕ್ಕೆಬೈಲ್ - ಒಂದು ಊರಿನ ಹೆಸರು]
198. ಕೋಟಿಕುಂಜತ್ತಾಯ [ಕಾಸರಗೋಡು ಜಿಲ್ಲೆಯ ಮೊಗ್ರಾಲ್ ಪುತ್ತೂರು ಗ್ರಾಮದಲ್ಲಿ ಕೋಟಿಕುಂಜ ಎಂಬ ಸ್ಥಳವಿದೆ.]
199. ಕೋಟಿತ್ತಾಯ (ಕೋಟೆತ್ತಾಯ) [ಕೋಟೆ - ಊರಿನ ಹೆಸರು]
200. ಕೋಣಂಗಳತ್ತಾಯ [ಕೋಣೆ - ಒಂದು ಊರಿನ ಹೆಸರು. ಪಡುಕೋಣೆ, ಕಂಬದಕೋಣೆ, ಎಂಬ ಊರಿನ ಹೆಸರುಗಳು ತುಂಬ ಪ್ರಸಿದ್ಧವಾಗಿದೆ.]
201. ಕೋಣೆತ್ತಾಯ [ಕೋಣೆ - ಸ್ಥಳನಾಮ]
202. ಕ್ರಮಧಾರೆತ್ತಾಯ (ಕ್ರಮಧಾರಿ) [ಕುಮಾರಧಾರೆ]
203. ಖಡ್ಗತ್ತಾಯ [ಕಾಡಗ, ಕಾರಡ್ಕ ಗ್ರಾಮ ಸ್ಥಳನಾಮ]
204. ಗಂಗೆತ್ತಾಯ [ಗಂಗೊಳ್ಳಿಗೆ ಗಂಗೆ ಎಂಬ ಹೆಸರೂ ಇದೆ. ಬಡಕ್ಕಾಯಿ ಗಂಗೆಡ್ದ್ ತೆನಕ್ಕಾಯಿ ಚಂದ್ರಗಿರಿ ಮುಟ್ಟ ತುಳುನಾಡ್ - ಪಾಡ್ದನ]
205. ಗಂಜಿತ್ತಾಯ [ಗಂಜಿಗೆ ಗಂಜಿಮಠ ಎಂಬ ಹೆಸರೂ ರೂಢಿಯಲ್ಲಿದೆ]
206. ಗುಡ್ಡೆತ್ತಾಯ [ಗುಡ್ಡೆ - ಕಾಸರಗೋಡು ಜಿಲ್ಲೆಯ ಕೂಡಲು ಗ್ರಾಮದಲ್ಲಿ ಗುಡ್ಡೆ ದೇವಸ್ಥಾನ ತುಂಬ ಪ್ರಸಿದ್ಧವಾದುದು. ಮೂಲ್ಕಿಯ ಬಳಿ 'ಗುಡ್ಡೆ ಅಂಗಡಿ' ಇದೆ]
207. ಗುಳಿತ್ತಾಯ
208. ಗೊಡೆತ್ತಾಯ
209. ಗೋಳಿತ್ತಾಯ [ಅಗೋಳಿ - ಇಲ್ಲಿ ಅಕಾರ ಲೋಪವಾಗಿ ಗೋಳಿಯಾಗಿದೆ. ಅಗೋಳಿ ಮಂಜಣ - ತುಳುನಾಡಿನ ಒಬ್ಬ ಪ್ರಸಿದ್ಧ ವ್ಯಕ್ತಿ.]
210. ಚಕ್ಕೆತ್ತಾಯ
211. ಚಡಗ [ಷಡಂಗ ಎಂಬುದರ ತದ್ಬವ; ವೇದದ ಷಡಂಗಗಳನ್ನು ಬಲ್ಲವರು ಷಡಂಗರು. ಇದು ಸ್ಥಳನಾಮದಿಂದ ಬಂದ ಹೆಸರಲ್ಲ; ಇದು ಒಂದು ಪದವಿಯ ಹೆಸರು.]
212. ಚಾಪಾಡಿನ್ನಾಯ [ಚಾಪಾಡಿ]
213. ಚಿಕ್ಕರಾಯ
214. ಚೆಕ್ಕೇರಾಯ (ಚಿಕ್ಕರಾಯ?)
215. ಚೆಪ್ಪಿಲ್ಲತ್ತಾಯ (ಕೇರಳದಲ್ಲಿ 'ಚೆಪ್ಪಿಲ್ಲಂ' ಎಂದು ರೂಪಾಂತರಗೊಂಡಿದೆ.]
216. ಜೋಗಿತ್ತಾಯ (ಜೋಗ - ಸ್ಥಳನಾಮ)
217. ತಂತ್ರಿತ್ತಾಯ [ತಂತ್ರಿ - ಎಂಬುದು ಒಂದು ಸ್ಥಾನದ ಹೆಸರು; ಅಥವಾ ಪದವಿಯ ಹೆಸರು ಎನ್ನಬಹುದು.]
218. ತಂಬ್ಲಂತೋಡಿತ್ತಾಯ [ಮಾಯಿಪ್ಪಾಡಿ ಅರಮನೆಗೆ ಸಂಬಂಧಿಸಿದ ಅಷ್ಟಕುಲಗಳಲ್ಲಿ ಒಂದು. ತಂಬ್ಲಂತೋಡಿತ + ಆಯ]
219. ತರೆಕೊಂತಾಯ
220. ತಲೆಪ್ಪಾಡಿತ್ತಾಯ [ತಲೆಪ್ಪಾಡಿತ + ಆಯ]
221. ತಾಳಿತ್ತಾಯ [ತಾಡ ಎಂಬುದು ಒಂದು ಊರಿನ ಹೆಸರು. ತಾಡ ಮರಕ್ಕೆ ತಾಳಿಮರ ಎಂದೂ ಹೇಳುತ್ತಾರೆ. ಕನ್ನಡದ ತಾಡವೇ ತುಳುವಿನಲ್ಲಿ ತಾಳಿಯಾಗಿರ ಬಹದು.]
222. ತಾಳೆತ್ತಾಯ (ತಾಳಿತ್ತಾಯ ?)
223. ತಿಂಬ್ರಣಾಯ [ತಿಂಬರ - ಸ್ಥಳನಾಮ. ತಿಂರ್ಬ + ಅಣ್ಣ + ಆಯ]
224. ತುಂಬಿಕಲಾಯ [ತುಂಬ್ಯೆಕಲ್ - ಸ್ಥಳನಾಮ]
225. ತೆಂಕಿಲ್ಲಾಯ [ಕೇರಳದಲ್ಲಿ 'ತೇಕತ್ತಿಲ್ಲಂ' ಎಂದು ಕರೆಯುತ್ತಾರೆ. 'ತೆಂಕಿಲ್ಲ್' ಎಂಬ ಹೆಸರೇ ತೆಕ್ಕಿಲ್ ಎಂದು ರೂಪಾಂತರ ಹೊಂದಿರಬಹುದು. ಚೆಂಗಳ ಗ್ರಾಮದಲ್ಲಿ 'ತೆಕ್ಕಿಲ್' ಎಂಬ ಸ್ಥಳವಿದೆ.]
226. ತೆಂಗಿನಾಯ (ತೆಂಗಿಲ್ಲಾಯ)
227. ತೆಂಜಿತ್ತಾಯ
228. ತೆನೆಕಳತ್ತಾಯ [ತೆನ್ಕಳ - ಚೆಂಗಳ ಗ್ರಾಮ]
229. ತೆರೆಕುಂಜತ್ತಾಯ [ತೆರ್ಕುಂಜೆ ? ತೆಕ್ಕುಂಜ - ಒಂದು ಸ್ಥಳದ ಹೆಸರು. ದ. ಕ. ಜಿಲ್ಲೆಯ ಉಳ್ಳಾಲದ ಬಳಿಯ ಒಂದು ಊರು]
230. ತೇಕತ್ತಿಲ್ಲತ್ತಾಯ [ತೆಂಕಿಲ್ಲಾಯ ಪದವೇ ಕೇರಳದಲ್ಲಿ ತೇಕತ್ತಿಲ್ಲತ್ತಾಯ ಎಂದಾಗಿದೆ.]
231. ತೋಂತಿನ್ನಾಯ
232. ತೋಡಿನ್ನಾಯ
233. ತೋಡ್ತಿಲ್ಲಾಯ [ತೋಡ್ತಿಲ್ಲ್]
234. ತೋಣಿತ್ತಾಯ
235. ತೋಟಂತಿಲ್ಲಾಯ [ತೋಟಂತಿಲ್ಲ್ + ಆಯ - ಇವರ ಹಿಂದಿನ ಕುಲನಾಮ ಬಳ್ಳಕ್ಕೂರಾಯ ಆಗಿರಬೇಕು ಎಂಬ ಐತಿಹ್ಯವಿದೆ.]
236. ತೋಳ್ಪಾಡಿತ್ತಾಯ (ತೋಳ್ಪಾಡಿ) [ತೋಳ್ಪಾಡಿತ + ಆಯ]
237. ತೌಡುಪಾಡಿತ್ತಾಯ [ತೌಡುಪಾಡಿತ+ಆಯ]
238. ದಂಡಿಲ್ಲಾಯ
239. ದಪ್ಪಂತಾಯ [ದಪ್ಪ - ಕೆಳಗಿನ ಸ್ಥಳ ಎಂದು ಅರ್ಥವೇ ಹೊರತು ತೋರ ಎಂದು ಅರ್ಥವಲ್ಲ) ದಪ್ಪಂತಾಯ ಎಂಬ ಹಾಗೆ 'ಮಿತ್ತಂತಾಯ' ಎಂಬ ಕುಲನಾಮವೂ ರೂಢಿಯಲ್ಲಿದೆ.]
240. ದುರ್ಗೆತ್ತಾಯ [ದುರ್ಗಂತಾಯ; ಹೊಸದುರ್ಗ ಎಂಬ ಸ್ಥಳವನ್ನು ಬರೇ 'ದುರ್ಗ' ಎಂದು ಕರೆಯುವುದಿದೆ.]
241. ದುಡಿಪುಳಿತ್ತಾಯ [ಕುಕ್ಕುಪ್ಪುಳಿ ಎಂಬ ಸ್ಥಳನಾಮದಂತೆ 'ದುಡಿಪ್ಪುಳಿ' ಎಂಬುದೂ ಒಂದು ಸ್ಥಳನಾಮವಾಗಿ ರೂಢಿಯಲ್ಲಿ ಇದ್ದಿರಬೇಕು.]
242. ದೇವಂಗಿನಾಯ [ದೇವಂಗಿ]
243. ದೇಕುಂಜತ್ತಾಯ [ದೇಕುಂಜ < ದೇವಕುಂಜ]
244. ದೇರಂಜೆತ್ತಾಯ [ದೇರಿಂಜೆ]
245. ದೇವಪೂಜಿತ್ತಾಯ [ಇವರು ಹಿಂದೆ 'ಕುಂಜೂರಾಯ' ಎಂಬ ಕುಲನಾಮದಿಂದ ಪ್ರಸಿದ್ಧರಾಗಿದ್ದರು. ಕುಂಬಳೆ ಅರಮನೆಯಲ್ಲಿ ಇವರು 'ದೇವರ ಪೂಜೆ' ಗಾಗಿ ಅರಸರಿಂದ ನೇಮಕಗೊಂಡ ಅನಂತರ, ಇವರಿಗೆ 'ದೇವಪೂಜಿತ್ತಾಯ' ಎಂಬ ಗೌರವದ ಹೆಸರೂ ರೂಢಿಯಲ್ಲಿ ಬಂತು ಎಂಬ ಐತಿಹ್ಯವಿದೆ.]
246. ನಕಕಟತ್ತಾಯ
247. ನಕ್ಷತ್ರಿತ್ತಾಯ (ನಕ್ಷತ್ರಿ) [ನಕ್ಷತ್ರಶಾಸ್ತ್ರವನ್ನು ಬಲ್ಲವರಾದ್ದರಿಂದ ಈ ಹೆಸರು ಬಂತೆಂದು ಹಿರಿಯರ ಅಂಬೋಣವಿದೆ.]
248. ನಡಂತೋಡಿತ್ತಾಯ [ನಡ್ಡಂತೋಡಿ]
249. ನಡುವಂತಿಲ್ಲಾಯ [ನಡ್ಡಂತಿಲ್ಲಾಯ, ನಡ್ಡಂತಾಯ, ನಡ್ಡಿಲ್ಲಾಯ - ಇವರು ಮಧ್ವಾಚಾರ್ಯರ ಕುಲದವರು. ಮಧ್ವವಿಜಯದಲ್ಲಿ ಈ ಕುಲವನ್ನು 'ಮಧ್ಯಗೇಹ ಭಟ್ಟ' ಎಂದು ಹೆಸರಿಸಲಾಗಿದೆ.]
250. ನದಿಕಲತ್ತಾಯ
251. ನಯಂಪಳ್ಳಿತ್ತಾಯ [ನಯಂಪಳ್ಳಿತ + ಆಯ]
252. ನರುಳಿತ್ತಾಯ
253. ನಲ್ಲೂರಾಯ [ನಲ್ಲೂರು + ಆಯ = ಇವರು ಆಂಧ್ರದ ನೆಲ್ಲೂರಿನಿಂದ ಬಂದವರು ಎಂಬ ಪ್ರತೀತಿಯೂ ಇದೆ.]
254. ನಾಣಿಲ್ತಾಯ [ನಾಣಿಲತ + ಆಯ = ಕ್ರಿ. ಶ. 15ನೇ ಶತಮಾನದ 'ನಾಣಿಲ್ತಾಯ' ಕುಲದ ಒಬ್ಬ ಕವಿಯ ಪ್ರಸ್ತಾವವಿದೆ.]
255. ನಾಯೆರ್ತಾಯ
256. ನಾರಳತ್ತಾಯ = [ನಾರ್ಲತ್ತಾಯ; ನಾರಳತ+ಆಯ; ದ.ಕ. ಜಿಲ್ಲೆಯಲ್ಲಿ ನಾರಳ ಮಠವು ಒಂದು ಪ್ರಸಿದ್ಧವಾದ ಸ್ಥಳ.]
257. ನಾರಿತ್ತಾಯ
258. ನಾರಿಶೆತ್ತಾಯ[ನಾರ್ಶ - ಸ್ಥಳನಾಮ]
259. ನಾಳತ್ತಾಯ [ನಾಳತ + ಆಯ]
260. ನಿಂಜೂರಾಯ [ನಿಂಜೂರು + ಆಯ]
261. ನಿಡಂಬೂರಾಯ [ನಿಡಂಬೂರು+ಆಯ; ಉಡುಪಿಯಲ್ಲಿ ನಿಡಂಬೂರು ಬೀಡು ಅತ್ಯಂತಪ್ರಸಿದ್ಧವಾದುದು. ತುಳುಮಹಾಭಾರತವನ್ನು ಬರೆದ ಅರುಣಾಬ್ಜ ಕವಿಯು ಈ ಹೆಸರನ್ನು 'ನಿಡುಂಬೂರಾರ್' ಎಂದು ಕರೆದಿದ್ದಾನೆ. ಕ್ರಿ. ಶ. 14ನೇ ಶತಮಾನದ ಒಂದು ಶಾಸನದಲ್ಲೂ ಈ ಹೆಸರು ಉಲ್ಲೇಖಗೊಂಡಿದೆ.]
262. ನಿಡ್ವಣ್ಣಾಯ (ನಿಡುಮಣ್ಣಾಯ?)
263. ನೂಜಿತ್ತಾಯ (ನೂಜಿನ್ನಾಯ? [ನೂಜಿತ + ಆಯ]
264. ನೂರಿತ್ತಾಯ
265. ನೂವತ್ತೂರಾಯ
266. ನೆಕ್ಕರಂತಾಯ [ನೆಕ್ಕರಂತ + ಆಯ]
267. ನೆಲ್ಲಿತ್ತಾಯ
268. ನೇತ್ರತ್ತಾಯ (ನೇತ್ರಂತಾಯ)
269. ನೇರಂಕಿನಾಯ (ನೇರೆಂಕಿ)
270. ಪಂಡಾರತ್ತಾಯ [ಕೇರಳದಲ್ಲಿ ರೂಢಿಯಲ್ಲಿರುವ ಹೆಸರು]
271. ಪಂಡಿಕಣ್ಣಾಯ
272. ಪಟ್ಟೀರಿ [ಕೇರಳದಲ್ಲಿ ಪ್ರಸಿದ್ಧವಾದ ಹೆಸರು; ಭಟ್ಟತ್ತಿರಿ - ಎಂಬುದರ ಜನ್ಯಪದ]
273. ಪಡತ್ತಾಯ (ಪಡಂತಾಯ)
274. ಪಡಿಕೊಳತ್ತಾಯ [ಪಡಿಕೊಳ]
275. ಪಡಿತ್ತಾಯ [ಪಡಿ, ಪಡಿಕ್ಕಲ್ - ಸ್ಥಳನಾಮ]
276. ಪಡುಕಣ್ಣಾಯ [ಪಡುಕಣ್ಣಾಯ ಮತ್ತು ಪದಕಣ್ಣಾಯ ಹೆಸರುಗಳಲ್ಲಿ ಸಾಮ್ಯ
ವಿದ್ದಂತೆ ಕಾಣುತ್ತದೆ.]
277. ಪಡುಕೊಡಿನ್ನಾಯ [ಬಡಕ್ಕೊಡಿ - ಸ್ಥಳನಾಮ]
278. ಪಡುವಂತಾಯ [ಪಡುವಂತ + ಆಯ = ಮಂಗಳೂರು ತಾಲೂಕಿನಲ್ಲಿ 'ಪದ್ವ' ಎಂಬ ಸ್ಥಳವಿದೆ. 'ಪದ್ವ'ವೇ 'ಪಡ್ವ'ವಾಗಿರಲೂಬಹುದು.]
279. ಪಡುವೆಟ್ನಾಯ (ಪಡುವೆಟ್ಲಾಯ) [ಪಡುಬೆಟ್ಟು + ಅಣ್ಣ + ಆಯ]
280. ಪಡ್ಡಣ್ಣಾಯ [ಮೂಕಾಂಬಿಗುಳಿಗ ಪಾಡ್ದನದಲ್ಲಿ 'ಪಡ್ವಣಾರ್' ಎಂಬ ಕುಲನಾಮದ ಪುಸ್ತಾವವಿದೆ.]
281. ಪಡ್ಡಿಲ್ಲಾಯ [ಪಡ್ಡೆ ಇಲ್ಲ್ + ಆಯ]
282. ಪಡ್ವಲಾಯ (ಪಡ್ವಲತ್ತಾಯ)
283. ಪದಕಣ್ಣಾಯ
284. ಪನಂಬೆಲೆತ್ತಾಯ (ಪನಂಬೆಳೆತ್ತಾಯ) [ಪನಂಬಳ]
285. ಪನೊರುತ್ತಾಯ [ಪಣೋಳಿ ಸ್ಥಳನಾಮ]
286. ಪನ್ನಪ್ಪೆಂತಾಯ [ಪನ್ನೆಪ್ಪಲಂತ + ಆಯ]
287. ಪರಮಂಜತ್ತಾಯ
288. ಪರಳತ್ತಾಯ (ಪರ್ಲತ್ತಾಯ)
289. ಪರಿಕತ್ತಾಯ [ಪರೀಕ - ಮಣಿಪಾಲಕ್ಕೆ ಸಮೀಪದಲ್ಲಿರುವ ಒಂದು ಸ್ಥಳ. ಇಲ್ಲಿಯ ಪರೀಕ ಅರಮನೆ ತುಂಬ ಪುರಾತನಕಾಲದ್ದು.]
290. ಪರ್ಕಳತ್ತಾಯ [ಪರ್ಕಳತ + ಆಯ; ಪರೀಕದ ಸಮೀಪದಲ್ಲಿಯೇ ಪರ್ಕಳ ವಿದೆ.]
291. ಪರ್ಲತ್ತಾಯ (ಪೆರ್ಲತ್ತಾಯ ?)
292. ಪಾಂಗಣ್ಣಾಯ [ಪಾಂಗಾಳ + ಅಣ್ಣ + ಆಯ]
293. ಪಾಂಗಂಗಿನ್ನಾಯ
294. ಪಾಂತೂರಾಯ
295. ಪಾಕಂ, ಪಾಕತ್ತಿಲ್ಲಂ [ಕೇರಳದ ಕರಿವೆಳ್ಳೂರಿನಲ್ಲಿ ಈ ಕುಲನಾಮದವರಿದ್ದಾರೆ.]
296. ಪಾಡಿತ್ತಾಯ [ಪಾಡಿತ + ಆಯ]
297. ಪಾಣಿಲಾಯ
298. ಪಾತೂರತ್ತಾಯ [ಪಾತೂರ್ತ + ಆಯ]
299. ಪಾದೂರಾಯ [ಪಾದೂರ್ + ಆಯ]
297. ಪಾದೆತ್ತಾಯ (ಪಾದೆತ + ಆಯ)
298. ಪಾಧ್ಯಾಯ ['ಉಪಾಧ್ಯಾಯ' ಪದದ ಆದಿಯಲ್ಲಿರುವ ಸ್ವರಾಕ್ಷರ ಲೋಪವಾಗಿದೆ. ವೇದಪಾಠ ಹೇಳುವವರು ಉಪಾಧ್ಯಾಯರು.]
299. ಪಾನಂಜೆತ್ತಾಯ [ಪಾನಂಜೆತ + ಆಯ]
300. ಪಾರಿಕ್ಕಾಡಿನ್ನಾಯ
301. ಪಾಲೆತ್ತಾಯ [ಪಾಲ್ಯತ್ತಾಯ - ಮೂಲತಃ ಇವರು 'ಕೇಕುಣ್ಣಾಯ'ರೆಂದೂ, ಪಾಲ್ಯತ್ತಾಯ ಎಂಬದು ಅನಂತರ ರೂಢಿಗೆ ಬಂದ ಹೆಸರೆಂದೂ ಪ್ರತೀತಿಯಿದೆ.]
302. ಪಾವಿನಾಯ
303. ಪಾವೂರಾಯ [ಪಾವೂರು]
304. ಪಿಳಿಕರೆತ್ತಾಯ (ಪೆಳ್ಳಿಕರತ್ತಾಯ) [ಪಳ್ಳಿಕೆರೆ - ಸ್ಥಳನಾಮ]
305. ಪುಚ್ಚೆತ್ತಾಯ
306. ಪುಣ್ಯಕಳತ್ತಾಯ [ಪುಣ್ಯಕಳ ಎಂಬ ಸ್ಥಲ ಈಗ ಪುತ್ರಕಳ ಎಂಬ ಹೆಸರು ಪಡೆದಿದೆ.]
307. ಪುಣಚಾಡಿತ್ತಾಯ [ಪುಣಚಾಡಿ]
308. ಪುಣಿಂಚತ್ತಾಯ (ಪುಳಿಂಚತ್ತಾಯ, ಪುಣಚತ್ತಾಯ) [ಪುಣಿಂಚತ+ಆಯ]
309. ಪುತ್ತಿಲ್ಲಾಯ [ಕೇರಳದಲ್ಲಿ ಇವರನ್ನು 'ಪುತ್ತಿಲಂ' ಎಂದು ಕರೆಯಲಾಗುತ್ತದೆ.]
310. ಪುತ್ತೂರಾಯ [ಪುತ್ರಾಯ; ಪುತ್ತೂರು + ಆಯ]
311. ಪುತ್ಯೆತ್ತಾಯ [ಪುತ್ಯೆತ + ಆಯ; ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ 'ಪುತ್ಯೆ' ಎಂಬ ಊರು ಇದೆ. ಕಾಸರಗೋಡು ತಾಲೂಕಿನಲ್ಲಿ ಪುತ್ಯೆ ಇದೆ.]
312. ಪುತ್ರಣ್ಣಾಯ (ಪುತ್ರ - ಊರಿನ ಹೆಸರು; ಪುತ್ತೂರು + ಅಣ್ಣ + ಆಯ?)
313. ಪುದಿನ್ನಾಯ (ಪುದೆನಾಯ)
314. ಪುದುಂಕೊಳತ್ತಾಯ (ಪುದುಕೋಳಿ)
315. ಪುಳಿಂತಾಯ
316. ಪುಳಿಂಪೊಡಿತ್ತಾಯ [ಪುಳಿಂಪಾಡಿತ? + ಆಯ]
317. ಪೂಜೆತ್ತಾಯ
318. ಪೂನಾರಾಯ (?)
319. ಪೆಜತ್ತಾಯ (ಪಿಜೆತ್ತಾಯ, ಪಿಜತ್ತಾಯ) ['ಪೆಜಮಾಡಿ' ಎಂಬ ಸ್ಥಳನಾಮ ವಿರುವಂತೆ 'ಪೆಜ' ಅಥವಾ ಪಿಜ ಎಂಬ ಸ್ಥಳ ಇದ್ದಿರಲೂಬಹದು]
320. ಪೆರಂಬಳ್ಳಿತ್ತಾಯ [ಪೆರಂಪಳ್ಳಿತ + ಆಯ]
321. ಪೆರಡತ್ತಾಯ (ಪೆರ್ಮೊಡಿತ್ತಾಯ ?)
322. ಪೆರುಂಬುದುನಾಯ [ಪೆರ್ಮುದನ್ನಾಯ; 'ಪೆರ್ಮುದೆ' ಎಂಬ ಊರು ಕಾಸರಗೋಡು ತಾಲೂಕಿನಲ್ಲೂ, ಮಂಗಳೂರು ತಾಲೂಕಿನಲ್ಲೂ ಇದೆ]
323. ಪೆರ್ಲತ್ತಾಯ
324. ಪೆಲತ್ತಾಯ (ಪೆಲತ್ತಡಿ, ಪೆಲತ್ತಡ್ಕ)
325. ಪೇರಣ್ಣಾಯ (ಪೆರುವಣ್ಣಾಯ, ಪೆರಣ್ಣಾಯ) [ಪೆರುವ -ಸ್ಥಳನಾಮ]
326. ಪೇರಳೆತ್ತಾಯ
327. ಪೊಕ್ಕುಣ್ಣಾಯ (ವೋಕುಣ್ಣಾಯ)
328. ಪೊಗೆತ್ತಾಯ
329. ಪೊಡಿಲ್ಲಾಯ
330. ಪೊಣೆತ್ತಾಯ
331. ಪೊದುಂಕುಳುತ್ತಾಯ (ಪುದುಕ್ಕುಳ)
332. ಪೊನ್ನೆತ್ತಾಯ (ಪೊನ್ನೆಂತಾಯ)
333. ಪೊಯ್ಯೆತ್ತಾಯ (ಪೊಯ್ಯೆ)
334. ಪೊಳ್ನಾಯ (ಪೊಳಿನ್ನಾಯ) [ಪುಳಿನ, ಪೊಳಲಿ]
335. ಬಂಬಟ್ನಾಯ
336. ಬಂಬ್ರಣಾಯ [ಬಂಬ್ರಾಣ + ಆಯ]
337. ಬಕ್ಕುತ್ತಾಯ
338. ಬಜಪ್ಪಿಲತ್ತಾಯ [ಬಜಪ್ಪಿಲತ್ತ + ಆಯ]
339. ಬಜೆತ್ತಾಯ (ಬಜತ್ತಾಯ) [ಬಜತ್ತ + ಆಯ, ಬಜೆ ಸ್ಥಳನಾಮ]
340. ಬಡಕೊಡಿನ್ನಾಯ (ಬಡಕೋಡಿ)
341. ಬಡ್ಕಿಲ್ಲಾಯ (ಬಡಿಕ್ಕಿಲ್ಲಾಯ) [ಕೇರಳದಲ್ಲಿ 'ಬಡಿಕ್ಕಿಲ್ಲಂ' ಎನ್ನುತ್ತಾರೆ. ಬಡಕ್ಕಬೈಲ್ + ಇಲ್ಲ + ಆಯ ಬಡಕಬೈಲಿಲ್ಲಾಯ > ಬಡಿಕ್ಕಿಲ್ಲಾಯ]
342. ಪೆರ್ವೊಡಿತ್ತಾಯ (ಪೆರಡಿತ್ತಾಯ) [ಪೆರ್ವೊಡಿತ + ಆಯ; ಬಾಯಾರು ಗ್ರಾಮದಲ್ಲಿ 'ಪೆರುವಡಿ' ಎಂಬ ಊರು ಇದೆ.]
343. ಬನ್ನಾರಿತ್ತಾಯ [ಬನಾರಿತ + ಆಯ]
344. ಬನ್ನಿಂಜೆತ್ತಾಯ [ಬನ್ನಿಂಜೆತ + ಆಯ]
345. ಬನ್ನಿಂತಾಯ [ಬನ್ಯಂತಾಯ]
346. ಬಲೆಕ್ಕಳತ್ತಾಯ [ಬಲೆಕ್ಕಳ]
347. ಬರ್ಕಣ್ಣಾಯ
348. ಬರ್ಲಾಯ
349. ಬಲ್ಲಾಳ್
350. ಬರ್ವತ್ತೂರಾಯ (ಬರ್ವತ್ತಾಯ, ಬರ್ವತ್ರಾಯ)
351. ಬಳಪತ್ತಾಯ (ಬಳ್ಪತ್ತಾಯ) [ಬಳ್ಪತ + ಆಯ]
352. ಬಳ್ಳಕ್ಕೂರಾಯ [ಇವರು ಮಂಜೇಶ್ವರದ ಬಳ್ಳಕ್ಕೂರಿಗೆ ಬರುವ ಮೊದಲು 'ತೋಟಂತಿಲ್ಲಾಯ' ಕುಲನಾಮದವರಾಗಿದ್ದರು ಎಂದು ಐತಿಹ್ಯವಿದೆ.]
353. ಬಳ್ಳಣ್ಣಾಯ [ಬಳ್ಳ - ಊರಿನ ಹೆಸರು]
354. ಬಳ್ಕುಳ್ಳಾಯ [ಬಳ್ಕ, ಬಳ್ಳಕ್ಕ]
355. ಬಳ್ಳುಳ್ಳಾಯ
356. ಬಳ್ಳೂರ್
357. ಬಾಕುಡೆತ್ತಾಯ
358. ಬಾಗಿಲ್ತಾಯ
359. ಬಾಜಿತ್ತಿಲ್ಲಾಯ [ಬಾಜತ + ಇಲ್ಲ + ಆಯ]
360. ಬಾಣಿಲ್ಲಾಯ [ಬಾಣೆ + ಇಲ್ಲ + ಆಯ]
361. ಬಾಯರಿತ್ತಾಯ (ಬಾಯಾರಿತ್ತಾಯ) [ಬಾಯಾರ್ತ + ಆಯ]
362. ಬಾರಿಕಳತ್ತಾಯ [ಬಾರಿಕಳ ಈಗ ಬಾರಿಕ್ಕಾಡು ಎಂದಾಗಿದೆ]
363. ಬಾರಿಕ್ಕಾಡಿತ್ತಾಯ [ಬಾರಿಕ್ಕಾಡಿತ + ಆಯ]
364. ಬಾರಿತ್ತಾಯ [ಬಾರೆತ + ಆಯ; 'ಬಾರೆ' ಎಂಬುದು ಸ್ಥಳನಾಮ]
365. ಬಾರ್ನಾಯ [ಬಾರೆ + ಅಣ್ಣ + ಆಯ ?]
366. ಬಾಸ್ರಿ (ಬಾಸ್ರಿತ್ತಾಯ)
367. ಬಾಳ್ತಿಲ್ಲಾಯ [ಬಾಳ್ತಿಲ + ಆಯ]
368. ಬಿಜೆತ್ತಾಯ [ಬೆಜೈತ + ಆಯ]
369. ಬಿಟ್ಟಿಗತ್ತೂರಾಯ [ಬಿಟ್ಟಿಗತ್ತೂರ್ + ಆಯ]
370. ಬಿತ್ತಿಲ್ಲಾಯ [ಬಿತ್ತಿಲ್]
371. ಬಿಳಿರಾಯ (ಬೆಳಿರಾಯ)
372. ಬೆಂಞಣಾಯ
373. ಬೆಲ್ಲಂಣಾಯ
374. ಬೆಳ್ನಾರಾಯ
375. ಬೇರ್ಕಳತ್ತಾಯ [ಬೇರ್ಕಡ ಎಂಬ ಸ್ಥಳ ಈಗ `ಬೇರ್ಕಡವು' ಎಂದಾಗಿದೆ]
376. ಬೇವಿಲೋಡಿನಾಯ
377. ಬೈಪಾಡಿತ್ತಾಯ [ಬೈಪಾಡಿ]
378. ಬೊಳಮಿಣ್ಣಾಯ [ಬೊಳ್ಮಣ್ಣು]
379. ಬೋನಂತಿಲ್ಲಾಯ [ಬೋನಂತಾಯ]
380. ಬೋರಿತ್ತಾಯ
381. ಬೋವಿಣ್ಣಾಯ
382. ಬೋಳ್ನಾಯ (ಬೋಳಿಲ್ಲಾಯ)
383. ಬ್ರಹ್ಮತ್ತಾಯ
384. ಭಟ್ಟ
385. ಮಕ್ಕಿತ್ತಾಯ
386. ಮಲ್ಲೆಂಜಿನ್ನಾಯ
387. ಮುನ್ನೂರಾಯ [ಮುನ್ನೂರ್ + ಆಯ]
388. ಮೂಡಿಲ್ಲಾರ್
389. ಮೂಡೆತ್ತಾಯ
390. ಮೂಡಿತ್ತಾಯ
391. ಮೂರುಡಿತ್ತಾಯ
392. ಮಿತ್ತಂತಾಯ
393. ಮೂಡಂಬಡಿತ್ತಾಯ (ಮೂಡೆಂಬಾಡಿತ್ತಾಯ)
394. ಮರಡಿತ್ತಾಯ
395. ಮಾಣಿಲ್ತಾಯ [ಮಾಣಿಲತ + ಆಯ]
396. ಮುಚ್ಚಿನ್ನಾಯ
397. ಮುಚ್ಚಂತಾಯ
398. ಮೇವಾಡಿತ್ತಾಯ
399. ಮಂಡೇಚ
400. ಮಂಜತ್ತಾಯ
401. ಮಂಜಿತ್ತಾಯ
402. ಶಬರಾಯ
403. ಶರಳಾಯ (ಸರಳಾಯ)
404. ಸಗ್ರಿತ್ತಾಯ [ಸಗ್ರಿ-ಸ್ಥಳನಾಮ]
405. ಶಿಬರಾಯ (ಶಿಬರೂರಾಯ)
406. ಶಿವತ್ತಾಯ
407. ಸಂಪಗೆತ್ತಾಯ (ಸಂಪಿಗೆತ್ತಾಯ)
408. ಸಣ್ಣಡ್ಕತ್ತಾಯ (ಸಣ್ಣಡ್ಕತ + ಆಯ)
409. ಸರಳತ್ತಾಯ (ಸರಳಿ - ಊರ ಹೆಸರು) ಶರಳಾಯ, ಶನಿತ್ತಾಯ
410. ಸಾಂಬರಣಾಯ
411. ಸಾಮಗ [ಇವರು ಮೂಲತಃ ಕಲ್ಲೂರಾಯ ಕುಲದವರು]
412. ಸಾಲೆತ್ತೂರಾಯ (ಸಾಲೆತ್ತೂರು)
413. ಸಿತ್ತಿಲ್ಲಾಯ (ಶಿತ್ತಿಲ್ಲಾಯ, ಚಿತ್ತಿಲ್ಲಾಯ)
414. ಸಿರತ್ತಾಯ
415. ಸಿರಿಮಂತೂರಾಯ (ಶ್ರೀಮಂತೂರಾಯ, ಶ್ರೀಮಂತೂರುತ್ತಾಯ)
416. ಸಿರ್ಕುಳಿತ್ತಾಯ (ಚಿರ್ಕುಳಿತ್ತಾಯ) [ಚೆರ್ಕಳ]
417. ಸಿಂಬುರತ್ತಾಯ [ಶೀಂಬ್ರ - ಸ್ಥಳನಾಮ]
418. ಸುಡಿಕಳತ್ತಾಯ
419. ಸುಣ್ಣತ್ತಾಯ (ಸುನ್ನೆ, ಸುನ್ನೆತ್ತಾಯ)
420. ಸುಳ್ಯಣ್ಣಾಯ [ಸುಳ್ಯ + ಅಣ್ಣ + ಆಯ)
421. ಸೂರ್ಯಪ್ಪಿನಾಯ
422. ಸೆಡಿಕುಳ್ಳಾಯ (ಶೆಡಿಕುಳ್ಳಾಯ)
423. ಸೇವ್ಯಕಳತ್ತಾಯ
424. ಸೋಮಾದ್ಯ (ಸೋಮಾಧ್ಯಾಯ, ಸೋಮಪಾಧ್ಯಾಯ)
425. ಸೋಮಯಾಜಿ (ಸೋಮಾದ್ಯ ?)
426. ಹತ್ವಾರ
427. ಹೆಬ್ಬಾರ್ [ಹೆಬ್ರಿ+ಆರ್? ಗೌರವಾರ್ಥದಲ್ಲಿ ಕೆಲವೊಮ್ಮೆ 'ಆಯ' ಎಂಬುದು 'ಆರ್' ಎಂಬುದಾಗಿ ರೂಪಾಂತರ ಹೊಂದುವುದಿದೆ. ಉದಾ: ನಿಡುಂಬುರಾರ್, ಮೂಡಿಲ್ಲಾರ್ ಇತ್ಯಾದಿ]
ಗ್ರಂಥ ಋಣ :
ತುಳುನಾಡು : ಡಾ| ಪಿ. ಗುರುರಾಜ ಭಟ್ಟ, ಉಡುಪಿ
ಶಿವಳ್ಳಿ ಬ್ರಾಹ್ಮಣರ ಕುಲನಾಮಗಳು : ಡಾ| ಪದ್ಮನಾಭ ಕೇಕುಣ್ಣಾಯ, ಉಡುಪಿ ಇವರು ಎಂ. ಎ. ಪದವಿಗಾಗಿ ಸಿದ್ಧಪಡಿಸಿದ ಪ್ರಬಂಧ.
The Historical Tradition of South Canara and Brahminical groups: A study of Grama Paddati and Sahyadri Khanda : ನಾಗೇಂದ್ರ ರಾವ್, ಉಡುಪಿ ಇವರು ಎಂ.ಫಿಲ್ ಪದವಿಗಾಗಿ ಸಿದ್ಧಪಡಿಸಿದ ನಿಬಂಧ.
[`ಶಿವಳ್ಳಿಯವರ ಕುಲನಾಮಗಳು' ಎಂಬ ಶೀರ್ಷಿಕೆಯಲ್ಲಿ ಕಾಸರಗೋಡಿನ 'ಬ್ರಹ್ಮವಾಣಿ' ಎಂಬ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡ ಮೂಲಲೇಖನ ಪರಿಷ್ಕರಣೆಗೊಂಡು `ಶಿವಳ್ಳಿಬ್ರಾಹ್ಮಣರು (ಸಂಪುಟ 1)' ಎಂಬ ಕೃತಿಯಲ್ಲಿ (ಸಂ.: ಎಚ್.ಬಿ.ಎಲ್. ರಾವ್, ಶಿವಳ್ಳಿ ಪ್ರತಿಷ್ಠಾನ, ಮುಂಬಯಿ, 2001) ಪುನರ್ಮುದ್ರಿತ. ಪ್ರಸ್ತುತ ಪುನಃ ಪರಿಷ್ಕರಣಗೊಂಡಿದೆ.]
ಕಾಸರಗೋಡು ಒಂದು ಅಪೂರ್ವಗುಣವುಳ್ಳ ನೆಲ ಎನ್ನಬಹುದು. ಇಲ್ಲಿ ಪರಸ್ಪರ ಪ್ರಭಾವಿತವಾಗುತ್ತಿರುವ ಎರಡು ವಿಭಿನ್ನಸಂಸ್ಕೃತಿಗಳ ಛಾಯೆಯಿದ್ದು ಅವು ಈ ನೆಲದ ಗುಣವನ್ನು ಹೆಚ್ಚಿಸಿವೆ. `ಪಯಸ್ವಿನೀಂ ಕೇರಳಭೂಷಣಾಯಿತಾಮ್' ಎಂದು ಕಾವುಗೋಳಿಯ ಶ್ರೀ ನಾರಾಯಣ ಪಂಡಿತಾಚಾರ್ಯನು ಮಧ್ವವಿಜಯದಲ್ಲಿ ಹೇಳಿದ್ದಾನೆ. ಎಂದರೆ ಪಯ ಸ್ವಿನಿಯು ಕೇರಳದ ಗಡಿ ಎಂಬ ವಿಚಾರ ಸುಮಾರು ಕ್ರಿ.ಶ. ಹನ್ನೆರಡನೆಯ ಶತಮಾನ ದಲ್ಲೇ ಇತ್ಯರ್ಥವಾದಹಾಗಾಯಿತು. ಹಾಗಾಗಿ ಪಯಸ್ವಿನಿಯಿಂದೀಚೆಗಿನ ನೆಲ ಶುದ್ಧ ಕನ್ನಡನಾಡು ಎಂಬುದರಲ್ಲಿ ಸಂದೇಹವಿಲ್ಲ.
ಘಟ್ಟವನಿಳಿದು ಪರಶುರಾಮಕ್ಷೇತ್ರಮಂ ಸಾರ್ದು,
ತುಳುವದ ರಾಜರ್ಕಳೆಲ್ಲಂ
ಮಲೆತಿರೆ ನಿಗ್ರಹಿಸಿ, ಮೆರೆವ ಕಾಸರಗೋಡೊಳ್ |
ತೊಲಗದ ಕಂಬವನಾ ನೃಪ
ತಿಲಕಂ ತಾ ನಿಲಿಸಿ ಮೆರೆದನತಿಸಾಹಸಮಂ ||
-ಎಂಬ ಈ ಪದ್ಯದ ಸಾಲುಗಳಲ್ಲಿ ಸೂಚಿಸಿದಂತೆ ಕ್ರಿ.ಶ. 15-16ನೇ ಶತಮಾನದ ಕಾಲದಲ್ಲಿ ಇಲ್ಲಿ ತುಳುವ ರಾಜರು ಆಡಳಿತೆ ಮಾಡುತ್ತಿದ್ದರೆಂದು ತಿಳಿದು ಬರುತ್ತದೆ. ಆ ಕಾಲದ ಇಲ್ಲಿಯ ತುಳುವ ರಾಜರು ಯಾರು? ಕ್ರಿ.ಶ. 11ನೇ ಶತಮಾನದಲ್ಲಿ ಇಲ್ಲಿ ಕುಂಬಳೆಯನ್ನು ರಾಜಧಾನಿಯನ್ನಾಗಿ ಮಾಡಿ ಕದಂಬವಂಶದ ಸುಶೀಲರಾಣಿಯ ಮಗ ಒಮ್ಮಡಿ ಜಯಸಿಂಹನು ಕುಂಬಳೆ ಸೀಮೆಯೆಂಬ ಈ ಪ್ರದೇಶವನ್ನು ಆಳತೊಡಗಿದನೆಂದು ಚರಿತ್ರೆಗಳಿಂದ ತಿಳಿದುಬರುತ್ತದೆ. ಕುಂಬಳೆ ಅರಸರಿಗೆ ತೌಳವಾಧೀಶರೆಂಬ ಬಿರುದು ಇತ್ತೆಂಬುದು ಮಾಯಿಪ್ಪಾಡಿ ಅರಮನೆಯ ದಾಖಲೆಗಳಿಂದ ತಿಳಿದುಬರುತ್ತದೆ. ಇಲ್ಲಿಯೇ ತುಳುವಿನ ಮೂರು ಪ್ರಾಚೀನಕಾವ್ಯಗಳೂ ಲಭ್ಯವಾಗಿವೆ: ಶ್ರೀಭಾಗವತೊ, ಕಾವೇರಿ ಮತ್ತು ದೇವೀಮಹಾತ್ಮೆ. ತುಳುನಾಡು ಕಲ್ಯಾಣಪುರ ಹೊಳೆಯವರೆಗೆ ಚಾಚಿದ್ದರೂ, ತುಳುವಿನ ಪ್ರಾಚೀನಕೃತಿಗಳು ಲಭ್ಯವಾದದ್ದು ಕಾಸರಗೋಡಿನಲ್ಲೇ ಎಂಬುದು ಅಚ್ಚರಿಯ ಮಾತು.
ತುಳುವರಾಜರು ಸಾಹಿತ್ಯಕ್ಕೆ ಪ್ರೋತ್ರಾಹಕೊಟ್ಟ ಬಗ್ಗೆ ಮೇಲಿನ ಮಾತುಗಳು ರುಜುವಾತು ಆಗಬಲ್ಲುವು. ಮಾತ್ರವಲ್ಲ; ಇಲ್ಲಿ ಕನ್ನಡಸಾಹಿತ್ಯದ ಬೆಳವಣಿಗೆಗೂ ನಾಂದಿ ಹಾಡಿದವರು ತುಳುವರಾಜರೆಂದೇ ಹೇಳಿದರೂ ತಪ್ಪಾಗಲಾರದು. ಒಮ್ಮಡಿ ಜಯಸಿಂಹನ ಕಾಲದ ಒಂದು ಶಾಸನವು ತಳಂಗೆರೆಯ ಮಸೀದಿಯ ಮುಂಭಾಗದಲ್ಲಿದ್ದು, ಅದು ಶಾಸನಗಳ ಚರಿತ್ರೆಯಲ್ಲಿಯೇ ಅದ್ಭುತವಾದ ದಾಖಲೆಯನ್ನು ಸೃಷ್ಟಿಸಿದೆ. ಈ ಶಾಸನವು ಪದ್ಯರೂಪದಲ್ಲಿದೆ. `ಎಪಿಗ್ರಾಫಿಯಾ ಇಂಡಿಕಾ'ದ 29ನೆಯ ಸಂಪುಟದಲ್ಲಿ ಈ ಶಾಸನದ ಪರಿಷ್ಕೃತರೂಪವನ್ನು ಪ್ರಕಟಿಸಿದ ಶ್ರೀ ನೆಲಮಂಗಲ ಲಕ್ಷ್ಮೀನಾರಾಯಣ ರಾವ್ ಮತ್ತು ಶ್ರೀ ಡಿ. ಎಲ್. ನರಸಿಂಹಾಚಾರ್ಯರು `ಈ ಶಾಸನವು ಛಂದಸ್ಸಿನ ಐತಿಹಾಸಿಕ ಅಧ್ಯಯನಕ್ಕೆ ತುಂಬ ಸಹಾಯಕವಾಗುವಂತಹದು' -ಎಂದು ಹೇಳಿರುವುದನ್ನು ಇಲ್ಲಿ ಜ್ಞಾಪಿಸಬಹುದು.
ಶಾಸನದ ವಿಷಯ - ಜಯಸಿಂಹನು ಮೋಚಬ್ಬರಸಿಗೆ ಭೂದಾನಮಾಡಿದ್ದು. ಭೂದಾನವನ್ನು ಪಡೆದ ಮೋಚಬ್ಬರಸಿ ಹೇಳುತ್ತಾಳೆ :
ಇನ್ನಪ್ಪ ಭೂಪರೆಲ್ಲಂ
ನಿನ್ನೊರೆಗಂ ದೊರೆಗಂ ವಾರರದರಿಂದಾರುಂ |
ಮನ್ನಿಸದೂರಂ ಗುಣಸಂ
ಪನ್ನ ಸಮಂತೀವುದೆನಗೆ ಕನ್ಯಾದಾನಂ ||
ಇದು ಕಂದಪದ್ಯ ಛಂದಸ್ಸಿನಲ್ಲಿದೆ. ``ಇನ್ನು ಮುಂದೆ ನಿನ್ನನ್ನು ಮೀರುವ ಅಥವಾ ಸರಿಸಮಾನರಾದ ಅರಸರು ಕೂಡಾ ಇರರು. ಆದ್ದರಿಂದ ನನಗೆ `ಆರುಂ ಮನ್ನಿಸ ದೂರಂ ಕನ್ಯಾದಾನ'ವಾಗಿ, ಎಂದರೆ ಕನ್ಯೆಯಾದ ನನಗೆ ದಾನವಾಗಿ ಈವುದು'' ಎಂಬುದು ಮೋಚಬ್ಬರಸಿಯ ಬಿನ್ನಹ. ಆಕೆಯ ಬಿನ್ನಹದಂತೆ ಅರಸನು ಯಾರಿಗೂ ಬೇಡದ ಪಾಳುನೆಲವನ್ನು ಆಕೆಗೆ ದಾನವಾಗಿ ಕೊಡುತ್ತಾನೆ. ಆದರೆ ಆಕೆ ಪಾಳುನೆಲವನ್ನು ತನ್ನ ಸ್ವಂತ ಪರಿಶ್ರಮದಿಂದ ಕೃಷಿಯೋಗ್ಯಭೂಮಿಯನ್ನಾಗಿ ಮಾಡುತ್ತಾಳೆ. ಈ ವಿಚಾರವನ್ನು ತಿಳಿಸುವ ಶಾಸನದ ಮುಂದಿನ ಭಾಗವು ಕನ್ನಡದ `ಉತ್ಸಾಹವೃತ್ತ'ವೆಂಬ ಛಂದಸ್ಸಿನಲ್ಲಿದೆ:
ಊರ ಕಡೆಯ ತೊÙರೆಯ ತಡಿಯ ಕರಿಯ ಕಲ್ಲ ಮೋÙರದಿಂ
ಪು-ತ್ತೂರ ಪೊಲೆಯರಿಪ್ಪ ಕೇರಿಯೊವÙಳ ನೀರ ಭೂಮಿಯಂ
ಸಾರ ಭೂರುಹಂಗಳೋಳಿಯೊಳಗೆ ನೆÙರೆದ ಕೆÙರೆಯನಂ-
ಭೋರುಹಾಕ್ಷಿ ತನ್ನ ಧನದಿನೊಪ್ಪೆ ಮಾಡಿಸಿರ್ಪುದಂ
`ಪುತ್ತೂರ ಪೊಲೆಯರಿಪ್ಪ ಕೇರಿ' ಎಂದು ಇಲ್ಲಿ ಹೇಳಿದ್ದು ಈಗಿನ ಮೊಗ್ರಾಲ್ ಪುತ್ತೂರಿನ ಸ್ಥಳವನ್ನು. ಅದು ಹಿಂದೆ `ಒವÙಳನೀರ' ಭೂಮಿಯಾಗಿತ್ತು. ಒವÙಳನೀರು ಎಂದರೆ ಉಪ್ಪುನೀರು ಎಂದರ್ಥ. ಒವÙಳು ಎಂಬ ಪದಕ್ಕೆ ಉಪ್ಪು ಎಂಬ ಅರ್ಥವಿದ್ದುದಕ್ಕೆ, ಈಗಿನ ಉಪ್ಪಿನಂಗಡಿಯನ್ನು `ಉಬಾರ್' ಎಂದು ಕರೆಯುತ್ತಿರುವುದೇ ಸಾಕ್ಷಿ. ನಮ್ಮೂರಲ್ಲಿಯೂ ಉಬರಂಗಳ ಎಂಬ ಸ್ಥಳವಿದೆ. ಉಬರಂಗಳವನ್ನು ಉಪ್ಪಂಗಳವೆಂದೂ ಕರೆಯಲಾಗುತ್ತದೆ. ಹೀಗೆ ಉಬರ್ ಮತ್ತು ಉಪ್ಪು ಎಂಬುವು ಪರ್ಯಾಯಪದಗಳು. ತನಗೆ ದಾನವಾಗಿ ಸಿಕ್ಕಿದ `ಪುತ್ತೂರು ಪೊಲೆಯರಿಪ್ಪ ಒವÙಳನೀರ ಭೂಮಿ'ಯನ್ನು ಮೋಚಬ್ಬ ರಸಿಯು `ಸಾರಭೂರುಹಂಗಳೋಳಿಯು' ಬೆಳೆವ ಭೂಮಿಯಾಗಿ ಪರಿವರ್ತಿಸಿದಳು ಎಂಬುದು ಈ ಪದ್ಯದ ಸಾರ. ನನ್ನ ಅಭಿಪ್ರಾಯದಂತೆ ಈ ಪ್ರದೇಶವು ಈಗಿನ ಮೊಗರಾಲು ಪುತ್ತೂರಿನಿಂದ ಪ್ರಾರಂಭವಾಗಿ ತಳಂಗರೆ ವರೆಗೆ ವ್ಯಾಪಿಸಿರಬೇಕು. ತಳಂಗೆರೆ ತುಳುನಾಡಿನ ತೆಂಕತುದಿ ಮತ್ತು ರಾಜ್ಯದ ಗಡಿ. ಈ ಕಾರಣದಿಂದಲೇ ಶಾಸನವೂ ತಳಂಗರೆಯಲ್ಲಿ ಸ್ಥಾಪಿತವಾಗಿದೆ. ತಳಂಗೆರೆ ಎಂಬುದು ಮತ್ತೆ ಪ್ರಸಿದ್ಧಿಗೆ ಹೆಸರು. ಮೊಗರಾಲು ಹೊಳೆಯಿಂದ ಪಯಸ್ವಿನಿ ಹೊಳೆಯವರೆಗೂ ಅದು ಪುತ್ತೂರೇ. ಪುತ್ತೂರು ಎಂದರೆ ಹೊಸ ಊರು ಎಂದರ್ಥ. ಮಧ್ವವಿಜಯದಲ್ಲಿ ವ್ಯಾಖ್ಯಾನದಲ್ಲಿ ಇದನ್ನು `ಕುದಿಪುಸ್ತೂರು' ಎಂದು ಸಂಬೋಧಿಸಲಾಗಿದೆ. `ಕುದಿಪುಸ್ತೂರು' ಎಂದರೆ ಸಣ್ಣ ಪುತ್ತೂರು ಎಂದರ್ಥ. ದೊಡ್ಡ ಪುತ್ತೂರು ಯಾವುದೆಂದು ನಮಗೆಲ್ಲ ಗೊತ್ತು.
ಕುದಿಪುಸ್ತೂರೇ ಮೊಗರಾಲು ಪುತ್ತೂರು. ಅಲ್ಲಿದ್ದ `ಪೊಲೆಯ'ರೆಂದರೆ `ಮೊಗರೈ' ಎಂದು ಕರೆಯಲ್ಪಡುವ ಜನಾಂಗದವರು. ಇವರನ್ನು `ಮೇರ'ರೆಂದೂ ಹಿಂದೆ ಸಂಬೋ ಧಿಸಲಾಗುತ್ತಿತ್ತು. ಮಲೆಯಾಳದಲ್ಲಿ ಈ ಪ್ರದೇಶವನ್ನು `ಮೋರಾಪುತ್ತೂರು' ಎಂದೇ ಕರೆಯಲಾಗುತ್ತದೆ. ಮೇರ-ಮೋರ, ಬೇಳ-ಬೋಳ, ಬೇವಿಂಜೆ-ಬೋವಿಂಜೆ, ಬೆಳ್ಳೂರು-ಬೊಳ್ಳೂರು - ಈ ವ್ಯತ್ಯಸ್ತ ಪದಪ್ರಯೋಗಗಳು ಈಗಲೂ ರೂಢಿಯಲ್ಲಿವೆ.
ಅನಂತಪುರದಲ್ಲಿರುವ ತುಳುಲಿಪಿಯ ಹಾಗೂ ತುಳುಭಾಷೆಯ ಶಾಸನದಲ್ಲಿ ಈ ಪ್ರದೇಶವನ್ನು `ಮೊಗರೈರ ಗ್ರಾಮ' ಎಂದೂ ಕರೆಯಲಾಗಿದೆ. ಮೋಚಬ್ಬರಸಿಯು ದಾನ ಪಡೆದು ಅಭಿವೃದ್ಧಿಪಡಿಸಿದ ಈ ಭೂಮಿಯ ವಿಚಾರದಲ್ಲಿ ಅಲ್ಲಿಯ ಮೂಲನಿವಾಸಿಗಳಾದ ಮೊಗೈರರು ಕ್ರಮೇಣ ದಂಗೆಯೆದ್ದಿರಬೇಕು. ಕುಂಬಳೆಸೀಮೆಯ ಚರಿತ್ರೆಯಲ್ಲಿ ಮುಗುರ, ಮತ್ತು ಅವನ ಭಾವನೆಂಟನಾದ ಬಡಜ ಇಬ್ಬರೂ ಸೇರಿ ಕುಂಬಳೆ ಜಯಸಿಂಹನೊಡನೆ ಯುದ್ಧಮಾಡಿದ ವಿಚಾರವೂ ಬರುತ್ತದೆ. ಮೊಗರಾಲಿನ ಮಗರರನ್ನೆಲ್ಲ ಗೆದ್ದು, ಅಲ್ಲಿಯ ಪ್ರತಿಮನೆಯವರೂ ಅನಂತಪುರ ದೇವಸ್ಥಾನಕ್ಕೆ `ತಡ್ಯ ಪರಿಹಾರ' ನೀಡಬೇಕೆಂಬುದಾಗಿ ಮಾಡಿದ ಶಾಸನ ಕುಂಬಳೆಯ ಅನಂತಪುರ ದೇವಸ್ಥಾನದಲ್ಲಿ ಈಗಲೂ ಇದೆ.
ಮಧ್ವವಿಜಯದಲ್ಲಿ ಹೇಳುವ ಪ್ರಕಾರ ಈ ಪುತ್ತೂರಲ್ಲಿ ಎಂದರೆ ಕುದಿಪುಸ್ತೂರಲ್ಲಿ ಒಬ್ಬರು ಅದ್ವೈತಪೀಠದ ಸ್ವಾಮಿಗಳು ಇದ್ದರೆಂದೂ, ಅವರಿಗೂ ಮಧ್ವಾಚಾರ್ಯರಿಗೂ `ತತ್ತ್ವವಾದ' ನಡೆದು ಮಧ್ವಾಚಾರ್ಯರು ಈ ಕುದಿಪುಸ್ತೂರಿನ ಸ್ವಾಮಿಗಳನ್ನು ಸೋಲಿಸಿದ ರೆಂದೂ, ಮುಂದೆ ಇದೇ ಸ್ವಾಮಿಗಳಿಗೂ ಮಧ್ವಾಚಾರ್ಯರಿಗೂ ಕನ್ಯಾಕುಮಾರಿಯಲ್ಲಿ ವಾದ ಜರಗಿತೆಂದೂ ಪ್ರಸ್ತಾಪವಿದೆ. ಈ ಕುದಿಪುಸ್ತೂರು ಈಗಿನ ಚೆರುವತ್ತೂರು (ಚೆರುಪುತ್ತೂರು) ಆಗಿರಬಹುದೇ ಎಂಬ ಬಗ್ಗೆಯೂ ಸಂದೇಹವಿದೆ. ಆದರೆ ಚೆರುವತ್ತೂರು ಪರಿಸರದಲ್ಲಿ ಅಂಥಾ ಒಬ್ಬರು ಸ್ವಾಮಿಗಳು ಇದ್ದ ಹಾಗೆ ಯಾವುದೇ ದಾಖಲೆಗಳಿಲ್ಲೆಂದು ಅಲ್ಲಿಯ ಸ್ಥಳೀಯರು ಹೇಳುತ್ತಿದ್ದಾರೆ.
ನಮ್ಮ ಪುತ್ತೂರಿನ ಮಹಿಮೆ ಇಷ್ಟಕ್ಕೆ ಮುಗಿಯಲಿಲ್ಲ. ಕೇರಳದ ವಡಕ್ಕನ್ಪಾಟು ಗಳಲ್ಲಿಯೂ `ಪುತ್ತೂರು' ವಿಚಾರ ಬರುತ್ತದೆ. ಕೇರಳದವರು `ಕಳರಿಪಯಟ್ಟು', ಎಂದರೆ ಗರಡಿವಿದ್ಯೆ (ಇದಕ್ಕೆ ತುಳುನಾಡನ್ ವಿದ್ಯೆ ಎಂದೂ ಹೆಸರಿದೆ.) ಕಲಿಯಲು ಪುತ್ತೂರಿನ ಚೆಗವರಲ್ಲಿಗೆ ಬರುತ್ತಾರೆ. `ಚೆಗವರು' ಅಂದರೆ ಯೋಧರು - ಗರಡಿವಿದ್ಯಾ ಪರಿಣತರು ಎಂದರ್ಥ. ಪುತ್ತೂರಿನಲ್ಲಿ `ಗರಡಿವಿದ್ಯೆ'ಯನ್ನು ಕಲಿಸುವ ಆಚಾರ್ಯರು ಇದ್ದರೆಂದು ಈ ಪ್ರಸ್ತಾವದಿಂದ ತಿಳಿದು ಬರುತ್ತದೆ.
ಅಂತೂ ಕನ್ನಡಸಾಹಿತ್ಯಕ್ಕೆ ಕಾಸರಗೋಡಿನ ಮೊದಲ ಕೊಡುಗೆ ತಳಂಗರೆಯ ವೃತ್ತಬದ್ಧವಾದ ಕಾವ್ಯರೂಪದ ಸುಂದರಶಾಸನ. ಹನ್ನೊಂದನೆಯ ಶತಮಾನದಲ್ಲಿ ಆರಂಭವಾದ ಈ ಕಾವ್ಯಕೃಷಿ ಮತ್ತೆ ವಿಕಾಸಗೊಳ್ಳಲು ಹದಿನೇಳನೆಯ ಶತಮಾನದ ವರೆಗೆ ಕಾಯಬೇಕಾಯಿತು. ಹದಿನೇಳನೆಯ ಶತಮಾನದ ಕವಿ ಪಾರ್ತಿಸುಬ್ಬನು ಪುತ್ರಕಾಮೇಷ್ಟಿ, ಪಟ್ಟಾಭಿಷೇಕ, ಪಂಚವಟಿ, ವಾಲಿಸುಗ್ರೀವರ ಕಾಳಗ, ಚೂಡಾಮಣಿ, ಸೇತುಬಂಧನ, ಅಂಗದಸಂಧಾನ, ಕುಂಭಕರ್ಣಕಾಳಗ, ಇಂದ್ರಜಿತುಕಾಳಗ (ರಾವಣವಧೆ ಬರೆಯಲಿಲ್ಲ - ನಿಜಪಟ್ಟಾಭಿಷೇಕವನ್ನೂ ಬರೆಯಲಿಲ್ಲ) ಮುಂದೆ `ಲವಕುಶರ ಕಾಳಗ' - ಎಂಬ 9 ಪ್ರಸಂಗಗಳನ್ನು ರಾಮಾಯಣದಿಂದಲೂ, ಬಾಲಲೀಲೆ ಎಂಬ ಪ್ರಸಂಗವನ್ನು ಭಾಗವತ ದಿಂದಲೂ (ಇಲ್ಲಿಯೂ ಕಂಸವಧೆ ಇಲ್ಲ) `ಐರಾವತ' ಎಂಬ ಕೃತಿಯನ್ನು ಭಾರತ ದಿಂದಲೂ ಆಯ್ದು ರಚಿಸಿದ್ದಾನೆ. ರಾವಣವಧೆ, ಕಂಸವಧೆ, ಕೌರವವಧೆ - ಈ ವಧೆಗಳ ಕುರಿತು ಪಾರ್ತಿಸುಬ್ಬ ಏಕೆ ಬರೆಯಲಿಲ್ಲ - ಎಂಬುದು ಆಶ್ಚರ್ಯದ ವಿಚಾರ.
ಪಾರ್ತಿಸುಬ್ಬನು ಪೂರ್ತಿಗೊಳಿಸದ ರಾಮಾಯಣವನ್ನು ಅವನ ಅನಂತರದವ ನಾದ ಕಾಸರಗೋಡು ಸುಬ್ಬರಾಯನು ರಚಿಸಿರುವನು. ಪಾರ್ತಿಸುಬ್ಬನು `ಕುಲವೇ ಸಂಹಾರವಾಗುವ ಕಾಲ ಬಂತು' ಎಂದು ತನ್ನ ರಾಮಾಯಣಪ್ರಸಂಗದಲ್ಲಿ ಒಂದೆಡೆ ಬರೆದ ಪರಿಣಾಮವಾಗಿ ಆತನ ವಂಶವೇ ನಶಿಸಿ, ಆತ ಏಕಾಕಿಯಾಗುವ ಸಂದರ್ಭ ಬಂತೆಂದೂ, ಅದನ್ನರಿತು ಆತ `ರಾವಣವಧೆ'ಯ ಭಾಗವನ್ನು ಕೈಬಿಟ್ಟನೆಂದೂ, ಮುಂದೆ ಶೃಂಗೇರಿಗೆ ಹೋಗಿ ಜಗದ್ಗುರುಗಳಲ್ಲಿ ಈ ವಿಚಾರ ತಿಳಿಸಿ ಅವರಿಂದ ಅನುಗ್ರಹಪಡೆದು, ಲವಕುಶರ ಕಾಳಗ ಬರೆದು ರಾಮಾಯಣ ಕಥೆಗೆ ಮಂಗಳಹಾಡಿದನೆಂದೂ, ಅದರ ಸೂಚಕವಾಗಿಯೇ ಲವಕುಶರಕಾಳಗದ ಆರಂಭದಲ್ಲಿ `ಶಂಕರಾಚಾರ್ಯರಿಗೆ ಶರಣೆಂಬೆ ನಾನು' ಎಂಬ ಪದ್ಯವನ್ನು ಬರೆದಿರುವನೆಂದೂ, ದಿ| ಬಲಿಪ್ಪ ನಾರಾಯಣ ಭಾಗವತರು ನನ್ನೊಡನೆ ಹೇಳಿದ್ದರು.1 ಈ ವಿಚಾರ ಹೌದೆಂದು ನನಗೂ ಅನಿಸಿದೆ. ಇಲ್ಲಿ ನಾನು ಊಹಿಸಿದ ಆಶ್ಚರ್ಯದ ಸಂಗತಿಯೆಂದರೆ, ರಾವಣವಧೆಯನ್ನು ಬರೆಯಲು ಹೆದರಿ ಕೈ ಬಿಟ್ಟ ಪಾರ್ತಿಸುಬ್ಬನು ಶೃಂಗೇರಿಗೆ ಹೋಗಿದ್ದನೆಂಬ ವಿಚಾರ ನನಗೆ ಇತ್ತೀಚೆಗೆ ತಿಳಿದು ಬಂತು. ಅವನ ಸಂಬಂಧಿಕರು ಕಾಸರಗೋಡಿನ ಬೀರಂತಬೈಲು ಎಂಬಲ್ಲಿದ್ದು ಅವರನ್ನು ನಾನು ಭೇಟಿಯಾದಾಗ ಅವರೇ ಈ ವಿಚಾರ ನನಗೆ ತಿಳಿಸಿದರು. ಮುಂದೆ ತೋಟಿ ತಿಮ್ಮಯ್ಯ ಭಟ್ಟ ಎಂಬ ಕವಿಯೂ ಪಾರ್ತಿಸುಬ್ಬನು ಕೈಬಿಟ್ಟ ಪ್ರಸಂಗಭಾಗವನ್ನು ಪೂರ್ತಿಗೊಳಿಸಿ `ರಾವಣಮುಕ್ತಿಪದ' ಎಂಬ ಪ್ರಸಂಗವನ್ನು ರಚಿಸಿರುವನು.
ಮಂಜೇಶ್ವರ ತಾಲೂಕಿನ ಕೋಳ್ಯೂರು ಮಾಗಣೆಯ ತೋಟಿ ಎಂಬ ಪ್ರಸಿದ್ಧ ಪುರೋಹಿತರ ಮನೆತನದಲ್ಲಿ ಹುಟ್ಟಿದ ತಿಮ್ಮಯ ಭಟ್ಟನು `ಮೀನಾಕ್ಷೀಕಲ್ಯಾಣ'ವೆಂಬ ಇನ್ನೊಂದು ಪ್ರಸಂಗವನ್ನೂ ರಚಿಸಿರುವನು. ಮುಳಿಯ ತಿಮ್ಮಪ್ಪಯ್ಯನವರು ತಮ್ಮ `ಪಾರ್ತಿಸುಬ್ಬ' ಗ್ರಂಥದಲ್ಲಿ ಒಂದೆಡೆ ಊಹಿಸಿ ಹೇಳಿದ `ವಿಠಲ ಮಂಜೇಶ್ವರ ಊರುಗಳ ಮಧ್ಯಪ್ರಾಂತದಲ್ಲಿದ್ದ ಒಬ್ಬ ಬ್ರಾಹ್ಮಣ ಕವಿಯು' ಈತನೇ ಆಗಿರಬೇಕೆಂದು ನನ್ನ ಅಭಿಪ್ರಾಯ. ಪ್ರಸಂಗದಾದಿಯಲ್ಲಿ ಕವಿಯು `ವರತಾಮ್ರಚೂಡ ಪುರದೊಳಗೆ ನೆಲಸಿರುವ ಹರಿಹರರ ಪದಕೆರಗಿ ಬೇಡಿ ಕೃತಿಗೊಲವ' ಎಂದು ತನ್ನ ಇಷ್ಟದೇವತೆಯಾದ ಕೋಳ್ಯೂರು ಶಂಕರನಾರಾಯಣ ದೇವರನ್ನೂ ಸ್ತುತಿಸಿದ್ದಾನೆ.
`ಅಂಶುಮತೀಕಲ್ಯಾಣ' ಮತ್ತು `ಕುಮುದಾಕ್ಷಿಕಲ್ಯಾಣ' ಎಂಬೆರಡು ಪ್ರಸಂಗಗಳನ್ನು ಬರೆದ ಕವಿ ಪೆರ್ಲಕ್ಕೆ ಸಮೀಪದವನು. ಕವಿಯ ಹೆಸರು ಚವರ್ಕಾಡು ಶಂಭು ಜೋಯಿಸನೆಂದು. ಚವರ್ಕಾಡನ್ನು ಈತ `ಚವರೀವನಾಲಯ' ಎಂದು ಸಂಸ್ಕೃತೀಕರಿಸಿ ಹೇಳಿದ್ದಾನೆ. ಕವಿ ತನ್ನ ಹೆಸರನ್ನು ಹೇಳಿದ ರೀತಿ ಮಾತ್ರ ತುಂಬ ಒಗಟಾದುದು:
`ಶರಧಿಯಾದಿಗೆ ಬಿಂದುವನು ಸಂ-
ಸ್ಕರಿಸಿ ನಭದಂತ್ಯಕ್ಕೆ ಶೃಂಗವ-'
ಶರಧಿಯಾದಿ ಎಂದರೆ ಶ, ಅದಕ್ಕೆ ಬಿಂದು ಕೊಟ್ಟರೆ 'ಶಂ' ಎಂದಾಗುತ್ತದೆ. ನಭದಂತ್ಯ ಎಂದರೆ ಭ, ಅದಕ್ಕೆ ಕೊಂಬು ಕೊಟ್ಟರೆ `ಭು' ಎಂದಾಗುತ್ತದೆ. ಹೀಗೆ ಗುಟ್ಟಾಗಿ ತನ್ನ ಹೆಸರನ್ನು ಸೂಚಿಸಿರುವ ಈ ಕವಿ ತನ್ನ ಪ್ರಸಂಗದ ಕೊನೆಯಲ್ಲಿ `ಉರುಡೂರ ಮಹಲಿಂಗೇಶ್ವರ'ನನ್ನೂ ಸ್ತುತಿಸಿರುವನು. ಕುದ್ರೆಪ್ಪಾಡಿಯನ್ನು `ಹಯಪುರ-ತುರಗಪುರ' ಎಂದೆಲ್ಲ ಸಂಬೋಧಿಸಿರುವ ಕುದ್ರೆಪ್ಪಾಡಿ ಈಶ್ವರಯ್ಯನು ಬರೆದಿರುವ ಏಕೈಕ ಪ್ರಸಿದ್ಧಕೃತಿ `ಸುಧನ್ವಕಾಳಗ'. ಈತನ ಕಾಲ ಕ್ರಿ.ಶ. 1800-1860ರ ಮಧ್ಯಕಾಲ ಎಂದು ಊಹಿಸಿ ಹೇಳಿದವರು ದಿ. ಸಿರಿಬಾಗಿಲು ವೆಂಕಪ್ಪಯ್ಯನವರು. ಕಾರಡ್ಕದ ಮುಂಡೊಡಲಲ್ಲಿರುವ ನಾರಾಯಣ ಕವಿ `ಸತ್ಯಭಾಮಾಪರಿಣಯ' ಮತ್ತು `ರೇವತೀ ಕಲ್ಯಾಣ'ವೆಂಬ ಎರಡು ಯಕ್ಷಗಾನಪ್ರಸಂಗಗಳನ್ನೂ `ಅನಂತವ್ರತಮಹಾತ್ಮೆ' ಎಂಬ ಒಂದು ಷಟ್ಪದೀಗ್ರಂಥವನ್ನೂ ಬರೆದಿರುವನು.
ಖ್ಯಾತ ಹರಿದಾಸನೂ ಯಕ್ಷಗಾನಭಾಗವತನೂ ಎನಿಸಿರುವ ಮಧೂರು ಸಮೀಪದ ಬನ್ನೂರಿನ ನಾರಾಯಣ ಭಾಗವತನು ರಚಿಸಿದ ಏಕೈಕ ಕೃತಿ `ಮೂಲಕಾಸುರ ಕಾಳಗ'. ಪುಂಡೂರು ಸಮೀಪದ ಆಲಂಕೂಡ್ಲು ರಾಮಕೃಷ್ಣಯ್ಯ ರಚಿಸಿದ ಏಕೈಕಕೃತಿ `ವಾಲಿವಿಜಯ'.
ಬಾಯಾರುಗ್ರಾಮದ ಪೆರುವಡಿಯಲ್ಲಿ ಜೀವಿಸಿದ್ದ ಸಂಕಯ್ಯ ಭಾಗವತರು ರಚಿಸಿದ `ಕೃಷ್ಣಾರ್ಜುನಕಾಳಗ' ಮತ್ತು `ಬಭ್ರುವಾಹನಕಾಳಗ'ಗಳು ಯಕ್ಷಗಾನ ರಂಗಭೂಮಿಯನ್ನೇ ಬೆಳಗಿದ ಅತ್ಯುನ್ನತಕೃತಿಗಳು ಎನ್ನಬಹುದು. ಇವರು ಇದಲ್ಲದೆ `ಘಟೋತ್ಕಚನ ಕಾಳಗ', `ಅತಿಕಾಯ ಇಂದ್ರಜಿತು ಮೈರಾವಣ ಕಾಳಗ', `ಪ್ರಮೀಳಾಸಂಧಾನ' ಎಂಬ ಇನ್ನಿತರ ಉತ್ತಮಕೃತಿಗಳನ್ನೂ ರಚಿಸಿರುವರು. ಮಾತ್ರವಲ್ಲ ತುಳು ಯಕ್ಷಗಾನಕ್ಕೆ ನಾಂದಿ ಹಾಡಿದ ಆದಿಪುರುಷರಿವರು. ಇವರ `ಪಂಚವಟಿ-ವಾಲಿಸುಗ್ರೀವರ ಕಾಳಗ'ವೆಂಬ ತುಳುಪ್ರಸಂಗವು ಒಂದು ಹೊಸ ಪ್ರಯೋಗವಾಗಿದೆ.
ಪಾರ್ತಿಸುಬ್ಬನ ಹುಟ್ಟೂರಾದ ಕುಂಬಳೆಯಲ್ಲಿಯೇ ಹುಟ್ಟಿದ ನರಸಿಂಹ ನಾಯಕ ರೆಂಬ ಕವಿಗಳು `ಹರಿಶ್ಚಂದ್ರೋಪಾಖ್ಯಾನ', `ಸತ್ಯನಾರಾಯಣಕತೆ', ಮತ್ತು `ಪಾದುಕಾ ಪ್ರದಾನ'ವೆಂಬ ಮೂರು ಪ್ರಸಂಗಗಳನ್ನು ರಚಿಸಿರುವರೆಂದು ತಿಳಿದುಬಂದಿದೆ. ಆದರೆ ನಾನು ಈ ಪ್ರಸಂಗಗಳನ್ನು ಇನ್ನೂ ನೋಡಿಲ್ಲ.
ಮಯ್ಯರ ಮನೆತನದವನೆನ್ನಲಾದ ತಲೆಪ್ಪಾಡಿಯ ಕವಿಯೊಬ್ಬ `ರಾಜಸೂಯಾಧ್ವರ' ಮತ್ತು `ಗಿರಿಜಾಕಲ್ಯಾಣ'ವೆಂಬ - ಈಗ ರಂಗಭೂಮಿಯಲ್ಲಿ ಬಳಕೆಯಲ್ಲಿರುವ ಎರಡು ಕೃತಿಗಳನ್ನು ರಚಿಸಿರುವನು. ರಾಜಸೂಯಾಧ್ವರ ತಾಳಮದ್ದಳೆಗೂ ಒಪ್ಪುವ ಅತ್ಯುತ್ತಮ ಕೃತಿ. ಇಂತಹ ಸುಪ್ರಸಂಗವೊಂದನ್ನು ರಚಿಸಿದವನು, ಕೇರಳ ಕರ್ನಾಟಕ ಗಡಿ ಪ್ರದೇಶ ವೆನಿಸಿದ ತಲೆಪ್ಪಾಡಿಯವನು. ತಲೆಪ್ಪಾಡಿಯನ್ನು ಈತ `ಶಿರವಟಿಪುರ' ಎಂದು ತನ್ನ ಪ್ರಸಂಗದಲ್ಲಿ ಹೆಸರಿಸಿದ್ದಾನೆ.
ಜತ್ತಿ ಈಶ್ವರ ಭಾಗವತರು ಕನ್ನಡದ ಮಹಾಪಂಡಿತರು. ಹಳಗನ್ನಡ ಕಾವ್ಯಗಳ ಚೆನ್ನಾದ ಪರಿಚಯವುಳ್ಳವರು. ಅದಕ್ಕೆ ತಕ್ಕಂತೆ ಅವರು `ಮಕರಾಕ್ಷಕಾಳಗ'ವೆಂಬ ಪ್ರೌಢ ಪ್ರಸಂಗವೊಂದನ್ನು ರಚಿಸಿರುವರು. ರಂಗಭೂಮಿಗೆ ಕಳೆಯೇರಿಸಿದ ಕೃತಿ - `ಮಕರಾಕ್ಷ ಕಾಳಗ'. ಇವರು `ನಂದಿನೀವಿಲಾಸ', `ರೇವತೀವಿಲಾಸ', `ಚಂದ್ರಕಾಂತಿ ಕಲ್ಯಾಣ', ಮತ್ತು `ವರಾಹಚರಿತ್ರ' ಎಂಬ ಪ್ರಸಂಗಗಳನ್ನೂ ರಚಿಸಿರುವರು. ಪಾರ್ತಿಸುಬ್ಬನ ರಾಮಾಯಣ ಪ್ರಸಂಗಗಳು ಆ ಕಾಲಕ್ಕೆ ಅತ್ಯುತ್ತಮಕೃತಿಗಳಾಗಿದ್ದರೂ, ಮುಂದೆ ರಂಗಭೂಮಿಯ ಅಭಿರುಚಿ ಬೆಳೆಯುತ್ತಾ ಹೋದಂತೆ, ಪ್ರಸಂಗಸಾಹಿತ್ಯದಲ್ಲಿ ಕೆಲವೊಂದು ಬದಲಾವಣೆ ಗಳಾದುದನ್ನು ನಾವು ಕಾಣುತ್ತೇವೆ. ಈ ಬದಲಾವಣೆಯನ್ನು ಗಮನಿಸಿ, ಜತ್ತಿ ಈಶ್ವರ ಭಾಗವತರು ಪಾರ್ತಿಸುಬ್ಬನ ಕೃತಿಗಿಂತ ಭಿನ್ನವಾದ ಹೊಸ ರಾಮಾಯಣ ಪ್ರಸಂಗ ವೊಂದನ್ನು ರಚಿಸಿರುವರು. `ಸಂಪೂರ್ಣರಾಮಾಯಣ' ಎಂದು ಅದಕ್ಕೆ ನಾಮಕರಣ ವನ್ನು ಮಾಡಿರುವರು.
ಕುಂಬಳೆಗೆ ಸಮೀಪದ ಮೇಣ ರಾಮಪ್ಪ ಭಟ್ಟರ ಎರಡು ಅಪೂರ್ವಕೃತಿಗಳು - `ಸುಂದೋಪಸುಂದೋಪಾಖ್ಯಾನ' ಮತ್ತು `ಮದನಾಂಗಿ ಕಲ್ಯಾಣ', ಪಟ್ಟಾಜೆ ಕೇಶವ ಭಟ್ಟರ ಏಕೈಕ ಕೃತಿ `ದಶರಥೋತ್ಪತ್ತಿ ಸುಮಿತ್ರಾ ಸ್ವಯಂವರ.'
ಇತ್ತೀಚೆಯವರಾದ ದಿ| ಬಲಿಪ್ಪ ನಾರಾಯಣ ಭಾಗವತರು ಯಕ್ಷಗಾನರಂಗಕ್ಕೆ ನೀಡಿದ ಕೊಡುಗೆ ಅಪಾರ. ಅವರು ರಂಗಭೂಮಿಯಲ್ಲಿ ಅನೇಕ ಹೊಸ ಪ್ರಯೋಗಗಳನ್ನು ಮಾಡಿ, ಅದನ್ನು ತಿದ್ದಿ ಸಂಸ್ಕರಿಸಿದವರು. ಅದೇ ರೀತಿ ಯಕ್ಷಗಾನ ಸಾಹಿತ್ಯಪ್ರಪಂಚಕ್ಕೆ ಅವರು ಸುಮಾರು ಇಪ್ಪತ್ತು ಅತ್ಯುತ್ತಮ ಪ್ರಸಂಗಗಳನ್ನು ರಚಿಸಿಕೊಟ್ಟಿರುವರು. ಸ್ವತಃ ಭಾಗವತರೂ ವಿದ್ವಾಂಸರೂ ಪ್ರಯೋಗಶೀಲರೂ ಆಗಿರುವ ಬಲಿಪ್ಪರ ಪ್ರಸಂಗಗಳು ರಂಗಭೂಮಿಯಲ್ಲಿ ಎಂದಿಗೂ ಸೋಲುವುದಿಲ್ಲ. ಪಾರ್ತಿಸುಬ್ಬನ ಕಾಲದಿಂದ ಕೊಂಚ ಕೊಂಚವೇ ಬದಲಾಗುತ್ತಾ ಬಂದ, ಯಕ್ಷಗಾನಪ್ರಸಂಗಗಳ ಆಶಯಗಳಿಗೆ, ಬಲಿಪ್ಪರು ಒಂದು ಹೊಸ ಶೈಲಿಯನ್ನೇ ಒದಗಿಸಿದಂತಾಗಿದೆ. ಉದಾಹರಣೆಗೆ ಅವರ `ಕೃಷ್ಣಾರ್ಜುನ ಕಾಳಗ'ವನ್ನೇ ನೋಡಿ. ಸಂಕಯ್ಯ ಭಾಗವತರ ಕೃಷ್ಣಾರ್ಜುನ ಕಾಳಗಕ್ಕಿಂತ ಭಿನ್ನವಾಗಿ ಈ ಕೃತಿ ತನ್ನತನವನ್ನು ಸಾರುತ್ತಿದೆ. ಇಲ್ಲಿ ರಂಗಭೂಮಿಯಲ್ಲಿ ಕಳೆಯೇರಬಹುದಾದ ಅನೇಕ ಹೊಸ ಆಶಯಗಳಿವೆ. ಈ ಹೊಸತನವನ್ನು ನಾವು ಯಾರೂ ಗಮನಿಸಿಲ್ಲ. ಬಲಿಪ್ಪರ ರಂಗತಂತ್ರಜ್ಞತೆ ಮತ್ತು ಪಳಗಿದ ಸಾಹಿತ್ಯಪ್ರವಣತೆಯ ಮಹತ್ತ್ವ ಅರಿವಾಗುವುದು ಇಲ್ಲಿ!
ಯಕ್ಷಗಾನಸಾಹಿತ್ಯಕ್ಕೆ ತಮ್ಮ ಅಳಿಲಸೇವೆ ಸಲ್ಲಿಸಿದ ಇತರ ನಾಲ್ವರು ಕವಿಗಳೆಂದರೆ, `ವಿಜಿತಾಶ್ವವಿಜಯ'ವನ್ನು ಬರೆದ ಪುಂಡೂರು ರಾಮಚಂದ್ರ ಪುಣಿಂಚತ್ತಾಯರು. `ಶಂಬರಾಸುರ ಕಾಳಗ'ವನ್ನು ಬರೆದ ಮಂಜೇಶ್ವರ ಶ್ರೀಧರ ಭಟ್ಟರು.`ಕಾಳಿಂಗಮರ್ದನ' ವನ್ನು ಬರೆದ ಪುಂಡೂರು ದಾಮೋದರ ಪುಣಿಂಚತ್ತಾಯರು ಹಾಗೂ `ವಿಶ್ರುತಾಖ್ಯ ವಿಜಯ'ವನ್ನು ಬರೆದ ಕಂಡೆತ್ತೋಡಿ ನಾರಾಯಣ ಕೇಕುಣ್ಣಾಯರು. ಪುಂಡೂರು ದಾಮೋದರ ಪುಣಿಂಚತ್ತಾಯರು `ಕಚದೇವಯಾನಿ' ಎಂಬ ಸಂಗೀತನಾಟಕವನ್ನೂ `ಶೋಭನಗೀತೆ'ಯೆಂಬ ಹಾಡುಗಳ ಸಂಕಲನವನ್ನೂ `ಸುಬ್ರಹ್ಮಣ್ಯ ವಿವಾಹ, ನೆಲ್ಲಿತ್ತಟ್ಟು ಕ್ಷೇತ್ರಮಹಾತ್ಮೆ, ಕುಂಬಳೆಸೀಮೆತ ಚರಿತ್ರೆ (ತುಳು)' ಎಂಬ ಇನ್ನಿತರ ಪದ್ಯಕೃತಿಗಳನ್ನೂ ಹಲವಾರು ರಾಷ್ಟ್ರಗೀತಗಳನ್ನೂ ರಚಿಸಿದ್ದಾರೆ. ಪುಂಡೂರು ಲಕ್ಷ್ಮೀನಾರಾಯಣ ಪುಣಿಂಚ ತ್ತಾಯರು `ಸ್ವರಾಜ್ಯಗೀತಾಮೃತ' `ರಾಷ್ಟ್ರಗೀತಾರತ್ನಾಕರ', `ಲೀಲೆ' ಮುಂತಾದ ರಾಷ್ಟ್ರಗೀತ ಗಳ ಸಂಕಲನವನ್ನೇ ರಚಿಸಿದ್ದಾರೆ.
ಪ್ರಸಿದ್ಧ ಯಕ್ಷಗಾನಭಾಗವತರಾದ ಪುತ್ತಿಗೆ ರಾಮಕೃಷ್ಣ ಜೋಯಿಸರು `ಶ್ರೀರಾಮ ಪಟ್ಟಾಭಿಷೇಕ' ಎಂಬ ಪ್ರಸಂಗವನ್ನೂ, ಅವರ ಸಹೋದರ ಡಿ. ವಿ. ಹೊಳ್ಳರು `ಶ್ರೀಕೃಷ್ಣ ವಿಜಯ', `ಅಕ್ಷಯಾಂಬರವಿಲಾಸ', `ದಾನಶೂರಕರ್ಣ', `ತ್ರಿಪುರಮಥನ', `ವಿಷ್ಣುಲೀಲೆ' `ಗಣೇಶ ಮಹಾತ್ಮೆ', `ಮಧುಪುರಮಹಾತ್ಮೆ', `ಅಶೋಕಸುಂದರಿ', `ಶ್ರೀರಾಮ ಪಟ್ಟಾಭಿಷೇಕ', `ತುಲಸೀಪರಿಣಯ', `ಗಜೇಂದ್ರಮೋಕ್ಷ', `ಜನಾರ್ದನಕಾಳಗ' - ಎಂಬ ಹನ್ನೆರಡು ಉತ್ತಮಕೃತಿಗಳನ್ನು ರಚಿಸಿರುವರು. ಅಡೂರು ಬಳಕಿಲ ವಿಷ್ಣಯ್ಯನವರು `ದಶಾವತಾರ', `ಶಲ್ಯಾವಸಾನ', `ಸಹದೇವವಿಜಯ', `ವೀರಮಕರಾಕ್ಷ', `ದೇವೀಮಹಾತ್ಮೆ' `ಭಕ್ತಮಾರ್ಕಂ ಡೇಯ' `ಪರಶುರಾಮಕ್ಷೇತ್ರೋತ್ಪತ್ತಿ', `ಸ್ವರಾಜ್ಯವಿಜಯ', `ಚಂದ್ರಗುಪ್ತ ಚರಿತ್ರೆ', `ಸುಭದ್ರಾ ಪರಿಣಯ', `ಸುಂದೋಪಸುಂದಾಖ್ಯಾನ', `ಅತಿಕಾಯ ಇಂದ್ರಜಿತು ಮೈರಾವಣ ಕಾಳಗ', `ಜರಾಸಂಧವಧೆ', `ವಿಕ್ರಮಾದಿತ್ಯ ಚರಿತ್ರೆ' - ಹೀಗೆ 14 ಕೃತಿಗಳನ್ನು ರಚಿಸಿದ್ದಾರೆ.
ಯಕ್ಷಗಾನದಲ್ಲಿ ಹೊಸ ಆಶಯಗಳನ್ನು ತುಂಬಿ, ರಂಗಸಾಹಿತ್ಯಕ್ಕೆ ಹೊಸ ರೂಪಗಳನ್ನು ಕೊಡುವ ಪ್ರಯತ್ನ ನಮ್ಮೂರಲ್ಲಿ ಆಯಾ ಕಾಲಕ್ಕೆ ಸಾಕಷ್ಟು ನಡೆದಿದೆ ಯೆಂಬುದಕ್ಕೆ ಮೇಲಿನ ಕೃತಿಗಳೇ ಸಾಕ್ಷಿ. ಇಂತಹ ರಂಗತಂತ್ರಜ್ಞರಲ್ಲಿ ನಾವು ಪಾರ್ತಿಸುಬ್ಬ ನನ್ನು ಹೊರತಾಗಿ ಹೇಳುವುದಾದರೆ, ಬಾಯಾರು ಸಂಕಯ್ಯ ಭಾಗವತರು, ಜತ್ತಿ ಈಶ್ವರ ಭಾಗವತರು, ಬಲಿಪ್ಪ ನಾರಾಯಣ ಭಾಗವತರು, ಡಿ. ವಿ. ಹೊಳ್ಳರು, ಅಡೂರು ಬಳಕಿಲ ವಿಷ್ಣಯ್ಯನವರು ಮತ್ತು ಕೀರಿಕ್ಕಾಡು ವಿಷ್ಣು ಭಟ್ಟರು - ಈ ಆರು ಮಂದಿಯನ್ನು ಹೆಸರಿಸಬಹುದು. ಕೀರಿಕ್ಕಾಡು ವಿಷ್ಣು ಭಟ್ಟರು ಯಕ್ಷರಂಗಕ್ಕೆ ಅನೇಕ ಹೊಸ ಪ್ರಸಂಗ ಗಳನ್ನು ಒದಗಿಸಿಕೊಟ್ಟ ಕವಿ. ಅವರು ಉತ್ತಮ ಕಾದಂಬರಿಕಾರರೂ ಹೌದು. ಒಂದು ಪ್ರಸಿದ್ಧ ಪ್ರಸಂಗವು (ಉದಾ: ದೇವೀಮಹಾತ್ಮೆ, ಪ್ರಹ್ಲಾದಚರಿತೆ, ಸಮುದ್ರಮಥನ, ಕೃಷ್ಣಾರ್ಜುನಕಾಳಗ, ರುಕ್ಮಿಣೀಸ್ವಯಂವರ, ನರಕಾಸುರವಧೆ, ಬ್ರಹ್ಮಕಪಾಲ, ಶಕುಂತಲಾ ಪರಿಣಯ ಇತ್ಯಾದಿ) ಚಾಲ್ತಿಯಲ್ಲಿದ್ದಾಗ, ಅದನ್ನು ಕೈಬಿಟ್ಟು ಅದೇ ಕಥೆಯ ಹೊಸ ಪ್ರಸಂಗವನ್ನು ಬರೆಯಲು ಶ್ರಮಪಟ್ಟ ಬಲಿಪ್ಪರಲ್ಲಿ ಹೊಸ ಪ್ರಯೋಗಶೀಲತಗೆ ಸಂಬಂಧಿಸಿದ ಕಾಳಜಿ ಇದ್ದುದನ್ನು ನಾವು ಗಮನಿಸಬಹುದು. ಜತ್ತಿ ಈಶ್ವರ ಭಾಗವತರ ಪ್ರಸಿದ್ಧ ಪ್ರಸಂಗ `ಮಕರಾಕ್ಷಕಾಳಗ' ಇದ್ದಾಗಲೇ ಬಳಕಿಲ ವಿಷ್ಣಯ್ಯನವರು `ವೀರಮಕರಾಕ್ಷ' ಎಂಬ ಪ್ರಸಂಗ ಬರೆಯಲು ಕಾರಣವೇನು? ಜತ್ತಿಯವರ ಪಾಂಡಿತ್ಯಪೂರ್ಣವಾದ ಪ್ರೌಢಶೈಲಿಯನ್ನು ಇಲ್ಲಿ ಸರಳೀಕರಿಸುವ ಪ್ರಯತ್ನ ಕಾಣುತ್ತದೆ. `ಶ್ರೀಕೃಷ್ಣವಿಜಯ', `ದಾನ ಶೂರಕರ್ಣ', `ಶ್ರೀರಾಮಪಟ್ಟಾಭಿಷೇಕ'ಗಳನ್ನು ಬರೆದ ಡಿ. ವಿ. ಹೊಳ್ಳರಲ್ಲೂ ಈ ರೀತಿಯ ಎಂದರೆ ಯಕ್ಷಗಾನಕ್ಕೆ ಹೊಸ ಆಶಯಗಳನ್ನು ದತ್ತಿನೀಡುವ ಕಾಳಜಿ ಇದ್ದಂತೆ ಕಾಣುತ್ತದೆ. ಸಂಕಯ್ಯ ಭಾಗವತರಂತೂ ನವರಸಪ್ರಿಯರು. ಪ್ರತಿನಿಮಿಷಕ್ಕೂ ರಂಗಭೂಮಿಯನ್ನು ಸಪ್ಪೆಯಾಗಿರಿಸದ ಪ್ರಸಂಗಗಳು ಅವರವು. ಅವರು ಪ್ರೇಕ್ಷಕರ ನಾಡೀಬಡಿತವನ್ನು ಚೆನ್ನಾಗಿ ಬಲ್ಲವರು. ಕೃಷ್ಣಾರ್ಜುನಕಾಳಗದ ಕೊನೆಯ ಸನ್ನಿವೇಶವಂತೂ, ಪ್ರೇಕ್ಷಕರಿಗೆ ದಿಗಿಲು ಮತ್ತು ಆವೇಶ ಹುಟ್ಟಿಸುವಂಥದು. ಕೀರಿಕ್ಕಾಡು ವಿಷ್ಣು ಭಟ್ಟರು ಇತರರಾರೂ ಹೇಳದ, ರಚಿಸದ ಹೊಸ ಕಥಾನಕಗಳನ್ನು ಯಕ್ಷಗಾನರಂಗಭೂಮಿಗೆ ಅರ್ಪಿಸಿ ಕೃತಾರ್ಥರಾದವರು. ಅವರ `ಶ್ವೇತಕುಮಾರಚರಿತ್ರೆ' ಯಕ್ಷರಂಗಭೂಮಿಗೇ ಅದ್ಭುತ ಕೊಡುಗೆ. ಅದು ಚಿರಕಾಲ ಉಳಿಯಬಲ್ಲ ಒಂದು ಅಪೂರ್ವ ಕಲಾಕೃತಿ.
ಪೆರಡಾಲ ಕೃಷ್ಣಯ್ಯನವರು `ಯಾದವಾಭ್ಯುದಯ' ಮತ್ತು `ಗೆಲವಿನ ಕತ್ತಿ' ಎಂಬ ಪ್ರಸಂಗಗಳನ್ನು ರಚಿಸಿರುವರು. ಹಾಗೆಯೇ ನಮ್ಮ ಗತಿಸಿಹೋದ ಕವಿಗಳಲ್ಲಿ ಯು. ಬಿ. ಗೋವಿಂದಯ್ಯನವರ `ಮರುತಾಶ್ವಮೇಧ' ಹಾಗೂ ಉಳಿಯುತ್ತಾಯ ವಿಷ್ಣು ಆಸ್ರರ `ಹಯಗ್ರೀವ ಚರಿತ್ರೆ' - ಕೃತಿಗಳನ್ನೂ ಹೆಸರಿಸಬಹುದು.
ನಾರಂಬಾಡಿ ಸುಬ್ಬಯ್ಯ ಶೆಟ್ಟರ `ದೇವುಪೂಂಜ ಪ್ರತಾಪ', `ತುಳುನಾಡ ಸಿರಿ', `ಕೋರ್ದಬ್ಬುಬಾರಗ', `ದಳವಾಯಿ ದುಗ್ಗಣ್ಣ', `ಸರ್ಪಶಕ್ತಿ' ಪ್ರಸಂಗಗಳಲ್ಲಿ ತುಳುನಾಡಿನ ಜಾನಪದ ಸತ್ತ್ವ ತುಂಬಿದ್ದು ಅವು ರಂಗಭೂಮಿಯಲ್ಲಿ ಜಯಭೇರಿ ಬಾರಿಸಿವೆಯೆಂಬುದೂ ಉಲ್ಲೇಖನೀಯ.
ಕನ್ನಡಸಾಹಿತ್ಯಕ್ಕೆ ಕಾಸರಗೋಡಿನ ಕೊಡುಗೆ ಕೇವಲ ಪ್ರಸಂಗಸಾಹಿತ್ಯವಷ್ಟೇ ಇಲ್ಲ, ಇತರ ಪ್ರೌಢ ಸಾಹಿತ್ಯಪ್ರಕಾರಗಳಿಗೂ ನಮ್ಮೂರಿನಿಂದ ಅಪೂರ್ವ ಕೊಡುಗೆ ಸಂದಿದೆ. ಈ ನಿಟ್ಟಿನಲ್ಲಿ ಮೊದಲು ಹೆಸರಿಸಬೇಕಾದದು ದಿ. ಮಂಜೇಶ್ವರ ಗೋವಿಂದ ಪೈಗಳ ಅಮರ ಸಾಹಿತ್ಯದ ಕುರಿತು. ವೈಶಾಖಿ, ಗೊಲ್ಗೊಥಾ, ಹೆಬ್ಬೆರಳು -ಅವರ ಅಮರಕೃತಿಗಳು. ಅದರಲ್ಲೂ ಖಂಡಕಾವ್ಯಗಳ ಸಾಲಿನಲ್ಲೇ ಅದ್ವಿತೀಯವಾದ ಕೃತಿ ಗೊಲ್ಗೊಥಾ. 377 ಪಂಕ್ತಿಗಳಲ್ಲಿ ಏಸುಕ್ರಿಸ್ತನ ಜೀವನದ ಚರಮಾಧ್ಯಾಯವನ್ನು ವರ್ಣಿಸುವ ಈ ಕೃತಿಯಲ್ಲಿ ಮಾನವಧರ್ಮದ ಹಿರಿಮೆ ವ್ಯಕ್ತವಾಗುತ್ತದೆ. ಒಟ್ಟು ಈ ಕಾವ್ಯವನ್ನು ಒಂದು ಅಪೂರ್ವ ಮಾನವೀಯದೃಷ್ಟಿಯಿಂದ ಅವರು ರಚಿಸಿದ್ದಾರೆ. ಈ ಕಾವ್ಯದ ಮೂಲಕ ಗೋವಿಂದ ಪೈಗಳು ಇತರ ಕರ್ನಾಟಕದ ಕವಿಗಳಿಗಿಂತಲೂ ತುಂಬ ಎತ್ತರದಲ್ಲಿ ನಿಲ್ಲುತ್ತಾರೆ. ಯೇಸು ವಿನ ಚರಮದಿನವನ್ನು ವರ್ಣಿಸುತ್ತಾ ಪೈಗಳು ಹೇಳುತ್ತಾರೆ: ``ಲೋಕದ ಪಾಪದ ಸಾಲ ಅಂದು ಹೋಗುವುದೆಂದು ತಂಗಾಳಿ ಬೀಸುತ್ತದೆ. ದೇವಸುತನು ಸ್ವರ್ಗಕ್ಕೆ ಬರುವನೆಂಬ ಸಂಭ್ರಮದಿಂದ ಅಂದು ಹಕ್ಕಿಗಳು ಉಲಿದುವು. ಇಂಥ ದುರ್ದಿನವನ್ನು ಹೇಗೆ ಮೂಡಿಸುವುದೆಂಬ ಚಿಂತೆಯಿಂದಲೇ ಸೂರ್ಯ ಉದಯಿಸುತ್ತಾನೆ. ವಾಕ್ಯಂ ರಸಾತ್ಮಕಂ ಕಾವ್ಯಂ- ಎಂದು ಕವಿ ವಿಶ್ವನಾಥ ಹೇಳಿದಂತೆ - ಇಲ್ಲಿಯ ಪ್ರತಿವಾಕ್ಯವೂ ಕಾವ್ಯದ ಸ್ರೋತಸ್ಸನ್ನು ಹರಿಸುತ್ತಾ ಹೋಗುತ್ತದೆ. ಇಂತಹವರನ್ನು ಮಹಾಕವಿಯೆನ್ನದೆ ಇನ್ನಾರನ್ನು ಹೇಳಬೇಕು? ಹೀಗೆ ಪೈಗಳೇ ಕರ್ನಾಟಕಕ್ಕೆ ಕಾಸರಗೋಡಿನ ಮಹತ್ತ್ವದ ಕೊಡುಗೆ ಯಾಗುತ್ತಾರೆ.
ಇನ್ನೊಂದು ಹೆಸರಿಸಬಹುದಾದ ಅಪೂರ್ವ ಕೃತಿ `ಹೆಬ್ಬೆರಳು'. ಇದು ಗೀತ ನಾಟಕದ ಪ್ರಕಾರದಲ್ಲಿದೆ. ನಾಟಕ ಇಲ್ಲಿ ಮುಖ್ಯವಲ್ಲ. ಈ ನಾಟಕದಲ್ಲಿ ಪ್ರಕಟವಾದ ಆಶಯಕ್ಕೆ ನಾವು ಬೆರಗಾಗುತ್ತೇವೆ. ಒಂದು ಉತ್ತಮ ಆಧುನಿಕನಾಟಕದಲ್ಲಿ ಕಂಡು ಬರಬಹುದಾದ ಸಂಘರ್ಷ ಇಲ್ಲಿದೆ; ವಿಚಾರಧಾರೆ ಇಲ್ಲಿದೆ. ಅನೇಕ ಮಾನವೀಯ ಮೌಲ್ಯಗಳು ಇಲ್ಲಿವೆ. ದ್ರೋಣಾಚಾರ್ಯ ಮತ್ತು ಏಕಲವ್ಯ ಎಂಬೆರಡು ಪಾತ್ರಗಳು ಇಲ್ಲಿ ಅತ್ಯಪೂರ್ವವಾದ ಕಲ್ಪನೆಗಳೊಂದಿಗೆ ನಮಗೆ ಇದಿರಾಗುತ್ತವೆ.
ಪ್ರೇಕ್ಷಕರೋ ಓದುಗರೋ ಆದ ನಾವು ಒಂದು ಅರಸೊತ್ತಿಗೆಯ ಕೆಳಗೆ ಅಸ್ವತಂತ್ರ ರೆನಿಸಿದ ದ್ರೋಣಾಚಾರ್ಯರ ಕಡೆಗೆ ವಾಲಬೇಕೇ? ಅಥವಾ ಗುರುಭಕ್ತಿಯ ಪರಮಾವಧಿ ಯಲ್ಲಿ ತನ್ನತನವನ್ನೇ ಮರೆತು ಅನಾಥವಾಗುತ್ತಿರುವ ಏಕಲವ್ಯನಿಗಾಗಿ ಮರುಗಬೇಕೇ? ಎಂಬ ತಾಕಲಾಟದಲ್ಲಿ ತೊಳಲಾಡುತ್ತೇವೆ.
ಗೋವಿಂದ ಪೈಗಳು ಕವಿಗಳಷ್ಟೇ ಅಲ್ಲ ಸಂಶೋಧಕರೂ ಹೌದು. ಕರ್ನಾಟಕದ ಪ್ರಾಚೀನಕವಿಗಳ ಕಾಲನಿರ್ಣಯವಿಚಾರದಲ್ಲಿ ಪೈಗಳ ಅಭಿಪ್ರಾಯಗಳಿಗೆ ನಾಡಿನುದ್ದಕ್ಕೂ ವಿದ್ವಾಂಸರು ಮನ್ನಣೆ ಕೊಟ್ಟದ್ದನ್ನು ಕಾಣುತ್ತೇವೆ.
ಪೈಗಳದು ರಾಜ್ಯಮಟ್ಟದ - ರಾಷ್ಟ್ರಮಟ್ಟದ ಸಂಶೋಧನೆ ಮಾತ್ರವಲ್ಲ; ಅದು ಅಂತಾರಾಷ್ಟ್ರೀಯ ಮಟ್ಟದ ಸಂಶೋಧನೆಯೆಂದೂ ಹೇಳಬಹುದು. ಉದಾ: ಗ್ರೀಸ್ ದೇಶದ ಭೂಗೋಳತಜ್ಞನಾದ ಪ್ತೊಲೆಮಿಯ ಬರಹಗಳಲ್ಲಿ ಕಂಡು ಬರುವ ಹೆಸರುಗಳು ಕರ್ನಾಟಕ ಪ್ರದೇಶದವು ಎಂದು ಅವರು ನಿಖರವಾಗಿ ಸಾರಿದ್ದಾರೆ. ಗ್ರೀಕ್ ಭಾಷೆ ಯಲ್ಲಿದ್ದು ಯಾರಿಗೂ ಅರ್ಥವಾಗದ ಈ ವಿಚಾರವನ್ನು ಪೈಗಳು ಅರ್ಥಮಾಡಿ ವಿಶ್ಲೇಷಿಸಿದ್ದಾರೆ.
ಮೌರ್ಯ ಚಂದ್ರಗುಪ್ತನು ಗ್ರೀಕ್ ದೇಶದ ಸೆಲ್ಯುಕಸನನ್ನು ಸೋಲಿಸಿದನೆಂದೂ ಅವನಿಗೆ ಚಕ್ರವರ್ತಿ ಎಂಬರ್ಥದ `ಬಸಿಲೆಸ್' ಎಂಬ ಬಿರುದಿತ್ತೆಂದೂ, ಅದರಿಂದಲೆ `ವೃಷಲ' ಎಂಬ ಪದ ಹುಟ್ಟಿತೆಂದೂ ಅವರು ಹೇಳಿದ್ದಾರೆ. ವಿಶಾಖದತ್ತ ಕವಿಯು ಬರೆದ `ಮುದ್ರಾರಾಕ್ಷಸ'ವೆಂಬ ನಾಟಕದಲ್ಲಿ ಚಾಣಕ್ಯನು ಚಂದ್ರಗುಪ್ತನನ್ನು ವೃಷಲನೆಂದೇ ಸಂಬೋಧಿಸಿರುವ ವಿಚಾರ ಇಲ್ಲಿ ಗಮನಾರ್ಹ.
ಕವಿರನ್ನನ ಗದಾಯುದ್ಧವನ್ನು ಸಮರ್ಥರೀತಿಯಲ್ಲಿ ಸಂಪಾದಿಸಿ, ಗ್ರಂಥ ಸಂಪಾದನೆಯ ಕಾರ್ಯದಲ್ಲಿಯೂ ಕಾಸರಗೋಡಿನವರು ಹಿಂದಲ್ಲ - ಎಂದು ಪ್ರಪ್ರಥಮವಾಗಿ ತೋರಿಸಿಕೊಟ್ಟ ದಿ| ಕಾವೇರಿಕಾನ ಕೃಷ್ಣ ಭಟ್ಟರದು ಅದ್ಭುತ ಸಾಹಸ. ಅವರ `ಪಂಚಾಮೃತ'ವೂ ಒಂದು ಉತ್ತಮಕೃತಿ.
ಅನುವಾದಸಾಹಿತ್ಯದಲ್ಲಿ ಹೆಸರಾದವರು ದಿ| ಮೊಳೆಯಾರ ಶಂಕರನಾರಾಯಣ ಭಟ್ಟರು. ಇವರಲ್ಲದೆ, ಮೊಳೆಯಾರ ಮನೆತನದ ಇನ್ನೂ ಹಲವು ವಿದ್ವಾಂಸರು ಸಾಹಿತ್ಯಸೇವೆ ಮಾಡಿ ಕೀರ್ತಿಗಳಿಸಿದವರಿದ್ದಾರೆ. ಪೂರ್ವಕಾಲದಿಂದಲೂ ಇಲ್ಲಿ ಒಂದು ಪಂಡಿತಪರಂಪರೆಯಿತ್ತು ಎಂಬುದಕ್ಕೆ ಇನ್ನೂ ಅನೇಕ ದಾಖಲೆಗಳು ನಮಗೆ ಉದಾಹರಣೆಯಾಗಿ ಸಿಗುತ್ತಿವೆ.
[`ಕನ್ನಡವಾಣೀ', ಪ್ರಬಂಧಗಳ ಸಂಕಲನದಲ್ಲಿ ಪ್ರಕಟಿತ]
_
ರಾಮಾಯಣವನ್ನು ರಚಿಸಿದ ಕವಿ ವಾಲ್ಮೀಕಿ. ಪೂರ್ವಾಶ್ರಮದಲ್ಲಿ ವ್ಯಾಧನಾಗಿದ್ದು, ಸುಲಿಗೆ-ದರೋಡೆಗಳನ್ನು ನಡೆಸುತ್ತಿದ್ದವನು ಅನಂತರ ಸಪ್ತರ್ಷಿಗಳ ಸಂಸರ್ಗದಿಂದ, ಅವರ ಮಾತಿನಿಂದ, ತಾನು ಮಾಡುತ್ತಿದ್ದ ಕೆಲಸ ತಪ್ಪು ಎಂಬ ಅರಿವಾಗಿ, ಪಶ್ಚಾತ್ತಾಪ ಹೊಂದಿ, ತಪಸ್ಸು ಮಾಡಿ, ಹೊಸ ವ್ಯಕ್ತಿಯಾಗಿ ಮೂಡಿಬಂದವನು. `ವಲ್ಮೀಕ' ಎಂದರೆ ಹುತ್ತ. ವ್ಯಾಧನು ತಪಸ್ಸಿಗೆ ಕುಳಿತ ಸ್ಥಳದಲ್ಲಿ ಕಾಲಾಂತರದಲ್ಲಿ ಹುತ್ತವು ಬೆಳೆಯಿತು. ವಲ್ಮೀಕದಿಂದ ಅಥವಾ ಹುತ್ತದಿಂದ ಹುಟ್ಟಿಬಂದವನೇ `ವಾಲ್ಮೀಕಿ'. ಹುತ್ತದ ಮಗ ಎಂದರೆ ಮಣ್ಣಿನ ಮಗ ಎಂದರ್ಥ. ವ್ಯಾಧನು ನಿಜವಾದ ಈ ಮಣ್ಣಿನ ಮಗ ಅಲ್ಲ.
ವ್ಯಾಧ ಸಂಸ್ಕೃತಿ ಅಥವಾ ವಾಲ್ಮೀಕಿಯ ಪೂರ್ವಾಶ್ರಮದ ಸಂಸ್ಕೃತಿ ಈ ಮಣ್ಣಿನ ಸಂಸ್ಕೃತಿಯಲ್ಲ. ಕೊಲೆ, ಸುಲಿಗೆ, ದರೋಡೆ, ಸ್ವಾರ್ಥ, ತನ್ನ ಕುಟುಂಬಪೋಷಣೆಗಾಗಿ ಪರರ ಶೋಷಣೆ - ಇವು ಭಾರತೀಯ ಸಂಸ್ಕೃತಿಯಲ್ಲ. ವಾಲ್ಮೀಕಿ ಹುತ್ತದ ಮಣ್ಣಿನಿಂದ ಹುಟ್ಟಿ ಬಂದ ಬಳಿಕವೇ ಅವನಿಗೂ ಈ ಮಣ್ಣಿನ ಸಂಸ್ಕೃತಿ ಅರ್ಥವಾದದ್ದು. ಈ ಮಣ್ಣಿನ ಸಂಸ್ಕೃತಿ ಎಷ್ಟು ಸುಂದರವಾದದ್ದು, ಎಷ್ಟು ಸುಮಧುರವಾದದ್ದು. ಹಿಂದೆ ಮನುಷ್ಯರ ಬೇಟೆಯಾಡುತ್ತಿದ್ದ ವಾಲ್ಮೀಕಿ ಈಗ ಪಕ್ಷಿಯ ಬೇಟೆಯನ್ನು ಸಹ ಸಹಿಸುವುದಿಲ್ಲ. ಅವನ ಹೃದಯದಲ್ಲಿ ಕರುಣೆ ತುಂಬಿದೆ. ಹುತ್ತದಿಂದೆದ್ದು ಬರುವಾಗ ಅವನು ಕಂಡದ್ದೇನು? ಗಂಡು ಹೆಣ್ಣು ಕ್ರೌಂಚಪಕ್ಷಿಗಳೆರಡು ಮರದ ಮೇಲೆ ಜೊತೆಯಾಗಿ ಕುಳಿತಿದ್ದುವು. ಬೇಡ ನೊಬ್ಬ ಅವುಗಳಲ್ಲಿ ಗಂಡುಹಕ್ಕಿಯನ್ನು ಕೊಂದುಬಿಡುತ್ತಾನೆ. ಆಗ ಹೆಣ್ಣುಹಕ್ಕಿ ಅಳುತ್ತದೆ. ಈ ಹಕ್ಕಿಯ ಅಳುವು ವಾಲ್ಮೀಕಿಯ ಮನಸ್ಸನ್ನು ಕದಡಿತು. ಹೆಣ್ಣು ಹಕ್ಕಿಯ ವಿರಹವನ್ನು ಕಂಡು, ದೈನ್ಯಾವಸ್ಥೆಯನ್ನು ಕಂಡು ವಾಲ್ಮೀಕಿಯ ಕಣ್ಣುಗಳಲ್ಲೂ ಶೋಕಜಲ ಉಕ್ಕಿ ಬಂತು. ಅಲ್ಲೇ ಕೆಳಗೆ ಆ ಬೇಡ ನಿಂತಿದ್ದಾನೆ! ಅವನು ಎಂತಹ ಒಬ್ಬ ಕ್ರೂರಿ! ವಾಲ್ಮೀಕಿಗೆ ಕೋಪ ಬರುತ್ತದೆ.! ಶೋಕವನ್ನು ತಡೆಯಲಾರದೆ ಉಂಟಾದ ಕೋಪ! ಆತ ಹೇಳುತ್ತಾನೆ:
ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ |
ಯತ್ ಕ್ರೌಂಚಮಿಥುನಾದೇಕಂ ಅವಧೀಃ ಕಾಮಮೋಹಿತಮ್ ||
(ಪ್ರೇಮತುಂಬಿದ ಗಂಡು ಹೆಣ್ಣು ಹಕ್ಕಿಗಳಲ್ಲಿ
ಗಂಡು ಹಕ್ಕಿಯ ಕೊಂದ ಎಲೆ ಬೇಡನೆ
ಹೆಣ್ಣುಬಾಳಿಗೆ ವಿರಹದುಃಖವನು ತಂದಿರುವ
ನೀನುಳಿಯದಿರು ಬಹಳ ಕಾಲವರೆಗೆ)
ಮಣ್ಣಿನ ಮಗನಾಗಿ ಹೊಸಪರಿಸರದಲ್ಲಿ ಬೆಳೆದ ವಾಲ್ಮೀಕಿಯ ಮನಸ್ಸು ದುಃಖ- ಕೋಪ-ಉದ್ವೇಗಗಳಿಂದ ತುಂಬಿ ಅಶಾಂತಿಯ ತವರಾಗಿತ್ತು. ಆಗಲೇ ನಾರದರು ಬಂದು - ``ಇದು ದೈವೇಚ್ಛೆ. ನಿನ್ನ ಶೋಕವೇ ಶ್ಲೋಕವಾಗಿದೆಯಪ್ಪಾ! ಇದರ ಹಿನ್ನೆಲೆಯಲ್ಲಿ ನೀನೊಂದು ಕಥೆ ಬರೆಯಬೇಕಾಗಿದೆ. ಅದೇ ರಾಮನ ಕಥೆ'' ಎಂದು ಕಥೆಯ ಸಾರವನ್ನು ಹೇಳಿ, ಮುಂದೆ ಬ್ರಹ್ಮನ ವರದಿಂದ ನಿನಗೆ ಎಲ್ಲವೂ ಹೊಳೆಯುವುದು - ಎನ್ನುವನು. ವಾಲ್ಮೀಕಿ ಮತ್ತೆ ಕುತೂಹಲದಿಂದ ನಾರದರೊಡನೆ ಹೀಗೆ ಪ್ರಶ್ನಿಸುವನು:
ಕೋನ್ವಸ್ನಿನ್ ಸಾಂಪ್ರತಂ ಲೋಕೇ ಗುಣವಾನ್ ಕಶ್ಚ ವೀರ್ಯವಾನ್ |
ಧರ್ಮಜ್ಞಶ್ಚ ಕೃತಜ್ಞಶ್ಚ ಸತ್ಯವಾಕ್ಯೋ ದೃಢವ್ರತಃ ||
-ಎಂದರೆ, ``ಈಗಿನ ಲೋಕದಲ್ಲಿ ಮಹಾಪುರುಷನೂ, ಸತ್ಯವಂತನೂ ಕೋಪ ವನ್ನು ಗೆದ್ದವನೂ ಆಗಿರುವ ಪುಣ್ಯಾತ್ಮನಾರು? ಧನುವಿಗೆ ಶಿಂಜಿನಿಯನ್ನು ಬಿಗಿದು ಟಂಕಾರ ಮಾಡಿದ ಮಾತ್ರಕ್ಕೇ ದೇವತೆಗಳೂ ಹೆದರಬೇಕಾದಂತಹ ಆ ವೀರಪುಂಗವ ನಾರು? ಆತನ ಚರಿತ್ರೆಯನ್ನು ಹೇಳು ಎನ್ನುವನು. ಆಗ ನಾರದರು ಅಂಥಾ ಗುಣಗಳುಳ್ಳ ಒಬ್ಬನೇ ಒಬ್ಬ ವ್ಯಕ್ತಿಯೆಂದರೆ, ಶ್ರೀರಾಮನು ಮಾತ್ರ ಎನ್ನುವನು. ಅದರಂತೆಯೇ ವಾಲ್ಮೀಕಿ ರಾಮನ ಕಥೆಯನ್ನು ಬರೆಯತೊಡಗಿದನು. ರಾಮಾಯಣದ ಮುಖ್ಯ ಉದ್ದೇಶವೇ ಅದು: ಧರ್ಮಜ್ಞನೂ, ಕೃತಜ್ಞನೂ, ಸತ್ಯಸಂಧನೂ, ಪರಾಕ್ರಮಿಯೂ ಆದ ಒಬ್ಬ ಶ್ರೇಷ್ಠಮಾನವನನ್ನು ಸೃಷ್ಟಿಸುವುದು. ವಾಲ್ಮೀಕಿಗೆ ರಾಮನು ದೇವರಾಗಬೇಕಿಲ್ಲ. ಆತ ಒಬ್ಬ ಉತ್ತಮಮನುಷ್ಯನಾಗಬೇಕು ಅಷ್ಟೆ.
ರಾಮಾಯಣ ಎಂದರೇನು? ರಾಮನ ಅಯನವೇ ರಾಮಾಯಣ. `ಅಯನ' ಎಂದರೆ ನಡಿಗೆ, ಚಲನೆ, ಸಂಚಾರ (ಉಠಟಿರ, ಒಠತಟಿರ, ಘಚಿಟಞಟಿರ) ಎಂದು ಅರ್ಥ. ಸಾಮಾನ್ಯವಾಗಿ ರಾಮಾಯಣ ಎಂದರೆ `ರಾಮನ ಕಥೆ, ರಾಮನ ಸಾಹಸಗಳು' ಎಂದು ಸಾಮಾನ್ಯವಾಗಿ ಅರ್ಥವಾದರೂ ಆ ಪದಕ್ಕೆ ಅಷ್ಟೇ ಅರ್ಥವಲ್ಲ. `ರಾಮನ ಹೋಗುವಿಕೆ', ಎಂದರೆ `ರಾಮನ ನಡಿಗೆ' ಎಂಬ ಅರ್ಥಕ್ಕೂ ಇಲ್ಲಿ ಪ್ರಾಧಾನ್ಯವಿದೆ.
ರಾಮನ ಬದುಕಿನಲ್ಲಿ `ಹೋಗುವಿಕೆ' ಅಥವಾ `ಅಯನ' ಒಂದು ಮುಖ್ಯಕ್ರಿಯೆ. ಅದು ಭೌತಿಕವಾಗಿಯೂ ನಡೆದಿದೆ; ಅಭೌತಿಕವಾಗಿಯೂ, ಎಂದರೆ ತಾತ್ತ್ವಿಕವಾಗಿಯೂ ನಡೆದಿದೆ. `ಭೌತಿಕವಾದ ಗಮನ' ಎಂದರೆ ಬಾಲ್ಯದಲ್ಲಿ ವಿಶ್ವಾಮಿತ್ರರ ಜೊತೆ ಸಿದ್ಧಾಶ್ರಮಕ್ಕೆ ಪಯಣ. ಯೌವನದಲ್ಲಿ ಹೆಂಡತಿಯ ಮತ್ತು ತಮ್ಮನ ಜೊತೆ ಕಾಡಿಗೆ ಪಯಣ. ಅಲ್ಲಿಂದ ಕಿಷ್ಕಿಂಧೆ ಲಂಕೆಯವರೆಗೆ. ಹೀಗೆ ಶ್ರೀರಾಮನು ತನ್ನ 15ನೆಯ ವಯಸ್ಸಿನಲ್ಲಿಯೇ ಈ ಅಯನವನ್ನು ಪ್ರಾರಂಭಿಸಿದ್ದಾನೆ. ಆತ ಕಾಡಿಗೆ ಹೋಗುವಾಗ ಆತನಿಗೆ ಸುಮಾರು 28 ವರ್ಷ ಪ್ರಾಯ. ಅಂತೂ ವನವಾಸ ಮುಗಿಸಿ ಬರುವಾಗ ರಾಮನ ಪ್ರಾಯ 42 ವರ್ಷ. ಎಂದರೆ, ಯೌವನದ ಬೆಳವಣಿಗೆ ಕುಂಠಿತವಾಗಿ ಮುಪ್ಪು ಪ್ರಾರಂಭವಾದ ಬಳಿಕವೇ ಆತನಿಗೆ ನಿಜವಾದ ಪಟ್ಟಾಭಿಷೇಕವಾದದ್ದು. ಅಷ್ಟರವರೆಗೂ ಅಯನವೇ! ಎಂದರೆ ಅರಮನೆಯ ಹೊರಗಿನ ಬದುಕು. ಜನಸಾಮಾನ್ಯರೊಡನೆ ಬೆರೆತ ಜೀವನ. ರಾಮನ ಬದುಕಿನಲ್ಲಿ ಕಾಣುವುದೇ ಈ ಸರಳಜೀವನ.
ಅಭೌತಿಕವಾದ ಅಥವಾ `ತಾತ್ತ್ವಿಕವಾದ ಹೋಗುವಿಕೆ' ಎಂದರೆ ಯಾವುದು? ಅದು ರಾಮಮಾರ್ಗ; ರಾಮಪಂಥ. ರಾಮಾಯಣ ಬರೇ ಕಥೆಯಲ್ಲ. ಅದು ಒಂದು ಪಂಥ. ಅದು ಒಂದು `ಫಿಲಾಸಫಿ'. ಈಗ ಗಾಂಧೀಜಿ ಒಂದು ವ್ಯಕ್ತಿಯಲ್ಲ. ಗಾಂಧೀಜಿ ಒಂದು `ಫಿಲಾಸಫಿ'. ಅದನ್ನೇ `ಗಾಂಧೀಸಂ' ಎನ್ನುತ್ತೇವೆ. ಗಾಂಧೀಜಿ ದೊಡ್ಡ ರಾಮನ ಭಕ್ತ. ರಾಮಾಯಣ ಅವರಿಗೆ ವೇದ. ರಾಮನ ಬದುಕು ಅವರಿಗೆ ಆದರ್ಶವಾಗಿತ್ತು. ರಾಮ ಇಸಮ್ಮಿನ ಪ್ರಭಾವ ಗಾಂಧಿ ಇಸಮ್ಮಿನ ಮೇಲೆ ಸಾಕಷ್ಟು ಇದೆಯೆಂಬುದು ಸತ್ಯ. ಗಾಂಧೀಜಿ ಗುಂಡೇಟಿನಿಂದ ಸಾಯುವ ಕಾಲಕ್ಕೆ ಪ್ರಾಣಹೋಗುವ ಕಾಲಕ್ಕೆ ಅವರ ಬಾಯಿಯಿಂದ ಬಂದ ಕೊನೆಯ ಪದವೇ ಹೇ ರಾಮ್! ಹೇ ರಾಮ್!
ರಾಮಾಯಣದ ಪ್ರಭಾವ ದಕ್ಷಿಣ ಭಾರತದ ಜನರಲ್ಲಿ ಆದುದಕ್ಕಿಂತ ಹೆಚ್ಚು ಉತ್ತರಭಾರತದ ಜನರ ಮೇಲೆ ಆಗಿದೆ. ಉತ್ತರ ಭಾರತದಲ್ಲಿ 'ರಾಮಲೀಲಾ' ಒಂದು ದೊಡ್ಡ ಹಬ್ಬ. ನಮ್ಮಲ್ಲಿ ರಾಮನ ಹಬ್ಬಕ್ಕೆ ಹೆಚ್ಚು ಪ್ರಾಶಸ್ತ್ಯ ಬರಲೇ ಇಲ್ಲ. ಇಲ್ಲಿ 'ರಾಮನವಮಿ'ಯನ್ನು ಅಂಥಾ ಒಂದು ದೊಡ್ಡ ಹಬ್ಬವಾಗಿ ನಾವು ಆಚರಿಸುವುದಿಲ್ಲ.
ಉತ್ತರ ಭಾರತದಲ್ಲಿ ರಾಮಾಯಣ ಇಷ್ಟೊಂದು ಪ್ರಚಾರದಲ್ಲಿರಲಿಕ್ಕೆ ಕಾರಣ - ತುಲಸೀದಾಸ ಕವಿಯ ಹಿಂದೀ ರಾಮಾಯಣ ಅಥವಾ 'ರಾಮಚರಿತಮಾನಸ' ಎಂಬ ಗ್ರಂಥ. ರಾಮಚರಿತಮಾನಸ ಅಲ್ಲಿಯ ಜನರ ಸ್ವಂತ ಆಡುಭಾಷೆಯಲ್ಲಿ ರಚಿತವಾದುದ ರಿಂದ ಅದು ಎಲ್ಲರಿಗೂ ಅರ್ಥವಾಯಿತು. ತುಂಬ ಜನಪ್ರಿಯವಾಯಿತು. ವಾಲ್ಮೀಕಿ ಚಿತ್ರಿಸಿದ ಮನುಷ್ಯನಾದ ರಾಮನನ್ನು ಅವರು ದೇವರಾಗಿಯೇ ಪೂಜಿಸಿದರು. `ರಾಮ ನವಮಿ' ಸಾರ್ವತ್ರಿಕ ಹಬ್ಬವಾಯಿತು. `ರಾಮಲೀಲಾ' ಜನಪ್ರಿಯ ಉತ್ಸವವಾಯಿತು.
ನಮ್ಮಲ್ಲಿ, ಎಂದರೆ ದಕ್ಷಿಣದಲ್ಲಿ ರಾಮನೇ ಮುಖ್ಯವಾದ ದೇವಾಲಯಗಳು ಕಡಮೆ. ಅದೂ ಕರಾವಳಿಯಲ್ಲಿ - ಕನ್ಯಾಕುಮಾರಿಯಿಂದ ಗೋಕರ್ಣದ ವರೆಗಂತೂ ಇಲ್ಲವೇ ಇಲ್ಲ. ಕರ್ನಾಟಕದಲ್ಲಿ, ಆಂಧ್ರದಲ್ಲಿ, ಬೆಂಗಳೂರು ಮುಂತಾದ ಕಡೆ ಅಪೂರ್ವವಾಗಿ ಕೆಲವು ರಾಮಪೂಜಾಮಂದಿರಗಳು ಕಾಣಿಸಿಕೊಂಡರೂ ಅವು ಅಷ್ಟೊಂದು ಪುರಾತನವಾದುವೇನೂ ಅಲ್ಲ. ಏನಿದ್ದರೂ ಉತ್ತರ ಭಾರತದಷ್ಟು ರಾಮಭಕ್ತಿ ದಕ್ಷಿಣ ಭಾರತದಲ್ಲಿ ಇಲ್ಲವೆಂಬುದರಲ್ಲಿ ಸಂದೇಹವಿಲ್ಲ. ಆದರೆ ರಾಮನ ತಾತ್ತ್ವಿಕತೆಯಂತೂ ಸಾರ್ವತ್ರಿಕವಾಗಿ ಅಂಗೀಕೃತವಾದ ಒಂದು ಸತ್ಯ. ಭಾರತೀಯರಿಗೆ ರಾಮಾಯಣ ಮತ್ತು ಮಹಾಭಾರತ ಅತ್ಯಂತ ಪ್ರಮುಖ ವಾದ ಆದರ್ಶಗ್ರಂಥಗಳು. ಮನುಸ್ಮೃತಿಯಲ್ಲಿ ಒಂದು ಮಾತು ಬರುತ್ತದೆ:
ಏತದ್ದೇಶಪ್ರಸೂತಸ್ಯ ಸಕಾಶಾದಗ್ರಜನ್ಮನಃ |
ಸ್ವಂ ಸ್ವಂ ಶಾಸ್ತ್ರಮಧಿಷ್ಠೇರನ್ ಪೃಥಿವ್ಯಾಂ ಸರ್ವಮಾನವಾಃ ||
ಈ ದೇಶದಲ್ಲಿ ಹುಟ್ಟಿದ ಅಣ್ಣಂದಿರ ನಡತೆಯನ್ನು ನೋಡಿ ಇತರ ದೇಶಗಳ ಜನರು ತಮ್ಮ ನಡವಳಿಕೆಗಳನ್ನು ತಿದ್ದಿಕೊಳ್ಳುತ್ತಾರೆ ಎಂದು ಇದರ ಅರ್ಥ. ಹಿಂದೆ ನಮ್ಮ ಅನುಕರಣೆಯನ್ನು ವಿದೇಶೀಯರು ಮಾಡುತ್ತಿದ್ದರೆ ಇವತ್ತು ವಿದೇಶಿಯರ ಅನುಕರಣೆ ಯನ್ನು ನಾವು ಮಾಡುತ್ತಿದ್ದೇವೆ. ಭಾರತದ ಸಂಸ್ಕೃತಿ ಇಷ್ಟೊಂದು ಉಚ್ಚವೂ ಉನ್ನತವೂ ಆಗಿರಲು ನಮ್ಮ ರಾಮಾಯಣ ಮತ್ತು ಮಹಾಭಾರತ ಗ್ರಂಥಗಳು ನಮ್ಮ ಮೇಲೆ ಬೀರಿದ ಪ್ರಭಾವವೇ ಕಾರಣ.
ದೇವುಡು ಅವರು ಒಂದು ಮಾತು ಹೇಳಿದರು: ಮಹಾಭಾರತ ನಾನಾ ಬಿಳಲು ಗಳನ್ನು ಬಿಟ್ಟು ವಿಸ್ತಾರವಾಗಿ ಹರಡಿರುವ ಒಂದು ಭವ್ಯವೃಕ್ಷವಾದರೆ, ರಾಮಾಯಣ ಎತ್ತರ ವಾಗಿ ಬೆಳೆದು, ಗಂಭೀರವಾಗಿ ನಿಂತಿರುವ ಪವಿತ್ರವಾದ ಒಂದು ಅಶ್ವತ್ಥವೃಕ್ಷ ಎಂದು. ನಮ್ಮಲ್ಲಿ ಸೃಷ್ಟಿಯಾದ ರಾಮಾಯಣದ ಆಖ್ಯಾನಗಳಿಗೆ ಲೆಕ್ಕವುಂಟೇ? ಇಲ್ಲಿ ದೇಶಕ್ಕೊಂದು ರಾಮಾಯಣ. (ದೇಶ ಅಂದರೆ ನಮ್ಮ ಈಗಿನ ಪ್ರಾಂತ ಅಥವಾ ರಾಜ್ಯ ಎಂಬರ್ಥದಲ್ಲಿ ನಾನು ಹೇಳಿದ್ದಾಗಿದೆ.) ಭಾಷೆಗೊಂದು ರಾಮಾಯಣ. ರಾಮಾಯಣ ಕೃತಿಯನ್ನು ಹೆರದ ಭಾಷೆ ಒಂದು ಭಾಷೆಯೇ ಅಲ್ಲ ಎಂಬುದು ನಮ್ಮ ಜನರ ನಂಬಿಕೆಯಾಗಿದೆ.
ಕನ್ನಡದಲ್ಲಿ ಪಂಪರಾಮಾಯಣ, ತೊರವೆ ರಾಮಾಯಣ, ಬತ್ತಲೇಶ್ವರ ರಾಮಾ ಯಣ, ವಾಸಿಷ್ಠ ರಾಮಾಯಣ; ತಮಿಳಿನಲ್ಲಿ ಕಂಬ ರಾಮಾಯಣ; ಮಲೆಯಾಳದಲ್ಲಿ ಯೆಳುತಚ್ಛನ್ ರಾಮಾಯಣ; ಸಂಸ್ಕೃತದಲ್ಲಿ ಆಧ್ಯಾತ್ಮ ರಾಮಾಯಣ, ವಾಸಿಷ್ಠ ರಾಮಾಯಣ; ಬಂಗಾಳಿಯಲ್ಲಿ ಕೃತ್ತಿವಾಸ ರಾಮಾಯಣ; ಹಿಂದಿಯಲ್ಲಿ ತುಲಸೀದಾಸ ರಾಮಾಯಣ, ಸೂರದಾಸ್ ರಾಮಾಯಣ, ಕಾಶ್ಮೀರಿ, ಒರಿಯಾ ಮುಂತಾದ ಭಾರತದ ಎಲ್ಲ ಪ್ರಸಿದ್ಧಭಾಷೆಗಳಲ್ಲೂ ರಾಮಾಯಣ ರಚಿತವಾಗಿಯೇ ಇದೆ. ಇನ್ನು ಕಾಶ್ಮೀರ ಗುಜರಾಥ ಮುಂತಾದ ಕಡೆಯ ಹಳ್ಳಿಯಲ್ಲಿರುವ ಜನಪದ ರಾಮಾಯಣಗಳ ಸೊಬಗೇ ಬೇರೆ. ಥಾಯಿಲೇಂಡಿನ ರಾಮಾಯಣದ ಕತೆಯೇ ಒಂದು ಬೇರೆ.
ಹೀಗೆ ಭಾರತೀಯರಲ್ಲಿ ರಾಮಾಯಣದ ಬೆಳೆ ಹುಲುಸಾಗಿ ಬೆಳೆದಿದೆ. ಆದ್ದ ರಿಂದಲೇ `ಚರಿತಂ ರಘುನಾಥಸ್ಯ ಶತಕೋಟಿಪ್ರವಿಸ್ತರಂ' ಎಂಬ ಮಾತು ಬಂದಿದೆ. ಒಟ್ಟು ಶತಕೋಟಿ ರಾಮಾಯಣಗಳಿವೆ - ಎಂದು ನಂಬಿಕೆ. ಇಲ್ಲಿ ಶತಕೋಟಿ ಎಂದರೆ ಅಸಂಖ್ಯಾತ - ಅನಂತ ಎಂದು ಅರ್ಥ ಮಾತ್ರ. ಅಂತೂ ತೋರಮಟ್ಟಿಗೆ ಶತಾಧಿಕ - ನೂರಕ್ಕಿಂತ ಹೆಚ್ಚು ರಾಮಾಯಣಗಳು ಸೃಷ್ಟಿಯಾಗಿವೆ ಎಂದು ಹೇಳಬಹುದು.
ನಮ್ಮ ಕನ್ನಡದ ಹೆಮ್ಮೆಯ ಕವಿ ಗದುಗಿನ ನಾರಣಪ್ಪನೇ ತಿಣುಕಿದನು ಫಣಿರಾಯ ರಾಮಾಯಣದ ಭಾರದಲಿ ಎಂದು ಹೇಳಿದ್ದಾನೆ. ರಾಮಾಯಣ ಕೃತಿಗಳ ಭಾರಕ್ಕೆ ಮಹಾಶೇಷನ ತಲೆಯೇ ಕುಸಿದುಹೋಗಿದೆಯಂತೆ. ಅಂತು ಕ್ರಿ. ಪೂ. ಮೂರನೆಯ ಶತಮಾನದಿಂದ ಅಂದರೆ ಸುಮಾರು ಎರಡು ಸಾವಿರ ವರ್ಷಗಳಿಂದೀಚೆಗೆ, ಈ ಇಪ್ಪತ್ತನೇ ಶತಮಾನದ ವರೆಗೆ, ಮೊನ್ನೆ ಮೊನ್ನೆ ಪ್ರಕಟವಾದ ತುಳುವಿನ ಮಂದಾರ ರಾಮಾಯಣದ ವರೆಗೆ ಭಾರತದಲ್ಲಿ ರಾಮಾಯಣದ ರಚನೆ ಅವ್ಯಾಹತವಾಗಿ ನಡೆಯುತ್ತಾ ಬಂದಿದೆ.
ಸೀತೆ - ರಾಮಾಯಣಶಿಲ್ಪದಲ್ಲಿ ಮೂಡಿಬಂದ ಒಂದು ಸುಂದರವಿಗ್ರಹ. ಹೆಣ್ಣು ಒಳ್ಳೆಯವಳಾದರೆ ಎಷ್ಟು ಒಳ್ಳೆಯವಳಾಗಬಹುದು ಎಂಬ ಪ್ರಶ್ನೆಗೆ ಉತ್ತರ - ಸೀತೆ. ತಾಳ್ಮೆ, ಸಹನೆ, ಕರುಣೆ, ಧೈರ್ಯ, ಸೌಂದರ್ಯ, ಪಾತಿವ್ರತ್ಯ - ಎಲ್ಲ ಗುಣಗಳೂ ಅವಳಲ್ಲಿವೆ. ಜನಕರಾಜನಿಗೆ ಮುದ್ದಿನ ಮಗಳು, ರಾಮನಿಗೆ ತಕ್ಕ ಹೆಂಡತಿ, ಲಕ್ಷ್ಮಣನಿಗೆ ತಕ್ಕ ಅತ್ತಿಗೆ, ದಶರಥನಿಗೆ ಅಭಿಮಾನದ ಸೊಸೆ, ಕೌಸಲ್ಯೆ - ಕೈಕೇಯಿ - ಸುಮಿತ್ರೆಯರಿಗೆ ಮಮತೆಯ ಸೊಸೆ - ಹೀಗೆ ಹತ್ತಾರು ಒಳ್ಳೆಯ ಗುಣಗಳ ಸಾಕಾರಮೂರ್ತಿ ಆಕೆ. ಬದುಕಿನ ಎಲ್ಲ ರೀತಿಯ ಸುಖಗಳನ್ನೂ ಹಾಗೆಯೇ ದುಃಖಗಳನ್ನೂ ಆಕೆ ಅನುಭವಿಸಿದ್ದಾಳೆ. ಈ ಅನುಭವವೇ ಒಂದು ದೊಡ್ಡ ಜ್ಞಾನಸಂಪತ್ತು. ಯಾರು ಬದುಕಿನಲ್ಲಿ ಹೆಚ್ಚು ಹೆಚ್ಚು ಕಷ್ಟಸುಖಗಳ ಅನುಭವ ಆಗಿದೆಯೋ - ಆತನ ಬದುಕು ಪುಟಗೊಂಡು, ಆತ ಅತ್ಯಂತ ಶ್ರೇಷ್ಠಮಾನವನಾಗಿ ಕಾಣಿಸಿಕೊಳ್ಳುತ್ತಾನೆ ಎಂಬುದರಲ್ಲಿ ಸಂದೇಹವಿಲ್ಲ.
ಬಾಲ್ಯದಲ್ಲಿ ಸೀತೆ ನಗುನಗುತ್ತಾ ಕಾಲಕಳೆದವಳು. ಮದುವೆಯಾದ ಬಳಿಕ 12 ವರ್ಷಗಳ ಕಾಲ ಅಯೋಧ್ಯೆಯಲ್ಲಿ ಗಂಡನ ಜೊತೆ - ಆ ಕಾಲದ ಅರಸರು ಅನುಭವಿಸ ಬಹುದಾದ ಅತ್ಯಂತಶ್ರೀಮಂತಿಕೆಯ ಬದುಕನ್ನು ಬಾಳಿದವಳು. ಮುಂದೆ ವನವಾಸ, ಸರಳಜೀವನ, ಪರಿಚಯವಿಲ್ಲದ ಪರಸ್ಥಳಗಳಲ್ಲಿ ಕೆಲವೊಮ್ಮೆ ಒಂಟಿತನದ ಬದುಕು, ಅನಂತರ ಪತಿಯ ವಿರಹ, ಅದೂ ಒಂದು ತರದ ಕಾರಾಗೃಹಶಿಕ್ಷೆಯಂತೆ. ಲಂಕೆಯ ಅಶೋಕವನದಲ್ಲಿ ಸುಮಾರು ಒಂದುವರ್ಷ ಕಾಲದ ಭಯಾನಕಜೀವನ- ಅದೂ ರಾಕ್ಷಸ-ರಾಕ್ಷಸಿಯರ ನಡುವೆ. ಆದರೂ ಧೃತಿಗೆಡದೆ, ಬದುಕನ್ನು ಒಂದು ಸವಾಲಾಗಿ ಸ್ವೀಕರಿಸಿದವಳು ಸೀತೆ. ಬದುಕಿಗಾಗಿ ಹೋರಾಡಿದವಳು ಸೀತೆ. ಬಹುಶಃ ಆಕೆ ಕೋಪ ಗೊಂಡ ಸಂದರ್ಭವೇ ರಾಮಾಯಣದಲ್ಲಿಲ್ಲ ಎನ್ನಬಹುದು.
ರಾಮನ ಜೊತೆಯಲ್ಲಿ ಸೀತೆಯೂ ಕಾಡಿಗೆ ಹೊರಡುವಾಗ ರಾಮ ಬೇಡವೆನ್ನು ತ್ತಾನೆ. ಕಾರಣ ಬೇರೇನೂ ಅಲ್ಲ; ಆಕೆಗೆ ಕಾಡಿನಲ್ಲಿ ಕಷ್ಟವಾದೀತು ಎಂದು. ಆದರೆ ಸೀತೆಗೆ ರಾಮನ ಜೊತೆಯಲ್ಲಿ ಕಾಡಿಗೆ ಹೋಗುವುದೇ ಇಷ್ಟವೆಂದಾಗ ರಾಮ ಹೇಳುತ್ತಾನೆ. 'ನ ದೇವಿ ತವ ದುಃಖೇನ ಸ್ವರ್ಗಮಪ್ಯಭಿರೋಚಯೇ' - ನಿನ್ನನ್ನು ದುಃಖಕ್ಕೆ ಈಡುಮಾಡಿಸಿ, ಸ್ವರ್ಗಸಿಕ್ಕಿದರೂ ನನಗೆ ಬೇಕಾಗಿಲ್ಲ ಎಂದು. ಹೀಗೆ ಸೀತಾರಾಮರದು ಒಂದು ಆದರ್ಶ ದಾಂಪತ್ಯ. ಆಕೆ ಪತಿಗೆ ಎರಕವಾದ ಹೆಂಡತಿ. ಆತ ಹೆಂಡತಿಗೆ ತಕ್ಕ ಗಂಡ. ಸೀತೆಯ ನಿಷ್ಕಲ್ಮಷಹೃದಯಕ್ಕೆ ಒಂದು ಉದಾಹರಣೆ ಯುದ್ಧಕಾಂಡದಲ್ಲಿ ಸಿಗುತ್ತದೆ. ರಾವಣ ವಧೆಯಾದ ಅನಂತರ ಹನುಮಂತನು ಅಶೋಕವನಕ್ಕೆ ಬಂದು, ಅಮ್ಮಾ, ನಿಮ್ಮನ್ನು ಕಷ್ಟಕ್ಕೀಡುಮಾಡಿದ ರಕ್ಕಸಿಯರಿಗೆ ತಕ್ಕ ಬುದ್ಧಿಕಲಿಸಿ ಬರುತ್ತೇನೆ ಎನ್ನುತ್ತಾನೆ. ಆಗ ಸೀತೆ ಹೇಳುತ್ತಾಳೆ:
ರಾಜಸಂಶ್ರಯವಶ್ಯಾನಾಂ ಕುರ್ವತೀನಾಂ ಪರಾಜ್ಞಯಾ |
ವಿಧೇಯಾನಾಂ ಚ ದಾಸೀನಾಂ ಕಃ ಕುಪ್ಯೇದ್ವಾನರೋತ್ತಮ ||
`ಅಪ್ಪಾ ಹನುಮಂತ! ಅವರೆಲ್ಲ ದಾಸಿಯರು. ಅರಸನ ಸಂಬಳಕ್ಕೆ ಕೆಲಸ ಮಾಡು ವವರು. ಅಂಥವರನ್ನು ನಾವೇಕೆ ಹಿಂಸಿಸಬೇಕು?' ಎನ್ನುತ್ತಾಳೆ. ಇಲ್ಲಿ ಸೀತೆಯ ಮಾನವೀಯ ಕರುಣೆ ಎಷ್ಟು ಎಂದು ನಮಗೆ ಅರಿವಾಗುತ್ತದೆ.
ಹಾಗೆಂದು ವಾಲ್ಮೀಕಿ ಚಿತ್ರಿಸಿದ ರಾಮನ ಬಗ್ಗೆಯಾಗಲಿ ಸೀತೆಯ ಬಗ್ಗೆಯಾಗಲಿ ಆಕ್ಷೇಪಗಳು ಇಲ್ಲದಿಲ್ಲ. ನಮಗೆ ರಾಮಾಯಣ ಓದಿದಾಗ ಕೆಲವು ಸಂದರ್ಭಗಳಲ್ಲಿ 'ಛೆ, ರಾಮ ಹೀಗೂ ಮಾಡಿದನೆ? ಹೀಗೆ ಮಾಡಬಾರದಿತ್ತು' ಎನಿಸುತ್ತದೆ.
ಸೀತೆಯ ಬಗ್ಗೆ ಅಂಥಾ ಭಾವನೆ ನಮಗೆ ಬರುವುದು ಕೇವಲ ಒಂದು ಸನ್ನಿವೇಶದಲ್ಲಿ ಮಾತ್ರ. ಅದು ಎಲ್ಲಿ ಎಂದರೆ ಪಂಚವಟಿಯಲ್ಲಿ.
ಪಂಚವಟಿಯಲ್ಲಿ ಮಾಯಾಮೃಗವನ್ನು ಕಂಡು ಸೀತೆ ತನಗೆ ಬೇಕು ಎನ್ನುತ್ತಾಳೆ. ರಾಮ ತರಲು ಹೋಗುತ್ತಾನೆ. ಜಿಂಕೆ ಕೈಗೆ ಸಿಗದಾಗ ರಾಮ ಬಾಣ ಬಿಡುತ್ತಾನೆ. ಸಾಯಲಿಕ್ಕೆ ಸಿದ್ಧವಾದ ಆ ಮಾಯದ ಜಿಂಕೆ ರಾಮನ ಸ್ವರದಲ್ಲಿ ``ಹಾ ಲಕ್ಷ್ಮಣಾ... ಹಾ ಸೀತೇ'' ಎಂದು ಕೂಗುತ್ತದೆ. ಸೀತೆ, ಅದು ರಾಮನ ಸ್ವರವೆಂದು ಭ್ರಮಿಸಿ, ಆತನಿಗೆ ಕಾಡಿನಲ್ಲಿ ಏನೋ ವಿಪತ್ತು ಬಂದಿದೆಯೆಂದು ಊಹಿಸಿ, ಲಕ್ಷ್ಮಣನನ್ನು ಕರೆದು, ``ಲಕ್ಷ್ಮಣಾ, ನಿನ್ನ ಅಣ್ಣನ ಸಹಾಯಕ್ಕೆ ಹೋಗು'' ಎನ್ನುತ್ತಾಳೆ. ಆಗ ಲಕ್ಷ್ಮಣ - ``ಅತ್ತಿಗೆ, ರಾಮನಿಗೆ ಏನೂ ವಿಪತ್ತು ಬರಲಿಲ್ಲ. ಅದು ಮಾಯಾವಿಗಳಾದ ರಕ್ಕಸರ ತಂತ್ರ'' ಎನ್ನುತ್ತಾನೆ. ಸೀತೆಯ ರಕ್ಷಣೆಗಾಗಿ ಕಾವಲು ನಿಂತ ತಾನೂ ಕೂಡ ಇಲ್ಲಿಂದ ಬಿಟ್ಟು ಹೋದರೆ ಸೀತೆಗೆ ಏನಾದರೂ ಕೇಡು ಬರಬಹುದು ಎಂದು ಭಾವಿಸುತ್ತಾನೆ. ಹೋಗು ಎಂದು ಎಷ್ಟು ಹಟ ಹಿಡಿದರೂ ಆತ ಹೋಗುವುದಿಲ್ಲ. ಆಗ ಸೀತೆ ಹೇಳುವ ಒಂದು ಮಾತು ಹೀಗಿದೆ:
ಸುದುಷ್ಟಸ್ತ್ವಂ ವನೇ ರಾಮಮೇಕಮೇಕೋನುಗಚ್ಛಸಿ |
ಮಮ ಹೇತೋಃ ಪ್ರತಿಚ್ಛನ್ನಃ ಪ್ರಯುಕ್ತೋ ಭರತೇನ ವಾ ||
(ಲಕ್ಷ್ಮಣಾ, ನೀನು ಮಹಾದುಷ್ಟ, ರಾಮನೊಡನೆ ನೀನು ಕಾಡಿಗೆ ಬಂದದ್ದು - ರಾಮನಿಗಾಗಿ ಅಲ್ಲ, ಮಮ ಹೇತೋಃ - `ನನ್ನ ಕಾರಣಕ್ಕಾಗಿ'. ನಿನ್ನ ದೃಷ್ಟಿಯಲ್ಲಿ ರಾಮನಿಗೆ ಏನಾದರೂ ಆಪತ್ತು ಬಂದು ಆತ ಮಡಿದರೆ ನಾನು ನಿನಗೆ ಜೊತೆಗಾತಿಯಾಗಿ ಸಿಗಬೇಕು ಎಂಬ ಭಾವನೆ ನಿನ್ನಲ್ಲಿ ಮೊದಲೇ ಇದ್ದಂತೆ ಕಾಣುತ್ತದೆ.)
ರಾಮಾಯಣದ ಕಥೆ `ಸೀತಾಯನ'ವೂ ಆದದ್ದು ಇಲ್ಲಿಯೇ. ಸೀತೆ ಹೀಗೆ ಹೇಳಿದ್ದು ಸರಿಯೇ? ಲಕ್ಷ್ಮಣನು ಸೀತೆಯನ್ನು ಬಯಸಿ ಕಾಡಿಗೆ ಬಂದವನೇ? ಲಕ್ಷ್ಮಣ ನಂಥಾ ಭ್ರಾತೃಪ್ರೇಮವುಳ್ಳ ಮೈದುನನನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಸೀತೆಯಿಂದ ಆಗಲಿಲ್ಲವೇ? ನಮಗೆ ಲಕ್ಷ್ಮಣನ ಬಗ್ಗೆ ಹಾಗೇನೂ ಅನಿಸುವುದಿಲ್ಲ. ನಾವು ವಾಲ್ಮೀಕಿಯ ಮೂಲಕ ಲಕ್ಷ್ಮಣನನ್ನು ತಿಳಿದ ಪ್ರಕಾರ - ಆತ ಅಂಥವನು ಖಂಡಿತ ಅಲ್ಲ.
ನಿಜವಾಗಿ ನೋಡಿದರೆ ಇಲ್ಲಿ ಸೀತೆ ದುರ್ಬಲಳಾಗಿದ್ದಾಳೆ. ಬೌದ್ಧಿಕವಾಗಿಯೂ, ಸಾಂದರ್ಭಿಕವಾಗಿಯೂ. ಆಕೆ ರಾಮನನ್ನೂ ಅರ್ಥಮಾಡಿಕೊಳ್ಳಲಿಲ್ಲ. ಲಕ್ಷ್ಮಣನನ್ನೂ ಅರ್ಥಮಾಡಿಕೊಳ್ಳಲಿಲ್ಲ. ರಾಮನ ಶಕ್ತಿ ಪರಾಕ್ರಮವೂ ಆಕೆಗೆ ಗೊತ್ತಿಲ್ಲ, ಲಕ್ಷ್ಮಣನ ಪ್ರಾಮಾಣಿಕತೆಯೂ ಅವಳಿಗೆ ಗೊತ್ತಿಲ್ಲ. ಅದು ಸೀತೆಯಲ್ಲಿರುವ ಒಂದು ದೌರ್ಬಲ್ಯ ವಾದರೆ, ಇನ್ನೊಂದು ಆ ಸಂದರ್ಭ ಅವಳನ್ನು ಇನ್ನಷ್ಟು ದುರ್ಬಲಳನ್ನಾಗಿ ಮಾಡಿದೆ. ಒಂದು ವೇಳೆ ರಾಮನಿಗೆ ವಿಪತ್ತು ಬಂದಿದ್ದರೆ... ನಮಗೆ ಗೊತ್ತುಂಟು ಬರಲಾರದು ಎಂದು. ಸೀತೆಗೆ ಹೇಗೆ ಗೊತ್ತು? ಇಲ್ಲಿ ಒಂದು ರೀತಿಯ ಆಡಿಚಿಟಚಿಣಛಿ ಡಿಠಟಿಥಿಯನ್ನು ಕಾಣುತ್ತೇವೆ.
ಸೀತೆಯ ದೃಷ್ಟಿಯಲ್ಲಿ ಅವಳ ಆಗಿನ ಮನಃಸ್ಥಿತಿಯ ದೃಷ್ಟಿಯಲ್ಲಿ, ಅವಳು ಹೇಳುವುದು ಸಹಜವೆ? ಅವಳಿಗೆ ರಾಮನೇ ದೊಡ್ಡವನು. ರಾಮನಿಗೆ ಬರಬಹುದಾದ ವಿಪತ್ತನ್ನು ಆಕೆ ಸಹಿಸಲಾರಳು. ಆದ್ದರಿಂದಲೇ ರಾಮನ ಸಹಾಯಕ್ಕೆ ಲಕ್ಷ್ಮಣ ಹೋಗುವುದಿಲ್ಲವೆಂದಾಗ ಆಕೆಗೆ ಕೋಪ ಬರುತ್ತದೆ. ಆಕೆ ಲಕ್ಷ್ಮಣನ ಬಗ್ಗೆ ಒಂದು ಕ್ಷಣ ಏನೇನೋ ಎಲ್ಲ ಗ್ರಹಿಸಿ ಬಿಡುತ್ತಾಳೆ. ಇದು ಸೀತೆಗೆ ಒದಗಿದ ಸಾಂದರ್ಭಿಕ ದೌರ್ಬಲ್ಯ ಎಂದು ಹೇಳಬಹುದು. ಎಷ್ಟೋ ದಾರುಣಸಂದರ್ಭಗಳಲ್ಲಿ ಮನುಷ್ಯ ತನ್ನ ವಿವೇಕವನ್ನು ಕಳಕೊಳ್ಳುತ್ತಾನೆ. ಇದು ಮಾನವಸಹಜವಾದ ಒಂದು ಗುಣ. ಮುಂದೆ ಸಂನ್ಯಾಸಿ ರಾವಣನ ಮುಂದೆ ಲಕ್ಷ್ಮಣನ ಪರಿಚಯ ಹೇಳುವಾಗ ಅವಳೇ ಹೇಳುತ್ತಾಳೆ - `ಭ್ರಾತಾ ಲಕ್ಷ್ಮಣೋ ನಾಮ ಧರ್ಮಚಾರೀ ದೃಢವ್ರತಃ' - ಅಂತೂ ವಾಲ್ಮೀಕಿ ಚಿತ್ರಿಸಿದ್ದು ಮನುಷ್ಯ ಳಾದ ಸೀತೆಯನ್ನು ಹೊರತು ದೇವಿಯಾದ ಸೀತೆಯನ್ನಲ್ಲ; ವಾಲ್ಮೀಕಿ ಸೃಷ್ಟಿಸಿದ್ದು ಮನುಷ್ಯನಾದ ರಾಮನನ್ನು ಹೊರತು ದೇವರಾದ ರಾಮನನ್ನಲ್ಲ. ರಾಮನು ದೇವರೇ ಆದರೆ ರಾವಣನನ್ನು ಕೊಲ್ಲಲು ಆತನಿಂದ ಸಾಧ್ಯವಿಲ್ಲ. ಯಾಕೆಂದರೆ ರಾವಣನು ಬ್ರಹ್ಮನಲ್ಲಿ ಕೇಳಿಕೊಂಡ ವರವೇ ಅಭಯ. `ರಾವಣೋ ಮಾನುಷಾದನ್ಯೈರವಧ್ಯತ್ವಂ' ಮನುಷ್ಯರಲ್ಲದವರಿಂದ ತನಗೆ ಮರಣ ಬರಬಾರದು ಎಂದೇ ಆತನು ಬ್ರಹ್ಮನಲ್ಲಿ ಕೇಳಿ ಕೊಂಡದ್ದು. ಎಂದರೆ, ಮನುಷ್ಯನಿಂದಲೇ ಅವನಿಗೆ ಮರಣ ಎಂದರ್ಥ. ವಾಲ್ಮೀಕಿ ರಾಮನನ್ನು ದೇವರಾಗಿಯೂ, ಸೀತೆಯನ್ನು ದೇವಿಯಾಗಿಯೂ ಚಿತ್ರಿಸಿದ್ದರೆ ಅಂಥಾ ದೇವರಿಂದ ರಾವಣವಧೆ ಹೇಗಾಗಬಲ್ಲುದು? ರಾಮಾಯಣದ ಒಂದು ಮುಖ್ಯ ವಿಷಯವೇ ಇಲ್ಲಿ ಕೆಟ್ಟು ಹೋಗುತ್ತದೆ. ರಾಮಸೀತೆಯರನ್ನು ಈ ಮಣ್ಣಿನ ಮಕ್ಕಳನ್ನಾಗಿ ಚಿತ್ರಿಸುವುದು ವಾಲ್ಮೀಕಿಯ ಉದ್ದೇಶ ಎಂಬುದನ್ನು ನಾವಿಲ್ಲಿ ಮನದಟ್ಟು ಮಾಡಿಕೊಳ್ಳಬೇಕು.
ಇನ್ನು ಲಕ್ಷ್ಮಣನ ಹೃದಯ ಎಷ್ಟು ಪರಿಶುದ್ಧವಾದುದು ಎಂಬುದಕ್ಕೆ ಮುಂದೆ ನಮಗೊಂದು ಒಳ್ಳೆಯ ಉದಾಹರಣೆ ಸಿಗುತ್ತದೆ.
ಸೀತಾಪಹಾರವಾದ ಬಳಿಕ ರಾಮನು ದುಃಖಿಸುತ್ತಾ ಲಕ್ಷ್ಮಣನ ಜೊತೆಯಲ್ಲಿ ಸೀತೆಯನ್ನು ಹುಡುಕುತ್ತಾ ಕಾಡಿನಲ್ಲೇ ಮುಂದುವರಿಯುತ್ತಾನೆ. ಕಿಷ್ಕಿಂಧೆಯಲ್ಲಿ ಸುಗ್ರೀವ ನೊಡನೆ ಸ್ನೇಹ ಬೆಳೆಯುತ್ತದೆ. ಆತ ರಾಮನಿಗೆ ಒಂದು ಆಭರಣಗಳ ಗಂಟನ್ನು ತಂದು ಕೊಡುತ್ತಾನೆ. ಅದು ರಾವಣನು ಸೀತೆಯನ್ನು ಕದ್ದುಕೊಂಡು ಹೋಗುವಾಗ, ಆಕಾಶದ ಮೇಲಿಂದ ಸೀತೆ ಕೆಳಗೆ ಬಿಸಾಡಿದ ಗಂಟು. ಸುಗ್ರೀವ- ``ರಾಮದೇವರೇ, ಈ ಆಭರಣಗಳ ಗಂಟು ಸೀತೆಯದು ಹೌದೇ ಅಲ್ಲವೇ ಎಂದು ಬೇಕಾದರೆ ತಾವು ಪರೀಕ್ಷಿಸಿ ನೋಡಬಹುದು'' ಎಂದು ಹೇಳುವಾಗ - ರಾಮನು ಆ ಗಂಟನ್ನು ಲಕ್ಷ್ಮಣನ ಕೈಗೆ ಕೊಡುತ್ತಾನೆ. ನೀನು ಪರೀಕ್ಷಿಸಿ ನೋಡು ಎನ್ನುತ್ತಾನೆ. ಆಗ ಲಕ್ಷ್ಮಣ ಹೇಳುವ ಒಂದು ಮಾತು - ಆತನ ಇಡೀ ಯೋಗ್ಯತೆಯನ್ನು ಎತ್ತಿಹಿಡಿಯುತ್ತದೆ. ಪರಸ್ತ್ರೀಯರ ಬಗ್ಗೆ ಆತನಿಗೆ ಎಂಥ ಗೌರವವಿದೆ ಎಂಬುದು ಆ ಮಾತಿನಿಂದ ವ್ಯಕ್ತವಾಗುತ್ತದೆ. ಆತ ಹೇಳುತ್ತಾನೆ:
ನಾಹಂ ಜಾನಾಮಿ ಕೇಯೂರೇ ಕುಂಡಲೇ ಕಟಕಾನಿ ಚ |
ನೂಪುರೇ ತ್ವಭಿಜಾನಾಮಿ ನಿತ್ಯಂ ಪಾದಾಬ್ಜವಂದನಾತ್ ||
(ನಾನು ಅತ್ತಿಗೆಯ ಯಾವುದೇ ಆಭರಣಗಳನ್ನು ಇದು ತನಕ ಕಣ್ಣೆತ್ತಿ ನೋಡಿದ ವನಲ್ಲ. ಆದರೆ ಆಕೆಯ ಪಾದಗಳಿಗೆ ನಮಸ್ಕಾರ ಮಾಡುವ ಸಂದರ್ಭಗಳಲ್ಲಿ ಆ ಪಾದಗಳ ಗೆಜ್ಜೆಯನ್ನು ಮಾತ್ರ ನೋಡಿದ ನೆನಪಿದೆ.)
ಹುಟ್ಟಿದ ಮೇಲೆ ಸೀತೆಯ ಮುಖವನ್ನೇ ಕಣ್ಣೆತ್ತಿ ನೋಡದ ಒಬ್ಬ ಮನುಷ್ಯ ಸೀತೆಯನ್ನು ಪ್ರೇಮಿಸುತ್ತಾನೆ ಎಂದು ಸೀತೆಯಾಗಲಿ ಅಥವಾ ಸೀತೆಯ ಕಥೆಯನ್ನು ಓದಿದ ನಾವಾಗಲಿ ಹೇಗೆ ಹೇಳುವುದು? ಹಾಗಾಗಿ ಇಲ್ಲಿ ಸೀತೆಗೆ ಉಂಟಾದ ಆ ಸಂದರ್ಭದ ಕಳವಳವೇ ಅವಳಿಂದ ಇಂಥ ಮಾತನ್ನು ಹೇಳಿಸಿದೆಯಲ್ಲದೆ ಬೇರೆ ಯಾವ ಕೆಟ್ಟ ಭಾವವೂ ಇಲ್ಲಿಲ್ಲ ಎಂದು ನನ್ನ ಅಭಿಮತ.
ರಾಮಾಯಣ ಯಾಕೆ ಇಷ್ಟು ಜನಪ್ರಿಯವಾಗಿದೆ? ಎಲ್ಲ ರಾಮಾಯಣಗಳ ಸಂಮಿಶ್ರವಾಗಿರುವ ಟಿವಿ ರಾಮಾಯಣ ಯಾಕೆ ಇಷ್ಟು ಜನಪ್ರಿಯವಾಗಿದೆ? ಕೇವಲ ದೃಶ್ಯಗಳ ಜೋಡಣೆಗಾಗಿಯೋ? ಅಭಿನಯದ ಶ್ರೇಷ್ಠತೆಗಾಗಿಯೋ? ಸಂಭಾಷಣೆಯ ಚಮತ್ಕಾರಕ್ಕಾಗಿಯೋ? - ಅಲ್ಲ; ಅವು ಎಲ್ಲ ಇದ್ದ ಹಾಗೆಯೇ, ಅವುಗಳಿಂದಾಗುವ ರಂಜನೆಯ ಜೊತೆಗೇ ಇನ್ನೊಂದು ಮುಖ್ಯವಾದ ಆಕರ್ಷಣೆಯೂ ಅಲ್ಲಿದೆ. ಅದು ಯಾವುದೆಂದರೆ ಆ ಕಥೆಯ ಸೊಗಸು; ಆ ಕಥೆ ಹೊಮ್ಮಿಸುವ ವಿವಿಧ ಭಾವಗಳು!
ರಾಮಾಯಣ ಒಂದು ಅರಸುಮನೆತನದ ಅಥವಾ ಒಂದು ರಾಜವಂಶದ ಕಥೆಯಾದರೂ, ಅದು ಕೇವಲ ರಾಜವಂಶದ ಕಥೆಯಲ್ಲ. ಅದು ಒಂದು ಕುಟುಂಬದ ಕತೆ. ಒಂದು ಜನಸಾಮಾನ್ಯನ ಕುಟುಂಬದ ಕತೆ. ಒಂದು ಸುಂದರ ಸಂಸಾರದೊಳಗಿನ ಕತೆ. ಜನಸಾಮಾನ್ಯನ ಬದುಕಿನೊಡನೆಯೂ ತಾದಾತ್ಮ್ಯವನ್ನು ಹೊಂದಬಲ್ಲ ಕತೆ. ಅವನ ಯೋಚನೆಗಳಿಗೆ ಎಟಕುವಂತಹ ಕತೆ. ಆದ್ದರಿಂದಲೇ ರಾಮಾಯಣವು ಜನಪ್ರಿಯವಾಗಿದೆ. - ಸಮಾಜದ ಎಲ್ಲ ವಿಧದ ಜನರ ಸ್ಪಂದನೆಗಳಿಗೂ ಒಳಗಾಗತಕ್ಕ ಕಥಾನಕವೆನಿಸಿದೆ.
ರಾಮಾಯಣ ಒಂದು ಸುಂದರವಾದ ಸಂಸಾರದ ಚಿತ್ರಣ, ಸಂಸಾರವೆಂದಮೇಲೆ ಅದರಲ್ಲಿ ವಿಭಿನ್ನಸ್ವಭಾವದ ಜನರಿರಬಹುದು, ಸಿಡುಕಿನವರಿರಬಹುದು; ಸ್ವಾರ್ಥಿಗಳಿರ ಬಹುದು; ಅಸೂಯಾಪರರಿರಬಹುದು ಅಂಥವರ ನಡುವೆ ಬುದ್ಧಿವಂತನಾದವನು ಹೇಗೆ ಜೀವಿಸಬಹುದು? ಸಂಸಾರ, ಸಂಗ್ರಾಮವಾಗದೆ, ಶಾಂತಿಸ್ನೇಹಗಳ ಸಾಮರಸ್ಯವಾಗಿ ಹೇಗೆ ಬೆಳಗಬಹುದು ಎಂಬುದನ್ನು ರಾಮಾಯಣ ನಮಗೆ ಕಲಿಸಿಕೊಡುತ್ತದೆ. ಸಿಡುಕಿಗೆ ಸಿಡುಕು, ಸೇಡಿಗೆ ಸೇಡು ಎಂಬ ಸಿದ್ಧಾಂತವನ್ನು ಅವಲಂಬಿಸುತ್ತಿದ್ದರೆ ರಾಮಾಯಣ ರಾಮಾಯಣ ವಾಗುತ್ತಿರಲಿಲ್ಲ. ಒಂದು ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಮಂಥರೆಯ ದುರ್ಬೋಧನೆಯಿಂದ ಕೈಕೇಯಿ ತನ್ನ ಮಗನಿಗಾಗಿ ರಾಜ್ಯ ಬೇಡುತ್ತಾಳೆ. ರಾಮ 14 ವರ್ಷಗಳ ಕಾಲ ವನವಾಸ ಮಾಡಬೇಕೆಂದೂ ಹೇಳುತ್ತಾಳೆ. ಅವಳ ಬೇಡಿಕೆಗಳು ದಶರಥನಿಗೆ ಇಷ್ಟವೆನಿಸಲಿಲ್ಲ. ಆತ ಕೈಕೇಯಿಯೊಡನೆ ಹೇಳುತ್ತಾನೆ:
ನೃಶಂಸೇ ದುಷ್ಟಚಾರಿತ್ರೇ ಕುಲಸ್ಯಾಸ್ಯ ವಿನಾಶಿನಿ |
(ಅಯೋಧ್ಯಾಕಾಂಡ 12 - 7)
(ಎಲೈ ಕ್ರೂರಳೇ, ಕೆಟ್ಟ ನಡತೆಯವಳೇ, ಈ ಕುಲದ ವಿನಾಶಕಳೇ)
ಕಿಂ ಕೃತಂ ತವ ರಾಮೇಣ ಪಾಪೇ ಪಾಪಂ ಮಯಾಪಿ ವಾ |
ಸದಾ ತೇ ಜನನೀತುಲ್ಯಾಂ ವೃತ್ತಿಂ ವಹತಿ ರಾಘವಃ ||
(ಅಯೋಧ್ಯಾಕಾಂಡ 12 - 8)
(ಎಲೈ ಪಾಪಿಷ್ಠಳೇ! ರಾಮ ನಿನಗೆ ಏನು ಮಾಡಿದ್ದಾನೆ. ಅಥವಾ ನಾನಾದರೂ ನಿನಗೆ ಏನು ತಪ್ಪುಮಾಡಿದ್ದೇನೆ? ಆ ರಾಮನು ನಿನ್ನನ್ನು ತಾಯಿಯಂತೆ ನೋಡುತ್ತಿದ್ದಾನೆ.)
ತಸ್ಯೈವ ತ್ವಂ ಅನರ್ಥಾಯ ಕಿಂ ನಿಮಿತ್ತಂ ಇಹೋದ್ಯತಾ |
(ಅಯೋಧ್ಯಾಕಾಂಡ 12 - 9)
ಅಂಥಾ ರಾಮನಿಗೆ ಅನರ್ಥವನ್ನುಂಟುಮಾಡಲು ನೀನು ಹೊರಟಿದ್ದೀಯಲ್ಲ ಎಂದು ನಾನಾವಿಧವಾಗಿ ಕೈಕೇಯಿಯನ್ನು ನಿಂದಿಸುತ್ತಾನೆ. ಆದರೆ ಈ ವಿಷಯವನ್ನು ತಿಳಿದ ರಾಮನು ಮಾತ್ರ ಯಾವುದೇ ಭಾವವಿಕಾರಕ್ಕೆ ಒಳಗಾಗುವುದಿಲ್ಲ.
ಇತೀವ ತಸ್ಯಾಂ ಪರುಷಂ ವದಂತ್ಯಾಮ್ |
ನ ಚೈವ ರಾಮಃ ಪ್ರವಿಶೇಶ ಶೋಕಮ್ ||
(ಅಯೋಧ್ಯಾಕಾಂಡ 18-41)
ರಾಮನು ಒಂದಿಷ್ಟು ಸಂಕಟಪಡಲಿಲ್ಲ. ಅವನು ಹೇಳುತ್ತಾನೆ:
ಅಹಂ ಹಿ ಸೀತಾಂ ರಾಜ್ಯಂ ಚ ಪ್ರಾಣಾನಿಷ್ಟಾನ್ ಧನಾನಿ ಚ |
ಹೃಷ್ಟೋ ಭ್ರಾತ್ರೇ ಸ್ವಯಂ ದದ್ಯಾಂ ಭರತಾಯಾಪ್ರಚೋದಿತಃ ||
(ಅಯೋಧ್ಯಾಕಾಂಡ 19 - 7)
(ಭರತನಿಗೆ ಈ ರಾಜ್ಯ ಬೇಕೆಂದಿದ್ದರೆ, ಯಾರೂ ಹೇಳದಿದ್ದರೂ ನಾನು ಸಂತೊಷದಿಂದ ಕೊಡುವವನೆ. ನನ್ನ ತಮ್ಮನಿಗಾಗಿ ನಾನು ಪ್ರಾಣಕೊಡಲೂ ಸಿದ್ಧನೇ....)
ಇಲ್ಲಿ ಕೆಲವು ಆಧುನಿಕ ವಿಮರ್ಶಕರು ಹೇಳುವುದಿದೆ. `ತಂದೆ ಹೇಳಿದ ಕೂಡಲೇ ರಾಮನು ಕಾಡಿಗೆ ಹೋಗಬಾರದಿತ್ತು. ಅದು ಅವನ ದೌರ್ಬಲ್ಯ. ಅವನಿಗೆ ದಾಢ್ರ್ಯವಿಲ್ಲ' ಪಿತೃವಾಕ್ಯಪರಿಪಾಲನೆಯೆಂದು ಹೇಳಿ ಕಾಡಿಗೆ ಹೊರಟದ್ದು ರಾಮನ ದೌರ್ಬಲ್ಯವೆಂದು ಹೇಳುವ ಈ ವಿಮರ್ಶಕರಿಗೆ ಏನು ಹೇಳೋಣ?
ಇರಲಿ, ಅವರ ಅಭಿಪ್ರಾಯದಂತೆ ರಾಮ ಕಾಡಿಗೆ ಹೋಗಬಾರದಿತ್ತು ಎಂದಿಟ್ಟು ಕೊಳ್ಳೋಣ. ರಾಮ ಕಾಡಿಗೆ ಹೋಗದಿದ್ದರೆ ಕೈಕೇಯಿ ಗಲಾಟೆ ಮಾಡುತ್ತಾಳೆ. ಆಗ ಅವಳ ಕೈಗೆ ಸಂಕಲೆ ಬಿಗಿದು ಕಾರಾಗೃಹದೊಳಗೆ ಹಾಕಬೇಕಾಗುತ್ತದೆ, ಅಥವಾ ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಬೇಕಾಗುತ್ತದೆ, ಅಥವಾ ಕೈಕೆ ಅಷ್ಟಕ್ಕೆ ಸುಮ್ಮನಿರದೆ ತನ್ನ ತವರು ಮನೆಗೂ ಹೋಗಬಹುದು. ಅಲ್ಲಿ ಸಹೋದರನ ಸಹಾಯ ಪಡೆದು ಅಯೋಧ್ಯೆಗೆ ಎದುರಾಗಿ ಯುದ್ಧವನ್ನೇ ನಡೆಸಲೂಬಹುದು. ಲಂಕೆಯಲ್ಲಿ ಆಗುವ ಯುದ್ಧ-ಅಯೋಧ್ಯೆಯಲ್ಲಿ ಆಗುತ್ತದೆ. ಶತ್ರುಗಳೊಡನೆ ಆಗುವ ಯುದ್ಧ - ಒಂದು ಕುಟುಂಬ ದೊಳಗೆ ನಡೆಯುತ್ತದೆ. ಯಾರಾದರೂ ಒಬ್ಬರು ಸೋಲುತ್ತಾರೆ. ಆದರೆ ಅಲ್ಲಿ ಮಾನವತೆಯನ್ನು ತಿದ್ದುವ ಅಂಶ ಎಲ್ಲಿದೆ? ಒಂದು ಸಂಸ್ಕೃತಿಯ ಪರಿಶುದ್ಧತೆ ಎಲ್ಲಿದೆ? ಇದು ಸ್ವಾರ್ಥಸಾಧಕರ ಒಂದು ಮಾಮೂಲು ಕಥೆಯಾಗುತ್ತದೆ. ದಂಗೆ ಬಂಡಾಯ ಅಶಾಂತಿಗಳು ಇಲ್ಲಿಯ ವಸ್ತುಗಳಾಗುತ್ತವೆ. ಈ ಹಿಂಸೆ ಅಶಾಂತಿಗಳಿಂದ ಒಂದು ದೇಶವು ಪ್ರಗತಿಯತ್ತ ಸಾಗುತ್ತದೆಯೇ ಅಥವಾ ವಿನಾಶದತ್ತ ಸಾಗುತ್ತದೆಯೇ ಎಂದು ಯೋಚಿಸೋಣ. ಹಾಗಾಗಿ ಇದು ರಾಮಾಯಣವಾಗಬಹುದಾದರೂ, ಇಲ್ಲಿ 'ರಾಮಾಯಣಿಸಂ' ಹುಟ್ಟಲಾರದು, ಇದು ಆದರ್ಶಗ್ರಂಥವೂ ಆಗಲಾರದು. ರಾಮಾ ಯಣ ನಮಗೆ ಆದರ್ಶವಾಗುವುದು ರಾಮನ ತ್ಯಾಗದಿಂದಲೇ ಹೊರತು ರಾಮನ ಭೋಗದಿಂದಲ್ಲ ಎಂಬುದನ್ನು ನಾವು ಗಮನಿಸಬೇಕು.
ರಾಮಾಯಣದ ಒಂದೊಂದು ಪಾತ್ರವೂ ನಮಗೆ ಇಂತಹ ಆದರ್ಶವನ್ನು ಬೋಧಿಸುತ್ತದೆ. ದಶರಥನಲ್ಲಿ ನಾವು ಕಾಣುವ ದೊಡ್ಡ ಗುಣವೆಂದರೆ ಪುತ್ರಸ್ನೇಹ. ಒಬ್ಬ ಮಗನನ್ನು ಹೀಗೆ ಪ್ರೀತಿಸುವ ಒಬ್ಬ ಅಪ್ಪ ನಮಗೆ ಸಿಗುವುದು ಕಷ್ಟ. ಮಕ್ಕಳ ಮೇಲಿನ ಅಪಾರ ಪ್ರೀತಿಯೂ ಅವರನ್ನು ಒಳ್ಳೆಯದು ಮಾಡಲು ಕಾರಣವಾಗುತ್ತದೆ. ನಮ್ಮನ್ನು ಇಷ್ಟೊಂದು ಪ್ರೀತಿಸುವ ಅಪ್ಪನ ಮನಸ್ಸಿಗೆ ನೋವಾಗಬಾರದು ಎಂಬ ಕಾರಣಕ್ಕಾಗಿಯೇ ಎಷ್ಟೋ ಮಕ್ಕಳು ಕೆಟ್ಟ ಕೆಲಸ ಮಾಡುವುದಿಲ್ಲ. ಪ್ರೀತಿಗೆ ಇರುವ ಶಕ್ತಿ ಶಿಕ್ಷೆಗೆ ಇಲ್ಲ. ಪ್ರೀತಿಯಿಂದ ನಾವು ಸಾಧಿಸಬಹುದಾದುದನ್ನು ಶಿಕ್ಷೆಯಿಂದ ಸಾಧಿಸಲು ಸಾಧ್ಯವಿಲ್ಲ. ಇವತ್ತು ನಮ್ಮ ದೇಶದಲ್ಲಿ ಎಷ್ಟೋ ಮಕ್ಕಳಿಗೆ ಈ ಪ್ರೀತಿ ಸಿಗದೆ ಅವರು ವಂಚಿತ ರಾಗಿದ್ದಾರೆ. ತಂದೆತಾಯಂದಿರ ಪ್ರೀತಿವಾತ್ಸಲ್ಯಗಳು ದೊರೆಯದ ಮಕ್ಕಳು ತಂದೆ ತಾಯಂದಿರನ್ನು ಪ್ರೀತಿಸುವುದೂ ಇಲ್ಲ. ಹಾಗಾಗಿ ತಂದೆತಾಯಂದಿರು ಮುಪ್ಪಿನಲ್ಲಿ ಅಸಹಾಯಕರಾಗುತ್ತಾರೆ, ಅನಾಥರಾಗುತ್ತಾರೆ. ಆದ್ದರಿಂದಲೇ ಈಗೀಗ ನಮ್ಮ ದೇಶದಲ್ಲೂ ವೃದ್ಧಾಶ್ರಮಗಳು ಅನುಷ್ಠಾನಕ್ಕೆ ಬರತೊಡಗಿವೆ. ಮುದುಕರಾದ ಮಾತಾಪಿತರು ಮಕ್ಕಳಿಗೆ ಭಾರವೆನಿಸುತ್ತಾರೆ. ಈ ಅಸಹಾಯಕಸ್ಥಿತಿಯಲ್ಲಿ ಅವರನ್ನು ನೋಡುವವರು ಯಾರು? ಆಗ ವೃದ್ಧಾಶ್ರಮಗಳು ಅಥವಾ ಅನಾಥಾಲಯಗಳೇ ಗತಿ. ಪಿಂಚಣಿಯ ಹಣವನ್ನು ಸಂಸ್ಥೆಗೆ ಒಪ್ಪಿಸಿ ಬಿಟ್ಟರೆ, ಸಂಸ್ಥೆಯವರೇ ಇವನನ್ನು ಸಾಯುವ ತನಕ ನೋಡುತ್ತಾರೆ. ಹೀಗೆ ನಮ್ಮದೇ ಆದ ಜೀವನಮೌಲ್ಯಗಳು ನಮ್ಮದೇ ಆದ ಸಂಸ್ಕೃತಿ ಕಣ್ಮರೆಯಾಗುತ್ತಾ ಹೋದಂತೆಲ್ಲ ನಮ್ಮ ದೇಶವೂ ವಿದೇಶಗಳ ಹಾದಿಯನ್ನೇ ತುಳಿಯಬೇಕಾಗುತ್ತದೆ.
ರಾಮಾಯಣದ ಇನ್ನೊಂದು ಆದರ್ಶಪಾತ್ರ - ಲಕ್ಷ್ಮಣ. ಹಾಗೆಯೇ ಭರತನೂ ಕೂಡ. ಆ ಸಹೋದರಪ್ರೀತಿ, ಒಂದು ಕುಟುಂಬವನ್ನು ಸಂತೋಷದ ನಂದನವನವನ್ನಾಗಿ ಮಾಡಬಲ್ಲದು. ಮಹಾಭಾರತಕ್ಕೂ ರಾಮಾಯಣಕ್ಕೂ ಇರುವ ದೊಡ್ಡ ವ್ಯತ್ಯಾಸ ಇಷ್ಟೆ.
ಕೌರವನು ಹಸ್ತಿನಾವತಿಯ ಆಡಳಿತ ತನಗೆ ಬೇಕೆಂದು ಬಲಾತ್ಕಾರವಾಗಿ ಸ್ವಾಧೀನಪಡಿಸಿಕೊಳ್ಳುತ್ತಾನೆ. ಪಾಂಡವರು ಕೇಳಿದರೆ ಸೂಜಿಯ ಮೊನೆಯೂರುವಷ್ಟು ಜಾಗವನ್ನೂ ಕೊಡಲಾರೆನೆನ್ನುತ್ತಾನೆ. ಇಲ್ಲಿ ಅಧಿಕಾರಮೋಹ ಅವನನ್ನು ಕಾಡುತ್ತದೆ. ಆದರೆ ರಾಮಾಯಣದಲ್ಲಿ ರಾಮನು ರಾಜ್ಯದ ಅಧಿಕಾರ ತಮ್ಮನಿಗೆ ಇರಲೆಂದು ಬಿಟ್ಟು ಕೊಟ್ಟರೆ, ಆ ತಮ್ಮ ನನಗೆ ಬೇಡ ಅಣ್ಣನಿಗೆ ಇರಲೆಂಬುದಾಗಿ ವಿಜ್ಞಾಪಿಸಿಕೊಳ್ಳುತ್ತಾನೆ. ಅಣ್ಣನಿಗೆ ತಂದೆಯ ಮಾತನ್ನು ನಡೆಸುವುದು ಮುಖ್ಯವಾಗುತ್ತದೆ. ಶ್ರೀರಾಮ ಗುರು ವಸಿಷ್ಠರೊಡನೆ ಹೇಳುತ್ತಾನೆ:
ಯನ್ಮಾತಾಪಿತರೌ ವೃತ್ತಂ ತನಯೇ ಕುರುತಃ ಸದಾ |
ನ ಸುಪ್ರತಿಕರಂ ತತ್ತು ಮಾತ್ರಾ ಪಿತ್ರಾ ಚ ಯತ್ಕೃತಮ್ ||
ಗುರುಗಳೆ, ತಾಯಿತಂದೆಯಂದಿರು ಮಕ್ಕಳನ್ನು ಸಾಕುವುದಕ್ಕಾಗಿ ಎಷ್ಟು ಕಷ್ಟಪಡು ತ್ತಾರೆ. ಅಂಥಾ ತಂದೆತಾಯಂದಿರ ಋಣವನ್ನು ತೀರಿಸಲು ಮಕ್ಕಳಿಂದ ಸಾಧ್ಯವೇ?
ಯಥಾಶಕ್ತಿ ಪ್ರದಾನೇನ ಸ್ನಾಪನಾಚ್ಛಾದನೇನ ಚ |
ನಿತ್ಯಂ ಚ ಪ್ರಿಯವಾದೇನ ತಥಾ ಸಂವರ್ಧನೇನ ಚ ||
ತಂದೆತಾಯಂದಿರು ಮಕ್ಕಳು ಬೇಕೆಂದು ಹೇಳಿದ್ದನ್ನು ಎಲ್ಲಿಂದಲಾದರೂ ಸಂಗ್ರಹಿಸಿ ತಂದುಕೊಡುತ್ತಾರೆ. ಅವರನ್ನು ಕಾಲಕಾಲಕ್ಕೆ ಮೀಯಿಸಿ, ಮೆಯ್ಯ ಕೊಳೆಯನ್ನು ತೆಗೆಯುತ್ತಾರೆ. ಬೇಕಾದ ಬಟ್ಟೆಬರೆಗಳನ್ನು ತಂದುಕೊಡುತ್ತಾರೆ. ಪ್ರೀತಿಯ ಮಾತುಗಳನ್ನಾಡಿ ಮುದ್ದಿಸುತ್ತಾರೆ. ದಶರಥಮಹಾರಾಜರು ನನಗೆ ಜನ್ಮವನ್ನು ಕೊಟ್ಟ ತಂದೆ. ನನ್ನ ತಂದೆ ಹೇಳಿದ ಮಾತನ್ನು ನಾನು ನಡೆಸಲೇಬೇಕು. ಅದು ಸುಳ್ಳಾಗಬಾರದು ಎನ್ನುತ್ತಾನೆ. ಇದು ತ್ಯಾಗ - ನಿಜವಾದ ಇದನ್ನೇ ನಾವು ನಿಷ್ಠೆ ಅಂತ ಹೇಳುತ್ತೇವೆ. ಮಕ್ಕಳ ಈ ರೀತಿಯ ವರ್ತನೆಯನ್ನು ಇಷ್ಟಪಡದ ತಂದೆಯಾದರೂ ಯಾವನು? ಎಲ್ಲ ತಂದೆತಾಯಂದಿರಿಗೂ ಮಕ್ಕಳು ತಮ್ಮ ಮಾತನ್ನು ಕೇಳಬೇಕು ಎಂಬ ಭಾವನೆ ಇಲ್ಲವೆ? ರಾಮನು ಹಾಗೆ ನಡೆದು ಕೊಂಡದ್ದು ಅವನ `ದೌರ್ಬಲ್ಯ'ವೇ? ಈ ರೀತಿಯ ಮಾತುಗಳಲ್ಲಿ ನಿಜಕ್ಕೂ ಹುರುಳಿಲ್ಲ. ಹಾಗೆಂದು ದಶರಥನಿಗೆ ಆ ಮಗನ ಮೇಲಿರುವ ಪ್ರೀತಿ ಎಷ್ಟೆಂದರೆ - ಅವನು ಮಡಿದದ್ದೇ ರಾಮನ ಅಗಲುವಿಕೆಯಿಂದ. ಅಂಥಾ ಪುತ್ರಸ್ನೇಹ ದಶರಥನದು.
ಭರತನ ಸಹೋದರ ಪ್ರೀತಿ ಒಂದು ವಿಧದ್ದಾದರೆ, ಲಕ್ಷ್ಮಣನದ್ದು ಇನ್ನೊಂದು ರೀತಿ. ಅವನು ಅಣ್ಣನ ಒಡನಾಡಿ, ಬೆಂಗಾವಲಿಗ. ಅಣ್ಣನಿಗೆ ಸಹಾಯ ಮಾಡುವುದೇ ತನ್ನ ಬದುಕಿನ ಗುರಿ ಎಂದು ತಿಳಿದವನು. ಅಣ್ಣನು ಮಾಡುವ ಒಳ್ಳೆಯ ಕೆಲಸಗಳಲ್ಲೆಲ್ಲ ಆತನ ಸಹಕಾರ ಇದ್ದೇ ಇದೆ.
ಇವತ್ತು ನಮ್ಮ ಸಮಾಜದಲ್ಲಿ ಅನೇಕ ಅಣ್ಣತಮ್ಮಂದಿರನ್ನು ನಾವು ನೋಡುತ್ತೇವೆ. ಒಬ್ಬರಿಗೊಬ್ಬರು ಸಹಕರಿಸುವ ವಿಚಾರವಂತಿರಲಿ. ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಸ್ವಲ್ಪ ಪಿತ್ರಾರ್ಜಿತ ಏನಾದರೂ ಇದ್ದರೆ ಸಾಕು ಮತ್ತೆ ಅಣ್ಣನಿಗೂ ತಮ್ಮನಿಗೂ ಕೋರ್ಟೇ ಗತಿ. ಇದು ಸಾಮಾಜಿಕ ಆರೋಗ್ಯದ ಲಕ್ಷಣವೇ?
ಈ ದೃಷ್ಟಿಯಿಂದಲೂ ರಾಮಾಯಣ ನಮಗೆ ಆದರ್ಶದ ಪಾಠವನ್ನು ಹೇಳುತ್ತದೆ.
ರಾಮಾಯಣದಲ್ಲಿ ನಮಗೆ ಎದ್ದು ಕಾಣುವ ಒಂದು ಹೊಸ ಅಂಶವೆಂದರೆ ವಿಶ್ವಾಮಿತ್ರರ ಶಿಕ್ಷಣಪದ್ಧತಿ.
ಸುಬಾಹುಮಾರೀಚರೆಂಬ ರಾಕ್ಷಸರ ವಧೆಗಾಗಿ ಮತ್ತು ಯಾಗಸಂರಕ್ಷಣೆಗಾಗಿ ವಿಶ್ವಾಮಿತ್ರರು ರಾಮಲಕ್ಷ್ಮಣರನ್ನು ಕಾಡಿಗೆ ಕರೆದುಕೊಂಡು ಹೋಗುವ ಒಂದು ಸನ್ನಿವೇಶ ರಾಮಾಯಣದಲ್ಲಿ ಬರುತ್ತದೆ. ರಾಕ್ಷಸವಧೆ ಅಥವಾ ಯಾಗಸಂರಕ್ಷಣೆ ಎಂಬುದು ವಿಶ್ವಾಮಿತ್ರರಿಗೆ ಒಂದು ನೆವನ ಮಾತ್ರ. ಅವರಿಗೆ ಬೇಕಾದುದು ರಾಮಲಕ್ಷ್ಮಣರು. ರಾಮಲಕ್ಷ್ಮಣರನ್ನು ಯೋಗ್ಯಯೋಧರನ್ನಾಗಿ, ಉತ್ತಮನಾಗರಿಕರನ್ನಾಗಿ ರೂಪಿಸುವುದು ವಿಶ್ವಾಮಿತ್ರರ ಉದ್ದೇಶ. ವಿಶ್ವಾಮಿತ್ರರ ಜೊತೆಯಲ್ಲಿ ರಾಮಲಕ್ಷ್ಮಣರು ಇದ್ದು ಅಷ್ಟು ದಿವಸವೂ ಅವರಿಗೆ ಒಂದು ಉತ್ತಮ ತರಬೇತಿ ಸಿಗುತ್ತದೆ. ಇದು ಅರಮನೆಯೊಳಗಿನ ವಿದ್ಯಾಭ್ಯಾಸವಲ್ಲ. ಇದು ಅರಮನೆಯಿಂದ ಹೊರಗಿನ ವಿದ್ಯಾಭ್ಯಾಸ. ಇಲ್ಲಿ ಅವರು ರಾಜ ಕುಮಾರರಲ್ಲ, ಸಾಮಾನ್ಯ ವಿದ್ಯಾರ್ಥಿಗಳು. ಇಲ್ಲಿ ಗುರುಶಿಷ್ಯರಲ್ಲಿ ಅವರ ಸ್ಥಾನಮಾನಗಳ ದೃಷ್ಟಿಯಲ್ಲಿ ಹೆಚ್ಚಿನ ಅಂತರವಿಲ್ಲ.
ಕಾಡಿನಲ್ಲಿ ನಿದ್ದೆಮಾಡಿದ ರಾಮಲಕ್ಷ್ಮಣರನ್ನು ವಿಶ್ವಾಮಿತ್ರರೇ ಕರೆದು ಎಬ್ಬಿಸುತ್ತಾರೆ:
`ಕೌಸಲ್ಯಾಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ |
ಉತ್ತಿಷ್ಠ ನರಶಾರ್ದೂಲ - ತ್ರೈಲೋಕ್ಯಂ ಮಂಗಲಂ ಕುರು ||
ಇಲ್ಲಿ ಗುರು ತನ್ನ ಶಿಷ್ಯರನ್ನು ಒಬ್ಬ ತಂದೆಯಂತೆ ಪ್ರೀತಿಸುತ್ತಾನೆ. ಮುಂದೆ ಕಲಿಸುವ ವಿದ್ಯೆಯಾದರೋ ಅದರ ವಿಧಾನವಾದರೋ - ಎಷ್ಟೋ ಪರಿಣಾಮಕಾರಿ.
ದಾರಿಯಲ್ಲಿ ಒಂದು ವನ ಸಿಕ್ಕಿದರೆ, ಒಂದು ನದಿ ಸಿಕ್ಕಿದರೆ ಅಥವಾ ಒಂದು ಸಣ್ಣ ಪ್ರದೇಶ ಕಾಣಸಿಕ್ಕಿದರೂ ಸಾಕು. ಕೂಡಲೇ ಅದರ ಚರಿತ್ರೆಯನ್ನು ವಿಶ್ವಾಮಿತ್ರರು ರಾಮಲಕ್ಷ್ಮಣರಿಗೆ ಹೇಳಿಯಾಯಿತು. ಇದು ಪ್ರತ್ಯಕ್ಷಶಿಕ್ಷಣ. ನಮ್ಮ ಆಧುನಿಕಶಿಕ್ಷಣಪದ್ಧತಿಯ ಪ್ರಕಾರ ಹೇಳುವುದಾದರೆ ಇದು ಒಂದು ತರದ ಪ್ರಾಯೋಗಿಕವಿಧಾನ. ಇಲ್ಲಿ ಭೂಗೋಳ ಶಿಕ್ಷಣ ನಡೆಯುತ್ತದೆ. ಚರಿತ್ರೆಯ ಪಾಠ ಆಗುತ್ತದೆ. ನಾವು ಭೂಪಟದಲ್ಲಿ ಗಂಗಾನದಿ ಯನ್ನು ತೋರಿಸಿ, ಗಂಗಾನದಿಯ ಚರಿತ್ರೆಯನ್ನು ಪಾಠಮಾಡಿದರೆ, ವಿಶ್ವಾಮಿತ್ರರು ಗಂಗಾನದಿಯನ್ನೇ ತೋರಿಸಿ, ಅದರ ಹುಟ್ಟುಹಿನ್ನೆಲೆಗಳನ್ನು ಮಕ್ಕಳಿಗೆ ಪಾಠ ಹೇಳುತ್ತಾರೆ.
ಶಸ್ತ್ರಾಭ್ಯಾಸದ ಶಿಕ್ಷಣ ಈಗಾಗಲೇ ಅವರಿಗಾಗಿದೆ. ಆದರೆ ಅದು ವಾಗ್ರೂಪದ ನಿಯಮಬೋಧನೆಯ ಶಿಕ್ಷಣ ಮಾತ್ರ. ಇಲ್ಲಿ ವಿಶ್ವಾಮಿತ್ರರ ನೇತೃತ್ವದಲ್ಲಿ ಅದರ ಪ್ರಾಯೋಗಿಕ ಪರಿಜ್ಞಾನ ಅವರಿಗೆ ಸಿಗುತ್ತದೆ. ತಾಟಕಿ, ಸುಬಾಹು ರಾಕ್ಷಸರನ್ನು ಅವರು ಕೊಲ್ಲುತ್ತಾರೆ. ಆದರೆ ಮಾರೀಚನನ್ನು ಕೊಲ್ಲುವುದಿಲ್ಲ. ರಾಮಬಾಣವು ಮಾರೀಚನನ್ನು ಎತ್ತಿಕೊಂಡು ಹೋಗಿ ಸಮುದ್ರದಲ್ಲಿ ಎಸೆಯುತ್ತದೆ. ಹೀಗೆ ವಿಶ್ವಾಮಿತ್ರರು ರಾಮಲಕ್ಷ್ಮಣರಿಗೆ ಒಬ್ಬ ಶ್ರೇಷ್ಠ ಆದರ್ಶ ಗುರುಗಳಾಗುತ್ತಾರೆ.
ರಾಮಾಯಣ ಕಾಲದಲ್ಲಿ ಪ್ರಜಾಪ್ರಭುತ್ವಪದ್ಧತಿ:
ಆಡಳಿತದ ವಿಧಾನವನ್ನು ಸಾಮಾನ್ಯವಾಗಿ - ರಾಜಪ್ರಭುತ್ವ ಪದ್ಧತಿ ಮತ್ತು ಪ್ರಜಾಪ್ರಭುತ್ವ ಪದ್ಧತಿ ಎಂದು ಎರಡಾಗಿ ವಿಭಾಗಿಸುತ್ತೇವೆ. ಭಾರತದಲ್ಲಿ ರಾಜರೇ ಆಡಳಿತೆ ಮಾಡುತ್ತಿದ್ದರೂ, ಅಲ್ಲಿ ಪ್ರಜೆಗಳದ್ದೇ ಪರಮಾಧಿಕಾರವಿದ್ದದ್ದು ಕಂಡು ಬರುತ್ತದೆ.
ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ ಒಬ್ಬ ರಾಜನು ಯುವರಾಜನನ್ನು ಆರಿಸುವಾಗ ಪ್ರಜೆಗಳ ಸವ್ಮ್ಮತಿಯನ್ನು ಕೇಳಿ ನಿರ್ಧರಿಸಬೇಕೆಂದು ನಿಯಮವಿದೆ. ಬಹುಶಃ ಪ್ರಾಚೀನ ಕಾಲದಲ್ಲಿ ಭಾರತದಾದ್ಯಂತ ಈ ಪದ್ಧತಿ ರೂಢಿಯಲ್ಲಿದ್ದುದಾಗಿ ಕಂಡು ಬರುತ್ತದೆ.
ರಾಮಾಯಣದಲ್ಲಂತೂ, ಇದಕ್ಕೆ ಸ್ಪಷ್ಟವಾದ ದಾಖಲೆಗಳು ದೊರೆಯುತ್ತವೆ. ದಶರಥನು ಯೌವರಾಜ್ಯಾಭಿಷೇಕ ಮಾಡಲು ನಿಶ್ಚಯಿಸುವಾಗ, ಕೇವಲ ಮಂತ್ರಿಗಳ ಸಭೆಯನ್ನು ಮಾತ್ರ ನಡೆಸಿದ್ದಲ್ಲ. ಪ್ರಜೆಗಳನ್ನು ಕೂಡ ಆಮಂತ್ರಿಸಿದ ವಿಶೇಷ ಮಹಾಸಭೆ ಯಲ್ಲಿ ಅದನ್ನು ಪ್ರಸ್ತಾವಿಸಿ, ಪ್ರಜೆಗಳ ಅನುಮತಿಯನ್ನು ಪಡೆದಿದ್ದನು. ಪ್ರಜೆಗಳೆಲ್ಲರೂ ಒಕ್ಕೊರಲಿನಿಂದ ರಾಮನೇ ರಾಜ್ಯದ ಉತ್ತರಾಧಿಕಾರಿಯಾಗಬೇಕೆಂದು ಸೂಚಿಸಿದರು. ಅದರಂತೆಯೇ ಪಟ್ಟಾಭಿಷೇಕ ನಿರ್ಣಯವಾದುದಾಗಿದೆ.
ಆದರೆ ರಾಮಾಯಣದ ಕಾಲದಲ್ಲಿ ಕೇವಲ ಪ್ರಜೆಗಳ ಬಹುಮತಕ್ಕೆ ಮಾತ್ರ ಬೆಲೆಯೆಂದಿರಲಿಲ್ಲ. ಒಬ್ಬ ಸಾಮಾನ್ಯಪ್ರಜೆಯ ಮಾತಿಗೂ ಅಲ್ಲಿ ಬೆಲೆ ಇತ್ತು. `ಯಥಾ ರಾಜಾ ತಥಾ ಪ್ರಜಾಃ' - ಈ ವಾಕ್ಯವೇ ಶ್ರೀರಾಮನ ಆದರ್ಶವಾಣಿ. ಸೀತೆಯ ಬಗ್ಗೆ ಸಾಮಾನ್ಯ ಪ್ರಜೆಯೊಬ್ಬ ಅಥವಾ ಅಯೋಧ್ಯೆಯ ಒಬ್ಬ ಶ್ರೀಸಾಮಾನ್ಯ ಹೇಳಿದ ಮಾತಿಗೂ ಸಹ, ಅರಸನು ಮಾನ್ಯತೆ ಕೊಟ್ಟಿದ್ದಾನೆ. ಅಲ್ಲಿ ಅರಸ ಹೇಳುತ್ತಾನೆ :
ಅಪ್ಯಹಂ ಜೀವಿತಂ ಜಿಹ್ಯಾಂ ಯುಷ್ಮಾನ್ವಾ ಪುರುಷರ್ಷಭಾಃ |
ಅಪವಾದಭಯಾದ್ಭೀತಃ ಕಿಂ ಪುನರ್ಜನಕಾತ್ಮಜಾಮ್ ||
`ಪ್ರಜಾರಕ್ಷಣೆ-ಧರ್ಮರಕ್ಷಣೆ ನನ್ನ ಬದುಕಿನ ಸರ್ವಸ್ವ. ಅದಕ್ಕಾಗಿ ಯಾವ ತ್ಯಾಗಕ್ಕೂ ನಾನು ಸಿದ್ಧನಾಗಬಲ್ಲೆ. ನನ್ನ ಪಾಲಿನ ಎಲ್ಲ ದುಃಖವನ್ನು ಬೇಕಾದರೂ ನಾನು ನುಂಗಬಲ್ಲೆ. ಒಬ್ಬ ಅರಸನಿಂದ ಒಂದು ಸಾಮಾಜಿಕ ನೀತಿ ಕೆಡಬಾರದು.' ಸೀತೆ ಒಳ್ಳೆಯವಳು ಎಂದು ಗೊತ್ತಿದ್ದರೂ ಕೂಡ, ಆಕೆಯನ್ನು ಅನಿವಾರ್ಯವಾಗಿ ರಾಮನು ಕೈ ಬಿಡುವ ಪ್ರಯತ್ನಮಾಡುತ್ತಾನೆ. ಹಾಗೆಂದು ಆಕೆಗೆ ಅಪಾಯವಾಗಬಾರದು ಎಂಬ ಕಾಳಜಿಯೂ ರಾಮನಲ್ಲಿದೆ. ಹಾಗಾಗಿಯೇ ಯಾವುದೋ ಕಾಡಿನಲ್ಲಿ ಆಕೆಯನ್ನು ಬಿಡಲಿಲ್ಲ. ವಾಲ್ಮೀಕಿ ಮಹರ್ಷಿಗಳ ಆಶ್ರಮದ ಬಳಿಯಲ್ಲೇ ಸೀತೆಯನ್ನು ಬಿಡಲಾಗಿದೆ. ಗರ್ಭಿಣಿಯಾದ ಸೀತೆ ಅಲ್ಲಿ ಆರಾಮವಾಗಿ ತನ್ನ ಬಾಣಂತನವನ್ನು ಕಳೆಯುತ್ತಾಳೆ. ರಾಮಲಕ್ಷ್ಮಣರು ವಿಶ್ವಾಮಿತ್ರರಿಂದ ಶಿಕ್ಷಣ ಪಡೆದಂತೆ, ಅಲ್ಲಿ ಲವಕುಶರು ವಾಲ್ಮೀಕಿ ಮಹರ್ಷಿಗಳಿಂದ ಶಿಕ್ಷಣ ಪಡೆಯುತ್ತಾರೆ. ವಾಲ್ಮೀಕಿಯ ಹೃದಯ ಅಂಥದು - ಯತ್ ಕ್ರೌಂಚ ಮಿಥುನಾದೇಕಂ ಅವಧೀಃ ಕಾಮಮೋಹಿತಮ್ - ಒಂದು ಹೆಣ್ಣುಹಕ್ಕಿಯ ವಿರಹವನ್ನು ಕಾಣಲಾಗದೆ ಕಳವಳಗೊಂಡ ವಾಲ್ಮೀಕಿ, ಮಾನವವರ್ಗದ ಒಂದು ಹೆಣ್ಣಿನ ವಿರಹವನ್ನು ಕಂಡು ಸುಮ್ಮನಿರಬಲ್ಲನೇ? ಆಕೆಗೆ ರಾಜೋಪಚಾರವನ್ನು ಸಲ್ಲಿಸಿದನು. ಹಾಗಾಗಿ ಸೀತಾ ಪರಿತ್ಯಾಗವು ಸೀತೆಗೆ ಅನುಗ್ರಹವೇ ಆಗಿತ್ತು ಹೊರತು ಶಿಕ್ಷೆಯಾಗಲಿಲ್ಲ. ಇನ್ನೊಂದು ವಿಚಾರ ಇಲ್ಲಿ ವ್ಯಕ್ತವಾಗುವುದು ಯಾವುದೆಂದರೆ ರಾಮರಾಜ್ಯದಲ್ಲಿ ದೊಡ್ಡವರ ಮಾತಿಗೆ ಮಾತ್ರ ಮನ್ನಣೆಯಲ್ಲ; ಅಗಸನಂಥಾ ಒಬ್ಬ ಶ್ರೀಸಾಮಾನ್ಯನ ಮಾತಿಗೂ ಅರಸೊತ್ತಿಗೆಯಲ್ಲಿ ಮಾನ್ಯತೆಯಿತ್ತು ಎಂಬುದು.
ಹೀಗೆ ರಾಮಾಯಣವು ಸುಮಾರು ಎರಡುವರೆ ಸಾವಿರ ವರ್ಷಗಳ ಹಿಂದಿನ ಜನಜೀವನದ ಒಂದು ಕೈಗನ್ನಡಿಯಾಗಿ ನಮ್ಮ ಮುಂದಿದೆ. ಆ ಕಾಲದಲ್ಲಿಯೇ ನಮ್ಮ ಜನ ಹೇಗೆ ಬದುಕುತ್ತಿದ್ದರು? ಬೇರೆ ಬೇರೆ ದೇಶಗಳಲ್ಲಿ ಎರಡು-ಮೂರು ಸಾವಿರ ವರ್ಷಗಳ ಹಿಂದಿನ ಸಂಸ್ಕೃತಿ ಹೇಗಿತ್ತು? ತುಲನೆ ಮಾಡಿ ನೋಡೋಣ. ಹೆಚ್ಚಿನ ಕಡೆಗಳಲ್ಲೂ ಆ ಕಾಲದಲ್ಲಿ ನಾವು ಒಂದು ತರದ ಬರ್ಬರ ಸಂಸ್ಕೃತಿಯಿದ್ದುದನ್ನು ಕಾಣುತ್ತೇವೆ. ನಮ್ಮಲ್ಲಿ ಆ ಕಾಲದಲ್ಲೇ ಭೋಗಕ್ಕೆ ಬೆಲೆ ಇರಲಿಲ್ಲ. ತ್ಯಾಗಕ್ಕೆ ಬೆಲೆ ಇತ್ತು. ತ್ಯಾಗೇನೈಕೇ ಅಮೃತತ್ವಮಾನಶುಃ - ``ತ್ಯಾಗದಿಂದಲೇ ಮೋಕ್ಷ ಹೊರತು ಭೋಗದಿಂದ ಅಲ್ಲ - ಎಂಬುದು ನಮ್ಮ ಸಂಸ್ಕೃತಿ. ಭೋಗ ಕಲಹಕ್ಕೆ, ಅಹಿಂಸೆಗಳಿಗೆ ಕಾರಣ. ಅದನ್ನು ತಿಳಿದುಕೊಂಡು ನಮ್ಮ ಜನ ತ್ಯಾಗಕ್ಕೆ ಹೆಚ್ಚು ಬೆಲೆಕೊಟ್ಟರು. `ತೇನ ತ್ಯಕ್ತೇನ ಭುಂಜೀಥಾಃ | ಮಾ ಗೃಧಃ ಕಸ್ಯಚಿದ್ಧನಂ.' ಈ ಪ್ರಪಂಚ ಎಲ್ಲ ಪರಮಾತ್ಮಮಯ. ಆತ ಕೊಟ್ಟದ್ದನ್ನು ನೀನು ತಿಂದುಕೋ. ಇನ್ನೊಬ್ಬರ ಸೊತ್ತು ನಿನಗೆ ಬೇಡ. ನೀನು ದುಡಿದು ನೀನು ಸುಃಖ ಪಡೆ. ಇದಕ್ಕಿಂತ ಮೇಲಿನ ಉಚ್ಚ ಸಂಸ್ಕೃತಿ ಇನ್ನು ಯಾವುದು? ನಮ್ಮ ಪುರಾಣಗಳಾಗಲಿ, ರಾಮಾಯಣವಾಗಲಿ ಮಹಾಭಾರತವಾಗಲಿ - ಈ ಸತ್ಯದ ಬೆಳಕಿನಲ್ಲಿ ಸಾಗಿವೆ ಎಂಬುದರಲ್ಲಿ ಸಂದೇಹವಿಲ್ಲ.
[ಪೂರ್ವಪ್ರಕಟಿತ - `ಪೊಂಗದಿರು', ಪುಣಿಂಚತ್ತಾಯ ಷಷ್ಟ್ಯಬ್ದ ಅಭಿನಂದನಗ್ರಂಥ, 1998 - ಇದರಲ್ಲಿ ಪುನರ್ಮುದ್ರಿತ]