ಪ್ರಾಚೀನತುಳುನಾಡಿನ ತೆಂಕಸೆರಗು ಕಾಸರಗೋಡು. ಇಲ್ಲಿ `ಬಾಕುಡ'ರೆಂಬ ಮೂಲನಿವಾಸಿಗಳಿದ್ದಾರೆ. ಇವರ ಕುಲದೈವ ಸರ್ಪ. ಭೂತಾರಾಧನೆಯ ಪದ್ಧತಿಯಂತೆ ಇವರು ಸರ್ಪಾರಾಧನೆ ನಡೆಸುತ್ತಿದ್ದಾರೆ. ಇವರ ವಸತಿಗಳ ಬಳಿಯಲ್ಲಿ ಪುರಾತನ ನಾಗಬನಗಳಿವೆ. ಇಚ್ಲಾಡಿಯಿಂದ ತಲಪ್ಪಾಡಿವರೆಗಿನ ನೆಲ ಬಾಕುಡರ ಆವಾಸಕೇಂದ್ರ. `ದಿರಡೇರ್' (ದ್ರಾವಿಡರು?) ಎಂದು ಕರೆಯಲ್ಪಡುವ ಇವರು 'ತಾವು ಈ ನೆಲದ ಮೂಲ ನಿವಾಸಿಗಳೆ'ಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ``ನೆಲದಲ್ಲಿ ಎಲ್ಲಿ ಬೇಕಾದರೂ ಸರಿಯೆ; ಮೂರು ಮುಷ್ಟಿ ಮಣ್ಣನ್ನು ತೆಗೆದು 'ಇದು ನಮ್ಮ ನೆಲ' ಎಂದು ದೈವದ ಮುಂದೆ ಪ್ರಮಾಣ ಮಾಡಿ ಹೇಳುವ ಧೈರ್ಯ ನಮಗಿದೆ'' ಎಂದು ದೃಢಭಕ್ತಿಯಿಂದ ಹೇಳುತ್ತಾರೆ. ಬೈಲುಕರೆಗಳಲ್ಲಿ ಮನೆಕಟ್ಟಿ ವಾಸಿಸುತ್ತಾ, ಬೇಸಾಯದ ಕೆಲಸಗಳಲ್ಲಿ ಸಹಕರಿಸುವ - ದುಡಿಯುವ ಇವರನ್ನು 'ಬೈಲ ಬಾಕುಡೆರ್' ಎಂದೂ ಕರೆಯುತ್ತಾರೆ.
`ತೆಯ್ಯಂ' ಎಂಬುದು `ದೈವ' ಪದದ ದ್ರಾವಿಡೀಕೃತ ರೂಪ. ಅದನ್ನೇ ತುಳು ವಿನಲ್ಲಿ `ದೆಯ್ಯ' ಎನ್ನುತ್ತಾರೆ. ತುಳುನಾಡಿನಲ್ಲಿ ಮತ್ತು ಕೇರಳದಲ್ಲಿ ಈಯೆರಡು ರೂಪಗಳ ಆರಾಧನೆಯೂ ಸಮಾನವಾಗಿ ಜರಗುತ್ತದೆ. `ದೆಯ್ಯೊ'ಗಳಿಗೆ ಭೂತವೆಂಬ ಹೆಸರು ಅನಂತರ ಬಳಕೆಗೆ ಬಂದದ್ದು. ಭೂತಗಳು ತಮ್ಮ ನುಡಿಗಟ್ಟುಗಳಲ್ಲಿ ಹೆಚ್ಚಾಗಿ ತಮ್ಮನ್ನು `ದೆಯ್ಯೊ' ಎಂದೇ ಕರೆದುಕೊಂಡಿವೆಯಲ್ಲದೆ, ಭೂತವೆಂದು ಹೆಸರಿಸಿಕೊಂಡದ್ದಿಲ್ಲ. `ಭೂತ' ಎಂದರೆ ಪಂಚಭೂತಗಳು, ಜೀವಜಾಲ, ಪಿಶಾಚಗಣ ಎಂದೆಲ್ಲ ಅರ್ಥ ಗಳಿವೆ. ಹಾಗೆಯೇ ಸತ್ಯ ಎಂಬ ಅರ್ಥವೂ ಇದೆ. ನಮ್ಮ ಜನಪದರೂ ಭೂತವನ್ನು ಸತ್ಯೊ, ಮಾಯೆ ಎಂದೆಲ್ಲ ಸಂಬೋಧಿಸುವುದು ಸರ್ವೇ ಸಾಮಾನ್ಯ.
ಒಂದು ಪವಿತ್ರವಾದ ಪರಿಸರ. ಹರಿಹರರ ಸಾನ್ನಿಧ್ಯ ತುಂಬಿದ ಪುಣ್ಯಪೀಠ. ದೀಪಗಳು ಬೆಳಗುತ್ತವೆ; ಮಂಗಳಾರತಿಯಾಗುತ್ತದೆ. 'ಹರೇ ರಾಮ ಹರೇ ಕೃಷ್ಣ' ಭಜನೆಯ ಘೋಷ ವಾತಾವರಣವನ್ನು ಪುಲಕಿತಗೊಳಿಸುತ್ತದೆ. ನೆರೆದ ಭಕ್ತವೃಂದ ಆ ಗಾಯನಕ್ಕೆ ಸುಶ್ರಾವ್ಯವಾಗಿ ದನಿಗೂಡಿಸುತ್ತದೆ. ಮುಂದೆ ಕಲಾಮಂಟಪಕ್ಕೆ ಯಾತ್ರೆ. ಶಂಖ ಜಾಗಟೆ ನಾಗಸ್ವರಗಳ ಸುಮಧುರಧ್ವನಿ. ಯಾವುದೋ ಹೊಸ ಸನ್ನಿವೇಶಕ್ಕೆ ನಾವು ಹೊಂದಿ ಕೊಳ್ಳಲು ಬದಲಾಗುತ್ತಿರುವಂತೆ ಅನುಭವ. ಕಲಾಮಂಟಪದ ಎದುರು ಜನಸ್ತೋಮ ಕೈ ಮುಗಿದು ನಿಲ್ಲುತ್ತದೆ. ಮತ್ತೆ ಮಂಗಳಾರತಿಯ ಬೆಳಕಿನಲ್ಲಿ ಹೊಳೆ ಹೊಳೆವ ನವನೀತ ಕೃಷ್ಣನ ದಿವ್ಯಮೂರ್ತಿಯನ್ನು ಕಾಣುತ್ತೇವೆ. ಮರುಕ್ಷಣ ಎಲ್ಲವೂ ನಿಶ್ಶಬ್ದ... ಎತ್ತಲೂ ಮೌನ....ಮಂಟಪದ ಎದುರು ಸಂಗೀತದ ಉಪಕರಣಗಳು. ತಂಬೂರ, ಹಾರ್ಮೋನಿಯಂ, ಮೃದಂಗ, ಚೆಂಡೆ, ಜಾಗಟೆ, ಪಿಟೀಲು, ಕೈತಾಳ... ಇತ್ಯಾದಿ. ಅವು ಕೇವಲ ಬಾರಿಸುವ - ಹೊಡೆಯುವ ವಸ್ತುಗಳಲ್ಲ. ಗಂಧಪುಷ್ಪಗಳಿಂದ ಅಲಂಕೃತವಾದ ಆ ವಾದ್ಯಗಳು ಬರಿಯ ಮನೋರಂಜನೆಯ ಎಲ್ಲೆಯನ್ನು ದಾಟಿ ಇನ್ನೂ ಎತ್ತರದಲ್ಲಿದ್ದಂತೆ ನಮಗೆ ಭಾಸವಾಗು ತ್ತವೆ. ತಂಬೂರದ ನಾದತರಂಗ ಕೇಳತೊಡಗಿದೊಡನೆ ಜನರೆಲ್ಲ ಆಸೀನರಾಗುತ್ತಾರೆ.
ಮನುಷ್ಯ ತನ್ನ ನೋವು ನಲಿವುಗಳನ್ನು ನೆನೆಯುತ್ತಾ ಅಂತರ್ಮುಖಿಯಾದಾಗ ಸಾಹಿತ್ಯ ಹುಟ್ಟುತ್ತದೆ. ಅಂತೆಯೇ ತನ್ನ ಸುತ್ತುಮುತ್ತಲಿನ ಪರಿಸರಕ್ಕೆ ಸ್ಪಂದಿಸಿದಾಗಲೂ ಸಾಹಿತ್ಯ ಸೃಷ್ಟಿಯಾಗುತ್ತದೆ. ಅಂತರ್ಮುಖಿಯಾದವನ ನೋವು-ನಲಿವುಗಳು ಪರಿಸರ ದಿಂದಲೂ ಪ್ರಭಾವಿತವಾದಾಗ ಹುಟ್ಟುವ ಸಾಹಿತ್ಯವೇ ಸಹಜಸಾಹಿತ್ಯವೆನಿಸುತ್ತದೆ. ನಮ್ಮ ಜನಪದಸಾಹಿತ್ಯ ಇಂಥದು. `ಸಮುದ್ರಜಾನಪದ' ಎಂಬ ಈ ಶೀರ್ಷಿಕೆಯಡಿಯಲ್ಲಿ ಸಾಹಿತ್ಯಾಂಶಕ್ಕೆ ಮಾತ್ರ ಒತ್ತುಕೊಟ್ಟು, ಈ ಪ್ರಬಂಧವನ್ನು ಬರೆಯಲಾಗಿದೆ. `ಸಮುದ್ರಜಾನಪದ' ಎಂಬ ಪರಿಕಲ್ಪನೆ ಹೊಸತೇನೂ ಅಲ್ಲ; ಆದರೆ ಈ ವಿಭಾಗ ದಲ್ಲಿ ಲಭ್ಯವಾದ ಜನಪದಸಾಹಿತ್ಯವನ್ನು ಒಂದೆಡೆ ಕಲೆಹಾಕಿದ್ದು ಈ ಪ್ರಬಂಧದ ವೈಶಿಷ್ಟ್ಯ. ಮೊಗವೀರರಲ್ಲಿ ತುಳು ಹಾಗೂ ಕನ್ನಡ ಮಾತೃಭಾಷೆಯವರಿದ್ದಾರೆ. ಅವರು ಆಯಾ ಪ್ರದೇಶದ ತುಳು ಅಥವಾ ಕನ್ನಡವನ್ನು ಮಾತಾಡುತ್ತಾರೆ. ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲದಿಂದ ಕಲ್ಯಾಣಪುರದವರೆಗೆ ವಾಸ್ತವ್ಯವಿರುವ ಮೊಗವೀರರು ತುಳು ಮಾತಾಡು ವವರಾದರೆ, ಅಲ್ಲಿಂದ ಉತ್ತರದಲ್ಲಿ ವಾಸಿಸುವವರು ಕನ್ನಡ ಮಾತೃಭಾಷೆಯವರು. ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳ ಮುಂತಾದೆಡೆ ವಾಸಿಸುವ ಸೀಮಿತ ಸಂಖ್ಯೆಯ ಮೊಗವೀರರು ತುಳು ಮಾತಾಡುತ್ತಾರೆ.
ಯಾವುದೇ ಭಾಷೆಯ ಸಾಹಿತ್ಯದ ಮೂಲರೂಪದರ್ಶನಕ್ಕೆ ನಮಗಿರುವ ಆಧಾರ ಜನಪದಸಾಹಿತ್ಯವೊಂದೇ. ಪಾಂಡಿತ್ಯದ ಚಂಡಮಾರುತಕ್ಕೆ ಒಳಗಾಗದೆ, ಪ್ರದರ್ಶನದ ಬೂಟಾಟಿಕೆಗೆ ಮರುಳಾಗದೆ, ನಿಷ್ಕಲ್ಮಷಹೃದಯದಿಂದ ಮುಕ್ತಕಂಠದಿಂದ ಸತ್ಯವೂ ಶಿವ ಮಯವೂ ಆದ ಒಂದು ವಾಕ್ಸೌಂದರ್ಯವನ್ನು ಬದುಕಿನ ಪರಮಾರ್ಥವನ್ನು ಸೃಜಿಸಿ ಕೊಟ್ಟ ನಮ್ಮ ಎಲ್ಲ ಜನಪದರೂ ಅಭಿನಂದನೀಯರೆ.
ಶಿಷ್ಟಸಾಹಿತ್ಯವು ವಿರಳವಾಗಿರುವ ತುಳುಭಾಷೆಯಲ್ಲಂತೂ ಈ ಜನಪದದ ಸ್ವಚ್ಛ ರೂಪವನ್ನು ನಾವು ಕಾಣುತ್ತೇವೆ. ಸ್ಫಟಿಕದಂತಹ ಭಾವನೆ, ಮುತ್ತಿನಂತಹ ಮಾತು, ಮಾಣಿಕದಂತಹ ಸೌಂದರ್ಯ - ಈ ಮೂರರ ಸಮ್ಮಿಲನವನ್ನು ಯಾವುದೇ ಕೃತಕವಾದ ಮೆರುಗಿಲ್ಲದೆ, ಸಹಜಸುಂದರವಾದ ರೂಪದಿಂದ ನಾವು ಕಾಣಬೇಕಾದರೆ ತುಳುವಿನ ಜನಪದಗೀತಗಳನ್ನು ಶರಣು ಹೋಗಬೇಕು. ಇಲ್ಲಿ ಯಾವುದೇ ಕಟ್ಟುಪಾಡುಗಳಿಲ್ಲ; ನಿಖರವಾದ ನಿಯಮಗಳಿಲ್ಲ. ಎಲ್ಲವೂ ಸ್ವಚ್ಛಂದ - ನಿರರ್ಗಳ. ಪಾಂಡಿತ್ಯಪೂರ್ಣವಾದ ಭಾಷೆಗೆ ಇಲ್ಲಿ ಸ್ಥಾನವಿಲ್ಲ. ಇದು ಹೃದಯದ ಭಾಷೆ. ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗಿ ನಮ್ಮ ಜನಪದರು ಹಾಡಲಿಲ್ಲ. ಅವರ ಅಂತರಂಗದ ಮಿಡಿತಗಳು ತಾವಾಗಿಯೇ ಅವರನ್ನು ಹಾಡಿಸಿದುವು - ಪ್ರೇರಿಸಿದುವು. ಒಂದು ಆಚರಣೆಯ ಹಿನ್ನೆಲೆಯ ಸಾಹಿತ್ಯವಾಗಿ ಹುಟ್ಟಿಕೊಂಡ ಅಥವಾ ಆರಾಧನೆಯ ಉದ್ದೇಶವಾಗಿ ಹುಟ್ಟಿಕೊಂಡ ತುಳುಪಾರ್ತನಗಳು ವಸ್ತುವರ್ಣನೆ ಭಾವನೆಗಳ ವೈವಿಧ್ಯದಿಂದಾಗಿ ಸಾಹಿತ್ಯದ ಉತ್ತಮಗುಣಗಳಿಗೆ ಸಾಕ್ಷಿಯಾಗಿವೆ.
ಒಂದು ಗ್ರಾಮದ ಜಾನಪದ ಸಂಗ್ರಹ ಎಂಬ ಯೋಜನೆಗಾಗಿ ನಾನು ಆಯ್ದುಕೊಂಡ ಗ್ರಾಮವು ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ. ಸಾಕಷ್ಟು ವಿದ್ಯುತ್ ಸೌಲಭ್ಯ, ಬಸ್ಸುಗಳ ಸೌಕರ್ಯ, ಸಿನೆಮಾ, ಯಕ್ಷಗಾನ ಬಯಲಾಟ ಇತ್ಯಾದಿ ಮನೋರಂಜನೆಗಳು ಇಂತಹ ಯಾವುದೇ ವ್ಯವಸ್ಥೆಗಳಿಲ್ಲದ ಈ ಗ್ರಾಮದಲ್ಲಿ ದಟ್ಟ ಜಾನಪದ ಸಂಸ್ಕ್ರತಿ ಹರಡಿರಬಹುದು ಎಂಬ ಊಹೆಯಲ್ಲಿ ನಾನು ಈ ಗ್ರಾಮವನ್ನು ಆಯ್ದುಕೊಂಡೆ. ನನ್ನ ಊಹೆ ಸುಳ್ಳಾಗಲಿಲ್ಲ. ನಲುವತ್ತೊಂಬತ್ತು ಆಡಿಯೋ ಕ್ಯಾಸೆಟ್ಟು ಮತ್ತು ಒಂದು ವೀಡಿಯೋ ಕ್ಯಾಸೆಟ್ಟು ಹೀಗೆ ಒಟ್ಟು ಐವತ್ತು ಕ್ಯಾಸೆಟ್ಟುಗಳಲ್ಲಿ ಈ ಗ್ರಾಮದ ಜನಪದ ಸಂಸ್ಕ್ರತಿ ಲಭ್ಯವಾಗುವ ಮೂಲಕ ಯೋಜನೆಯು ಸಾರ್ಥಕತೆಯ ಮಟ್ಟವನ್ನು ತಲುಪಿದೆ ಎಂದು ನನ್ನ ಆಶಯ.
'Mahajanapada' book contains complete set of articles written by Dr. Venkataraja Puninchathaya. This book is edited by Dr. Padekallu Vishnu Bhat. To avail this book contact here.
By Dr. Venkataraja Puninchathaya
Dr. Venkataraja Puninchathaya
ಪಾರ್ತನಗಳಲ್ಲಿ ಕಂಡುಬರುವ ವರ್ಣನೆ ಮತ್ತು ಕಾವ್ಯಸಂಪ್ರದಾಯಗಳು
Dr. Venkataraja Puninchathaya
Tulu Lipi ನಾಗಾರಾಧನೆ Puninchathaya Pundoor Janapada Parthana ತುಳು Research ಭೂತ ಕೋಲ Shivalli Pongadiru Mogaveera
This site is dedicated to 'Tulu Mahatma' Venkataraja Puninchathaya. All rights reserved ©
"Gayatri", Ithanadka
Kakkebettu post, Mulleria
Kasaragod dist, Kerala
671543
Ph : 04994260430
Powered by AEVUM DEVELOPERS
ಪ್ರಾಚೀನತುಳುನಾಡಿನ ತೆಂಕಸೆರಗು ಕಾಸರಗೋಡು. ಇಲ್ಲಿ `ಬಾಕುಡ'ರೆಂಬ ಮೂಲನಿವಾಸಿಗಳಿದ್ದಾರೆ. ಇವರ ಕುಲದೈವ ಸರ್ಪ. ಭೂತಾರಾಧನೆಯ ಪದ್ಧತಿಯಂತೆ ಇವರು ಸರ್ಪಾರಾಧನೆ ನಡೆಸುತ್ತಿದ್ದಾರೆ. ಇವರ ವಸತಿಗಳ ಬಳಿಯಲ್ಲಿ ಪುರಾತನ ನಾಗಬನಗಳಿವೆ. ಇಚ್ಲಾಡಿಯಿಂದ ತಲಪ್ಪಾಡಿವರೆಗಿನ ನೆಲ ಬಾಕುಡರ ಆವಾಸಕೇಂದ್ರ. `ದಿರಡೇರ್' (ದ್ರಾವಿಡರು?) ಎಂದು ಕರೆಯಲ್ಪಡುವ ಇವರು 'ತಾವು ಈ ನೆಲದ ಮೂಲ ನಿವಾಸಿಗಳೆ'ಂದು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ``ನೆಲದಲ್ಲಿ ಎಲ್ಲಿ ಬೇಕಾದರೂ ಸರಿಯೆ; ಮೂರು ಮುಷ್ಟಿ ಮಣ್ಣನ್ನು ತೆಗೆದು 'ಇದು ನಮ್ಮ ನೆಲ' ಎಂದು ದೈವದ ಮುಂದೆ ಪ್ರಮಾಣ ಮಾಡಿ ಹೇಳುವ ಧೈರ್ಯ ನಮಗಿದೆ'' ಎಂದು ದೃಢಭಕ್ತಿಯಿಂದ ಹೇಳುತ್ತಾರೆ. ಬೈಲುಕರೆಗಳಲ್ಲಿ ಮನೆಕಟ್ಟಿ ವಾಸಿಸುತ್ತಾ, ಬೇಸಾಯದ ಕೆಲಸಗಳಲ್ಲಿ ಸಹಕರಿಸುವ - ದುಡಿಯುವ ಇವರನ್ನು 'ಬೈಲ ಬಾಕುಡೆರ್' ಎಂದೂ ಕರೆಯುತ್ತಾರೆ.
ಇಚ್ಲಾಡಿಯಿಂದ ತಲಪ್ಪಾಡಿ ವರೆಗೆ ಬಾಕುಡರದು ಒಟ್ಟು ಹದಿನೆಂಟು ಸ್ಥಾನಗಳಿವೆ. ಈ ಸ್ಥಾನಗಳಲ್ಲಿ ಅವರು ತಮ್ಮ ಕುಲದೇವತೆಯ ಆರಾಧನೆ ನಡೆಸುತ್ತಾರೆ. ನಾಗಬನಗಳ ಬಳಿಯಲ್ಲಿ ಸರ್ಪಭೂತಾರಾಧನೆ ನಡೆಸುತ್ತಾರೆ. ಕೊಡೆಂಚಿರ್ ಎಂಬಲ್ಲಿನದು 'ಉದಿಪ್ಪು' (ಮೊದಲನೆಯ) ಸ್ಥಾನವಾದರೆ, ಅಡ್ಕ ಎಂಬಲ್ಲಿನದು 'ಕಂತ್'(ಕೊನೆಯ) ಸ್ಥಾನ. ಅತಿ ಪುರಾತನದಲ್ಲಿ ಸರ್ಪಾರಾಧನೆ ಮಾತ್ರ ಮಾಡುತ್ತಿದ್ದ ಬಾಕುಡರು ಕಾಲಕ್ರಮೇಣ ಬಿಲ್ಲಾರೆ, ಕೋಮರಾಯೆ, ಧೂಮಾವತಿ, ಮೈಸಂದಾರ್, ಪಿಲಿಚ್ಚಾಂಡಿ, ಪಂಜುರ್ಳಿ, ಬಬ್ಬರಿಯೆ ಮುಂತಾದ ಇತರ ಭೂತಗಳನ್ನೂ ಉಪದೈವಗಳಾಗಿ ಆರಾಧಿಸತೊಡಗಿದರು.
ಬೆರ್ಮೆರೆ ಸೇವೆ :
ಹೆಂಗಸರು ತಮ್ಮ ಕುಲದೈವವಾದ ನಾಗಬೆರ್ಮರಿಗೆ 'ಬೆರ್ಮೆರೆ ಸೇವೆ' ಎಂಬ ವಿಶೇಷ ಹರಕೆಯನ್ನು ಸಲ್ಲಿಸುತ್ತಾರೆ. ಒಂದು ಕುಡ್ತೆ ಎಣ್ಣೆ, ಅರ್ಧಸೇರು ಅಕ್ಕಿ ಮತ್ತು ವೀಳ್ಯದೆಲೆ ಇಷ್ಟನ್ನು ಬೆರ್ಮರಿಗೆ ಒಪ್ಪಿಸುವುದೇ 'ಬೆರ್ಮೆರೆ ಸೇವೆ'ಯೆಂಬ ಹರಕೆ. ಸರ್ಪ ದೋಷದಿಂದಾಗಿ ವಿಸರ್ಪ(ಊಜಡಿಠಿ)ರೋಗ ಬರುತ್ತದೆ, ಎನ್ನುವ ಬಾಕುಡರು ಅದರ ಪರಿಹಾರಕ್ಕಾಗಿ ಮತ್ತು ಸಂತಾನಭಾಗ್ಯಕ್ಕಾಗಿ ಕೂಡ ನಾಗನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಬಬ್ಬರಿಯನಿಗೆ 'ಬೆಲ್ಲಕಡುಬು' ಅರ್ಪಿಸುತ್ತಾರೆ. ಬೆಳ್ತಿಗೆ ಅಕ್ಕಿ ಹುಡಿ, ಬೆಲ್ಲ, ತೆಂಗಿನಕಾಯಿ, ಮಿಶ್ರಮಾಡಿ ಅದನ್ನು ಬಾಳೆಲೆಯಲ್ಲಿ ಸುತ್ತಿ ಬೈಹುಲ್ಲಿನ ಬೆಂಕಿಯಲ್ಲಿ ಬೇಯಿಸಿ ತಯಾರಿಸಿದ ಪಾಕವೇ `ಬೆಲ್ಲಕಡುಬು'.
ಸರ್ಪಕೋಲ :
ನಾಗಾರಾಧನೆ ಹಲವಾರು ವಿಧಾನಗಳಿಂದ ಜರುಗುತ್ತದೆ. ಅಗೆಲು, ತಂಬಿಲ, ಆಶ್ಲೇಷಬಲಿ, ಡಕ್ಕೆಬಲಿ, ನಾಗಮಂಡಲ - ಹೀಗೆ. ಆದರೆ ಬಾಕುಡರು ಪಂಜುರ್ಳಿ, ಜುಮಾದಿ ಮುಂತಾದ ಭೂತಗಳನ್ನು ನೇಮ-ಕೋಲಗಳ ಮೂಲಕ ಆರಾಧಿಸುವಂತೆ, ವಿವಿಧ ಸರ್ಪಗಳನ್ನು ಆರಾಧಿಸುತ್ತಾರೆ. ಇಂತಹ ಸರ್ಪಭೂತಗಳನ್ನು ಕಟ್ಟುವವರು ನಲಿಕೆ ಯವರು ಅಥವಾ ಕೋಪಾಳ ಜನಾಂಗದವರು.
ನೇಲ್ಯ ಉಲ್ಲಾಳ್ತಿ (ನಾಗಯಕ್ಷಿ), ಎಲ್ಯ ಉಲ್ಲಾಳ್ತಿ, ಸಂಕಪಾಲೆ, ಕೃಷ್ಣಸರ್ಪೆ -ಇವು ಬಾಕುಡರು ಪ್ರಧಾನವಾಗಿ ಆರಾಧಿಸುವ ಸರ್ಪಗಳು. 'ನೇಲ್ಯ ಉಲ್ಲಾಳ್ತಿ' ಮತ್ತು 'ಎಲ್ಯ ಉಲ್ಲಾಳ್ತಿ'ಯರು ಅಕ್ಕತಂಗಿಯರು. ಸಂಕಪಾಲರಲ್ಲಿ ಎರಡು ಜಾತಿಗಳಿವೆ. 'ಕರಿಯ ಸಂಕ ಪಾಲೆ', ಮತ್ತು 'ಬೊಳಿಯ ಸಂಕಪಾಲೆ' ಎಂದು, ಕೊನೆಯದು ಕೃಷ್ಣ ಸರ್ಪ, ಮಂತ್ರಶಕ್ತಿಗೆ ಬಾಗುವ ಉತ್ತಮಜಾತಿಯ ಸರ್ಪವೆಂದು ನಂಬಿಕೆ. ಸಂಕಪಾಲನಿಗೆ ಏಳುನೂರ ಎಪ್ಪತ್ತೇಳು ಹೆಡೆಗಳೆಂದು ಲೆಕ್ಕ. ಈ ಭೂತದ ಮುಡಿ (ಅಣಿ) ಸಹ ತುಂಬ ದೊಡ್ಡದು. ಇದು ಶಂಕು ಆಕಾರದ ಮುಡಿ. ಮುಡಿಯ ತುಂಬ ಹಾಳೆಯ ಹೆಡೆಗಳನ್ನು ಬಿಗಿದು ಅಲಂಕಾರ ಮಾಡುತ್ತಾರೆ. ಹಾಳೆಗಳನ್ನು ಹೆಡೆಯ ಆಕಾರದಲ್ಲಿ ಕತ್ತರಿಸಿ, ಅದರ ಮೇಲೆ ಮಸಿಯಿಂದ ರೇಖೆಗಳನ್ನು ಬರೆದು ಹೆಡೆಗಳನ್ನು ತಯಾರಿಸುತ್ತಾರೆ. ಅತ್ಯಂತ ಎತ್ತರವೂ ಭಾರವೂ ಇರುವುದರಿಂದ ಇದನ್ನು ಪಾತ್ರ್ರಿಯು ತಲೆಯಲ್ಲಾಗಲಿ, ಸೊಂಟ ದಲ್ಲಾಗಲಿ ಹೊರುವ ಪದ್ಧತಿಯಿಲ್ಲ. ಭೂತಪಾತ್ರಿಯು ನಡೆದುಕೊಂಡು ಬರುವಾಗ, ಎರಡು ಬದಿಗಳಲ್ಲಿ ಮತ್ತು ಹಿಂದೆ ಜನರು ನಿಂತುಕೊಂಡು ಪಾತ್ರಿಯ ತಲೆಯ ಮೇಲುಭಾಗಕ್ಕೆ ಸರಿಯಾಗಿ ಮುಡಿ ಯನ್ನು ಹೊತ್ತುಕೊಂಡು ಹಿಂದೆಯೇ ನಡೆದುಕೊಂಡು ಬರುತ್ತಾರೆ. ಸರ್ಪಾರಾಧನೆ ಒಂದು ರಾತ್ರಿಯಿಡೀ ಜರಗುವ ಕಾರ್ಯಕ್ರಮ. ಈ ನಡುವೆ 'ಕುಡಂಗೆರ್' ಎಂಬ (ಯಕ್ಷಗಾನ ಕೋಡಂಗಿಯಂತಹ) ಎರಡು ಹಾಸ್ಯಪಾತ್ರಗಳ ಸಂಭಾಷಣೆ ಇರುತ್ತದೆ. ನಲಿಕೆಯವರ ಹೆಂಗುಸೊಬ್ಬಳು ಈ ಕಾರ್ಯಕ್ರಮವನ್ನು ನಿರ್ದೇಶಿಸುತ್ತಾಳೆ. ಆಕೆ ಹಾಡುತ್ತಾಳೆ ಮತ್ತು ಯಕ್ಷಗಾನ ಭಾಗವತರಂತೆ ಪಾತ್ರಗಳೊಡನೆ ಸಂಭಾಷಣೆ ನಡೆಸುತ್ತಾಳೆ. ಹಾಸ್ಯದ ಅತಿರೇಕ ದಲ್ಲಿ ಕಥೆ ಮುಂದೆ ಹೋಗದಿದ್ದರೆ ಆಗ ಆಕೆ ಸಹಕರಿಸಿ, ಕಥೆಯ ಮುನ್ನೋಟಕ್ಕೆ ಪೋಷಣೆನೀಡುತ್ತಾಳೆ.
'ಬೆರ್ಮೆರೆ ನಲಿಕೆ'ಯೆಂಬ ಇನ್ನೊಂದು ಹೆಸರುಳ್ಳ ಈ ಕೋಲಕ್ಕೆ ನಾಲ್ಕು ಮಂದಿ ಮುಖ್ಯಸ್ಥರು (ಇವರಿಗೆ ಕಾರ್ನಪ್ಪಾಡರೆಂದು ಹೆಸರು). ಈ ಮುಖ್ಯಸ್ಥರನ್ನು 'ನಾಲಜ್ಜಿ ಕಾರ್ನೇರ್'ಎಂದು ಕರೆಯಲಾಗುತ್ತದೆ.
ನಲಿಕೆಯ ಕೊನೆಯ ಹಂತ ಕೃಷ್ಣಸರ್ಪನ ಕೋಲ. ಆಗ ಗದ್ದೆಯಲ್ಲಿರುವ ಕಸಕಡ್ಡಿ ಗಳನ್ನೆಲ್ಲ ಹಾರೆಯಿಂದ ಕೆರೆದು ಕೃಷ್ಣಸರ್ಪನಿಗೆ ಹೋಗಲು ಪ್ರತ್ಯೇಕ ದಾರಿ ಮಾಡಲಾಗು ತ್ತದೆ. ಗದ್ದೆಯ ನಡುವೆ ಆಳೆತ್ತರದ ಗಟ್ಟಿಯಾದ ಮಾವಿನ ಹಸಿ ಗೆಲ್ಲುಗಳನ್ನು ಹುಗಿದು, ಕೃತಕ ಮರವೊಂದನ್ನು ಮೊದಲೇ ನಿರ್ಮಿಸುತ್ತಾರೆ. ಇದಕ್ಕೆ 'ಕುಕ್ಕಂಬಿಲ' ಎಂದು ಹೆಸರು. ಕೃಷ್ಣಸರ್ಪವು (ಪಾತ್ರಿಯು) ಹೊಲದಲ್ಲಿ ಕವುಚಿ ಮಲಗಿ ಹಾವಿನಂತೆ ಹರಿದಾಡುತ್ತಾ ಹೊಟ್ಟೆಯೆಳೆದುಕೊಂಡು ಕುಕ್ಕಂಬಿಲದ ಬಳಿ ಬರುತ್ತದೆ. ಬ್ರಾಹ್ಮಣ ಮಂತ್ರವಾದಿ (ಇನ್ನೊಬ್ಬ ಪಾತ್ರಿ) ಜೊತೆಯಲ್ಲಿರುತ್ತಾನೆ. ಕೃಷ್ಣಸರ್ಪವು ಅಲ್ಲಿ ಮೌನವಾಗಿ ಬಿದ್ದುಕೊಂಡರೆ ಮಂತ್ರ ವಾದಿಯು ಕೂಡಲೇ ಮಾವಿನ ಸೊಪ್ಪನ್ನು ಅದರ ಮೇಲೆ ಎಸೆಯುತ್ತಾನೆ.
ಆಗ ಕೃಷ್ಣಸರ್ಪವು ಕೋಪದಿಂದ ಬುಸುಗುಟ್ಟುತ್ತದೆ - ಹೆಡೆಯೆತ್ತುತ್ತದೆ ಮತ್ತು ಮುಂದೆ ಸಾಗುತ್ತದೆ. ಕೊನೆಗೆ ಕುಕ್ಕಂಬಿಲದ ಮೇಲೆ ಮಲಗುತ್ತದೆ. ಮಂತ್ರವಾದಿಯೊಬ್ಬ ಸರ್ಪವನ್ನು ಸ್ವಾಧೀನಪಡಿಸಿ ನಿರ್ದಿಷ್ಟಸ್ಥಾನಕ್ಕೆ ಒಯ್ಯುವ ಈ ಕಲ್ಪನೆ ಅದ್ಭುತವೂ ರಮ್ಯವೂ ರೋಮಾಂಚಕಾರಿಯೂ ಆಗಿದೆ. ಕೃಷ್ಣಸರ್ಪನಿಗೆ ಹಾಳೆಯಿಂದ ತಯಾರಿಸಿದ ಮೂರು ಹೆಡೆಗಳನ್ನು ತಲೆಗೆ ಕಟ್ಟಿರುತ್ತಾರೆ.
ಸರ್ಪಕೋಲದ ದಿವಸ, ಅದಕ್ಕೆ ಸಂಬಂಧಪಟ್ಟ ಕುಟುಂಬಸ್ಥರೆಲ್ಲ `ಪಾಸಿ'ಯಲ್ಲಿ (ನಿಯತಾಹಾರದ ನಿಷ್ಠೆಯಲ್ಲಿ) ಇರಬೇಕು. ಅವರು ಊಟಮಾಡಬಾರದು. ಹಾಲು ಹಾಕದ ಚಾ ಮತ್ತು ಬಾಳೆಹಣ್ಣು ಮಾತ್ರ ಸೇವಿಸಬಹುದು. ಹಸಿಮಡಲಲ್ಲಿ (ಹಸಿ ತೆಂಗಿನ ಗರಿಯಲ್ಲಿ) ಮಲಗಬೇಕು.
ಪಾಡ್ದನದ ಕತೆ :
ಅಣ್ಣಪ್ಪ ರಾಜ್ಯದಲ್ಲಿ ನಾರಾಯಣ ದೇವರು ಇದ್ದರು. ಅವರ ಹೆಂಡತಿ ಮುಂಗುಡೆ ದೆಯ್ಯಾರ್. ಆ ದಂಪತಿಗಳಿಗೆ ಬಹುಕಾಲ ಮಕ್ಕಳಾಗಲಿಲ್ಲ. ಮುಂಗುಡೆದೆಯ್ಯಾರು ನನ್ನಂಥ ಹೆಂಗಸರು ತಿಂಗಳು ತಿಂಗಳು (ಮುಟ್ಟು) ಮೀಯುತ್ತಾರೆ. ಬಸುರಿಯಾಗಿ ವರ್ಷದೊಳಗೆ ಹೆರುತ್ತಾರೆ. ನಾನು ಮೀಯುವುದು ಮೀನು ಮಿಂದ ಹಾಗೆ ಆಯ್ತಲ್ಲ ಎಂದು ದುಃಖಿಸುತ್ತಾಳೆ. ಆಕೆಯ ದುಃಖ ದೇವರಿಗೆ ಕೇಳಿಸಿರಬೇಕು. ಆಗಲೇ ಆಕೆ ಹೊರಗು (ರಜಸ್ವಲೆ) ಆದಳು. ನಾಲ್ಕನೆ ದಿನ ಎಣ್ಣೆ, ಅರಸಿನ ಹುಡಿ, ಸೀಗೆ ಹುಡಿ, ತೆಗೆದುಕೊಂಡು ಹೊಳೆಗೆ ಮೀಯಲು ಹೋದಳು. ಅಲ್ಲಿ ಕಲ್ಲಿನ ಮೇಲೆ 'ಅಯ್ಯೋ' ಎಂದು ದುಃಖಿಸುತ್ತಾಳೆ. ಸ್ವಲ್ಪ ಅಕ್ಕಿ, ವೀಳ್ಯದೆಲೆ, ಅಡಿಕೆಗಳನ್ನು ಒಂದು ಕೊಡಿಯೆಲೆ (ಬಾಳೆಲೆ)ಯಲ್ಲಿಟ್ಟು ಹರಕೆಯಾಗಿ ಸಂಕಲ್ಪಿಸಿ ನೀರ ಮೇಲೆ ತೇಲಿಬಿಡುತ್ತಾಳೆ. ಆಕೆಗೇನೋ ಶುಭಲಕ್ಷಣ ಕಂಡಿತು. ಸಂತೋಷದಿಂದ ಮಿಂದು ಬರುತ್ತಾಳೆ. ಮುಂದಿನ ತಿಂಗಳು ಆಕೆ ಹೊರಗು (ಮುಟ್ಟು) ಆಗಲಿಲ್ಲ. ಬಸುರಿಯಾದ ಸುದ್ದಿ ಊರು ಹರಡಿತು. ಏಳನೆಯ ತಿಂಗಳಲ್ಲಿ ಸೊಸೆಗೆ ಹೊಟ್ಟೆಯ ಬಯಕೆ, ಬಾಯಿಯ ಆಸೆ ತೀರಿಸಬೇಕೆಂದು ಅತ್ತೆ ಭಾವಿಸಿದಳು. ಕಡುಬುಸಮ್ಮಾನ, ಸಿಹಿಹೊದಳಿನ ಸಮ್ಮಾನಗಳಾದುವು. ಹತ್ತನೆಯ ತಿಂಗಳಲ್ಲಿ ಆಕೆಗೆ ಬೇನೆ ಸುರುವಾಯಿತು. ಒಂದು ಬೇನೆ ಬಂದಾಗ ಒಂದು ಮಾಲೆ ಹಾವಿನ ತತ್ತಿಗಳು, ಎರಡನೆ ಬೇನೆ ಬಂದಾಗ ಎರಡು ಮಾಲೆ ತತ್ತಿಗಳು, ಮೂರನೆ ಬೇನೆ ಬಂದಾಗ ಮೂರು ಮಾಲೆ ತತ್ತಿಗಳು - ಹೀಗೆಯೇ ತತ್ತಿಗಳನ್ನಿಡುತ್ತಾ ಹೋದಳು. ಆರನೆಯ ಬೇನೆಯಲ್ಲಿ ಅರುವತ್ತಾರು ಕೋಟಿ ಹೆಡೆಯ 'ಬೊಳಿಯ ಸಂಕಪಾಳೆ' ಎಂಬ ಸರ್ಪ ಹುಟ್ಟುತ್ತದೆ. ಏಳನೆಯ ಬೇನೆಯಲ್ಲಿ ಎಪ್ಪತ್ತೇಳು ಕೋಟಿ ಹೆಡೆಯುಳ್ಳ `ಕರಿಯ ಸಂಕಪಾಳೆ' (ಕಾಳಿಂಗಸರ್ಪ) ಹುಟ್ಟುತ್ತದೆ. ನಾರಾಯಣ ದೇವರು ಕರಿಯ ಸಂಕಪಾಳನನ್ನು ಕರೆದು ನೀನು ಭೂಲೋಕ, ಪಾತಾಳಲೋಕಗಳ ಅಧಿಪತಿಯಾಗಿ ನಾಗರಾಜನೆಂದು ಖ್ಯಾತಿಯಿಂದ ಜೀವಿಸು'' ಎಂದು ಹರಸುತ್ತಾರೆ.
ಒಂದು ದಿನ ಕರಿಯ ಸಂಕಪಾಳನು ಪಾತಾಳದಿಂದ ಮೇಲಕ್ಕೆ ತಲೆಯೆತ್ತಿ ನನಗೆ ಬೇಕಾದ ವ್ಯಕ್ತಿ ಎಲ್ಲಿರಬಹುದು'' ಎಂದು ನೋಡುತ್ತಾನೆ. ಅವನಿಗೆ ಕೊಡೆಂಚಿರ್ನಲ್ಲಿರುವ 'ಪಳ್ಳಿತೋಕುರು ಬಾಕುಡ್ತಿ' ಕಾಣಿಸುತ್ತಾಳೆ. (ಆಕೆಯ ಹುಟ್ಟೂರು ಸಾರ್ಯ, 'ನೇಲ್ಯ ಸಂಕರಮೆ' ಮತ್ತು `ಎಲ್ಯ ಸಂಕರಮೆ' ಎಂಬವರು ಆಕೆಯ ಸಹೋದರರು.)
ಕಾಳಿಂಗಸರ್ಪ ಅಥವಾ ಕರಿಯ ಸಂಕಪಾಳನು `'ಹೆದರಬೇಡ, ನನ್ನನ್ನು ನಂಬು, ಕೋಲ ನಡೆಸಿ ನನ್ನ ಆರಾಧನೆ ಮಾಡು'' ಎನ್ನತ್ತಾನೆ. ಹಾಗೆಯೇ ಆಕೆ 'ಕೊಡೆಂಚಿರ್' ನಲ್ಲಿ ಸ್ಥಾನ ಕಟ್ಟಿಸಿ ಕಾಳಿಂಗಸರ್ಪವನ್ನು ಆರಾಧನೆ ಮಾಡುತ್ತಾಳೆ.
ಅಂದಿನಿಂದ ಬಾಕುಡರಲ್ಲಿ ಸರ್ಪಾರಾಧನೆಯ ಸಂಪ್ರದಾಯ ರೂಢಿಗೆ ಬಂತು. ಬಾಕುಡತಿಗೆ ಸಂಬಂಧಿಸಿದ ಮುಂದಿನ ಕತೆ ಪಾಡ್ದನದಲ್ಲಿ ಹೀಗಿದೆ: ಒಮ್ಮೆ ಆಕೆ ಚಾಪೆ ಹೆಣೆಯುತ್ತಿದ್ದಾಗ ಅದಕ್ಕೆ ಸರ್ಪದ ಹೆಡೆಯಾಕಾರ ಬರತೊಡಗಿತಂತೆ. ಎಷ್ಟೆಷ್ಟು ಸರಿಯಾಗಿ ಹೆಣೆದರೂ, ಹೆಡೆಯ ಆಕಾರವನ್ನು ಇಲ್ಲದೆ ಮಾಡಲು ಆಕೆಯಿಂದ ಆಗಲಿಲ್ಲ. ಆಕೆಗೆ ದುಃಖ ಬಂತು. ಮಾರಲು ಹೋದರೆ ಅಂಥಾ ಚಾಪೆಯನ್ನು ಯಾರೂ ತೆಕ್ಕೊಳ್ಳುವವರೇ ಇಲ್ಲ. ಕೊನೆಗೆ ಆಕೆ ಉರ್ಮಿಹೊಳೆಗೆ ಬರುತ್ತಾಳೆ. 'ದೇವರೇ, ನನ್ನನ್ನು ಮಾಯಕ ಮಾಡಿ' ಎಂದು ಪ್ರಾರ್ಥಿಸುತ್ತಾಳೆ. ದೇವರು ಆಕೆಯನ್ನು ಮಾಯಕಮಾಡುತ್ತಾರೆ.
ನಾಗಾರಾಧನೆ ಅತಿಪುರಾತನವಾದ ಒಂದು ಆರಾಧನಸಂಪ್ರದಾಯ. ಇದು ಕ್ರಿಸ್ತಪೂರ್ವದಲ್ಲೇ ನಮ್ಮ ಜನರಲ್ಲಿ ರೂಢಿಯಿತ್ತು. ಮನುಷ್ಯನ ಬದುಕಿಗೆ ಮೊದಲ ಭಯ ಹಾವಿನದು. ಅದಕ್ಕೆ ಸರ್ಪಾರಾಧನೆ. ಮೃಗಗಳು ಬೆಳೆಯನ್ನು ಹಾಳುಮಾಡುತ್ತವೆ. ಅವುಗಳ ಭಯ ನಿವಾರಣೆಗಾಗಿ ಮಾನವನು ಪಿಲಿಚ್ಚಾಂಡಿ, ಪಂಜುರ್ಳಿ, ಮುಂತಾದ ದೈವಗಳನ್ನು ಆರಾಧಿಸತೊಡಗಿದ. ಮುಂದೆ ವೀರಾರಾಧನೆ ಆರಂಭವಾಯಿತು. ತುಳು ನಾಡಿನ ಅನೇಕ ವೀರಪುರುಷರು, ಸಾಹಸಿಗಳು ಆರಾಧನೆಯ ದೈವಗಳಾಗಿ ಭಕ್ತರಿಂದ ಮಾನ್ಯತೆಪಡೆದರು.
ಕ್ರಿಸ್ತಶಕ ಐದನೆಯ ಶತಮಾನದಲ್ಲಿ ಈ ಪ್ರದೇಶವನ್ನು ಆಳುತ್ತಿದ್ದ ಅರಸರು ನಾಗಾರಾಧನೆಗೆ ಹೆಚ್ಚು ಪ್ರೋತ್ಸಾಹನೀಡಿದುದಾಗಿ ಚರಿತ್ರೆಗಳಿಂದ ತಿಳಿದುಬರುತ್ತದೆ.
.
ಆರ್ಯಸಂಪ್ರದಾಯದ ನಾಗಾರಾಧನೆ :
ಚತುರ್ವರ್ಣಗಳಿಂದ ರಂಗೋಲಿ ಬರೆದು ಅದರಲ್ಲಿ ಅಷ್ಟನಾಗರನ್ನು ವೈದಿಕ ಮಂತ್ರಪೂರ್ವಕವಾಗಿ ಆವಾಹಿಸಿ, ಆ ನಾಗರಿಗೆ ಅನ್ನದ ಬಲಿಯನ್ನು ಸಮರ್ಪಿಸಿ, ಪೂಜಿಸುವುದು ಆರ್ಯಸಂಪ್ರದಾಯ. ಇದಕ್ಕೆ 'ಆಶ್ಲೇಷಾಬಲಿ'ಯೆಂದು ಹೆಸರು. ಜಾತಕ ದಲ್ಲಿ ಕಂಡು ಬರುವ ಕುಜರಾಹುಗ್ರಹದೋಷಪರಿಹಾರ, ಸಂತಾನಲಾಭ, ಸರ್ಪದೋಷ ನಿವಾರಣೆ ಮುಂತಾದ ಕಾರ್ಯಗಳಿಗಾಗಿ ಆಸ್ತಿಕರು ಪುರೋಹಿತರನ್ನು ಕರೆಸಿ ಅವರ ಮೂಲಕ `ಆಶ್ಲೇಷಾಬಲಿ'ಯೆಂಬ ಈ ವೈದಿಕಕ್ರಿಯೆಯನ್ನು, ಆಶ್ಲೇಷಾನಕ್ಷತ್ರದ ದಿವಸ ನಡೆಸುತ್ತಾರೆ.
ಪುರಾತನ ಕುಂಬಳೆಸೀಮೆಯಲ್ಲಿ, ಅತಿಪುರಾತನ ಕಾಲದಲ್ಲಿ ಆದಿನಿವಾಸಿಗಳದ್ದೇ ಒಂದು ಆಧಿಪತ್ಯ ಇತ್ತು. ಇವರಲ್ಲಿ ಮಾಯ್ಲರು, ಬಡಜರು ಮತ್ತು ಮುಗರರು ಮುಖ್ಯರು. ಮಾಯ್ಲರು ಮಧೂರು ಪರಿಸರದಲ್ಲಿಯೂ, ಮುಗರರು ಮತ್ತು ಬಾಕುಡರು ಮೊಗರಾಲು ಪುತ್ತೂರಿನಲ್ಲೂ ವಾಸ್ತವ್ಯವಿದ್ದರು. ಮುಗರ ಮತ್ತು ಬಡಜರೊಳಗೆ ವಿವಾಹಬಾಂಧವ್ಯ ಏರ್ಪಡುತ್ತಿತ್ತು.
ಮೊಗರಾಲು ಪುತ್ತೂರಿನಲ್ಲಿ ಮುಗರರು ಮತ್ತು ಬಾಕುಡರು ನೆಲಸಿದ್ದ ಉಪ್ಪುನೀರಿನ ಜಾಗವನ್ನು ಕೃಷಿಭೂಮಿಯನ್ನಾಗಿ ಮಾಡಿ ಕುಂಬಳೆ ಜಯಸಿಂಹನು (ಕ್ರಿ.ಶ. 10-11ನೇ ನೇ ಶತಮಾನ) ಮೇಚಬ್ಬರಿಸಿಗೆ ದಾನನೀಡಿದನೆಂದು ತಳಂಗೆರೆ ಶಾಸನದಿಂದ ತಿಳಿದುಬರುತ್ತದೆ. ತಳಂಗೆರೆಯಿಂದ ತಲಪಾಡಿ ವರೆಗಿನ ಕರಾವಳಿಯ ನೆಲವನ್ನು 'ಪಡ್ಡೆಯಿ' (ಪಶ್ಚಿಮ) ಎಂದು ಕರೆಯುತ್ತಾರೆ. ಇಲ್ಲಿಯ ಧೂಮಾವತಿಗೆ ಪಡ್ಡೆಯಿ ಧೂಮಾವತಿಯೆಂದು ಹೆಸರು. ಪಡ್ಡೆಯಿ ನೆಲದಲ್ಲೇ ನಾಗಾರಾಧನೆಯೂ ನಡೆಯುತ್ತಿದೆ.
[`ನಾಗದರ್ಶನ' ಕೃತಿಯಲ್ಲಿ ಪ್ರಕಟಿತ; `ತುಳು ನಡೆನುಡಿ', ಪುಣಿಂಚತ್ತಾಯ ಲೇಖನ ಸಂಕಲನ, 1998 -ಇದರಲ್ಲಿ `ದಕ್ಷಿಣ ತುಳುನಾಡಿನಲ್ಲಿ ಸರ್ಪಾರಾಧನೆ' ಎಂಬ ಹೆಸರಿನಲ್ಲಿ ಪುನರ್ಮುದ್ರಿತ]
ಒಂದು ಗ್ರಾಮದ ಜಾನಪದ ಸಂಗ್ರಹ ಎಂಬ ಯೋಜನೆಗಾಗಿ ನಾನು ಆಯ್ದುಕೊಂಡ ಗ್ರಾಮವು ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ. ಸಾಕಷ್ಟು ವಿದ್ಯುತ್ ಸೌಲಭ್ಯ, ಬಸ್ಸುಗಳ ಸೌಕರ್ಯ, ಸಿನೆಮಾ, ಯಕ್ಷಗಾನ ಬಯಲಾಟ ಇತ್ಯಾದಿ ಮನೋರಂಜನೆಗಳು ಇಂತಹ ಯಾವುದೇ ವ್ಯವಸ್ಥೆಗಳಿಲ್ಲದ ಈ ಗ್ರಾಮದಲ್ಲಿ ದಟ್ಟ ಜಾನಪದ ಸಂಸ್ಕೃತಿ ಹರಡಿರಬಹುದು ಎಂಬ ಊಹೆಯಲ್ಲಿ ನಾನು ಈ ಗ್ರಾಮವನ್ನು ಆಯ್ದುಕೊಂಡೆ. ನನ್ನ ಊಹೆ ಸುಳ್ಳಾಗಲಿಲ್ಲ. ನಲುವತ್ತೊಂಬತ್ತು ಆಡಿಯೋ ಕ್ಯಾಸೆಟ್ಟು ಮತ್ತು ಒಂದು ವೀಡಿಯೋ ಕ್ಯಾಸೆಟ್ಟು ಹೀಗೆ ಒಟ್ಟು ಐವತ್ತು ಕ್ಯಾಸೆಟ್ಟುಗಳಲ್ಲಿ ಈ ಗ್ರಾಮದ ಜನಪದ ಸಂಸ್ಕೃತಿ ಲಭ್ಯವಾಗುವ ಮೂಲಕ ಯೋಜನೆಯು ಸಾರ್ಥಕತೆಯ ಮಟ್ಟವನ್ನು ತಲುಪಿದೆ ಎಂದು ನನ್ನ ಆಶಯ.
ಹನ್ನೆರಡು ವರ್ಷಗಳಿಗೊಮ್ಮೆ ಜರಗುವ ಜಾಂಬ್ರಿಯ ಗುಹಾ ಯಾತ್ರೆ ಮತ್ತು ಕುಳದಪಾರೆಯ ಒತ್ತೆಕೋಲ ಈ ಗ್ರಾಮದ ಅಪೂರ್ವ ವೈಶಿಷ್ಟ್ಯಗಳು. ಹಾಗೆಯೇ ಶ್ರೀ ಕಲ್ಲಗ ಚಂದ್ರಶೇಖರ ರಾಯರ ಮನೆಯಲ್ಲಿ ವರ್ಷಂಪ್ರತಿ ಜರಗುವ ರಕ್ತೇಶ್ವರಿ ಕೋಲ - ಇವನ್ನೆಲ್ಲ ವೀಡಿಯೋ ಮಾಡಿಕೊಳ್ಳಲಾಗಿದೆ.
ನೆಟ್ಟಣಿಗೆ ದೇವಸ್ಥಾನ ಜಾಂಬ್ರಿ ಗುಹೆ, ಕುಳದಪಾರೆ ಒತ್ತೆಕೋಲ ಇವುಗಳಿಗೆ ಸಂಬಂಧಿಸಿ ಗ್ರಾಮದ ಅನುಭವಸ್ಥರನ್ನು ಸಂದರ್ಶನ ಮಾಡಿ ಅವರ ಮಾತುಗಳನ್ನು ಆಡಿಯೋ ಕ್ಯಾಸೆಟ್ಟುಗಳಲ್ಲಿ ಸಂಗ್ರಹಿಸಲಾಗಿದೆ. ಮೂರು ಸಂಭವಸ್ಥ ವೈದ್ಯರಲ್ಲಿ ಸಂದರ್ಶಿಸಿ ಅವರು ಹೇಳಿದ ಔಷಧಗಳನ್ನು ದಾಖಲಿಸಿಕೊಂಡಿರುತ್ತೇನೆ. ಗೃಹ ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಜನಪದ ನಂಬಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ.
ನಲಿಕೆಯವನೊಬ್ಬ ಭೂತದ ನುಡಿಗಳನ್ನು ಪರತಿಯೊಬ್ಬಳು ಪಗ್ರ್ಬಾಸೆ(Secret Language) ರಹಸ್ಯವನ್ನು ಹೇಳಿದ್ದಾರೆ. ಮೈಕುಗಳ ಹಾವಳಿಯಿಂದಾಗಿ ಮರೆಯಾಗುತ್ತಿರುವ ಮೇರ ಹರಿಜನರ ಮದುವೆ (ಕನ್ಯೋಪದೇಶದ) ಹಾಡನ್ನು ಜಾನಪದ ವೈದ್ಯೆಯೊಬ್ಬಳು ಒದಗಿಸಿದ್ದಾಳೆ.
ಇದಲ್ಲದೆ ಸಂದರ್ಭಾನುಸಾರವಾಗಿ ದೊರಕಿದ ಒಗಟುಗಳನ್ನು ಮಕ್ಕಳ ಕಥೆಗಳನ್ನು ಮಕ್ಕಳ ಆಟದ ಹಾಡುಗಳನ್ನು ಅಜ್ಜಿ ಕಥೆಗಳನ್ನು ಸಂಗ್ರಹಿಸಿರುತ್ತೇನೆ.
ಈ ಯೋಜನೆಯ ನೆರಳಲ್ಲಿ ನಾನು ಸಂಗ್ರಹಿಸಿದ ವಿಸ್ತಾರವಾದ ದಾಖಲೆಗಳೆಂದರೆ ನೇಜಿ ಹಾಡುಗಳು ಮತ್ತು ನೇಜಿ ಪಾಡ್ದನಗಳು ಒಟ್ಟು 23 ನೇಜಿ ಹಾಡುಗಳು. (ಅನುಬಂಧ 1 ನೋಡಿರಿ)
26 ನೇಜಿ ಪಾಡ್ದನಗಳು (ಅನುಬಂಧ 2 ನೋಡಿರಿ)
14 ಭೂತ ಪಾಡ್ದನಗಳು (ಅನುಬಂಧ 3 ನೋಡಿರಿ)
10 ಕುಣಿತದ ಹಾಡುಗಳು (ಅನುಬಂಧ 4 ನೋಡಿರಿ) (Folk Dance Songs) ಸಹ ಸಂಗ್ರಹವಾಗಿದೆ.
ಕೊಲ್ಲೂರ ಮೂಕಾಂಬಿ, ಕಚ್ಚಿರ ಮಲ್ಲ ಮಾಲೋದಿ, ಮಾದಿಪಪರ್ೊತಿ, ರುಕ್ಮಿಣಿ ಗೋಪಾಲೆ, ದೇವಪೂಂಜೆ, ಜಾಯಿಲೆ ಬಂಗೇರೆ ಅಥವಾ ಚೆಪ್ಪೋಳಿ ಬಂಗೇರ್, ಜೇವುಳ್ಳ ಮಾಣಿಕೊ ಮುಂತಾದ ಪಾಡ್ದನಗಳ ಒಂದೆರಡು ಪಾಠಾಂತರಗಳಾದರೂ ಇವುಗಳೊಳಗಿನ ಪ್ರತ್ಯೇಕತೆ ಮತ್ತು ವೈಶಿಷ್ಟ್ಯಗಳು ಗಮನಾರ್ಹವಾಗಿದೆ.
ಅನೇಕ ಪಾಡ್ದನಗಳ ಜೊತೆಯಲ್ಲಿ ಅವುಗಳ ಸಾರಾಂಶವನ್ನು ಆಯಾ ವಕ್ತೃಗಳ ಬಾಯಿಯಿಂದಲೇ ಹೇಳಿಸುವ ಮೂಲಕ ಪಾಡ್ದನದಲ್ಲಿ ಮರೆತು ಹೋದ ಕೆಲವು ಅಂಶಗಳು ವಾಕ್ಯರೂಪದಲ್ಲಿ ಸಹ ಇಲ್ಲಿ ದಾಖಲೆಯಾದ ಸಂದರ್ಭಗಳೂ ಇವೆ.
ವಿಷಾದದ ಅಂಶವೆಂದರೆ, ಈ ಗ್ರಾಮದ ಜನರು ಕೆಲವೊಂದು ಭೂತ ಪಾಡ್ದನಗಳನ್ನು ಪೂರ್ತಿಯಾಗಿ ಹಾಡಲು ಹೆದರುತ್ತಾರೆ. ಒಂದು ಪಾಡ್ದನದಲ್ಲಿ ಅನೇಕ ಸಂಧಿಗಳಿರುತ್ತವೆ. ಅವುಗಳಲ್ಲಿ ಒಂದನ್ನಾದರೂ ಅವರು ಹೇಳದೆ ಬಿಡುತ್ತಾರೆ. ಎಲ್ಲ ಸಂಧಿಗಳನ್ನು ಕೂಡಿಸಿ ಹೇಳಬಾರದು ಎಂಬ ಶಾಸ್ತ್ರದ ಮಾತನ್ನು ಒಬ್ಬಾಕೆ ನನ್ನೊಡನೆ ಹೇಳಿದ್ದಾಳೆ.
ನಾನು ಸಂದರ್ಶಿಸಿದ ವಕ್ತೃಗಳಲ್ಲಿ ಹೆಚ್ಚಿನವರೂ ಐವತ್ತರ ಗಡಿಯನ್ನು ಮೀರಿದವರು. ಕೆಲವರಂತೂ ಅನಾರೋಗ್ಯದಿಂದ ಬಳಲುತ್ತಿದ್ದರು. ಈಗ ಇವುಗಳನ್ನು ದಾಖಲಿಸಿಕೊಳ್ಳದೆ ಇರುತ್ತಿದ್ದರೆ ಇನ್ನೈದೋ ಹತ್ತೋ ವರ್ಷಗಳಲ್ಲಿ ಇವೆಲ್ಲ ಕಿವಿಮರೆಯಾಗುವ ಸಾಧ್ಯತೆ ಇದೆ. ಹೊಸ ಜನಾಂಗದ ಯುವಕ ಯುವತಿಯರಿಗೆ ಇವುಗಳ ಪರಿಚಯವೇ ಇಲ್ಲ ಎಂಬ ಸ್ಥಿತಿ ಇಲ್ಲಿ ನೆಲೆಸಿದೆ.
ನನ್ನ ಅನುಭವದಂತೆ ಎಲ್ಲಾ ವಕ್ತೃಗಳೂ ತಂತಮ್ಮ ಬಡತನ ಹಾಗೂ ಹೊಟ್ಟೆಪಾಡಿನ ದುಡಿತಗಳಿಂದಾಗಿ ತುಂಬಾ ಬಿಜಿಯಾದಿದ್ದಾರೆ. ಅವರ ಬೇಟೆ ಸುಲಭದ ಕೆಲಸವಲ್ಲ. ಬಸ್ಸು ಸೌಕರ್ಯ ಇಲ್ಲದ ಬೆಟ್ಟ ಪ್ರದೇಶಗಳಲ್ಲಿ ವಾಸಿಸುವ ಜನರ ದರ್ಶನಕ್ಕಾಗಿ ಅನೇಕಶಃ ನಾನು ವ್ಯರ್ಥ ಪ್ರಯಾಣ ಮಾಡಬೇಕಾದ ಸಂದರ್ಭಗಳೂ ಒದಗಿದೆ.
ಜಾಂಬ್ರಿ ಗುಹೆಯ ಯಾತ್ರಿಕರು ತಮ್ಮ ಹೊರ ಅನುಭವಗಳನ್ನು ಮಾತ್ರ ಹೇಳುದಲ್ಲದೆ ಗುಹೆಯೊಳಗಿನ ರಹಸ್ಯಗಳನ್ನು ಹೇಳಲಿಲ್ಲ. ಸ್ಥಳೀಯ ಆಡಳಿತೆದಾರರ ಪರಸ್ಪರ ವೈಮನಸ್ಯದಿಂದಾಗಿ ನೆಟ್ಟಣಿಗೆ ದೇವಾಲಯದ ಜಾತ್ರೆಯ ಪೂರ್ಣ ಸೊಬಗನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಕುಳದಪಾರೆ ಒತ್ತೆಕೋಲ ಅದ್ಭುತವಾಗಿತ್ತು. ನೂರಾರು ಸೂಟೆಗಳೊಂದಿಗೆ ಭಂಡಾರ ಬರುವ ಸೊಬಗು, ಸುಮಾರು 25 ಅಡಿ ಎತ್ತರದ ಕಟ್ಟಿಗೆ ರಾಶಿ, ಒಂದಾಳು ಎತ್ತರದ ಕೆಂಡದ ರಾಶಿ, ಬೆಳ್ಚಪ್ಪಾಡರು, ಕೆಂಡದ ಮೇಲೆ ಹಾರುವ ಭೂತಪಾತ್ರಿ ಕೆಂಡದ ಮೇಲೆ ಬೀಳುವ ಎಲ್ಲ ದೃಶ್ಯಗಳು ಉಳಿದೆಡೆಗಿಂತ ವಿಶೇಷವಾದುದು.
ಒಂದು ಗ್ರಾಮದ ಸಮಗ್ರ ಜಾನಪದ ಸಂಗ್ರಹಕ್ಕೆ ಉಡುಪಿಯ ಪ್ರಾದೇಶಿಕ ರಂಗಕಲೆಗಳ ಅಧ್ಯಯನ ಕೇಂದ್ರದಿಂದ ಫೆಲೋಶಿಪ್ ಲಭಿಸಿದೆ.
ಅನುಬಂಧ - 1
ನೇಜಿ ಹಾಡುಗಳು (Plantation Songs)
1. ಪೋಯಮ್ಮ ಜೇವು
2. ಕೇಪ್ಳಮ್ಮ ಗುಂಡಿಟ್
3. ಗಿರಿಜೆ ಮಗಲ್
4. ಕೋರಿತಕಟ್ಟ
5. ರಾವೊ ರಾವು ಕೊರೆಂಗು
6. ಬಂಗೇರೆಂಕುಲು
7. ನಿರೆಯಿಂಡ್ ಮೀನ್
8. ಪಕ್ಕಿಗುಲಪ್ಪಾ ಪಕ್ಕಿಗುಲು
9. ಗೋವಿಂದ ಬದನೆ
10. ಕೋಟೆದ ಕನಡೆರ್
11. ಲೆತ್ತು ಪಣ್ ಮೆಚ್ಚು
12. ಅಡಾತೆನೇನ್ ಅಡಾಯೆ
13. ಮಾಲ್ಂಡ್ ಮರ
14. ಬಾಲೆ ಬಂಗೆರ್
15. ಟ್ರುವೇಲೆ ಚಾಳೆಪೊಲಿಯೆ
16. ಗುಲಾಬಿ ಪೂ
17. ಬಾವೆರೆ
18. ಹೀಜೋ ಮಂಜಟಿಗೋಣ
19. ಓಬೇಲೆ ಪದೊ
20. ಆಲೇಲೆ ಪದೊ (ಕೋಟಿ ಚೆನ್ನಯರ ಕತೆ)
21. ದಾರಣೆ
22. ದಾರಮ್ಮ
23. ಗಿಳಿರಾಯೆ
ಅನುಬಂಧ - 2
ನೇಜಿ ತೆಗೆಯುವಾಗ ಹೇಳುವ ಹಾಡುಗಳು
1. ಏಕಜೇರ್
2. ಜಾಯೆಲೆ ಬಂಗೇರೆ
3. ನಾಗಸಿರಿ ಕನ್ಯಕೆ
4. ಮಾದಿ ಪರ್ಪೊತಿ
5. ಅಣ್ಣೆ ಮೆಗ್ಯೆ
6. ಅಪೀನಿ ಬಂಗಾರ್
7. ಸಿದ್ದುಳ್ಳ ರಾಯೆರ್
8. ಕುಂಞಿದೆತ್ತಿ
9. ಜೇವುಳ್ಳ ಮಾಣಿಕೊ
10. ಮದನಕ್ಕ
11. ತಿಮ್ಮು ಪೊಣ್ಣು
12. ಸಾವಿರತ್ತೊಂಜಿ ಗಿಳಿಕುಳು
13. ಏಳು ಸಿರಿಕುಳು
14. ಮಂಙಣೆ
15. ಸೊನ್ನೆಳ್ಳ ಪಾರ್ವತಿ
16. ದೇವೆರೆ ಮದಿಮಾಯೆ
17. ಆನೆ ಮಾವುತೆ
18. ಸಿತ್ತರೆಂಜಾಳ ಮಿತ್ತರೆಂಜಾಳ ಬೂಡುದ ಕತೆ
19. ಕಚ್ಚಿರ ಮಲ್ಲ ಮಾಲೋಜಿ
20. ಬಾಕುಡ್ತಿ
21. ದೇವು ಪೂಂಜೆ
22. ರುಕ್ಮಿಣಿ ಗೋಪಾಲೆ
23. ಎರುಪಾರ್ತನೊ
24. ದಾಸಯ್ಯ ಪಾರ್ತನೊ
25. ಗೋಪಾಲ ದೇವೆರ್
26. ಚಿಪ್ಪೋಳಿ ಬಂಗೆರ್
ಅನುಬಂಧ - 3
ಭೂತ ಪಾಡ್ದನಗಳು
1. ದೇವರೆ ಗುಳಿಗೆ (ನಲಿಕೆಯವರದು)
2. ಕೊರತ್ತಿ (ನಲಿಕೆಯವರದು)
3. ಕಲ್ಲುರ್ಟಿ ಕಲ್ಕುಡ (ನಲಿಕೆಯವರದು)
4. ಧೂಮಾವತಿ (ನಲಿಕೆಯವರದು)
5. ಕೊರಗ ತನಿಯ (ನಲಿಕೆಯವರದು)
6. ಒರ್ನರೆ ಪಂಜುರ್ಲಿ (ನಲಿಕೆಯವರದು)
7. ಕೊಲ್ಲೂರ ಮೂಕಾಂಬಿಗುಳಿಗ(ನಲಿಕೆಯವರದು)
8. ಅಣ್ಣಪ್ಪ ಪಂಜುರ್ಲಿ(ನಲಿಕೆಯವರದು)
9. ಪಿಲಿಬೂತೊ (ಪರವರದು)
10. ಬೀರಣಾಳ್ವ (ಪರವರದು)
11. ಜಾವತೆ (ಪರವರದು)
12. ಜುಮಾದಿ (ಪರವರದು)
13. ಮಾಣಿಬಾಲೆ (ಪರವರದು)
14. ಚಂಬರಂತಾಯ (ಪರವರದು)
ಅನುಬಂಧ - 4
ಕುಣಿತದ ಹಾಡುಗಳು
1. ಆಟಿಕಳೆಂಜ (ನಲಿಕೆಯವರದು)
2. ಕನ್ಯಾಪು (ನಲಿಕೆ ಮತ್ತು ಪರವರದು)
3.ಮಾಯಿಲ ದಿಕ್ಕ (ಮೇಗ್ಗೇರ್ಲು)
4. ಪೂ (ಮೊಗ್ಗೇರ್ಲು)
5. ಚೆನ್ನು (ಮೊಗ್ಗೇರ್ಲು)
6. ಮಾಣಿನಾಗೆರ್ (ಮೊಗ್ಗೇರ್ಲು)
7. ಬೈರಿ (ಮೊಗ್ಗೇರ್ಲು)
8. ತಾಲಿಮೇರೆ (ಮೊಗ್ಗೇರ್ಲು)
9. ಕೋಟಿ ಬೈದ್ಯೆರ್ (ಮೊಗ್ಗೇರ್ಲು)
10. ಬಂಗಾರ್ತ ಒಡಿಲೆ (ಮೊಗ್ಗೇರ್ಲು)
`ತೆಯ್ಯಂ' ಎಂಬುದು `ದೈವ' ಪದದ ದ್ರಾವಿಡೀಕೃತ ರೂಪ. ಅದನ್ನೇ ತುಳು ವಿನಲ್ಲಿ `ದೆಯ್ಯ' ಎನ್ನುತ್ತಾರೆ. ತುಳುನಾಡಿನಲ್ಲಿ ಮತ್ತು ಕೇರಳದಲ್ಲಿ ಈಯೆರಡು ರೂಪಗಳ ಆರಾಧನೆಯೂ ಸಮಾನವಾಗಿ ಜರಗುತ್ತದೆ.
`ದೆಯ್ಯೊ'ಗಳಿಗೆ ಭೂತವೆಂಬ ಹೆಸರು ಅನಂತರ ಬಳಕೆಗೆ ಬಂದದ್ದು. ಭೂತಗಳು ತಮ್ಮ ನುಡಿಗಟ್ಟುಗಳಲ್ಲಿ ಹೆಚ್ಚಾಗಿ ತಮ್ಮನ್ನು `ದೆಯ್ಯೊ' ಎಂದೇ ಕರೆದುಕೊಂಡಿವೆಯಲ್ಲದೆ, ಭೂತವೆಂದು ಹೆಸರಿಸಿಕೊಂಡದ್ದಿಲ್ಲ.
`ಭೂತ' ಎಂದರೆ ಪಂಚಭೂತಗಳು, ಜೀವಜಾಲ, ಪಿಶಾಚಗಣ ಎಂದೆಲ್ಲ ಅರ್ಥ ಗಳಿವೆ. ಹಾಗೆಯೇ ಸತ್ಯ ಎಂಬ ಅರ್ಥವೂ ಇದೆ. ನಮ್ಮ ಜನಪದರೂ ಭೂತವನ್ನು ಸತ್ಯೊ, ಮಾಯೆ ಎಂದೆಲ್ಲ ಸಂಬೋಧಿಸುವುದು ಸರ್ವೇ ಸಾಮಾನ್ಯ.
ಶಿವನ ತಾಮಸೀಶಕ್ತಿಯ ಗಣವನ್ನು ಭೂತಗಣವೆಂದು ಕರೆಯುವುದೂ ಇದೆ. ಆದ್ದರಿಂದಲೇ ಶಿವನು `ಭೂತೇಶ'ನೆನಿಸಿಕೊಂಡಿದ್ದಾನೆ. ಇಂತಹ ತಾಮಸೀಶಕ್ತಿಯ ಗಣಗಳು ಭೂಮಿಯುದ್ದಕ್ಕೂ ಹಬ್ಬಿಕೊಂಡಿವೆ ಎನ್ನುವುದು ಆರ್ಯರ ಕಲ್ಪನೆಯಾಗಿತ್ತು. ವೈದಿಕರು ತಮ್ಮ ನಿತ್ಯಕರ್ಮವನ್ನು ಪ್ರಾರಂಭಿಸುವ ಮೊದಲು ಈ ಭೂತಗಳಿಗೆ ವಂದಿಸುತ್ತಿದ್ದರು. ದ್ರಾವಿಡರ ಆರಾಧನಸಂಪ್ರದಾಯಗಳು ಅವರ ಬದುಕಿಗೆ ಒಂದು ಹೊಸ ತಿರುವನ್ನು ಕೊಟ್ಟುವು. ಇಲ್ಲಿಗೆ ಬಂದ ಎಲ್ಲ ವರ್ಗದವರೂ ಪ್ರತ್ಯಕ್ಷವಾಗಿಯೇ ಭೂತವನ್ನು ಆರಾಧಿಸ ತೊಡಗಿದರು. ತಮ್ಮ ಇಷ್ಟದೇವತೆಯನ್ನು ವಿಗ್ರಹದಲ್ಲಿ ಆವಾಹನ ಗೊಳಿಸಿ ಅರ್ಚಿಸುವುದು ವೈದಿಕವಿಧಿಯಾದರೆ, ಇಷ್ಟದೇವತೆಯನ್ನು ಮನುಷ್ಯಶರೀರದಲ್ಲಿ ಆವೇಶಗೊಳಿಸಿ ಪೂಜಿಸು ವುದು ದ್ರಾವಿಡಸಂಪ್ರದಾಯ. ಈ ಎರಡು ಸಂಸ್ಕೃತಿಗಳೂ ಭೂತಾರಾಧನೆಯಲ್ಲಿ ಸಮ್ಮಿಶ್ರ ವಾಗಿವೆ. ಕಾಸರಗೋಡು ಪ್ರದೇಶದ ಕೆಲವೊಂದು ಭೂತ ಸ್ಥಾನಗಳಲ್ಲಿ ಭೂತಗಳ ಕಂಚಿನ ವಿಗ್ರಹಗಳಿದ್ದು ಅಲ್ಲಿ ತಂತ್ರಾಗಮವಿಧಿ ಪ್ರಕಾರ ನಿತ್ಯ ನೈವೇದ್ಯಸಮರ್ಪಣೆ ಹಾಗೂ ವರ್ಷಾ ವಧಿ ಉತ್ಸವವೂ ಜೊತೆಗೆ ಭೂತಗಳ ನೇಮವೂ ಜರಗುತ್ತಿವೆ. ಉತ್ತರ ಮಲಬಾರು ಹಾಗೂ ತುಳುನಾಡು ಪ್ರದೇಶಗಳೇ ಭೂತಾರಾಧನೆಯ ಮುಖ್ಯಕೇಂದ್ರಗಳು.
ಆದಿಕಾಲದಲ್ಲಿ ಎಲ್ಲ ಭೂತಗಳನ್ನೂ ಶೈವಾಂಶವೆಂದು ಪರಿಗಣಿಸಲಾಗುತ್ತಿತ್ತು. ಕೇರಳದಲ್ಲಾಗಲಿ, ಕರ್ನಾಟಕದಲ್ಲಾಗಲಿ, ಭೂತಗಳ ವೈಷ್ಣವಾಂಶ ಕಲ್ಪನೆ ಅನಂತರ ಬಂದುದು. ಕುಂಬಳೆಸೀಮೆಯ ಅರಸುದೈವವಾಗಿರುವ ಉಳ್ಳಾಕುಳು ದೆಯ್ಯೊಗಳು ವೈಷ್ಣವಾಂಶದಂತೆ ಕಂಡುಬಂದರೂ, ಇಲ್ಲಿಯ ಪುರಾತನ ಅರ್ಚನಪದ್ಧತಿ ಪ್ರಕಾರ, ಸ್ಥಳೀಯಭೂತದ ಗುಡಿಗಳಲ್ಲಿ ಶೈವಾಂಶವಾಗಿಯೇ ಆರಾಧನೆ ನಡೆಯುತ್ತಿದೆ. ಆಗಮೋಕ್ತ ವಿಧಿಪ್ರಕಾರ `ಕಿರಾತರುದ್ರ' ಎಂಬುದು ಇಲ್ಲಿಯ ಮೂಲಮಂತ್ರವಾದರೆ ಭೂತಗಳ ನುಡಿಗಟ್ಟು ವೈಷ್ಣವಾಂಶಕ್ಕೆ ಪರವಾಗಿದೆ.
ಕೇರಳದಲ್ಲಿಯೂ ಅತಿಪುರಾತನ ತೆಯ್ಯಗಳೆಲ್ಲವೂ ಶೈವಾಂಶಕವಾಗಿದ್ದುವು. ಸುಮಾರು ಕ್ರಿ.ಶ. 15ನೆಯ ಶತಮಾನದ ಬಳಿಕವೇ ವಿಷ್ಣುಮೂರ್ತಿಯಂಥಾ ತೆಯ್ಯಗಳು ಪ್ರಚಾರಕ್ಕೆ ಬಂದುವೆಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ.
ತುಳುನಾಡಿನಲ್ಲಿ ದೆಯ್ಯೊಗಳ ಆರಾಧನೆ ಬಹಳ ಪುರಾತನವಾದದ್ದು. ಆದಿ ದ್ರಾವಿಡರು ತಮ್ಮ ಇಷ್ಟದೇವತೆಗಳನ್ನು ಯಾವುದಾದರೂ ಮರದ ಬುಡದಲ್ಲಿ ಶಿಲಾ ಸಂಕೇತದಲ್ಲಿ ಆರಾಧಿಸುತ್ತಿದ್ದರು. ಪ್ರಾಚೀನ ತುಳುನಾಡಿನ ಗುಡ್ಡಗಾಡಿನ ತುಳುವ ಜನರು ಇಂದಿಗೂ ತಮ್ಮ ಕುಲದೇವತೆಗಳನ್ನು ಶಿಲಾಸಂಕೇತದಲ್ಲಿ ಪೂಜಿಸಿ ಬಲಿ ಅರ್ಪಿಸುವು ದನ್ನು ಕಾಣಬಹುದು. ಬಳಿಕ ಗುಂಪಿನ ಮುಖ್ಯಸ್ಥನಿಗೆ `ಒಸೆಯೊ' ಅಥವಾ `ದರ್ಸನೊ' (ಆವೇಶ) ಬರುತ್ತದೆ. ಆತ ಅಲ್ಲಿ ನೆರೆದ ಕುಟುಂಬಿಕರಿಗೆ ಒಳ್ಳೆಯ ಮಾತುಗಳನ್ನು ಹೇಳಿ ಹರಸುತ್ತಾನೆ. ಗುಂಪಿನ ನ್ಯಾಯವಿವಾದಗಳನ್ನು ತೀರಿಸುತ್ತಾನೆ. ಇವರು ಕೊರತ್ತಿ, ಪೊಟ್ಟೆ ಮುಂತಾದ ತಮ್ಮ ಸಮಾಜದ ಇಷ್ಟದೇವತೆಗಳನ್ನೂ ಇದೇ ವಿಧಾನದಲ್ಲಿ ಆರಾಧಿಸುತ್ತಾರೆ. ಇವರಲ್ಲಿ ಕೋಲ ಸಂಪ್ರದಾಯವು ಆಚರಣೆಯಲ್ಲಿಲ್ಲ.
ಆದರೆ ಬಯಲುಸೀಮೆಯ ಮೇರ ವರ್ಗದವರಲ್ಲಿ ಕೋಲಗಳ ಆಚರಣೆಯಿದೆ. ಮೇರರು ತಮ್ಮ ಪೂರ್ವಜರಾದ `ಮೇರ'ರ ಅಥವಾ `ಮೊಗೇರ'ರ ಕೋಲವನ್ನೇ ಮುಖ್ಯವಾಗಿ ನಡೆಸುತ್ತಾರೆ. ಜೊತೆಯಲ್ಲಿ ಪಂಜುರ್ಳಿ, ಗುಳಿಗ ಮುಂತಾದ ಪುರಾತನ `ದೆಯ್ಯೊ'ಗಳನ್ನು ಆರಾಧಿಸುವುದಿದೆ. ಕೋಪಾಳ (ನಲ್ಕೆದಾಯ ಅಥವಾ ಅಜಲಾಯ) ವರ್ಗದವರು ಈ ಕೋಲಗಳನ್ನು ಕಟ್ಟುತ್ತಾರೆ. ಕೆಲವೆಡೆ ಮೂಕಾಂಬಿಗುಳಿಗನ ಆರಾಧನೆಯೂ ರೂಢಿಯಲ್ಲಿದೆ.
ಮದುವೆಯ ದಿವಸ `ಮೇರರ ಕೋಲ' ಜರಗಿಸುವುದು ಪ್ರಾಚೀನ ಸಂಪ್ರದಾಯ. ದಿಬ್ಬಣ ಹೊರಡುವ ಮೊದಲು ವರನ ಮನೆಯಲ್ಲಿ ಪೆರ್ನಳೆ (ಅಣ್ಣ), ಮಾಣ್ಯಳೆ (ತಮ್ಮ) ಮತ್ತು ಕಳಳೆ (ಭಾವ) ಈ ಮೂವರ ಕೋಲವನ್ನೂ, ವಧುವಿನ ಮನೆಯಲ್ಲಿ ಊಟ ಮುಗಿದು ದಿಬ್ಬಣ ಹಿಂದಿರುಗುವ ಮೊದಲು ಕುಂಞಿಮಾಣಿಕೊ (ತಂಗಿ) ಕೋಲವನ್ನೂ ಜರಗಿಸುತ್ತಾರೆ. ವಧುವು ಕಟ್ಟಲಿರುವ ಕರಿಮಣಿಯನ್ನು ಮೊದಲು ಕುಂಞಿಮಾಣಿಕೊ ಭೂತವು ಧರಿಸಿ, ಅನಂತರ ವಧುವಿಗೆ ಒಪ್ಪಿಸುವುದು ಪದ್ಧತಿ. ಈ ಕೋಲವು ಪುರಾತನವಾದುದೆಂದು ಅದರ ಆಚರಣೆಯ ವಿಧಾನಗಳಿಂದಲೇ ತಿಳಿದುಬರುತ್ತದೆ. ಇಲ್ಲಿ ಬಣ್ಣಗಾರಿಕೆಗೆ ಅಕ್ಕಿಹುಡಿ ಮತ್ತು ಅರಸಿನವನ್ನು ಮಿಶ್ರಮಾಡಿ ಕಲಸಿ ಮುಖಕ್ಕೆ ಹಚ್ಚುತ್ತಾರೆ. ತೆಂಗಿನ ಸಿರಿ(ಎಳೆಯ ಗರಿ)ಯ ಬಳಕೆ ಇಲ್ಲ. ಬಿಳಿಯ ಬಟ್ಟೆಯೇ ಉಡುಗೆ. ತಲೆಗೆ ಹಾಳೆಯಿಂದ ತಯಾರಿಸಿದ ಒಂದು ಸರಳವಾದ ಮುಡಿ (ಟೊಪ್ಪಿಗೆ). ಬಿದಿರಿನಿಂದ ತಯಾರಿಸಿದ ಬಿಲ್ಲುಬಾಣವನ್ನು ಮಾಣ್ಯಳೆ ಧರಿಸುತ್ತಾನೆ. ಮರದ ಹಿಡಿಯುಳ್ಳ `ಒಡ್ಕತ್ತಿ'ಯೆಂಬ ಕಬ್ಬಿಣದ ಆಯುಧವನ್ನು ಪೆರ್ನಳೆ ಧರಿಸುತ್ತಾನೆ. ಗಂಡು ದೆಯ್ಯೊಗಳು ಎದೆ, ಭುಜಗಳ ಮೇಲೆ `ಬಿರ್ಮಣ ನೂಲು' (ಬ್ರಾಹ್ಮಣ ನೂಲು - ಜನಿವಾರ) ಎಂಬು ದನ್ನು ಎದುರುಬದುರಾಗಿ ಹಾಕಿಕೊಳ್ಳುತ್ತಾರೆ. ಬಾರಣೆಗೆ ಹುರಿದ ಕುಚ್ಚಲಕ್ಕಿ ಮತ್ತು ಗೋಟು ತೆಂಗಿನಕಾಯಿ; ಕೋಳಿಯ ಬಲಿ ಇಲ್ಲ. ಆದರೆ ಮದುವೆಯ ಚಪ್ಪರದಲ್ಲಿ ದೆಯ್ಯೊಗಳ ಮುಂದೆ ಕಳಾಯ(ಕಳ್ಳು)ವನ್ನಿಟ್ಟು ವಧೂವರರಿಗೆ ಯಾವುದೇ ದೋಷ ಬರಬಾರದೆಂದು ಪ್ರಾರ್ಥಿಸುವುದಿದೆ. ಆದಿದ್ರಾವಿಡರ ಆದಿಯ ಕೋಲ `ಗುಳಿಗ' ಕೋಲ. ಕಾಡುಗುಡ್ಡದ ಗುಳಿಗಳಲ್ಲಿ ಯಾವುದೋ ಅಗೋಚರಶಕ್ತಿಯನ್ನು ಕಂಡು ಹೆದರಿದ ದ್ರಾವಿಡರು ಆ ಶಕ್ತಿಯ ಸಂಪ್ರೀತಿಗಾಗಿ ಆಚರಿಸಿಕೊಂಡು ಬಂದ ಮೊದಲ ಕೋಲವೇ ಗುಳಿಗನ ಕೋಲ. ಗುಳಿಗನನ್ನು ಮಲೆಯಾಳದಲ್ಲಿ `ಕುಳಿಯನ್' ಎನ್ನುತ್ತಾರೆ. ಇಲ್ಲಿಯೂ ಕುಳಿ ಎಂಬ ಮೂಲ ಪದವು `ಗುಳಿ'ಗೆ ಸಮಾನಾರ್ಥಕವಾಗಿದೆ.
ಪುರಾಣಗಳಲ್ಲಿ ಗುಳಿಗ ಎಂದರೆ ಒಂದು ಕ್ರೂರ ಉಪಗ್ರಹ (ಮಾಂದಿ), ಶನಿಯ ಮಗ, ಅಷ್ಟನಾಗಗಳಲ್ಲಿ ಒಂದೆನಿಸಿದ ಸರ್ಪ ಎಂದೆಲ್ಲ ಅರ್ಥವಿದೆ. ಆದರೆ ನಮ್ಮ ಕೋಲದ ಗುಳಿಗನಿಗೂ ಆ ಪುರಾಣದ ಗುಳಿಗನಿಗೂ ಯಾವ ಸಂಬಂಧವೂ ಇಲ್ಲ. ಭೂತಾರಾಧಕರ ನಂಬಿಕೆಯ ಪ್ರಕಾರ ಗುಳಿಗನೆಂದರೆ ಒಂದು ಸ್ಥಳದೇವತೆ - ರಕ್ಷಣೆಯ ದೇವತೆ. ಆಯಾ ಸ್ಥಳದ ರಕ್ಷಣೆ ಆಯಾ ಪ್ರದೇಶದ ಗುಳಿಗನ ಹೊಣೆ.
ಪೊಟ್ಟ ಗುಳಿಗ, ರಾವು ಗುಳಿಗ, ಮಾರಣ ಗುಳಿಗ, ಭಂಡಾರಿ ಗುಳಿಗ, ಚೌಕಾರು ಗುಳಿಗ, ಸಂಚಾರಿ ಗುಳಿಗ, ಅಗ್ನಿಗುಳಿಗ, ಮಂತ್ರಗುಳಿಗ, ಮಂತ್ರವಾದಿ ಗುಳಿಗ, ರಕ್ತೇಶ್ವರಿ ಗುಳಿಗ, ಮೂಕಾಂಬಿಗುಳಿಗ, ಉಮ್ಮಟ್ಟಗುಳಿಗ ಮುಂತಾದ 108 ಗುಳಿಗರು ಇದ್ದಾರೆಂದು ಗುಳಿಗಾರಾಧಕರ ನಂಬಿಕೆ. ಗುಳಿಗ ಇತರ ದೆಯ್ಯೊಗಳಿಗೆ ಒಂದು ದೂತನಂತೆ. ಅಂತಹ ಹಿರಿಯ ದೆಯ್ಯೊಗಳ ಕೋಲದೊಂದಿಗೆ ಗುಳಿಗನಿಗೂ ಒಂದು ಕೋಲ ಆಗಲೇಬೇಕು.
ಯಾವುದೇ ಆಡಂಬರ ಘೋಷಗಳಿಲ್ಲದ, ತೆಂಗಿನ ಎಳೆಯ ಗರಿಗಳ ಸರಳ ಉಡುಪಿನ, ಹಾಳೆಯ ಮುಖದ ಗುಳಿಗನ ಶಾಶ್ವತ ಸಂಪತ್ತೆಂದರೆ ಒಂದು ತ್ರಿಶೂಲ ಹಾಗೂ ಗಂಟಾಮಣಿ. ಕುಚ್ಚಲಕ್ಕಿಯ ಅನ್ನ, ಸೌತೆಕಾಯಿ ಮತ್ತು ಹಲಸಿನ ಬೀಜ ಸೇರಿಸಿದ ಮೇಲೋಗರ, ಅರಳು ಸೀಯಾಳಗಳು - ಇವಿಷ್ಟು ಗುಳಿಗನ ಬಾರಣೆಯ ಸಾಧನ. ಜೊತೆಗೆ ಒಂದು ಕೋಳಿಯೂ, ಒಂದಿಷ್ಟು ಕಳ್ಳೂ. ಈ ಸರಳ ಆರಾಧನೆಯ ವಿಧಾನವೇ ಕೋಲದ ಪ್ರಾಚೀನತೆಯನ್ನು ಸಾರುತ್ತದೆ. ಕೃಷಿಕ ರೈತರ, ಹಳ್ಳಿಯ ಬಡವರ ಕುಲದೇವತೆ ಈ ಗುಳಿಗ. ಕಾಸರಗೋಡು ಪರಿಸರದಲ್ಲಿ ತುಳುವಿನ ಗುಳಿಗ ಮತ್ತು ಮಲೆಯಾಳದ ಕುಳಿಯ - ಎರಡು ದೆಯ್ಯೊಗಳ ಆರಾಧನೆಯೂ ಜರಗುತ್ತದೆ. ಕುಳಿಯನನ್ನು ಮಲಯರೂ, ಗುಳಿಗನನ್ನು ಕೋಪಳರೂ ಕಟ್ಟುತ್ತಾರೆ. ಕೋಪಳರ ಮನೆಮಾತು ತುಳು ವಾದರೂ, ಅವರು ರಕ್ತೇಶ್ವರಿ ಗುಳಿಗ ಮುಂತಾದ ಗುಳಿಗರನ್ನು ಕಟ್ಟಿದರೆ ಮಲೆಯಾಳ ದಲ್ಲಿಯೇ ನುಡಿಗಟ್ಟುಗಳನ್ನು ಹೇಳುವುದಿದೆ.
ಮನುಸ್ಮೃತಿಯಲ್ಲಿ `ಕುಲಿಕ' ಎಂಬ ಪದಕ್ಕೆ ಸಮಾಜದ ಮುಖ್ಯಸ್ಥ ಎಂಬ ಅರ್ಥ ವಿದೆ. ಕೆಲವರು ಗುಳಿಗ ಎಂಬುದು ಸಂಸ್ಕೃತದ ಘುಟಿಕಾ ಎಂಬುದರ ತದ್ಭವ ಎಂದು ಸಾಧಿಸುವುದೂ ಇದೆ. ತುಳುನಾಡು ಮತ್ತು ಕೇರಳದ ಭೂತಸಂಸ್ಕೃತಿಯಲ್ಲಿ ನಾವು ಬೇರ್ಪಡಿಸಲಾರದಷ್ಟು ಆರ್ಯ-ದ್ರಾವಿಡ ಸಂಸ್ಕೃತಿಗಳ ಪರಸ್ಪರ ಪ್ರಭಾವವಿರುವುದೇ ಈ ಗೊಂದಲಗಳಿಗೆಲ್ಲ ಕಾರಣವಾಗಿದೆ. ಮೊತ್ತಮೊದಲ ಗುಳಿಗನನ್ನು `ಪೊಟ್ಟ ಗುಳಿಗ್ಗೆ' ಎಂದು ತುಳುವರೂ `ಪೊಟ್ಟಕ್ಕುಳಿಯನ್' ಎಂದು ಮಲೆಯಾಳಿಗರೂ ಆರಾಧಿಸುತ್ತಾರೆ. ತುಳುನಾಡಿನ ಗುಳಿಗನೇ ಮಲೆಯಳದಲ್ಲಿ ಕುಳಿಯನಾಗಿ, ಮತ್ತೆ `ಗುಳಿಗ'ನಾದುದಕ್ಕೆ ತುಳುವ ಕೋಪಳರು ಕಟ್ಟುವ ಮಲೆಯಾಳ ಮಾತಾಡುವ ಗುಳಿಗನು ಸಾಕ್ಷಿಯಾಗಿದ್ದಾನೆ. ಗುಳಿಗಾರಾಧನೆ ಕಣ್ಣಾನೂರಿನಿಂದ ದಕ್ಷಿಣದಲ್ಲಿ ರೂಢಿಯಲ್ಲಿಲ್ಲ. ಕೇರಳದ ಕಾಳನ್ ತುಳ್ಳಲ್ ತುಳುನಾಡಿನ ಎರುಕೋಲಕ್ಕೆ ಸಮಾನವಾದುದು. ಕೋಲಗಳಲ್ಲಿ ತೋತ್ಟಂ ಅಥವಾ ಪಾರ್ತನಗಳ ಗಾಯನ, ನರ್ತನ ಮತ್ತು ಬಲಿಯ ಸಮರ್ಪಣೆ - ಇವಿಷ್ಟು ಪ್ರಧಾನವಾದ ಅಂಶಗಳು. ಮಾರಿರೋಗ, ಕೀಟಬಾಧೆ, ಮರಣಭಯ ಮುಂತಾದ ಸಂದರ್ಭಗಳಲ್ಲಿ ಈ ಕೋಲಗಳ ಆಚರಣೆ ನಡೆಯುತ್ತದೆ.
ಕೇರಳದ ತೆಯ್ಯಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. `ಪೆರುಂಬಡಪ್ಪು ಸ್ವರೂಪಂ' ಮತ್ತು `ಚಿರಯ್ಕಲ್ ಸ್ವರೂಪಂ' ಎಂದು. ಚಿರಯ್ಕಲ್ ಸ್ವರೂಪವನ್ನು ಮತ್ತೆ ಎರಡಾಗಿ ವಿಭಜಿಸಲಾಗಿದೆ. `ನೀಲೇಶ್ವರ ಸ್ವರೂಪಂ' ಮತ್ತು `ಮಾಯಿಪ್ಪಾಡಿ ಸ್ವರೂಪಂ' ಎಂದು. ತೆಯ್ಯಂಗಳು ಕಣ್ಣಾನೂರಿನಿಂದ ಉತ್ತರ ಹಾಗೂ ಕಾಸರಗೋಡಿನಿಂದ ದಕ್ಷಿಣ ಭಾಗಗಳಲ್ಲಿ ಪ್ರಸಿದ್ಧವಾಗಿದ್ದರೆ, ದೆಯ್ಯೊಗಳು ತುಳುನಾಡಿನಲ್ಲಿ ಮಾತ್ರ ಪ್ರಸಿದ್ಧವಾಗಿವೆ. ಕಾಸರಗೋಡು ತುಳುನಾಡಿನ ದಕ್ಷಿಣ ಗಡಿಯಾದುದರಿಂದ ಹಾಗೂ ಕೇರಳದ ಉತ್ತರ ಗಡಿಯಾದುದರಿಂದ ಇಲ್ಲಿ `ತೆಯ್ಯಂ'ಗಳೂ, `ದೆಯ್ಯೊ'ಗಳೂ ಎರಡೂ ಬಳಕೆಯಲ್ಲಿವೆ. ಇವೆರಡೂ ವಿಭಿನ್ನಪರಿಸರಗಳಲ್ಲಿ ಬೆಳೆದು ಬಂದಿವೆಯಾದ್ದರಿಂದ ಪರಸ್ಪರ ಪ್ರಭಾವಿತ ವಾಗದೆ ಇಂದಿನವರೆಗೂ ತಮ್ಮತನವನ್ನು ಸಾಧ್ಯವಿದ್ದಷ್ಟೂ ಉಳಿಸಿಕೊಂಡು ಬಂದಿರುವುದು ಆಯಾ ಭೂತಾರಾಧಕರ ಹಾಗೂ ಭೂತಪಾತ್ರಿಗಳ ಶ್ರದ್ಧೆಯ ಸಂಕೇತವೆನ್ನಬಹುದು.
ತೆಯ್ಯಗಳಿಗೂ ದೆಯ್ಯೊಗಳಿಗೂ ಆಯಾ ಸೀಮೆಯ ಅರಸರ ಪ್ರೋತ್ಸಾಹವಿತ್ತು. ಚಿರಯ್ಕಲ್ ಮಹಾರಾಜರು `ತೆಯ್ಯಂ' ಉಪಾಸನೆಗೆ ಹೆಚ್ಚು ಮಹತ್ತ್ವ ಕೊಟ್ಟರು. ಅವರು ಭೂತ ಕಟ್ಟುವ ಪಾತ್ರಿಗಳಿಗೆ ಬೆಳ್ಳಿಯ ಬಳೆ, ಬಂಗಾರದ ಬಳೆ ಮತ್ತು ಬಿರುದುಗಳನ್ನಿತ್ತು ಮನ್ನಿಸುತ್ತಿದ್ದುದಾಗಿ ಚರಿತ್ರೆಗಳಿಂದ ತಿಳಿದುಬರುತ್ತದೆ.
ಕೋಪಾಳರು ಮಲಬಾರಿನಲ್ಲಿ ಬಹು ಮಂದಿ ಇಲ್ಲ. ಇದ್ದರೂ ಅವರು ಕುಂಬ್ಳೆ ಸೀಮೆಯಿಂದ ದಕ್ಷಿಣಕ್ಕೆ ವಲಸೆ ಹೋದವರು. ಹಾಗಾಗಿ ಅವರ ಭೂತ ಕಟ್ಟುವ ಅಧಿಕಾರ ವನ್ನು ಕುಂಬ್ಳೆ ರಾಜರೇ ಮಾನ್ಯ ಮಾಡುತ್ತಿದ್ದರು. ಆದರೂ ಈ ಇಬ್ಬರು ಅರಸರೂ ತಂತಮ್ಮ ಪರಿಸರದ ಪಾತ್ರಿಗಳಿಗೆ ಕೊಡುತ್ತಿದ್ದ ಬಿರುದು ಮತ್ತು ಅಧಿಕಾರಗಳನ್ನು ಎರಡು ಅರಸೊತ್ತಿಗೆಗಳೂ ಪರಸ್ಪರ ಮಾನ್ಯ ಮಾಡಿಕೊಳ್ಳಬೇಕು ಎಂಬುದಾಗಿ ಅವರೊಳಗೆ ಒಪ್ಪಂದ ವಿತ್ತು. ಕುಂಬಳೆ ಸೀಮೆಯಲ್ಲಿ ಪರವರ ಮತ್ತು ಪಂಬದವರ ಮನೆತನಗಳು ವಿರಳ. ಹಾಗಾಗಿ ಪುತ್ತೂರು ಸೀಮೆಯ ಪಡುಮಲೆಯಿಂದ ಅಥವಾ ಇನ್ನಿತರ ಕಡೆಗಳಿಂದ ಬರುವ ಪರವ ಹಾಗೂ ಪಂಬದರನ್ನೇ ಇಲ್ಲಿಯ ಅರಸರು ಬಳೆ ನೀಡಿ ಗೌರವಿಸುತ್ತಿದ್ದರು. ಸೀಮೆಯ ರಾಜದೈವ ಮತ್ತು ಪಟ್ಟದ ದೈವಗಳ ನೇಮಗಳನ್ನು ಅವರಿಂದ ಮಾಡಿಸು ತ್ತಿದ್ದರು. ಮಾಯಿಪ್ಪಾಡಿ ಅರಮನೆಯ ಪಕ್ಕದಲ್ಲಿಯೇ ಪಟ್ಟದ ದೈವದ ಗುಡಿಯಿರುವುದನ್ನು ಈಗಲೂ ಕಾಣಬಹುದು. ಸೀಮೆಯ ಯಾವುದೇ ಭೂತಸ್ಥಾನದಲ್ಲಿ ಹೊಸಬನೊಬ್ಬ ಪಾತ್ರಿಯಾಗಬೇಕಾದರೆ, ಆತ ಮೊದಲು ಸೀಮೆಯ ತಂತ್ರಿಗಳಿಂದ ಶುದ್ಧಿಕಲಶ ಮಾಡಿಸಿ ಕೊಳ್ಳಬೇಕು. ಅನಂತರ ಅರಮನೆಗೆ ಹೋಗಿ `ನೈಯಾಮೃತ'(108 ನಾಣ್ಯಗಳನ್ನು ತುಂಬಿಸಿದ ಗಿಂಡಿ)ವನ್ನು ಅರಸರಿಗೆ ಕಾಣಿಗೆ ಒಪ್ಪಿಸಬೇಕು. (ಈ ಹಣವನ್ನು ಆಯಾ ಭೂತಸ್ಥಾನದ ಹತ್ತು ಸಮಸ್ತರು ಸಂಗ್ರಹಿಸಿ ಪಾತ್ರಿಗೆ ಕೊಡುತ್ತಾರೆ). ಅರಸರು ನೈಯಾ ಮೃತವನ್ನು ಸ್ವೀಕರಿಸಿ, ಆಯಾ ಪಾತ್ರಿಗೆ ಸಂಬಂಧಿಸಿದ ಬಿರುದನ್ನು ಮೂರು ಬಾರಿ ಕರೆದು ಆತನಿಗೆ ನಾಮಕರಣ ಮಾಡುತ್ತಾರೆ. ಹಾಗೂ ಬಿರುದಿನ ಬಳೆಗಳನ್ನು ಕೊಡು ತ್ತಾರೆ. ಅಂದಿನಿಂದ ಆತ ಸೀಮೆಯಲ್ಲಿ ಭೂತಕಟ್ಟುವ ಹಕ್ಕನ್ನು ಪಡೆಯುತ್ತಾನೆ. ಕೇರಳದ ಮಲಬಾರಿನಲ್ಲಿ ಮಲಯರು, ವಣ್ಣಾನರು (ನೆಕ್ಕಾರರು), ಪಾಣನ್ ಮುನ್ನೂಟ್ಟನ್, ಅಂಞೂಟ್ಟನ್ ಎಂಬೀ ನಾಲ್ಕು ವರ್ಗದವರು ಭೂತ ಕಟ್ಟುವವರು ಎಂದು ಇದ್ದರೂ, ಈಗ ಮಲಯರು ಮತ್ತು ವಣ್ಣಾನರು ಮಾತ್ರ ಈ ವೃತ್ತಿಯಲ್ಲಿ ನಿರತರಾದುದು ಕಂಡುಬರುತ್ತದೆ. `ದೆಯ್ಯೊ'ಗಳ ಆರಾಧನೆಯಷ್ಟೇ `ತೆಯ್ಯ'ಗಳ ಆರಾಧನೆಯೂ ವೈವಿಧ್ಯ ಮಯವಾಗಿದೆ. ಗತಿಸಿಹೋದ ವೀರಪುರುಷರೂ ಸ್ತ್ರೀಯರೂ ಇಲ್ಲಿ ತೆಯ್ಯಗಳಾಗುತ್ತಾರೆ. ಪುರಾಣದ ದೇವತೆಗಳೂ `ತೆಯ್ಯ'ಗಳಾಗುತ್ತಾರೆ. ಪ್ರತಿಯೊಂದು ತೆಯ್ಯದ ಹಿನ್ನೆಲೆ ಯಲ್ಲಿಯೂ ಅದ್ಭುತರಮ್ಯವಾದ ಕತೆಗಳ ಸರಮಾಲೆ ಇರುತ್ತದೆ. ಈ ದೃಷ್ಟಿಯಲ್ಲಿ ತುಳು ಮತ್ತು ಮಲಯಾಳ ಎರಡೂ ಸಂಸ್ಕೃತಿಗಳ ಬೆನ್ನುಹುರಿ ಒಂದೇ ಆಗಿದೆ. ತೆಯ್ಯವಾಗಲಿ ಭೂತವಾಗಲಿ ಅತಿಮಾನವತೆಯ ಸಂಕೇತ.
ಕಾಸರಗೋಡು ಪರಿಸರದಲ್ಲಿ ಉಳ್ಳಾಕುಳು (ಪೂಮಾಣಿ, ಕಿನ್ನಿಮಾಣಿ), ಕೋಟಿ ಚೆನ್ನಯ, ಪೆಲಡ್ಕತ್ತಾಯ, ಬೀರಣ್ಣಾಳ್ವ, ಐವೆರ್ ದೆಯ್ಯೊಂಕುಳು (ದುರ್ಗಲಾಯೆ, ಮುಂಡ ಲ್ತಾಯೆ, ಬಂಟ (ಪೊಟ್ಟ) ಬೂತೊ, ಪಿಲಿಚ್ಚಾಮುಂಡಿ, ಧೂಮಾವತಿ), ಕೋಟೆತಬಬ್ಬು, ಕೋಮಾರ್ಡಿ (ನೇಲ್ಯಭೂತೊ), ಬಬ್ಬರಿಯ, ಜಟಾಧಾರಿ, ಕೊರಗಚನಿಯೆ, ಅಂಗಣತ್ತಾಯೆ, ಪಂಜುರ್ಳಿ, ಬರ್ನರೆ ಪಂಜುರ್ಳಿ, ಕಾಜು, ಕಲ್ಲುರ್ಟಿ, ಕಲ್ಕುಡೆ, ಕೊರವೆ, ಕೊರತ್ತಿ, ಕೋಲ್ ಭಂಡಾರಿ, ಸೂಟೆ ಮಾಂಕಾಳಿ, ದೆಯ್ಯಾರ್ ಮೂಕಾಂಬಿ, ಗುಳಿಗೆ, ಮಲೆ ಚ್ಚಾಮುಂಡಿ, ಮಲರಾಯ, ಅರಸು ಮಂಜಿಷ್ಣಾರ್, ಉಳ್ಳಾಳ್ತಿ, ನಂದಿಗೋಣೆ ಮುಂತಾದ ತುಳುವ ಭೂತಗಳು ಪ್ರಸಿದ್ಧವಾಗಿವೆ. ಬೀರಳ್ಣಾಳ್ವ - ಮಲೆರಾಯ - ಪಂಜುರ್ಳಿ ಭೂತಗಳ ಹೆಸರು ಪುರುಷಭೂತಗಳಂತೆ ಇದ್ದರೂ, ಪೌರಾಣಿಕವಾದ ವಾರಾಹೀಶಕ್ತಿಯನ್ನು ಪ್ರತಿಬಿಂಬಿಸುವ ಈ ಭೂತಗಳ ವೇಷವಿಧಾನಗಳು ಸ್ತ್ರೀರೂಪವನ್ನು ವ್ಯಕ್ತಪಡಿಸುತ್ತವೆ. ಇಲ್ಲಿಯ ಧೂಮಾವತಿಯಂತೂ ನಾನಾ ರೂಪಧಾರಿಣಿ. ಪುತ್ಯೆ ಧೂಮಾವತಿ, ಪಡ್ಡೈ ಧೂಮಾವತಿ, ಪಳ್ಳ ಧೂಮಾವತಿ, ಚುಳ್ಳಿ ಧೂಮಾವತಿ, ಬಂಟ ಧೂಮಾವತಿ, ಪಂಜಕಳ ಜುಮಾದಿ, ಜೆಡೆಕಲ್ಲ ಧೂಮಾವತಿ, ಅಮ್ಮಂಗಲ್ಲು ಧೂಮಾವತಿ - ಹೀಗೆ ಬೇರೆ ಬೇರೆ ಹೆಸರಿನ ಕೋಲಗಳ ಮೂಲಕ ಆಕೆ ಆರಾಧಿಸಲ್ಪಡುತ್ತಾಳೆ. ಈ ಎಲ್ಲಾ ತುಳು ದೆಯ್ಯೊಗಳ ಪಾತ್ರಿಗಳು ಕೋಪಾಳರು, ನಲ್ಕೆದಾಯ ಅಥವಾ ಅಜಲಾಯರು, ಪಂಬದರು ಮತ್ತು ಪರವರಾಗಿದ್ದಾರೆ. ಮಲಯರು ಮತ್ತು ವಣ್ಣಾನರು (ನೆಕ್ಕಾರರು) ಕಟ್ಟುವ ತೆಯ್ಯಗಳಲ್ಲಿ ವಿಷ್ಣುಮೂರ್ತಿ, ರಕ್ತೇಶ್ವರಿ, ರಕ್ತಚಾಮುಂಡಿ, ಗುಳಿಗ, ಕಾನಾದಿಗ ರಕ್ತೇಶ್ವರಿ, ವೆಳ್ಳಾಟ್ಟಂ, ಪೈಂಗುಟ್ಟಿ, ಆಲಿಚ್ಚಾಮುಂಡಿ, ತಂಬ್ರಾಟಿ ಭಗವತಿ, ಪುಳ್ಳಿಕರಿಂಗಾಳಿ, ಪುಳ್ಳೂರಾಳಿ, ಕಾಳ ಪ್ಪುಲಿಯನ್, ಪುಲಿಕ್ಕಂಡನ್, ತೊಂಡಚ್ಚನ್ (ವಯನಾಡ್ ಕುಲವನ್), ಕರಿಂದಿರಿ ನಾಯರ್ ಮುಂತಾದುವು ಪ್ರಸಿದ್ಧವಾಗಿವೆ.
ಸೀಮೆಯ ಪುರಾತನ ಮನೆಗಳಲ್ಲಿ, ಭೂತಗುಡಿಗಳಲ್ಲಿ ಪ್ರಸಿದ್ಧವಾಗಿರುವ `ಒಂದು ಕುಂದು ನಲ್ವತ್ತು' (ಮೂವತ್ತೊಂಬತ್ತು) ಭೂತಗಳ ಆರಾಧನೆಯಲ್ಲಿ ಕೋಪಾಳರು, ಪರವರು, ಪಂಬದರು, ಮಲಯರು, ನೆಕ್ಕಾರರು - ಎಂಬೀ ಎಲ್ಲ ವರ್ಗದ ಪಾತ್ರಿಗಳೂ ಭಾಗವಹಿಸುತ್ತಾರೆ. ಇದನ್ನು ಭೂತಗಳ ಸಮ್ಮೇಳನವೆಂದರೂ ತಪ್ಪಲ್ಲ. ನಾಲ್ಕೈದು ದಿನಗಳ ಕಾಲ ಎಡೆಬಿಡದೆ ಹಗಲು ರಾತ್ರಿಯೆನ್ನದೆ ಬಿಲ್ಲಾರೆ, ಬಿಲ್ಲಾರ್ತಿ, ತೋಮರ ಚಾಮುಂಡಿ, ಬಂಟಬೂತೊ, ಕೊರತ್ತಿ, ಗುಳಿಗೆ, ಪಡುಧೂಮಾವತಿ, ಪಳ್ಳಧೂಮಾವತಿ, ನಾರಾಯಣ ಮಾಣಿಲು, ಬೊಬ್ಬರಿಯೆ, ದೈಯ್ಯಾರು, ಮಾಣಿಚ್ಚಿ, ಜೆಡೆಕಲ್ಲ ಧೂಮಾವತಿ, ಅಮ್ಮಂಗಲ್ಲ ಧೂಮಾವತಿ, ಕುಂಡಂಕೋರೆ, ಯೆರುಕನಡೆ, ಕೊರವೆ, ಪೊಟ್ಟೆ, ಪೊಲಮರದೆ, ಪೊಲ ಚಾಮುಂಡಿ, ಉಮ್ಮಟ್ಟ ಗುಳಿಗೆ, ರಕ್ತೇಶ್ವರಿ, ವಿಷ್ಣುಮೂರ್ತಿ, ಚಾಮುಂಡಿ ಗುಳಿಗೆ, ಪಿಲಡ್ಕತ್ತಾಯೆ, ಭಂಡಾರಿ, ಕರ್ನಾಲೆ, ಪಂಜಿಮಾರಿ ಬೂತೊ ಮುಂತಾದ ಭೂತಗಳ ಆರಾಧನೆ ನಡೆಯುತ್ತದೆ. ಇತ್ತೀಚೆಗೆ ಈ ಸಂಪ್ರದಾಯ ಮರೆಯಾಗುತ್ತಾ ಬಂದಿದೆ.
ಈ ಪ್ರದೇಶದ ಆದಿನಿವಾಸಿಗಳ `ದೆಯ್ಯೊ'ಗಳ ಹೆಸರು ಹೀಗಿದೆ :
ಮೈಸೂರ್ತಾಯೆ, ಚೇರಿತ್ತಾಯೆ, ಪೊಟ್ಟೆ, ಯೆರುಕೋಪಾಳೆ, ನಾರಂಪಾಡಿ ಪೊಸ ಕಲ್ಲಾಳೆ, ಮಾಯಿಲು, ಕೊಂಡಕಾರೆ ಗುಳಿಗೆ, ಕಾಜರು, ಮದಿಮಾಳು, ಕುಲೆ, ಕೊರಗೆ ಕೊರಪ್ಪಳು, ಕೋಟೆತ್ತ ಕಲ್ಲಾಳೆ, ಬಂಗಾಡಿ ಮಾಣಿಕೆ, ಚೈಂಬೆರೆ, ಚೌಕಾರ ಗುಳಿಗೆ ಇತ್ಯಾದಿ. ಕಣ್ಮರೆಯಾಗುತ್ತಿರುವ ಈ ದೆಯ್ಯೊಗಳ ಅಧ್ಯಯನದಿಂದ ಈ ಪ್ರದೇಶದ ಮೂಲನಿವಾಸಿ ಗಳ ಬಗ್ಗೆ ಹೆಚ್ಚು ವಿವರಗಳು ತಿಳಿದುಬರಬಹುದು.
ಸಾಮಾನ್ಯವಾಗಿ ಭೂತಾರಾಧನೆಯನ್ನು ನಾಲ್ಕು ರೀತಿಯಲ್ಲಿ ಹೆಸರಿಸುತ್ತಾರೆ.
1. ನೇಮ (ಉಳ್ಳಾಕುಳು, ಬೀರಣ್ಣಾಳ್ವ, ಮಲರಾಯ ಇತ್ಯಾದಿ).
2. ಕೋಲ (ವಿಷ್ಣುಮೂರ್ತಿ, ಗುಳಿಗ, ರಕ್ತೇಶ್ವರಿ ಇತ್ಯಾದಿ)
3. ಮೈಮೆ (ಜಟಾಧಾರಿ)
4. ಮೆಚ್ಚಿ (ಉಳ್ಳಾಳ್ತಿ)
ಕಾಸರಗೋಡು ಪರಿಸರದಲ್ಲಿ ಸೀಮೆಯ ನಾಲ್ಕು ಸ್ಥಾನಗಳಲ್ಲಿ ಜರಗುವ ಉಳ್ಳಾಕುಳು ನೇಮ, ಪಾರೆಸ್ಥಾನದ ಆಲಿಚಾಮುಂಡಿಯ ಉತ್ಸವ, ಜಟಾದಾರಿಯ ಮೈಮೆ, ಕೋಟಿ-ಚೆನ್ನಯ ಬೈದ್ಯರ ನೇಮ, ಕಳಿಯಾಟ, ಒತ್ತೆಕೋಲ, ಮಲರಾಯ ನೇಮ, ಬಯನಾಡು ಭೂತ ಮುಂತಾದವು ಇಂದಿಗೂ ಪ್ರಾಧಾನ್ಯವನ್ನು ವಹಿಸಿರುವ ಪ್ರಸಿದ್ಧ ಆಚರಣೆಗಳಾಗಿವೆ. ಅರಸು ದೈವ, ಧೂಮಾವತಿ ಮುಂತಾದ ಕೋಲ-ನೇಮಗಳಲ್ಲಿ ಕೋಟ, ಕರ್ಹಾಡ, ಹವ್ಯಕ ಬ್ರಾಹ್ಮಣರು ಹಾಗೂ ಶಿವಬ್ರಾಹ್ಮಣರು ಭೂತದ ಮಣಿಯಂತಾ ಯರು (ಪಾತ್ರಿಗಳು) ಆಗಿ ಆವೇಶಗೊಂಡು ಜನರನ್ನು ಹರಸುತ್ತಿರುವ ವಿಧಾನವು ಈ ಸಂಸ್ಕೃತಿಯ ಪರಮೋನ್ನತಿಕೆಯನ್ನು ಸಾರುತ್ತದೆ.
ಜಾತೀಯ ಭಾವನೆಗಳನ್ನು ಬದಿಗಿರಿಸಿ, ಎಲ್ಲರೂ ಒಂದಾಗಿ ಆರಾಧಿಸುವ ಏಕೈಕ ಸಂಸ್ಕೃತಿಯೆಂದರೆ ತುಳುನಾಡಿನ ಹಾಗೂ ಕೇರಳದ ಭೂತಾರಾಧನೆ, ಎಲ್ಲರಿಗೂ ಇಲ್ಲಿ ಅವಕಾಶವಿದೆ. ಅಧಿಕಾರವಿದೆ, ಸೇವಾಸೌಲಭ್ಯಗಳಿವೆ. ನಮ್ಮ ಪ್ರಾಚೀನ ಜನಪದರ ಭಾವೈಕ್ಯದ ಕಲ್ಪನೆಗೆ ಇವು ಜೀವಂತಸಾಕ್ಷಿಗಳು.
[ಪೂರ್ವಪ್ರಕಟಿತ; `ಗಡಿನಾಡಿನ ಕಿಡಿ' ಲಲಿತಕಲಾಸದನ, ಕಾಸರಗೋಡು, 1990 ಮತ್ತು `ತುಳು ನಡೆನುಡಿ', ಪುಣಿಂಚತ್ತಾಯ ಲೇಖನ ಸಂಕಲನ, 1998 -ಇವುಗ]
ಒಂದು ಪವಿತ್ರವಾದ ಪರಿಸರ. ಹರಿಹರರ ಸಾನ್ನಿಧ್ಯ ತುಂಬಿದ ಪುಣ್ಯಪೀಠ. ದೀಪಗಳು ಬೆಳಗುತ್ತವೆ; ಮಂಗಳಾರತಿಯಾಗುತ್ತದೆ. 'ಹರೇ ರಾಮ ಹರೇ ಕೃಷ್ಣ' ಭಜನೆಯ ಘೋಷ ವಾತಾವರಣವನ್ನು ಪುಲಕಿತಗೊಳಿಸುತ್ತದೆ. ನೆರೆದ ಭಕ್ತವೃಂದ ಆ ಗಾಯನಕ್ಕೆ ಸುಶ್ರಾವ್ಯವಾಗಿ ದನಿಗೂಡಿಸುತ್ತದೆ. ಮುಂದೆ ಕಲಾಮಂಟಪಕ್ಕೆ ಯಾತ್ರೆ. ಶಂಖ ಜಾಗಟೆ ನಾಗಸ್ವರಗಳ ಸುಮಧುರಧ್ವನಿ. ಯಾವುದೋ ಹೊಸ ಸನ್ನಿವೇಶಕ್ಕೆ ನಾವು ಹೊಂದಿ ಕೊಳ್ಳಲು ಬದಲಾಗುತ್ತಿರುವಂತೆ ಅನುಭವ. ಕಲಾಮಂಟಪದ ಎದುರು ಜನಸ್ತೋಮ ಕೈ ಮುಗಿದು ನಿಲ್ಲುತ್ತದೆ. ಮತ್ತೆ ಮಂಗಳಾರತಿಯ ಬೆಳಕಿನಲ್ಲಿ ಹೊಳೆ ಹೊಳೆವ ನವನೀತ ಕೃಷ್ಣನ ದಿವ್ಯಮೂರ್ತಿಯನ್ನು ಕಾಣುತ್ತೇವೆ. ಮರುಕ್ಷಣ ಎಲ್ಲವೂ ನಿಶ್ಶಬ್ದ... ಎತ್ತಲೂ ಮೌನ....ಮಂಟಪದ ಎದುರು ಸಂಗೀತದ ಉಪಕರಣಗಳು. ತಂಬೂರ, ಹಾರ್ಮೋನಿಯಂ, ಮೃದಂಗ, ಚೆಂಡೆ, ಜಾಗಟೆ, ಪಿಟೀಲು, ಕೈತಾಳ... ಇತ್ಯಾದಿ. ಅವು ಕೇವಲ ಬಾರಿಸುವ - ಹೊಡೆಯುವ ವಸ್ತುಗಳಲ್ಲ. ಗಂಧಪುಷ್ಪಗಳಿಂದ ಅಲಂಕೃತವಾದ ಆ ವಾದ್ಯಗಳು ಬರಿಯ ಮನೋರಂಜನೆಯ ಎಲ್ಲೆಯನ್ನು ದಾಟಿ ಇನ್ನೂ ಎತ್ತರದಲ್ಲಿದ್ದಂತೆ ನಮಗೆ ಭಾಸವಾಗು ತ್ತವೆ. ತಂಬೂರದ ನಾದತರಂಗ ಕೇಳತೊಡಗಿದೊಡನೆ ಜನರೆಲ್ಲ ಆಸೀನರಾಗುತ್ತಾರೆ.
ಯಕ್ಷಗಾನ ಗಂಧರ್ವಗಾನ-ಸ್ತೋತ್ರಗಳ ಸುಮಧುರಾಲಾಪನೆಯಲ್ಲಿ ಜನಸ್ತೋಮ ಮೆಯ್ಮರೆಯುತ್ತದೆ. ಹಾಗೆ ಕಳೆದ ಹೊತ್ತು ಎಷ್ಟೋ...? ಗಡಿಯಾರವೂ ಅದನ್ನು ಗಮನಿಸುವುದಿಲ್ಲ. ಮತ್ತೆ ತೀರ್ಥಪ್ರಸಾದ ವಿತರಣೆ. ಕಾರ್ಯಕ್ರಮದ ನಾಂದಿ ಇಲ್ಲಿಗೆ ಮುಗಿಯುತ್ತದೆ. ಅನಂತರ ಒಂದಷ್ಟು ಬಿಡುವು ದೊರಕುತ್ತದೆ ಭೋಜನ-ಉಪಾಹಾರ-ಪಾನೀಯಗಳಿಗಾಗಿ!
ರಾತ್ರಿ ಸುಮಾರು ಹತ್ತು ಗಂಟೆಗೆ ಮತ್ತೆ ಕಲಾಮಂಟಪದಲ್ಲಿ ಜನಸ್ತೋಮ ಸೇರುತ್ತದೆ. ಯಾವುದೇ ಗೌಜಿ-ಗದ್ದಲ-ಆಡಂಬರವಿಲ್ಲದ ಗಂಭೀರಸಭೆ. ಕಲಾವಿದರು, ವಿದ್ವಾಂಸರು, ವಿಮರ್ಶಕರು, ಸಹೃದಯರು ತುಂಬಿದ ಆಪ್ತಸಭೆ. ಆಮಂತ್ರಿತ ಕಲಾವಿದರು -ಆಮಂತ್ರಿತ ಪ್ರೇಕ್ಷಕರು- ತುಂಬಿದ, ಪೂರ್ವನಿಯೋಜಿತವಾದ ಹಾಗೂ ಅತ್ಯಂತ ಆತ್ಮೀಯವಾದ ಒಂದು ವಿದ್ವತ್ಸಭೆ. ಅದೊಂದು ವಿಚಾರವಂತರ ಗೋಷ್ಠಿ -ಜಿಜ್ಞಾಸುಗಳ ಪರಿಷತ್ತು- ಎಂದರೂ ಅತಿಶಯವಲ್ಲ. ಇಂತಹ ಕಾರ್ಯಕ್ರಮಗಳಲ್ಲಿ ತಾಂಬೂಲ ಚರ್ವಣ ಧೂಮಪಾನಗಳು ಸರ್ವೇಸಾಮಾನ್ಯವಾಗಿ ಎಲ್ಲೆಡೆಗಳಲ್ಲೂ ಜರಗುತ್ತಿರುವುದನ್ನು ಕಂಡ ಪ್ರೇಕ್ಷಕರಿಗೆ ಇಲ್ಲಿ ಅಚ್ಚರಿಯೆನಿಸುತ್ತದೆ. ಯಾಕೆಂದರೆ ಈ ವಾತಾವರಣವೇ ಹೊಸತು. ಇಲ್ಲಿ ಅಗರುಧೂಪದ ಸುಗಂಧದ ಹೊಗೆಯಲ್ಲದೆ ಬೇರೆ ಹೊಗೆ ಕಾಣಿಸದು. ಅದರ ಅಭ್ಯಾಸವಿರುವವರೂ ಸಹ ಬಹುಶಃ ಈ ವಾತಾವರಣದಲ್ಲಿ ಇದ್ದಷ್ಟು ಕಾಲ ಅವನ್ನೆಲ್ಲ ಮರೆಯುತ್ತಾರಂತೆ. ಸಭೆ ಆರಂಭವಾದರೆ ಎದ್ದು ಹೋಗುವವರೇ ವಿರಳ. ಇಲ್ಲಿ ಜರಗುವ ಕಲಾರಾಧನೆಗೆ ಒಂದು ದೇವತಾರಾಧನೆಯ ಕಳೆಯಿರುತ್ತದೆಂದು ಅನೇಕರ ಅನುಭವ.
ಇಂತಹ ಒಂದು ದಿವ್ಯಸನ್ನಿಧಿಯಲ್ಲಿ ಪುರಾಣದ ಕಥೆಗಳನ್ನೊಳಗೊಂಡ - ಅವತಾರತತ್ತ್ವಗಳನ್ನು ನಿರೂಪಿಸುವ ಒಂದು ಪುಣ್ಯಕಾರ್ಯಕ್ರಮ ಜರಗುತ್ತದೆ. ಜನರು ಈ ಕಾರ್ಯಕ್ರಮಗಳನ್ನು ಶ್ರದ್ಧೆಯಿಂದ ಕೇಳುತ್ತಾರೆ. ಭಕ್ತಿಯಿಂದ ಆಲಿಸುತ್ತಾರೆ. ಒಟ್ಟು ಏಳು ದಿನ ಇದು ಜರಗುತ್ತದೆ. ಈ `ಪುರಾಣಕಥಾಸಪ್ತಾಹ' ಯಕ್ಷಗಾನ ಮಾಧ್ಯಮದ ಮೂಲಕ ಜರಗುತ್ತದೆ. ಇಂತಹ ಶಿಸ್ತುಬದ್ಧವಾದ ಮತ್ತು ಭಕ್ತಿಯ ಉದ್ಬೋಧಕವಾದ ಕಾರ್ಯಕ್ರಮ ಎಲ್ಲಿ ಜರಗಿತೆಂದು ಅಚ್ಚರಿಪಡಬೇಡಿ. ಯಾವ ನಗರದಲ್ಲೂ ಅಲ್ಲ; ಯಾವ ಥಿಯೇಟರಿನಲ್ಲೂ ಅಲ್ಲ. ಕಾಸರಗೋಡು ತಾಲೂಕಿನ ಎಡನೀರು ಎಂಬ ಗ್ರಾಮದಲ್ಲಿ ಒಂದು ಮಠವಿದೆ. ಅಲ್ಲಿಯ ಸ್ವಾಮೀಜಿಯವರ ಸನ್ನಿಧಿಯಲ್ಲಿ ಇದು ಜರಗುತ್ತದೆ. ಸ್ವತಃ ಶ್ರೀ ಸ್ವಾಮೀಜಿಯವರೇ ಇದರ ನೇತೃತ್ವವಹಿಸಿ ಜರಗಿಸುತ್ತಾರೆ.
ಯಕ್ಷಗಾನವೆಂಬ ಒಂದು ಸುಶಕ್ತ ಕಲಾಮಾಧ್ಯಮವು ಯಾವ ಸದುದ್ದೇಶದಿಂದ ಹಿಂದೆ ದೇಗುಲದಲ್ಲಿ ಆರಂಭವಾಯಿತೋ, ಅದೇ ಪುಣ್ಯೋದ್ದೇಶದಿಂದ ಇಂದಿಗೂ ಅದು ಇಲ್ಲಿ ಜರಗುತ್ತದೆಂಬುದು ಆಸ್ತಿಕಜನತೆಗೊಂದು ಅಭಿಮಾನದ ವಿಷಯ.
ಭಾಗವತ ಎಂದರೆ `ಭಗವಂತನ ಭಕ್ತ' ಎಂಬ ಅರ್ಥವು ಪುರಾಣಯುಗದಿಂದಲೇ ರೂಢಿಯಲ್ಲಿದೆಯಷ್ಟೆ. ಶ್ರೀ ಎಡನೀರು ಮಠವು ಸ್ಮಾರ್ತ ಭಾಗವತ ಸಂಪ್ರದಾಯದ ಒಂದು ಮಠ. ಇಲ್ಲಿನ ಪೀಠಾಧಿಪತಿಗಳಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ಗಮಕ ಸಂಗೀತ-ಯಕ್ಷಗಾನಾದಿ ಕಲೆಗಳಲ್ಲಿ ಅತ್ಯಂತನಿಷ್ಣಾತರು. ಈ ಕಲಾಮಾಧ್ಯಮದ ಮೂಲಕ ಯಾವುದೇ ಸದ್ವಿಚಾರಗಳನ್ನು ನಾವು ಜನತೆಯ ಹೃದಯಗಳಿಗೆ ಪರಿಣಾಮ ಕಾರಿಯಾಗಿ ತಲುಪಿಸಬಹುದು - ಎಂಬುದು ಅವರ ಅಭಿಮತ.
ಕಲೆ ಕೇವಲ ಮನೋರಂಜನೆಗಾಗಿ ಇರುವ ವಸ್ತುವಲ್ಲ. ಅದು ದೇವತಾರಾಧನೆಯ ಒಂದು ವಿಧಾನವೆಂದು ನಮ್ಮ ಪ್ರಾಚೀನಾಚಾರ್ಯರೆಲ್ಲ ತಿಳಿದಿದ್ದರು. ಶ್ರುತಿಬದ್ಧವಾದ ಋಗ್ವೇದ-ಯಜುರ್ವೇದಗಳು ಸಂಗೀತದ ಮೂಲರೂಪಗಳು. ಸಾಮವೇದವು ಅದರ ವಿಕಸಿತರೂಪ. ಗಾಯಂತಂ ತ್ರಾಯತೇ... ಎನ್ನುವಾಗ ಸಹ ಗಾಯತ್ರಿಯಲ್ಲಿ ಗಾಯನದ ಮಹಿಮೆ ವ್ಯಕ್ತವಾಗುತ್ತದೆ. ತುಂಬುರು-ನಾರದರು ಪೌರಾಣಿಕಯುಗದ ಗಾಯಕರು. ಕುಶೀಲವರಾದ ಕುಶಲವರ ಮೂಲಕ ವಾಲ್ಮೀಕಿಯು ರಾಮಾಯಣವನ್ನು ಹಾಡಿಸಿದ ನಂತೆ. ಗೇಯಂ ಗೀತಾ ನಾಮಸಹಸ್ರಂ.... ಎಂಬ ಮಾತಿನಲ್ಲಿ ಶಂಕರಾಚಾರ್ಯರು ಗಾಯನದ ಮಹತ್ತ್ವವನ್ನು ಸೂಚಿಸಿದ್ದಾರೆ.
ಕ್ರಿ. ಶ. ಎಂಟನೆಯ ಶತಮಾನದಲ್ಲಿ ಅವತರಿಸಿದ ಶಂಕರಾಚಾರ್ಯರು ಬರೆದ ಭಜಗೋವಿಂದಸ್ತೋತ್ರವು ಒಂದು ಉತ್ತಮ ಭಾವಗೀತವೂ ಹೌದು. ರಾಗಬದ್ಧವಾಗಿ ಹಾಡಬಹುದಾದ ಮಾತ್ರಾಗಣದ ಧಾಟಿಯಲ್ಲೇ ಅದು ಬರೆಯಲ್ಪಟ್ಟಿದೆಯೆಂದೂ ಹೇಳ ಬಹುದು. ಪ್ರಾಚೀನರಾದ ಅನೇಕ ಯತಿವರೇಣ್ಯರು ಸಂಗೀತವನ್ನು ಚೆನ್ನಾಗಿ ಬಲ್ಲವ ರಾಗಿದ್ದರೆಂದು ಚರಿತ್ರೆಗಳಿಂದ ನಮಗೆ ತಿಳಿದು ಬರುತ್ತದೆ.
ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ಶುಭಸಂಪ್ರದಾಯದ ಪ್ರವರ್ತಕ ರಾದ ಮಂತ್ರಾಲಯದ ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ಶ್ರೇಷ್ಠವೈಣಿಕ ರೆಂದು ಖ್ಯಾತರಾಗಿದ್ದರೆ, ಉಡುಪಿಯ ಸೋದೆ ಮಠದ ಶ್ರೀ ವಾದಿರಾಜ ಗುರುಸಾರ್ವ ಭೌಮರು ಕನ್ನಡ-ತುಳುಭಾಷೆಗಳಲ್ಲಿ ಅನೇಕ ಕೀರ್ತನೆ-ಪಾಡ್ದನಗಳನ್ನು ರಚಿಸಿರುತ್ತಾರೆ.
ಕ್ರಿ. ಶ. ಹದಿನೆಂಟನೆಯ ಶತಮಾನದಲ್ಲಿ ತಮಿಳುನಾಡಿನ ತಿರುವಾಯೂರಿನಲ್ಲಿ ಜನಿಸಿದ ಕಲಾತಪಸ್ವಿ ತ್ಯಾಗರಾಜರಂತೂ, ದಕ್ಷಿಣಾದಿ ಸಂಗೀತದಲ್ಲಿ ಸಾಕಷ್ಟು ಸಾಧನೆ ಮಾಡಿದ ಯೋಗಿಪುಂಗವರಾಗಿರುವರು. ಸಂಗೀತದಿಂದಲೇ ಮೋಕ್ಷಸಾಧನೆ ಸಾಧ್ಯವೆಂಬ ನಿಲುವನ್ನು ತಾಳಿದ ಅವರು ಸುಮಾರು ಇಪ್ಪತ್ತನಾಲ್ಕುಸಾವಿರ ಕೀರ್ತನೆಗಳನ್ನು ರಚಿಸಿರುವ ರೆಂದು ಪ್ರತೀತಿಯಿದೆ. ಅವುಗಳಲ್ಲಿ ಒಟ್ಟು ಎಂಟು ನೂರು ಕೀರ್ತನೆಗಳು ಮಾತ್ರ ಇಂದು ನಮಗೆ ಉಪಲಬ್ಧವಾಗಿವೆಯೆಂಬುದು ನಮ್ಮ ದುರ್ಭಾಗ್ಯ. ಅಲ್ಲದೆ `ಭಕ್ತವಿಜಯ' ಮತ್ತು `ನೌಕಾಚರಿತ್ರಂ' ಎಂಬೆರೆಡು ಸಂಗೀತ ನಾಟಕಗಳನ್ನೂ ಅವರು ರಚಿಸಿರುವುದಾಗಿ ತಿಳಿದು ಬರುತ್ತದೆ.
ಗುರ್ವನುಗ್ರಹದಿಂದ ತೋಟಕವೃತ್ತದಲ್ಲಿ ಶ್ಲೋಕಗಳನ್ನು ರಚಿಸಿ, ಏಕಕಾಲದಲ್ಲಿ ಕವಿಯೂ ಜ್ಞಾನಿಯೂ ಎನಿಸಿಕೊಂಡ ಶ್ರೀ ಶಂಕರಾಚಾರ್ಯಶಿಷ್ಯರಾದ ಶ್ರೀ ಆನಂದಗಿರಿ ಯವರು ಅದೇ ಕಾರಣದಿಂದ ತೋಟಕಾಚಾರ್ಯರೆಂದು ಪ್ರಸಿದ್ಧಿಪಡೆದರೆಂದು ಶಂಕರ ವಿಜಯ ಗ್ರಂಥದಿಂದ ತಿಳಿದುಬರುತ್ತದೆ. ಅದೇ ಪರಂಪರೆಯಲ್ಲಿ ಸಾಗಿಬಂದ ಶ್ರೀ ಎಡನೀರು ಮಠದ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರೂ ಸಹ ನಾಟಕ, ಸಂಗೀತ, ಭಜನೆ, ಯಕ್ಷಗಾನ, ಹರಿಕಥೆ -ಎಂಬೀ ಐದು ಕಲಾಮಾಧ್ಯಮಗಳನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ.
ಶ್ರೀ ವಿಷ್ಣುತೀರ್ಥರ ಸಂಸ್ಥಾನವೆನಿಸಿದ ಶ್ರೀ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಭೂಷಣ ತೀರ್ಥಪಾದಂಗಳವರೂ ಸಂಗೀತ ಕಲೆಯಲ್ಲಿ ಸಾಕಷ್ಟು ನೈಪುಣ್ಯವುಳ್ಳವರಾಗಿರುವರು. ಈ ಉಭಯಮಠಗಳ ಶ್ರೀಪಾದರಲ್ಲೂ ಇರುವ ಕಲಾಪ್ರತಿಭೆ ಅಸಾಮಾನ್ಯವಾದುದು; ದೈವಿಕ ವಾದುದು. ಧರ್ಮ-ಸಂಸ್ಕೃತಿಗಳ ರಕ್ಷಣೆಗಾಗಿ, ಸಮಾಜದ ಸಮುನ್ನತಿಗಾಗಿ ಇರುವ ಮಠಗಳು ಕಲಾಮಾಧ್ಯಮದಿಂದಲೂ ತಮ್ಮ ಕಾರ್ಯವನ್ನು ನಿರ್ವಹಿಸಲು ಸಾಧ್ಯ ಎಂಬು ದನ್ನು ಇವರುಗಳು ಈಗಲೂ ಸ್ಪಷ್ಟಪಡಿಸುತ್ತಿದ್ದಾರೆ. ಎಡನೀರು ಮಠದ ಶ್ರೀಪಾದರು ಶಾಸ್ತ್ರಪರಿಣತರಂತೆಯೆ ಸ್ವಯಂ ದೇವರ ನಾಮಗಳನ್ನು ರಚಿಸುವ, ಕೃತಿ ರಚಿಸುವ ಪ್ರೌಢಿಮೆಯನ್ನೂ ಸಂಪಾದಿಸಿದ್ದಾರೆ.
ಭಾರತೀಯ ಕಲೆಗಳು ಇಂದು ಯಾವ ಯಾವುದೋ ಧ್ಯೇಯಗಳ ಕಡೆಗೆ ಪಥ ಸಂಚಲನ ನಡೆಸುತ್ತಿವೆ. ಕೆಲವೊಮ್ಮೆ ಮೂಲೋದ್ದೇಶವೇ ವಿಕೃತಗೊಳ್ಳವುದೂ ಇದೆ. ಯಕ್ಷಗಾನದಂತಹ ಸುಶಕ್ತ ಕಲಾಮಾಧ್ಯಮವೂ ಕೆಲವೊಮ್ಮೆ ಈ ನಿಟ್ಟಿನಲ್ಲಿ ಸಾಗಲೂ ಬಹುದು. ಇಂತಹ ಸಂದರ್ಭದಲ್ಲಿ ಅದು ಶಾಸ್ತ್ರೀಯವಾಗಿರಲಿ; ಜಾನಪದವಾಗಿರಲಿ - ನಮ್ಮ ಪೂರ್ವಿಕರು ಹಂಬಲಿಸಿದ ಸನಾತನ ಉದ್ದೇಶಸಾಧನೆಗಾಗಿ ಅವನ್ನು ಒಳಪಡಿಸು ತ್ತಿರುವ ನಮ್ಮ ಪೀಠಾಧಿಪತಿಗಳ ಈ ಸತ್ಸಂಪ್ರದಾಯವು ಶ್ಲಾಘನೀಯವೇ ಸರಿ. ಜನತೆಯ ಮೇಲೆ ಇವು ಸತ್ಪರಿಣಾಮವನ್ನು ಬೀರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ.
[ಉದಯವಾಣಿ, 2-11-1980 -ಇದರಲ್ಲಿ ಪ್ರಕಟಿತ]
ಮನುಷ್ಯ ತನ್ನ ನೋವು ನಲಿವುಗಳನ್ನು ನೆನೆಯುತ್ತಾ ಅಂತರ್ಮುಖಿಯಾದಾಗ ಸಾಹಿತ್ಯ ಹುಟ್ಟುತ್ತದೆ. ಅಂತೆಯೇ ತನ್ನ ಸುತ್ತುಮುತ್ತಲಿನ ಪರಿಸರಕ್ಕೆ ಸ್ಪಂದಿಸಿದಾಗಲೂ ಸಾಹಿತ್ಯ ಸೃಷ್ಟಿಯಾಗುತ್ತದೆ. ಅಂತರ್ಮುಖಿಯಾದವನ ನೋವು-ನಲಿವುಗಳು ಪರಿಸರ ದಿಂದಲೂ ಪ್ರಭಾವಿತವಾದಾಗ ಹುಟ್ಟುವ ಸಾಹಿತ್ಯವೇ ಸಹಜಸಾಹಿತ್ಯವೆನಿಸುತ್ತದೆ. ನಮ್ಮ ಜನಪದಸಾಹಿತ್ಯ ಇಂಥದು. `ಸಮುದ್ರಜಾನಪದ' ಎಂಬ ಈ ಶೀರ್ಷಿಕೆಯಡಿಯಲ್ಲಿ ಸಾಹಿತ್ಯಾಂಶಕ್ಕೆ ಮಾತ್ರ ಒತ್ತುಕೊಟ್ಟು, ಈ ಪ್ರಬಂಧವನ್ನು ಬರೆಯಲಾಗಿದೆ.
`ಸಮುದ್ರಜಾನಪದ' ಎಂಬ ಪರಿಕಲ್ಪನೆ ಹೊಸತೇನೂ ಅಲ್ಲ; ಆದರೆ ಈ ವಿಭಾಗ ದಲ್ಲಿ ಲಭ್ಯವಾದ ಜನಪದಸಾಹಿತ್ಯವನ್ನು ಒಂದೆಡೆ ಕಲೆಹಾಕಿದ್ದು ಈ ಪ್ರಬಂಧದ ವೈಶಿಷ್ಟ್ಯ.
ಮೊಗವೀರರಲ್ಲಿ ತುಳು ಹಾಗೂ ಕನ್ನಡ ಮಾತೃಭಾಷೆಯವರಿದ್ದಾರೆ. ಅವರು ಆಯಾ ಪ್ರದೇಶದ ತುಳು ಅಥವಾ ಕನ್ನಡವನ್ನು ಮಾತಾಡುತ್ತಾರೆ. ದಕ್ಷಿಣಕನ್ನಡ ಜಿಲ್ಲೆಯ ಉಳ್ಳಾಲದಿಂದ ಕಲ್ಯಾಣಪುರದವರೆಗೆ ವಾಸ್ತವ್ಯವಿರುವ ಮೊಗವೀರರು ತುಳು ಮಾತಾಡು ವವರಾದರೆ, ಅಲ್ಲಿಂದ ಉತ್ತರದಲ್ಲಿ ವಾಸಿಸುವವರು ಕನ್ನಡ ಮಾತೃಭಾಷೆಯವರು. ಕೇರಳದ ಕಾಸರಗೋಡು ಜಿಲ್ಲೆಯ ಉಪ್ಪಳ ಮುಂತಾದೆಡೆ ವಾಸಿಸುವ ಸೀಮಿತ ಸಂಖ್ಯೆಯ ಮೊಗವೀರರು ತುಳು ಮಾತಾಡುತ್ತಾರೆ.
ಮೀನಿನ ಗುಣಸ್ವಭಾವಗಳ ಬಗ್ಗೆ ಸಾಕಷ್ಟು ಅಧ್ಯಯನಮಾಡಿರುವ ಮೊಗವೀರರು, ಕೆಲವೊಮ್ಮೆ ಮೀನಿನ ಉದಾಹರಣೆಗಳನ್ನು ಕೊಟ್ಟು ಮಾತಾಡುವುದಿದೆ. ಅಂಥಾ ಮಾತು ಗಳು ತುಂಬ ಸ್ವಾರಸ್ಯವಾಗಿರುತ್ತದೆ. ಒಬ್ಬ ಮೋಸಗಾರ ಮನುಷ್ಯನ ಬಗ್ಗೆ ಮಾತಾಡುವಾಗ ಅವ ದೊಡ್ಡ ತಳಮುಯಿಡ ಎನ್ನುವ ಕ್ರಮವಿದೆ. `ತಳಮುಯಿಡ' ಎಂಬುದು ಒಂದು ಮೀನಿನ ಹೆಸರು. ತಳಮುಯಿಡ ಮೀನಿನ ದೋಷಗಳು ಎರಡು :
1) ಅದು ಕೆಸರಲ್ಲೇ ವಾಸಿಸುತ್ತದೆ.
2) ಹಿಡಿತಕ್ಕೆ ಸಿಗುವುದಿಲ್ಲ - ಮೆಯಿ ಜಾರುತ್ತದೆ.
ಸಿಟ್ಟಿನಿಂದ ಯಾರಾದರೂ ಜೋರಾಗಿ ಮಾತಾಡಿದರೆ 'ಅವ ಚಟ್ಲ ಹಾರಿದಾಂಗೆ ಹಾರ್ತ' ಎನ್ನುವುದಿದೆ. ಸಿಗಡಿಮೀನಿಗೆ ಕುಂದಾಪುರ ಕಡೆ 'ಚಟ್ಲ' ಅನ್ನುತ್ತಾರೆ. ಅದಕ್ಕೆ ಹಾರಾಟ ಹೆಚ್ಚು. ತುಳುವಿನಲ್ಲೂ ಇಂಥದೇ ಒಂದು ಮಾತು ಉಂಟು. `ಈ ದಾನೆ ಚಿಂಗಿರಿದ ಲೆಕ್ಕೋ ತುಳ್ಳುನಿ?' (ನೀನು ಯಾಕೆ ಚಿಂಗಿರಿ ಮೀನಿನ ಹಾಗೆ ಹಾರಾಡುತ್ತಿ?) ಚಿಂಗಿರಿ ಮೀನು ತುಂಬ ಚಿಕ್ಕದು. ಆದರೆ ನೀರಿನಿಂದ ತೆಗೆದೊಡನೆ ತುಂಬ ಹಾರುತ್ತದೆ.
ತೊರಕೆ ಮೀನು ಬಾಲದಿಂದ ಹೊಡೆಯುತ್ತದೆ. ಯಾರಾದರೂ ತಪ್ಪು ಮಾಡಿದರೆ 'ಅವನಿಗೆ ತೊರಕೆ ಬಾಲದಲ್ಲಿ ಬಾರಿಸಬೇಕು' ಎನ್ನುತ್ತಾರೆ. ಯಾರಾದರೂ ನೋವಾಗು ವಂತಹ ಮಾತು ಹೇಳಿದರೆ 'ಅವನ ಮಾತಂದ್ರೆ ತೊರಕೆ ಬಾಲದ ಪೆಟ್ಟ್ಟಿನಾಂಗೆ' ಎನ್ನು ತ್ತಾರೆ. ಎಲ್ಲರನ್ನೂ ಶೋಷಣೆ ಮಾಡುವ ಮನುಷ್ಯನನ್ನು 'ಅವನು ದೊಡ್ಡ ತಿಮಿಂಗಿಲ' ಹೆಸರಿಸುವವರಿದ್ದಾರೆ.
ಇನ್ನೂ ಕೆಲವು ವಿಶಿಷ್ಟಲಕ್ಷಣಗಳುಳ್ಳ ಮೀನುಗಳಿವೆ. `ಕುಪ್ಪಳಕ' ಎಂಬ ಮೀನು ನೀರಿನಿಂದ ತೆಗೆದ ಮೇಲೂ ಬಹಳ ಕಾಲ ಜೀವಿಸುತ್ತದೆ. ಅದು ಒಳ್ಳೆಯ ಪೌಷ್ಟಿಕ ಮೀನು. 'ಕಳ್ಳಗೋರೆ' ಎಂಬ ಮೀನು, ನೀರಿನಿಂದ ತೆಗೆದೊಡನೆ 'ಗುಯಿಂ ಗುಯಿಂ' ಎಂದು ಸದ್ದು ಮಾಡುತ್ತಲೇ ಇರುತ್ತದೆ. ಇಂಥ ಮೀನಗಳನ್ನೆಲ್ಲ ಮನುಷ್ಯ ಸ್ವಭಾವಗಳಿಗೆ ಹೋಲಿಕೆಯಾಗಿ ಕೊಟ್ಟು ಮಾತಾಡುವ ವಿಶಿಷ್ಟಶೈಲಿ ಮೊಗವೀರರದು.
ಮೊಗವೀರರು ನಿತ್ಯ ಶ್ರಮಜೀವಿಗಳು. ದುಡಿಮೆಯೇ ಅವರ ಜೀವಾಳ. ಸದಾ ಕಡಲಿನ ಕಡೆಗೇ ದೃಷ್ಟಿ. ತಮ್ಮ ವೃತ್ತಿಗೆ ಸಂಬಂಧಪಟ್ಟ ಕಾರ್ಯಗಳಲ್ಲೇ ನಿರಂತರ ಚಿಂತನೆ. ಆದರೂ ಮಹಾಗಾತ್ರದ ದೋಣಿಯನ್ನು ದಡದಿಂದ ಸಮುದ್ರಕ್ಕೆ ತಳ್ಳುವಾಗ ಸಮುದ್ರದಿಂದ ದಡಕ್ಕೆ ಒಯ್ಯುವಾಗ ಶ್ರಮದ ಪರಿಹಾರಕ್ಕಾಗಿ ಅವರು ಸೃಜಿಸಿದ ಉದ್ಗಾರಗಳಿಗೆ ಹಾಡಿನ ರಾಗ-ತಾಳಗಳು ಸೇರಿದ್ದುಂಟು. ಈ ಉದ್ಗಾರಗಳಿಗೆ 'ಅಂಬ ಹಾಕುವುದು' ಎನ್ನುತ್ತಾರೆ. ಈ ಸಾಹಿತ್ಯ ಪ್ರಕಾರದ ಮೂರು ಪಾಠಗಳು ನನಗೆ ದೊರೆತಿವೆ. (ನೋಡಿ: ಮೊಗವೀರರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಕಟನೆ, 1993)
ಅಂಬ ಹಾಕುವುದನ್ನು ಒಂದು ಸಾಹಿತ್ಯದ ಪ್ರಕಾರ ಎಂದು ಹೇಳಬಹುದೇ ಎಂಬ ಬಗ್ಗೆಯೂ ನಾವು ಯೊಚಿಸಬೇಕಾಗುತ್ತದೆ. ಒಂದು ದೃಷ್ಟಿಯಿಂದ ನೋಡಿದರೆ ಇವು ಕೇವಲ ಉದ್ಗಾರಗಳು. ಇಲ್ಲಿಯ ಪದಗಳಿಗೆ ಅರ್ಥ ಹುಡುಕುವುದು ನಿರರ್ಥಕ ಕೆಲಸವಾದೀತು. ಆದರೂ ಇಲ್ಲಿಯ ಕೆಲವು ಪದಗಳಲ್ಲಿ ಹಿಂದಿಯ ಛಾಯೆಯನ್ನು ಕಾಣುತ್ತೇವೆ. ದುನಿಯಾ, ಜವಾನ್, ಚೋರ್, ಮರ್ಜಿ, ಬಂದರ್, ಹೀಮತ್, ಮುಂತಾದ ಪದಗಳು ಇಲ್ಲಿ ನುಸುಳಿಕೊಂಡಿವೆ. ಮೊಗವೀರರು ಉತ್ತರದಿಂದ ದಕ್ಷಿಣಕ್ಕೆ ಬಂದವರು ಎಂಬ ಅಭಿಪ್ರಾಯಕ್ಕೆ ಇವು ಪೋಷಕವಾಗಬಹುದು. ತಲೆ ತಲಾಂತರಗಳಿಂದ ಅಂಬ ಹಾಕುವ ಪದ್ಧತಿ ರೂಢಿಯಲ್ಲಿದ್ದರೂ, ಈ ಸಾಹಿತ್ಯದಲ್ಲಿ ಒಂದೇ ಒಂದು ಕನ್ನಡ ಪದವಾಗಲೀ - ತುಳು ಪದವಾಗಲಿ ಸೇರದಿದ್ದದ್ದು ಆಶ್ಚರ್ಯವೆನಿಸುತ್ತದೆ.
ಮೊಗವೀರ ಗರತಿಯರಲ್ಲಿ ಅನೇಕರು ತಮ್ಮ ಬಿಡುವಿನ ವೇಳೆ ಬತ್ತ ಕುಟ್ಟುವುದೇ ಮುಂತಾದ ಇತರ ಕೆಲಸಗಳಲ್ಲಿ ನಿರತರಾದವರಿದ್ದಾರೆ. ಆಗ ಅವರ ಕಲ್ಪನಾಶಕ್ತಿ ಸಾಹಿತ್ಯ ರಚನೆಗೆ ಎಡೆಗೊಟ್ಟುದುಂಟು. ಮುಖ್ಯವಾಗಿ ಅವರ ಚಿಂತನೆಯ ವಸ್ತು ಸಮುದ್ರವಾದುದ ರಿಂದ, ಸಮುದ್ರಕ್ಕೆ ಸಂಬಂಧಪಟ್ಟ ಅನೇಕ ಹೊಸ ಕಲ್ಪನೆಗಳು ಅವರ ಸಾಹಿತ್ಯದಲ್ಲಿ ಪುಟಗೊಂಡುದನ್ನು ಕಾಣಬಹುದು. ಈ ಗುಂಪಿಗೆ ಸೇರಿದ ರಚನೆಗಳನ್ನೆಲ್ಲ ಇಲ್ಲಿ `ಸಮುದ್ರ ಜಾನಪದ' ಎಂಬ ಶೀರ್ಷಿಕೆಯೊಳಗೆ ಅಳವಡಿಸಿಕೊಂಡಿದ್ದೇನೆ.
ಜನಪದ ಕವಯತ್ರಿಯರು ಸಮುದ್ರವನ್ನು ಕಂಡ ರೀತಿ ತುಂಬ ಹೃದ್ಯವಾದುದು. ಸಮುದ್ರದ ಭರತ ಇಳಿತಗಳನ್ನು ಅವರು ಮನುಷ್ಯನ ಐಶ್ವರ್ಯ ಮತ್ತು ಬಡತನಗಳಿಗೆ ಭಾಗ್ಯ ಮತ್ತು ದೌರ್ಭಾಗ್ಯಗಳಿಗೆ ಹೋಲಿಸಿದ್ದಾರೆ.
ಭಾಗ್ಯ ಬಂತಂತೇಳಿ ಬಾಳ ನೀನುರಿಬೇಡ
ಈ ಭಾಗ್ಯ ನಿನಗೆ ಸ್ಥಿರವಲ್ಲ | ಸಮುದ್ರದ
ಭರತ ಬಂದಿಳಿತ ಇಳಿದಂಗೆ ||
ಕಡಿಯಕ್ಕಿಯ ಅನ್ನ, ಕಡೆದ ಮಜ್ಜಿಗೆ, ಕಡಲಿನ ತೆರೆ ಇವೆಲ್ಲ ಚೆಂದವೆನ್ನುವ ಗರತಿಯರು ಬಾಲಮ್ಮ ನೀನೂ ಚಂದ, ನಿನ್ನ ಗಂಡನೂ ಚಂದ ಎಂಬುದಾಗಿ ತ್ರಿಪದಿ ಯೊಂದರಲ್ಲಿ ವರ್ಣಿಸುತ್ತಾ ಸುಂದರದಾಂಪತ್ಯವನ್ನು ಹೆಣೆದಿದ್ದಾರೆ. ಕಡಲ ತೆರೆಯನ್ನು ಕಂಡರೆ ಎಲ್ಲರಿಗೂ ಭಯ. ಆದರೆ ಮೊಗವೀರರಿಗೆ ಅದನ್ನು ಕಂಡಾಗ ತೊಟ್ಟಿಲು ತೂಗುವ ನೆನಪು. ಅದೂ ಗೋಪಾಡಿಯ ಚಿಕ್ಕುವಮ್ಮ ಭಕ್ತರನ್ನು ತೊಟ್ಟಿಲಲ್ಲಿಟ್ಟು ತೂಗಿದಂತಹ ಸವಿನೆನಪು.
ನಾ ತೂಗು ತೊಟ್ಟಿಲಿಗೆ ನಾಗಬೆತ್ತದ ನೇಣು
ನಾ ತೂಗಿ ಕಡಲ ತೆರೆತೂಗಿ | ಗೋಪಾಡಿ
ಅಮ್ಮ ತೂಗಿದಳು ಬನದಲ್ಲಿ ||
ತೆರೆಗಿಂತಲೂ ಆಕರ್ಷಕವಾದುದು ನೊರೆ. ಕೆಲವರು ಹಾಲೆಂದು ಭ್ರಮಿಸಿ ಅದನ್ನು ಬಾಚಲು ಹೋದರಂತೆ ಪಾಪ! ಬಾಚಲು ಹೋದರೆ ಅಲ್ಲೇನಿದೆ? ಬರೀ ನೀರಿನ ಗುಳ್ಳೆ. ಅನೇಕರಿಗೆ ಕಡಲ ನೀರಿನ ಮಹತ್ತ್ವ ಗೊತ್ತಿಲ್ಲ ಎಂದು ಅವರು ಮರುಕಪಡುತ್ತಾರೆ.
ಹಾಲಮತ ಗಂಗಮನ ಹರಿದೋಡಿ ಬರುವಾಗ
ಹಾಲನ್ನು ಗೋರಿದರೆ ಹಲವರು | ಈ ಊರ
ನೀರ ಸಾಧನೆಯ ಅರಿಯರು ||
ನೊರೆಯನ್ನೇ ಉತ್ತರವಾಗಿ ಪಡೆಯುವಂತೆ ಅವರು ರಚಿಸಿದ ಒಗಟುಗಳು ಅತ್ಯಂತ ಸುಂದರವಾಗಿವೆ.
ಸುತ್ತಲು ಸಮುಂದರ ನಡುವೆ ನೀರುಳಿ ಮರ
ಹೋಗಾದರೇನೇ ಫಲವಿಲ್ಲ | ದೊಂಬರ ಚೆನ್ನಿ
ಚೆಲುವಿದ್ದರೇನೂ ಕುಲವಿಲ್ಲ ||
ಇದು ಬರೇ ಒಗಟಲ್ಲ; ಕಾವ್ಯವೂ ಹೌದು. ಇನ್ನೊಂದು ಒಗಟಿನಲ್ಲಿ ಆ ನೊರೆಯನ್ನು ಬೇರಿಲ್ಲದ ಗಿಡದಲ್ಲಿ ಹುಟ್ಟಿದ ಬಿಳಿಯ ಹೂಮಾಲೆಯೆಂದೂ, ಅದು ಗಂಗಮ್ಮ ಜಡೆಯಿಲ್ಲದೇನೇ ಇಳಿಬಿಟ್ಟ ಹೂಮಾಲೆಯ ಜೆಲ್ಲಿಯೆಂದೂ ವರ್ಣಿಸಲಾಗಿದೆ.
ನೀರಿಲ್ಲದ ಕೆರೆಯಲ್ಲಿ ಬೇರಿಲ್ಲದ ಗಿಡ ಹುಟ್ಟಿ
ಉಗುಲಿಲ್ಲದ ಹೂಗು ಕೊಯ್ದಾಳು | ಗಂಗಮ್ಮ
ಬಳ್ಳಿಲ್ಲದೆ ಹೂವ ಸುರಿದಾಳು | ಗಂಗಮ್ಮ
ಜೆಡಿಯಿಲ್ಲದ ಜೆಲ್ಲಿ ಬಿಟ್ಟಾಳು ||
ಬಬ್ಬರಿಯ ಕಡಲಿನ ದೈವ. ಸದಾ ಕಡಲಿನಲ್ಲೇ ಇರುವವನು. ಭಕ್ತೆಯೊಬ್ಬಳಿಗೆ ಬಬ್ಬರಿಯನ ಬಗ್ಗೆ ಕನಿಕರ. ಪಾಪ! ಆತ ಆ ಚಳಿಯಲ್ಲಿ ಹೇಗೆ ಜೀವಿಸಬಹುದು? ಬಹುಶಃ ಏಳು ಬಾಗಿಲು ಹಾಕಿ, ಬೀಗ ಜಡಿದು, ಅದರೊಳಗೆ ಅವಿತಿರಬಹುದು ಎಂದು ಆಕೆಯ ಊಹೆ. ಮೊಗವೀರ ಗರತಿಯೊಬ್ಬಳ ಮುಗ್ಧಭಕ್ತಿ ಈ ತ್ರಿಪದಿಯಲ್ಲಿ ವ್ಯಕ್ತವಾಗಿದೆ:
ಏಳು ಸಂದ್ರದ ತುದಿಯಲ್ಲಿ ಕೀಳುಸಂದ್ರದ ಬುಡದಲ್ಲಿ
ಹ್ಯಾಗಿದ್ರಿ ಬಬ್ಬರ್ಯ ಹಿಮದಲ್ಲಿ | ಚಳಿಯಲ್ಲಿ
ಏಳು ಬಾಗಿಲ ಬೀಗ ಗಜಗಟ್ಟಿ ||
ಬಬ್ಬರಿಯ ದೇವರಿಗೆ ಇಬ್ಬರು ಹೆಂಡಿರಂತೆ. ಇಬ್ಬರಲ್ಲೂ ಸಮಾನಸೌಂದರ್ಯ ವಿಲ್ಲ. ಒಬ್ಬಳದು ಕೆದರಿದ ತಲೆ, ಇನ್ನೊಬ್ಬಳದು ತಿದ್ದಿ ತೀಡಿದ ಸಿರಿಮುಡಿ. ಈ ಕಾರಣ ದಿಂದಾಗಿ ನಿತ್ಯವೂ ಅವರೊಳಗೆ ಜಗಳ. ಇಬ್ಬರನ್ನೂ ಒಂದೇ ಊರಿಗೆ ಒಟ್ಟಾಗಿ ಕಳುಹಿಸಲು ಸಾಧ್ಯವಿಲ್ಲ. ಈ ಅಸಮಾನತೆಯನ್ನು ಹೋಗಲಾಡಿಸಲೆಂದಾಗಿರಬೇಕು - ದೇವರು ಇಬ್ಬರಿಗೂ ಒಂದೇ ರೀತಿಯ ಹೊನ್ನ ಉಡುದಾರ ಮಾಡಿಸಿದರಂತೆ. ಆದರೆ ಈಗ ಉಡುದಾರವೇ ಮುಂದಿನ ಜಗಳಕ್ಕೂ ಕಾರಣವಾಯಿತಂತೆ. ಅಂತೂ ಇಬ್ಬರನ್ನೂ ಒಂದೂರಿ ಕಳುಗಾರು ನಮ್ಮ ಜನಪದ ಗರತಿಯರ ಈ ಕಾವ್ಯಕಲ್ಪನೆ ಎಷ್ಟು ಸುಂದರ ವಾಗಿದೆ.
ಬೊಬ್ಬರಿಯ ದೇವರಿಗು ಇಬ್ಬರು ಹೆಂಡರು
ಸಿಬ್ಬಲಮಂಡಿ ಸಿರಿಮಂಡಿ | ಬಬ್ಬರ ದೇವರು
ಇಬ್ಬರನಾ ಒಂದೂರಿಗೆ ಕಳುಗಾರು ||
ಬೊಬ್ಬರಿಯ ದೇವರಿಗೆ ಇಬ್ಬರು ಹೆಂಡಿರು
ಇಬ್ಬರಿಗೂ ಹೊನ್ನ ಉಡುದಾರ - ಬಬ್ಬರ ದೇವರು
ಒಬ್ಬರನು ಒಂದೂರಿಗೆ ಕಳುಗಾರು ||
ಕುಂದಾಪುರ ಕಡೆ ಪ್ರಚಾರದಲ್ಲಿರುವ `ಮೀನಿನ ಮದುವೆ ಹಾಡು' ಒಂದು ಪುಟ್ಟ ರೂಪಕದಂತಿದೆ. ಮತ್ತು ಅಷ್ಟೇ ಅರ್ಥಗರ್ಭಿತವಾಗಿಯೂ ಇದೆ. ಇಲ್ಲಿ ಮೀನು ಪ್ರಾಯ ಪ್ರಬುದ್ಧಳಾದ ಒಬ್ಬಾಕೆ ಹೆಣ್ಣಿನ ಸಂಕೇತ. ತಮ್ಮ ಮಗಳನ್ನು ಯಾರಿಗೆ ಮದುವೆ ಮಾಡಿ ಕೊಡುವುದು ಎಂಬುದು ಎಲ್ಲ ತಾಯಂದಿರ ಸಮಸ್ಯೆ. ಅವರ ಕಣ್ಣ ಮುಂದೆ ಅನೇಕ ಗಂಡುಗಳಿರುತ್ತಾರೆ. ಇಲ್ಲಿ ಆಯ್ಕೆ ಮಾಡುವ ಉಪಾಯ ಹೇಗೆ? ಅವರು ಗೃಹಸ್ಥರನ್ನೂ ಬುದ್ವಂತರನ್ನೂ ಕರೆಸಿ ಪಂಚಾಯ್ತಿ ಮಾಡಿಸಿದರು.
ಆ ಮೀನು ಈ ಮೀನು ಮಾಮೀನು ಮಡದಲೆ ಮೀನು
ಅಯಿರ್ ಮೀನ್ ಬುದ್ವಂತನ ಕರೆಸಿ - ಪಂಚೆತಿಮಾಡಿ
ಯಾವ್ ಮೀನಿಗೆ ಹೆಣ್ಣ ಕೊಡಲಕ್ಕು?
ಬುದ್ವಂತರು : ಮುಳ್ಳು ಶ್ಯಾಡಿಗೆ ಹೆಣ್ಣ ಕೊಡಬಹುದು
ಗೃಹಸ್ಥರು: ಮುಳ್ಳು ಶ್ಯಾಡಿಗೆ ಹೆಣ್ಣ ಕೊಟ್ಟರೆ ಬುದ್ವಂತರೆ
ಮುಳ್ಳು ಮುಳ್ಳಿನಲಿ ಎಡುವಾರು
ಕೊಡಬೇಕು ದೊಡ್ಕೆರೆಯ ಕರಸಿಗೆ ಹೆಣ್ಣನ್ನು
ಕೊಟ್ಟರೆ ಪಕ್ಕದೊಳದರಾ ಸಲಗುವುದು
ಕೇವಲ ಅಂತಸ್ತು ಸಂಪತ್ತುಗಳನ್ನು ನೋಡಿ ಹೆಣ್ಣು ಕೊಡಲಾರದು ಗುಣ ನೋಡಿಯೇ ಹೆಣ್ಣು ಕೊಡಬೇಕು - ಎಂಬ ತಾತ್ತ್ವಿಕವಿವೇಚನೆ ಇಲ್ಲಿದೆ. `ಶಾಂಬಲಾ ಕಂಡಾನಿಗಡುವಾನದೆ' ಎಂಬ ತುಳುಹಾಡಿನಲ್ಲಿಯೂ ಹೆಚ್ಚು ಕಡಮೆ ಇದೇ ರೀತಿಯ ಆಶಯವನ್ನು ಕಾಣಬಹುದು. (ನೋಡಿ : ಮೊಗವೀರರ ಸಂಸ್ಕೃತಿ, ಪುಟ 85)
ತುಳು ಸಮುದ್ರಜನಪದದಲ್ಲಿ ಸೋಮಾರಿ ಹೆಣ್ಣೊಬ್ಬಳನ್ನು ಲೇವಡಿಮಾಡುವ ಪದ್ಯವೊಂದು ಹೀಗಿದೆ -
ಬ್ಯಾಲೆಗಿಜ್ಜಾಲೆ ಪೊಣ್ಣು
ಕಾಲೆಗಿಜ್ಜಾಲೆ |
ಕಂತಾಲ್ದ ವಾಡ ಬನ್ನಗ
ತಯಾರಾಯಾಲೆ ||
ಕನ್ನಡಾನುವಾದ:
ಹೆಣ್ಣು ಕೆಲಸಕ್ಕೆ ಸಿಗುವವಳಲ್ಲ
ಸಮಯಕ್ಕೆ ಬರುವವಳೂ ಅಲ್ಲ
ಆದರೆ ಕಂತಬಲೆಯ ದೋಣಿ
ಬಂದಾಗ ಮಾತ್ರ ಅಲ್ಲಿ
ತಯಾರಾಗಿರುತ್ತಾಳೆ.
[ಯಾಕೆಂದರೆ ಅದರಲ್ಲಿ ಆಕೆಯ ಪ್ರಿಯತಮ ಬರುತ್ತಾನಂತೆ! ]
ಸದಾ ದುಡಿಯುವ ಮೊಗವೀರ ಕುಟುಂಬದ ಒಂದು ಚಿತ್ರಣವನ್ನು ತುಳು ಜೋಗುಳ ಹಾಡು ಬಿಂಬಿಸುತ್ತದೆ.
ಜೋಜೋ ಬಾಲೆಗ್ ಜೋಜೋ ಬಾಲೆ
ಬಾಲೆತಮ್ಮೆ ಮೀನ್ಗ್ ಪೋದ್ಂಡ್
ಬಾಲೆತಪ್ಪೆ ಮೂಡಾಯಿ ಪೋದ್ಂಡ್
ಜೆಪ್ಪುಲ ಬಾಲೆ ಈ ಬುಲ್ಪಡಾ
ದೇವರುಲ್ಲೆರ್ ಮಗಾ ನಿಕ್ಕ್
ನಾರಾಯಣ ದೇವೆರ್ ||
ತಂದೆ ಮೀನು ತರಲು ಹೋಗಿದ್ದಾನೆ. ತಾಯಿ ಮೀನು ಮಾರಲು ಹೋಗಿದ್ದಾಳೆ. ಮಗುವನ್ನು ನೋಡಿಕೊಳ್ಳುವವರು ಯಾರು? ನೆರೆಮನೆಯಾಗಿ ಒಬ್ಬಳು ಬಂದು ತೊಟ್ಟಿಲು ತೂಗುತ್ತ ಹೇಳುತ್ತಾಳೆ :
`ಅಳಬೇಡ ಮಗೂ, ನಿದ್ದೆಮಾಡು.
ನಿನಗೆ ನಾರಾಯಣ ದೇವರು ಇದ್ದಾರೆ' - ಎಂದು.
ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ |
- ಎಂಬುದು ಆರ್ಯೋಕ್ತಿ. ಇದೇ ಅರ್ಥವನ್ನು ಬಿಂಬಿಸುವ ಒಂದು ಕನ್ನಡದ ತ್ರಿಪದಿಯನ್ನು ನೋಡಿರಿ:
ನೆಲಿಯ ಬಲ್ಲೇನೆಂದು ಬಲಿಯ ಬೀಸಲು ಬೇಡ
ನೆಲಿತಪ್ಪಿ ಬಲಿಯ ಬಳಕೊಟ್ಟ | ಅಣ್ಣಯ್ಯ
ದಿಕ್ತಪ್ಪಿ ದೇಶ ಬಿಡಬೇಡ ||
ಮೊಗವೀರಸಮಾಜದ ಗರತಿಯರು ಹಾಡುವ ಈ ಜನಪದಹಾಡುಗಳು ಕೆಲ ವೊಂದು ಹೊಸ ಸನ್ನಿವೇಶಗಳಿಂದಾಗಿ ಹೊಚ್ಚಹೊಸತೆನಿಸಿ ಸಹೃದಯರಿಗೆ ತುಂಬಾ ಆಪ್ಯಾಯಮಾನವಾಗಿ ತೋರುತ್ತದೆ. ಸಮುದ್ರಪರಿಸರದ ಬಗ್ಗೆ ಅಧಿಕೃತವಾಗಿ ಹೇಳಬಲ್ಲ ವರೂ ಅವರೇ ತಾನೇ?
[`ತೆರೆ' ಕುಂದಾಪುರ ತಾಲೂಕು ನಾಲ್ಕನೆಯ ಕನ್ನಡಸಾಹಿತ್ಯ ಸಮ್ಮೇಳನ ಸ್ಮರಣಸಂಚಿಕೆ, ಮರವಂತೆ, 1995 -ಇದರಲ್ಲಿ ಪ್ರಕಟಿತ; `ತುಳು ನಡೆನುಡಿ', ಪುಣಿಂಚತ್ತಾಯ ಲೇಖನಸಂಕಲನ, 1998 -ಇದರಲ್ಲಿ ಪುನರ್ಮುದ್ರಿತ]
ಯಾವುದೇ ಭಾಷೆಯ ಸಾಹಿತ್ಯದ ಮೂಲರೂಪದರ್ಶನಕ್ಕೆ ನಮಗಿರುವ ಆಧಾರ ಜನಪದಸಾಹಿತ್ಯವೊಂದೇ. ಪಾಂಡಿತ್ಯದ ಚಂಡಮಾರುತಕ್ಕೆ ಒಳಗಾಗದೆ, ಪ್ರದರ್ಶನದ ಬೂಟಾಟಿಕೆಗೆ ಮರುಳಾಗದೆ, ನಿಷ್ಕಲ್ಮಷಹೃದಯದಿಂದ ಮುಕ್ತಕಂಠದಿಂದ ಸತ್ಯವೂ ಶಿವ ಮಯವೂ ಆದ ಒಂದು ವಾಕ್ಸೌಂದರ್ಯವನ್ನು ಬದುಕಿನ ಪರಮಾರ್ಥವನ್ನು ಸೃಜಿಸಿ ಕೊಟ್ಟ ನಮ್ಮ ಎಲ್ಲ ಜನಪದರೂ ಅಭಿನಂದನೀಯರೆ.
ಶಿಷ್ಟಸಾಹಿತ್ಯವು ವಿರಳವಾಗಿರುವ ತುಳುಭಾಷೆಯಲ್ಲಂತೂ ಈ ಜನಪದದ ಸ್ವಚ್ಛ ರೂಪವನ್ನು ನಾವು ಕಾಣುತ್ತೇವೆ. ಸ್ಫಟಿಕದಂತಹ ಭಾವನೆ, ಮುತ್ತಿನಂತಹ ಮಾತು, ಮಾಣಿಕದಂತಹ ಸೌಂದರ್ಯ - ಈ ಮೂರರ ಸಮ್ಮಿಲನವನ್ನು ಯಾವುದೇ ಕೃತಕವಾದ ಮೆರುಗಿಲ್ಲದೆ, ಸಹಜಸುಂದರವಾದ ರೂಪದಿಂದ ನಾವು ಕಾಣಬೇಕಾದರೆ ತುಳುವಿನ ಜನಪದಗೀತಗಳನ್ನು ಶರಣು ಹೋಗಬೇಕು. ಇಲ್ಲಿ ಯಾವುದೇ ಕಟ್ಟುಪಾಡುಗಳಿಲ್ಲ; ನಿಖರವಾದ ನಿಯಮಗಳಿಲ್ಲ. ಎಲ್ಲವೂ ಸ್ವಚ್ಛಂದ - ನಿರರ್ಗಳ. ಪಾಂಡಿತ್ಯಪೂರ್ಣವಾದ ಭಾಷೆಗೆ ಇಲ್ಲಿ ಸ್ಥಾನವಿಲ್ಲ. ಇದು ಹೃದಯದ ಭಾಷೆ. ಯಾವುದೇ ಬಾಹ್ಯ ಒತ್ತಡಗಳಿಗೆ ಒಳಗಾಗಿ ನಮ್ಮ ಜನಪದರು ಹಾಡಲಿಲ್ಲ. ಅವರ ಅಂತರಂಗದ ಮಿಡಿತಗಳು ತಾವಾಗಿಯೇ ಅವರನ್ನು ಹಾಡಿಸಿದುವು - ಪ್ರೇರಿಸಿದುವು. ಒಂದು ಆಚರಣೆಯ ಹಿನ್ನೆಲೆಯ ಸಾಹಿತ್ಯವಾಗಿ ಹುಟ್ಟಿಕೊಂಡ ಅಥವಾ ಆರಾಧನೆಯ ಉದ್ದೇಶವಾಗಿ ಹುಟ್ಟಿಕೊಂಡ ತುಳುಪಾರ್ತನಗಳು ವಸ್ತುವರ್ಣನೆ ಭಾವನೆಗಳ ವೈವಿಧ್ಯದಿಂದಾಗಿ ಸಾಹಿತ್ಯದ ಉತ್ತಮಗುಣಗಳಿಗೆ ಸಾಕ್ಷಿಯಾಗಿವೆ.
ನಮ್ಮ ಜನಪದರು ಪಿಂಗಳನ ಛಂದಃಶಾಸ್ತ್ರವನ್ನೂ ಮಮ್ಮಟನ ಅಲಂಕಾರ ಶಾಸ್ತ್ರವನ್ನೂ ಭರತನ ರಸಗಳನ್ನೂ ಆನಂದವರ್ಧನನ ಧ್ವನಿಶಾಸ್ತ್ರವನ್ನೂ ತಿಳಿದವರಲ್ಲ. ಆದರೂ ಆ ನೈಸರ್ಗಿಕ ಶುಭ್ರಸುಂದರಸಾಹಿತ್ಯದಲ್ಲಿ ಇವೆಲ್ಲ ಗುಣಗಳ ಸುಮಧುರ ರೂಪವನ್ನು ನಾವು ಗುರುತಿಸಬಹುದು.
ಶಿಷ್ಟಸಾಹಿತ್ಯಕ್ಕೂ ತುಳು ಪಾರ್ತನಗಳಿಗೂ ಇರುವ ಮುಖ್ಯವ್ಯತ್ಯಾಸವನ್ನು ಇಲ್ಲಿಯ ಕಥಾವಸ್ತುಗಳಲ್ಲಿ ಕಾಣಬಹುದು. `ಮಂಗಲಾದೀನಿ, ಮಂಗಲಮಧ್ಯಾನಿ, ಮಂಗಲಾಂತಾನಿ' ಎಂಬುದು ಭಾರತೀಯಕಾವ್ಯಗಳ ಮುಖ್ಯಲಕ್ಷಣ. ಆದರೆ ಹೆಚ್ಚಿನ ಪಾರ್ತನಗಳೂ ಇದಕ್ಕೆ ಹೊರತಾಗಿವೆ. ಗ್ರೀಕ್ ನಾಟಕಗಳಂತೆ ಇಲ್ಲಿ ದುರಂತವೇ ಕಥೆಯ ಜೀವಾಳವಾಗಿ ಬಿಡುತ್ತದೆ. ಭೂತಪಾರ್ತನಗಳಿಗಂತೂ ಇವು ಅನಿವಾರ್ಯವೆನಿಸಬಹುದು. ಯಾಕೆಂದರೆ ಪಾತ್ರಿಗೆ ಭಾವಾವೇಶವನ್ನು ಉಂಟುಮಾಡುವುದು ಭೂತಪಾರ್ತನಗಳ ಮುಖ್ಯ ಗುರಿ. ಪಾತ್ರಿಯ ಆರಾಧ್ಯದೈವದ ಮಹಿಮೆಯನ್ನು ಸಾರುವ ಈ ಪಾರ್ತನಗಳು ಅದ್ಭುತ ಕಲ್ಪನೆಗಳಿಂದ ಮಿರುಗುಗೊಂಡಿದ್ದು ರೋಮಾಂಚಕ ಘಟನೆಗಳಿಂದ ಹೃದಯಗ್ರಾಹಿಯಾಗಿವೆ. ನಮ್ಮ ಮಟ್ಟಿಗೆ ಒಂದು ರೀತಿಯ ಶ್ರವ್ಯಕಾವ್ಯವೇ ಆಗಿರುವ ಈ ಪಾರ್ತನಗಳ ಸ್ವಾರಸ್ಯವು `ಭೂತಕಾಲ'ದಲ್ಲಿ (ಭೂತಕೋಲವು ನಡೆಯುವ ಕಾಲದಲ್ಲಿ) ನಮ್ಮ ಮನಸ್ಸಿಗೆ ಅಷ್ಟೊಂದು ನಾಟುವುದಿಲ್ಲ. ಯಾಕೆಂದರೆ ತೆಂಬರೆಯ (ಅಥವಾ ನಮ್ಮೂರಿನಲ್ಲಾದರೆ ಡೋಲಿನ) ಧ್ವನಿಗೆ ನಮಗೆ ಕೇಳಿಸುವುದು ಕೇವಲ ರಾಗಾಲಾಪನೆಯ ಮಾಧುರ್ಯ ಮಾತ್ರ. ಇವುಗಳ ಸಾಹಿತ್ಯಗುಣವನ್ನು ನಾವು ಅಳೆಯಬೇಕಾದರೆ, ಬೇರೆ ಸಂದರ್ಭದಲ್ಲಿ ಪ್ರತ್ಯೇಕವಾಗಿ ಅವನ್ನು ಗಮನಿಸಬೇಕಾಗುತ್ತದೆ. ಆದರೆ ಭೂತಪಾತ್ರಿಗೆ ತಾನು ಕಟ್ಟುವ ಭೂತದ ಪಾರ್ತನವು ಚೆನ್ನಾಗಿ ಗೊತ್ತಿರುವುದರಿಂದ ಆತ ಅದನ್ನಾಲಿಸುತ್ತಾ ಜೊತೆಗೆ ಹಾಡುತ್ತಾ ಮೆಯ್ಮರೆಯುತ್ತಾನೆ. ಕಥಾನಾಯಕನನ್ನು ಅಥವಾ ನಾಯಕಿಯನ್ನು ತನ್ನಲ್ಲಿ ಆವಾಹಿಸಿ ಕೊಳ್ಳುತ್ತಾನೆ. ಕಥೆಯ ಅದ್ಭುತಸನ್ನಿವೇಶಗಳು ಬೆಳೆಯುತ್ತಾ ಹೋದಂತೆ, ಪಾತ್ರಿಯ ಭಾವನೆಗಳೂ ಸಾಂದ್ರವಾಗುತ್ತಾ ಹೋಗುತ್ತವೆ. ಕಥೆ ದುರಂತದಲ್ಲಿ ಅಂತ್ಯವಾದೊಡನೆ ಪಾತ್ರಿಯ ಆವೇಶ ಜೋರಾಗುತ್ತದೆ. ಭೂತದರ್ಶನ ಪ್ರಾರಂಭವಾಗುತ್ತದೆ. ಬಹುಶಃ ಅತ್ಯಂತ ದುರಂತಕಥಾನಕವುಳ್ಳ ಭೂತಗಳು ಉಗ್ರಸ್ವರೂಪದ ಭೂತಗಳೆಂದು ಪರಿಗಣಿಸ ಲ್ಪಡುತ್ತವೆ. ಆದರೆ ಈ ರೀತಿಯ ಪಾರ್ತನಗಳು ಕೇವಲ ಆರಾಧನಗೀತಗಳಾಗಿರದೆ, ಉತ್ತಮ ಕಾವ್ಯಗುಣವನ್ನು ಪಡೆದ ಸಾಹಿತ್ಯಪುಂಜಗಳಾಗಿವೆ ಎಂಬುದು ಇಲ್ಲಿ ಮನನೀಯ ವಾದ ವಿಚಾರ.
ಕಾವ್ಯವೆಂದರೇನು? ಈ ಪ್ರಶ್ನೆಗೆ ವಿದ್ವಾಂಸರು ಹಲವು ರೀತಿಯ ಉತ್ತರಗಳನ್ನು ನೀಡಿರುವುದು ಶಿಷ್ಟಸಾಹಿತ್ಯದಲ್ಲಿ ಕಂಡುಬರುತ್ತದೆ. ಅದರಂತೆ ಶಿಷ್ಟಸಾಹಿತ್ಯವೂ ವಿಭಿನ್ನರೀತಿ ಗಳಲ್ಲಿ ರೂಪುಗೊಂಡದ್ದನ್ನು ಕಾಣಬಹುದು. ಅಲಂಕಾರಗಳು, ಧ್ವನಿ, ವಕ್ರೋಕ್ತಿ - ಇವೆಲ್ಲ ಕಾವ್ಯದ ಬೇರೆ ಬೇರೆ ಲಕ್ಷಣಗಳೇ ಆಗಿದ್ದರೂ, ಮುಖ್ಯವಾಗಿ ಅದರ ರಸಾತ್ಮಕತೆಯನ್ನು ಒಂದು ಮುಖ್ಯಲಕ್ಷಣವಾಗಿ ಅಂಗೀಕರಿಸುವುದು ತಪ್ಪಲ್ಲ. ಯಾಕೆಂದರೆ ಅದು ಹೃದಯಕ್ಕೆ ಸಮೀಪವಾಗಿದ್ದು, ಕಥೆಯ ಘಟನೆಗಳೊಂದಿಗೇ ಬೆರೆತಿರುವಂತಹುದು. ಅಲಂಕಾರ ವಾಗಲಿ, ವಕ್ರೋಕ್ತಿಯಾಗಲಿ, ಧ್ವನಿಯಾಗಲಿ - ಕಥಾವಸ್ತುವಿನೊಡನೆ ನೇರಸಂಬಂಧವುಳ್ಳ ರಸಪುಷ್ಟವಾದ ಈ ಭಾವನೆಗಳನ್ನೇ ಪ್ರತಿಪಾದಿಸುವುದಕ್ಕಿರುವ ಇತರ ನಿರೂಪಣೆಯ ಮಾಧ್ಯಮವಾಗುವುದರಿಂದ `ರಸವಂತಿಕೆ'ಯನ್ನೇ ಕಾವ್ಯದ ಮುಖ್ಯಲಕ್ಷಣವನ್ನಾಗಿ ನಾವು ಆಯ್ದುಕೊಳ್ಳಬಹುದು. ಅದನ್ನೆ `ವಾಕ್ಯಂ ರಸಾತ್ಮಕಂ ಕಾವ್ಯಂ' ಎಂದೂ ವಿದ್ವಾಂಸರು ಹೇಳಿದರು.
ಪಾರ್ತನಗಳಲ್ಲೂ ವಿಭಿನ್ನರಸಗಳು ಪ್ರಮುಖಪಾತ್ರವನ್ನು ವಹಿಸುತ್ತವೆ. ಬದುಕಿನ ಅಸಹಾಯಕಸ್ಥಿತಿಯಲ್ಲಿ, ಒದಗಿಬಂದ ಪರಿಸ್ಥಿತಿಯೊಡನೆ ಹೋರಾಡಿದ ಕಥಾನಾಯಕರ ವೀರ-ಸಾಹಸಗಳನ್ನೂ, ಕೊನೆಗೆ ದುರಂತದಲ್ಲಿ ಪರ್ಯವಸಾನವಾಗುವ ಅವರ ಕರುಣಾ ಜನಕ ಸ್ಥಿತಿಯನ್ನೂ ಈ ಪಾರ್ತನಗಳು ಬಿಂಬಿಸುತ್ತವೆ. ವಿಭಿನ್ನಸನ್ನಿವೇಶಗಳಿಂದ ಕೂಡಿ, ಸುರಸವೂ ಸುದೀರ್ಘವೂ ಆದ ಕೋಟಿಚೆನ್ನಯ ಪಾರ್ತನವು ಒಂದು ಜನಪದ ಮಹಾಕಾವ್ಯವೆಂದರೂ ತಪ್ಪಲ್ಲ. ಕನ್ನಡದ `ಮಂಟೇಸ್ವಾಮಿ' ಕಥನಗೀತವನ್ನು ಒಂದು ಜನಪದಮಹಾಕಾವ್ಯವಾಗಿ ನಾವು ಅಂಗೀಕರಿಸುವುದಾದರೆ, ತುಳುವಿನ ಮೂಕಾಂಬಿ ಗುಳಿಗ, ಪಂಜುರ್ಳಿ, ಜುಮಾದಿ, ಮಾಣಿಪೆರ್ನಳ - ಮೆಗ್ಯಪೆರ್ನಳ, ಸಿರಿ ಮುಂತಾದ ಪಾರ್ತನಗಳನ್ನೂ ಜನಪದಮಹಾಕಾವ್ಯಗಳಾಗಿ ನಾವು ಅಂಗೀಕರಿಸುವುದು ತಪ್ಪಲ್ಲ. ಕೋಟಿ ಚೆನ್ನಯ ಪಾರ್ತನದಲ್ಲಿ ವೀರರಸವು ಪ್ರಧಾನರಸ; ದುರಂತಕ್ಕೊಳಗಾದರೂ ಕೋಟಿಯು ಒಬ್ಬ ಧೀರೋದಾತ್ತ ನಾಯಕ. ಸತ್ಯಧರ್ಮಗಳ ಬಗ್ಗೆ ಸಾಧುಸಂರಕ್ಷಣೆಯ ಬಗ್ಗೆ ಅವನ ನಿಲುವು ನಿಖರವಾದದ್ದು.
ಮೂಕಾಂಬಿ ಪಾರ್ತನವು ಕರುಣರಸಪ್ರಧಾನವಾದದ್ದು. ಭವಭೂತಿಯ ಉತ್ತರ ರಾಮಚರಿತದಂತೆ `ಏಕೋ ರಸಃ ಕರುಣ ಏವ' ಇಲ್ಲಿ ಕಾವ್ಯದ ಜೀವಾಳವಾಗಿ ನಮ್ಮ ಮನಸ್ಸನ್ನು ಸೆರೆಹಿಡಿಯುತ್ತದೆ. `ಮಾಣಿಪೆರ್ನಳ-ಮೆಗ್ಯಪೆರ್ನಳ' ಪಾರ್ತನದಲ್ಲಿ ವೀರಕರುಣ ಶಾಂತರಸಗಳಿವೆ. ಇಲ್ಲಿ ಕತೆ ದುರಂತಪರ್ಯವಸಾಯಿಯಲ್ಲ. ಕಥಾನಾಯಕರು ದುರಂತ ವನ್ನಪ್ಪಿದರೂ, ಕಥೆ ಅಲ್ಲಿಗೇ ಮುಗಿಯದೆ ಅವರ ತಂಗಿಯ, `ಕುಂಞಿ ಮಾಣಿಕೊ'ನ ಕರುಣಾಜನಕವಾದ ಜೀವನದ ಆದರ್ಶವನ್ನು ಎತ್ತಿ ಹಿಡಿಯಲು ಮುಂದಾಗುತ್ತದೆ.
ಪೆರ್ನಳ ಸಹೋದರ ಭೂತಗಳು ಮೇರ ಜನಾಂಗದ ಮದುವೆಯ ಸಮಯದಲ್ಲಿ ನಡೆಸುವ ಭೂತವಾದ್ದರಿಂದಲೋ ಏನೋ, ಅಲ್ಲಿ ಅಮಂಗಳ ಘಟನೆಗಳಿದ್ದರೂ, ಕತೆ ಯನ್ನು ಮಂಗಳಕ್ಕೆ ತಂದು ಶಾಂತರಸದಲ್ಲಿ ಕೊನೆಗೊಳಿಸಲಾಗಿದೆ.ಪುಂಡೂರಿನ ಮಾಣಿಪೆರ್ನಳ-ಮೆಗ್ಯಪೆರ್ನಳರ ಪ್ರೀತಿಯ ತಂಗಿ ಕುಂಞಿ ಮಾಣಿಕೊ. ನಾರಂಪಾಡಿಯ ಕಲಲನಿಗೆ ಆಕೆಯನ್ನು ಮದುವೆ ಮಾಡಿಸಲೆಂದು ನೆಂಟರು ಹೆಣ್ಣು ಕೇಳಲು ಬರುತ್ತಾರೆ. ``ಕೊರ್ಪಿ ಒಂಜಿ ದಿಕ್ಕಳ್ ಉಂಡೋ - ಮಾರ್ಪಿ ಒಂಜಿ ಸೂಡಿ ಉಂಡೋ'' ಎಂದು ಕೇಳುತ್ತಾರೆ.
ಕೊರ್ಪಿ ಒಂಜಿ ದಿಕ್ಕಳ್ ಇತ್ತ್ಂಡ್ - ಕೊರ್ತ್ ಪೋತ್ಂಡ್
ಮಾರ್ಪಿ ಒಂಜಿ ಸೂಡಿ ಇತ್ತ್ಂಡ್ - ಮಾರ್ತ್ ಪೋತ್ಂಡ್
ನನೊಂಜಿ ದಿಕ್ಕಲುಂಡು - ನಾಲ್ ಮೂಲೆತ ಕಜೊವು
ಒಂಜಿ ಮೂಲೆಗ್ ಅಡಿತ್ತ್ ಕೂಟ್ಯರ ಆವಂತಿ ದಿಕ್ಕಳ್
ತನ್ನ ಮೈಯನ ಮೀಯರ ತೀರಂತಿ ದಿಕ್ಕಳ್
ಒರ್ವಳ್ಳ ಕರ ಕಂಕಣೆಪಾಡ್ಯರ ತೆರ್ಯಂತಿ ದಿಕ್ಕಳ್
-ಎನ್ನುತ್ತಾರೆ. ಒಂದು ಹೆಣ್ಣಿನ ಸಾಧುಪ್ರಕೃತಿಯನ್ನು ಚಿತ್ರಿಸುವ ಈ ಮಾತುಗಳಲ್ಲಿ ಒಂದೇ ಭಾವದಲ್ಲಿ ಬಳಸಿದ `ಆವಂತಿ, ತೀರಂತಿ, ತೆರಿಯಂತಿ' ಎನ್ನುವ ವಿಭಿನ್ನ ಕ್ರಿಯಾಪದಗಳು ನಿರೂಪಣಶೈಲಿಯ ಸೊಗಸುಗಾರಿಕೆಯನ್ನು ಹೆಚ್ಚಿಸುತ್ತವೆ.
`ಕುಂಞಿಮಾಣಿಕೊ'ನ ಮದುವೆ ಕಳೆದ ಮೇಲೆ `ಬೊಳ್ಳಾರ ಮಾಣಿಕೊ ಸೊರೊ ಕೊರ್ನಗ - ದಿಕ್ಕಳೆನ್ ಜಪ್ಪುಡ್ತ್ ಕೊರ್ತೆರ್' ಎಂದು ಹೇಳುತ್ತಾನೆ ಕವಿ. ಇಲ್ಲಿ ಮುಂಜಾವದಲ್ಲಿ ಎಂಬ ಮಾತನ್ನು ವಾಚ್ಯವಾಗಿ ಹೇಳದೆ `ಬೊಳ್ಳರ ಮಾಣಿಕೊ ಸೊರೊ ಕೊರ್ನಗ' ಎಂದು ಸೂಚ್ಯವಾಗಿ ಹೇಳಿದ್ದು ಕಾವ್ಯದ ಉತ್ತಮಶೈಲಿಗೆ ನಿದರ್ಶನವಾಗಿದೆ.
ಮದುವೆಯ ಮರುದಿನವೇ ಊರಿಗೆ ದಂಡುಬಂತು. ದನಿಗಳ ಅಪ್ಪಣೆಯಂತೆ ಕಲಲನು ದಂಡಿಗೆ ಹೋಗುತ್ತಾನೆ. ಹೋದವನು ತಿಂಗಳು ದಾಟಿದರೂ ಬಾರದಿರುವುದನ್ನು ನೋಡಿ ಕುಂಞಿಮಾಣಿಕೊ ದುಃಖಿಸುತ್ತಾಳೆ. ಆಕೆಯ ಅಣ್ಣಂದಿರು ಕಲಲನನ್ನು ಹುಡುಕಲು ಸನ್ನದ್ಧರಾಗುತ್ತಾರೆ. ಕೊರುಂಬಡ್ಕಕ್ಕೆ ತಲಪಿದಾಗ ಕಲಲನು ದಂಡನ್ನು ಜೈಸಿ ಹಿಂದಿರುಗಿ ಬರುವುದು ಕಂಡಿತು. ಮೂವರೂ ಜೊತೆಯಲ್ಲಿ ಊರಿಗೆ ಹಿಂದಿರುಗುವಾಗ ದಾರಿಯಲ್ಲಿ ಒಂದು ಹೊಂಡಕ್ಕೆ ಹನೆಯ ಕೊಡೆ (ಚತ್ರ) ಮುಚ್ಚಿರುವುದನ್ನು ಕಂಡರು. ``ಚತ್ರತುಳಯಿ ಚತ್ರು ಉಪ್ಪು - ದೆಪ್ಪೊಡ್ಚಿ ಬಾವಾ'' ಎಂದು ಹೇಳಿದರೂ ಕಲಲನು ಅದನ್ನು ತೆಗೆಯಲು ಹೋಗಿ ಒಳಗಿರುವ ಶತ್ರುವಿನ ಕತ್ತಿಗೆ ಬಲಿಯಾಗಿ ಸಾಯುತ್ತಾನೆ. ಆ ತಲೆಯು ಈಸೊರಮಂಗ್ಲ ದೇವಾಲಯದ ಅಂಗಣದಲ್ಲಿ ಬಿದ್ದು ಹೊರಳಾಡುತ್ತದೆ.
ಒರೊ ಚೂನಗಾ ಮೂಡಾಯಿ ಅಂಗಣೊಟು
ಒರೊ ಚೂನಗಾ ಪಡ್ಡಾಯಿ ಅಂಗಣೊಟು
ನಾಲ್ ಬಾಕಿಲ್ಟ್ಲಾ ಪೊರೆಲೊಂದು ತೋಜುಂಡು
ಬಲ್ಯಾಯನ್ ಲೆತ್ತ್ದ್ ಪಂಚಾಂಗ ದಿಡ್ಪಾಯೆರ್
ಸತ್ಯೊಟು ಬೂರ್ನ ಚರೆಗೇಂದ್ ಬಲ್ಮೆಟ್ ಪಣ್ಪುಂಡು
ಇಲ್ಲಿ ಕಲಲನ ರುಂಡವು ದೇವಾಲಯದ ಅಂಗಣದಲ್ಲಿ ಹೊರಳಾಡುವ ವರ್ಣ ನೆಯು ಅತಿಶಯೋಕ್ತಿಯ ಕಲ್ಪನೆಯೊಂದಿಗೆ ಕಾವ್ಯ ಅದ್ಭುತರಸವನ್ನು ಪ್ರತಿಪಾದಿಸುತ್ತದೆ.
ಪೆರ್ನಳ ಸಹೋದರರ ದುಃಖವು ಹೇಳತೀರದು. ಭಾವನ ಮರಣದ ದುರಂತ ಸ್ವಪ್ನ ಕಣ್ಣ ಮುಂದೆ, ತಂಗಿಯ ದುಃಖದ ಕೋಡಿ ಇನ್ನೊಂದೆಡೆ, ನಡೆದ ಆಯಾಸ, ತಡೆಯಲಾರದ ಹಸಿವೆ - ಅವರ ಮನಸ್ಸು ತಳಮಳಗೊಂಡಿತು. ಅವರಿಗೊಂದು `ಪಿಲಿಕಡಂದೆಲ್'ನ ಗೂಡು ಕಾಣಸಿಗುತ್ತದೆ -
ಕಡಂದೆಲ್ಗ್ ಸೂ ಕೊರಿಯೆರ್ - ಕೆತ್ತಿಬೂರ್ಂಡ್
ಕೆತ್ತಿನ್ ಚಿಂದೆರ್ ಬಂಜಾರ ಕಳಿಪರಿಯೆರ್
ಕಡಂದೆಲಿನ ಮೊಟ್ಟೆ ಉಷ್ಣವಂತೆ. ಅದನ್ನು ತಿಂದು ಹೊಟ್ಟೆ ಉರಿದಾಗ ಕುಡಿದ ನೊರೆಕಳ್ಳು - ಇವೆರಡೂ ಅವರನ್ನು ಉನ್ಮತ್ತರನ್ನಾಗಿ ಮಾಡಿತು. ಹೊಟ್ಟೆಯೊಳಗಿನ ದುಃಖವು ಬದುಕಿನ ವೈರಾಗ್ಯವನ್ನು ಕೆಣಕಿತು. ಒಬ್ಬರನ್ನೊಬ್ಬರು ಬೈದುಕೊಂಡರು. ಅವರಿಗೆ ಅವರೇ ಶತ್ರುಗಳಂತೆ ಕಂಡರು. ಇರಿದುಕೊಂಡರು. ಪರಸ್ಪರ ಹೊಡೆದಾಡಿ ಇಬ್ಬರೂ ಮಡಿದರು. ಎಂಥಾ ದುರಂತ? ಇಬ್ಬರಲ್ಲೂ ಮಡುಗಟ್ಟಿದ ದುಃಖ. ಅದಕ್ಕಾಗಿ ಮಾಡಿ ಹೋದ ಅನ್ಯೋನ್ಯ ಆತ್ಮಹತ್ಯೆ? ಈ ಮಾತಿನ ಅರ್ಥ ಅಸಂಗತವೆಂದು ಕಂಡರೂ ಮನೋವೈಜ್ಞಾನಿಕವಾಗಿ ಪರಿಶೀಲಿಸಿದರೆ ಇದೊಂದು ಅದ್ಭುತ ಕಲ್ಪನೆಯೇ ಸರಿ. ಕಥೆಯು ಇಲ್ಲಿ ಒಂದು ಶಿಖರದ ಹಂತಕ್ಕೆ ಬಂದು ಮುಟ್ಟುತ್ತದೆ. ಆದರೆ ಕತೆ ಇಲ್ಲಿಗೆ ಮುಗಿಯುವುದಿಲ್ಲ. ಕವಿಗೆ ಕುಂಞಿಮಾಣಿಕೊವಿನ ಬಗ್ಗೆ ಅನುಕಂಪ ಉಂಟು. ಆಕೆ ಗಂಡ ನನ್ನೂ ಅಣ್ಣಂದಿರನ್ನೂ ಕಾಣದೆ ಮನೆಯಿಂದ ಒಬ್ಬಳೇ ಹೊರಡುತ್ತಾಳೆ. ದಾರಿಯಲ್ಲಿ ಒಂದು ಹೊಂಡದ ಮೇಲೆ ಹಾಸಿದ ಹಾಸುಗಲ್ಲಿನ ಮೇಲೆ ನಡೆಯುವ ಸಂದರ್ಭ ಬರುತ್ತದೆ. ಕೋಟೆತ ಬಬ್ಬು ಎಂಬ ಧೂರ್ತನನ್ನು ಊರವರು ಯಾರೋ ಅದರೊಳಗೆ ಹಾಕಿ ಮುಚ್ಚಿಬಿಟ್ಟಿದ್ದರು. ಆತ ಒಳಗಿಂದ-
``ಏರಪ್ಪಾ ಎನ್ನ ಸರೆಕ್ ಮುಟ್ಟುಣ
ಆಣಾಂಟ ಎನ್ನ ಸಮ್ಮಲೆ
ಪೊಣ್ಣಾಂಟ ಎನ್ನ ಸಂಗಟಿ
ಈ ಗುಂಡಿತ ಬಾಯಿ ಮೂಡ್ ದೆಪ್ಪೊಡು''
- ಎನ್ನುತ್ತಾನೆ.
ಆಕೆ : ಈ ಬೂಮಿ ಚೂತ್ ಬರ್ವನಾ
ಆಕಾಸೊ ಚೂತ್ ಬರ್ವನಾ
ಆತ : ಏನ್ ಬೂಮಿ ಚೂತ್ ಬರ್ವೆ ಪಂಡೇ
ಅವಳು ತನ್ನ ಗೆಜ್ಜೆಕತ್ತಿಯಿಂದ ಕಲ್ಲನ್ನು ಎತ್ತುತ್ತಾಳೆ. ತಾನು ಉಟ್ಟ ತುಂಡು ಬಟ್ಟೆ ಯನ್ನು ಸಡಿಲಿಸಿ, ಅದರ ಒಂದು ತುದಿಯನ್ನು ಹೊಂಡಕ್ಕೆ ಇಳಿಸುತ್ತಾಳೆ. ಆತ ಒಪ್ಪಿದ ಮಾತಿನಂತೆ ಮೇಲೆ ನೋಡದೆ ಭೂಮಿ ನೋಡಿಕೊಂಡೇ ಹೊಂಡದಿಂದ ಮೇಲೆ ಬರುತ್ತಾನೆ.
``ನನ ಮಿತ್ತ್ ಈ ಸಂಗಟಿ ಏನ್ ಸಗಯೆ'' ಎಂದು ಹೇಳಿ ಅನಾಥಳಾದ ಆಕೆಯನ್ನು ಕರಕೊಂಡು ತನ್ನೂರಿಗೆ ಹೋಗಿ ಮುಂಡಲ ಜಾತಿಯ ಒಬ್ಬ ಯುವಕನಿಗೆ ಮದುವೆ ಮಾಡಿಸುತ್ತಾನೆ. ಇಲ್ಲಿ ಕೋಟೆತ ಬಬ್ಬು ಧೂರ್ತನಾದರೂ ಆಕೆಯನ್ನು ವಂಚಿಸದೆ, ಅವಳ ಬಾಳಿಗೊಂದು ದಾರಿದೀಪವಾಗುತ್ತಾನೆ. ಕತೆ ಇಲ್ಲಿ ಮಂಗಳಾಂತ ವಾಗುತ್ತದೆ. ಈಗಲೂ ಹಳೆಯ ಸಂಪ್ರದಾಯವಾದಿಗಳಾದ ಮೇರರ ಮದುವೆಯ ದಿವಸ ಗಂಡಿನ ಮನೆಯಲ್ಲಿ ಪೆರ್ನಳ ಭೂತವೂ ಹೆಣ್ಣಿನ ಮನೆಯಲ್ಲಿ ಕುಂಞಿಮಾಣಿಕೊ ಭೂತವೂ ಅಪೂರ್ವವಾಗಿ ನಡೆಯುವುದಿದೆ. ಇಲ್ಲಿ ಒಂದು ಕಾವ್ಯಕ್ಕೆ ಒಪ್ಪುವಂತಹ ಕತೆಯನ್ನು ಜನಪದರು ಆರಿಸಿಕೊಂಡರೋ, ಅಥವಾ ಆರಿಸಿಕೊಂಡ ಕತೆಯನ್ನು ಕಾವ್ಯಕ್ಕೆ ಒಪ್ಪಿಸಿಕೊಂಡರೋ - ಅಂತೂ ನಮ್ಮ ಜನಪದರ ಕಾವ್ಯಕಲ್ಪನೆಯಂತೂ ಅನ್ಯಾದೃಶ ವಾಗಿದೆಯೆಂಬುದರಲ್ಲಿ ಸಂದೇಹವಿಲ್ಲ.
ಬಡತನದಿಂದ, ಪರವೂರಲ್ಲಿ ಕಷ್ಟಕ್ಕೊಳಗಾದ ಬ್ರಾಹ್ಮಣ ಹೆಣ್ಣೊಬ್ಬಳ ಬದುಕಿನ ದಾರುಣಸ್ಥಿತಿಯನ್ನು ಚಿತ್ರಿಸುವ ಮೂಕಾಂಬಿ ಪಾರ್ತನವು ಕಾವ್ಯದೃಷ್ಟಿಯಿಂದ ಮನನೀಯ ವಾಗಿದೆ. ಇಲ್ಲಿ ಸನ್ನಿವೇಶಗಳ ಕಲ್ಪನೆ ಹೃದಯಸ್ಪಂದಿಯಾಗಿದೆ.
ಕೊಲ್ಲೂರಿನ ಪಡ್ವಣಾರು ಜೀವನವೃತ್ತಿಗೆ ದಾರಿಕಾಣದೆ `ಬಂಟೇನೇ ಸೆಟ್ಟ್ಂಟ ಬಡಕಾಯಿ ರಾಜ್ಯೊಗು, ಬ್ರಾಣೇನೇ ಸೆಟ್ಟ್ಂಟ ಚಣಕಾಯಿ ರಾಜ್ಯೊಗು' ಎಂಬ ರೂಢಿಯ ಮಾತಿನಂತೆ ಕೇರಳಕ್ಕೆ ಹೊರಡುತ್ತಾರೆ.
ಓಯೆ ಮೂಕಾಂಬಿ ಜೇವು ಈಯಂಡ ಕೇನಿದಾನೊಯಾ
ನಿನ್ನಾಂಡ ಕೈಪತ್ತ್ದ್ ಎಂಕ್ ಬಾರೀ ಬಡತ್ತನಾಂಡ್
ಓ ಏನಾಂಡ ಪೋಪೇನ್ ಜೇವೆ - ಚಣಕಯಿ ರಾಜ್ಯೊಗ್
ಶಾಂತೀಲ ಪೂಜೆಗ್ ಏನಾಂಟ ಪೋಪೇಯಾ
ಈಯಾಂಟ ಪೋಲಾಯಾ - ನಿನ್ನ ಅಪ್ಪೆಮ್ಮ ಇಲ್ಲಗ್
ಈಯಾಂಟ ಪೋಲಾಯಾ
ಆಕೆ: ಓಯೆ ಪಡ್ವಣಾರೇ ಕೇಂಡಾರೋ
ಅಪ್ಪೆಮ್ಮ ಪೇರ ಉನುಪ್ಪುಡ್ದೋ
ಕಂಡನ್ಯನ ಕಣನೀರ್ ಉನುಪ್ಪೂ ಎಡ್ಡೆಯೇ
ಅವರು: ಓಯೆ ಮೂಕಾಂಬೀ ಕೇನಿದನೋಯಾ
ಓರ್ವಳ್ಳ ಬಾರ್ಗ್ ಚರೆಕಡ್ಪಿ ರಾಜ್ಯೊಗು
ಈಯಾಂಟ ಬರಾಡಾ ಮೂಕಾಂಬೀ - ಈಯಾಂಟ ಬರಾಡಾ ||
ಆದರೂ ಹಟಹಿಡಿದು ಆಕೆ ಹೊರಡುತ್ತಾಳೆ. ಕಡಂಬಾರಿಗೆ ತಲಪಿದಾಗ, ಆ ಊರಿನ ಮಯ್ಯರು ವಿಷಯ ತಿಳಿದು
ಈರೆಗ್ ಬುಡೆತಿಯಾಂಟ ಆಲ್
ಎನ್ನಾಂಟ ಮರ್ಮಾಲ್ ಈ ಜೇವೋ
ಎನ್ನಾಂಟ ಇಲ್ಲಾಲ್ ಉಪ್ಪಡ್ಯೇ
ಎನ್ನ ಮಗಳೆಲೆಕ್ಕೊ ಸಾಂಕೊನುಪ್ಪೇನ್ಯೇ
ಮಯ್ಯರ ಸಲಹೆಯಂತೆ ಪಡ್ವಣಾರು ಮೂಕಾಂಬಿಯನ್ನು ಅಲ್ಲೇ ಬಿಟ್ಟು ಹೋಗುತ್ತಾರೆ.
ಒಂಜಿ ತಿಂಗಳು ಕರಿನಗಾ ಮೂಕಾಂಬಿ ಜೇವು
ಸೂತಿಗೊಡ್ ಆತಳ್ಯೇ (ಆಕೆ ಋತುಮತಿಯಾದಳು)
ಮೂಜಿ ಕರಿ ನಾಲನೆ ದಿನತಾನಿ
ಮೀಪೊಂಜಿ ಕಿರಿಯಗ್ ಪೋಪಳ್ಯೇ
ಆಕೆ ಸ್ನಾನಮಾಡಿ ಬರುವಾಗ, ಮೊತ್ತಮೊದಲನೆಯ ಬಾರಿ, ಯುವತಿಯಾದ ಆಕೆಯ ರೂಪಾತಿಶಯವನ್ನು ನೋಡಿ ಮಯ್ಯರು ತಲೆತಿರುಗಿ ಬೀಳುತ್ತಾರೆ. `ದಾನೇಂಡ್ ಸಮ್ಮಲೇ' ಎಂದು ಆಕೆ ಕೇಳಿದಾಗ
ಕಾರೊಲ್ಲ ಪುಗರೇ ಸಿಂದೇನ್
ಅವೂ - ಸರೆಕ್ ಪತ್ತ್ಂಡ್ಂದ್ ಪಂಡೆರ್ಯೇ
ದೇವಿಮಹಾತ್ಮೆಯಲ್ಲಿ ದೇವಿಯ ರೂಪವನ್ನು ನೋಡಿ, ಶುಂಭನ ದೂತನಾದ ಸುಗ್ರೀವನು ಮೂರ್ಛೆತಪ್ಪಿ ಬೀಳುವ ಸನ್ನಿವೇಶವನ್ನು ಈ ಘಟನೆ ನೆನಪಿಗೆ ತರುತ್ತದೆ. ಹಾಗೆಯೇ `ಚೆಂದೊಳ್ಳಿ ಕೇದಗೆ' ಪಾರ್ತನದಲ್ಲಿ, ನೀರು ಕುಡಿಯಲು ಹೋದ ನಾಯಿ ಮಲೋಡಿಗಾರ ಭಂಡಾರಿಯು ಕೇದಗೆಯ ಅಂಗೈಹೊಳಪನ್ನು ಕಂಡು ತಲೆಗಿರುಗಿ ಬೀಳುವ ಸಂದರ್ಭ ಬರುತ್ತದೆ. ಅಪ್ರತಿಮಸೌಂದರ್ಯವನ್ನು ಕಂಡಾಗ ಸ್ಮೃತಿತಪ್ಪಿ ಬೀಳುವ ಈ ಆಘಾತದ ಕಲ್ಪನೆಯು ಸೌಂದರ್ಯದ ಪರಮಾವಧಿಯನ್ನು ಚಿತ್ರಿಸುವ ತುಳುವ ಜನಪದರ ಒಂದು ಮನೋವೈಜ್ಞಾನಿಕ ಕಲ್ಪನೆಯಾಗಿರಬಹುದು. ಮಯ್ಯರು ಮರುದಿನ ರಾತ್ರೆ ಮೂಕಾಂಬಿಯ ಕಲ್ಲಗುಂಡದ ಬಳಿಗೆ ಹೋಗಿ, ಒನಕೆಯಿಂದ ಬಾಗಿಲು ಮುರಿಯುತ್ತಾರೆ. ಆಗ ಮೂಕಾಂಬಿಯು -
``ಎನ ಕಂಡನ್ಯಗ್ ಏನ್ ತತ್ತ್ದ್ ಬೂರ್ಯೆನೇ ದೇಬೆರೇ
ಗುಳಿಗನ ಸತ್ಯೊ ಉಂಡುನ್ನಾಂಟ ಎನ ಜೂವೊಗು ಅಂತರೊ
ಬರೊಡುಯೇ - ಪಂಡ್ ನಾಲಗೆ ಮಡಿಯರ ದುಂಬೇ
ಮೂಕಾಂಬಿನ ಜೀವೊಲ ಪೋತುಂಡುಯೇ''
ಮೂಕಾಂಬಿ ಪಾರ್ತನವು ನಿಜವಾಗಿಯೂ ಒಂದು ಭಕ್ತಿಕಾವ್ಯ. ಇಲ್ಲಿ ಯಾವುದೇ ಅಶ್ಲೀಲದ ವರ್ಣನೆಯಿಲ್ಲದೆ, ವಿಷಯದ ಮಾರ್ಮಿಕತೆಯನ್ನು ಧ್ವನಿಪೂರ್ಣವಾಗಿ ತಿಳಿಯ ಪಡಿಸಿದ ನಮ್ಮ ಜನಪದಕವಿಗಳ ಆತ್ಮಸಂಸ್ಕಾರವು ಎಷ್ಟು ಉತ್ಕೃಷ್ಟವಾದುದು ಎಂದು ನಾವಿಲ್ಲಿ ಕಾಣಬಹುದು.
ಮೂಕಾಂಬಿಕಾವ್ಯ ವಿಶಿಷ್ಟ ರಚನಾತಂತ್ರವನ್ನು ನಾವು ಕಾಣುವುದು ಅದರ ಕೊನೆಯ ಭಾಗದಲ್ಲಿ. ಈಗಿನ ಪ್ರಯೋಗಶೀಲ ಕತೆಗಾರರು ಬಳಸುವ ಎರಡು ಭಾವನೆಗಳ ಏಕಕಾಲದ ವರ್ಣನೆಯ ತುಮುಲತಂತ್ರವನ್ನು ನಾವಿಲ್ಲಿ ಕಾಣುತ್ತೇವೆ.
ಮರುದಿನ ಮಡಿದು ಬಿದ್ದಿರುವ ಮೂಕಾಂಬಿಯನ್ನು ಕಂಡು ಅಸಹಾಯಕರಾದ ಮಯ್ಯರು, ಆ ಸತ್ಯವನ್ನು ಮುಚ್ಚಿಟ್ಟು `ಆಕೆ ಋತುಮತಿಯಾಗಿರುವಳು - ಕೂಡಲೆ ಬರ ಬೇಕು' ಎಂದು ಅವಳ ತಂದೆತಾಯಂದಿರಿಗೂ, ಗಂಡನಿಗೂ ಓಲೆ ಕಳುಹಿಸುತ್ತಾರೆ. ಒಂದು ಕಡೆ, ಮಗಳ `ಮದಿಮಳ ಮದಿಮೆ'ಗಾಗಿ ಅವಲಕ್ಕಿ ಹೂಹಿಂಗಾರಗಳನ್ನು ಹೊತ್ತುಕೊಂಡು ಬರುವ ತಂದೆತಾಯಂದಿರ ಸಡಗರ, ಇನ್ನೊಂದೆಡೆ, ಮೂಕಾಂಬಿಯನ್ನು ಸ್ಮಶಾನಕ್ಕೊಯ್ಯುವ ಅವಸರ - ಈಯೆರಡನ್ನೂ ಜೊತೆಜೊತೆಯಲ್ಲೇ ಹೇಳಿಕೊಂಡು ಹೋಗುವ ಕವಿಯ ವರ್ಣನೆಯನ್ನು ಅನುಭವಿಸುವ ನಮ್ಮ ಮನಸ್ಸು ಕೊಲ್ಲೂರಿಗೂ ಕಡಂಬಾರಿಗೂ ನಡುವಿನ ಸೇತುವೆಯಾಗುತ್ತದೆ. ದುರಂತದ ತೀವ್ರತೆಯನ್ನು ಸಾಧಿಸುವ ಆ ಸನ್ನಿವೇಶವನ್ನು ಪಾರ್ತನಕವಿಯ ಮಾತುಗಳಲ್ಲೇ ಕೇಳೋಣ:
ಗಂಧತ ಕಾಟ ಕೂಟಯೆರ್ ಮಯ್ಯೆರ್
ಓಲೆತ ಜೇವುನ ಕೈಯಿಡ್ತ್
ಓಲೆನ್ ನಟ್ಯೆರ್ ಕಾಶಿತ ಬಟ್ಟೆರ್
ಓಯೆ ಮದಿಮಲೆ ಕೇಂಡನೋ ನಮನ ಮಗಲ್
ಮದಿಮಾಲಾತ್ಂಡ್ಂದ್ - ಓಲೆ ಕಡಯೆರ್ ಮಯ್ಯೆರ್
ನಂಕಾಂಡ ಪೋವೊಡುಂದ್ ಪಂಡೆರ್
ಪೊರಿಯ ಬಜಿಲ್ನ್ ಮಲ್ತೆರ್ಯೇ
ಪೂವೋ ಪಿಂಗಾರೊ ದೆತ್ತೆರ್ಯೇ
ಆತೆನ ಸಮಯಡ್ ಮೂಕಾಂಬಿ ಪುನನ್
ಚುಂಬಯೆರ್ ಮಯ್ಯೆರ್
ಗಂದೊತ ಕಾಟೊಟು ದಿಡ್ಯೆರ್ಯೇ
ಕಡೆಕೊಡಿಕ್ ಸೂವು ಕೊರಿಯೆರ್ಯೇ
ಮೂಕಾಂಬಿಜೇವು ಕಾಟೊಡು ಪೊತ್ತುನಗಾ
ಅಪ್ಪೆಮ್ಮೆ ಬರ್ಪೆರ್ಯೇ
ಅಯ್ಯೋ ಪಾಪೊನೇ ದೇಬೆರೇ
ಉಳೊಉಳೋ ದೋಸೊನೆಂದ್
ಬುಲ್ತೊನು ಆರ್ತೊನು ಬರುವೆರ್ಯೇ
ಆತನಾ ಸಮಯೊಡು ಕಂಡನಿ ಪಡ್ವಣಾರ್ ಬರುವೆರ್ಯೇ
ಅಯ್ಯಯ್ಯೋ ಪಾಪೊನೇ ಪಾಪೊನೆಂದ್ ಪನ್ನಾಗ
ಕಾಟದ ಮದ್ಯೊಡು ಕೇನುಂಡುಯೇ
ಓಯೇ ಅಪ್ಪಮ್ಮ ಕೇನಿದಾರೋ
ನಿಕುಲು ಬುಲ್ಪಡೆ ಆರ್ಪಡೆ
ಏನ್ ಸೈತೇಂದ್ ನಿಕ್ಲೆಗ್ ಸೋಜಿಂಡಲಾ
ಏನ್ ಗುಳಿಗನ ಪಕ್ಕೊಡು ಉಲ್ಲೆನ್ಯೇ
ಆತೊಂಜಿ ಪಾತೆರೊ ಕೇಂಡಿ ಅಪ್ಪಮ್ಮೇರ್
ಕೊಂಡತೊಂಜಿ ಪೊರಿನೋ ಬಜಿಲ್ನೋ ಕಾಟೊಗೇ ಅಡಕ್ಯೆರಕುಲು
ಪಂಡ್ ನಾಲಗೆ ಮಡಿಯರ ದುಂಬುಗೇ
ಕಡಂಬಾರ ಮಯ್ಯೆರೆ ಇಲ್ಲ್ಇಡೆ
ಕಂಜಿಕೈಕಂಜಿ ಬೂಡುನೆ
ಅರಿತ್ತ್ ಬುಡ್ಯಳ್ ಮೂಕಾಂಬಿಯೇ
ಸೂವು ಲಕ್ಕ್ಂಡ್ ಪೊತ್ತುಂಡುಯೇ
ಮೂಕಾಂಬಿ ಪಾರ್ತನವು ಹಲವೆಡೆಗಳಲ್ಲಿ ಹಲವು ರೀತಿಯ ಪಾಠಾಂತರಗಳನ್ನು ಒಳಗೊಂಡಿದೆಯೆಂಬುದು ಅದರ ಜನಪ್ರಿಯತೆಯ ಸಂಕೇತವೆನ್ನಬಹುದು.
`ಮಚ್ಚು' ಪಾರ್ತನದಲ್ಲಿ ಹೆಣ್ಣು ಸಿಂಗಾರ ಮಾಡಿಕೊಳ್ಳುವ ವರ್ಣನೆ ಅತ್ಯಂತ ಸಹಜವಾಗಿದೆ.
ಓಲೇಲೇ ಲೇಲಾಂಬಿಲೋ ಮಚ್ಚೋ
ಓ ಮಚ್ಚೂನ ದನಿಗೇನೋ ಮಚ್ಚೋ
ಓಲೆನ್ನೊಂಜಿ ದನಿಗೇನೋ ಮಚ್ಚೋ
ಓಲೇಲೇ ಲೇಲಾಂಬಿಲೋ ಮಚ್ಚೋ
ಗಟ್ಟಾಡ್ದ್ ಜಪ್ವಲಾಲ್ ಮಚ್ಚೋ ಓಲೇಲೇ....
- ಆಳೆ ಚರೇಕ್ ಚೀರ್ತ್ಂಡ್
ಬೊಟ್ಟೂ ಬಕ್ತಾಲೆನೋ ಓಲೇಲೇ....
- ಆಳೆ ಮೂಕುಗ್ ಶೀರ್ತ್ಂಡೇ ಓಲೇಲೇ....
ಕೆತ್ತಿಕಾರ ಮೂಕುತಿಯೋ ಓಲೇಲೇ....
- ಆಳೆ ಕೆಬಿಕ್ ಶೀರ್ತ್ಂಡೇ ಓಲೇಲೇ....
ಗಿಳಿತ್ತ ಓಲೇಗೇನೋ ಓಲೇಲೇ....
- ಆಳೆ ಕೆಕ್ಕಿಲ್ಗ್ ಶೀರ್ತ್ಂಡೇ ಓಲೇಲೇ....
ಕಾಮಳ್ಳ ಕಟ್ಟಾದಿಯಾ ಓಲೇಲೇ....
- ಆಳೆ ಒಕ್ಕೊಗು ಶೀರ್ತ್ಂಡೇ ಓಲೇಲೇ....
ಗೆಜ್ಜೇತ ಡಾಬೂಗೆನೋ ಮಚ್ಚೋ ಓಲೇಲೇ....
- ಕಾರ್ಗ್ ಶೀರ್ತ್ಂಡೇ ಮಚ್ಚೋ ಓಲೇಲೇ....
ಕಾರ್ನ ಉರಿಗೆಜ್ಜೇನೋ ಮಚ್ಚೋ ಓಲೇಲೇ....
ರಾಗೀನ ಸೀರೆಗೇನೊ ಓಲೇಲೇ....
ಕುಪ್ಡಿ ಒಟ್ಟೆತ - ರಾವಾಕೆನೋ ಓಲೇಲೇ....
ಉಡಾರ ಸೀರೆಲಾಂಡೇ ಓಲೇಲೇ....
ಪಾಡಾರ ರಾವಕೇಂಡೇ ಮಚ್ಚೋ
`ದರಣೆ' ಪಾರ್ತನವು ಗತಿಗೋತ್ರವಿಲ್ಲದ ಹೆಣ್ಣೊಬ್ಬಳ ಬದುಕಿನ ಚಿತ್ರಣವಾಗಿದೆ.
ಲೇಲೇಲೆ ಲೆಲ್ಲಕಾಲೇ - ಓ ದರಣೇ
ಲೇಲೇಲ ಲೆಲ್ಲಕಾಲೇ - ಓ ದರಣೇ
ಪಕ್ಕಿಲೆಕ್ಕ ಪಾರೊಡುಗಾಲೆ - ಓ ದರಣೇ
ಗಿಡಿಲೆಕ್ಕ ಮುಟ್ಟೊಡಾಂಡೇ - ಓ ದರಣೇ
ಲೇಲೆಲೇ ಲೆಲ್ಲಕಾಲೇ - ಓ ದರಣೇ
ಲೆಲೇಲೇ ಲೆಲ್ಲಕಾಲೇ - ಓ ದರಣೇ
ತಂದೆತಾಯಂದಿರನ್ನು ಕಳಕೊಂಡ ದರಣೆಯು ಬದುಕಿಗೆ ದಾರಿಯಿಲ್ಲದೆ, ಉಡುವು ದಕ್ಕೆ ಬಟ್ಟೆಯಿಲ್ಲದೆ, ನಗ್ನಳಾಗಿ ಊರೂರು ಸುತ್ತುತ್ತಾ ಬರುತ್ತಾಳೆ. ಎಂಥಾ ಬಡತನ, ಹರಿಜನ ಬಾಲೆಯೊಬ್ಬಳ ದಾರುಣವಾದ ಚಿತ್ರಣ. ಆಕೆ ಮುಂಡಕಾನಕ್ಕೆ ಬರುವಾಗ ಅಲ್ಲಿನ ದೆಕ್ಕುಳು ಆಕೆಯ ದಾರುಣಸ್ಥಿತಿಯನ್ನು ಕಂಡು, ತಂದೆಮೂಲ ತಾಯಿಮೂಲಗಳನ್ನು ತಿಳಿದಾಗ ಆಕೆ ಹುಚ್ಚಿಯೇನೂ ಅಲ್ಲ - ನಿಜಕ್ಕೂ ಬಡವಳು ಎಂದು ಖಾತ್ರಿ ಮಾಡಿ ಕೊಂಡು, ಕೂಡಲೇ ತನ್ನ ತಲೆಯ ವಸ್ತ್ರವನ್ನು ಆಕೆಗೆ ಉಡಲು ಕೊಡುತ್ತಾರೆ.
ಚರೆತ್ತ ಕುಂಟ್ ದೆತ್ತ್ತೇರೋ - ಓ ದರಣೆಗ್
ದಿಕ್ಕಳೆಗ್ ಕೊರುತ್ತೇರೊಯಾ - ಓ ದರಣೇ
ದುಂಬತಾನೆ ದೆಕ್ಕುಳೊಯಾ - ಓ ದರಣೇ
ಲೆತ್ತೋನೇ ಬರ್ಪ್ಪೇರ್ಯಾ - ಓ ದರಣೇ
ಆಗ ದೆಕ್ಕುಳ ಹೆಂಡತಿಯು -
ಆರೇನ ಮದಿಮಾಲ್ ಓ ದರಣೇ
ದೆಕ್ಕುಳೇನ್ ಚೂಪೆರೋಯಾ ಓ ದರಣೇ
ಪೋನಗೊರಿಯೆ ಪೋತ್ನಾನೇ ದೆಕ್ಕುಳೂ
ಬನ್ನಗೇರ್ ಜನೊ ಉಳ್ಳೊತ್ ಓ ದರಣೇ
ಲೇಲೇಲೆ ಲೆಲ್ಲ ಕಾಲೋ - ಓ ದರಣೇ... ||
ದೆಕ್ಕುಳ ಹೆಂಡತಿಯ ಹೆಸರು - ಉದುರಿಕಂಡೆ. ಆಕೆಯೊಡನೆ ನಡೆದ ಸಂಗತಿ ಯನ್ನು ದೆಕ್ಕುಳು ಹೇಳುತ್ತಾರೆ. ಉದುರಿಕಂಡೆಗೂ ದರಣೆಯ ಬದುಕನ್ನು ನೆನೆದು ಕಣ್ಣೀರು ಬರುತ್ತದೆ. ಕೂಡಲೇ ಅವಳಿಗೆ `ಸಣ್ಣೆನೊಗಂಜಿ-ಕಜಿಪ್ಪು' ಕೊಡುತ್ತಾರೆ. ಮುಂದೆ ಅವಳಿಗೆ ಸೊಪ್ಪು ತರುವ ಕೆಲಸವನ್ನು ಒಪ್ಪಿಸಿ, ಮನೆಯಲ್ಲೇ ಇಟ್ಟುಕೊಳ್ಳುತ್ತಾರೆ. ಕತೆ ಹೀಗೆ ಮುಂದುವರಿಯುತ್ತದೆ.
ನಮ್ಮ ಜನಪದರು ಕಾವ್ಯರಚನೆಗೆ ಆಯ್ದುಕೊಳ್ಳುವ ವಸ್ತುವೈವಿಧ್ಯವನ್ನು ಇಲ್ಲಿ ನಾವು ಗುರುತಿಸಬಹುದು. ಪಾರ್ತನ ಎಂಬ ಅರ್ಥದಲ್ಲಿ ಸಮಗ್ರ ತುಳು ಜನಪದಸಾಹಿತ್ಯವನ್ನು ನಾವು ಅಳವಡಿಸಿಕೊಳ್ಳುವುದಾದರೆ, ಭಾವಭೂಯಿಷ್ಠವಾದ ಮೇರರ ಸಾಂಪ್ರದಾಯಿಕ ಹಾಡುಗಳನ್ನೂ ಇಲ್ಲಿ ಉದಾಹರಿಸಬಹುದೆಂದು ಕಾಣುತ್ತದೆ. ಮಗಳನ್ನು ಗಂಡನ ಮನೆಗೆ ಕಳುಹಿಸಿ ಕೊಡುವಾಗ ತಂದೆತಾಯಂದಿರು ಹೇಳುವ ಮಾತು ಹೀಗಿದೆ:
ದಾರಿಲೋನೇ-ದಾರಿಲೋ ಮದ್ಮಾಯಾ
ದಾರಿಲೋನೇ - ದಾರಿಲೋ ಮದ್ಮಾಳೇ
ಓ-ಲಮ್ಮನ ಪುಂಡಿನುಪ್ಪು ಸಿಂದ್ನ ಕಾಲೊಟು
ಓ-ಲಮ್ಮ ನೆಂಪೂನೇ ಪುಟ್ಟಾಣು ಮಗಲೇಗ್
ಓ-ಲಪ್ಪೆ ಮಿರೆಪ್ಪೇರ್ ಚಿಂದೀನ ಕಾಲೊಟು
ಓ-ಲಪ್ಪೆನ ಚಿಂತೇನೇ ಬುಡ್ಪ್ಪಾಲ್ ಮಗಲ್
ಓ-ಕೊಂಡೋಯಿನಾನಿ ಮಗ ನಿಕ್ಕ್
ಓ-ಕೊಂಡಾಟೊ ಉಂಡು ಮಗಾಲೇ
ಓ-ಲಾಯ ಮನತ್ತಾನ್ಯೇ ಬರ್ಪೂಂಡು ಮಗಾಲೇ
ಓ-ಕುಂಞಿಮಾದೇರ್ಯಾ ಬಡೂ ಬರ್ಪುಂಡು
ಇಲ್ಲಿ ತಾಯಿಯು ಮಗಳಿಗೆ ಸಂಸಾರದ ಸಹಜಕಲ್ಪನೆಯನ್ನು ತಿಳಿಸುವುದು ಅತ್ಯಂತ ಮಾರ್ಮಿಕವಾಗಿದೆ. ಜಾನಪದರ ಉಪಮೆಗಳ ಸರಮಾಲೆ ಮುಂದಿನ ಸಾಲುಗಳಲ್ಲಿ ಬರುತ್ತದೆ.
ಓ-ಎಂಕ್ಲೆ ಮದಿಮಾಲೇ ಕೂಲೀನೆ ಸೂನಗಾ
ಓ-ಸಾರಗೇತಲಾ ಪೂಲ್ತ ಲೆಕ್ಕೊನೇ
ಓ-ಎಂಕ್ಲೆ ಮದಿಮಾಲೆನಾ ಸರಂಗಟ್ಟೊ ಸೂನಗಾ
ಓ-ಈಂದ್ತಲೋನೇ ಜಾವೇರಿ (ಜೌರಿ) ಲೆಕ್ಕೋನೇ
`ದಾರು' ಎಂಬ ಬಡಹೆಣ್ಣಿನ ಮೆಯ್ಮೇಲೆ ಯಾವುದೇ ಆಭರಣಗಳಿಲ್ಲದ್ದನ್ನು ಒಬ್ಬ ಕವಿ ದೃಷ್ಟಾಂತಾಲಂಕಾರದೊಡನೆ ಹೀಗೆ ವರ್ಣಿಸುತ್ತಾನೆ.
ಏಣೂರು ಗೋಳಿಟೊಂಜಿ ಗೆಲ್ಲ್ಲಜ್ಯೆ ದಾರು
ದಾರೂನ ಕಯ್ಯಿಟೊಂಜಿ ಕಾಜಿಲಜ್ಯೇ
ಟಾಂಟೂಲ ಟಂಬೆರಿ ಮಗಾ ಕೊಟ್ಯಾ ನಾಲ್ ಪೋನಗಾ
ದಾರೂನ ನೂಲ್ತ ಬೇಲೆ ತೀರ್ತ್ಜ್ಯೇ
ಕೊನೆಯಲ್ಲಿ ತುಳುಜನಪದರ ಹಾಸ್ಯಕಲ್ಪನೆಯ ಎರಡು ತುಣುಕುಗಳನ್ನು ನೋಡೋಣ. `ಓ ಬೇಲೆ' ಹಾಡನ್ನು ಸಾಮಾನ್ಯವಾಗಿ ನೇಜಿ ನೆಡುವಾಗ ಹಾಡಲಾಗುತ್ತದೆ. ಈ ಹಾಡುಗಳಲ್ಲಿ ಹಾಡುವವರೇ ಸಂದರ್ಭಗಳನ್ನು ಸೃಷ್ಟಿಮಾಡಿ ಎಡೆಯೆಡೆಯಲ್ಲಿ ಬೇಕಾದ ಸಾಲುಗಳನ್ನು ಸೇರಿಸುವುದುಂಟು. ಪ್ರತಿಯೊಂದು ಸಾಲಿಗೂ `ಓ ಬೇಲೆ' ಎಂಬ ಮೇಳವಾಕ್ಯವು ಸೇರುತ್ತದೆ. ಗದ್ದೆಯ ದನಿಗಳನ್ನು ಹಾಸ್ಯರಸದಿಂದ ಅಣಕಿಸುವ ಕೆಲವು ಸಾಲುಗಳು ಹೀಗೆ ಬರುತ್ತವೆ:
ಓ ಎಂಕ್ಲೆ ಉಳ್ಳಾಯೆ - ಓ ಬೇಲೇ
ಗೋಪಣ್ಣಕುಳ್ಳೇರ್ - ಓ ಬೇಲೇ
ಕಜ್ಜಿ ಕಿಂರ್ಬೇಲೆ - ಓ ಬೇಲೆ
ಬಾಯಿ ಪರೆಂಚೇಲೆ - ಓ ಬೇಲೆ
(ಕೋಮಣೊ ಪರಂಕೇಲೆ - ಓ ಬೇಲೆ)
ಎಂಕ್ಲೆನ ದೆತ್ತಿ - ಓ ಬೇಲೆ
ಜಂಬೆಲ್ ಮಿರೆಕ್ - ಓ ಬೇಲೆ
ಪಟ್ಟೆರವಕೆ - ಓ ಬೇಲೆ
ಕುರುಂಬುಳಿ ತರೆಕ್ - ಓ ಬೇಲೆ
ಪೊನ್ನೆತ ಎಣ್ಣೆ - ಓ ಬೇಲೆ
ಮಣ್ಸರ ಸಂಪ್ರದಾಯದ ಹಾಡಿನಲ್ಲಿ ಬರುವ ಈ ಮಾತುಗಳನ್ನು ಗಮನಿಸಿರಿ:
ಓ ಉಳ್ಳಾಯನಾಡೆಕ್ ಪೋನಗಾ - ಉಳ್ಳಾಲಯೆದ್ಯೇರ್
ಪೂಪಾಡ್ ಕಲ್ಲ್ನಲ್ಲ್- ಮಿಂಡೇರಿದ್ಯೇರ್
`ಮದನು' ಪಾರ್ತನದಲ್ಲಿ ಅತ್ತಿಗೆಯಂದಿರು ಮತ್ಸರದಿಂದ ನಾದಿನಿಯನ್ನು ಹಂಗಿಸುವ ಒಂದು ಸಂದರ್ಭ ಬರುತ್ತದೆ. ಅಲ್ಲಿಯ ಮಾತುಗಳು ಹೀಗಿವೆ:
ಎಲ್ಲೆ ಕುಜಲ್ಗ್ ಮುತ್ತುಸುರಿಪ್ಪುಣಾ
ನಿಕ್ಕತ್ತೋಲೆ - ಮದನೂ - ನಿಕ್ಕತ್ತೋಲೇ
ಎಲ್ಲೆ ಪಟ್ಟೆಸೀರೇ ರಾವಕೆಲಾ -
ನಿಕ್ಕತ್ತೋಲೇ ಮದನೂ ನಿಕ್ಕತ್ತೋಲೇ
ಎಲ್ಲೆ ಸೀರೆಸುತ್ತ- ಪೀಂಕಣ್ಕುಡ್ತೊಂತ್ ಪೋಪುಣಾ
ಈಯತ್ತೋಲೇ - ಮದನೂ - ಈಯತ್ತೋಲೇ ||
ಹೀಗೆ ತುಳುವಿನ ಪಾರ್ತನಗಳು ಕಥೆಯಲ್ಲಿ ಅಥವಾ ವಸ್ತುವಿನಲ್ಲಿ ನಿರೂಪಣೆ ಯಲ್ಲಿ, ವರ್ಣನೆಯಲ್ಲಿ, ಸನ್ನಿವೇಶಕಲ್ಪನೆಗಳಲ್ಲಿ ಇತರ ಜನಪದಸಾಹಿತ್ಯದಷ್ಟೇ ಪ್ರಭಾವ ಯುತವಾಗಿದ್ದು, ಅನೇಕ ಕಾವ್ಯಾಂಗಗಳನ್ನೊಳಗೊಂಡು, ವಿಶೇಷವಾಗಿ ಈ ಮಣ್ಣಿನ ಸತ್ತ್ವವನ್ನೂ ಸ್ವಂತಿಕೆಯನ್ನೂ ಒಳಗೊಂಡಿರುವುದು ಇದರ ಹೊಸತನವಾಗಿದೆ.
[`ತುಳುವ', ಜುಲೈ-ಸೆಪ್ಟಂರ್ಬ, 2006 -ಇದರಲ್ಲಿ ಪ್ರಕಟಿತ]